IPL 2026: ಈ ಬಾರಿಯ ಐಪಿಎಲ್ ಕಣದಲ್ಲಿರುವ ಕನ್ನಡಿಗರ ಪರಿಚಯ
Karnataka Players in IPL 2026: ಈ ಬಾರಿ ಐಪಿಎಲ್ ಲೀಗ್‌ನಲ್ಲಿ ಒಂದು ವಿಶೇಷತೆಯಿದೆ. ಆರಂಭಿಕ ಹಂತದಲ್ಲಿ ಎಲ್ಲಾ 10 ತಂಡಗಳನ್ನು ಭಾರತೀಯ ನಾಯಕರೇ ಮುನ್ನಡೆಸಲಿದ್ದಾರೆ. ಸನ್‌ರೈಸರ್ಸ್‌ಗೆ ಪ್ಯಾಟ್ ಕಮಿನ್ಸ್ ನಾಯಕನಾಗಿದ್ದರೂ ಅವರು ಗಾಯಗೊಂಡಿರುವ ಕಾರಣ ಆರಂಭಿಕ ಕೆಲ ಪಂದ್ಯಗಳಲ್ಲಿ ಇಶಾನ್ ಕಿಶನ್ ತಂಡ ಮುನ್ನಡೆಸಲಿದ್ದಾರೆ.
kl rahul and karun nair dc -
ಬೆಂಗಳೂರು, ಮಾ.28: ವಿಶ್ವದ ಶ್ರೀಮಂತ ಕ್ರಿಕೆಟ್ ಹಬ್ಬ ಐಪಿಎಲ್(IPL 2026)ನ 19ನೇ ಆವೃತ್ತಿಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಚಾಲನೆ ಸಿಗಲಿದೆ. ಇಂದು(ಮಾ.28) ನಡೆಯುವ ಉದ್ಘಾಟನ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs SRH) ತಂಡ ಮೊಲ ಬಾರಿಗೆ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯುತ್ತಿರುವುದು ವಿಶೇಷ. ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿರುವ ಕನ್ನಡಿಗ(Karnataka Players in IPL 2026) ಆಟಗಾರರು ಯಾರು?, ಅವರು ಪ್ರತಿನಿಧಿಸುವ ತಂಡ ಯಾವುದು? ಎಂಬ ಕಿರು ವರದಿ ಇಲ್ಲಿದೆ.
ಕೆ.ಎಲ್ ರಾಹುಲ್(ಡೆಲ್ಲಿ ಕ್ಯಾಪಿಟಲ್ಸ್)
ಐಪಿಎಲ್ ಆಡುತ್ತಿರುವ ಅನುಭವಿ ಹಾಗೂ ಹಿರಿಯ ಆಟಗಾರ ಕೆ.ಎಲ್ ರಾಹುಲ್ ಮೇಲೆ ಈ ಬಾರಿ ಅಭಿಮಾನಿಗಳು ಹೆಚ್ಚಿನ ಭರವಸೆ ಇರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಅವರು ಈ ಬಾರಿ ಆರಂಭಿಕನಾಗಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿಯು ₹14 ಕೋಟಿ ಕೊಟ್ಟು ಖರೀದಿಸಿತ್ತು. ಅವರ ಪ್ರದರ್ಶನದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವು ಸೋಲು ನಿರ್ಧಾರವಾಗಲಿದೆ.
ಕರುಣ್ ನಾಯರ್ (ಡೆಲ್ಲಿ ಕ್ಯಾಪಿಟಲ್ಸ್)
ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಕಂಡ ಯಶಸ್ಸಿನ ಆಧಾರದಲ್ಲಿ ಅವರನ್ನು ₹30 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಕಳೆದ ಬಾರಿ ಒಂದೆಡರು ಪಂದ್ಯ ಬಿಟ್ಟರೆ ಉಳಿದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.
ಪ್ರಸಿದ್ಧ್ ಕೃಷ್ಣ(ಗುಜರಾತ್ ಟೈಟಾನ್ಸ್)
ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಪ್ರಸಿದ್ಧ್ ಕೃಷ್ಣ ಈ ಬಾರಿಯೂ ತಮ್ಮ ಘಾತಕ ಬೌಲಿಂಗ್ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ 25 ವಿಕೆಟ್ ಕಿತ್ತು ಕೂಟದ ಅತ್ಯಧಿಕ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಹೀಗಾಗಿ ತಂಡ ಈ ಬಾರಿಯೂ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.
ದೇವದತ್ತ ಪಡಿಕ್ಕಲ್(ಆರ್‌ಸಿಬಿ)
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಏಕೈಕ ಕನ್ನಡಿಗ ದೇವದತ್ತ ಪಡಿಕ್ಕಲ್, ಆರಂಭಿಕರಾಗಿ ಮತ್ತು ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ವೆಂಕಟೇಶ್ ಅಯ್ಯರ್ ಅವರನ್ನು ಆರ್‌ಸಿಬಿ ಕಳೆದ ಹರಾಜಿನಲ್ಲಿ ಖರೀದಿಸಿದ ಕಾರಣ ಪಡಿಕ್ಕಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎನ್ನುವಂತಿದೆ.
ಮನೀಶ್ ಪಾಂಡೆ(ಕೆಕೆಆರ್)
ಕಳೆದ 18 ಆವೃತ್ತಿಗಳಿಂದಲೂ ಐಪಿಎಲ್ ಆಡಿಕೊಂಡು ಬರುತ್ತಿರುವ ಕನ್ನಡಿಗ ಮನೀಶ್ ಪಾಂಡೆ ಈ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ಪರ ಬ್ಯಾಟ್ ಬೀಸಲಿದ್ದಾರೆ. ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಗೆ ಹೊಂದಿರುವ ಮನೀಶ್ ಪಾಂಡೆ ಒಂದು ಕಾಲದಲ್ಲಿ ಬಹು ಬೇಡಿಕೆಯ ಕನ್ನಡಿಗ ಆಟಗಾರನಾಗಿದ್ದರು. ಆದರೆ ಆ ಬಳಿಕ ಬ್ಯಾಟಿಂಗ್ ಪಾರ್ಮ್ ಕಳೆದುಕೊಂಡು ತಂಡದಲ್ಲಿ ಸ್ಥಾನ ಪಡೆಯಲು ಹರ ಸಾಹಸ ಪಡುವಂತಾಯಿತು. ಅವರನ್ನು ಕಳೆದ ವರ್ಷದ ಮೆಗಾ ಹರಾಜಿನಲ್ಲಿ ₹75 ಲಕ್ಷಕ್ಕೆ ಕೆಕೆಆರ್ ಫ್ರಾಂಚೈಸಿ ಖರೀದಿಸಿತ್ತು.
ಶ್ರೇಯಸ್ ಗೋಪಾಲ್(ಚೆನ್ನೈ ಸೂಪರ್ ಕಿಂಗ್ಸ್)
ಕಳೆದ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಆಲ್‌ರೌಂಡರ್ ಪ್ರದರ್ಶನ ತೋರಿದ್ದ ಶ್ರೇಯಸ್ ಗೋಪಾಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ಅವರನ್ನು ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ತಂಡವು ₹30 ಲಕ್ಷಕ್ಕೆ ಖರೀದಿಸಿದೆ. ಜಡೇಜಾ ಚೆನ್ನೈ ತಂಡದಿಂದ ಬೇರ್ಪಟ್ಟಿರುವ ಕಾರಣ ಈ ಸ್ಥಾನಕ್ಕೆ ಗೋಪಾಲ್ ಉತ್ತಮ ಆಯ್ಕೆಯಾಗಿದೆ.
'ಧೈರ್ಯದಿಂದ ಆಟವಾಡಿ'; ಸನ್‌ರೈಸರ್ಸ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುಭ ಹಾರೈಸಿದ ವಿಜಯ್ ಮಲ್ಯ
ಸ್ಮರಣ್ ರವಿಚಂದ್ರನ್(ಸನ್‌ರೈಸರ್ಸ್ ಹೈದರಾಬಾದ್)
2025 ರಲ್ಲಿ ಎಸ್‌ಆರ್‌ಎಚ್ ಫ್ರಾಂಚೈಸಿಯು ಆಡಂ ಝಂಪಾ ಬದಲು ₹30 ಲಕ್ಷ ಮೂಲ ಬೆಲೆಗೆ ಖರೀದಿಸಿದ್ದ ಸ್ಮರಣ್ ರವಿಚಂದ್ರನ್ ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆಯನ್ನೇ ಸುರಿದ್ದರು.
ವೈಶಾಕ್ ವಿಜಯಕುಮಾರ್(ಪಂಜಾಬ್ ಕಿಂಗ್ಸ್)
ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ವೈಶಾಕ್ ವಿಜಯ್ ಕುಮಾರ್ ಕಳೆದ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಬೌಲರ್ ಆಗಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಕಳೆದ ಬಾರಿಯ ಫೈನಲ್‌ನಲ್ಲಿಯೂ ಅವರು ಆಡಿದ್ದರು. ಆದರೆ ತಂಡ ಆರ್‌ಸಿಬಿ ವಿರುದ್ಧ ಸೋಲು ಕಂಡಿತ್ತು.
ಪ್ರವೀಣ್ ದುಬೆ(ಪಂಜಾಬ್ ಕಿಂಗ್ಸ್)
ಲೆಗ್ ಸ್ಪಿನ್ನರ್ ಆಗಿರುವ ಪ್ರವೀಣ್ ದುಬೆ ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಆಟಗಾರನಾಗಿರುವ ಅವರು, ಮಿನಿ ಹರಾಜಿನಲ್ಲಿ ₹30 ಲಕ್ಷ ಪಡೆದಿದ್ದರು.