ಇದುವರೆಗಿನ ಐಪಿಎಲ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಹೇಗಿದೆ?
Virat Kohli in IPL finals: ಐಪಿಎಲ್ ಫೈನಲ್‌ನಲ್ಲಿ ಮೊದಲ 3 ಬಾರಿ ಎಡವಿದ ಬಳಿಕ ಕಳೆದ ವರ್ಷ ಕೊನೆಗೂ ಪ್ರಶಸ್ತಿ ಗೆದ್ದು ಬೀಗಿದ್ದ ಆರ್‌ಸಿಬಿ, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಆರ್‌ಸಿಬಿ ಒಬ್ಬ ಅಥವಾ ಇಬ್ಬರು ಆಟಗಾರರನ್ನು ನೆಚ್ಚಿಕೊಂಡ ತಂಡವಾಗಿಲ್ಲ ಮತ್ತು ತಂಡದಲ್ಲಿ ದೊಡ್ಡ ದೌರ್ಬಲ್ಯವೂ ಕಾಣಿಸುತ್ತಿಲ್ಲ.
Virat Kohli -
ಅಹಮದಾಬಾದ್, ಮೇ 31: ಕ್ರಿಕೆಟ್ ಅಭಿಮಾನಗಳು ಕಾದು ಕುಳಿತಿರುವ 19ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣೆ ಶುರುವಾಗಿದೆ. ಇಂದು ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪ್ರಶಸ್ತಿಗಾಗಿ ಸೆಣಸಾಡಲಿದೆ. ಈ ಕಾದಾಟದಲ್ಲಿ ಯಾರೇ ಗೆದ್ದರೂ 2ನೇ ಬಾರಿ ಐಪಿಎಲ್ ಕಿರೀಟ ಒಲಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಇದುವರೆಗಿನ ಆರ್‌ಸಿಬಿಯ ಫೈನಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಹೇಗಿದೆ ಎಂಬ ಕಿರು ವರದಿ ಇಲ್ಲಿದೆ.
2009ರ ಫೈನಲ್
ವಿರಾಟ್ ಕೊಹ್ಲಿ ತಮ್ಮ ಮೊದಲ ಐಪಿಎಲ್ ಫೈನಲ್ ಪಂದ್ಯವನ್ನು ಆಡಿದ್ದು 2009ರಲ್ಲಿ. ಡೆಕ್ಕನ್ ಚಾರ್ಜಸ್ ವಿರುದ್ಧ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ 144 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಆಗ 20 ವರ್ಷದ ವಿರಾಟ್ ಕೊಹ್ಲಿಗೆ ಇದು ನಿರಾಶಾದಾಯಕ ಪಂದ್ಯವಾಗಿತ್ತು. ಅವರು 8 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ್ದರು.
2011ರ ಫೈನಲ್
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2011 ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ಆಡಿತು. 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಫೈನಲ್‌ನಲ್ಲಿ ಮತ್ತೊಂದು ಹೃದಯ ವಿದ್ರಾವಕ ಪಂದ್ಯವನ್ನು ಎದುರಿಸಿತು. ತಮ್ಮ 20 ಓವರ್‌ಗಳಲ್ಲಿ ಕೇವಲ 147 ರನ್‌ಗಳನ್ನು ಗಳಿಶಲಷ್ಟೇ ಶಕ್ತವಾಗಿ, 58 ರನ್‌ಗಳಿಂದ ಪಂದ್ಯವನ್ನು ಸೋತರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 32 ಎಸೆತಗಳಲ್ಲಿ ಕೇವಲ 35 ರನ್‌ಗಳನ್ನು ಗಳಿಸಿದರು.
ಆರ್‌ಸಿಬಿಯ ಸತತ ಎರಡನೇ ಟ್ರೋಫಿ ಗೆಲುವಿಗೆ ರಾಜ್ಯಾದ್ಯಂತ ಅಭಿಮಾನಿಗಳಿಂದ ವಿಶೇಷ ಪೂಜೆ
2016ರ ಫೈನಲ್
2016ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ನಾಯಕನಾಗಿ ವಿರಾಟ್ ಕೊಹ್ಲಿ ಫೈನಲ್‌ಗೆ ಕೊಂಡೊಯ್ದರು. ಈ ಋತುವಿನಲ್ಲಿ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 16 ಇನಿಂಗ್ಸ್‌ಗಳಿಂದ ದಾಖಲೆಯ 973ರನ್ ಗಳಿಸಿದ್ದರು. ಆದರೆ ಫೈನಲ್‌ನಲ್ಲಿ ಆರ್‌ಸಿಬಿ ಸೋಲು ಕಂಡ ಕಾರಣ ಕೊಹ್ಲಿಯ ಈ ಪ್ರದರ್ಶನ ವ್ಯರ್ಥವಾಯಿತು. ಬೆಂಗಳೂರಿನಲ್ಲಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಸನ್‌ರೈಸರ್ಸ್ ವಿರುದ್ಧ ಸೋಲು ಕಂಡಿತ್ತು. ಕೊಹ್ಲಿ ಫೈನಲ್‌ನಲ್ಲಿ 35 ಎಸೆತಗಳಿಂದ 54 ರನ್ ಬಾರಿಸಿದ್ದರು.
𝑶𝒏𝒆 𝒔𝒉𝒐𝒕, 𝒐𝒏𝒆 𝒐𝒑𝒑𝒐𝒓𝒕𝒖𝒏𝒊𝒕𝒚, 𝒕𝒐 𝒔𝒆𝒊𝒛𝒆 𝒆𝒗𝒆𝒓𝒚𝒕𝒉𝒊𝒏𝒈 𝒚𝒐𝒖 𝒆𝒗𝒆𝒓 𝒘𝒂𝒏𝒕𝒆𝒅... 👊🏆 pic.twitter.com/3JEfg6lEgP
— Royal Challengers Bengaluru (@RCBTweets) May 30, 2026
2025ರ ಫೈನಲ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಜಯ ಸಾಧಿಸಿ, ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡವು ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ 18 ವರ್ಷಗಳ ಕಾಯುವಿಕೆನ್ನು ಕೊನೆಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 190 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು, ವಿರಾಟ್ 35 ಎಸೆತಗಳಲ್ಲಿ ಅಮೂಲ್ಯವಾದ 43 ರನ್‌ಗಳನ್ನು ಗಳಿಸಿದ್ದರು. ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ ಒಂದು ಶತಕವನ್ನು ಸಿಡಿಸಿ ಒಟ್ಟು 15 ಪಂದ್ಯಗಳಿಂದ 600* ರನ್ ಕಲೆ ಹಾಕಿದ್ದಾರೆ. ಇಂದಿನ ಫೈನಲ್‌ನಲ್ಲಿ ಅವರ ಬ್ಯಾಟಿಂಗ್ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆಯನ್ನಿಟ್ಟಿದ್ದಾರೆ.