ತುಳುನಾಡಿನ ಬೆರ್ಮರು
ದ್ರಾವಿಡ ಮೂಲದ ತುಳು ಶಬ್ದವಾದ ‘ಬೆರ್ಮೆರ್’ ಎನ್ನುವುದರ ಅರ್ಥ ದೇವರು ಎಂದು. ‘ಬೆರ್ಮೆರ್’ ಎನ್ನುವುದು ರೂಢನಾಮವೇ ಹೊರತು ಅಂಕಿತನಾಮವಲ್ಲ. ಅಂದರೆ ಅದು ದೇವರು ಎನ್ನುವ ಅರ್ಥ ಕೊಡುವ ದ್ರಾವಿಡ ಮೂಲದ ತುಳು ಶಬ್ದ. ಇದಕ್ಕೆ ಸಮಾನ ಎನಿಸುವ ತಮಿಳು ಪದ ‘ಪೆರುಮಾನ್; ಅಥವಾ ‘ಪೆರುಮಾಳ್’ ಎನ್ನುವುದು. ವೈದಿಕ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ತುಳುನಾಡಿಗೆ ಬರುವ ಮುನ್ನ, ಇಲ್ಲಿ ದೇವತಾ ಸಂಕಲ್ಪಕ್ಕೆ ಇದ್ದಿರಬಹುದಾದ ದ್ರಾವಿಡ ಮೂಲದ ಶಬ್ದವೇ ‘ಬೆರ್ಮೆರ್’.
-
ಡಾ.ಬಿ.ಜನಾರ್ದನ ಭಟ್
ನಮ್ಮ ರಾಜ್ಯದ ತುಳುನಾಡಿನಲ್ಲಿ ಬೆರ್ಮರು ಎಂಬುದು ಅಪಾರ ಗೌರವಕ್ಕೆ, ಭಕ್ತಿಗೆ ಪಾತ್ರ ವಾಗಿರುವ ದೇವರು ಅಥವಾ ದೈವ. ಬೆರ್ಮೆರು ಎಂಬ ಪದದ ಮೂಲವನ್ನು ಹುಡುಕುತ್ತಾ, ಸುಮಾರು 15 ವರ್ಷ ಸಂಶೋಧನೆ ನಡೆಸಿರುವ ಲೇಖಕರು, ಸಾತವಾಹನ ಅಥವಾ ಸಾಲಿವಾಹನರ ಆಳ್ವಿಕೆಯ ಪ್ರಾಮುಖ್ಯತೆಯನ್ನು ಗುರುತಿಸುತ್ತಾರೆ. ಬೆರ್ಮರು ಕುರಿತು ಹೊಸ ಹೊಳಹಿನ ವಿಚಾರಗಳು ಇಲ್ಲಿದ್ದು, ಇದೇ ವಿಚಾರವಾಗಿ ಲೇಖಕರು ಒಂದು ಗ್ರಂಥವನ್ನೂ ಸಿದ್ಧಪಡಿಸಿದ್ದು, ಅದೀಗ ಬೆಳಕು ಕಂಡಿದೆ.
ತುಳುನಾಡಿನಲ್ಲಿ ‘ಬೆರ್ಮೆರ್’ ಎನ್ನುವ ದೇವರು ಅಥವಾ ದೈವದ ಆರಾಧನೆಯ ಬಗ್ಗೆ ಸಾಕಷ್ಟು ಉಲ್ಲೇಖಗಳು, ಸಾಕ್ಷ್ಯಾಧಾರಗಳು ಸಿಗುತ್ತವೆ. ಆದರೆ ‘ಬೆರ್ಮೆರ್’ ಎಂಬ ಪದದ ಬಳಕೆ ಕೆಲವು ಸಂದರ್ಭಗಳಲ್ಲಿ ಸಮಸ್ಯಾತ್ಮಕವಾಗಿ ಕಾಣುತ್ತದೆ. ಈ ಗೊಂದಲಕ್ಕೆ ಕಾರಣ ಕೆಲವು ಕಡೆ ‘ಬೆರ್ಮೆರ್’ ಎಂಬ ಹೆಸರಿನ ದೈವದ ಆರಾಧನೆ ಕಂಡುಬಂದರೆ ಇನ್ನು ಕೆಲವು ಕಡೆ ‘ಬೆರ್ಮೆ’ ಎಂಬ ದ್ರಾವಿಡ ಶಬ್ದವು ‘ಬ್ರಹ್ಮ’ ಎಂಬ ಸಂಸ್ಕೃತ ಶಬ್ದವಾಗಿ ಪರಿವರ್ತನೆಹೊಂದಿ ನಾಗ ಬ್ರಹ್ಮ (ನಾಗದೇವರು), ಬ್ರಹ್ಮಲಿಂಗೇಶ್ವರ (ಶಿವದೇವರು), ಬ್ರಹ್ಮ ಮುಗ್ಗೆರ್ಕಳು (ಮುಗ್ಗೆರ್ಕಳು ದೈವಗಳ ಗುಡಿ ಅಥವಾ ಸ್ಥಾನದಲ್ಲಿರುವ ಬೆರ್ಮೆರ ಸಾನ್ನಿಧ್ಯ), ಬ್ರಹ್ಮ ಬೈದರ್ಕಳು (ಕೋಟಿ ಚೆನ್ನಯರೆಂಬ ಅವಳಿ ದೈವಗಳು ಮತ್ತು ಬೆರ್ಮೆರ ಸಾನ್ನಿಧ್ಯ) ಎಂಬ ಕೂಡುನುಡಿಯಲ್ಲಿ ಕಾಣಸಿಗುತ್ತವೆ.
ಆದರೆ ಈ ‘ಬೆರ್ಮೆರ್’ ಅಥವಾ ‘ಬೆಮ್ಮೆರ್’ ತುಳುನಾಡಿನ ಆರಾಧನಾ ಕ್ಷೇತ್ರದಲ್ಲಿ ಪ್ರಧಾನವಾಗಿರುವ ದೈವತವೇ ಹೊರತು ವೇದಬ್ರಹ್ಮ ಅಥವಾ ತ್ರಿಮೂರ್ತಿಗಳಲ್ಲಿ ಒಬ್ಬನಾದ ಚತುರ್ಮುಖ ಬ್ರಹ್ಮನಲ್ಲ. ನಿರಾಕಾರ, ನಿರ್ಗುಣ, ಸರ್ವವ್ಯಾಪಿಯಾದ ಪರಬ್ರಹ್ಮ ಸ್ವರೂಪವೂ ಅಲ್ಲ.
ಬೆರ್ಮರು ಒಂದು ರೂಢನಾಮ
ದ್ರಾವಿಡ ಮೂಲದ ತುಳು ಶಬ್ದವಾದ ‘ಬೆರ್ಮೆರ್’ ಎನ್ನುವುದರ ಅರ್ಥ ದೇವರು ಎಂದು. ‘ಬೆರ್ಮೆರ್’ ಎನ್ನುವುದು ರೂಢನಾಮವೇ ಹೊರತು ಅಂಕಿತನಾಮವಲ್ಲ. ಅಂದರೆ ಅದು ದೇವರು ಎನ್ನುವ ಅರ್ಥ ಕೊಡುವ ದ್ರಾವಿಡ ಮೂಲದ ತುಳು ಶಬ್ದ. ಇದಕ್ಕೆ ಸಮಾನ ಎನಿಸುವ ತಮಿಳು ಪದ ‘ಪೆರುಮಾನ್; ಅಥವಾ ‘ಪೆರುಮಾಳ್’ ಎನ್ನುವುದು. ವೈದಿಕ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ತುಳುನಾಡಿಗೆ ಬರುವ ಮುನ್ನ, ಇಲ್ಲಿ ದೇವತಾ ಸಂಕಲ್ಪಕ್ಕೆ ಇದ್ದಿರಬಹುದಾದ ದ್ರಾವಿಡ ಮೂಲದ ಶಬ್ದವೇ ‘ಬೆರ್ಮೆರ್’. ಈ ಪದವು ‘ಪೆರ್ಮೆ’ (ಹಿರಿಮೆ) (ತಮಿಳು ಪದ ‘ಪೆರುಮೈ’ ಇದ್ದ ಹಾಗೆ) ಎಂಬರ್ಥದಲ್ಲಿಯಾಗಲಿ, ‘ಪೆರಿಯಮ್ಮೆ’ (ದೊಡ್ಡ ತಂದೆ) ಎಂಬ ಪದದಿಂದಾಗಲಿ ರೂಪುಗೊಂಡಿರ ಬಹುದು.
ಇದನ್ನೂ ಓದಿ: Shashank Muduri Column: ಪರಿಸರ ರಕ್ಷಣೆಯ ʼಹರಿಕಾರʼ !
ಆದರೆ ಈ ಪದವು ‘ದೇವರು’ ಎನ್ನುವ ಅರ್ಥದಲ್ಲಿ ತುಳುನಾಡಿನಲ್ಲಿ ಬಳಕೆಯಾಗುತ್ತಿರುವುದು ಸತ್ಯ. ಉದಾಹರಣೆಗೆ ಸಿರಿಪಾಡ್ದದನದಲ್ಲಿ ಬರುವ ‘ನಾರಾಯಿನ ಬೆರ್ಮೆರೆ’ ಎಂದರೆ ‘ನಾರಾಯಣ ದೇವರೇ’ ಎಂದರ್ಥ; ‘ನಾಗ ಬೆರ್ಮೆರ್’ ಎಂದರೆ ‘ನಾಗ ದೇವರು’ ಎಂದರ್ಥ. ಬೆರ್ಮರ ಪದದ ರೂಪಗಳು ಬೇರೆ ಬೇರೆ ಆಗಿರಬಹುದು ಮತ್ತು ಅವುಗಳ ನಾಲ್ಕು ರೂಪಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.
೧. ದೈವ ಬೆರ್ಮರು - ಶಾಸ್ತಾವು: ತುಳುನಾಡಿನ ಬೆರ್ಮರು ಎಂದರೆ ಪ್ರಧಾನವಾಗಿ ಆದಿಮೂಲದ ದೈವ. ಆ ದೈವ ತುಳುನಾಡಿನ ಮೊದಲನೆಯ ರಾಜವಂಶವಾದ ಸಾತವಾಹನ ವಂಶದ ಮೊದಲ ನೆಯ ರಾಜ - ‘ಆದಿಪುರುಷ’ ಶಾಲಿವಾಹನನೇ ಆಗಿರಬೇಕು. ‘ಶಾಸ್ತಾವು’ ಎಂದರೆ ತುಳುನಾಡಿನ ಪ್ರಾಚೀನ ರಾಜವಂಶದ ಸ್ಥಾಪಕ ಸಾತವಾನ (ಶಾತವಾಹನ ಅಥವಾ ಶಾಲಿವಾಹನ) ಅಥವಾ ವೀರಮರಣವನ್ನು ಹೊಂದಿದ ಬೇರೊಬ್ಬ ಸಾತವಾನ ಇರಬಹುದೆನ್ನುವ ಈ ವಾದವನ್ನು, ಗೋವಿಂದಪೈಗಳ ಒಂದು ಚಿಂತನೆಯನ್ನು ಆಧರಿಸಿ ಮುಂದಿಡಲಾಗಿದೆ.
ಶಾಲಿವಾಹನ ಎನ್ನುವುದು ಮೂಲತಃ ಸಾತವಾಹನ ವಂಶದ ಹೆಸರು; ಒಬ್ಬ ರಾಜನ ಹೆಸರಾಗಿಯೂ (ಉದಾಹರಣೆಗೆ ಚೋಳ, ಪಾಂಡ್ಯ ಎನ್ನುವ ಹಾಗೆ) ಬಳಸಲಾಗಿರುವುದು ಸಹಜ. ಸಾತವಾಹನ ವಂಶದ ಆಡಳಿತವು ಸಾ.ಶ. (ಕ್ರಿಸ್ತ ಶಕ) 78ರಲ್ಲಿ ಕೊನೆಗೊಂಡು, ಭೂತಾಳ ಪಾಂಡ್ಯನ ಆಡಳಿತವು ತುಳುನಾಡಿನಲ್ಲಿ ಪ್ರಾರಂಭವಾಯಿತು.
ಈ ನಂತರ ತುಳುನಾಡಿನಲ್ಲಿ ಅಳಿಯ ಸಂತಾನ ಕೌಟುಂಬಿಕ ವ್ಯವಸ್ಥೆ, ಆಡಳಿತೆಯಲ್ಲಿ ಹೋಬಳಿ ಇತ್ಯಾದಿ ವಿಭಾಗಗಳು, ಸಾಮಾಜಿಕ ಕಟ್ಟುಪಾಡುಗಳು, ಧಾರ್ಮಿಕ ಆರಾಧನೆಗಳ ವ್ಯವಸ್ಥೆ ಇತ್ಯಾದಿ ಆಮೂಲಾಗ್ರ ಬದಲಾವಣೆಗಳಾದವು. ಈ ಬದಲಾವಣೆಯನ್ನು ಗುರುತಿಸಲು ಶಾಲಿವಾಹನ (ಶಾತವಾಹನ) ಶಕೆಯೆಂಬ ಕಾಲಗಣನೆಯು ಸಾ.ಶ. (ಕ್ರಿಸ್ತಶಕ) 78 ರಿಂದ ಪ್ರಾರಂಭವಾಯಿತು.
ತುಳುನಾಡಿನ ದೇವಸ್ಥಾನಗಳಲ್ಲಿ ಒಂದು ಪ್ರಧಾನ ರಕ್ಷಕ ದೈವವಾಗಿ, ನೈಋತ್ಯ ಭಾಗದಲ್ಲಿ ಪ್ರಾಕಾರದ ಒಳಗೆ ಅಥವಾ ಪ್ರಾಕಾರದ ಹೊರಗೆ ಮುರಕಲ್ಲು, ಪಾದೆಕಲ್ಲು, ಸ್ತೂಪ, ಮೂರ್ತಿ ಅಥವಾ ಪದ್ಮಕಲ್ಲು (ಲಿಂಗಾಕೃತಿ)ಯಲ್ಲಿ ಪೂಜೆಗೊಳ್ಳುವವನೇ ಶಾಸ್ತಾವು. ಅವನು ಬ್ರಹ್ಮಸ್ಥಾನ ಗಳಲ್ಲಿ ಪ್ರಧಾನ ದೈವವಾಗಿ ಪೂಜೆಗೊಳ್ಳುವುದರಿಂದ ಅಲ್ಲಿ ‘ಬೆರ್ಮರು’ ಎಂದು ಕರೆಯಿಸಿಕೊಳ್ಳು ತ್ತಾನೆ.
ದೇವಸ್ಥಾನಗಳಲ್ಲಿಯೂ ಶಾಸ್ತಾವು ಗುಡಿಯೇ ಮೂಲವಾಗಿದ್ದಾಗ (ಅಂದರೆ ಶಾಸ್ತಾವು ಬೆರ್ಮರಾಗಿದ್ದಾಗ) ಕಾಲಾಂತರದಲ್ಲಿ ಲಿಂಗರೂಪದಲ್ಲಿ, ಆಗಮೋಕ್ತವಾಗಿ ಗರ್ಭಗುಡಿಹೊಳಗೆ ಪ್ರಧಾನ ದೇವರಾಗಿ ಸ್ಥಾಪಿತನಾದಾಗ ಅವನನ್ನು ‘ಬ್ರಹ್ಮಲಿಂಗೇಶ್ವರ’ ಅಥವಾ ‘ಶಾಸ್ತಾವು ಬ್ರಹ್ಮಲಿಂಗೇಶ್ವರ’ ಎಂದು ಕರೆಯಲಾಗಿದೆ.
ಶಾಸ್ತಾವು ಅನ್ನುವುದು ‘ಸಾತವಾಹನ’ ದೈವವಾಗಿರಬಹುದೆಂಬ ಗೋವಿಂದ ಪೈಗಳ ಚಿಂತನೆಯು ಹೆಚ್ಚು ಸ್ವೀಕಾರ್ಯವಾಗಿದೆ. ಗೋವಿಂದ ಪೈಗಳ ಅಧ್ಯಯನಾಧಾರಿತ ಚಿಂತನೆ ಹೀಗಿದೆ: ಪ್ರಾಚೀನ ತುಳುನಾಡಿನಲ್ಲಿ ಒಂದು ಬಗೆಯ ‘ಅರಾಜಕ’ (ನಿಶ್ಚಿತ ರಾಜವಂಶ ಇಲ್ಲದ ಸ್ಥಿತಿ) - ಪ್ರಜಾಪ್ರಭುತ್ವ ಪದ್ಧತಿ ಇತ್ತು.
ಪ್ರಾರಂಭದಲ್ಲಿ, ಅಂದರೆ ಸುಮಾರು ಕ್ರಿಸ್ತಪೂರ್ವ ಮೂರು ನಾಲ್ಕು ಶತಮಾನಗಳಲ್ಲಿ ಸಾತವಾ(ಹ)ನರು ಈ ನಾಡನ್ನು ಆಳಿದ್ದಾಗಿಯೂ, ಮೊದಲನೆಯ ಸಾತವಾನ ರಾಜನು ಪ್ರಜೆಗಳ ಕೋರಿಕೆಯಂತೆ ರಾಜ್ಯಭಾರವನ್ನು ನಿರ್ವಹಿಸಿರಬೇಕೆಂದೂ ಪೈಗಳು ಹೇಳುತ್ತಾರೆ.
ತಾಲವನವೇ ತುಳುನಾಡು!
ಪ್ರಾಚೀನ ತುಳುನಾಡಿಗೆ ‘ತಾಲವನ’ ಎಂಬ ಹೆಸರಿತ್ತು. ಸಂಸ್ಕೃತದ ಈ ಪದದ ಪ್ರಾಕೃತ ರೂಪ ‘ಸಾತವಾನ’ ಎಂದಾಗುತ್ತದೆ. ‘ಸಾತವಾನ’ (ಅಂದರೆ ತಾಲವಾನ , ತಾಲವನದ ಒಡೆಯ) ಎನ್ನುವುದು ದಾಖಲೆಯಲ್ಲಿ ಸಿಗುವ ಅತ್ಯಂತ ಹಿಂದಿನ ರಾಜನ ಹೆಸರು ಎಂದು ಪೈಗಳು ಅಭಿಪ್ರಾಯಪಟ್ಟಿದ್ದಾರೆ. ಸಾತವಾನ (ಸಾತವಾಹನ) ನಂತರ ವಂಶಕ್ಕೆ ಅಂಟಿಕೊಂಡ ಹೆಸರಾಯಿತು. “ ‘ಸಾತವಾಹನ’ರ ಹಿರಿಯರು ಆರ್ಯಾವತದಿಂದ ದಕ್ಷಿಣಾಪಥಕ್ಕೆ ಇಳಿತಂದು ನಮ್ಮೀ ತುಳುನಾಡಿನಲ್ಲಿ ನೆಲೆಸಿರಬೇಕು.... ‘ಸಾತವಾಹನ’ ಎಂಬೀ ವಂಶದ ಮೂಲಸ್ಥಾನವು ಈ ತುಳುನಾಡಾಗಿರಬೇಕು." (‘ಗೋವಿಂದಪೈ ಸಂಶೋಧನ ಸಂಪುಟ’, 1995. ಪುಟ 568-569).
ಸಾತವಾಹನರು ಬೌದ್ಧ ಆರಾಧನೆಯ ಕ್ರಮವನ್ನು, ಮುಖ್ಯವಾಗಿ ಸ್ತೂಪಗಳನ್ನು ದಕ್ಷಿಣದಲ್ಲಿ ಪರಿಚಯಿಸಿದವರು. ಅಜಂತಾ, ಅಮರಾವತಿಗಳ ಸ್ತೂಪಗಳನ್ನು ಅವರೇ ನಿರ್ಮಿಸಿದವರು. ತುಳುನಾಡಿನಲ್ಲಿ ದೂಪೆಗಳು (ಸ್ತೂಪ), ಚಿತ್ತಾರಿಗಳು (ಚಿತೆ - ಚೈತ್ಯಾಲಯ- ಚಿತ್ತಾರಿ), ಗುಂಡಗಳ ನಿರ್ಮಾಣ ಇವರ ಕಾಲದಲ್ಲಿಯೇ ಪ್ರಾರಂಭವಾಗಿರಬೇಕು.
ತುಳುನಾಡಿನಲ್ಲಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳನ್ನು ಹರಡಿಸಿದವರೂ ಸಾತವಾಹನರೇ. ಅವರ ಅರಮನೆಯಲ್ಲಿ ಪ್ರಾಕೃತವೇ ಆಡುಭಾಷೆಯಾಗಿತ್ತು ಎನ್ನಬಹುದು. ‘ಶಾಲಿವಾಹನ’ ಎಂಬ ಶಬ್ದವು ಹೀಗೆಯೇ ‘ಶಾತವಾಹನ’ ಎಂಬುದರ ರೂಪಾಂತರ; ‘ತಾಲೀವಹನ’ ಎಂಬ ಮೂಲ ಶಬ್ದದಿಂದುಂ ಟಾದುದು" ಎಂದೂ ಪೈಗಳು ಸ್ಪಷ್ಟಪಡಿಸಿದ್ದಾರೆ.
ಈಗ ಸಿಕ್ಕಿರುವ ದಾಖಲೆಗಳಲ್ಲಿ ಶಾಲಿವಾಹನ ಶಕೆಯನ್ನು ಉಲ್ಲೇಖಿಸಿದ ಮೊದಲನೆಯ ರೆಕಾರ್ಡ್ ಭೂತಾಳ ಪಾಂಡ್ಯನ ಅಳಿಯಕಟ್ಟೇ ಆಗಿದೆ. ಅದರಲ್ಲಿ ‘ಶಾಲಿವಾಹನ ಶಕೆ 1 ಈಶ್ವರ ನಾಮ ಸಂವತ್ಸರ’ದಲ್ಲಿ ಬರೆದಿರುದೆನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ. (ಅದರ ಕಾಲ ಕ್ರಿಸ್ತ ಶಕ 78 ಎನ್ನುವುದನ್ನು, ಇದರ ಆಧಾರದಲ್ಲಿ ಗಣಪತಿರಾವ್ ಐಗಳ್ ಆಮೇಲೆ ಕಂಡುಹುಡುಕಿರಬೇಕು).
ತಾವು ಹೊಸ ಶಕೆಯೊಂದನ್ನು ಪ್ರಾರಂಭಿಸಿದ್ದನ್ನು ಪ್ರಜ್ಞಾಪೂರ್ವಕವಾಗಿ ತಿಳಿದವರು ಮಾತ್ರ ಹೀಗೆ ಬರೆಯಬಲ್ಲರು. ಒಟ್ಟಿನಲ್ಲಿ ಶಾಲಿವಾಹನ ಶಕೆಗೂ ಸಾತವಾಹನರಿಗೂ, ತುಳುನಾಡಿಗೂ ಸಂಬಂಧವಿದೆ ಎನ್ನುವುದನ್ನು ಊಹಿಸಲು ಸಾಧ್ಯವಾಗುತ್ತದೆ.
ಆದಿಮೂಲ ಬೆರ್ಮ
ಮುಖ್ಯವಾಗಿ ‘ಶಾತವಾಹನ’ ಅಥವಾ‘ಶಾಲಿವಾಹನ’ ಎಂಬ ತುಳುನಾಡಿನ ಪ್ರಾಚೀನ ಅರಸನೇ ತುಳುನಾಡಿನ ಆದಿಮೂಲ ದೇವತೆ ಬೆರ್ಮರಾಗಿದ್ದಾನೆ. ಅವನ ಚಿತ್ತಾರಿಗಳನ್ನು (ಸ್ತೂಪ ಅಥವಾ ದೂಪೆಗಳನ್ನು) ಮಾಡಿ ಆರಾಧಿಸಲು ಮೊದಲಾದುದು ನಂತರ ರೂಪಾಂತರಗಳನ್ನು ಹೊಂದಿತು. ಬುದ್ಧನ ಸ್ತೂಪಗಳಲ್ಲಿ ಬುದ್ಧನ ದೇಹವೇ ಇರುವುದಲ್ಲ; ಅವನ ನೆನಪಿಗಾಗಿ ನಿರ್ಮಿಸಿದ ಆರಾಧನಾ ಸ್ಥಳಗಳೇ ಅವು; ಗೋಪುರದ ಆಕಾರದಲ್ಲಿರುತ್ತವೆ.
ಸ್ತೂಪಗಳಿರುವ ಆಲಯಗಳು ‘ಚೈತ್ಯಾಲಯಗಳು’; ಇವೇ ತುಳುನಾಡಿನಲ್ಲಿ ‘ಚಿತ್ತಾರಿ’ಗಳು. ಅದೇ ಮಾದರಿಯಲ್ಲಿ ಸಾತವಾಹನರು ತುಳುನಾಡಿಗೆ ಪರಿಚಯಿಸಿದ ತಮ್ಮ ಮೂಲಪುರುಷನ ಸ್ತೂಪ (ದೂಪೆ) ಮತ್ತು ಚೈತ್ಯಾಲಯ (ಚಿತ್ತಾರಿಗಳು) ಈ ನಾಡಿನ ಮೂಲ ಆರಾಧನಾ ಸ್ಥಳಗಳಾದವು;
ತುಳುನಾಡಿನ ‘ಬೆರ್ಮರ ವನಗಳು’ ಅಥವಾ ‘ಬೆರ್ಮರ ಸ್ಥಾನಗಳು’ ಆದವು. ಈ ಚಿತ್ತಾರಿ ಅಥವಾ ದೂಪೆಗಳು ಯಾವ ದೈವದ ಆರಾಧನೆಯ ಕೇಂದ್ರಗಳೋ ಆ ದೈವವನ್ನು ತುಳುವರು ‘ಬೆರ್ಮರು’ ಎಂದು ಕರೆದರು ಎನ್ನುವುದು ಈ ಲೇಖಕನ ವಿಚಾರ.
ಗೋವಿಂದ ಪೈಗಳು ಸ್ವಲ್ಪ ಭಿನ್ನವಾದ ವಿವರಣೆಯನ್ನು ಕೊಟ್ಟಿದ್ದಾರೆ. ಅದನ್ನೂ ಗಮನಿಸೋಣ. ಅವರ ಪ್ರಕಾರ ಸಾತವಾಹನರು ಸ್ಕಂದನ (ಸುಬ್ರಹ್ಮಣ್ಯನ) ಆರಾಧಕರು. ಸುಬ್ರಹ್ಮಣ್ಯನಿಗೆ ಮತ್ತು ನಾಗದೇವರಿಗೆ ಸಮೀಕರಣವಾದುದು ಭಾರತದಲ್ಲಿ ತುಳುನಾಡಿನಲ್ಲಿ ಮಾತ್ರ. ‘ಸುಬ್ರಹ್ಮಣ್ಯ’ ಮೂಲತಃ ‘ಸುಬ್ಬರ +ಮಣಿ’ ಪದದಿಂದ ರೂಪುಗೊಂಡಿರಬೇಕು.
‘ಸುಬ್ಬ’ ಎಂದರೆ ದ್ರಾವಿಡ ಭಾಷೆಗಳಲ್ಲಿ ನಾಗ ಮತ್ತು ಮಣಿ ಎಂದರೆ ರತ್ನ ಅಥವಾ ಅತ್ಯಂತ ಶ್ರೇಷ್ಠವಾದುದು; ಅಂದರೆ ‘ನಾಗ ಬ್ರಹ್ಮ’. ಹಾಗಾಗಿ ತುಳುನಾಡಿನಲ್ಲಿ ನಾಗಾರಾಧನೆಗೆ ಪ್ರಾಶಸ್ತ್ಯ ಬಂದಿದೆ. ಇನ್ನು ‘ಶಾಸ್ತಾವು’ ಎನ್ನುವ ಪದವು ‘ಸಾತನ+ಕಾವು’ (ಸಾತ+ಕಾವು - ಸಾತಾವು - ಸಾಸ್ತಾವು ಅಂದರೆ ಸಾತವಾಹನನ ಬನ) ಎಂಬುದರಿಂದ ಬಂದಿದೆ. (ಪುಟ 570-571).
“ಆ (ಶಾಸ್ತಾವು) ದೇವತೆಯ ಹೆಸರು ‘ಸಾತ’ನೆಂಬುದು ವ್ಯಕ್ತವಾಗುತ್ತದೆ..... ತುಳುನಾಡಿನಲ್ಲಿ ಸಾತ ವಾಹನ ವಂಶವನ್ನು ಪ್ರಥಮತಃ ಸ್ಥಾಪಿಸಿದ ತದ್ವಂಶದ ಆದಿಪುರುಷನು, ಈ ಸಾತನೆಂಬ ದೇವತೆಯ (ಅಂದರೆ ಸುಬ್ರಹ್ಮಣ್ಯನ - ನಾಗರೂಪಿಯಾದ ಸ್ಕಂದನ) ಆರಾಧಕನಾಗಿರ ಬೇಕಾದುದರಿಂದ....." ಶಾಸ್ತಾವುಗಳು ನಾಗಾರಾಧನೆಯ ವನಗಳೆಂಬುದು ಪೈಗಳ ಚಿಂತನೆ. ಈ ಲೇಖಕನ ಪ್ರಕಾರ ಸಾತ (ಸಾತವಾಹನನ) ಎಂಬ ದೈವ ಅಥವಾ ಬೆರ್ಮರ ಆರಾಧನೆಯೂ, ಜತೆಗೆ ನಾಗ ಬೆರ್ಮರ ಆರಾಧನೆಯೂ ಒಂದೇ ಸ್ಥಾನದಲ್ಲಿ (ಆದರೆ ಪ್ರತ್ಯೇಕವಾಗಿ) ನಡೆಯುತ್ತಿತ್ತು. ಹಾಗಾಗಿ ಅಲ್ಲಲ್ಲಿ ‘ಬ್ರಹ್ಮದ್ವಯ’ (ಎರಡು ಬೆರ್ಮರ) ಬ್ರಹ್ಮಸ್ಥಾನಗಳಿವೆ ದೈವ ಬೆರ್ಮರು ಮತ್ತು ನಾಗ ಬೆರ್ಮರು.
2.ಜೈನ ಬ್ರಹ್ಮ: ಕುದುರೆಯ ಮೇಲೆ ಕುಳಿತ ಶೀತಲನಾಥ ತೀರ್ಥಂಕರನಾದ ಯಕ್ಷನಾದ ಜೈನ ಬ್ರಹ್ಮನ ಆರಾಧನೆಯು ತುಳುನಾಡಿನಲ್ಲಿ ಪಾಂಡ್ಯರ ಆಳ್ವಿಕೆಯ ನಂತರ ಕಾಣಿಸಿಕೊಂಡಿತು. ಕುದುರೆಯ ಮೇಲೆ ಕುಳಿತ ಈ ಜೈನ ಬ್ರಹ್ಮನ ಮೂರ್ತಿಗಳ ರಚನೆಯ ಹಿಂದೆ ತುಳುವರ ಬೆರ್ಮರಾದ ಶಾಸ್ತಾವು ಅಥವಾ ಶಾಲಿವಾಹನ ರಾಜನ ರೂಪದ ಕಲ್ಪನೆಯೂ ಸೇರಿಕೊಂಡು ಸಮೀಕರಣ ಮತ್ತು ಸಮನ್ವಯಗಳಿಗೆ ಉದಾಹರಣೆಯಾಗಿದೆ.
3.ಚತುರ್ಮುಖ ವೇದ ಬ್ರಹ್ಮ: ತುಳುನಾಡಿನಲ್ಲಿ ಮೂಡುಬಿದಿರೆಯ ಲಾಡಿ ಎಂಬಲ್ಲಿ ಮತ್ತು ಕಟ್ಟಿಂಗೇರಿಯಲ್ಲಿ ಚತುರ್ಮುಖ ವೇದ ಬ್ರಹ್ಮನ ದೇವಾಲಯಗಳಿವೆ.
4.ಇತರ ‘ಕುಲಮೂಲ-ಪುರುಷ ದೈವಗಳು’ ಅಥವಾ ಚಿತ್ತಾರಿ ಬೆರ್ಮರು: ಕುಲಮೂಲ ಪುರುಷರು ದೈವತ್ವವನ್ನು ಪಡೆದಾಗ ಚಿತ್ತಾರಿ ಅಥವಾ ದೂಪೆಗಳಲ್ಲಿ ಅವರನ್ನೇ ಆರಾಽಸಿಕೊಂಡು ಬಂದು ಅವರನ್ನೇ ಬೆರ್ಮರು ಎಂದು ಕರೆದಿರುವುದೂ ಇದೆ. ಆದರೆ ಪ್ರಾಚೀನ ಬ್ರಹ್ಮಸ್ಥಾನಗಳಲ್ಲಿ ಶಾಸ್ತಾವು ದೈವವೇ ಬೆರ್ಮರಾಗಿರುವುದು ಸ್ಪಷ್ಟವಾಗಿದೆ.
ಬೆರ್ಮರ ಆರಾಧನೆ
ಶಾಸ್ತಾವು ಬೆರ್ಮರು ಬ್ರಹ್ಮಸ್ಥಾನಗಳು ಅಥವಾ ಹಲವು ದೈವಗಳ ಆರಾಧನಾ ಕೇಂದ್ರಗಳಲ್ಲಿ (ಆಲಡೆಗಳಲ್ಲಿ) ಪ್ರಧಾನ ದೇವರಾಗಿರುತ್ತಾರೆ. ಆದರೆ ಶಿವ, ದುರ್ಗೆ ಮುಂತಾದ ಪಾಂಡ್ಯರ ಕಾಲದ ನಂತರ ನಿರ್ಮಾಣವಾದ ಆಗಮೋಕ್ತ ದೇವಾಲಯಗಳಲ್ಲಿ ನೈಋತ್ಯ ಭಾಗದಲ್ಲಿ ರಕ್ಷಕ ದೇವರಾಗಿ ಉಪಸ್ಥಾನವನ್ನು ಪಡೆಯುತ್ತಾರೆ, ಶಾಸ್ತಾವು ಬೆರ್ಮರ ಪ್ರತೀಕಗಳು ಮುರಕಲ್ಲು, ಪಾದೆಕಲ್ಲು, ಶಿವಲಿಂಗದಾಕೃತಿ ಮುಂತಾದ ರೂಪಗಳಲ್ಲಿ ಇರಬಹುದು. ದೇವಾಲಯಗಳಲ್ಲಿ ನೈಋತ್ಯ ಅಥವಾ ಯಜಮಾನ ಸ್ಥಾನದಲ್ಲಿ ಶಾಸ್ತಾವು ಬೆರ್ಮರೂ, ಈಶಾನ್ಯದಲ್ಲಿ ಕ್ಷೇತ್ರಪಾಲನೂ, ಆಗ್ನೇಯದಲ್ಲಿ ಇತರ ದೈವಗಳೂ ಇರುತ್ತವೆ.
ದಕ್ಷಿಣ-ಪಶ್ಚಿಮದಲ್ಲಿ ಶೂರಸೇನ ಎಂಬ ದೇವತೆಯು ‘ಅಯ್ಯ’ ಎಂದು ಕರೆಯಲ್ಪಟ್ಟು ಉತ್ಸವ ಬಲಿಯ ಕಾಲದಲ್ಲಿ ಅಯ್ಯನ+ಕಾಯಿ (ಅಜಕಾಯಿ) ಎಂಬ ಕ್ರಿಯೆಯಲ್ಲಿ ನೈವೇದ್ಯವನ್ನು ಸ್ವೀಕರಿಸುತ್ತದೆ; ಕ್ಷೇತ್ರಪಾಲನಿಗೂ ಅದೇ ದಿನ ಬಲಿಕೊಡುವುದಿರುತ್ತದೆ. ಶಾಸ್ತಾವು ದೇವತೆಯನ್ನು ಭೌತಿಕ ಸಾನ್ನಿಧ್ಯ ಇಲ್ಲದಿದ್ದರೂ ಬಲಿಕಲ್ಲುಗಳ ಮೂಲಕವೂ ನಂಬುವ ಕ್ಷೇತ್ರಗಳಿವೆ.
ಸಾಮಾನ್ಯವಾಗಿ ನಿತ್ಯಪೂಜೆ ಅಥವಾ ಬಲಿ ಇರುತ್ತದೆ; ಕೆಲವೆಡೆ ವಿಶೇಷಕಟ್ಟಲೆಯ ದಿನಗಳಲ್ಲಿ ಮಾತ್ರ ನೈವೇದ್ಯ ಇರುತ್ತದೆ. ಬ್ರಹ್ಮಸ್ಥಾನಗಳಲ್ಲಿ ಸಂಕ್ರಮಣಗಳಂದು ಮಾತ್ರ ಪೂಜೆ ಇರುವುದು ವಾಡಿಕೆ.
ಶಾಸನಗಳಲ್ಲಿ ಮತ್ತು ಮುಜರಾಯಿ ಇಲಾಖೆಯ ದೇವಾಲಯಗಳ ಪಟ್ಟಿಯಲ್ಲಿ ತುಳುನಾಡಿನ ಸಾಕಷ್ಟು ಶಾಸನಗಳಲ್ಲಿ ಬ್ರಹ್ಮಸ್ಥಾನಗಳನ್ನು ಮತ್ತು ಬ್ರಹ್ಮ ದೇವರನ್ನು ಉಲ್ಲೇಖಿಸಿದ ಹಲವಾರು ಉದಾಹರಣೆಗಳಿವೆ. ಇವುಗಳಲ್ಲಿ ಬ್ರಹ್ಮಸ್ಥಾನ ಎನ್ನುವುದು ಬೆರ್ಮರ ಕಾವುಗಳನ್ನೂ, ಬ್ರಹ್ಮರ ಹೆಸರಿನಲ್ಲಿ ಜೈನ ಆಡಳಿತಹಾರರು ಮಾಡಿದ ‘ಒಪ್ಪ’ (ಸಹಿ)ಗಳು ಜೈನ ಬ್ರಹ್ಮನನ್ನೂ ಸೂಚಿಸುವಂತೆ ಕಾಣುತ್ತದೆ.
ಹಾಗೆಯೇ ಹಲವಾರು ದೇವಾಲಯಗಳು ಬ್ರಹ್ಮಸ್ಥಾನ, ಚಿತ್ತಾರಿ ಬ್ರಹ್ಮ ದೇವಸ್ಥಾನ, ಭೂತ ಬ್ರಹ್ಮ, ಬ್ರಹ್ಮಲಿಂಗೇಶ್ವರ ದೇವಸ್ಥಾನ ಎಂದೆಲ್ಲ ಮುಜರಾಯಿ ಇಲಾಖೆಯ ಪಟ್ಟಿಯಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಹೆಚ್ಚಿನವುಗಳು ತುಳುನಾಡಿನ ಶಾಸ್ತಾವು ಬೆರ್ಮರ ಆರಾಧನಾ ಸ್ಥಳಗಳೇ ಆಗಿವೆ. ಕಾಲದಿಂದ ಕಾಲಕ್ಕೆ ಇವುಗಳಲ್ಲಿ ಕೆಲವು ಕಡೆ ಸಾಕಷ್ಟು ಬದಲಾವಣೆಗಳು ಆಗಿರಬಹುದಾಗಿದೆ.