Prof G N Upadhya Column: ಲೋಕಹಿತಕ್ಕಾಗಿ ಈ ಬದುಕು !
ಸುಯೋಗಾಶ್ರಯ ಕೇವಲ ವೃದ್ಧಾಶ್ರಮವಲ್ಲ, ಅದು ಬರೇ ಅನಾಥಾಶ್ರಮವೂ ಅಲ್ಲ. ಅದೊಂದು ಹಿರಿಯ ಜೀವಿಗಳ ನೆಮ್ಮದಿಯ ತಾಣ ಅಂತ ಹೇಳಿದರೆ ಅತ್ಯುಕ್ತಿಯಾಗದು. ನೊಂದವರ, ಬೆಂದವರ, ದಿಕ್ಕಿಲ್ಲದ, ಗತಿಗೋತ್ರ ಇಲ್ಲದ ಜೀವಿಗಳಿಗೆ ಆಶ್ರಯ ನೀಡಿ ನೆಮ್ಮದಿಯ ತಾಣವೊಂದನ್ನು ಸ್ಥಾಪಿಸಿ ಕಳೆದ ಹದಿನೈದು ವರ್ಷಗಳಿಂದ ಅದಕ್ಕಾಗಿ ಅಹರ್ನಿಶಿ ದುಡಿಯುತ್ತ ಬಂದವರು ಲತಿಕಾ ಆಯಿ.
-
ಪ್ರೊ.ಜಿ.ಎನ್.ಉಪಾಧ್ಯ, ಮುಂಬೈ
‘ಸೇವಾ ಪರಮೋ ಧರ್ಮಃ’ ಎಂಬ ಮಾತಿಗೆ ಉತ್ತಮ ನಿದರ್ಶನ ಲತಿಕಾ ಭಟ್. ಮಲೆನಾಡಿನ ಮಡಿಲಲ್ಲಿರುವ ಶಿರಸಿಯಲ್ಲಿ ಅವರು ‘ಸುಯೋಗಾಶ್ರಯ’ದಲ್ಲಿ ಮಾಡು ತ್ತಿರುವ ಸೇವಾ ಕಾಯಕ ಅಪರೂಪದ್ದು, ಆದರ್ಶಪ್ರಾಯವಾದುದು.
ಮನುಷ್ಯ ಜಾತಿ ತಾನೊಂದೇ ವಲಂ’ಎಂದು ಸಾರಿದ ಮಹಾಕವಿ ಪಂಪನಿಗೆ ಪ್ರಿಯವಾದ ಬನವಾಸಿಯ ಪಕ್ಕದ ಪಟ್ಟಣ ಶಿರಸಿ. ಅಲ್ಲಿ ನೆಲೆ ನಿಂತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವ ಅಪೂರ್ವ ಸಾಧಕರು ಲತಿಕಾ ಭಟ್. ವಿಜ್ಞಾನದ ಹಿನ್ನೆಲೆಯಿಂದ ಬಂದು ಉನ್ನತ ವಿದ್ಯಾಭ್ಯಾಸ ಮಾಡಿ ಕೈಗೆ ಬಂದ ನೌಕರಿಯನ್ನು ಬದಿ ಗೊತ್ತಿ ಸ್ವಂತ ಆಶ್ರಮವೊಂದನ್ನು ಸ್ಥಾಪಿಸಿ ಉಚಿತವಾಗಿ ಹಿರಿಯ ನಾಗರಿಕರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜೀವಕಾರುಣ್ಯಮೂರ್ತಿ ಇವರು.
ಸೇವಾ ಪರಮೋ ಧರ್ಮಃ ಎಂಬ ಮಾತಿಗೆ ಅವರು ಉತ್ತಮ ನಿದರ್ಶನ. ದಿಕ್ಕು ದಾತಾರ ರಿಲ್ಲದ ನಿರ್ಗತಿಕರನ್ನು ಅನಾಥರನ್ನು ಜಾತಿ ಮತ ಪಂಥ ಎನ್ನದೇ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಪ್ರೀತಿ ಕರುಣೆ ತೋರಿ ಹಿರಿಯ ಜೀವಗಳ ಬದುಕನ್ನು ಸಹ್ಯ ಗೊಳಿಸುವ ಕೆಲಸದಲ್ಲಿ ಅಲೆ ಬೇಸರವಿಲ್ಲದೆ ತೊಡಗಿಸಿಕೊಂಡಿರುವ ಲತಿಕಾ ತಾಯಿ ಮಾನವಾನುಕಂಪಿ.
ವಿದ್ಯಾ ಪ್ರಸಾರ ಹಾಗೂ ಸಮಾಜಸೇವೆಯಲ್ಲಿ ಅವರದು ಎತ್ತಿದ ಕೈ. ಸದ್ದಿಲ್ಲದೇ ಯಾವುದೇ ಪ್ರಚಾರ ಪ್ರಶಸ್ತಿಗೆ ಆಶಿಸದೇ ಹೊಗಳಿಕೆಗೆ ಬಾಯ್ಬಿಡದೆ ನಿರ್ಮಮವಾಗಿ ರಚನಾತ್ಮಕವಾದ ಕಾರ್ಯದಲ್ಲಿ ನಿರತರಾಗಿರುವ ಅವರು ಸಾಂಪ್ರತ ಸಮಾಜಕ್ಕೆ ಆದರ್ಶಪ್ರಾಯರು.
ಇದನ್ನೂ ಓದಿ: Kiran Upadhyay Column: ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?
ಸುಯೋಗಾಶ್ರಯ
‘ಸುಯೋಗಾಶ್ರಯ’ ಎಂಬ ವಿಶಿಷ್ಟವಾದ ಆಶ್ರಮವನ್ನು ಸ್ಥಾಪಿಸಿ, ತಮ್ಮ ಸ್ವಂತ ಖರ್ಚಿನಲ್ಲಿ ಹಿರಿಯ ನಾಗರಿಕರನ್ನು ಅನೇಕ ವರ್ಷಗಳಿಂದ ಪಾಲಿಸುತ್ತ ಪೋಷಿಸುತ್ತ ಅವರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತ ಬಂದಿದ್ದಾರೆ. ಲತಿಕಾ ಅವರ ಕಾರ್ಯ ವೈಖರಿಯಿಂದ ‘ಜನ ಸೇವೆಯೇ ಜನಾರ್ಧನ ಸೇವೆ’ ಎಂಬ ಮಾತಿಗೆ ಹೊಸ ಅರ್ಥ, ಆಯಾಮ ಬಂದಿದೆ.
ಸುಯೋಗಾಶ್ರಯ ಕೇವಲ ವೃದ್ಧಾಶ್ರಮವಲ್ಲ, ಅದು ಬರೇ ಅನಾಥಾಶ್ರಮವೂ ಅಲ್ಲ. ಅದೊಂದು ಹಿರಿಯ ಜೀವಿಗಳ ನೆಮ್ಮದಿಯ ತಾಣ ಅಂತ ಹೇಳಿದರೆ ಅತ್ಯುಕ್ತಿಯಾಗದು. ನೊಂದವರ, ಬೆಂದವರ, ದಿಕ್ಕಿಲ್ಲದ, ಗತಿಗೋತ್ರ ಇಲ್ಲದ ಜೀವಿಗಳಿಗೆ ಆಶ್ರಯ ನೀಡಿ ನೆಮ್ಮದಿಯ ತಾಣವೊಂದನ್ನು ಸ್ಥಾಪಿಸಿ ಕಳೆದ ಹದಿನೈದು ವರ್ಷಗಳಿಂದ ಅದಕ್ಕಾಗಿ ಅಹರ್ನಿಶಿ ದುಡಿಯುತ್ತ ಬಂದವರು ಲತಿಕಾ ಆಯಿ. ತಮ್ಮ ಜತೆಗೆ ಇರುವ ಸಹಜೀವಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಅದೆಷ್ಟೋ ಚಿತೆಗೆ ತಾವೇ ಅಗ್ನಿಸ್ಪರ್ಶ ಮಾಡಿ ಪುಣ್ಯ ಕಟ್ಟಿ ಕೊಂಡ ಧೀರ ಮಹಿಳೆ. ಹಿರಿಯ ಜೀವಿಗಳ ಸೇವೆಗಾಗಿ ಬಾಳನ್ನು ಅವರು ಮುಡಿಪಾಗಿಟ್ಟಿರು ವುದು ವಿಶೇಷ. ನೊಂದ ಜೀವಗಳ ಕಣ್ಣೀರನೊರಸುವ ಕಾಯಕದಲ್ಲೇ ಸುಖ ಕಾಣುವ ಅವರದು ಪ್ರಗತಿಪರ ದೃಷ್ಟಿ. ಸದ್ಯ ಅವರ ಆಶ್ರಮದಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಇದ್ದು ಇದೊಂದು ಮಹಾಮನೆಯೇ ಸರಿ. ಯಾವುದೇ ಚಂದಾ ವಂತಿಗೆ ಎತ್ತದೆ ತಿಂಗಳಿಗೆ ಪತಿಯ ಸಂಬಳದ ದೊಡ್ಡ ಮೊತ್ತವನ್ನು ಈ ಜನ ಕಲ್ಯಾಣಕ್ಕೆ ಖರ್ಚು ಮಾಡಿಯೂ ತನ್ನದು ಮಿಂಚು ಹುಳದ ಕೆಲಸ ಅಷ್ಟೇ ಎಂಬ ಸರಳ ಸಜ್ಜನಿಕೆ ಅವರದು. ಉಪಕಾರಿ ನಾನು, ಎನ್ನುಪಕೃತಿಯು ಜಗಕೆಂಬ ಯಾವ ಅಹಂಭಾವ ಅವರ ಬಳಿ ಸುಳಿಯದು.
ನಲವತ್ತರಲ್ಲಿ ಆತ್ಮಾವಲೋಕನ
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಸಹಾಯ ಹಸ್ತ ಎಂದು ಶುರುವಾದ ಈ ಲೋಕ ಕಲ್ಯಾಣ ಕಾರ್ಯ ಅಚಾನಕ್ಕಾಗಿ ಹೊಸ ತಿರುವನ್ನು ಪಡೆದುಕೊಂಡಿತು. ನಲವತ್ತರ ಹುಟ್ಟುಹಬ್ಬದ ಸಂದರ್ಭದಲ್ಲಿ ಅದೇನಾಯಿತೊ ಗೊತ್ತಿಲ್ಲ. ಒಮ್ಮೆಲೇ ಆತ್ಮಾವಲೋಕನಕ್ಕೆ ಇಳಿದರು. ಈ ಬದುಕಿಗೆ ಇಷ್ಟೇ ಅರ್ಥವೇ, ಆಯಸ್ಸು ಮುಗಿಯುತ್ತಿದೆ, ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಸಂಕಲ್ಪ ಮಾಡಿಯೇ ಬಿಟ್ಟರು. ಸಮಾಜ ಸೇವೆಯೆಂಬ ಕೈದೀಪವನ್ನು ಹಿಡಿದೇ ಬಿಟ್ಟಿರು. ಇದಕ್ಕೆ ಪತಿ ಗಣಪತಿ ಭಟ್ ಅವರ ಪೂರ್ಣ ಸಹಕಾರ ಸಿಕ್ಕಿತು.
ಲತಿಕಾ ತಾಯಿ ಕಳೆದ ಹದಿನೈದು ವರ್ಷಗಳಿಂದ ತಮ್ಮ ಆಶ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಯಾರಿಗೂ ಬೇಡವಾದವರನ್ನು ಸಮಾಜ ಒಲ್ಲದವರನ್ನು ತಮ್ಮ ಆಶ್ರಮದಲ್ಲಿ ನೆಲೆಯನ್ನು ನಂಬಿಕೆಯನ್ನು ದೊರಕಿಸಿ ಆತ್ಮ ಗೌರವದಿಂದ ಬದುಕು ಮುಂದು ವರಿಸುವಂತೆ ಮಾಡಲು ಶ್ರಮಿಸುತ್ತ ಬಂದಿದ್ದಾರೆ. ಈ ಮೂಲಕ ಮಹಿಳೆಯಾದವಳು ಸುತ್ತಲಿನ ಸಮಾಜಕ್ಕೆ ಏನು ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ನಾವು ಪುಸ್ತಕಗಳನ್ನು ಓದುತ್ತೇವೆ. ಅವರು ಸಹಜೀವಿಗಳ ಜೀವಂತ ಬದುಕನ್ನು ಓದು ತ್ತಿದ್ದಾರೆ. ‘ಸುಯೋಗಾಶ್ರಯ’ ಇದು ವ್ಯಥೆಯಲ್ಲ, ಗೋಳಿನ ಕಥೆಯಲ್ಲ, ನಾನು ಆರಿಸಿ ಕೊಂಡಿರುವ ಜೀವನ ಎಂಬ ದೃಢವಾದ ನಂಬಿಕೆ ಅವರದು. ಸಾಧನೆಯೇ ಒಂದು ತಪಸ್ಸು. ನಾವು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೇ ತಪಸ್ಸಿನ ಮುಖ್ಯ ಲಕ್ಷಣ. ಅದನ್ನು ಲತಿಕಾ ಅವರು ತನು ಶುದ್ಧ ಮನ ಶುದ್ಧ ಭಾವ ಶುದ್ಧವಾಗಿ ಮಾಡುತ್ತಿರು ವುದು ವಿಶೇಷ.
ಮಾರ್ಗದರ್ಶನ!
ಹಂಚಿ ತಿನ್ನುವ ಪ್ರವೃತ್ತಿ ಎಲ್ಲರಲ್ಲೂ ಮೊಳೆಯಲಿ ಎಂಬ ಆಶಯ ಅವರದು. ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಉದ್ದೇಶದಿಂದ, ತಮ್ಮೆಡೆಗೆ ಬಂದ ಇನ್ನೂರಕ್ಕೂ ಹೆಚ್ಚು ಸಂಸಾರಗಳಿಗೆ ಬುದ್ಧಿವಾದ ಹೇಳಿ ಅವರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳುವಂತೆ ಮಾಡಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ.