Robbery Drama: ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ
ಉದ್ಯಮಿಗೆ 35 ಕೋಟಿ ರು. ಪಂಗನಾಮ ಹಾಕಲು 400 ಕೋಟಿ ರು. ದರೋಡೆ ಕಥೆ ಕಟ್ಟಲಾಗಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತೀವ್ರ ಕುತೂಹಲ ಮೂಡಿಸಿದ್ದ 400 ಕೋಟಿ ರು. ಇದೆ ಎನ್ನಲಾಗಿದ್ದ ಕಂಟೇನರ್ ದರೋಡೆ ಪ್ರಕರಣವೇ ಒಂದು ಕಟ್ಟುಕಥೆ ಎಂಬುದನ್ನು ಮಹಾ ರಾಷ್ಟ್ರದ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.
-
ವಿನಾಯಕ ಮಠಪತಿ ಬೆಳಗಾವಿ
ಪೊಲೀಸ್ ಕಸ್ಟಡಿಯ ಹೊರಬಿತ್ತು ಸ್ಫೋಟಕ ಸತ್ಯ
ಕೋಟಿ ನಾಮ ಹಾಕಲು ಹೊರಟವನೇ ವಂಚಕ
ಉದ್ಯಮಿಗೆ 35 ಕೋಟಿ ರು. ಪಂಗನಾಮ ಹಾಕಲು 400 ಕೋಟಿ ರು. ದರೋಡೆ ಕಥೆ ಕಟ್ಟಲಾಗಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತೀವ್ರ ಕುತೂಹಲ ಮೂಡಿಸಿದ್ದ 400 ಕೋಟಿ ರು. ಇದೆ ಎನ್ನಲಾಗಿದ್ದ ಕಂಟೇನರ್ ದರೋಡೆ ಪ್ರಕರಣವೇ ಒಂದು ಕಟ್ಟುಕಥೆ ಎಂಬುದನ್ನು ಮಹಾರಾಷ್ಟ್ರದ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.
ಈ ಮೂಲಕ ರಾಜಕೀಯ ಪರ, ವಿರೋಧ ಚರ್ಚೆಗೆ ಕಾರಣವಾಗಿದ್ದ ಪ್ರಕರಣದ ಸತ್ಯಾ ಸತ್ಯತೆ ಕೊನೆಗೂ ಬಯಲಾಗಿದೆ. ರಾಜ್ಯದ ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರು. ಇದ್ದ ಜೋಡಿ ಕಂಟೇನರ್ ದರೋಡೆ ಪ್ರಕರಣ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ಸಂಚಲನ ಮೂಡಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ಸರಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು.
ಎಸ್‌ಐಟಿ ಅಧಿಕಾರಿಗಳು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಇದೊಂದು ಕಟ್ಟುಕಥೆಯಾಗಿದ್ದು, ಇದರ ಹಿಂದೆ 35 ಕೋಟಿ ರು. ವಂಚಿಸುವ ಉದ್ದೇಶ ಇತ್ತು ಎಂದು ಮಾಹಿತಿ ನೀಡಿದೆ.
ಐಪಿಎಸ್ ಅಧಿಕಾರಿ ಆದಿತ್ಯ ಮಿರ್ಖಲ್ಕರ್ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿನಿಂದ ದರೋಡೆ ಪ್ರಕರಣದ ತನಿಖೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಎಂಟು ಜನರನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿದ್ದ ಸಂದೀಪ್ ಪಾಟೀಲ್ ಎಂಬಾತ ವ್ಯವಸ್ಥಿತವಾಗಿ ಹೆಣೆದ ಕಟ್ಟು ಕಥೆಯಾಗಿದೆ ಎಂಬುದು ತಿಳಿದುಬಂದಿದೆ. ಗುಜರಾತ್ ಮೂಲದ ಉದ್ಯಮಿ, ಆಂಧ್ರದ ಬಾಲಾಜಿ ಟ್ರಸ್ಟ್ ಸೇರಿ ಅನೇಕರ ಹೆಸರನ್ನು ತಳಕು ಹಾಕಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಎಸ್‌ಐಟಿ ತಂಡ ಹೇಳಿದೆ.
ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?
ಏನಿದು ಪ್ರಕರಣ?: ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸೇಠ್ ಎಂಬುವವರಿಗೆ ಸೇರಿದ್ದ 400 ಕೋಟಿ ಹಣವನ್ನು 2025ರ ಅಕ್ಟೋಬರ್ 16ರಂದು ಗೋವಾ ದಿಂದ ಮಹಾರಾಷ್ಟ್ರಕ್ಕೆ ಸಾಗಿಸುವ ಸಂದರ್ಭದಲ್ಲಿ ಬೆಳಗಾವಿಯ ಚೋರ್ಲಾ ಘಾಟ್ ಬಳಿ ದುಷ್ಕರ್ಮಿಗಳ ತಂಡವು ಹಣ ತುಂಬಿದ್ದ ಎರಡು ಕಂಟೇನರ್ʼಗಳನ್ನು ಹೈಜಾಕ್ ಮಾಡಿ ದರೋಡೆ ಮಾಡಿದೆ ಎಂದು ಮಹಾರಾಷ್ಟ್ರ ಮೂಲದ ಸಂದೀಪ್ ಪಾಟೀಲ್ ಎಂಬಾತ ನಾಸಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದಾದ ಕೆಲ ದಿನಗಳ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಇಬ್ಬರ ನಡುವಿನ ವಾಟ್ಸಾಪ್ ಸಂಭಾಷಣೆ ಬಿಡುಗಡೆ ಮಾಡಲಾಗಿತ್ತು. 400 ಕೋಟಿ ಹಣ ಗುಜರಾತ್ ಮೂಲದ ರಾಜಕಾರಣಿಗೆ ಸೇರಿದ್ದು. ಇದನ್ನು ಚಲಾವಣೆ ಮೊತ್ತಕ್ಕೆ ಬದಲಾಯಿಸಿಕೊಡಲು ಮಹಾರಾಷ್ಟ್ರದ ಉದ್ಯಮಿಗೆ ಒಪ್ಪಿಸಲಾಗಿತ್ತು.
ಬೆಳಗಾವಿ ಮಾರ್ಗವಾಗಿ ಆಂಧ್ರಪ್ರದೇಶದ ಬಾಲಾಜಿ ಟ್ರಸ್ಟ್ʼಗೆ ಒಯ್ಯುವ ವೇಳೆ ದರೋಡೆ ನಡೆದಿದೆ ಎಂದು ಬಿಂಬಿಸಲಾಗಿತ್ತು.
ಪೊಲೀಸ್ ಕಸ್ಟಡಿಯ ಹೊರಬಿತ್ತು ಸತ್ಯ
ಬಾಲಾಜಿ ಟ್ರಸ್ಟ್ʼನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಎಸ್‌ಐಟಿ ವಶದಲ್ಲಿದ್ದ ಅಹಮದಾಬಾದ್ ಮೂಲದ ವಿರಾಟ್ ಗಾಂಧಿ 400 ಕೋಟಿ ದರೋಡೆ ಪ್ರಕರಣ ಒಂದು ಕಟ್ಟುಕಥೆ ಎಂಬುದನ್ನು ಸಾಬೀತುಪಡಿಸಿದ್ದ. ದರೋಡೆ ಪ್ರಕರಣ ದಾಖಲಿಸಿದ್ದ ಸಂದೀಪ್ ಪಾಟೀಲ ಎಂಬಾತ ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಸೇಠ್ ಅವರಿಗೆ 35 ಕೋಟಿ ರು. ವಂಚಿಸುವ ಉದ್ದೇಶ ಹೊಂದಿದ್ದ. ಈ ಕಾರಣಕ್ಕೆ ದರೋಡೆ ಎಂಬ ಕಾಲ್ಪನಿಕ ಕಥೆ ಕಟ್ಟಿದ್ದನ್ನು ಅಧಿಕಾರಿಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ. ದೂರುದಾರ ಸಂದೀಪ್ ಪಾಟೀಲ ಒಬ್ಬ ಮಹಾವಂಚಕ. ಆತನನ್ನು ತನಿಖೆಗೆ ಒಳಪಡಿಸಿದ್ದೇ ಆದರೆ ವಚನೆ ಪ್ರಕರಣ ಹೊರಬರುತ್ತದೆ. ವಿನಾಕಾರಣ ಎಲ್ಲರ ಮೇಲೆ ಆರೋಪ ಹೊರಿಸುವ ಮೂಲಕ ಪರಿಸ್ಥಿತಿ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾನೆ ಎಂದು ವಿರಾಟ್ ಗಾಂಧಿ ಮಾಹಿತಿ ನೀಡಿದ್ದ. ಮೊದಲಿಗೆ ಗೊಂದಲಕ್ಕೆ ಒಳಗಾದ ಮಹಾ ರಾಷ್ಟ್ರ ಎಸ್‌ಐಟಿ ಅಧಿಕಾರಿಗಳು ಕೊನೆಗೆ ಸಂದೀಪ್ ಪಾಟೀಲ್‌ನನ್ನು ಬಂಧಿಸಿ ಮಾಹಿತಿ ಕಲೆ ಹಾಕಿದಾಗ ಈ ವಂಚನೆಗೆ ಪ್ರಯತ್ನಿಸಿದ್ದು ತಿಳಿದು ಬಂದಿದೆ.
ಅಂತೆ ಕಂತೆಗಳ ಕುರಿತು ವಿಶ್ವವಾಣಿ ವರದಿ
400 ಕೋಟಿ ದರೋಡೆ ಪ್ರಕರಣದ ಕುರಿತು ವಿಶ್ವವಾಣಿ ಪತ್ರಿಕೆ ನಿರಂತರ ವರದಿ ಪ್ರಕಟಿ ಸಿತ್ತು. ಜತೆಗೆ ಪ್ರಕರಣ ಅಂತೆ ಕಂತೆಗಳ ಸಾಗುತ್ತಿದೆ ಎಂಬುದನ್ನು ಮೊದಲಿನಿಂದಲೂ ಹೇಳಲಾಗಿತ್ತು. ಅಷ್ಟೇ ಅಲ್ಲದೆ ಪ್ರಕರಣ ದಾಖಲಿಸಿದ್ದ ಸಂದೀಪ್ ಪಾಟೀಲ ಎಂಬಾತ ನೀಡಿದ್ದ ದ್ವಂದ್ವ ಹೇಳಿಕೆಗಳ ಕುರಿತು ನಮ್ಮಲ್ಲಿ ವಿಸ್ತೃತವಾದ ವರದಿ ಪ್ರಕಟಿಸಿದ್ದೇವು. ಐದು ರಾಜ್ಯದ ಪೊಲೀಸರ ತಲೆ ಕೆಡಿಸಿದ್ದ ಪ್ರಕರಣದ ಸತ್ಯಾಸತ್ಯತೆ ಕೊನೆಗೂ ಬಯಲಾಗಿರುವುದು ವಿಶೇಷ.