ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಂಬುಲೆನ್ಸ್‌ ಸಿಗದೆ ಮೃತದೇಹ 4 ಕಿಲೋ ಮೀಟರ್ ಹೆಗಲ ಮೇಲೆ ಹೊತ್ತೊಯ್ದ ತೆಲಂಗಾಣದ ಕುಟುಂಬ

ತೆಲಂಗಾಣದ ಭದ್ರಾಚಲಂನಲ್ಲಿ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್‌ ಒದಗಿಸಲು ವಿಫಲವಾದ ಕಾರಣ, ಕುಟುಂಬಸ್ಥರು ತಮ್ಮ ಸಂಬಂಧಿಯ ಮೃತದೇಹವನ್ನು ಸುಮಾರು ನಾಲ್ಕು ಕಿಲೋ ಮೀಟರ್ ದೂರ ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಆಡಳಿತ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.

ಆಂಬುಲೆನ್ಸ್‌ ಸಿಗದೆ 4 ಕಿ.ಮೀ. ಮೃತದೇಹ ಹೊತ್ತೊಯ್ದ ಕುಟುಂಬ

ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿಸಿದ ಕುಟುಂಬ -

Profile
Sushmitha Jain May 25, 2026 6:59 PM

ಹೈದರಾಬಾದ್‌, ಮೇ 25: ಸರ್ಕಾರಿ ಆಸ್ಪತ್ರೆಯು ಆಂಬುಲೆನ್ಸ್‌ ಒದಗಿಸಲು ವಿಫಲವಾದ ಕಾರಣ, ಕುಟುಂಬಸ್ಥರು ತಮ್ಮ ಸಂಬಂಧಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಭದ್ರಾಚಲಂ ನಿವಾಸಿ ಕಂದಿ ವೆಂಕಣ್ಣ (Kandi Venkanna) (45) ಕಳೆದ ವಾರ ತೀವ್ರ ಬಿಸಿಲಿನ ತಾಪ ತಾಳಲಾರದೆ ಹೀಟ್‌ಸ್ಟ್ರೋಕ್‌ಗೆ ಒಳಗಾಗಿದ್ದರು. ತಕ್ಷಣ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.

ತುರ್ತು ಸಂದರ್ಭಗಳಿಗಾಗಿ ಆಸ್ಪತ್ರೆಯಲ್ಲಿ ವಾಹನ ಲಭ್ಯವಿದ್ದರೂ, ವೆಂಕಣ್ಣ ಅವರ ನಿಧನದ ನಂತರ ಮೃತದೇಹವನ್ನು ಸಾಗಿಸಲು ಆಸ್ಪತ್ರೆ ಮಂಡಳಿಯು ವಾಹನವನ್ನು ಒದಗಿಸಲಿಲ್ಲ ಎಂದು ವರದಿಯಾಗಿದೆ. ಆಸ್ಪತ್ರೆಯಿಂದ ಯಾವುದೇ ತಕ್ಷಣದ ಸಹಾಯ ಸಿಗದಿದ್ದಾಗ, ಮೃತರ ಸಂಬಂಧಿಕರು ಮತ್ತು ಸ್ಥಳೀಯರು ಅನಿವಾರ್ಯವಾಗಿ ಶವವನ್ನು ಸುಮಾರು ನಾಲ್ಕು ಕಿಲೋ ಮೀಟರ್ ದೂರದವರೆಗೆ ತಮ್ಮ ಹೆಗಲ ಮೇಲೆಯೇ ಹೊತ್ತೊಯ್ದರು. ಈ ದೃಶ್ಯವನ್ನು ನೋಡಿದ ಹಾದಿಹೋಕರು ತೀವ್ರ ಭಾವುಕರಾಗಿದ್ದಲ್ಲದೆ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಟಿಆರ್‌ ಎಕ್ಸ್‌ ಪೋಸ್ಟ್‌:



ಈ ಘಟನೆಯ ವಿಡಿಯೊಗಳು ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ, ಆಸ್ಪತ್ರೆ ಹಾಗೂ ಜಿಲ್ಲಾ ಉನ್ನತ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್‌ ಏಕೆ ಒದಗಿಸಲಿಲ್ಲ ಎಂಬ ಬಗ್ಗೆ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ತೆಲಂಗಾಣದ ಆರೋಗ್ಯ ಮತ್ತು ತುರ್ತು ಸೇವೆಗಳ ದುಃಸ್ಥಿತಿಯ ಬಗ್ಗೆ ಬಿಆರ್‌ಎಸ್ ಪಕ್ಷದ ನಾಯಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿಸಿದ ಕುಟುಂಬ

ʼʼಕಾಂಗ್ರೆಸ್ ಸರ್ಕಾರವು ತೆಲಂಗಾಣವನ್ನು ಮತ್ತೆ ಸಂಕಷ್ಟ ಮತ್ತು ಅವಮಾನಕ್ಕೆ ತಳ್ಳುತ್ತಿದೆʼʼ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಆರೋಪಿಸಿದ್ದಾರೆ. "ಕಾಂಗ್ರೆಸ್ ಆಡಳಿತದಲ್ಲಿ ತೆಲಂಗಾಣ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಒಂದು ಘಟನೆಯೇ ಸಾಕು. ಕೆಸಿಆರ್ ಸರ್ಕಾರದ ಅವಧಿಯಲ್ಲಿ ಬಡವರ ಕೊನೆಯ ಪ್ರಯಾಣವನ್ನು ಗೌರವಯುತವಾಗಿ ನಡೆಸಲು ವಿಶೇಷ ಆಂಬುಲೆನ್ಸ್‌ ಸೇವೆಗಳನ್ನು ನೀಡಲಾಗುತ್ತಿತ್ತು. ಆದರೆ ಇಂದು ಕುಟುಂಬಗಳು ಹೆಣವನ್ನು ಹೆಗಲ ಮೇಲೆ ಹೊರುವಂತಾಗಿದೆ. ಇದು ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿ" ಎಂದು ಅವರು ಎಕ್ಸ್ (X) ಖಾತೆಯಲ್ಲಿ ಬರೆದಿದ್ದಾರೆ. ಅಲ್ಲದೆ, ಪ್ರಚಾರ ಮತ್ತು ರಾಜಕೀಯ ಪ್ರವಾಸಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿರುವ ಸರ್ಕಾರ, ಬಡವರಿಗೆ ಕನಿಷ್ಠ ತುರ್ತು ಸೇವೆ ನೀಡಲು ವಿಫಲವಾಗಿದೆ ಎಂದು ದೂರಿದ್ದಾರೆ.

ಮತ್ತೊಬ್ಬ ಬಿಆರ್‌ಎಸ್ ನಾಯಕ ಟಿ. ಹರೀಶ್ ರಾವ್ ಮಾತನಾಡಿ, "ಕಾಂಗ್ರೆಸ್ ಸರ್ಕಾರದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅತ್ಯಂತ ಕಳವಳಕಾರಿಯಾಗಿದೆ. ಕೆಸಿಆರ್ ಸರ್ಕಾರದ ಅವಧಿಯಲ್ಲಿ ಬಡವರಿಗಾಗಿ ತಂದಿದ್ದ 108 ತುರ್ತು ಸೇವೆಗಳು ಮತ್ತು ಆಂಬುಲೆನ್ಸ್‌ ಸೇವೆಗಳು ಏನಾದವು? ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿರುವ ಬಡ ಜನರ ನೋವಿನ ಸಂಕೇತ" ಎಂದು ಆಕ್ರೋಶ ಹೊರ ಹಾಕಿದ್ದಾರೆ.