Vastu Tips: ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವಾಗ ಈ ನಿಯಮ ಪಾಲಿಸಿ; ಇಲ್ಲವಾದರೆ ಅಶುಭ ಫಲವೇ ಹೆಚ್ಚು
ಹಿಂದೂ ಸಂಪ್ರದಾಯದಲ್ಲಿ ಸ್ವಸ್ತಿಕ ಚಿಹ್ನೆಗೆ ವಿಶೇಷ ಮಹತ್ವವಿದೆ. ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವುದು ಶುಭಕರವೆಂದು ನಂಬಲಾಗುತ್ತದೆ. ಆದರೆ ಅದನ್ನು ಸಿಂಧೂರದಿಂದ, ಸ್ವಚ್ಛವಾದ ಬಾಗಿಲಿನ ಮೇಲೆ ಮತ್ತು ಸರಿಯಾದ ಗಾತ್ರದಲ್ಲಿ ಹಾಕಬೇಕು. ಸ್ವಸ್ತಿಕದ ಸುತ್ತ ಚಪ್ಪಲಿ ಇಡುವುದನ್ನು ತಪ್ಪಿಸಬೇಕು. ವಾಸ್ತು ಪ್ರಕಾರ ಸರಿಯಾದ ರೀತಿಯಲ್ಲಿ ಹಾಕಿದ ಸ್ವಸ್ತಿಕ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ತರಲಿದೆ ಎಂಬ ನಂಬಿಕೆ ಇದೆ.
ಸ್ವಸ್ತಿಕ -
ಬೆಂಗಳೂರು: ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿಹ್ನೆ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಂಕೇತವಾಗಿ ಪರಿಗಣಿಸಲಾಗಿದೆ. ‘ಸು’ ಎಂದರೆ ಶುಭ, ‘ಅಸ್ತಿ’ ಎಂದರೆ ಇರುವುದು — ಅಂದರೆ “ಶುಭವಾಗಿರಲಿ” ಎಂಬ ಅರ್ಥವನ್ನು ನೀಡುವ ಪದ ಸಂಯೋಜನೆಯೇ ಸ್ವಸ್ತಿಕ. ಧಾರ್ಮಿಕ ಆಚರಣೆಗಳಿಂದ ಹಿಡಿದು ಮನೆ ನಿರ್ಮಾಣದವರೆಗೆ, ಪ್ರತಿಯೊಂದು ಶುಭಕಾರ್ಯದಲ್ಲೂ ಸ್ವಸ್ತಿಕದ ಬಳಕೆ ಸಾಮಾನ್ಯವಾಗಿದೆ. ಗಣಪತಿಯ ಸಂಕೇತವಾಗಿಯೂ ಇದನ್ನು ಪರಿಗಣಿಸಲಾಗುತ್ತದೆ.
ಅಲ್ಲದೇ ವಾಸ್ತು ಶಾಸ್ತ್ರದ(Vastu Shastra) ಪ್ರಕಾರ ಮನೆಯ ಮುಖ್ಯ ಬಾಗಿಲು ಶಕ್ತಿಯ ಪ್ರವೇಶ ದ್ವಾರ. ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವ ಸ್ಥಳವೇ ಇದು ಎಂದು ನಂಬಲಾಗಿದೆ. ಆದ್ದರಿಂದ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ ಹಾಕುವುದು ಶುಭಶಕ್ತಿಯನ್ನು ಆಕರ್ಷಿಸಿ, ಅಶುಭಶಕ್ತಿಯನ್ನು ದೂರ ಮಾಡುವುದಾಗಿ ಧಾರ್ಮಿಕ ನಂಬಿಕೆ ಹೇಳುತ್ತದೆ.
ಆದರೆ ಹೀಗೆ ಸ್ವಸ್ತಿಕವನ್ನು ಹಾಕುವಾಗ ಕೆಲ ನಿಯಮಗಳನ್ನು ಪಾಲಿಸುವಂತೆ ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದ್ದು, ತಪ್ಪಾಗಿ ಸ್ವಸ್ತಿಕವನ್ನು ಬರೆಯುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂಬ ಉಲ್ಲೇಖವೂ ಇದೆ. ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ ಸಲಹೆಯಂತೆ (Vastu Tips) ಸ್ವಸ್ತಿಕವನ್ನು ಹಾಕುವಾಗ ಪಾಲಿಸಬೇಕಾದ ನಿಯಮಗಳು ಏನು..? ಎಂಬುದನ್ನು ತಿಳಿದುಕೊಳ್ಳೋಣ..
ಸಿಂಧೂರ ಅಥವಾ ಕುಂಕುಮ ಬಳಸಿ:
ಮುಖ್ಯ ಬಾಗಿಲಿನಲ್ಲಿ ಸದಾ ಸಿಂಧೂರದಿಂದ ಸ್ವಸ್ತಿಕ ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಐಶ್ವರ್ಯ, ಸಂತೋಷ ಮತ್ತು ಸಮೃದ್ಧಿಯ ಸಂಕೇತ.
ದ್ವಾರದ ಶುದ್ಧತೆ ಕಡ್ಡಾಯ:
ಸ್ವಸ್ತಿಕ ಹಾಕುವ ಮೊದಲು ಬಾಗಿಲು ಸ್ವಚ್ಛವಾಗಿರಬೇಕು. ಧೂಳು, ಕಸ ಅಥವಾ ಕೊಳಕು ಇರುವ ಸ್ಥಳದಲ್ಲಿ ಚಿಹ್ನೆ ಹಾಕುವುದು ಶ್ರೇಯಸ್ಕರವಲ್ಲ ಎಂದು ನಂಬಲಾಗಿದೆ.
Vastu Tips: ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ? ವಾಸ್ತುಶಾಸ್ತ್ರ ಈ ಬಗ್ಗೆ ಹೇಳೋದೇನು!
ಚಪ್ಪಲಿ–ಪಾದರಕ್ಷೆಗಳಿಂದ ದೂರ:
ಸ್ವಸ್ತಿಕದ ಸುತ್ತ ಶೂ, ಚಪ್ಪಲಿ ಇಡುವುದು ತಪ್ಪು. ಪವಿತ್ರ ಸಂಕೇತಕ್ಕೆ ಗೌರವ ನೀಡುವುದು ಮುಖ್ಯ.
ಸರಿಯಾದ ಗಾತ್ರ ಮತ್ತು ಪ್ರಮಾಣ:
ವಾಸ್ತು ಪ್ರಕಾರ ಸುಮಾರು ಒಂಬತ್ತು ಬೆರಳು ಉದ್ದ ಮತ್ತು ಅಗಲದಲ್ಲಿ ಸ್ವಸ್ತಿಕ ಹಾಕುವುದು ಉತ್ತಮ. ಅತಿ ಚಿಕ್ಕದಾಗಿಯೂ ಅತಿ ದೊಡ್ಡದಾಗಿಯೂ ಇರಬಾರದು.
ಪ್ರತಿದಿನ ಬದಲಾಯಿಸಿ:
ಮನೆಯ ಮುಂದೆ ಮರ, ಕಂಬ ಅಥವಾ ಇತರೆ ಅಡೆತಡೆಗಳಿದ್ದರೆ, ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಪ್ರತಿದಿನ ಹೊಸ ಸ್ವಸ್ತಿಕ ಹಾಕುವುದು ಮಂಗಳಕರವೆಂದು ಹೇಳಲಾಗಿದೆ.
ಎಲೆಗಳ ಅಲಂಕಾರ:
ಸ್ವಸ್ತಿಕದ ಸುತ್ತ ಅರಳಿ, ಮಾವು ಅಥವಾ ಅಶೋಕದ ಎಲೆಗಳಿಂದ ಅಲಂಕರಿಸುವುದು ಶುಭಫಲಕಾರಿಯೆಂದು ಪರಿಗಣಿಸಲಾಗಿದೆ. ಹಸಿರು ಎಲೆಗಳು ಸಮೃದ್ಧಿ ಮತ್ತು ಜೀವಶಕ್ತಿಯ ಸಂಕೇತ.
ಅಂಗಳದಲ್ಲಿಯೂ ಸ್ವಸ್ತಿಕ:
ಮನೆಯ ಅಂಗಳದ ಮಧ್ಯದಲ್ಲಿಯೂ ಸ್ವಸ್ತಿಕ ಹಾಕಬಹುದು. ಇದರಿಂದ ಪೂರ್ವಜರ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.
ಧಾರ್ಮಿಕ ನಂಬಿಕೆ ಏನು ಹೇಳುತ್ತದೆ?
ಭಕ್ತಿ, ಶುದ್ಧತೆ ಮತ್ತು ಗೌರವದಿಂದ ಮಾಡಿದ ಸ್ವಸ್ತಿಕ ಚಿಹ್ನೆ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸೌಭಾಗ್ಯ ತರಲಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ನಂಬಿಕೆಗಳು ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದವು. ಒಟ್ಟಿನಲ್ಲಿ, ಮುಖ್ಯ ದ್ವಾರದಲ್ಲಿ ಸರಿಯಾದ ವಿಧಾನದಲ್ಲಿ ಸ್ವಸ್ತಿಕ ಹಾಕುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ, ಅದು ಶುಭಶಕ್ತಿಯ ಸಂಕೇತವೆಂದು ಭಕ್ತರು ನಂಬುತ್ತಾರೆ.