MI vs KKR: ಬೃಹತ್ ಮೊತ್ತದ ಮೇಲಾಟದಲ್ಲಿ ಮುಂಬೈಗೆ ಬೊಂಬಾಟ್ ಗೆಲುವು
IPL 2026: . 18 ರನ್ ಗಳಿಸಿದ್ದ ವೇಳೆ ರೋಹಿತ್ ಶರ್ಮ ಬಿಟ್ಟ ಕ್ಯಾಚ್‌ನಿಂದ ಜೀವದಾನ ಪಡೆದ ರಘುವಂಶಿ, ಈ ಅವಕಾಶವನ್ನೂ ಎರಡೂ ಕೈಗಳಿಂದ ಬಾಚಿ ಅರ್ಧಶತಕ ಬಾರಿಸಿ ಮಿಂಚಿದರು. 51 ರನ್ ಬಾರಿಸಿದರು. ಅಜೇಯರಾಗಿ ಉಳಿದ ರಿಂಕು ಸಿಂಗ್ 4 ಬೌಂಡರಿ ನೆರವಿನಿಂದ 33 ರನ್ ಗಳಿಸಿದರು. ಮುಂಬೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತರು.
Ryan Rickelton and Rohit Sharma -
ಮುಂಬಯಿ, ಮಾ.29: ಭಾನುವಾರದ ಬೃಹತ್ ಮೊತ್ತದ ಐಪಿಎಲ್ ಮೇಲಾಟದಲ್ಲಿ ಮುಂಬೈ ಇಂಡಿಯನ್ಸ್(MI vs KKR) ಕೈ ಮೇಲಾಗಿದೆ. ರೋಹಿತ್ ಶರ್ಮ(78) ಮತ್ತು ರಯಾನ್ ರಿಕೆಲ್ಟನ್(81) ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಹಲವು ವರ್ಷಗಳ ಕಾಯುವಿಕೆಯ ನಂತರ, ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಋತುವಿನ ಮೊದಲ ಪಂದ್ಯವನ್ನು ಗೆದ್ದ ಸಾಧನೆ ಮಾಡಿತು. 2012 ರಿಂದ, ಯಾವುದೇ ಋತುವಿನಲ್ಲಿ ತಮ್ಮ ಮೊದಲ ಪಂದ್ಯವನ್ನು ಗೆದ್ದಿರಲಿಲ್ಲ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಕೆಕೆಆರ್ ಬೊಂಬಾಟ್ ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 220 ರನ್ ಪೇರಿಸಿತು. ಜಬಾಬಿತ್ತ ಮುಂಬೈ ತಂಡ ಈ ಮೊತ್ತವನ್ನು 19.1 ಓವರ್‌ಗಳಲ್ಲಿ 224 ರನ್ ಬಾರಿಸಿತು. ಇದು ಐಪಿಎಲ್‌ನ ದಾಖಲೆಯ ಚೇಸಿಂಗ್.
ಚೇಸಿಂಗ್ ವೇಳೆ ಕೆಕೆಆರ್‌ಗಿಂತಲೂ ಮಂಬೈ ತಂಡದ ಬ್ಯಾಟಿಂಗ್ ಆಕ್ರಮಣಕಾರಿಯಾಗಿತ್ತು. ಪವರ್ ಪ್ಲೇಯಲ್ಲಿ 80 ರನ್ ಕಲೆಹಾಕಿ, 10 ಓವರ್ ಆಗುವ ಮುನ್ನವೇ 120ರ ಗಡಿ ದಾಟಿ ಅದಾಗಲೇ ಗೆಲುವು ಖಚಿತಪಡಿಸಿಕೊಂಡಿತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಒಂದು ವರ್ಷವಾಗಿದ್ದರೂ ಬ್ಯಾಟಿಂಗ್ ಚಾರ್ಮ್ ಕಳೆದುಕೊಳ್ಳದ ಹಿಟ್‌ಮ್ಯಾನ್ ರೋಹಿತ್ ಶರ್ಮ, ತಮ್ಮ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ನೆರೆದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ತಲಾ 6 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 78 ರನ್ ಬಾರಿಸಿದರು.
ಮತ್ತೊಂದು ತುದಿಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರಯಾನ್ ರಿಕೆಲ್ಟನ್ 42 ಎಸೆತಗಳಿಂದ 8 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ 81 ರನ್ ಬಾರಿಸಿದರು. ಇಲ್ಲದ ರನ್ ಕದಿಯುವ ಯತ್ನದಲ್ಲಿ ರನೌಟ್ ಆಗುವ ಮೂಲಕ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. ರೋಹಿತ್ ಮತ್ತು ರಿಕೆಲ್ಟನ್ ಮೊದಲ ವಿಕೆಟ್‌ಗೆ 148 ರನ್‌ಗಳ ಜತೆತಯಾಟ ನಡೆಸಿದರು.
ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ದೊಡ್ಡ ಇಂಪ್ಯಾಕ್ಟ್ ಮಾಡುವಲ್ಲಿ ವಿಫಲರಾದರು. ಮೂರು ಬೌಂಡರಿಗೆ ಸೀಮಿತರಾಗಿ 16 ರನ್ ಗಳಿಸಿದರು. ಮಿಸ್ಟರಿ ಸ್ಪಿನ್ನರ್ ವರಣ್ ಚಕ್ರವರ್ತಿ ಈ ಪಂದ್ಯದಲ್ಲಿ ಸರಿಯಾಗಿ ದಂಡಿಸಿಕೊಂಡರು 48 ರನ್ ಬಿಟ್ಟುಕೊಟ್ಟು ವಿಕೆಟ್ ಲೆಸ್ ಎನಿಸಿಕೊಂಡರು. ಚೊಚ್ಚಲ ಐಪಿಎಲ್ ಪಂದ್ಯವಾಡಿದ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಾಬಾನಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು.
ರಹಾನೆ, ರಘುವಂಶಿ ಅರ್ಧಶತಕ
ಇದಕ್ಕೂ ಮೊದಲು ಬ್ಯಾಟಿಂಗ್ ನೆಡೆಸಿದ ಕೆಕೆಆರ್ ತಂಡಕ್ಕೆ ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಉತ್ತಮ ಆರಂಭ ಒದಗಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಉಭಯ ಆಟಗಾರರು ಮುಂಬೈ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಇವರ ಈ ಆಕ್ರಮಕಾರಿ ಬ್ಯಾಟಿಂಗ್‌ನಿಂದ ಪವರ್ ಪ್ಲೇ ಮುಕ್ತಾಯಕ್ಕೂ ಮುನ್ನ ತಂಡ 50 ಪ್ಲಸ್ ಮೊತ್ತ ದಾಖಲಿಸಿತು. ಅಬ್ಬರಿಸುತ್ತಿದ್ದ ಈ ಜೋಡಿಯನ್ನು ಲಾರ್ಡ್ ಖ್ಯಾತಿಯ ಶಾರ್ದೂಲ್ ಠಾಕೂರ್ ಬೇರ್ಪಡಿಸಿದರು. 37 ರನ್ ಗಳಿಸಿದ ಫಿನ್ ಅಲೆನ್ ವಿಕೆಟ್ ಕಿತ್ತು ಮುಂಬೈಗೆ ಆರಂಭಿಕ ಯಶಸ್ಸು ತಂದುಕೊಟ್ಟರು.
ಅಲೆನ್ ವಿಕೆಟ್ ಬಿದ್ದರೂ ಕೂಡ ಮತ್ತೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಬಿರುಸಿನ ಬ್ಯಾಟಿಂಗ್ ಮೂಲಕ ತನ್ನ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸುತ್ತಲೇ ಸಾಗಿದರು. ತವರು ಮೈದಾನದ ಲಾಭಬೆತ್ತಿದ ಅವರು ಆಕರ್ಷಕ ಅರ್ಧಶತಕ ಬಾರಿಸಿದರು. 40 ಎಸೆತ ಎದುರಿಸಿದ ಅವರು 5 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 67 ರನ್ ಗಳಿಸಿದರು. ಹರಾಜಿನಲ್ಲಿ ದಾಖಲೆಯ 25 ಕೋಟಿ ಪಡೆದ ಕ್ಯಾಮರೂನ್ ಗ್ರೀನ್ ಆಟ 18 ರನ್‌ಗೆ ಸೀಮಿತಗೊಂಡಿತು.
MI vs KKR: ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಆಟಗಾರ
ರಹಾನೆ ವಿಕೆಟ್ ಪತನದ ಬಳಿಕ ಜತೆಯಾದ ರಿಂಕು ಸಿಂಗ್ ಮತ್ತು ಅಂಗ್ಕ್ರಿಷ್ ರಘುವಂಶಿ ಕೆಲ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. 18 ರನ್ ಗಳಿಸಿದ್ದ ವೇಳೆ ರೋಹಿತ್ ಶರ್ಮ ಬಿಟ್ಟ ಕ್ಯಾಚ್‌ನಿಂದ ಜೀವದಾನ ಪಡೆದ ರಘುವಂಶಿ, ಈ ಅವಕಾಶವನ್ನೂ ಎರಡೂ ಕೈಗಳಿಂದ ಬಾಚಿ ಅರ್ಧಶತಕ ಬಾರಿಸಿ ಮಿಂಚಿದರು. 51 ರನ್ ಬಾರಿಸಿದರು. ಅಜೇಯರಾಗಿ ಉಳಿದ ರಿಂಕು ಸಿಂಗ್ 4 ಬೌಂಡರಿ ನೆರವಿನಿಂದ 33 ರನ್ ಗಳಿಸಿದರು. ಮುಂಬೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತರು.