ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಸೈರನ್ ಹಾಕಿದ್ದೆ, ದಾರಿ ಬಿಡೋಕ್ಕೇನಾಗಿತ್ತು?": ಅಪಘಾತ ಮಾಡಿ ಸಂತ್ರಸ್ತರನ್ನೇ ಗದರಿಸಿದ ಬಿಜೆಪಿ ಶಾಸಕನ ಮಗ!

ಮಧ್ಯಪ್ರದೇಶದ ಶಿವಪುರಿಯಲ್ಲಿ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರ ಪುತ್ರ ದಿನೇಶ್ ಲೋಧಿ ವೇಗವಾಗಿ ಚಲಾಯಿಸಿದ ಥಾರ್ ವಾಹನದಿಂದ ಐವರ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಗಾಯಗೊಂಡವರಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಅಪಘಾತದ ನಂತರ ಸಂತ್ರಸ್ತರನ್ನೇ “ಸೈರನ್ ಹಾಕಿದ್ದೆ, ಏಕೆ ಸರಿಯಲಿಲ್ಲ?” ಎಂದು ಪ್ರಶ್ನಿಸಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಐವರ ಮೇಲೆ ಥಾರ್ ಕಾರು ಹರಿಸಿ ದರ್ಪ ಮೆರೆದ ಶಾಸಕರ ಮಗ!

ಬಿಜೆಪಿ ಶಾಸಕರ ಮಗ -

Profile
Sushmitha Jain Apr 17, 2026 2:04 PM

ಭೋಪಾಲ್: ಮಧ್ಯಪ್ರದೇಶ (Madhya Pradesh)ದ ಶಿವಪುರಿ (Shivpuri)ಯಲ್ಲಿ ಅಧಿಕಾರದ ಅಮಲು ಮತ್ತು ಅಹಂಕಾರದ ಪರಮಾವಧಿ ಎನ್ನಬಹುದಾದ ಘಟನೆಯೊಂದು ನಡೆದಿದೆ. ಬಿಜೆಪಿ (BJP) ಶಾಸಕರೊಬ್ಬರ ಮಗ ತನ್ನ ಐಷಾರಾಮಿ ಥಾರ್ ಎಸ್‌ಯುವಿ (Thar SUV) ವಾಹನವನ್ನು ಐವರ ಮೇಲೆ ಹರಿಸಿದ್ದಲ್ಲದೆ, ರಸ್ತೆ ಬಿಟ್ಟು ಏಕೆ ಸರಿಯಲಿಲ್ಲ ಎಂದು ಸಂತ್ರಸ್ತರನ್ನೇ ಪ್ರಶ್ನಿಸಿ ದರ್ಪ ಮೆರೆದಿದ್ದಾನೆ.

ಏನಿದು ಪ್ರಕರಣ?

ಪಿಚ್ಹೋರ್ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಲೋಧಿ (Pritam Lodhi) ಅವರ ಪುತ್ರ ದಿನೇಶ್ ಲೋಧಿ (Dinesh Lodhi), ಬುಧವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ಈ ಅಪಘಾತ ಎಸಗಿದ್ದಾನೆ. ವೇಗವಾಗಿ ಬಂದ ಥಾರ್ ವಾಹನವು ಮೋಟಾರ್ ಸೈಕಲ್‌ನಲ್ಲಿದ್ದ ಮೂವರು ಪುರುಷರು ಮತ್ತು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಸಂಜಯ್ ಪರಿಹಾರ್ ಆಶಿಶ್ ಪರಿಹಾರ್ ಅಂಶುಲ್ ಪರಿಹಾರ್ , ಸೀತಾ ವರ್ಮಾ ಮತ್ತು ಪೂಜಾ ಸೋನಿ ಎಂದು ಗುರುತಿಸಲಾಗಿದೆ. ಇವರ ತಲೆ, ಭುಜ ಮತ್ತು ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

Census: ಇಂದಿನಿಂದ ಮನೆ ಮನೆ ಜನಗಣತಿ, ಈ 33 ಪ್ರಶ್ನೆಗಳಿಗೆ ಉತ್ತರಿಸಿ

ಸೈರನ್ ಹಾಕಿದ್ದೆ, ಏಕೆ ಸರಿಯಲಿಲ್ಲ?

ಅಪಘಾತದ ನಂತರ ಸ್ಥಳದಲ್ಲಿ ಜಮಾಯಿಸಿದ ಜನರೊಂದಿಗೆ ದಿನೇಶ್ ಲೋಧಿ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತರು ನೋವಿನಿಂದ ಕಿರುಚಾಡುತ್ತಿದ್ದರೂ ಕಿಂಚಿತ್ತೂ ಪಶ್ಚಾತ್ತಾಪ ಪಡದ ಆತ, "ನಾನು ಸೈರನ್ ಹಾಕುತ್ತಾ ಬರುತ್ತಿದ್ದೆ, ನೀವು ದಾರಿ ಬಿಟ್ಟು ಏಕೆ ಸರಿಯಲಿಲ್ಲ?" ಎಂದು ಉದ್ಧಟತನದಿಂದ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದವರಿಗೆ "ವಿಡಿಯೋ ಮಾಡಬೇಡಿ ಮಗನೇ" ಎಂದು ಧಮಕಿ ಹಾಕಿದ್ದಾನೆ.

ಶಾಸಕರ ಪ್ರತಿಕ್ರಿಯೆ:

ಅಪಘಾತಕ್ಕೀಡಾದ ವಾಹನದ ಮೇಲೆ 'ಶಾಸಕ' ಮತ್ತು 'ಪ್ರೀತಮ್ ಲೋಧಿ' ಎಂಬ ಬೋರ್ಡ್‌ಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪ್ರೀತಮ್ ಲೋಧಿ, "ಶಾಸಕನಿಗೆ ಸಾರ್ವಜನಿಕರೇ ಮೊದಲು, ಕುಟುಂಬವಲ್ಲ. ಕಾನೂನು ತನ್ನದೇ ಆದ ಹಾದಿಯಲ್ಲಿ ಸಾಗಲಿ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಲಿ," ಎಂದು ಹೇಳಿಕೆ ನೀಡಿದ್ದಾರೆ. ಕರೇರಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕನ ಮಗನ ಈ ವರ್ತನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಸಮಾಜಕ್ಕೆ ರಕ್ಷಣೆ ನೀಡಬೇಕಾದ ಸ್ಥಾನದಲ್ಲಿರುವವರ ಕುಟುಂಬದವರೇ ಇಂತಹ ಬೇಜವಾಬ್ದಾರಿ ವರ್ತನೆ ತೋರಿರುವುದು ದುರದೃಷ್ಟಕರ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಅಹಂಕಾರಿ ಮಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.