ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vidyashankar Sharma Column: ಲೌಕಿಕ ಸಮಸ್ಯೆಗಳಿಗೆ ಅಲೌಕಿಕ ಪರಿಹಾರ

ನಮಗಿಂತ ಬಲಶಾಲಿಯಾದ ಅಗೋಚರ ಶಕ್ತಿಗೆ ಶರಣು ಹೋಗುವುದು. ನಮ್ಮ ಪಾಲಿಗೆ ಬಂದಿರುವುದನ್ನು ಪ್ರಸಾದದಂತೆ ಸ್ವೀಕರಿಸುವುದು. ಇದರಿಂದ ಶಾಂತಯುತ ಮನಸ್ಥಿತಿಯ ಪ್ರಾಪ್ತಿ. ನಮ್ಮ ಕಾರ್ಯಗಳು ಮಾತ್ರ ನಮ್ಮ ಅಧೀನದಲ್ಲಿ ಇರುವ ವಿಷಯ, ಅದರ ಫಲಾಫಲದ ಕುರಿತು ಚಿಂತೆ ಬೇಡ. ಏನಾಗಬೇಕೆಂದಿರುವುದೋ ಅದೇ ಜರುಗುವುದು.

ಲೌಕಿಕ ಸಮಸ್ಯೆಗಳಿಗೆ ಅಲೌಕಿಕ ಪರಿಹಾರ

-

Ashok Nayak
Ashok Nayak Dec 26, 2025 1:12 PM

ವಿದ್ಯಾಶಂಕರ ಶರ್ಮ, ಬೆಂಗಳೂರು

ಅಧ್ಯಾತ್ಮ ಎಂದಾಕ್ಷಣ ಅದು ವೃದ್ಧಾಪ್ಯದ, ವೈರಾಗ್ಯದ, ಜಿಗುಪ್ಸೆಯ ಆವರಣದೊಳಗಿರುವ ವಿಷಯ ಎಂಬಂತೆ ಹೆಚ್ಚಿನ ಜನರು ಯೋಚಿಸುತ್ತಾರೆ. ಎರವಲು ಶಿಕ್ಷಣ ಪದ್ಧತಿಯಿಂದ ನಾವು ನಮ್ಮ ಬೇರುಗಳನ್ನು ಮರೆತು ಬಲು ದೂರ ಸಾಗಿರುವುದರಿಂದ, ನಮ್ಮ ಜೀವನ ಕ್ರಮವೇ ಆಗಿದ್ದ ಅಧ್ಯಾತ್ಮ ಇಂದು ನಮಗೆ ಅಪರಿಚಿತವೆನಿಸಿದೆ.

ಸಾಮಾನ್ಯ ತರ್ಕಕ್ಕೆ ವಿರುದ್ಧವಾಗಿ ಅಧ್ಯಾತ್ಮವು ಹೇಳುವುದು ನಮ್ಮ ಬಗೆಗೆ. ಯಾವುದೇ ವಿಷಯವನ್ನು ಒಳಹೊಕ್ಕು ನೋಡದೆ ಅದನ್ನು ಅರಿಯಲು ಸಾಧ್ಯವಿಲ್ಲ. ಭಾರತದ ಆಧ್ಯಾತ್ಮಿಕ ಚಿಂತನೆಗಳು ಹೇಗೆ ಮನುಕುಲಕ್ಕೆ ತಕ್ಕುದಾದ ಸಂದೇಶಗಳನ್ನು ಹೊಂದಿವೆ ಎಂಬುದನ್ನು ನಾವು ಅರಿಯೋಣ.

ನಮಗಿಂತ ಬಲಶಾಲಿಯಾದ ಅಗೋಚರ ಶಕ್ತಿಗೆ ಶರಣು ಹೋಗುವುದು. ನಮ್ಮ ಪಾಲಿಗೆ ಬಂದಿರುವುದನ್ನು ಪ್ರಸಾದದಂತೆ ಸ್ವೀಕರಿಸುವುದು. ಇದರಿಂದ ಶಾಂತಯುತ ಮನಸ್ಥಿತಿಯ ಪ್ರಾಪ್ತಿ. ನಮ್ಮ ಕಾರ್ಯಗಳು ಮಾತ್ರ ನಮ್ಮ ಅಧೀನದಲ್ಲಿ ಇರುವ ವಿಷಯ, ಅದರ ಫಲಾಫಲದ ಕುರಿತು ಚಿಂತೆ ಬೇಡ. ಏನಾಗಬೇಕೆಂದಿರುವುದೋ ಅದೇ ಜರುಗುವುದು.

ಇದನ್ನೂ ಓದಿ: Vidyashankar Sharma Column: ದ್ವೇಷವನ್ನು ಗೆಲ್ಲುವ ಬಗೆ

ಕರ್ಮ ಸಿದ್ಧಾಂತದಲ್ಲಿ ನಂಬಿಕೆ. ಅತಿಯಾದ ಮೋಹ-ಮಮಕಾರಗಳನ್ನು ತ್ಯಜಿಸುವಿಕೆ. ದೇಹವು ಒಂದು ಮಾಧ್ಯಮ ಮಾತ್ರ, ಆತ್ಮ ವಸ್ತುವಿನ ಚೈತನ್ಯದಿಂದ ದೇಹ ಮತ್ತು ಇಂದ್ರಿಯಗಳ ಚಟುವಟಿಕೆ. ದೇಹವು ನಶ್ವರ, ಆತ್ಮವು ನಿತ್ಯ. ಸರ್ವಾತ್ಮ ಭಾವದ ದೃಷ್ಟಿಕೋನದಿಂದ ರಾಗ ಮತ್ತು ದ್ವೇಷಗಳ ನಿಯಂತ್ರಣ. ಇದು ವ್ಯಕ್ತಿಗತವಾಗಿ ಮಾತ್ರವಲ್ಲ, ಇಡೀ ಪ್ರಪಂಚವು ಶಾಂತಮಯವಾಗಲು ರಹದಾರಿಯಾಗುತ್ತದೆ.

ಸಂತಸವನ್ನು ವಸ್ತು/ವಿಷಯಗಳಿಂದ ಪಡೆಯಲಾಗದು. ಏಕೆಂದರೆ ಯಾವುದನ್ನು ನಾವು ಸಂತಸದ ಮೂಲ ಅಂದುಕೊಂಡಿದ್ದೇವೆಯೋ ಅವೆಲ್ಲ ಅನಿತ್ಯವಾದವುಗಳು. ಅವು ಇಂದಿದ್ದು ನಾಳೆ ಇಲ್ಲವಾಗುವಂಥವುಗಳು. ಸಂತಸದ ಸ್ವರೂಪವೇ ನಾವಾಗಿದ್ದೇವೆ ಎಂಬುದನ್ನು ಅರಿಯುವುದು.

ಆತ್ಮ ಸ್ವರೂಪರಾದ ನಾವು ಎಲ್ಲದಕ್ಕೂ ‘ಸಾಕ್ಷಿ’ಯಾಗಿರುವೆವು. ಸುಖ ಬಂದಾಗ ಮೈಮರೆಯದೆ, ದುಃಖ ಬಂದಾಗ ಹತಾಶರಾಗದೆ, ಇವೆರಡಕ್ಕೂ ನಾವು ಬರಿಯ ಸಾಕ್ಷಿ ಮಾತ್ರ, ಇದರಿಂದ ಬದುಕಿನಲ್ಲಿ ನಡೆಯುವ ಎಲ್ಲ ಆಗು ಹೋಗುಗಳು ನಮ್ಮ ಕಣ್ಣೆದುರು ಜರುಗುತ್ತಿರುವ ನಾಟಕದಂತೆ ಎಂಬುದನ್ನು ಅರಿಯುವುದು.

ದಿನದ ಕೆಲವು ಹೊತ್ತು ಧ್ಯಾನ, ಮೌನ, ಪ್ರಾರ್ಥನೆಗಳ ಹವ್ಯಾಸವನ್ನು ಹೊಂದುವುದು. ಹುಚ್ಚೆದ್ದು ಕುಣಿಯುವ ಮನವು ಇವುಗಳಿಂದ ಪ್ರಶಾಂತವಾಗುತ್ತದೆ. ನಮ್ಮ ಬದುಕನ್ನು ಬೇರೆಯವರಿಗೆ ಹೋಲಿಸಿಕೊಂಡು ಕೀಳರಿಮೆ ಭಾವದಿಂದ ನರಳುವುದು ಸಲ್ಲ. ನಮ್ಮ ಪ್ರಾರಬ್ಧ ಕರ್ಮಗಳಿಂದ ನಮಗೆ ಒದಗಿಬರುತ್ತವೆ ಸನ್ನಿವೇಶಗಳು. ನಮ್ಮ ಪಾಪ-ಪುಣ್ಯಗಳಿಗೆ ನಾವೇ ವಾರಸುದಾರರು.

ಇಂಥ ಆಧ್ಯಾತ್ಮಿಕ ತಿಳಿವಳಿಕೆಯಿಂದ ಧನಾತ್ಮಕ ಚಿಂತನೆಗಳು ನಮ್ಮಲ್ಲಿ ಬೆಳೆಯುತ್ತವೆ. ಜನಜಂಗುಳಿಯ ನಡುವೆ ನಾನು ಒಬ್ಬಂಟಿ ಎನ್ನುವ ಭಾವವು ಧಾವಂತ ಬದುಕಿನ ಉಡುಗೊರೆಯಾಗಿದೆ. ಸರ್ವಾಂತರ್ಯಾಮಿ, ಸರ್ವಶಕ್ತನು ಸದಾ ನನ್ನೊಡನೆ ಇದ್ದಾನೆ, ಅವನು ಎಲ್ಲರನ್ನೂ ಸಲಹುವನು ಎಂಬ ಅಧ್ಯಾತ್ಮ ಅರಿವು ನಮಗೆ ಎಂಥ ನಿರಾಶಾ ದಾಯಕ ಸಂದರ್ಭದಲ್ಲೂ ಬಲ ನೀಡುತ್ತದೆ.

ನಿಯಂತ್ರಣವಿಲ್ಲದ ಆಲೋಚನೆಗಳಿಂದ ದುರಾಲೋಚನೆಗಳ ಉದಯವಾಗುತ್ತದೆ. ಇದರಿಂದ ಅಮಾನುಷ ಕೃತ್ಯಗಳು ಜರುಗುವ ಸಂಭವವಿರುತ್ತದೆ. ಜಗದ ಸೂತ್ರಧಾರನು ಎಲ್ಲವನ್ನೂ ಗಮನಿಸುವನು. ಅವನ ನ್ಯಾಯಾಲಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನಿಶ್ಚಿತ. ಅಂಥ ಅಗಾಧ ಶಕ್ತಿಯೆಡೆಗೆ ತೋರಬೇಕಾದ ಗೌರವದ ಭಾವವನ್ನು ಅಧ್ಯಾತ್ಮವು ನಮಗೆ ತಿಳಿ ಹೇಳುತ್ತದೆ.

ಅಧ್ಯಾತ್ಮವೆಂದರೆ ಎಲ್ಲ ತೊರೆದು ಕಾಡಿಗೆ ಹೋಗುವುದು, ಸನ್ಯಾಸಿಯಾಗುವುದು ಎಂದರ್ಥ ವಲ್ಲ. ನಮ್ಮ ಎಂದಿನ ಬದುಕಿನಲ್ಲಿ ಇರುತ್ತ, ಆಧ್ಯಾತ್ಮಿಕತೆಯನ್ನು ನಮ್ಮ ಬದುಕಿನ ಮಾದರಿಯನ್ನಾಗಿಸಿಕೊಳ್ಳುವುದು. ಅಂದರೆ ನಮ್ಮ ಕೆಲಸ ಕಾರ್ಯಗಳು ಸಾಗುತ್ತಿರಬೇಕು, ಆದರೆ ಅವುಗಳು ಅಧ್ಯಾತ್ಮವನ್ನು ಆಧಾರವಾಗಿಸಿಕೊಂಡು ಮುಂದುವರಿಯಬೇಕು.

ಇದು ಸತತ ಪ್ರಯತ್ನಗಳಿಂದ, ಮನಃಪೂರ್ವಕ ಸಮರ್ಪಣೆಯಿಂದ, ನಂಬಿಕೆ ಮತ್ತು ಶ್ರದ್ಧೆ ಗಳಿಂದ ಸಾಧ್ಯವಾಗುತ್ತದೆ. ಅಧ್ಯಾತ್ಮದಿಂದ ನಾವು ಪಡೆದ ಜ್ಞಾನವು ನಮ್ಮ ಎಲ್ಲ ಲೌಕಿಕ ಪ್ರಶ್ನೆಗಳಿಗೆ ಅತ್ಯಂತ ಸಮರ್ಥವಾದ ಉತ್ತರವನ್ನು ನೀಡಬಲ್ಲದು. ಲೌಕಿಕ ಸಾಧನೆಯ ಶಿಖರವನ್ನೇರಿರಲಿ, ಸುಖದ ಬಾಳು ನಡೆಸುತ್ತಿರಲಿ, ಆಂತರಿಕ ನೆಮ್ಮದಿ, ಕೊನೆಯಿಲ್ಲದ ಶಾಂತ ಭಾವದಿಂದ ನಾವೆಲ್ಲರೂ ವಂಚಿತರಾಗಿದ್ದೇವೆ.

ನಾವು ಪಡೆಯುತ್ತಿದ್ದೇವೆ ಅಂದುಕೊಂಡಿರುವ ಸುಖ ಕ್ಕಾಗಿ ಏನೆಲ್ಲ ಹೋರಾಟಗಳು! ಅಂತಿಮವಾಗಿ ನಮಗೆ ಬೇಕಿರುವುದು ಹೊಟ್ಟೆಗೆ ಹಿಟ್ಟು, ಕಣ್ತುಂಬ ನಿದ್ದೆ. ಆದರೆ ನಮ್ಮ ಎಲ್ಲ ಸಾಹಸಗಳು ಅಜೀರ್ಣ ಮತ್ತು ಅಶಾಂತ ರಾತ್ರಿಗಳಲ್ಲಿ ಪರ್ಯವಸಾನವಾದರೆ ಏನು ಪ್ರಯೋಜನ? ಅಧ್ಯಾತ್ಮದ ಅರಿವು ನಮ್ಮನ್ನು ಈ ಎಲ್ಲ ಪಾಶಗಳಿಂದ ಮುಕ್ತರನ್ನಾಗಿಸಿ, ಕಾರಣವಿಲ್ಲದೆ ಸಂತಸವಾಗಿರುವ ಆತ್ಮಸ್ವರೂಪವೇ ನಾವು ಎಂಬುದನ್ನು ಮನಗಾಣಿಸು ತ್ತದೆ.