ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiran Upadhyay Column: ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?

ಕರ್ನಾಟಕದಾದಿಯಾಗಿ ಹೆಚ್ಚು ಕಮ್ಮಿ ಪ್ರತಿ ರಾಜ್ಯದಲ್ಲೂ ಸಿನಿಮಾದಿಂದ ರಾಜಕೀಯಕ್ಕೆ ಬಂದು, ಜನಪ್ರತಿನಿಧಿಗಳಾಗಿ, ಮಂತ್ರಿಗಳಾದವರಿದ್ದಾರೆ. ಆದರೆ ಈ ರಾಜ್ಯಗಳಲ್ಲಿ ಆರಾಧ್ಯರಾಗಿ, ಮುಖ್ಯಮಂತ್ರಿಗಳಾದವರು ಇಲ್ಲ ಎಂದೇ ಹೇಳಬಹುದು. ವಿಚಿತ್ರ ಎಂದರೆ, ದೇಶದಾದ್ಯಂತ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಧರ್ಮೇಂದ್ರಗೆ ಕೂಡ ಮಂತ್ರಿಯಾಗುವ ಅವಕಾಶ ದೊರಕಲಿಲ್ಲ.

ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?

-

ವಿದೇಶವಾಸಿ

ರಾಜಕೀಯದ ವಿಷಯ ಬಂದಾಗ, ಭಾರತದಲ್ಲಿ ಬೇರೆ ಯಾವ ರಾಜ್ಯವೂ ತಮಿಳುನಾಡಿ ನಂತೆ ಅಲ್ಲ. ತಮಿಳುನಾಡಿನಲ್ಲಿ ರಾಜಕೀಯ ಧುರೀಣರಿಗಿಂತಲೂ ಸಿನಿಮಾದ ನಾಯಕರೇ ರಾಜ್ಯವಾಳಿದ್ದು ಹೆಚ್ಚು. ಇದು ನಿನ್ನೆಮೊನ್ನೆಯ ಕಥೆಯಲ್ಲ. 60ರ ದಶಕದ ಕೊನೆಯ ಹಂತ ದಿಂದಲೇ ಇದು ಆರಂಭವಾಯಿತು.

ಅಂದರೆ ಸುಮಾರು ಎಂಟು ದಶಕಗಳ ಕಾಲ ತಮಿಳುನಾಡಿನ ರಾಜಕೀಯ ಚಿತ್ರಣದಲ್ಲಿ ಚಲನಚಿತ್ರ ಪ್ರಮುಖ ಪಾತ್ರವನ್ನೇ ವಹಿಸಿದೆ. ತಮಿಳುನಾಡಿನಲ್ಲಿ 1967ರಿಂದ 2016ರ ವರೆಗೆ ಆದ ಎಲ್ಲ ಮುಖ್ಯಮಂತ್ರಿಗಳೂ ಚಲನಚಿತ್ರರಂಗದೊಂದಿಗೆ ನಂಟು ಇಟ್ಟುಕೊಂಡವರೇ ಆಗಿದ್ದಾರೆ.

ಸಿ.ಎನ್.ಅಣ್ಣಾದೊರೈ, ಎಂ.ಕರುಣಾನಿಧಿ, ಎಂ.ಜಿ.ರಾಮಚಂದ್ರನ್, ಜೆ.ಜಯಲಲಿತಾ (ಈಗ ಜೋಸೆಫ್ ವಿಜಯ್ ಹೆಸರನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಬಹುದು) ಇವರೆಲ್ಲ ಬೆಳ್ಳಿ ತೆರೆಯಿಂದ ಬಂದು ತಮಿಳು ಭೂಮಿ ಅಳಿದವರು. ಇದರ ಹೊರತಾಗಿ ವಿಜಯಕಾಂತ್, ಕಮಲ್ ಹಾಸನ್ ತಮಿಳುನಾಡಿನ ಚುನಾವಣೆಯ ಪರೀಕ್ಷೆ ಬರೆದಿದ್ದಾರೆ. ಆದರೆ ನಿರೀಕ್ಷಿಸಿದ ಅಂಕ ಸಿಗದ ಕಾರಣ ಫೇಲ್ ಆಗಿ ಹಿಂತಿರುಗಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ರಜನಿಕಾಂತ್ ಪರೀಕ್ಷೆ ಬರೆಯುವುದಕ್ಕೆ ಮೊದಲೇ ಪರೀಕ್ಷಾ ಕೊಠಡಿ ಯಿಂದ ಹಿಂತಿರುಗಿದ್ದಾರೆ. ಬಹುಶಃ ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಅವರಿಗೆ ಆದ ವಯಸ್ಸು ಇದಕ್ಕೆ ಕಾರಣವಿದ್ದಿರಬಹುದು. ಅವರೇನಾದರೂ ಇಪ್ಪತ್ತು ಇಪ್ಪತ್ತೈದು ವರ್ಷ ಮೊದಲೇ ರಾಜಕೀಯ ಪ್ರವೇಶ ಮಾಡಿದ್ದಿದ್ದರೆ, ಅವರ ಹೆಸರು ಕೂಡ ತಮಿಳು ನಾಡಿನ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸೇರುತ್ತಿತ್ತೋ ಏನೋ.

2016ರಲ್ಲಿ ಓ.ಪನ್ನೀರಸೆಲ್ವಂ, ನಂತರ ಇ.ಪಳನಿಸ್ವಾಮಿ ಈ ದಾಖಲೆ ಮುರಿದು ಇದಕ್ಕೆ ಹೊರತಾದರು. ಕರುಣಾನಿಧಿಯವರ ಮಗ, ಎರಡು ಸಿನಿಮಾ, ಒಂದು ಧಾರಾವಾಹಿಯಲ್ಲಿ ಅಭಿನಯಿಸಿದ, ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಈ ಪಟ್ಟಿಗೆ ಸೇರಿಸಬೇಕೋ ಬೇಡವೋ ನೀವೇ ಯೋಚಿಸಿ ಹೇಳಿ.

ಇದನ್ನೂ ಓದಿ: Kiran Upadhyay Column: ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

ಹಾಗಂತ ಈ ಸ್ಥಿತಿ ಪಕ್ಕದ ಯಾವುದೇ ರಾಜ್ಯಗಳಲ್ಲಿಲ್ಲ. ಅಷ್ಟೇ ಏಕೆ, ಭಾರತದ ಯಾವ ರಾಜ್ಯದಲ್ಲಿಯೂ ಇಲ್ಲ. ಆಂಧ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ಒಬ್ಬರೇ ಇದಕ್ಕೆ ಅಪವಾದ ಎನ್ನಬಹುದು. ಅವರೂ ಚಲನಚಿತ್ರದ ನಾಯಕರಾಗಿದ್ದುಕೊಂದು ನಂತರ ತಮ್ಮದೇ ಪಕ್ಷ ಕಟ್ಟಿ ಮುಖ್ಯಮಂತ್ರಿಯಾದವರು. ಅವರಿಗೆ ಸಿಕ್ಕ ಪ್ರತಿಕ್ರಿಯೆ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿಗೆ ಸಿಗಲಿಲ್ಲ. ಅವರಿಗೆ ಹೋಲಿಸಿದರೆ ಸಹೋದರ ಪವನ್ ಕಲ್ಯಾಣ್ ಆದೀತು. ಸದ್ಯ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದಾರೆ. ಬಿಟ್ಟರೆ ಮತ್ಯಾರೂ ಕಣ್ಣಿಗೆ ಕಾಣುವುದಿಲ್ಲ.

ಕರ್ನಾಟಕದಾದಿಯಾಗಿ ಹೆಚ್ಚು ಕಮ್ಮಿ ಪ್ರತಿ ರಾಜ್ಯದಲ್ಲೂ ಸಿನಿಮಾದಿಂದ ರಾಜಕೀಯಕ್ಕೆ ಬಂದು, ಜನಪ್ರತಿನಿಧಿಗಳಾಗಿ, ಮಂತ್ರಿಗಳಾದವರಿದ್ದಾರೆ. ಆದರೆ ಈ ರಾಜ್ಯಗಳಲ್ಲಿ ಆರಾಧ್ಯ ರಾಗಿ, ಮುಖ್ಯಮಂತ್ರಿಗಳಾದವರು ಇಲ್ಲ ಎಂದೇ ಹೇಳಬಹುದು. ವಿಚಿತ್ರ ಎಂದರೆ, ದೇಶದಾದ್ಯಂತ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಧರ್ಮೇಂದ್ರಗೆ ಕೂಡ ಮಂತ್ರಿಯಾಗುವ ಅವಕಾಶ ದೊರಕಲಿಲ್ಲ.

ಕರ್ನಾಟಕದಲ್ಲಿ ಅಂಬರೀಶ್, ಅನಂತ ನಾಗ್, ಉಮಾಶ್ರೀ, ಜಯಮಾಲಾರಂತವರು ಮಂತ್ರಿ ಗಳಾದರೂ, ಮುಖ್ಯಮಂತ್ರಿಗಳಾಗಲಿಲ್ಲ. ಜತೆಗೆ ಇವರೆಲ್ಲ ಆಗಲೇ ಇದ್ದ ಪಕ್ಷವನ್ನು ಸೇರಿಕೊಂಡು ಚುನಾವಣೆ ಗೆದ್ದವರೇ ಹೊರತು ಹೊಸ ಪಕ್ಷ ಕಟ್ಟುವ ಸಾಹಸಕ್ಕೆ ಹೋದ ವರಲ್ಲ. ಪಕ್ಷ ಕಟ್ಟಿದ ಉಪೇದ್ರ ಇದುವರೆಗೆ ಸ್ವತಃ ಚುನಾವಣೆಗೆ ನಿಲ್ಲಲಿಲ್ಲ. ಉಳಿದವರಿಗೆ ಹೊಸ ಪಕ್ಷ ಕಟ್ಟುವ ಚಿಂತನೆಯಾಗಲಿ, ಹುಮ್ಮಸ್ಸಾಗಲಿ ಇದ್ದಂತೆ ಕಾಣುತ್ತಿಲ್ಲ. ಡಾ.ರಾಜ್ ಕುಮಾರ್ ಮನಸ್ಸು ಮಾಡಿದ್ದರೆ ಕಥೆ ಬೇರೆ ಇರುತ್ತಿತ್ತೇನೋ!

ತಮಿಳುನಾಡಿನ ಚುನಾವಣೆ ಎಂದರೆ ಜನ ಮಾತಾಡಿಕೊಳ್ಳುವುದಿದೆ. ‘ತಮಿಳರು ಯಾವತ್ತೂ ಚಲನಚಿತ್ರದ ಜನರಿಗೆ ಮತ ಹಾಕುವುದು’, ‘ತಮಿಳುನಾಡಿನಲ್ಲಿ ಚಿತ್ರರಂಗ ದವರೇ ರಾಜ್ಯಭಾರ ಮಾಡುವುದು’, ‘ತಮಿಳುನಾಡಿನ ಜನರಿಗೆ ಸಿನಿಮಾದವರ ಹೊರತಾಗಿ ಬೇರೆ ಯಾರೂ ಸಿಗುವುದಿಲ್ಲ’, ಇತ್ಯಾದಿ, ಇತ್ಯಾದಿ.

Vijay

ಅದರಲ್ಲಿ ಕೆಲವರು ತಮಾಷೆಯ ದೃಷ್ಟಿಯಲ್ಲಿಯೂ, ಕೆಲವರು ಅದು ಆತಂಕಕಾರಿ ಎನ್ನುವ ಧಾಟಿಯಲ್ಲಿಯೂ ಮಾತನಾಡುತ್ತಾರೆ. ಹಾಗೆ ಆಡಿಕೊಳ್ಳುವವರಲ್ಲಿ ತಮಿಳುನಾಡಿನ ಜನರಿಗಿಂತ ಹೊರಗಿನವರೇ ಹೆಚ್ಚಾಗಿರುತ್ತಾರೆ. ಅಲ್ಲಿಯವರಿಗೆ ಯಾವ ತೊಂದರೆಯೂ ಇಲ್ಲ. ತಮಿಳುನಾಡಿನ ಜನರು ಪ್ರಜಾಪ್ರಭುತ್ವದ ನಿಯಮದಂತೆ ಮತ ಹಾಕಿ ಅವರನ್ನು ಆರಿಸಿರುತ್ತಾರೆ. ಅಷ್ಟಕ್ಕೂ ಸಿನಿಮಾದವರು ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಗಳಾದರೆ ತಪ್ಪೇನು ಇಲ್ಲ ಎನ್ನುವುದನ್ನು ಅಲ್ಲಿಯ ಜನ ನಂಬಿದ್ದಾರೆ, ತೋರಿಸಿಕೊಟ್ಟಿದ್ದಾರೆ.

ತಮಿಳುನಾಡು ಇಂದು ಭಾರತದ ಎರಡನೆಯ ಶ್ರೀಮಂತ ರಾಜ್ಯವಾಗಿರುವುದೇ ಇದಕ್ಕೆ ಸಾಕ್ಷಿ. ಹಾಗಾದರೆ ತಮಿಳುನಾಡಿನವರಿಗೆ ಸಿನಿಮಾದವರ ಮೇಲೆ ಇಷ್ಟು ಪ್ರೀತಿ ಯಾವ ಕಾರಣಕ್ಕೆ? ಎಲ್ಲಾ ರಾಜ್ಯದಲ್ಲೂ ಜನಪ್ರಿಯ ಸಿನಿಮಾ ನಟರಿದ್ದಾರೆ. ಆದರೆ ತಮಿಳುನಾಡು ಭಿನ್ನವಾಗಿರುವುದಕ್ಕೆ ಕಾರಣ ಹುಡುಕುತ್ತ ಹೊರಟರೆ ಒಂದೆರಡಲ್ಲ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ತಮಿಳುನಾಡಿನಲ್ಲಿರುವ ಶೇಕಡ 85ರಷ್ಟು ಜನ ಅನಕ್ಷರಸ್ಥರಾಗಿದ್ದರು. ಆ ಕಾಲದಲ್ಲಿ ಸುದ್ದಿ ಪತ್ರಿಕೆಗಳು ಹಳ್ಳಿಗಳನ್ನು ತಲುಪುತ್ತಿರಲಿಲ್ಲ. ವಿದ್ಯುತ್ ತಲುಪದ ಹಳ್ಳಿಗಳಿಗೆ ರೇಡಿಯೋ ತಲುಪುವುದೂ ವಿರಳವಾಗಿತ್ತು. ಆದರೆ ಹಳ್ಳಿಗಳಿಗೆ ಹತ್ತಿರವಾಗಿರುವ ಪಟ್ಟಣ ಪ್ರದೇಶಗಳಲ್ಲಿ ನಾಟಕ ಮತ್ತು ಸಿನಿಮಾ ಥಿಯೇಟರ್ ಇದ್ದವು. ಆ ಕಾಲದಲ್ಲಿ ಪೆರಿಯರ್ ಇ. ವಿ. ರಾಮಸ್ವಾಮಿಯಂತವರು ದ್ರಾವಿಡ ಚಳುವಳಿ ಆರಂಭಿಸಿದ್ದರು.

ಹಿಂದಿ ಭಾಷೆಯ ಹೇರಿಕೆ, ಜಾತಿ-ಧರ್ಮಗಳ ನಡುವೆ ಸಂಘರ್ಷದ ವಿರುದ್ಧ ಹೋರಾಟ ಆರಂಭಿಸಿದ್ದರು. ಅಣ್ಣಾದೊರೈ, ಕರುಣಾನಿಧಿ ಮತ್ತು ಎಂಜಿಆರ್ (ಎಮ. ಜಿ. ರಾಮಚಂದ್ರನ್) ಎಲ್ಲರೂ ಚಿತ್ರಕಥೆ ಬರೆಯುತ್ತಿದ್ದರು, ಅಭಿನಯಿಸುತ್ತಿದ್ದರು. ಸಿನಿಮಾ ಮಾಧ್ಯಮ ಕೇವಲ ಜನರನ್ನು ರಂಜಿಸುವುದಕ್ಕೆ, ಪ್ರೇಮ ಕಥೆಗಳಿಗೆ ಸೀಮಿತವಲ್ಲ, ಬರೀ ಹಾಡು-ಕುಣಿತಗಳಿಗೆ ಇರುವಂತದ್ದಲ್ಲ ಎಂಬುದನ್ನು ಇವರು ಅರಿತಿದ್ದರು.

60ರ ದಶಕದಲ್ಲಿ ತೆರೆಕಂಡ ‘ವೇಲೈಕರಿ’, ‘ಪರಾಶಕ್ತಿ’, ‘ಮನೋಹರ’ದಂತಹ ಚಲನಚಿತ್ರಗಳು ಕೇವಲ ಮನರಂಜನೆಗಾಗಿರದೆ, ರಾಜಕೀಯ ಪ್ರೇರಿತವಾಗಿದ್ದವು. ಚಿತ್ರಕಥೆ ಮತ್ತು ಹಾಡು ಗಳು ರಾಜಕೀಯ ಪಕ್ಷದ ಚುನಾವಣಾ ಪ್ರಣಾಳಿಕೆಗಳಂತಿದ್ದವು. ಸಿನಿಮಾದಲ್ಲಿ ಬರುತ್ತಿದ್ದ ನ್ಯಾಯಾಲಯದ ಸನ್ನಿವೇಶಗಳನ್ನು ಜನ ನಿಜ ಎಂದು ನಂಬುತ್ತಿದ್ದರು. ಆ ಕಾಲದಲ್ಲಿಯೇ ‘ಪರಾಶಕ್ತಿ’ ಸಿನಿಮಾವನ್ನು ಎರಡು ಕೋಟಿ ಜನ ನೋಡಿದ್ದರಂತೆ.

ಯಾವುದೇ ಚುನಾವಣಾ ಪ್ರಚಾರ ಸಭೆಗೆ ಈ ಪ್ರಮಾಣದ ಜನರನ್ನು ಸೇರಿಸುವ ಸಾಮರ್ಥ್ಯ ಆ ಕಾಲದಲ್ಲಿಯೂ ಇರಲಿಲ್ಲ, ಈಗಲೂ ಇಲ್ಲ. ಹಾಗಾಗಿ ಆ ತಲೆಮಾರಿನ ಜನರಿಗೆ ಚಿತ್ರ ಮಂದಿರಗಳು ಕೇವಲ ಮನರಂಜನೆಯ ತಾಣವಾಗಿರದೆ, ಶಿಕ್ಷಣ ನೀಡುವ ಕೇಂದ್ರ ಗಳಾದವು. ತೆರೆಯ ಮೇಲೆ, ಹಳ್ಳಿಯನ್ನು ಉಳಿಸುವ, ಜಮೀನ್ದಾರರ ವಿರುದ್ಧ ಹೋರಾಡುವ, ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡದ, ಭರತನಾಟ್ಯ, ಜೆಲ್ಲಿಕಟ್ಟು ಮೊದಲಾದವುಗಳನ್ನು ವೈಭವೀಕರಿಸುವ, ದೇವಾಲಯದ ಉತ್ಸವಗಳಲ್ಲಿ ಪಾಲ್ಗೊಳ್ಳುವ, ಪ್ರಾಮಾಣಿಕ ವ್ಯಕ್ತಿ, ರೈತ, ರಿಕ್ಷಾ ಚಾಲಕ, ಮೀನು ಹಿಡಿಯುವ, ಮಹಿಳೆಯರನ್ನು ರಕ್ಷಿಸುವ, ಹಿರಿಯರನ್ನು ಗೌರವಿಸುವ, ಮಕ್ಕಳನ್ನು ಪ್ರೀತಿಸುವ, ಮದ್ಯಪಾನ-ಧೂಮಪಾನ ಮಾಡದವ, ಬಡವರಿಗೆ ದಾನ ಮಾಡುವವ, ಹೀಗೆ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದ ನಾಯಕ ಜನರ ಮನಸ್ಸಿ ನಲ್ಲಿ ರಾಜಕಾರಣಿಗಳಿಗಿಂತ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಲು ಆರಂಭಿಸಿದ.

ಜನರಿಗೆ ರಾಜಕೀಯ ಮುಖಂಡರಿಗಿಂತ ಚಲನ ಚಿತ್ರದ ನಾಯಕರೇ ಹೆಚ್ಚು ಇಷ್ಟವಾಗಲು ಆರಂಭಿಸಿದ್ದರು. ನಾಯಕರ ಸಂಭಾಷಣೆಗಳನ್ನು ಅವರು ಕಂಠಪಾಠ ಮಾಡುತ್ತಿದ್ದರು. ದೇಶದಲ್ಲಿ ನಟರು ಸಿನಿಮಾ ದಿಂದ ರಾಜಕೀಯ ಪ್ರವೇಶ ಮಾಡಿದರೆ, ತಮಿಳು ನಾಡಿನಲ್ಲಿ ರಾಜಕಾರಣಿಗಳಾಗಲು ಬಯಸುವವರು ಸಿನಿಮಾ ಪ್ರವೇಶ ಮಾಡಿದರು.

ಅಣ್ಣಾದೊರೈ ತಮ್ಮ ಸಿನಿಮಾಗಳನ್ನು ರಾಜಕೀಯದ ಕರಪತ್ರದಂತೆ ಬಳಸಿಕೊಂಡರೆ, ಎಂಜಿಆರ್ ಆಡಳಿತವನ್ನು ಹೇಗೆ ನಡೆಸಬಹುದು ಎಂಬುದನ್ನು ತೋರಿಸಿ ಕೊಡಲು ಸಿನಿಮಾವನ್ನು ಬಳಸಿದರು. ಇಪ್ಪತ್ತೈದು ವರ್ಷದ ತಮ್ಮ ಚಲನಚಿತ್ರದ ಜೀವನದಲ್ಲಿ ಎಂಜಿಆರ್ ಸುಮಾರು 115 ಚಲನಚಿತ್ರಗಳನ್ನು ಮಾಡಿದರೆ, ಅದರಲ್ಲಿ ಬಹುತೇಕ ಚಿತ್ರಗಳು ಹೀಗೇ ಇರುತ್ತಿತ್ತು.

ಎಂಜಿಆರ್ ಕೇವಲ ಪರದೆಯ ಮೇಲಷ್ಟೇ ಅಲ್ಲ ಹೊರಗೂ ಕೂಡ ಅದೇ ರೀತಿ ವರ್ತಿಸಲು ಆರಂಭಿಸಿದ್ದರು. ಬಡ ಮಹಿಳೆಯರಿಗೆ ಚಿನ್ನದ ಸರಗಳನ್ನು ನೀಡುವುದು, ಬಡ ಮಕ್ಕಳಿಗೆ ಶಾಲಾ ಶುಲ್ಕವನ್ನು ಪಾವತಿಸುವುದು, ಅಭಿಮಾನಿಗಳಿಗೆ ಸಹಾಯ ಮಾಡಲು ಮಧ್ಯರಾತ್ರಿ ಯಲ್ಲಿ ಎದ್ದು ಬರುವುದು, ಚಿತ್ರೀಕರಣ ನಡೆಯುವಾಗ ಜನರ ದೂರನ್ನು ಸ್ವೀಕರಿಸಿವುದು, ಅವರ ಮುಂದೆಯೇ ಓದಿ ಅದಕ್ಕೆ ಪರಿಹಾರ ಸೂಚಿಸುವುದು ಅಥವಾ ಅವರೊಂದಿಗೆ ತಾನಿದ್ದೇನೆ ಎಂಬ ಭರವಸೆ ಕೊಡುವುದು ಇತ್ಯಾದಿ.

ಇದನ್ನೆಲ್ಲ ಅವರು ರಾಜಕೀಯದ ಉದ್ದೇಶ ಇಟ್ಟುಕೊಂಡು ಮಾಡಿದ್ದರೋ ಅಥವಾ ಇಲ್ಲವೋ ಗೊತ್ತಿಲ್ಲ, ಜನರಿಗಂತೂ ಬಹಳ ಹತ್ತಿರವಾದರು. ಸಿನಿಮಾದ ನಾಯಕ ನಟರು ತಮ್ಮ ಕಣ್ಣಿಗೆ ಕಾಣುವ ದೇವರಂತೆ ಕಂಡರು. ಹಾಗಾಗಿಯೇ ಒಂದೆರಡು ದೇವಾಲಯಗಳೂ ನಿರ್ಮಾಣಗೊಂಡವು.

ಸಾಲದು ಎಂಬಂತೆ ರಾಷ್ಟ್ರೀಯ ಪಕ್ಷಗಳು ಇಲ್ಲಿ ಚಿಗುರಿಕೊಳ್ಳಲೇಇಲ್ಲ. ಸಿನಿಮಾದ ನಾಯಕರಿಗೆ ರಾಜಕೀಯ ನಾಯಕರಿಗಿಂತ ಹೆಚ್ಚಿನ ಅಭಿಮಾನಿಗಳು ಹುಟ್ಟಿಕೊಂಡರು, ಅವರನ್ನೇ ಒಪ್ಪಿಕೊಂಡರು. ಹಾಗೆಯೇ ಅಭಿಮಾನಿಗಳ ಸಂಘಗಳು ಕೂಡ. ಅಭಿಮಾನಿಗಳು ಮತ್ತು ಅಭಿಮಾನಿ ಸಂಘಗಳು ಯಾವುದೇ ರಾಜಕೀಯ ಪಕ್ಷ ಮತ್ತು ಕಾರ್ಯಕರ್ತರಿಗಿಂತ ಹೆಚ್ಚು ಉತ್ತಮವಾಗಿದ್ದವು. ಈ ಅಭಿಮಾನಿ ಸಂಘಗಳು ತಮ್ಮ ನೆಚ್ಚಿನ ನಟನ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುವುದು, ಹಾಲಿನ ಅಭಿಷೇಕ ಮಾಡುವುದು, ತಮ್ಮ ನಾಯಕನ ಹೆಸರಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸುವುದು, ಉಚಿತ ಬೋಧನೆ ಮತ್ತು ಭೋಜನ ನೀಡುವುದು, ಅಭಿಮಾನಿಗಳ ಹುಟ್ಟು ಹಬ್ಬದಂದು ಹೆಣ್ಣು ಮಕ್ಕಳಿಗೆ ಸೀರೆ, ಮಕ್ಕಳಿಗೆ ಪಠ್ಯ-ಪುಸ್ತಕ ನೀಡುವುದು, ಯಾವುದೇ ರೀತಿಯ ಸಭೆಗಳು, ಪ್ರತಿಭಟನೆಗಳು ಆಗಬೇಕೆಂದರೆ ಅತಿ ಶೀಘ್ರದಲ್ಲಿ ಜನರನ್ನು ಒಂದುಗೂಡಿಸುವುದು, ಇತ್ಯಾದಿಗಳನ್ನು ಮಾಡಲು ಆರಂಭಿಸಿದರು.

ಚಿಕ್ಕದಾಗಿ ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಚಿತ್ರನಟರು ತಮ್ಮ ಸಾಂಸ್ಕೃತಿಕ ಬಂಡವಾಳವನ್ನು ರಾಜಕೀಯ ಬಂಡವಾಳವಾಗಿ ಪರಿವರ್ತಿಸಿಕೊಂಡರು’.

1972ರ ಹೊತ್ತಿಗೆ ಎಂಜಿಆರ್ ಅವರಿಗೆ 25000 ಅಭಿಮಾನಿ ಸಂಘಗಳು ಇದ್ದವಂತೆ. ಆ ಪದ್ಧತಿ ಇಂದಿಗೂ ಮುಂದುವರಿದಿದೆ. (ನಿನ್ನೆ ಪ್ರಮಾಣವಚನ ಸ್ವೀಕರಿಸಿದ ವಿಜಯ್ ಅವರ ‘ತಲಪತಿ ವಿಜಯ್ ಮಕ್ಕಳ್ ಇಯಕ್ಕಂ’ ಸುಮಾರು 2 ಲಕ್ಷ ಸದಸ್ಯರನ್ನು ಹೊಂದಿದೆಯಂತೆ.) ಇದು ಇನ್ನೂ ಮುಂದುವರಿಯುತ್ತದೆ.

ಇರಲಿ, ಪಕ್ಷಗಳ, ಬೆಳ್ಳಿ ಪರದೆಯ ನಾಯಕ, ನಾಯಕಿಯರ ಇತಿಹಾಸಕ್ಕೆ ಬಂದರೆ, 1949ರಲ್ಲಿ ಅಣ್ಣಾದೊರೈ ಪೆರಿಯಾರ್ ಅವರ ದ್ರಾವಿರ್ಡ ಕಝಗಮ್‌ನಿಂದ ಹೊರಗೆ ಬಂದು ದ್ರಾವಿಡ ಮುನ್ನೇತ್ರ ಕಝಗಮ್ (ಡಿಎಂಕೆ) ಆರಂಭಿಸಿ ಪ್ರಧಾನ ಕಾರ್ಯದರ್ಶಿಯಾದರು.

1965ರಲ್ಲಿ ಹಿಂದಿ ವಿರೋಧಿ ಆಂದೋಲನ ಹಿಂಸಾತ್ಮಕವಾಗಿ ಎಪ್ಪತ್ತಕ್ಕೂ ಹೆಚ್ಚು ಜನ ಸತ್ತರು. ಆಗ ಡಿಎಂಕೆಯ ನಿಜವಾದ ಉದಯವಾಯಿತು. ಪಕ್ಷದ ಚಿನ್ಹೆ ಉದಯಿಸುತ್ತಿರುವ ಸೂರ್ಯ ಅದರದ್ದೇ ಸೂಚನೆ. 1967ರಿಂದ 69ರಲ್ಲಿ ತೀರಿಹೋಗುವವರೆಗೂ ಮುಖ್ಯಮಂತ್ರಿ ಯೂ ಆದರು. ಆಗ ಭಾರತದಲ್ಲಿ ಮೊದಲ ಬಾರಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಾದೇಶಿಕ ಪಕ್ಷವೊಂದು ಪೂರ್ತಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿತು. ಅವರ ನಂತರ ಮುಖ್ಯಮಂತ್ರಿಯಾದ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದರು.

ಎಂಜಿಆರ್ ನಂತರ ಜೆ.ಜಯಲಲಿತಾ 1991ರಿಂದ 2016ರ ಮಧ್ಯದಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿದ್ದರು. 1972ರಲ್ಲಿ ಎಂಜಿಆರ್ ಎಐಎಡಿಎಂಕೆ ಪಕ್ಷವನ್ನು ಪ್ರಾರಂಭಿಸಿ ದಾಗ ಜನರು ಹಿಂದೆ ಮುಂದೆ ಯೋಚಿಸಲಿಲ್ಲ. ಯಾವ ವಿಶ್ಲೇಷಣೆಯನ್ನೂ ಮಾಡಲಿಲ್ಲ. ಅವರ ತರ್ಕ ಬಹಳ ಸರಳವಾಗಿತ್ತು.

‘ಎಂಜಿಆರ್ ಅವರು ಚಲನಚಿತ್ರಗಳಲ್ಲಿ ಇಪ್ಪತ್ತೈದು ವರ್ಷಗಳ ಕಾಲ ವರ್ಷಗಳ ಕಾಲ ಹಳ್ಳಿಯನ್ನು ಉಳಿಸಿದ್ದಾರೆ, ನಿಜ ಜೀವನದಲ್ಲಿಯೂ ತಮಿಳುನಾಡನ್ನು ಉಳಿಸುತ್ತಾರೆ’ ಎಂಬುದು ಅವರ ಮನಸ್ಸಿನಲ್ಲಿ ಕುಳಿತು ಹೋಗಿತ್ತು. ಆದ್ದರಿಂದ ಎಂಜಿಆರ್ ಅವರು 1977, 1980, 1984ರಲ್ಲಿ ಗೆದ್ದರು. 1984ರಲ್ಲಂತೂ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿದ್ದರು. ಪ್ರಚಾರಕ್ಕೆ ಬರಲಾಗದಿದ್ದರೂ ಗೆದ್ದರು. ತಾವು ಅಭಿನಯಿಸಿದ ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಪಾತ್ರ ಮಾಡದಿದ್ದರೂ ತಮಿಳುನಾಡಿನ ಮುಖ್ಯಮಂತ್ರಿಯಾದರು. ಈಗ ಚಿತ್ರರಂಗದಿಂದಲೇ ಬಂದ ಜೆ. ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ.

ಚಿತ್ರರಂಗದಿಂದ ಬಂದ ಮುಖ್ಯಮಂತ್ರಿಗಳೆಲ್ಲ ಒಂದಲ್ಲ ಒಂದು ಪುಕ್ಕಟೆ ಭಾಗ್ಯಗಳನ್ನು ಘೋಷಿಸಿಕೊಂಡು ಬಂದರು. ಟಿವಿಯಿಂದ ಹಿಡಿದು ಇಡ್ಲಿಯವರೆಗೆ ಪುಕ್ಕಟೆ ನೀಡಿದರು. ಪುಕ್ಕಟೆ ಭಾಗ್ಯಗಳ ತವರೂರು ತಮಿಳುನಾಡು ಎಂದರೂ ತಪ್ಪಲ್ಲ. ಈಗ ಅಲ್ಲಿಯ ಹೊಸ ಮುಖ್ಯಮಂತ್ರಿ ಇನ್ನೂರು ಯುನಿಟ್ ವಿದ್ಯುತ್ ಪುಕ್ಕಟೆ ನೀಡುವುದಾಗಿ ಘೋಷಿಸಿದ್ದಾರೆ. ಜನರಿಗೂ ಅದೇ ಬೇಕಾಗಿದೆ. ಹೇಳಿ ಕೇಳಿ ಪ್ರಜಾಪ್ರಭುತ್ವ. ಏನೂ ಹೇಳುವಂತಿಲ್ಲ.