ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ?; ಕೊಹ್ಲಿ ಭಾಗಿ

Chinnaswamy Stadium" ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಲಿದೆಯೇ ಎಂಬುದು ಡಿ.16ರಂದು ಗೊತ್ತಾಗಲಿದೆ. ಈ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ಸಿಐಡಿಗೆ ಸೂಚಿಸಿತ್ತು. ಅಂತೆಯೇ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ

Chinnaswamy Stadium -

Abhilash BC
Abhilash BC Dec 14, 2025 3:48 PM

ಬೆಂಗಳೂರು, ಡಿ.14: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಕ್ರಿಕೆಟ್‌ ಪಂದ್ಯಾವಳಿ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಹೀಗಾಗಿ ಕಳೆದ ಜೂನ್‌ 4ರಂದು ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಬಲಿಯಾದ ದುರ್ಘಟನೆ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆಯುವ ಸಾಧ್ಯತೆ ಗೋಚರಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿರುವ ವೆಂಕಟೇಶ್‌ ಪ್ರಸಾದ್‌, ಕ್ರಿಕೆಟ್‌ ಪುನಾರಂಭಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಡಿ.24ರಿಂದ ಆರಂಭಗೊಳ್ಳಲಿರುವ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕೆಲ ಗುಂಪುಗಳ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.

ದೆಹಲಿ ತಂಡ ಸಹ ತನ್ನ ಪಂದ್ಯಗಳನ್ನು ಬೆಂಗಳೂರಲ್ಲಿ ಆಡಲಿದ್ದು, ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಸಿಸಿಐ ವೇಳಾಪಟ್ಟಿ ಪ್ರಕಾರ, ದೆಹಲಿ ತಂಡದ ಬಹುತೇಕ ಪಂದ್ಯಗಳು ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆಯಬೇಕಿದೆ. ಆದರೆ, ಆ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಕೆಎಸ್‌ಸಿಎ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ವಿರಾಟ್‌ ಕೊಹ್ಲಿಯ ಆಟವನ್ನು ವೀಕ್ಷಿಸಲು ಕ್ರೀಡಾಂಗಣದ ಒಂದೆರಡು ಸ್ಟ್ಯಾಂಡ್‌ಗಳನ್ನೂ ತೆರೆಯಲು ಕೆಎಸ್‌ಸಿಎ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರತಿ ಪಂದ್ಯಕ್ಕೂ 2500-3000 ಮಂದಿಗೆ ಆಸನ ವ್ಯವಸ್ಥೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ವಿಜಯ್‌ ಹಜಾರೆ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದರೆ, ಜೂ.4ರ ಕಾಲ್ತುಳಿತ ದುರ್ಘಟನೆ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ದೊಡ್ಡ ಮಟ್ಟದ ಪಂದ್ಯವೊಂದು ಆಯೋಜನೆಗೊಂಡಂತಾಗಲಿದೆ.

ಇದನ್ನೂ ಓದಿ M Chinnaswamy Stadium: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ಗ್ರೀನ್‌ ಸಿಗ್ನಲ್‌; ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್‌ ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ. ಕಳೆದ ವಾರವಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್‌ ಸ್ಥಳಾಂತರಗೊಳ್ಳಲು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಬಳಿಕ ವೆಂಕಟೇಶ್‌ ಪ್ರಸಾದ್ ನೇತೃತ್ವದ ಕೆಎಸ್‌ಸಿಎ ನಿಯೋಗ ಬೆಳಗಾವಿಗೆ ತೆರಳಿ ಸಿಎಂ, ಡಿಸಿಎಂರನ್ನು ಭೇಟಿ ಮಾಡಿ ಕ್ರಿಕೆಟ್‌ ಮರಳಿ ಆಯೋಜನೆ ಮಾಡಲು ಅನುಮತಿ ಕೋರಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಬಳಿಕ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್‌ ಪುನಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಕೆಎಸ್‌ಸಿಎ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭಿಸಿದೆ.

ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಲಿದೆಯೇ ಎಂಬುದು ಡಿ.16ರಂದು ಗೊತ್ತಾಗಲಿದೆ. ಈ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ಸಿಐಡಿಗೆ ಸೂಚಿಸಿತ್ತು. ಅಂತೆಯೇ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ ಹೈಕೋರ್ಟ್‌ ಅನುಮತಿ ಪಡೆದ ನಂತರವೇ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿಐಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದ್ದು, ಅಂದು ನ್ಯಾಯಾಲಯವು ನೀಡುವ ಆದೇಶದತ್ತ ಸಿಐಡಿ ಚಿತ್ತ ಹರಿಸಿದೆ.