ಕೆಲಸದವರ ಕಷ್ಟ ಅಷ್ಟಿಷ್ಟಲ್ಲ
ತಮಾಶೆಗಳು, ಒಬ್ಬರನ್ನೊಬ್ಬರು ಕಾಲೆಳೆಯುವುದು, ಏನಾದ್ರೂ ವರ್ಚುವಲ್ ಗೇಮ್ ಆಡುವುದು ಎಲ್ಲ ಬಹಳ ರೋಚಕವಾಗಿಯೇ ನಡೆಯಿತು. ಮೊದಲ ಮೀಟಿಂಗ್‌ನಲ್ಲಿಯೇ, “ಇಡೀ ದಿನ ಮನೇಲೆ ಇರ್ತೀವಲ್ಲ, ಯಾವುದು ನ್ಯೂ ನಾರ್ಮಲ್ಸಿ ಆಗಿದೆ ನಿಮಗೆ" ಎಂದೇನೋ ಕೇಳಿದ್ದು ಯಾರದು... ಬೀನಾ... ಹೌದು ಅವಳೇ.
-
ಸುಮಂಗಲಾ
ಇತ್ತೀಚೆಗೆ ಬಿಡುಗಡೆಯಾದ ಸುಮಂಗಲಾ ಅವರ ‘ಎನ್ನಾತ್ಮ ಕಂಪಮಿದು’ ಕಾದಂಬರಿಯಿಂದ ಆಯ್ದ ಭಾಗ ಇಲ್ಲಿದೆ.
ಸುಮಂಗಲಾ ಲಾಕ್ ಡೌನ್ ಆರಂಭದಲ್ಲಿ, ಮೀಟ್ ಓವರ್ ಕಾಫಿ, ಮೀಟ್ ಓವರ್ ಎ ಡ್ರಿಂಕ್ ಎಂದೆಲ್ಲ ಮೊದಲ ಒಂದೆರಡು ತಿಂಗಳು ವಾರದ ಕೊನೆಯಲ್ಲಿ ಶುಕ್ರವಾರ ಸಂಜೆ ಆರು ಗಂಟೆಯಿಂದ ಏಳು ಗಂಟೆಯವರೆಗೆ ಆಫೀಸಿನ ಆಲ್ ಲೇಡಿಸ್ ಜೂಮ್ ಮೀಟಿಂಗುಗಳು ನಡೆದವು.
ತಮಾಶೆಗಳು, ಒಬ್ಬರನ್ನೊಬ್ಬರು ಕಾಲೆಳೆಯುವುದು, ಏನಾದ್ರೂ ವರ್ಚುವಲ್ ಗೇಮ್ ಆಡುವುದು ಎಲ್ಲ ಬಹಳ ರೋಚಕವಾಗಿಯೇ ನಡೆಯಿತು. ಮೊದಲ ಮೀಟಿಂಗ್‌ನಲ್ಲಿಯೇ, “ಇಡೀ ದಿನ ಮನೇಲೆ ಇರ್ತೀವಲ್ಲ, ಯಾವುದು ನ್ಯೂ ನಾರ್ಮಲ್ಸಿ ಆಗಿದೆ ನಿಮಗೆ" ಎಂದೇನೋ ಕೇಳಿದ್ದು ಯಾರದು... ಬೀನಾ... ಹೌದು ಅವಳೇ.
ಕೇಳಿದವಳೇ ಅಷ್ಟೇ ತಟ್ಟನೆ “ನಿಮ್ಮಲ್ಲಿ ಯಾರೆಲ್ಲ ಈಗ ಬ್ರೇಸಿಯರ್ಸ್ ಹಾಕೋದು ಬಿಟ್ಟಿದ್ದೀರಿ... ಐ ಲೆಫ್ಟ್ ವೇರಿಂಗ್... ಸೋ ರಿಲಾಕ್ಸಿಂಗ್" ಎನ್ನುತ್ತ ಜೋರಾಗಿ ನಕ್ಕಿದ್ದಳಲ್ಲ... ಎಷ್ಟು ಬಿಡುಬೀಸಾಗಿ ಹೀಗೆ ತಟ್ಟನೆ ಏನೋ ಹೇಳಿಬಿಡ್ತಾಳಲ್ಲ ಅಂತ ವಿನುತಳಿಗೆ ಯಾವಾಗಲೂ ಅಚ್ಚರಿ.
ಇದನ್ನೂ ಓದಿ: Ravi Hunj Column: ಜಮೇದಾರರು ಕಿಂದರಿ ಊದುವ ಜಾಮ್ದಾರರಾದದ್ದು!
ಅಡುಗೆಗೆ ಒಬ್ಬರು, ಮನೆಗೆಲಸಕ್ಕೆ ಒಬ್ಬರು ಹೀಗೆ ಇಬ್ಬಿಬ್ಬರನ್ನು ಮನೆಗೆಲಸಕ್ಕೆ ಇಟ್ಟು ಕೊಂಡ ಅಪ್ಪರ್ ಕ್ಲಾಸ್ ಮತ್ತು ಅಪ್ಪರ್ ಮಿಡಲ್ ಕ್ಲಾಸಿನವರೇ ಅವರಲ್ಲಿ ಹೆಚ್ಚಿನವ ರಿದ್ದರು. ವಿನುತ, ಮೇಗಲೆ, ರಾಜೋ, ಹೀಗೆ ನಾಲ್ಕಾರು ಜನರ ಲೋಕವಾಗಿರುವ ಮಧ್ಯಮ ವರ್ಗ ಎಂಬ ವ್ಯಾಖ್ಯಾನಕ್ಕಿಂತ ಮೇಲಿದ್ದವರು.
ಇದೀಗ ಲಾಕ್‌ಡೌನ್ ಆದಾಗಿನಿಂದ ಮನೆಗೆಲಸವನ್ನು ಪೂರ್ಣ ತಾವೇ ಮಾಡಿಕೊಳ್ಳುವುದು ಎಷ್ಟೆಲ್ಲ ಕಷ್ಟವಾಗ್ತಿದೆ, ಮನೆಗೆಲಸ, ಮಕ್ಕಳನ್ನು ಸಂಭಾಳಿಸುವುದು, ಜೊತೆಗೆ ಹೊತ್ತಲ್ಲದ ಹೊತ್ತಿನಲ್ಲಿಯೂ ಆಫೀಸಿನ ಜೂಮ್ ಮೀಟಿಂಗ್‌ಗಳು... ಒಂದಿಬ್ಬರು ಗಂಡ, ಮಕ್ಕಳು ತಮಗೆ ಸಹಾಯ ಮಾಡುತ್ತಾರೆ ಎಂದೊಡನೆ ಉಳಿದವರು, ಗಂಡಸರನ್ನು ಮನೆಗೆಲಸದಲ್ಲಿ ತೊಡಗಿಸಿಕೊಳ್ಳಲು ಏನೆಲ್ಲ ಉಪಾಯ ಹೂಡಬೇಕು ಎಂದು... ದಿನಸಿ ಸಾಮಾನುಗಳು, ಹಣ್ಣು ತರಕಾರಿಗಳನ್ನು ಕೊಳ್ಳುವುದು ಎಷ್ಟು ಕಷ್ಟವಾಗ್ತಿದೆ ಎಂದು... ಗಂಡ, ಹೆಂಡತಿ, ಒಂದೋ ಎರಡೋ ಮಕ್ಕಳು, ಇಷ್ಟು ಜನರಿಗೆ ಮೂರು ನಾಲ್ಕು ಬೆಡ್‌ರೂಮಗಳಿರುವ ದೊಡ್ಡ ಮನೆಯಲ್ಲಿದ್ದುಕೊಂಡೂ ಮೂರೂ ಹೊತ್ತು ಮನೆಯವರೆಲ್ಲರೂ ಪರಸ್ಪರರ ಕಣ್ಣಳತೆಯಲ್ಲಿಯೇ ಇಡೀ ದಿನ ಕಳೆಯುವುದು ಹ್ಯಾಗೆ ಉಸಿರುಗಟ್ಟುತ್ತಿದೆ ಎಂದು... ಹೀಗೆಯೇ ಉಳ್ಳವರ ಕೊರೋನಾ ಕಷ್ಟಗಳು ಮತ್ತು ಕಲ್ಪಿತ ಸಂಕಷ್ಟಗಳು.
“ಅಲ್ಲಾ... ಇವರುಗಳು ಕೆಲಸದವರಿಲ್ಲದೇ ತಮಗೆ ಎಷ್ಟು ಕುತ್ತಿಗೆಗೆ ಬಂದಿದೆ ಅಂತ ಗೋಳಾ ಡ್ತಿದಾರಲ್ಲ... ಆ ಮನೆಗೆಲಸದವರು ಕೆಲಸವೇ ಇಲ್ಲದೇ, ಹೊಟ್ಟೆಪಾಡಿಗೂ ಒದ್ದಾಡ್ತಾ ಇದ್ದಾರೆ ಅಂತ ಒಬ್ಬರಾದರೂ ಕಾಳಜಿಯಿಂದ ಮಾತಾಡಿದ್ರಾ ನೋಡು" ಎಂದು ಮೇಗಲೆ ಚಾಟ್ ಬಾಕ್ಸಿನಲ್ಲಿ ವಿನುತಳಿಗಷ್ಟೇ ಮೆಸೇಜ್ ಹಾಕಿದ್ದಳು.
ವಿನುತಳ ಮನೆಗೆಲಸಕ್ಕೆ ಬರುವ ನಾಗಮ್ಮ ಸೇರಿದಂತೆ ಯಾರಿಗೂ ಮೊದಲ ಲಾಕ್ ಡೌನ್ ನಿಂದಲೇ ಅಪಾಟ್ ಮೆಂಟಿನ ಒಳಗೆ ಬಿಟ್ಟಿರಲಿಲ್ಲ. ಮಾರ್ಚಿ ತಿಂಗಳಿನ ಸಂಬಳದ ಜೊತೆಗೆ ಇನ್ನೆರಡು ಸಾವಿರ ಸೇರಿಸಿ ಕೊಟ್ಟು ವಿನುತಳೂ ಮಹದುಪಕಾರ ಮಾಡಿದ ಫೇಸ್ ನೀಡಿ ಸುಮ್ಮನಾಗಿದ್ದಳು. ಚಾಟ್ ಬಾಕ್ಸಿನಲ್ಲಿ ಮೇಗಲೆಯ ಸಂದೇಶ ನೋಡುತ್ತಿದ್ದಂತೆ, ನಾಗಮ್ಮ ನಿಗೆ ಲಾಕ್‌ಡೌನ್ ಮುಗಿದ ಮೇಲೆ ಪುನಃ ಬರುವಂತೆ ಒತ್ತಿ ಹೇಳಿ ಕಳಿಸಿದ್ದು, ಅವಳು ಬಾಡಿದ ಬದನೇಕಾಯಿಯಂಥ ಮುಖ ಹೊತ್ತು, ಏನೂ ಮಾತಾಡದೇ, ಬರಿದೇ ತಲೆಯಲ್ಲಾಡಿಸಿ ಹೋಗಿದ್ದು ನೆನಪಾಗಿ ಮನಸ್ಸಿಗೆ ಚುಳ್ಳೆನ್ನಿಸಿತು.
ನಾಲ್ಕನೆಯ ಶುಕ್ರವಾರದ ಸಂಜೆಯ ಮೀಟಿಂಗಿನಲ್ಲಿ ಇರಬೇಕು... ಸ್ಟಾರ್‌ಬಕ್ಸ್ ಕಾಫಿ ಕುಡಿಯದೇ ತನಗೆ ಹೇಗೆ ಕಿರಿಕಿರಿ ಅನ್ನಿಸಿ ಮನೆಯಲ್ಲಿ ಎಲ್ಲರ ಮೇಲೆ ರೇಗುತ್ತಿದ್ದೆ ಎಂದು ಒಬ್ಬಳು ವರ್ಣಿಸಿದಳು. ಇನ್ನೊಬ್ಬಳು ಬ್ರಿಗೇಡ್ ರಸ್ತೆಯಲ್ಲಿ ಅಡ್ಡಾಡದೇ ಏನೋ ಕಳೆದು ಕೊಂಡಂತೆ ಅನ್ನಿಸ್ತಿದೆ ಎಂದು ನಾಟಕೀಯವಾಗಿ ನುಡಿದಳು.
ಮನೆಯಲ್ಲಿಯೇ ಹೀಗೆ ಇರೋದು ಹ್ಯಾಗೆ ಕಾಲು ಕಟ್ಟಿ ಹಾಕಿದಂತೆ ಆಗಿದೆ ಎಂದು ಇನ್ನೊಂದಿಬ್ಬರು ಹುಡುಗಿಯರು ವರ್ಣಿಸುತ್ತಿದ್ದಂತೆ “ಹೌದೌದು... ಎಲ್ಲರಿಗೂ ಒಂದಲ್ಲ ಒಂಥರಾ ಗೂಟಕ್ಕೆ ಕಾಲು ಕಟ್ಟಿ ಹಾಕಿದಂಗೆ. ಅದರಲ್ಲಿಯೂ ಎಕ್ಸಟ್ರಾ ಮೆರಿಟಲ್ ಅಫರ್ಸ್ ಇಟ್ಟುಕೊಂಡವರಂತೂ ಹೊರಗೆಲ್ಲಿಯೂ ಒಬ್ಬರಿಗೊಬ್ಬರು ಮೀಟ್ ಮಾಡುವಂತೆಯೇ ಇಲ್ಲವಲ್ಲ... ಪಾಪ... ಐ ರಿಯಲೀ ಫೀಲ್ ಸ್ಯಾಡ್ ಫಾರ್ ದೆಮ್" ಎಂದು ಬೀನಾ ಫಟ್ಟನೆ ಹೇಳಿದ್ದಳಲ್ಲ... ಯಾರನ್ನು ಉದ್ದೇಶಿಸಿ ಎಂದು ವಿನುತ ಅಚ್ಚರಿಪಟ್ಟಿದ್ದಳು.
ಅಬ್ಬ... ಈ ಬೀನಾ ಎಂದರೆ ಎಕೆ ೪೭ ಬಂದೂಕಿನಂತೆ. ಮಾತಿನ ಗೋಲಿ ಥಡಥಡನೆ ಉದುರುತ್ತೆ... ಎಲ್ಲಿ, ಯಾರಿಗೆ ಗುರಿ ಇಟ್ಟಿರತಾಳೆ ಅಂತ ಬೇಗನೆ ಗೊತ್ತಾಗೋದೇ ಇಲ್ಲ. ಆಮೇಲೆ ಮನೆಯಿಂದ ಕೆಲಸ ಎನ್ನುವುದು ಸದ್ಯಕ್ಕೆ ಮುಗಿಯುವಂಥದಲ್ಲ, ಅನಿಶ್ಚಿತವಾಗಿ ಮುಂದುವರೆಯುತ್ತದೆ ಎಂಬುದು ಅರಿವಾದಂತೆ ಒಬ್ಬೊಬ್ಬರೇ ಉತ್ಸಾಹ ಕಳೆದುಕೊಳ್ಳುತ್ತ ಏನೇನೊ ನೆವಗಳನ್ನು ಹೇಳಿಕೊಳ್ಳುತ್ತ ಈ ಶುಕ್ರವಾರದ ಸಂಜೆಯ ವರ್ಚುವಲ್ ಸಭೆಯಿಂದ ಕಳಚಿಕೊಳ್ಳತೊಡಗಿದರು.
ಇದಾಗಿ ಒಂದು ತಿಂಗಳಲ್ಲಿಯೇ ಮೇಗಲೆ ಇಲ್ಲಿ ಕೆಲಸ ಬಿಟ್ಟಿದ್ದಳು. ಯಾಕೆ ಎಂದು ನಿರ್ದಿಷ್ಟ ಕಾರಣ ಹೇಳಿರಲಿಲ್ಲ. “ಅಮ್ಮಂಗೆ ಮಂಡಿಚಿಪ್ಪು ರಿಪ್ಲೇಸ್‌ಮೆಂಟ್ ಆಪರೇಶನ್ನಿದೆ. ನನಗೂ ಸ್ವಲ್ಪ ಬ್ರೇಕ್ ಬೇಕು ಅನ್ನಿಸ್ತಿದೆ" ಎಂದಷ್ಟೆ ಹೇಳಿದ್ದಳು. ಹಾಗೆಂದು ತಿಂಗಳಾನುಗಟ್ಟಲೆ ಬ್ರೇಕ್ ತೆಗೆದುಕೊಂಡಿರಲಿಲ್ಲ. ಮತ್ತೊಂದು ತಿಂಗಳಲ್ಲಿಯೇ ಬೇರೊಂದು ಕೆಲಸಕ್ಕೆ ಸೇರಿದ್ದಳು. ಬಹುಶಃ ಇಲ್ಲಿ ಬಿಡುವ ಮೊದಲೇ ಬೇರೆಡೆ ಹುಡುಕಿದ್ದಿರಬಹುದು.
ಮೇಗಲೆ ಕೆಲಸ ಬಿಡುತ್ತಾಳಂತೆ ಎಂದು ವಿನುತಳಿಗೆ ಮೊದಲು ಸುದ್ದಿ ತಿಳಿಸಿದ್ದು ರಾಜೋ. ಅದೊಂದು ಬೆಳಗ್ಗೆಯೇ ಫೋನ್ ಮಾಡಿದವಳು, “ನಂಗೆ ಏನು ಅನುಮಾನ ಗೊತ್ತಾ..." ಎಂದು ಪಿಸುಗುಟ್ಟಿದವಳು, “ಅವತ್ತು ಜೂಮ್ ಮೀಟಿಂಗಿನಲ್ಲಿ ಬೀನಾ ಏನಂದಳು ಅಂತ ನೆನಪಿದೆಯಾ? ಅದೇ.. ಎಕ್ಸಟ್ರಾ ಮೆರಿಟಲ್ ಅಫರ್ಸ್ ಇಟ್ಟುಕೊಂಡವರು ಅಂತ ಕಾಮೆಂಟಿಸಿದ್ದಳಲ್ಲ... ಅದು ಮೇಗಲೆ ಕುರಿತೇ ಇರಬೇಕು.
ಮೊದ್ಲಿಂದನೂ ಈ ಬೀನಾಗೆ ಮೇಗಲೆಯ ನೆರಳು ಕಂಡ್ರೆ ಆಗಲ್ಲ. ಏನಕ್ಕೆ ಅಂತ ಗೊತ್ತಿಲ್ಲಪ್ಪ... ಇಬ್ರೂ ಬೆನ್ನ ಹಿಂದೆ ಒಬ್ಬರಿಗೊಬ್ಬರು ಬೈಯ್ಕೋತಾನೆ ಇರತಿದ್ದರು. ಅವತ್ತು ಬೀನಾ ಹಂಗಂದ ಮೇಲೆ ಮುಂದಿನ ಯಾವುದೇ ಶುಕ್ರವಾರದ ಸಂಜೆಯ ಜೂಮ್ ಮೀಟಿಂಗಿಗೂ ಮೇಗಲೆ ಜಾಯಿನ್ ಆಗಲೇ ಇಲ್ಲ... ನೆನಪಿದೆ ತಾನೆ" ಎಂದು ಮೆತ್ತಗೆ ವಿವರಿಸಿದ್ದಳು.
ಆದರೆ ಈ ಬೀನಾಗೆ ಹೇಗೆ ಅನುಮಾನ ಬಂತು... ಹೊರಗಡೆ ಎಲ್ಲಾದ್ರೂ ಮೇಗಲೆ ಆತನೊಂದಿಗೆ ಇದ್ದಿದ್ದನ್ನು ಈಕೆ ನೋಡಿರಬಹುದೇ ಎಂದು ರಾಜೋ, ವಿನುತಾ ಮಾತಾಡಿ ಕೊಂಡರು. ಅರೆ ಹೌದಲ್ಲ... ಆ ಜೂಮ್ ಮೀಟಿಂಗುಗಳಿಂದ ಮೊದಲು ಕಳಚಿಕೊಂಡವಳೇ ಮೇಗಲೆ... ಬೀನಾ ಹಾಗೆಂದಾಗ ಮೇಗಲೆಯ ಮುಖಭಾವ ಹೇಗಿತ್ತು ಎಂದು ನೆನಪಿಸಿಕೊಳ್ಳ ಲೆತ್ನಿಸಿದಳು.
ಆದರೆ ಜೂಮ್ ಪರದೆಯಲ್ಲಿ ಕಾಣುತ್ತಿದ್ದ ಸ್ಟಾಂಪ್ ಗಾತ್ರದ ವಿಡಿಯೋದಲ್ಲಿ ಮೇಗಲೆಯ ಮುಖಭಾವದಲ್ಲಾದ ಬದಲಾವಣೆಗಳನ್ನು ಕಾಣುವಂತೆಯೂ ಇರಲಿಲ್ಲ. ಹೊಸ ಕೆಲಸಕ್ಕೆ ಸೇರಿದ ವಾರದ ನಂತರ ಫೋನ್ ಮಾಡಿದ ಮೇಗಲೆ ವಿಚಿತ್ರ ಬೇಡಿಕೆ ಇಟ್ಟಿದ್ದಳು.
“ಆಫೀಸಿನ ಕಾಂಟಾಕ್ಟ್ ಇಮೇಲ್ ಐಡಿಗೆ ಬರೋ ಮೇಲ್‌ಗಳನ್ನು ನಾನೇ ಹ್ಯಾಂಡಲ್ ಮಾಡತಿದ್ದೆನಲ್ಲ... ನಾನು ಬಿಡಕ್ಕೂ ಎರಡು ವಾರ ಮುಂಚೆ ಒಂದು ಜಾಬ್ ಅಪ್ಲಿಕೇಶನ್ ಮೇಲ್ ಬಂದಿತ್ತು. ನಾನು ನಮ್ಮ ಮೂರ್ನಾಲ್ಕು ಪ್ರೊಗ್ರಾಮ್ ಮ್ಯಾನೇಜರ್‌ಗಳಿಗೂ ಫೋನ್ ಮಾಡಿ ಕೇಳಿದೆ. ಎಲ್ಲರದೂ ಒಂದೇ ಉತ್ತರ... ಈ ಕೊರೊನಾ ಕಾಲದಲ್ಲಿ ನಮಗೇ ಹೆಚ್ಚು ಕೆಲಸ ಇಲ್ಲ, ಇನ್ನು ಹೊಸಬರನ್ನ ಏನಕ್ಕೆ ತಗಳ್ಳದು ಅಂತ.
ಮೊದಲೇ ಕಾಸ್ಟ್ ಕಟ್‌ಡೌನ್ ಬೇರೆ ನಡೀತಿತ್ತಲ್ಲ... ಆ ಹುಡುಗಿಯ ಮೊದಲ ಹೆಸರಷ್ಟೇ ನೆನಪಿದೆ, ಅದೂ ಹೌದೋ ಅಲ್ಲವೋ ಅಂತ ಅನುಮಾನ... ಏನು ಮಾಡಿದರೂ ಪೂರ್ಣ ಹೆಸರು ನೆನಪಾಗುತಿಲ್ಲ. ಅವಳ ಎಲ್ಲ ಡಿಟೇಲ್ಸ್ ಆಫೀಸಿನ ಕಾಂಟಾಕ್ಟ್ ಇಮೇಲ್ ಐಡಿ ಯಲ್ಲಿದೆ. ಈಗ ನೀನು ಅದನ್ನು ಹ್ಯಾಂಡಲ್ ಮಾಡುತಾ ಇದ್ದೀಯಲ್ಲ... ಅದನ್ನು ಚೂರು ಹುಡುಕಿ ನಂಗೆ ಹೇಳ್ತೀಯಾ?"ಮೇಗಲೆ ಕೆಲಸ ಬಿಟ್ಟ ನಂತರ, ಅವಳ ಜಾಗಕ್ಕೆ ಯಾರನ್ನೂ ಹೊಸದಾಗಿ ತೆಗೆದುಕೊಳ್ಳದೇ ಅವಳೆಲ್ಲ ಕೆಲಸಗಳನ್ನು ಇದ್ದವರಲ್ಲೇ ಹಂಚಿಕೆ ಮಾಡಿ ಬಿಟ್ಟಿದ್ದರು.
ರಾಜೋ ಮತ್ತು ಅವಳ ಜೊತೆಗಿದ್ದ ಇನ್ನಿಬ್ಬರು ಹುಡುಗರಿಗೆ ಹೆಚ್ಚುವರಿ ಅಡ್ಮಿನ್ ಕೆಲಸಗಳ ಹಂಚಿಕೆಯಾಗಿತ್ತು. ವಿನುತ ಐದಾರು ವರ್ಷಗಳಿಂದ ಅದೇ ಆಫೀಸಿನಲ್ಲಿ ಕೆಲಸ ಮಾಡು ತ್ತಿದ್ದರಿಂದ, ಎಲ್ಲ ಪ್ರಾಜೆಕ್ಟ್‌ಗಳ ವಿವರಗಳು ಆಕೆಗೆ ಗೊತ್ತಿದೆಯೆಂಬ ಕಾರಣಕ್ಕೆ ಆಫೀಸಿನ ಕಾಂಟಾಕ್ಟ್ ವಿಳಾಸಕ್ಕೆ ಬರುವ ಇಮೇಲುಗಳ ಜೊತೆ ವ್ಯವಹರಿಸುವ ಕೆಲಸವನ್ನು ಆಕೆಗೆ ವಹಿಸಿದ್ದರು.
ಮೇಗಲೆ ಹೇಳಿದ ಆ ಹುಡುಗಿಯ ಹೆಸರು ಹಾಕಿ ಹುಡುಕಿದಳು. ಹಳೆಯ ಇಮೇಲ್ ಸಿಕ್ಕಿತು. ಜೊತೆಗಿದ್ದ ಪ್ರೊಫೈಲಿನಲ್ಲಿ ಲಿಂಕ್ಡ್‌ಇನ್ ವಿಳಾಸವಿತ್ತು. ಅದನ್ನು ಕ್ಲಿಕ್ ಮಾಡಿದಳು. ಲಿಂಕ್ಡ್ ಇನ್ ಪ್ರೊಫೈಲಿನಲ್ಲಿ ಆಕೆ ಸದ್ಯ ಕೆಲಸ ಮಾಡುತ್ತಿರುವ ಕಂಪನಿಯ ಹೆಸರಿತ್ತು. ಅಂದರೆ ಆ ಹುಡುಗಿ ಅದಾಗಲೇ ಹೊಸ ಕೆಲಸಕ್ಕೆ ಸೇರಿದ್ದಳು. ಮೇಗಲೆಗೆ ಫೋನ್ ಮಾಡಿ ಹೇಳಿದಳು.
“ಅಬ್ಬ... ಸದ್ಯ... ಎಲ್ಲೋ ಒಂದು ಕಡೆ ಸೇರಿದ್ದಾಳಲ್ಲ" ಎಂದು ಸಮಾಧಾನದ ಉಸಿರು ಬಿಟ್ಟಳು. ಯಾರೀ ಹುಡುಗಿ, ಇವಳಿಗೇಕೆ ಈಗ ಇಷ್ಟು ಕಾಳಜಿ ಹುಟ್ಟಿತು ಎಂದು ಕೇಳ ಬೇಕೆನ್ನುವಷ್ಟರಲ್ಲಿ ಮೇಗಲೆಯೇ ಮೆತ್ತಗೆ ಹೇಳಿದಳು... “ನನ್ನ ಗಂಡ ತೀರಿಕೊಂಡ ಮೇಲೆ ನಾನೊಬ್ಬರನ್ನು ಇಷ್ಟಪಟ್ಟಿದ್ದೆನಲ್ಲ... ಅವರ ಮಗಳು ಈಕೆ. ಒಂದೆರಡು ಸಲ ಮಾತಿನ ನಡುವೆ ಆಕೆಯ ಹೆಸರು ಹೇಳಿದ್ದರು.
ನನ್ನ ಮಗಳಿಗಿಂತ ಚಿಕ್ಕವಳು. ಅಪ್ಲಿಕೇಶನ್ ನೋಡಿದಾಗ ಅವಳೇ ಅನ್ನಿಸಿತ್ತು. ಹೋಗ್ಲಿ ಬಿಡು... ಎಲ್ಲೋ ಬೇರೆ ಕಡೆ ಕೆಲಸ ಸಿಕ್ಕಿದೆಯಲ್ಲ... ಯಾರ ಮಗಳಾದರೇನು... ಸ್ವಂತ ಕಾಲಿನ ಮೇಲೆ ನಿಲ್ಲೋದು ಮುಖ್ಯ ಅಲ್ಲವಾ. ಅದೂ ಈ ಕೊರೊನಾ ಕಾಲದಲ್ಲಿ ಕೆಲಸ ಇಲ್ಲ ಅಂದ್ರೆ ಒಂಥರಾ ಡಿಪ್ರೆಶನ್ ಅನ್ನಿಸಿಬಿಡುತ್ತೆ."
(ಸಶೇಷ)