ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K Janardhan Thunga Column: ಆರೂಡುವ ಸೌರಯುಗಾದಿ

ನಮ್ಮ ಹಳ್ಳಿಯಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ ತುಂಬಾ ಕಡಿಮೆ, ಸೌರಮಾನ ಯುಗಾದಿ ಯ ಆಚರಣೆ ಇದೆ. ಈ ಆಚರಣೆಯು ಕೃಷಿ ಚಟುವಟಿಕೆಗೆ ಪೂರಕವಾಗಿರುವುದು ವಿಶೇಷ!ಯುಗಾದಿ ಯ ಮುನ್ನಾದಿನ ಒಂದು ಹೆಡಿಗೆಯ ತುಂಬಾ ಭತ್ತದ ಹುಲ್ಲಿನ ಚೆಂಡೆ ತಯಾರಿಸುತ್ತಾರೆ. ಇದನ್ನು ‘ಚಪ್ಲ’ ಎನ್ನುತ್ತೇವೆ. ಇದು ಆಕಾರದಲ್ಲಿ ಫೇಣಿಯ ರೀತಿ ಇರುತ್ತದೆ!

K Janardhan Thunga Column: ಆರೂಡುವ ಸೌರಯುಗಾದಿ

-

Profile
Ashok Nayak Apr 19, 2026 2:31 PM

ಕೆ.ಜನಾರ್ದನ ತುಂಗ

ನಮ್ಮ ರಾಜ್ಯದ ಕರಾವಳಿಯ ಕೃಷಿಕರು ಸೌರಮಾನ ಯುಗಾದಿಯನ್ನು ಕೃಷಿ ಚಟುವಟಿಕೆಗೆ ಪೂರಕವಾಗಿ ಆಚರಿಸುತ್ತಾರೆ. ಅಲ್ಲಿನ ಯುಗಾದಿಯ ದಿನ ಹೊಸ ವರ್ಷದ ಮೊದಲ ಉಳುಮೆ !

ಭಾರತದ ಬಹುಭಾಗದ ಜನರು ಇಂದು ಚಾಂದ್ರಮಾನ ಯುಗಾದಿ ಆಚರಿಸಿದರೆ ಕರಾವಳಿಯ ಜನರು ಯುಗಾದಿಯನ್ನು ಏಪ್ರಿಲ್ 14ರಂದು ಆಚರಿಸುತ್ತಾರೆ. ಅಂದು ಸೌರಪಂಚಾಂಗದ ಪ್ರಕಾರ ಯುಗಾದಿ. ಋತುಗಳ ಬದಲಾವಣೆಗೆ ಸೂರ್ಯನೇ ಕಾರಣ. ಮಳೆ, ಚಳಿ, ಬಿಸಿಲು ಎಲ್ಲದಕ್ಕೂ ಸೂರ್ಯನೇ ಕಾರಣ. ಚಂದ್ರ ಮಾನಸಿಕ ಪ್ರಕೃತಿಯ ಮೇಲೆ ಪ್ರಭಾವ ಬೀರುತ್ತಾನೆ ಎಂಬುದರ ಹೊರತಾಗಿ ಚಂದ್ರನಿಂದ ಭೂಮಿಯ ಮೇಲೆ ಮಹತ್ತರ ಬದಲಾವಣೆ ಸಂಭವಿಸುವುದಿಲ್ಲ.

ಚಾಂದ್ರಮಾನ ಯುಗಾದಿಯ ದಿನಾಂಕ ಪ್ರತಿವರ್ಷ ಬದಲಾಗುತ್ತದೆ. ಆದರೆ ಸೌರಮಾನ ಯುಗಾದಿ ಪ್ರತಿವರ್ಷ ಏಪ್ರಿಲ್ 14ರಂದೇ (ಒಮ್ಮೊಮ್ಮೆ 15ರಂದು) ಬರುತ್ತದೆ. ನಮ್ಮದು ಕರಾವಳಿಯಲ್ಲಿರುವ, ಸಮುದ್ರಕ್ಕೆ ಹತ್ತಿರದಲ್ಲಿರುವ ಹಳ್ಳಿ. ನಮ್ಮಲ್ಲಿ ಸಂಕ್ರಾಂತಿ, ಯುಗಾದಿಗಳನ್ನು ಅಷ್ಟೇನೂ ವೈಭವದಿಂದ ಆಚರಿಸುವುದಿಲ್ಲ.

ಯಾವುದೇ ಹಬ್ಬವಿದ್ದರೂ ಅವುಗಳನ್ನು ಕೃಷಿಚಟುವಟಿಕೆಗಳಿಗೆ ಹೊಂದಿಸಿಕೊಂಡೇ ಆಚರಿಸುತ್ತಾರೆ. ಕೆಲವು ಹಬ್ಬಗಳು ತಮ್ಮ ಸಾಂಕೇತಿಕತೆಯಿಂದ ನನ್ನ ಮನಸ್ಸಿನಲ್ಲಿ ಉಳಿದುಕೊಂಡು ಬಂದಿವೆ. ಅಂಥವುಗಳಲ್ಲಿ ಯುಗಾದಿಯೂ ಒಂದು.

ಇದನ್ನೂ ಓದಿ: Somalinganna Benni Column: ʼಮುಳ್ಳುಗಳೇ ಹೂʼವಾಗುವ ಗ್ರಾಮೀಣ ಯುಗಾದಿ

ನಮ್ಮ ಹಳ್ಳಿಯಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ ತುಂಬಾ ಕಡಿಮೆ, ಸೌರಮಾನ ಯುಗಾದಿ ಯ ಆಚರಣೆ ಇದೆ. ಈ ಆಚರಣೆಯು ಕೃಷಿ ಚಟುವಟಿಕೆಗೆ ಪೂರಕವಾಗಿರುವುದು ವಿಶೇಷ!ಯುಗಾದಿ ಯ ಮುನ್ನಾದಿನ ಒಂದು ಹೆಡಿಗೆಯ ತುಂಬಾ ಭತ್ತದ ಹುಲ್ಲಿನ ಚೆಂಡೆ ತಯಾರಿಸುತ್ತಾರೆ. ಇದನ್ನು ‘ಚಪ್ಲ’ ಎನ್ನುತ್ತೇವೆ. ಇದು ಆಕಾರದಲ್ಲಿ ಫೇಣಿಯ ರೀತಿ ಇರುತ್ತದೆ!

ನಮಗೆ ಎಷ್ಟು ಗದ್ದೆಗಳಿವೆಯೋ ಅಷ್ಟು ಚಪ್ಲಗಳು. ಜೊತೆಗೆ ಇನ್ನೊಂದು ಹೆಡಿಗೆಯ ತುಂಬಾ ಉಮಿ, ಅಂದರೆ ಭತ್ತದ ಸಿಪ್ಪೆ. ಜತೆಗೆ ಒಂದು ಸೂಡಿ ಅಂದರೆ ದೊಂದಿಯೂ ಸಿದ್ಧವಾಗಬೇಕು.

ನಾವು ಚಿಕ್ಕ ಮಕ್ಕಳು ಬೆಳಕು ಹರಿಯುವ ಮೊದಲೇ ಚಪ್ಲ, ಉಮಿಯ ಹೆಡಿಗೆಗಳನ್ನು ಹೊತ್ತು ಕೊಂಡು ಗದ್ದೆಯ ಕಡೆಗೆ ಹೊರಡುತ್ತೇವೆ. ನಮ್ಮಲ್ಲಿ ದೊಡ್ಡವನೆಂದುಕೊಂಡವನೊಬ್ಬ ಸೂಡಿಗೆ ಬೆಂಕಿ ಹತ್ತಿಸಿಕೊಂಡು ಬೀಸುತ್ತಾ ಮುಂದೆ ಸಾಗುತ್ತಾನೆ. ಗದ್ದೆಯನ್ನು ತಲುಪಿದ ಕೂಡಲೇ ಅದರ ಮೂಲೆಯಲ್ಲಿ ಒಂದು ಚಪ್ಲ ಇರಿಸಿ ಅದಕ್ಕೆ ಬೆಂಕಿ ಹಚ್ಚಿ ಅದರ ಮೇಲೆ ಉಮಿ ಸುರಿಯುತ್ತಾರೆ.

ಉಮಿಯಿಂದ ಆವೃತವಾದ ಚಪ್ಲದಿಂದ ಹೊಗೆಯು ಕೊಳವೆಯಾಕಾರದಲ್ಲಿ ಮೇಲೇರುತ್ತದೆ. ಹೀಗೆ ಎಲ್ಲರೂ ಎಲ್ಲ ಗದ್ದೆಗಳ ಮೂಲೆಗಳಲ್ಲಿ ಈ ಸಂಸ್ಕಾರ ಮಾಡುತ್ತಾರೆ. ಇನ್ನೇನು ಬೆಳಕು ಹರಿಯುತ್ತದೆ ಎಂಬ ಹೊತ್ತಿಗೆ ಮನೆಯ ಎದುರಿನ ಅಗೇಡಿಯ ಹತ್ತಿರ ದಿನದ ಪ್ರಮುಖ ಆಚರಣೆ ನಡೆಯುತ್ತದೆ.

ಇದಾದ ಕೂಡಲೇ, ನಮ್ಮ ಹೂಟಿಯಾಳು ಅಣ್ಣಯ್ಯನು, ಮನೆಯ ಹೋರಿಗಳನ್ನು ತಂದು, ಅವುಗಳಿಗೆ ನೊಗ ಕಟ್ಟಿ ಹೂಡಲು ಸಿದ್ಧನಾಗುತ್ತಾನೆ. ನೇಗಿಲಿನಲ್ಲಿ ಆರು ಅಥವಾ ಎಂಟರ ಆಕೃತಿಯ ಹೋಳಿಗಳನ್ನು ಮಾಡಿ ಹೂಡುತ್ತಾನೆ. ನಾವು ಆ ಹೋಳಿಗಳಲ್ಲಿ ಮತ್ತೆ ಹುಲ್ಲಿನ ಚಪ್ಲ, ಉಮಿ ತುಂಬಿ ಬೆಂಕಿ ಹಚ್ಚಿ ಹೊಗೆ ಎಬ್ಬಿಸುತ್ತೇವೆ.

ಅಷ್ಟೊತ್ತಿಗೆ ಬೆಳಗಾಗಿರುತ್ತದೆ. ಅರುಣೋದಯದ ಚುಮುಚುಮು ಬೆಳಕಿನಲ್ಲಿ ಇಡೀ ಬಯಲಿನಲ್ಲಿ ಕಾಣಿಸುವ ಹೊಗೆಕೊಳವೆಗಳ ಚೆಲುವನ್ನು ನೋಡಿಯೇ ತಿಳಿಯಬೇಕು. ನಂತರ ಹೋರಿಗಳಿಗೆ ಕೆರೆಯಲ್ಲಿ ಸ್ನಾನ, ಹಟ್ಟಿಯಲ್ಲಿ ಅಕ್ಕಚ್ಚು. ನಮಗೆ ಮನೆಯಲ್ಲಿ ಸ್ನಾನ, ಬೆಳಗಿನ ತಿಂಡಿಯ ರೂಪ ದಲ್ಲಿ ಗಂಜಿ, ಉಪ್ಪಿನಕಾಯಿ.

ಆರಂಭದ ಕೆಲಸ ಆರಂಭ

ಇದರಲ್ಲಿ ಸಾಂಕೇತಿಕತೆಯೇನು ಬಂತು ಎಂದು ಕೇಳುತ್ತೀರಾ? ಈ ರೀತಿಯ ಹೂಟಿಯನ್ನು ಆರೂಡುವುದು ಎನ್ನುತ್ತೇವೆ. ಆರು ಹೂಡುವುದು; ಆರರ ಆಕೃತಿಯಲ್ಲಿ ಹೂಡುವುದು ಎಂದು ನಾನು ಮೊದಲು ತಿಳಿದಿದ್ದೆ. ಆದರೆ ಇದು ‘ಆರಂಬ’ದ, ಆರಂಭದ ಹೂಟಿ ಎಂದು ನಂತರ ನಾನೇ ಅರ್ಥ ಮಾಡಿಕೊಂಡೆ.

ನಮ್ಮೂರಿನಲ್ಲಿ ಗದ್ದೆಗಳಲ್ಲಿನ ಕೃಷಿಕಾರ್ಯ ಧಾನ್ಯ ಕೀಳುವುದರೊಂದಿಗೆ ಸುಮಾರು ಫೆಬ್ರವರಿ ತಿಂಗಳಲ್ಲಿ ಮುಗಿದು ಮನೆಯ ಅಂಗಳಕ್ಕೆ, ಕೊಟ್ಟಿಗೆಗೆ ಸ್ಥಳಾಂತರಗೊಳ್ಳುತ್ತದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಗದ್ದೆಗಳಲ್ಲಿ ಸಾಕಷ್ಟು ಕಳೆ ಬೆಳೆದಿರುತ್ತದೆ. ಗದ್ದೆಗಳನ್ನು ಮುಂದಿನ ಬೆಳೆಗೆ ಸಿದ್ಧ ಮಾಡಬೇಕಾಗುತ್ತದೆ. ಈ ಸಿದ್ಧ ಮಾಡುವ ಪ್ರಕ್ರಿಯೆ ಏಪ್ರಿಲ್ 14ರಂದು ಪ್ರಾರಂಭವಾಗುತ್ತದೆ.

ಏಪ್ರಿಲ್ ಹದಿನಾಲ್ಕೇ ಏಕೆ? ಅಂದು ಮೇಷ ಸಂಕ್ರಾಂತಿ. ಸೌರ ಪಂಚಾಂಗದ ಮೊದಲ ದಿನ. ಮಣ್ಣು ಅತ್ಯಂತ ಕಾದಿರುವ ಸಮಯ. ಅಲ್ಲಿಂದ ಸುಮಾರು ಒಂದೂವರೆ ತಿಂಗಳಿನಲ್ಲಿ ಮಣ್ಣು ಹದ ಮಾಡುವ, ಗೊಬ್ಬರ ಬಿಕ್ಕುವ, ಸೆಟ್ಟೆಗೆರಚುವ ಕೆಲಸ ಮುಗಿಯಬೇಕು. ಮಣ್ಣಿನ ಕಣಕಣವೂ ಬಿಸಿಲಿಗೆ ತೆರೆದುಕೊಳ್ಳುವಂತೆ ಪ್ರತಿಯೊಂದು ಗದ್ದೆಯನ್ನೂ ಕನಿಷ್ಠ ಆರು ಬಾರಿ ಹೂಡಿರಬೇಕು.

ಇದೊಂದು ಸ್ವಾಭಾವಿಕ ಕ್ರಿಮಿನಾಶಕ ಕ್ರಿಯೆ! ಗದ್ದೆಯ ಅಂಚುಗಳಲ್ಲಿ ಇಳಿದು ಬಂದ ಹುಲ್ಲನ್ನೂ ಮಣ್ಣನ್ನೂ ಸವರಬೇಕಾಗುತ್ತದೆ. ಇದನ್ನು ಹೊದ್ದು ಮಾಡುವುದು ಎನ್ನುತ್ತೇವೆ.

ಮೇ ತಿಂಗಳಿನಲ್ಲಿ ಸಾಮಾನ್ಯವಾಗಿ ಎರಡು ಅಥವಾ ಮೂರು ಬಾರಿ ಮಳೆ ಬರುತ್ತದೆ. ಮಳೆಯನ್ನು ಅನುಸರಿಸಿ ಭತ್ತದ ಅಗೆ ತಯಾರಿಸಲು ಬಿತ್ತನೆ ಮಾಡಬೇಕಾಗುತ್ತದೆ. ಅಗೆ ಬೆಳೆದು ನೆಟ್ಟಿಗೆ ಸಿದ್ಧ ವಾಗಲು ಒಂದು ತಿಂಗಳು ಬೇಕಾಗುತ್ತದೆ. ನಮ್ಮ ಊರಿನಲ್ಲಿ ಜೂನ್ ಹತ್ತರ ಒಳಗೆ ಉಜಿರು ಏಳುವುದರಿಂದ ನೆಟ್ಟಿ ಪ್ರಾರಂಭಿಸಲೇ ಬೇಕು. ನಾನು ಇದನ್ನೆಲ್ಲಾ ವಿವರವಾಗಿ ಕಂಡದ್ದು, ಕೆಲವು ದಶಕಗಳ ಹಿಂದೆ. ಇಂದು ಮಳೆವಿನ್ಯಾಸದಲ್ಲಿ ಆಗಿರುವ ಬದಲಾವಣೆಗೆ ಅನುಗುಣವಾಗಿ ಕೃಷಿ ಕ್ಯಾಲೆಂಡರಿನಲ್ಲಿಯೂ ಕೆಲವು ಬದಲಾವಣೆಯಾಗಿದೆ.

ಮೂರು ತಿಂಗಳ ಜಡತೆಯಿಂದ ಭೂಮಿಯಲ್ಲಿ ಕಳೆಬೆಳೆದು ಸತ್ವ ಕಡಿಮೆಯಾಗಿರುತ್ತದೆ. ಜೊತೆಗೆ ಕ್ರಿಮಿಕೀಟಗಳು ಮಣ್ಣಿನ ಒಳಪದರವನ್ನು ಸೇರಿಕೊಂಡಿರುತ್ತವೆ. ಬಿಸಿಲಿನ ತಾಪಕ್ಕೆ ಮಣ್ಣಿನ ಮೇಲ್ಮೈ ಅಸಹನೀಯವಾಗಿರುತ್ತದೆ. ಮನಸ್ಸೂ ಅದೇ ರೀತಿ, ಜಡವಾದಾಗ ಸೃಜನಶೀಲತೆ ಕುಂದು ತ್ತದೆ, ಬೇಡದ ಯೋಚನೆಗಳ ಕಳೆ ಮೊಳೆಯುತ್ತದೆ. ಅದಕ್ಕೆ ಮತ್ತೆ ಸೃಜನಶೀಲತೆಯನ್ನು ತಂದು ಕೊಡಲು ಮನಸ್ಸೆಂಬ ಹೊಲವನ್ನು ಆರು ಬಾರಿ ಹೂಡಬೇಕು. ಮನಸ್ಸಿನ ಓಳಿಗಳಲ್ಲಿರುವ ಚಪಲ ಗಳನ್ನು ಬೆಂಕಿ ಹಾಕಿ ಸುಡಬೇಕು.

ಮನಸ್ಸಿನ ಪದರಪದರಗಳನ್ನೂ ತಪದ ಬಿಸಿಗೆ ಒಡ್ಡಿಕೊಳ್ಳಬೇಕು. ಹೀಗೆ ಸಿದ್ಧವಾದ ನೆಲಕ್ಕೆ ಮಳೆಯ ತಂಪು ಸ್ಪರ್ಶವಾದಾಗ ಹೊಸ ಪಯಿರು ಹುಲುಸಾಗಿ ಬೆಳೆಯುತ್ತದೆ. (ಕೆಲವು ಪದಗಳ ಅರ್ಥ: ಹೂಟಿಯಾಳು = ಉಳುವವನು; ಹೂಡುವುದು = ಉಳುವುದು; ಹೂಟಿ = ಉಳುಮೆ; ಹೊಳಿ = ಓಳಿ; ಹೊದ್ದು = ಹದ್ದು, ಅಂಚು; ಹೋರಿ = ಕೋಣ, ಅಕ್ಕಚ್ಚು = ಬೇಯಿಸಿದ ಪಶುಆಹಾರ; ಹಟ್ಟಿ = ದನಕರುಗಳ ಕೊಟ್ಟಿಗೆ; ಸೆಟ್ಟೆ = ಒಣಗಿದ ಕೆಸರಿನ ಹೆಂಟೆ; ಗೆರಚು = ಪುಡಿ ಮಾಡಿ ಚದುರಿಸು; ಬಿಕ್ಕುವ = ಹರಡುವ; ಉಜಿರು = ಒರತೆ; ನೆಟ್ಟಿ = ನಾಟಿ; ಹೆಡಿಗೆ = ಮಂಕರಿ, ಬಿಳಲಿನ ಬುಟ್ಟಿ; ಅಗೆ = ಸಸಿ)