Hosmane Muttu Column: ಮಣ್ಣು ಮೂರ್ತಿಯಾಗುವ ಮಾಯಾಜಾಲ..!
ಕುಂಬಾರನು ಅತ್ಯಂತ ಧ್ಯಾನಸ್ಥ ಸ್ಥಿತಿಯಲ್ಲಿ ಮಣ್ಣಿಗೆ ಆಕಾರ ನೀಡುವಾಗ ಆ ಕಲಾಕೃತಿಯು ಆತನ ಹೃದಯ ಮತ್ತು ಆತ್ಮದ ಭಾವನೆಗಳನ್ನು ಪ್ರತಿಫಲಿಸುತ್ತದೆ. ಮಣ್ಣು ಮಡಕೆಯಾಗುವ ಈ ಪ್ರಕ್ರಿಯೆಯಲ್ಲಿ ನಮಗೂ ಒಂದು ಜೀವನಪಾಠವಿದೆ; ಮಣ್ಣಿನಂತೆ ನಾವು ಕೂಡ ಕಾಲಕ್ಕೆ ತಕ್ಕಂತೆ ರೂಪುಗೊಳ್ಳಬಹುದು, ಬದಲಾಗಬಹುದು ಹಾಗೂ ನಮ್ಮನ್ನು ನಾವು ಮತ್ತೆ ಮತ್ತೆ ಮುರಿದು ಕಟ್ಟಿಕೊಳ್ಳುತ್ತಾ ಹೊಸ ರೂಪದಲ್ಲಿ ಕಂಗೊಳಿಸಬಹುದು.
-
ಹೊಸ್ಮನೆ ಮುತ್ತು
ಮಣ್ಣಿನ ಕಲೆಯ ಅದ್ಭುತ ಜಗತ್ತು ಕುಂಬಾರಿಕೆ. ಇದು ಕೇವಲ ಒಂದು ಕಲೆಯಷ್ಟೇ ಅಲ್ಲ, ಅಪಾರ ತಾಳ್ಮೆ ಮತ್ತು ತರಬೇತಿಯನ್ನು ಬಯಸುವ ವಿಶಿಷ್ಟ ಕೌಶಲವೂ ಹೌದು. ತಿರುಗುತ್ತಿರುವ ಚಕ್ರದ ಮೇಲಿನ ಮೃದುವಾದ ಮಣ್ಣಿನ ಮುದ್ದೆ ಸೃಜನಶೀಲ ಕೈಗಳ ಸ್ಪರ್ಶಕ್ಕೆ ಸಿಕ್ಕು ವಿವಿಧ ಆಕಾರಗಳನ್ನು ಪಡೆಯುತ್ತಾ, ಅಂತಿಮವಾಗಿ ಒಂದು ಸುಂದರವಾದ ಕಲಾಕೃತಿಯಾಗಿ ರೂಪಾಂತರಗೊಳ್ಳುವ ದೃಶ್ಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತೆ.
ಕುಂಬಾರನು ಅತ್ಯಂತ ಧ್ಯಾನಸ್ಥ ಸ್ಥಿತಿಯಲ್ಲಿ ಮಣ್ಣಿಗೆ ಆಕಾರ ನೀಡುವಾಗ ಆ ಕಲಾಕೃತಿಯು ಆತನ ಹೃದಯ ಮತ್ತು ಆತ್ಮದ ಭಾವನೆಗಳನ್ನು ಪ್ರತಿಫಲಿಸುತ್ತದೆ. ಮಣ್ಣು ಮಡಕೆಯಾಗುವ ಈ ಪ್ರಕ್ರಿಯೆ ಯಲ್ಲಿ ನಮಗೂ ಒಂದು ಜೀವನಪಾಠವಿದೆ; ಮಣ್ಣಿನಂತೆ ನಾವು ಕೂಡ ಕಾಲಕ್ಕೆ ತಕ್ಕಂತೆ ರೂಪು ಗೊಳ್ಳಬಹುದು, ಬದಲಾಗಬಹುದು ಹಾಗೂ ನಮ್ಮನ್ನು ನಾವು ಮತ್ತೆ ಮತ್ತೆ ಮುರಿದು ಕಟ್ಟಿಕೊಳ್ಳುತ್ತಾ ಹೊಸ ರೂಪದಲ್ಲಿ ಕಂಗೊಳಿಸಬಹುದು.
ಮಡಕೆಗಳು ನಾಗರಿಕತೆಯ ಮೊದಲ ಪುರಾವೆಗಳಲ್ಲಿ ಒಂದು. ನಾಗರಿಕತೆಯ ಬೆಳವಣಿಗೆಗೂ ಮಡಕೆಗೂ ಬಹಳ ಹತ್ತಿರದ ಸಂಬಂಧವಿದೆ. ಮನುಷ್ಯ ಆಹಾರವನ್ನು ಬೇಯಿಸಿ ತಿನ್ನಲು ಕಲಿತದ್ದೇ ಮಡಕೆಯಿಂದ. ಮಡಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ. ಇದು ವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಕೆಯ ಪಾತ್ರ ಅಗಾಧವಾದುದು.
ಇದನ್ನೂ ಓದಿ: Hosmane Muttu Column: ಲಾಗೋಮ್: ಹಿತ-ಮಿತ ಬದುಕಿನ ಸುಂದರಪಥ...!
ಇನ್ನು ಪುರಾಣದತ್ತ ಹೊರಳಿದರೆ, ದೂರ್ವಾಸ ಮತ್ತು ಅತನ ಪರಿವಾರದ ಹಸಿವನ್ನು ನೀಗಿಸಲೂ, ತನ್ಮೂಲಕ ಅವರ ಕೃಪೆಗೆ ಪಾತ್ರರಾಗಲೂ ವನವಾಸಿಗಳಾದ ಪಾಂಡವರಿಗೆ ಸಹಕಾರಿಯಾದದ್ದು ಒಂದು ಅಗುಳನ್ನು ಉಳಿಸಿಕೊಂಡಿದ್ದ ಪುಟ್ಟ ಮಡಕೆಯೇ!
ಅಷ್ಟೇ ಅಲ್ಲದೆ, ಅಂತ್ಯೇಷ್ಟಿ ಅಥವಾ ಮರಣಾನಂತರದ ಆಚರಣೆಗಳಲ್ಲಿ, ಕೊನೆಯಲ್ಲಿ ರಂಧ್ರ ಕೊರೆದ ಮಡಕೆಯಿಂದ ನೀರು ಸುರಿಸುತ್ತಾ ಪ್ರದಕ್ಷಿಣೆ ಹಾಕುವ ಕ್ರಿಯೆಯು ಜೀವನ ಮತ್ತು ಅದರ ನಶ್ವರತೆಯನ್ನು ನೆನಪಿಸುತ್ತದೆ. ಮಣ್ಣಿನಿಂದಲೇ ಹುಟ್ಟಿ, ಮಣ್ಣಿನ ಬದುಕಿ, ಕೊನೆಗೆ ಮಣ್ಣನ್ನೇ ಸೇರುವ ಮನುಷ್ಯನಿಗೆ ಮಣ್ಣಿನ ಮಡಕೆಯ ಆಚರಣೆ, ಮಡಕೆಯ ಸಾಮೀಪ್ಯ ಅವಿನಾಭಾವ ವಾದುದು.
ಒಂದು ಸಲ ಮಡಕೆಯನ್ನು ಯಾರೋ ಒಬ್ಬಾತ ಕೇಳಿದನಂತೆ- ‘ನೀನು ಎಲ್ಲಾ ಪರಿಸ್ಥಿತಿಯಲ್ಲೂ ಥಂಡಾ, ಥಂಡಾ..., ಕೂಲ, ಕೂಲ್ ಆಗೇ ಇರ್ತೀಯ ಅದು ಹೇಗೆ ಸಾಧ್ಯ...!?’ ಅದಕ್ಕುತ್ತರವಾಗಿ ಮಡಕೆ, ‘ನಾನು ಹುಟ್ಟಿ ಬಂದಿದ್ದೂ ಮಣ್ಣಿಂದ... ಹೋಗಿ ಸೇರೋದೂ ಮಣ್ಣಿಗೆ...! ಈ ಸತ್ಯ ನನಗೆ ಗೊತ್ತು. ನಡುವಿನದ್ದೆಲ್ಲಾ ಲೊಳಲೊಟ್ಟೆ’ ಎಂದು ಮುಗುಳ್ನಗೆ ಬೀರಿತಂತೆ.
ಕುಂಬಾರಿಕೆಯನ್ನೇ ಕಾಯಕವನ್ನಾಗಿಸಿಕೊಂಡು, ಅದರಲ್ಲಿ ಭಕ್ತಿಯನ್ನು ಬೆರೆಸಿ ದೈವಿಕ ಆನಂದ ಕಂಡುಕೊಂಡ ಅನೇಕ ಶಿವಶರಣರು ನಮ್ಮ ನಡುವೆ ಬಾಳಿ ಹೋಗಿದ್ದಾರೆ. ಕಾಯಕದ ತನ್ಮಯರಾಗಿ ಶಿವನನ್ನು ಕಂಡು ಕೈಲಾಸವನ್ನೇ ಧರೆಗಿಳಿಸಿದವರು ಅವರು. ಗೃಹಸ್ಥನ ಭೌತಿಕ ಬದುಕಿನೊಡನೆ ತಪಸ್ವಿಯ ಆಧ್ಯಾತ್ಮದ ಚಿಂತನೆಯನ್ನು ಮಿಳಿತಗೊಳಿಸಿ ಮಹಾದೇವನನ್ನು ತೋರುವ ಸಾಮಾನ್ಯ ವೆನಿಸುವ ಮಣ್ಣಿನ ಮಡಕೆಯಲ್ಲಿ ಇನ್ನು ಅದೆಂಥಾ ಶಕ್ತಿಯಿದ್ದೀತು..! ಇನ್ನೆಂಥಾ ಜ್ಞಾನವಿದ್ದೀತು!! ನಿಜಕ್ಕೂ ಅಚ್ಚರಿಯಾಗುತ್ತದೆ.