ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

14 ದಿನಗಳಲ್ಲಿ ಸೈಕಲ್‌ನಲ್ಲಿ ಎವರೆಸ್ಟ್ ತಲುಪಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡ ದಿವ್ಯಾ ಸಿಂಗ್‌

ಉತ್ತರ ಪ್ರದೇಶದ ದಿವ್ಯಾ ಸಿಂಗ್ ಅವರು ಕಠ್ಮಂಡುವಿನಿಂದ 14 ದಿನಗಳಲ್ಲಿ 17,560 ಅಡಿ ಎತ್ತರದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಸೈಕಲ್ ಮೂಲಕ ತಲುಪಿ ಇತಿಹಾಸ ನಿರ್ಮಿಸಿದ್ದಾರೆ. ಮೈನಸ್ ತಾಪಮಾನ, ಕಡಿಮೆ ಆಮ್ಲಜನಕ ಮತ್ತು ಕಠಿಣ ಪರ್ವತ ಮಾರ್ಗಗಳ ನಡುವೆಯೂ ಈ ಸಾಧನೆ ಮಾಡಿದ ಅವರು ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೈಕಲ್‌ನಲ್ಲಿ ಎವರೆಸ್ಟ್ ತಲುಪಿದ ಭಾರತದ ಮೊದಲ ಮಹಿಳೆ

ಗೋರಖ್‌ಪುರದ ಶಿಕ್ಷಕಿ ದಿವ್ಯಾ ಸಿಂಗ್ -

Profile
Sushmitha Jain Apr 6, 2026 1:23 PM

ಲಖನೌ: ಉತ್ತರ ಪ್ರದೇಶ (Uttar Pradesh)ದ ಗೋರಖ್‌ಪುರ (Gorakhpur)ದ 28 ವರ್ಷದ ಶಿಕ್ಷಕಿ ದಿವ್ಯಾ ಸಿಂಗ್ (Divya Singh) ಅವರು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ ಗೆ (Mount Everest Base Camp) ಸೈಕಲ್ ಮೂಲಕ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಹಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತ (India)ದ ಮೊದಲ ಮಹಿಳೆ ಮತ್ತು ಜಾಗತಿಕವಾಗಿ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕಠ್ಮಂಡು (Kathmandu)ವಿನಿಂದ ತನ್ನ ಪಯಣ ಆರಂಭಿಸಿದ ದಿವ್ಯಾ, ಕೇವಲ 14 ದಿನಗಳಲ್ಲಿ 17,560 ಅಡಿ ಎತ್ತರದ ಬೇಸ್ ಕ್ಯಾಂಪ್ ತಲುಪಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ಕಠಿಣ ಸವಾಲುಗಳು ಮತ್ತು ಅದಮ್ಯ ಸಾಹಸ

ಈ 14 ದಿನಗಳ ಸುದೀರ್ಘ ಪ್ರಯಾಣವು ಹೂವಿನ ಹಾಸಿಗೆಯಾಗಿರಲಿಲ್ಲ. ಮೈನಸ್ 12 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುವ ವಿಪರೀತ ಚಳಿ, ಕ್ಷೀಣಿಸುವ ಆಮ್ಲಜನಕದ ಮಟ್ಟ ಮತ್ತು ಅತಿ ವೇಗವಾಗಿ ಬೀಸುವ ಗಾಳಿಯ ವಿರುದ್ಧ ಅವರು ಹೋರಾಡಬೇಕಾಯಿತು. ದಿವ್ಯಾ ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಒರಟಾದ ಪರ್ವತ ಹಾದಿಗಳಲ್ಲಿ ಸೈಕಲ್ ತುಳಿಯುತ್ತಿದ್ದರು. ಅನೇಕ ಕಡೆ ರಸ್ತೆಗಳು ಸೈಕಲ್ ಚಲಾಯಿಸಲು ಅಸಾಧ್ಯವಾಗಿದ್ದಾಗ, ಅವರು ಎದೆಗುಂದದೆ ಸೈಕಲ್ ಅನ್ನು ತಮ್ಮ ಹೆಗಲ ಮೇಲೆ ಹೊತ್ತು ಬೆಟ್ಟಗಳನ್ನು ಏರಿದ್ದಾರೆ. ಸಾಲೇರಿ, ಸುರ್ಕೆ, ಫಕ್ಡಿಂಗ್, ನಾಮ್ಚೆ ಬಜಾರ್ ಮತ್ತು ಲೋಬುಚೆ ಮಾರ್ಗವಾಗಿ ಅವರು ಈ ಗುರಿ ತಲುಪಿದ್ದಾರೆ.

ಮದರಸಾದಲ್ಲಿ ಅಕ್ರಮವಾಗಿ ಪಿಸ್ತೂಲ್ ಸಂಗ್ರಹ; ಮೂವರ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರ

ದಿವ್ಯಾ ಅವರು ಬೇಸ್ ಕ್ಯಾಂಪ್ ತಲುಪಿದ ವೀಡಿಯೊವನ್ನು ಉಮಾ ಸಿಂಗ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ಅಭಿನಂದನೆಗಳು ದಿವ್ಯಾ ಸಿಂಗ್; ಸೈಕಲ್ ಮೂಲಕ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಭಾರತದ ಮೊದಲ ಮಹಿಳೆಯಾಗಿ ನೀವು ಹೊರಹೊಮ್ಮಿದ್ದೀರಿ. ಇದು ನಮ್ಮ ಗೋರಖ್‌ಪುರ ಮತ್ತು ಭಾರತಕ್ಕೆ ಹೆಮ್ಮೆಯ ಕ್ಷಣ" ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ಪೋಸ್ಟ್ ಕಂಡ ನೆಟ್ಟಿಗರು ದಿವ್ಯಾ ಅವರ ಅದಮ್ಯ ಇಚ್ಛಾಶಕ್ತಿ ಮತ್ತು ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಮಾದರಿ

ಸೀಮಿತ ಸಂಪನ್ಮೂಲಗಳ ನಡುವೆಯೂ ಕಠಿಣ ಸ್ವಯಂ ತರಬೇತಿಯ ಮೂಲಕ ದಿವ್ಯಾ ಈ ಸಾಧನೆಗೆ ಸಜ್ಜಾಗಿದ್ದರು. ಗೋರಖ್‌ಪುರದ ವಿಕಾಸ್ ಭವನದಿಂದ ಜಿಲ್ಲಾಧಿಕಾರಿಗಳು ಇವರ ಪ್ರಯಾಣಕ್ಕೆ ಚಾಲನೆ ನೀಡಿದ್ದರು. ಅವರ ಈ ಐತಿಹಾಸಿಕ ಸಾಧನೆಯು ಕೇವಲ ಗೋರಖ್‌ಪುರಕ್ಕೆ ಮಾತ್ರವಲ್ಲದೆ, ಇಡೀ ದೇಶದ ಕ್ರೀಡಾಪಟುಗಳು ಮತ್ತು ಸಾಹಸ ಪ್ರಿಯರಿಗೆ ದೊಡ್ಡ ಸ್ಫೂರ್ತಿಯಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಕಠಿಣ ಶಿಖರವನ್ನಾದರೂ ಏರಬಲ್ಲರು ಎಂಬುದಕ್ಕೆ ದಿವ್ಯಾ ಸಿಂಗ್ ಅವರೇ ಸಾಕ್ಷಿ.