ಮಹಾರಾಜ ಟ್ರೋಫಿಗೆ ಇನ್ನೂ ಸಿಗದ ಪೊಲೀಸರ ಅನುಮತಿ?
Maharaja Trophy: ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಅನುಮತಿ ಸಿಗದಿದ್ದರೆ ಮೈಸೂರಿಗೆ ಸ್ಥಳಾಂತರ ಮಾಡುವ ಕುರಿತು ಕೂಡ ಕೆಎಸ್‌ಸಿಎಯಲ್ಲಿ ಚಿಂತನೆ ನಡೆದಿತ್ತು ಎನ್ನಲಾಗಿದೆ. ಆದರೆ ಈ ಬಗ್ಗೆಯೂ ಯಾವುದೇ ಖಚಿತ ನಿರ್ಧಾರ ಕೈಗೊಂಡಿಲ್ಲವೆಂದು ಮೂಲಗಳು ತಿಳಿಸಿವೆ. ಆ. 11ರಂದು ಟೂರ್ನಿ ಆರಂಭವಾಗಬೇಕು.


ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿ(Maharaja Trophy) ಕ್ರಿಕೆಟ್ ಟಿ20 ಟೂರ್ನಿ ಆರಂಭವಾಗಲು ಇನ್ನು ಕೇವಲ ಒಂದು ವಾರ ಮಾತ್ರ ಬಾಕಿಯಿವೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(m chinnaswamy stadium) ಪಂದ್ಯಗಳನ್ನು ಆಯೋಜಿಸಲು ಇನ್ನೂ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಟೂರ್ನಿಯ ಬಗ್ಗೆ ಅನಿಶ್ಚಿತತೆ ಮೂಡಿದೆ. ಫ್ರ್ಯಾಂಚೈಸಿಗಳು ಈಗಾಗಲೇ ತಂಡಗಳ ಅಭ್ಯಾಸ ಇತ್ಯಾದಿ ಚಟುವಟಿಕೆಗಳನ್ನು ಆರಂಭಿಸಿವೆ.
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದಾಗಿ 11 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶವನ್ನು ಪೊಲೀಸ್ ಇಲಾಖೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವುದಾಗಿ ಕೆಎಸ್‌ಸಿಎ ತನ್ನ ಪ್ರಕಟಣೆಯಲ್ಲಿ ಈಗಾಗಲೇ ತಿಳಿಸಿತ್ತು. ಅದರಂತೆ ಪಂದ್ಯಾವಳಿ ನಡೆಸಲು ಅನುಮತಿ ನೀಡುವಂತೆ ಆಯೋಜಕರು ಕೆಲ ದಿನಗಳ ಹಿಂದೆಯೇ ನಗರ ಪೊಲೀಸ್ ಕಮಿಷನರ್ ಹಾಗೂ ಕೇಂದ್ರ ವಲಯದ ಡಿಸಿಪಿ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೂ ಪೊಲೀಸರು ಅನುಮತಿ ನೀಡಿಲ್ಲ. ಹೀಗಾಗಿ ಟೂರ್ನಿ ಬೆಂಗಳೂರಿನಲ್ಲಿ ನಡೆಯುವು ಅನುಮಾನ ಎನ್ನುವಂತಿದೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಅನುಮತಿ ಸಿಗದಿದ್ದರೆ ಮೈಸೂರಿಗೆ ಸ್ಥಳಾಂತರ ಮಾಡುವ ಕುರಿತು ಕೂಡ ಕೆಎಸ್‌ಸಿಎಯಲ್ಲಿ ಚಿಂತನೆ ನಡೆದಿತ್ತು ಎನ್ನಲಾಗಿದೆ. ಆದರೆ ಈ ಬಗ್ಗೆಯೂ ಯಾವುದೇ ಖಚಿತ ನಿರ್ಧಾರ ಕೈಗೊಂಡಿಲ್ಲವೆಂದು ಮೂಲಗಳು ತಿಳಿಸಿವೆ. ಆ. 11ರಂದು ಟೂರ್ನಿ ಆರಂಭವಾಗಬೇಕು.
ಸೋಮವಾರ ಆರಂಭಗೊಂಡ ಚೊಚ್ಚಲ ಆವೃತ್ತಿಯ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಗಳು ಬೆಂಗಳೂರು ಹೊರವಲಯದ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿದೆ. ಹೀಗಾಗಿ ಪುರುಷರ ಮಹಾರಾಜ ಟ್ರೋಫಿ ಪಂದ್ಯಗಳನ್ನು ಇಲ್ಲಿ ಸಾಧ್ಯವಿಲ್ಲ. ಒಂದೊಮ್ಮೆ ಚಿನ್ನಸ್ವಾಮಿಯಲ್ಲಿ ಅವಕಾಶ ಸಿಗದಿದ್ದರೆ ಮೈಸೂರು ಅಥವಾ ಹುಬ್ಬಳಿಯನ್ನು ಆಯ್ಕೆ ಮಾಡುವುದು ಅನಿವಾರ್ಯ.
ಇದನ್ನೂ ಓದಿ IND vs ENG: ʻಒಂದು ವೇಳೆ ಬೆನ್ ಸ್ಟೋಕ್ಸ್ ಆಡಿದ್ರೆ ಇಂಗ್ಲೆಂಡ್ ಗೆಲ್ಲುತ್ತಿತ್ತುʼ-ಮೈಕಲ್ ವಾನ್!