Narendra Parekat Column: ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ
ಸುಮ್ಮನೆ ಮನೆಯಲ್ಲಿದ್ದು ಸದಾ ಟಿ.ವಿ, ಮೊಬೈಲ್ ಜತೆ ಕಾಲ ಕಳೆಯುವ ಬದಲು ಬಗೆಬಗೆಯ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಬಹುದಾದ ಒಂದೊಳ್ಳೆಯ ಅವಕಾಶವೂ ಇದಾಗಿದೆ. ಬೇಸಿಗೆ ಶಿಬಿರಗಳು ಈಗ ನಗರದಲ್ಲಿ ಅಷ್ಟೇ ಏಕೆ, ಹಳ್ಳಿ ಹಳ್ಳಿಗಳಲ್ಲೂ ಮಕ್ಕಳ ಆಸಕ್ತಿ ಗಳನ್ನು ಹೆಚ್ಚಿಸಿಕೊಳ್ಳಲು, ಅವರ ಕ್ರಿಯಾಶೀಲತೆಗೆ ಅನುವು ಮಾಡಿಕೊಡುವ ಚಟುವಟಿಕೆ ಗಳಾಗುತ್ತಿರುವು ದರಿಂದ ಹೆಚ್ಚಿನ ಬೇಡಿಕೆ ಹೊಂದಿದೆ


ನರೇಂದ್ರ ಪಾರೆಕಟ್
ಮಕ್ಕಳು ತಮ್ಮ ವಾರ್ಷಿಕ ಪರೀಕ್ಷೆಯನ್ನು ಮುಗಿಸಿ, ಅದರ ಫಲಿತಾಂಶವನ್ನೂ ಪಡೆದು ಹಾಯಾಗಿರುವ ಬೇಸಿಗೆ ರಜಾ ಕಾಲವಿದು. ಶಾಲೆಗೆ ಹೋಗುವಂತಿಲ್ಲ, ಹೋಂವರ್ಕ್‌ನ ಒತ್ತಡವೂ ಇಲ್ಲ, ಮನೆಯಲ್ಲಿ ಹೆತ್ತವರ ಡೆಡ್‌ಲೈನ್ ಕೂಡಾ ಈ ವೇಳೆ ಅವರಿಗಿಲ್ಲ. ಈ ವಿರಾಮ ಕಾಲದಲ್ಲಿ ಬೇಸಿಗೆ ಶಿಬಿರಗಳು ಹೆಚ್ಚಿನ ಮಕ್ಕಳಲ್ಲಿ ರಜೆಯ ಮೋಜನ್ನು ಇಮ್ಮಡಿ ಗೊಳಿಸಿ ಅವರ ಮನಸ್ಸಿನಲ್ಲಿ ಆರಾಮವಾಗಿರಲು ಆಸ್ಪದ ನೀಡುವ ತಾಣಗಳೆನಿಸುತ್ತವೆ.
ಬೇಸಿಗೆ ರಜೆಯಲ್ಲಿ ತಮ್ಮ ಮಕ್ಕಳನ್ನು ಹಿಂದೆಯೆಲ್ಲಾ ಅಜ್ಜ-ಅಜ್ಜಿಯ, ಬಂಧುಗಳ ಮನೆಗೆ ಬಿಡು ವುದು ಹೆತ್ತವರಿಗೊಂದು ರೂಢಿ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬರಬರುತ್ತಾ ಆ ಯೋಚನೆ ಸಂಪೂರ್ಣ ಬದಲಾಗಿದೆ. ಯಾಂತ್ರಿಕ ಜೀವನದ ಮಧ್ಯೆ ಮಕ್ಕಳ ದೀರ್ಘ ರಜಾ ವೇಳೆಯನ್ನು ಸದ್ಬಳಕೆ ಮಾಡಲು ಇತ್ತೀಚೆಗಿನ ವರ್ಷಗಳಲ್ಲಿ ಟ್ರೆಂಡ್‌ನಲ್ಲಿರುವ ಒಂದು ಅತ್ಯಾಕರ್ಷಕ ಸಿದ್ಧ ಸೂತ್ರವೇ ಬೇಸಿಗೆ ಶಿಬಿರ. ತಮ್ಮ ಮಕ್ಕಳು ಅವರ ಜೀವನಕ್ಕೆ ಬೇಕಾದ ಕೆಲವೊಂದು ಕೌಶಲಗಳನ್ನು ಕಲಿತು, ಮಾನಸಿಕ ಖುಷಿಯನ್ನು ಇಮ್ಮಡಿಗೊಳಿಸುವ ಒಂದು ಅದ್ಭುತವಾದ ದಾರಿ ಬೇಸಿಗೆ ಶಿಬಿರ ಎಂದೇ ಹೆತ್ತವರು ತಿಳಿದುಕೊಂಡಿದ್ದಾರೆ.
ಸುಮ್ಮನೆ ಮನೆಯಲ್ಲಿದ್ದು ಸದಾ ಟಿ.ವಿ, ಮೊಬೈಲ್ ಜತೆ ಕಾಲ ಕಳೆಯುವ ಬದಲು ಬಗೆಬಗೆಯ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಬಹುದಾದ ಒಂದೊಳ್ಳೆಯ ಅವಕಾಶವೂ ಇದಾಗಿದೆ. ಬೇಸಿಗೆ ಶಿಬಿರಗಳು ಈಗ ನಗರದಲ್ಲಿ ಅಷ್ಟೇ ಏಕೆ, ಹಳ್ಳಿ ಹಳ್ಳಿಗಳಲ್ಲೂ ಮಕ್ಕಳ ಆಸಕ್ತಿ ಗಳನ್ನು ಹೆಚ್ಚಿಸಿಕೊಳ್ಳಲು, ಅವರ ಕ್ರಿಯಾಶೀಲತೆಗೆ ಅನುವು ಮಾಡಿಕೊಡುವ ಚಟುವಟಿಕೆ ಗಳಾಗುತ್ತಿರುವುದರಿಂದ ಹೆಚ್ಚಿನ ಬೇಡಿಕೆ ಹೊಂದಿದೆ.
ಇದನ್ನೂ ಓದಿ: Parenting Tips: ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವುದು ಹೇಗೆ? ಪೋಷಕರೇ ನಿಮಗಾಗಿ ಇಲ್ಲಿದೆ ಟಿಪ್ಸ್!
ಸಾಮಾನ್ಯವಾಗಿ ಬೇಸಿಗೆ ಶಿಬಿರಗಳು ಬಹಳ ವೈವಿಧ್ಯತೆಗಳಿಂದ ಕೂಡಿರುತ್ತದೆ. ಸಂಗೀತ, ಚಿತ್ರಕಲೆ ಹೀಗೆ ಅದು ಹತ್ತಲವು ವಿಷಯಗಳ ಆಗರ. ಗೊತ್ತಿಲ್ಲದ ಹಲವಾರು ವಿಷಯಗಳನ್ನು ಪರಿಚಯ ಮಾಡಿಸುವ, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದಾದ ಒಂದು ಸಂಪರ್ಕ ಸೇತುವೆಯೂ ಹೌದು. ಒಂದು ತಂಡದದಂತೆ ಕೆಲಸ ಮಾಡುವ ಕೌಶಲವನ್ನು ಅದು ಕಲಿಸುತ್ತದೆ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯವನ್ನೂ ಮಾಡುತ್ತದೆ. ಆಟದ ಮೂಲಕ ಮಾಹಿತಿ, ಮನರಂಜನೆ ತಿಳಿಸುವುದೇ ಬೇಸಿಗೆ ಶಿಬಿರದ ಮೂಲೋದ್ಧೇಶ.
ಮಕ್ಕಳಲ್ಲಿ ಆನೇಕ ಹೊಸ ವಿಷಯಗಳ ಬಗ್ಗೆ ರುಚಿ ಹೆಚ್ಚಿಸಿಕೊಳ್ಳಲು ಅದು ದಾರಿ ಮಾಡಿ ಕೊಡುತ್ತದೆ. ಅಲ್ಲಿ ಹತ್ತಾರು ವಿಷಯಗಳ ಪರಿಚಯವಾಗುವುದರಿಂದ ಪ್ರತಿಯೊಂದು ಮಗು ಯಾವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತದೆ ಎಂಬುದನ್ನೂ ಆ ಮೂಲಕ ಹೆತ್ತವರಿಗೂ ಸುಲಭ ವಾಗಿ ತಿಳಿಯಲು ಸಾಧ್ಯ. ಮುಂದೆ ಮಕ್ಕಳು ದೊಡ್ಡವರಾದಾಗ ಯಾವ ಕ್ಷೇತ್ರದಲ್ಲಿ ಶಿಕ್ಷಣ ನೀಡಬೇಕೆಂದು ನಿರ್ಧರಿಸಲೂ ಸಹ ಅದೊಂದು ರಹದಾರಿ.
ಮಾನಸಿಕ ಬೆಳವಣಿಗೆಗೆ ಸಹಾಯಕಾರಿ: ಮಕ್ಕಳಲ್ಲಿ ಸಾಮಾಜಿಕ ನಡವಳಿಕೆ ರೂಪಿಸಲು ಬೇಸಿಗೆ ಶಿಬಿರವು ಒಂದೊಳ್ಳೆಯ ತಾಣ. ಅಲ್ಲಿ ಮಕ್ಕಳು ಹತ್ತಾರು ಸಮಾನ ವಯಸ್ಕರ ಜತೆ ಬೆರೆಯುತ್ತಾರೆ, ಅದರಿಂದ ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಬೇಸಿಗೆ ಶಿಬಿರದಲ್ಲಿನ ಚಟುವಟಿಕೆಗಳು ಜೀವನಕ್ಕೆ ಅವಶ್ಯಕವಿರುವ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ಮಕ್ಕಳಲ್ಲಿ ಹೆಚ್ಚಿಸು ತ್ತದೆ. ಅದಲ್ಲದೆ ನಾಯಕತ್ವದ ಗುಣವನ್ನು ಬೆಳೆಸುವಲ್ಲೂ ಅದು ಸಹಕಾರಿ. ಹತ್ತು ಜನರ ನಡುವೆ ತನ್ನನ್ನು ತಾನು ಹೇಗೆ ಗುರುತಿಸಿಕೊಳ್ಳಬೇಕೆಂದು ಬೇಸಿಗೆ ಶಿಬಿರ ಕಲಿಸಿಕೊಡುತ್ತದೆ.
ಆಯ್ಕೆ ಬಹಳ ಮುಖ್ಯ: ತಮ್ಮ ಮಕ್ಕಳ ಹವ್ಯಾಸ-ಅಭಿರುಚಿಯನ್ನು ತಿಳಿದುಕೊಂಡು ಸೂಕ್ತವಾದ ಬೇಸಿಗೆ ಶಿಬಿರವನ್ನು ಹೆತ್ತವರು ಹುಡುಕುವುದು ಬಹಳ ಮುಖ್ಯ. ಮಗುವಿಗೆ ಇಷ್ಟವಿಲ್ಲದ, ಸಮಾನ ವಯಸ್ಕರಿಲ್ಲದ ಶಿಬಿರಕ್ಕೆ ಮಕ್ಕಳನ್ನು ಸೇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಎಂದು ಗಮನಿಸಿ ಅದಕ್ಕೆ ಸಂಬಂಧಪಟ್ಟ ಶಿಬಿರಕ್ಕೆ ಸೇರಬೇಕು. ಈಗೀಗ ಮಕ್ಕಳ ವಿಶೇಷ ಆಸಕ್ತಿಯ ಟೆಕ್ನಾಲಜಿ, ಕ್ರೀಡೆ ಮುಂತಾದ ಹಲವಾರು ವಿಷಯ ಗಳ ಆಯ್ಕೆಯೂ ಲಭ್ಯ. ಉಚಿತ ಬೇಸಿಗೆ ಶಿಬಿರ ಕೂಡ ಸಾಕಷ್ಟು ಲಭ್ಯವಿದೆ. ಬೇಸಿಗೆ ಶಿಬಿರವನ್ನು ಮಕ್ಕಳಿಗಾಗಿ ಆಯ್ಕೆ ಮಾಡುವಾಗ ಗಮನ ನೀಡಬೇಕಾದ ಮತ್ತೊಂದು ಅಂಶವೆಂದರೆ ಮನೆಗೆ ಮತ್ತು ಶಿಬಿರ ನಡೆಯುವ ಸ್ಥಳಕ್ಕೆ ಇರುವ ಅಂತರ. ಪ್ರಯಾಣದಲ್ಲೇ ಹೆಚ್ಚಿನ ಸಮಯ ಕಳೆದು ಹೋಗಬಾರದು. ಓಡಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ, ಇಲ್ಲದಿದ್ದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಬೇಸಿಗೆ ಶಿಬಿರ ಮಗುವಿನ ಬೆಳವಣಿಗೆಗೆ ಸಹಾಯವಾಗಬೇಕು, ಅವರ ಮನಸ್ಸಿಗೆ ಅದರಿಂದ ಖುಷಿ ಸಿಗಬೇಕು. ಆಗ ಬೇಸಿಗೆ ಶಿಬಿರವು ಮಕ್ಕಳ ವಿರಾಮ ಕಾಲದ ಆರಾಮದ ತಾಣ ಎನಿಸಬಲ್ಲದು.