ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರ‍್ಯಾಪಿಡೋ ಬೈಕ್‌ ಹತ್ತಿದ್ದಕ್ಕೆ ಆಕ್ರೋಶಗೊಂಡ ರಿಕ್ಷಾ ಚಾಲಕ: ಚಲಿಸುತ್ತಿದ್ದ ವಾಹನದಿಂದಲೇ ಪ್ರಯಾಣಿಕನನ್ನು ಕೆಳಗೆಳೆಯಲು ಯತ್ನ; ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ

Viral News: ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಆಟೋ ಚಾಲಕ ಬೆನ್ನಟ್ಟಿ, ಚಲಿಸುತ್ತಿದ್ದ ವಾಹನದಿಂದಲೇ ಕೆಳಗೆ ಎಳೆಯಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆಟೋ ಚಾಲಕನ‌ ವಿರುದ್ಧ ಕ್ರಮ ಕೈಗೊಳ್ಳಲು ನೆಟ್ಟಿಗರು ಆಗ್ರಹಿಸಿದ್ದಾರೆ.

ಬೈಕ್‌ ಬೆನ್ನಟ್ಟಿ ಪ್ರಯಾಣಿಕನನ್ನು ಕೆಳಗೆ ಎಳೆಯಲು ಯತ್ನಿಸಿದ ರಿಕ್ಷಾ ಚಾಲಕ

ಸಾಂದರ್ಭಿಕ ಚಿತ್ರ -

Profile
Pushpa Kumari Oct 21, 2026 8:54 PM

ಬೆಂಗಳೂರು, ಅ. 21: ಇತ್ತೀಚೆಗೆ ನಗರ ಪ್ರದೇಶದಲ್ಲಿ ಆಟೋ ಚಾಲಕರ ವರ್ತನೆ ಮಿತಿ ಮೀರುತ್ತಿದೆ. ಹೆಚ್ಚಿನ ಬಾಡಿಗೆ ದರ ನಿಗದಿ ಪಡಿಸುವುದಲ್ಲದೆ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಆಟೋ ಚಾಲಕ ಬೆನ್ನಟ್ಟಿ, ಚಲಿಸುತ್ತಿದ್ದ ವಾಹನದಿಂದಲೇ ಕೆಳಗೆ ಎಳೆಯಲು ಪ್ರಯತ್ನಿಸಿದ್ದಾನೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ (Viral News) ಆಟೋ ಚಾಲಕನ‌ ವಿರುದ್ಧ ಕ್ರಮ ಕೈಗೊಳ್ಳಲು ನೆಟ್ಟಿಗರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಸಣ್ಣ ಪ್ರಯಾಣವು ಅಪಾಯಕಾರಿಯಾಗಿ ಪರಿಣಮಿಸಿದೆ. ಆಟೋ ಬದಲಿಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಆಟೋ ಚಾಲಕ ಬೈಕ್ ಅನ್ನು ಬೆನ್ನಟ್ಟಿ ಕೆಳಗೆ ಎಳೆಯಲು ಪ್ರಯತ್ನಿಸಿದ್ದಾನೆ. ಈ ಅನುಭವವನ್ನು ವ್ಯಕ್ತಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಯಾಣಿಕರೊಬ್ಬರು ಕೇವಲ 2ರಿಂದ 3 ಕಿಲೋ ಮೀಟರ್ ದೂರದ ಪ್ರಯಾಣಕ್ಕಾಗಿ ಆಟೋ ಚಾಲಕನ ಬಳಿ ದರ ಕೇಳಿದ್ದಾರೆ. ಆಟೋ ಚಾಲಕ ಬರೋಬ್ಬರಿ 120 ರೂಪಾಯಿ ಬಾಡಿಗೆ ಹೇಳಿದ್ದಾನೆ. ದುಬಾರಿ ಮೊತ್ತ ಕೇಳಿ ಆ ವ್ಯಕ್ತಿ ಸುಲಭದ ಆಯ್ಕೆಯಾದ ರ‍್ಯಾಪಿಡೋ ಬೈಕ್ ಬುಕ್ ಮಾಡಿಕೊಂಡು ಹೊರಟಿದ್ದಾರೆ.

ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ

ಆಟೋ ಚಾಲಕ ಬೈಕ್‌ ಹಿಂಬಾಲಿಸಿ, ಚಲಿಸುತ್ತಿದ್ದ ವಾಹನದಿಂದ ತಮ್ಮನ್ನು ಕೈ ಹಿಡಿದು ಎಳೆಯಲು ಪ್ರಯತ್ನಿದ್ದಾನೆ. ಇದರಿಂದ ತಾನು ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ. ತಾವು ಹಲವು ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿರುವ ಸ್ಥಳೀಯರಾಗಿದ್ದರೂ, ಇಂತಹ ಕೆಟ್ಟ ಅನುಭವ ಹಿಂದೆಂದೂ ಎದುರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಿಜಕ್ಕೂ ಬೇಸರ ತರಿಸಿದೆ. ಆಟೋ-ರಿಕ್ಷಾ ಬದಲಿಗೆ ಬೈಕ್ ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಯಾರಾದರೂ ಏಕೆ ದೈಹಿಕವಾಗಿ ಹಲ್ಲೆ ನಡೆಸಲು ಮುಂದಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಟೋ ಚಾಲಕನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆತನ ವಿರುದ್ಧ ದೂರು ದಾಖಲಿಸಿ ವಾಹನ ದಾಖಲೆಗಳನ್ನು ರದ್ದು ಪಡಿಸಿ ಎಂದು ಆಗ್ರಹಿಸಿದ್ದಾರೆ.