R Ramaradhya Column: ಯೋಗ ಅಭ್ಯಾಸವೇ ಡಾ.ರಾಜ್ ಯಶಸ್ಸಿನ ಕೀಲಿಕೈ !
ಕ್ಲಿಷ್ಟವಾದ ಹಲವು ಯೋಗಾಸನಗಳನ್ನು ಸುಲಭವಾಗಿ ಮಾಡಿ, ಇಂತಹ ಅದ್ವಿತೀಯ ಸಾಧನೆ ಗೈದವರು ನಮ್ಮ ಡಾ. ರಾಜ್‌ಕುಮಾರ್. ಆ ಚಲನಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅಳವಡಿಸಿದ್ದ ಯೋಗಾಭ್ಯಾಸ ಭಂಗಿಗಳನ್ನು ಪ್ರದರ್ಶಿಸಲು, ಅಪಾರ ಅಭ್ಯಾಸ, ಸಾಧನೆ ಮತ್ತು ಏಕಾಗ್ರತೆ ಬೇಕು! ಅಂದು ಅವರ ಯೋಗಾಸನವು ಉನ್ನತ ಮಟ್ಟದಲ್ಲಿತ್ತು; ಅದನ್ನು ಮೂವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಂದಿನ ಆ ಸಾಹಸ ಅನುಕರಣಾರ್ಹ
-
ರಾ.ರಾಮಾರಾಧ್ಯ, ಮೈಸೂರು
ಪತಂಜಲಿ ಮಹರ್ಷಿ ಬೋಧಿಸಿದ ಯೋಗಾಭ್ಯಾಸಕ್ಕೆ 2000 ವರ್ಷಗಳಿಗೂ ಮೀರಿದ ಇತಿಹಾಸವಿದೆ, ಹಿನ್ನೆಲೆಯಿದೆ. ಪರಂಜಲಿಯ ಯೋಗಕ್ಕೂ, ಇಂದು ವಿಶ್ವದಾದ್ಯಂತ ಜನಪ್ರಿಯವಾಗಿರುವ ಯೋಗಾಭ್ಯಾಸಕ್ಕೂ ತುಸು ವ್ಯತ್ಯಾಸವಿದೆ. ಈಚಿನ ದಶಕಗಳಲ್ಲಿ, ದೈಹಿಕ ಆರೋಗ್ಯ ಕಾಪಾಡಲು ಮತ್ತು ಮಾನಸಿಕ ನೆಮ್ಮದಿಗಾಗಿ ಯೋಗಾಭ್ಯಾಸ ಮಾಡುವುದು ಜನಪ್ರಿಯವಾಗಿದೆ. ನಮ್ಮ ದೇಶದಲ್ಲಿ ಜನಿಸಿದ ಯೋಗಾಭ್ಯಾಸವು ಇಂದು ಪಾಶ್ಚಾತ್ಯ ದೇಶಗಳಲ್ಲೂ ಜನಪ್ರಿಯವಾಗಿದೆ ಮತ್ತು ವಿಶ್ವದ ಹಲವು ದೇಶಗಳಲ್ಲಿ ಯೋಗಾ ಭ್ಯಾಸ ನಡೆದಿದೆ. ಅದರಿಂದಾಗಿಯೇ, 2014ರಿಂದಾರಂಭಿಸಿ, ಜೂನ್ 21ರಂದು ಅಂತಾ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ವಿಶ್ವಸಂಸ್ಥೆ ಕರೆಕೊಟ್ಟಿತು. ಅಂತಾ ರಾಷ್ಟ್ರೀಯ ಯೋಗ ದಿನದ ಆಚರಣೆ ಸಾರ್ವತ್ರಿಕವಾಗುವ ಕೆಲವು ದಶಕಗಳ ಮುಂಚೆಯೇ, ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರು ಯೋಗಾಭ್ಯಾಸವನ್ನು ಕಲಿತಿದ್ದರು ಮತ್ತು ಅಪಾರ ಪರಿಣತಿಯನ್ನು ಸಾಧಿಸಿದ್ದರು ಎಂಬುದು ವಿಶೇಷ ಮತ್ತು ಸಮಸ್ತ ಕನ್ನಡಿಗರ ಹೆಮ್ಮೆ. ಕನ್ನಡಿಗರ ನೆಚ್ಚಿನ ನಟರಾಗಿದ್ದ ಡಾ.ರಾಜ್ ಅವರು ಯೋಗಾಭ್ಯಾಸ ಮಾಡುವುದನ್ನು ಕಂಡು, ಅವರ ಯೋಗಾಭ್ಯಾಸ ಫೋಟೋಗಳನ್ನು, ವಿಡಿಯೋಗಳನ್ನು ನೋಡಿ, ಕರ್ನಾಟಕದ ಸಾವಿರಾರು ಮಂದಿ ಯೋಗಾಭ್ಯಾಸಕ್ಕೆ ಮುಂದಾಗಿದ್ದರು ಎಂಬುದು ಇನ್ನೂ ವಿಶೇಷ. ಈ ನಿಟ್ಟಿನಲ್ಲಿ, ನಮ್ಮ ರಾಜ್ಯದಲ್ಲಿ ಯೋಗಾಭ್ಯಾಸವನ್ನು ಜನಪ್ರಿಯ ಗೊಳಿಸುವಲ್ಲಿ, ಡಾ.ರಾಜ್‌ಕುಮಾರ್ ಅವರ ಕೊಡುಗೆ ನಿಜಕ್ಕೂ ಅಮೂಲ್ಯ.
‘ಕಾಮನಬಿಲ್ಲು’ ಚಿತ್ರದ (1983ರಲ್ಲಿ ತೆರೆಕಂಡಿತು) ಆರಂಭದಲ್ಲಿ, ಆ ಚಲನಚಿತ್ರದ ಟೈಟಲ್ ಕಾರ್ಡ್ ಮತ್ತು ಇತರ ವಿವರಗಳನ್ನು ತೋರಿಸುವಾಗ ಒಂದು ವಿಶಿಷ್ಟ ಪ್ರಯೋಗ ನಡೆದಿತ್ತು. ಚಿತ್ರದ ನಾಯಕನು ಹಲವು ಯೋಗಾಸನದ ಕ್ಲಿಷ್ಟ, ವಿಶಿಷ್ಟ ಆಸನ ಭಂಗಿಗಳನ್ನು ಪ್ರದರ್ಶಿಸುವ ನೈಜ್ಯ ದೃಶ್ಯಗಳನ್ನು ಅಲ್ಲಿ ಅಳವಡಿಸಲಾಗಿತ್ತು. ಅವುಗಳನ್ನು ವೀಕ್ಷಿಸಿದ ಕನ್ನಡ ಚಲನಚಿತ್ರ ಪ್ರೇಮಿಗಳು ಅಚ್ಚರಿಗೊಂಡರು, ತಮ್ಮ ನೆಚ್ಚಿನ ನಟನು ಅವರು ಯೋಗಾಭ್ಯಾಸ ಮಾಡುವ ವಿಧಾನವನ್ನು ಕಂಡು ವಿಸ್ಮಯಪಟ್ಟರು. ಮಾತ್ರವಲ್ಲ, ಅವರಲ್ಲಿ ಹಲವರು ಯೋಗಾಭ್ಯಾಸವನ್ನು ಕಲಿಯಲು ಮುಂದಾದರು, ನಮ್ಮ ಪರಂಪರೆಯ ಪುರಾತನ ಪದ್ಧತಿಯೊಂದರ ಪರಿಚಯವನ್ನು ಮೊದಲ ಬಾರಿ ಮಾಡಿಕೊಳ್ಳಲು ಉತ್ಸುಕರಾದರು. ಭಾರತೀಯ ಚಿತ್ರರಂಗ, ಅಷ್ಟೇ ಯಾಕೆ ಪ್ರಪಂಚದ ಯಾವುದೇ ಚಲನಚಿತ್ರದಲ್ಲೂ, ಯೋಗಾಭ್ಯಾಸದ ಕುರಿತಾದ ಇಂತಹ ಒಂದು ಪ್ರಯೋಗ ಕಾಣಸಿಗುವುದಿಲ್ಲ.
ಕ್ಲಿಷ್ಟವಾದ ಹಲವು ಯೋಗಾಸನಗಳನ್ನು ಸುಲಭವಾಗಿ ಮಾಡಿ, ಇಂತಹ ಅದ್ವಿತೀಯ ಸಾಧನೆ ಗೈದವರು ನಮ್ಮ ಡಾ. ರಾಜ್‌ಕುಮಾರ್. ಆ ಚಲನಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅಳವಡಿಸಿದ್ದ ಯೋಗಾಭ್ಯಾಸ ಭಂಗಿಗಳನ್ನು ಪ್ರದರ್ಶಿಸಲು, ಅಪಾರ ಅಭ್ಯಾಸ, ಸಾಧನೆ ಮತ್ತು ಏಕಾಗ್ರತೆ ಬೇಕು! ಅಂದು ಅವರ ಯೋಗಾಸನವು ಉನ್ನತ ಮಟ್ಟದಲ್ಲಿತ್ತು; ಅದನ್ನು ಮೂವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಂದಿನ ಆ ಸಾಹಸ ಅನುಕರಣಾರ್ಹ. ಯೋಗಾಭ್ಯಾಸವನ್ನು ಚೆನ್ನಾಗಿ ಅಭ್ಯಸಿಸಿ, ಅನು ದಿನವೂ ಅವುಗಳನ್ನು ಮಾಡುತ್ತಾ, ದೇಹಾರೋಗ್ಯ ಕಾಪಾಡಿಕೊಂಡಿದ್ದ ಡಾ.ರಾಜಕುಮಾರ್, ಯೋಗದ ‘ಬ್ರ್ಯಾಂಡ್ ಅಂಬಾಸಡರ್’ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: International Yoga Day 2026: ವಿಶ್ವ ಯೋಗ ದಿನ: ಆರೋಗ್ಯಕರ ಭವಿಷ್ಯಕ್ಕೆ ಯೋಗದ ಸಂಕಲ್ಪ
ಕನ್ನಡಿಗರ ಆರಾಧ್ಯ ದೈವ, ವರನಟ, ಗಾನಗಂಧರ್ವ, ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜಕುಮಾರ್ ಅವರ ಹೆಸರನ್ನು ಕೇಳಿದಾಗ ಕನ್ನಡ ನಾಡಿನ ಪ್ರತಿಯೊಬ್ಬರ ಮನದಲ್ಲೂ ಗೌರವ ಮತ್ತು ಅಭಿಮಾನ ಮೂಡುತ್ತದೆ. ಅಭಿನಯ, ಗಾಯನ, ಸರಳತೆ, ಶಿಸ್ತು ಮತ್ತು ಮೌಲ್ಯಯುತ ಜೀವನದ ಮೂಲಕ ಅವರು ಲಕ್ಷಾಂತರ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಆದರೆ ಅವರ ಆರೋಗ್ಯ, ಚೈತನ್ಯ ಮತ್ತು ದೀರ್ಘಕಾಲದ ಸಕ್ರಿಯ ಬದುಕಿನ ಹಿಂದೆ ಒಂದು ಮಹತ್ತರ ಶಕ್ತಿ ಕೆಲಸ ಮಾಡುತ್ತಿತ್ತು. ಅದೇ ಯೋಗಾಭ್ಯಾಸ.
ಪತಂಜಲಿಯ ಕೊಡುಗೆ
ಇಂದು ಯೋಗವು ವಿಶ್ವದಾದ್ಯಂತ ಪ್ರಚಾರ ಪಡೆದಿದೆ; ನಮ್ಮ ಪತಂಜಲಿ ಮಹರ್ಷಿಗಳು ಎರಡು ಸಾವಿರ ವರ್ಷಗಳಿಗೂ ಮುಂಚೆ ಬೋಧಿಸಿದ ಯೋಗಾಭ್ಯಾಸವು, ಈಚಿನ ದಶಕಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲೂ ಜನಪ್ರಿಯವಾಗಿದೆ. ಕಳೆದ ಒಂದೆರಡು ದಶಕಗಳಲ್ಲಿ ನಮ್ಮ ದೇಶದಲ್ಲೂ ಯೋಗಾ ಭ್ಯಾಸಕ್ಕೆ ಸಾಕಷ್ಟು ಪ್ರಚಾರ ದೊರಕಿದೆ; 2014ರಿಂದಾರಂಭಿಸಿ, ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಎಂಬ ಆಚರಣೆಯು ಸಾರ್ವತ್ರಿಕವಾದ ನಂತರವಂತೂ, ಮನೆಮನೆಗಳಲ್ಲಿ ಯೋಗಾ ಭ್ಯಾಸದ ಅನುರಣನವನ್ನು ಕಾಣಬಹುದು.ಆದರೆ ಯೋಗದ ಮಹತ್ವ ವನ್ನು ಬಹಳ ಹಿಂದೆಯೇ ಅರಿತು, ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿ ಕೊಂಡಿದ್ದವರು ಡಾ. ರಾಜ್‌ಕುಮಾರ್. ವಯಸ್ಸು ಎಪ್ಪತ್ತರ ಗಡಿ ದಾಟಿದರೂ ಅವರಲ್ಲಿದ್ದ ಚೈತನ್ಯ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಕಂಡ ಹಲವರು ಆಶ್ಚರ್ಯ ಪಡುತ್ತಿದ್ದರು. ಈ ಎಲ್ಲದಕ್ಕೂ ಮೂಲ ಕಾರಣ ಅವರ ಶಿಸ್ತಿನ ಜೀವನ ಮತ್ತು ನಿಯಮಿತ ಯೋಗಾಭ್ಯಾಸ.
ಡಾ.ರಾಜ್‌ಕುಮಾರ್ ಅವರು ರಂಗಭೂಮಿಯ ಹಿನ್ನೆಲೆಯವರು; ನಾಟಕ ಕಂಪನಿಗಳ ಜೀವನದಲ್ಲಿ ಬೆಳಿಗ್ಗೆ ಬೇಗ ಎದ್ದು ಅಭ್ಯಾಸ ಮಾಡುವುದು, ದೈಹಿಕ ವ್ಯಾಯಾಮ ಮತ್ತು ಆಹಾರದಲ್ಲಿ ನಿಯಮ ಪಾಲಿಸುವುದು ಸಹಜವಾಗಿತ್ತು. ಈ ಅಭ್ಯಾಸಗಳು ಮುಂದೆ ಅವರ ಜೀವನದ ಆಧಾರಸ್ತಂಭ ಗಳಾದವು. ಚಿತ್ರರಂಗಕ್ಕೆ ಬಂದ ನಂತರವೂ ಅವರು ತಮ್ಮ ಆರೋಗ್ಯಕರ ಜೀವನಶೈಲಿಯನ್ನು ಮುಂದುವರಿಸಿದರು. ಇದೊಂದು ಕಠಿಣ ಕೆಲಸ: ಏಕೆಂದರೆ, ಅವರು ಚಲನಚಿತ್ರಗಳಲ್ಲಿ ಬ್ಯುಸಿ ಯಾಗಿ ತೊಡಗಿಕೊಂಡಿದ್ದವರು ಮತ್ತು ಅಪಾರ ಜನಪ್ರಿಯತೆ ಗಳಿಸಿದ್ದವರು. ಎಡೆಬಿಡದೆ ಶೂಟಿಂಗ್ಗಳಲ್ಲಿ ಭಾಗವಹಿಸಿ, ಹೊತ್ತಲ್ಲದ ಹೊತ್ತಿನಲ್ಲಿ ಅದಕ್ಕಾಗಿ ಓಡಾಡುತ್ತಿದ್ದವರು. ಆದರೆ, ಅವರು ಯೋಗಾಭ್ಯಾಸವನ್ನು ಬಿಡಲಿಲ್ಲ! ಖ್ಯಾತಿ, ಸಂಪತ್ತು ಮತ್ತು ಜನಪ್ರಿಯತೆ ಹೆಚ್ಚಿದಂತೆ ಅನೇಕರು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಆದರೆ ರಾಜ್‌ಕುಮಾರ್ ಮಾತ್ರ ಸರಳತೆ ಮತ್ತು ಶಿಸ್ತನ್ನು ಬಿಡಲಿಲ್ಲ.
ಯೋಗಾಭ್ಯಾಸ ಆರಂಭಿಸಿದರೇಕೆ?
ಡಾ.ರಾಜ್ ಅವರು ಯೋಗಾಭ್ಯಾಸವನ್ನು ಏಕೆ ಕಲಿತರು ಎಂಬುದಕ್ಕೆ ಒಂದು ಎನಿಕ್ಟ್ಡೋಟ್ ಇದೆ. 1970ರ ದಶಕದ ಕೊನೆಯಲ್ಲಿ ರಾಜ್‌ಕುಮಾರ್ ಅವರಿಗೆ ಸ್ವಲ್ಪ ಬೆನ್ನುನೋವಿನ ಸಮಸ್ಯೆ ಎದುರಾ ಯಿತಂತೆ. ಚಿತ್ರರಂಗದ ನಿರಂತರ ಕೆಲಸ, ಪ್ರಯಾಣ ಮತ್ತು ಒತ್ತಡದಿಂದ ಇದು ಕಾಣಿಸಿರಬಹುದು. ಈ ಸಂದರ್ಭದಲ್ಲಿ ಯೋಗಗುರುಗಳ ಸಲಹೆಯಂತೆ ಅವರು ಯೋಗಾಭ್ಯಾಸವನ್ನು ಆರಂಭಿಸಿದರು. ಆಗ ರಾಜ್‌ಕುಕಮಾರ್ ಅವರಿಗೆ ಯೋಗ ಗುರುಗಳಾಗಿ ದೊರಕಿದವರೇ, ಪೊಲೀಸ್ ಅಧಿಕಾರಿ ನಾಯ್ಕರ್.
ಮೊದಲಿಗೆ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಆರಂಭಿಸಿದ ಯೋಗಾಭ್ಯಾಸ, ನಂತರ ಅವರ ಜೀವನದ ಭಾಗವಾಯಿತು. ಯೋಗದಿಂದ ದೇಹದ ನೋವು ಕಡಿಮೆಯಾಗುವುದರ ಜೊತೆಗೆ ಮನಸ್ಸಿಗೂ ನೆಮ್ಮದಿ ದೊರೆಯಿತು. ಇದರಿಂದ ಅವರು ಪ್ರತಿದಿನ ಯೋಗ ಮಾಡಲು ಆರಂಭಿಸಿ ದರು.
ಯೋಗಾಭ್ಯಾಸದಿಂದ ಆತ್ಮವಿಶ್ವಾಸ
ಅವರ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೇಹದ ಬಲವಲ್ಲ: ಮನಸ್ಸಿನ ಶಾಂತಿ, ಆತ್ಮವಿಶ್ವಾಸ ಮತ್ತು ಜೀವನದ ಸಮತೋಲನವೂ ಹೌದು. ರಾಜ್ʼಕುಮಾರ್ ಅವರು ಅನೇಕ ಕಠಿಣ ಯೋಗಾಸನ ಗಳನ್ನು ಮಾಡುತ್ತಿದ್ದರು. ಶೀರ್ಷಾಸನ, ಸರ್ವಾಂಗಾಸನ, ಮಯೂರಾಸನ, ಭುಜಂಗಾಸನ, ಧನುರಾಸನ, ಪದ್ಮಾಸನ ಸೇರಿದಂತೆ ಹಲವಾರು ಆಸನಗಳಲ್ಲಿ ಅವರು ಪರಿಣತರಾಗಿದ್ದರು. ಅವರ ಯೋಗಾಭ್ಯಾಸದ ಚಿತ್ರಗಳು ಮತ್ತು ವಿಡಿಯೊ ಗಳನ್ನು ನೋಡಿದರೆ ಅವರ ದೈಹಿಕ ಸಾಮರ್ಥ್ಯ ಎಷ್ಟಿತ್ತು ಎಂಬುದು ಸ್ಪಷ್ಟವಾಗುತ್ತದೆ. ಐವತ್ತು ವರ್ಷ ದಾಟಿದ ಬಳಿಕವೂ ಅವರು ಯುವಕರಂತೆ ಆಸನಗಳನ್ನು ಮಾಡುತ್ತಿದ್ದರು. ಚಿತ್ರರಂಗದಲ್ಲಿ ನಿರಂತರ ಚಿತ್ರೀಕರಣ, ನೃತ್ಯ, ಸಾಹಸ ದೃಶ್ಯಗಳು ಮತ್ತು ಪ್ರಯಾಣಗಳನ್ನು ನಿಭಾಯಿಸಲು ಅವರಿಗೆ ಯೋಗದಿಂದ ದೊರೆತ ಶಕ್ತಿ ಸಹಾಯ ಮಾಡಿತು.
ಯೋಗಾಸನಗಳ ಜೊತೆಗೆ ಪ್ರಾಣಾಯಾಮಕ್ಕೂ ಅವರು ವಿಶೇಷ ಮಹತ್ವ ನೀಡುತ್ತಿದ್ದರು. ಇದರ ಪರಿಣಾಮವಾಗಿ ಅವರ ಧ್ವನಿ ಸದಾ ಸ್ಪಷ್ಟ ಮತ್ತು ಮಧುರವಾಗಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಉಸಿರಾಟದ ನಿಯಂತ್ರಣ
ಗಾಯಕನಾಗಿಯೂ ಅಪಾರ ಯಶಸ್ಸು ಕಂಡ ಅವರು ಉಸಿರಾಟದ ನಿಯಂತ್ರಣಕ್ಕೆ ವಿಶೇಷ ಗಮನ ನೀಡುತ್ತಿದ್ದರು. ಯೋಗ ಮತ್ತು ಪ್ರಾಣಾಯಾಮ ಅವರ ಗಾಯನ ಸಾಮರ್ಥ್ಯಕ್ಕೂ ಸಹಕಾರಿ ಯಾಗಿದ್ದವು. ಖ್ಯಾತ ವ್ಯಕ್ತಿಗಳ ಜೀವನದಲ್ಲಿ ಒತ್ತಡ ಸಹಜ. ಆದರೆ ರಾಜ್‌ಕುಮಾರ್ ಅವರು ಯಾವ ಸಂದರ್ಭದಲ್ಲೂ ಆತಂಕ ಅಥವಾ ಅಹಂಕಾರಕ್ಕೆ ಒಳಗಾದಂತೆ ಕಾಣಲಿಲ್ಲ. ಅವರ ಮುಖದಲ್ಲಿದ್ದ ನಗು, ಮಾತಿನಲ್ಲಿದ್ದ ವಿನಯ ಮತ್ತು ನಡೆ-ನುಡಿಯಲ್ಲಿ ಕಂಡ ಶಾಂತತೆ ಅವರ ಯೋಗಸಾಧನೆಯ ಪ್ರತಿಫಲವಾಗಿತ್ತು.
ಸಮಚಿತ್ತದ ದಿನಚರಿ
ಯೋಗವು ಕೇವಲ ದೇಹದ ವ್ಯಾಯಾಮವಲ್ಲ. ಅದು ಮನಸ್ಸಿನ ನಿಯಂತ್ರಣದ ಮಾರ್ಗವೂ ಹೌದು; ಬದುಕಿನಲ್ಲಿ ಶಾಂತಿಯನ್ನೂ ತಂದುಕೊಡಬಲ್ಲದು. ರಾಜ್‌ಕುಮಾರ್ ಅವರ ಜೀವನ ಇದಕ್ಕೆ ಉತ್ತಮ ಉದಾಹರಣೆ. 2000ರಲ್ಲಿ ನಡೆದ ಅವರ ಅಪಹರಣದ ಘಟನೆ ಕನ್ನಡಿಗರನ್ನುಬೆಚ್ಚಿಬೀಳಿಸಿತ್ತು. ಕಾಡಿನಲ್ಲಿ ಮೂರು ತಿಂಗಳಿಗೂ ಹೆಚ್ಚು ಅವಧಿಯನ್ನು ಕಳೆಯಬೇಕಾದ ಪರಿಸ್ಥಿತಿ ಎದುರಾದರೂ ರಾಜ್ʼಕುಮಾರ್ ತಮ್ಮ ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡಿದ್ದರು. ಒತ್ತೆಯಾಳಗಿದ್ದ ಅವಧಿಯಲ್ಲಿಯೂ ಡಾ.ರಾಜ್ ಯೋಗಾಭ್ಯಾಸವನ್ನು ಬಿಡಲಿಲ್ಲ. ಆ ಸಂದರ್ಭದಲ್ಲಿ ಯೋಗಾಭ್ಯಾಸ ಮತ್ತು ಧ್ಯಾನವೇ ಅವರಿಗೆ ಶಕ್ತಿ ನೀಡಿತು ಎಂದು ತಿಳಿಯಲಾಗಿದೆ. ಮಾನಸಿಕ ದೃಢತೆ ಎಂದರೆ ಏನು ಎಂಬುದನ್ನು ಬದುಕಿನ ಮೂಲಕ, ಕಠಿಣ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಳ್ಳದೇ, ಸವಾಲನ್ನು ಎದುರಿಸಿ ತೋರಿಸಿದ ವ್ಯಕ್ತಿ ಅವರು.
ಸರಳ ಆಹಾರ
ಯೋಗಾಭ್ಯಾಸದ ಜೊತೆಗೆ ಆಹಾರದಲ್ಲಿಯೂ ಅವರು ಕಟ್ಟುನಿಟ್ಟಿನ ನಿಯಮ ಪಾಲಿಸುತ್ತಿದ್ದರು. ಸರಳ, ಸಾತ್ವಿಕ ಮತ್ತು ಮನೆಯಲ್ಲೇ ತಯಾರಾದ ಆಹಾರಕ್ಕೆ ಆದ್ಯತೆ ನೀಡುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸ ಅವರಲ್ಲಿತ್ತು. ಯೋಗ ಮತ್ತು ಉತ್ತಮ ಆಹಾರ ಪದ್ಧತಿ ಒಂದಕ್ಕೊಂದು ಪೂರಕವಾಗಿದ್ದವು.
ರಾಜ್‌ಕುಮಾರ್ ಅವರ ಆರೋಗ್ಯದ ಮತ್ತೊಂದು ರಹಸ್ಯವೆಂದರೆ ದುಶ್ಚಟಗಳಿಂದ ದೂರವಿರು ವುದು. ಧೂಮಪಾನ, ಮದ್ಯಪಾನ ಮುಂತಾದ ಅಭ್ಯಾಸಗಳಿಂದ ಅವರು ಸಂಪೂರ್ಣ ದೂರ ವಿದ್ದರು. ಚಿತ್ರರಂಗದಲ್ಲಿ ಇಂತಹ ಪ್ರಲೋಭನೆಗಳು ಸಾಮಾನ್ಯವಾಗಿದ್ದರೂ ಅವರು ತಮ್ಮ ಮೌಲ್ಯ ಗಳನ್ನು ಬಿಡಲಿಲ್ಲ. ಅಭಿಮಾನಿಗಳಿಗೆ ಉತ್ತಮ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಬದುಕಿದರು. ಇಂದು ಅನೇಕ ಯುವಕರು ಒತ್ತಡ, ಆತಂಕ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ʼಕುಮಾರ್ ಅವರ ಜೀವನ ಯುವಜನತೆಗೆ ಪ್ರೇರಣೆಯಾಗಿದೆ.
ಭಾಷಣಕ್ಕಿಂತ ಕೃತಿ ಮುಖ್ಯ!
ಯೋಗಾಭ್ಯಾಸವು ನಮ್ಮ ದೇಶದ ಪ್ರಾಚೀನ ಪರಂಪರೆ ಒಂದು ಭಾಗ. ಇಂದು ವಿಶ್ವದಾದ್ಯಂತ ಯೋಗವನ್ನು ಆರೋಗ್ಯದ ವಿಜ್ಞಾನವಾಗಿ ಒಪ್ಪಿಕೊಳ್ಳಲಾಗಿದೆ. ಈ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಜನರಿಗೆ ಮಾದರಿಯಾದವರಲ್ಲಿ ರಾಜ್‌ಕುಮಾರ್ ಪ್ರಮುಖರು.
ಅವರು ಯೋಗದ ಬಗ್ಗೆ ಉಪನ್ಯಾಸ ನೀಡುವುದಕ್ಕಿಂತ ತಮ್ಮ ಬದುಕಿನ ಮೂಲಕ ಅದರ ಮಹತ್ವ ವನ್ನು ತೋರಿಸಿದರು. ಅದೇ ಅವರ ವಿಶೇಷತೆ. ಅವರ ಯೋಗಾಭ್ಯಾಸ, ಸರಳತೆ, ಶಿಸ್ತು, ಕುಟುಂಬದ ಮೇಲಿನ ಪ್ರೀತಿ, ಕನ್ನಡದ ಮೇಲಿನ ಅಭಿಮಾನ ಮತ್ತು ಸಮಾಜದ ಮೇಲಿನ ಕಾಳಜಿ ಅವರನ್ನು ಜನಮನದಲ್ಲಿ ಅಮರರನ್ನಾಗಿಸಿವೆ.
ಇಂದು ಹಲವು ಕಡೆ ಆರೋಗ್ಯದ ಸಮಸ್ಯೆಗಳು ಕಾಣಿಸುತ್ತಿವೆ; ಕಿರಿಯ ವಯಸ್ಸಿನಲ್ಲೇ ಕುಸಿದು ಬಿದ್ದು, ಸಾವನ್ನಪ್ಪುವ ಹಲವು ಘಟನೆಗಳು ಆಗಾಗ ಮತ್ತು ಪದೇ ಪದೇ ವರದಿಯಾಗುತ್ತಿವೆ. ೫೦ ದಾಟದೇ ಇರುವ ಚಲನಚಿತ್ರ ನಟರು, ಜಿಮ್ ತರಬೇತಿದಾರರು, ಯುವ ಡ್ಯಾನ್ಸ್ ಪಟುಗಳು ಒಮ್ಮೆಗೇ ಕುಸಿದು ಬಿದ್ದು, ಮೃತರಾಗುತ್ತಿರುವ ವರದಿಗಳು ಕಳೆದ ಆರೆಂಟು ವರ್ಷಗಳಲ್ಲಿ ಅಧಿಕವಾಗಿವೆ. ಈ ರೀತಿ, ವಿವಿಧ ಆಯಾಮದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾಲದಲ್ಲಿ ಡಾ.ರಾಜ್‌ಕುಮಾರ್ ಅವರ ‘ಯೋಗ ಜೀವನ’ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅವರ ಬದುಕು ನಮಗೆ ಹೇಳುವ ಸಂದೇಶ ಒಂದೇ: ಸಂಪತ್ತು, ಖ್ಯಾತಿ ಮತ್ತು ಯಶಸ್ಸಿಗಿಂತ ಆರೋಗ್ಯವೇ ದೊಡ್ಡ ಸಂಪತ್ತು. ಆ ಆರೋಗ್ಯದ ಕೀಲಿಕೈ ಯೋಗ!
ಬನ್ನಿ, ನಾವೂ, ನೀವೂ ಯೋಗಾಭ್ಯಾಸವನ್ನು ಕಲಿಯೋಣ; ಸೂಕ್ತ ಮಾರ್ಗ ದರ್ಶನವನ್ನು ಪಡೆದು, ಅದರಿಂದ ದೊರೆಯುವ ಆರೋಗ್ಯ ಲಾಭವನ್ನು ಪಡೆಯೋಣ; ನಿಯಮಿತ ಯೋಗಾಭ್ಯಾಸದ ಮೂಲಕ ದೊರಕುವ ಮಾನಸಿನ ಶಾಂತಿಯನ್ನು ಪಡೆಯೋಣ, ಆ ಮೂಲಕ ಬದುಕನ್ನು ಅರ್ಥ ಪೂರ್ಣವಾಗಿಸೋಣ
ಈ ಅಭ್ಯಾಸ ಇಂದಿನವರಿಗೆ ಒಂದು ಪಾಠ!
ರಾಜ್‌ಕುಮಾರ್ ಅವರ ದಿನಚರಿ ಅನುಕರಣಾರ್ಹ. ಅವರು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ದಿನವನ್ನು ಆರಂಭಿಸುತ್ತಿದ್ದರು. ಪ್ರಾರ್ಥನೆ, ಧ್ಯಾನ, ಯೋಗ ಮತ್ತು ಪ್ರಾಣಾಯಾಮ ಅವರ ದಿನಚರಿಯ ಪ್ರಮುಖ ಭಾಗಗಳಾಗಿದ್ದವು. ಇಂದಿನ ವೇಗದ ಬದುಕಿನಲ್ಲಿ ಬೆಳಗ್ಗೆ ಎಂಟು ಗಂಟೆಗೆ ಎದ್ದರೂ ಸಮಯ ಸಾಲದು ಎಂದು ಹಲವರು ಹೇಳುತ್ತಾರೆ. ಆದರೆ ಚಲನಚಿತ್ರರಂಗದ ಅತ್ಯಂತ ಬ್ಯುಸಿ ನಟರಾಗಿದ್ದ ರಾಜ್‌ಕುಮಾರ್ ಅವರು ಬೆಳಗಿನ ಸಮಯವನ್ನು ತಮ್ಮ ಆರೋಗ್ಯಕ್ಕಾಗಿ ಮೀಸಲಿಟ್ಟಿದ್ದರು! ಇದು ಇಂದಿನವರಿಗೆ ಒಂದು ಉತ್ತಮ ಪಾಠ ಮತ್ತು ಸ್ಪೂರ್ತಿ ಎನಿಸಬಲ್ಲದು