Dr D C Nanjunda Column: 80-ಜಿ ವಿನಾಯಿತಿ ರದ್ದು, ಎನ್‌ಜಿಒಗಳಿಗೆ ಕೊನೆಯ ಮೊಳೆ
ಶಾಲೆಗಳು, ಆಸ್ಪತ್ರೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಪರಿಸರ ಸಂರ ಕ್ಷಣೆ, ವಿಪತ್ತು ಪರಿಹಾರ ಮತ್ತು ಬಡ ಕುಟುಂಬಗಳ ಜೀವನೋಪಾಯದಂಥ ಹಲವು ಕ್ಷೇತ್ರ ಗಳಲ್ಲಿ 80-ಜಿ ಪ್ರಮುಖ ಪ್ರೇರಣೆ ಆಗಿತ್ತು. ಇದರಿಂದ ಎನ್‌ಜಿಒಗಳಿಗೆ ಸಾಮಾಜಿಕ ಸೇವೆಗಳನ್ನು ಮುಂದುವರಿಸಲು ಸಹಾಯವಾಗುತ್ತಿತ್ತು.
-
ಚಿಂತನ- ಮಂಥನ
ಡಾ.ಡಿ.ಸಿ.ನಂಜುಂಡ
ಭಾರತದಲ್ಲಿ ದಾನ ಸಂಸ್ಕೃತಿಯು ಸಮಾಜದ ಆತ್ಮಸಾಕ್ಷಿಯಂತೆ ಪರಿಗಣಿಸಲ್ಪಟ್ಟಿದೆ. ದಾನಿ ಗಳು ತಮ್ಮ ಆದಾಯದಿಂದ ನೋಂದಾಯಿತ ಎನ್ಜಿಒಗಳು (ಸ್ವಯಂಸೇವಾ ಸಂಸ್ಥೆಗಳು), ಧಾರ್ಮಿಕ ಸಂಸ್ಥೆಗಳು, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್'ಜಿಒ ಗಳಿಗೆ ವೈಯಕ್ತಿಕ ದಾನ/ಕೊಡುಗೆ ನೀಡುತ್ತಿದ್ದರು. ಇದರಿಂದಾಗಿ ಸಮಾಜದ ಅತಿ ಅಗತ್ಯ ವಿರುವ ಕ್ಷೇತ್ರಗಳಿಗೆ ನೆರವು ಸಿಗುತ್ತಿತ್ತು.
ಇತ್ತೀಚೆಗೆ ಸರಕಾರವು ಹೊಸ ತೆರಿಗೆ ನಿಯಮವನ್ನು ಪರಿಚಯಿಸಿದ್ದು, ಇದರಿಂದ 80-ಜಿ ಸೆಕ್ಷನ್ ಅಡಿಯಲ್ಲಿ ಲಭ್ಯವಾಗುವ ವೈಯಕ್ತಿಕ ದಾನ ರಿಯಾಯಿತಿಗಳು ಸಂಪೂರ್ಣ ರದ್ದಾ ಗಿದೆ. 80-ಜಿ ಸೆಕ್ಷನ್ ಎಂದರೆ ನೋಂದಾಯಿತ ಎನ್'ಜಿಒಗಳಿಗೆ, ಧಾರ್ಮಿಕ, ಶೈಕ್ಷಣಿಕ, ಸಾರ್ವಜನಿಕ ಉಪಯೋಗದ ಸಂಸ್ಥೆಗಳಿಗೆ ನೀಡಿದ ವೈಯಕ್ತಿಕ ದಾನದಲ್ಲಿ ತೆರಿಗೆ ಕಡಿತ ಪಡೆಯುವ ಅವಕಾಶ ಇತ್ತು.
ಇದರಿಂದ ದಾನಿಗಳಿಗೆ ತಮ್ಮ ಕೊಡುಗೆಯನ್ನು ತೆರಿಗೆ ಲಾಭದೊಂದಿಗೆ ನೀಡಲು ಪ್ರೇರಣೆ ಸಿಗುತ್ತಿತ್ತು. ಉದಾಹರಣೆಗೆ ಒಂದು ಎನ್‌ಜಿಒಗೆ 1000 ರುಪಾಯಿ ದಾನ ಮಾಡಿದರೆ, 80-ಜಿ ಸೆಕ್ಷನ್ ಅಡಿಯಲ್ಲಿ ಶೇ.50ರಷ್ಟು ರಿಯಾಯತಿ ಇದ್ದರೆ 500 ರೂ. ತೆರಿಗೆ ವಿನಾಯಿತಿಯು ದಾನಿಗಳಿಗೆ ಸಿಗುತ್ತಿತ್ತು.
ಇದರಿಂದ ವ್ಯಕ್ತಿಗತ ದಾನಕ್ಕೆ ನೇರ ಆರ್ಥಿಕ ಪ್ರೋತ್ಸಾಹ ದೊರಕುತ್ತಿತ್ತು. ಈ ಹಿಂದೆ 35-ಎ.ಸಿ. ಸೆಕ್ಷನ್ ಭಾರತದಲ್ಲಿ ಆದಾಯ ತೆರಿಗೆ ಕಾಯ್ದೆಯ ಒಂದು ವಿಭಾಗವಾಗಿತ್ತು. ಈ ಸೆಕ್ಷನ್ ಅಡಿಯಲ್ಲಿ ಸಾಮಾಜಿಕ ಅಥವಾ ಚಾರಿಟಿ ಯೋಜನೆಗಳಿಗೆ ದೇಣಿಗೆ ನೀಡಿದರೆ ಶೇ.100ರಷ್ಟು ತೆರಿಗೆ ಕಡಿತ ಪಡೆಯಲು ಅವಕಾಶ ಇತ್ತು.
2017ರ ಏಪ್ರಿಲ್ 1ರಿಂದ ಈ 35-ಎ.ಸಿ. ಸೆಕ್ಷನ್ ಅನ್ನು ಸರಕಾರ ರದ್ದು ಮಾಡಿದೆ. ಅದರ ನಂತರ ಈ ಸೆಕ್ಷನ್ ಅಡಿಯಲ್ಲಿ ತೆರಿಗೆ ಕಡಿತ ಪಡೆಯಲು ಸಾಧ್ಯವಿಲ್ಲ. ಈ ಎರಡು ಆದಾಯ ತೆರಿಗೆ ವಿನಾಯಿತಿಯಿಂದಾಗಿ ಎನ್‌ಜಿಒಗಳು ತಮ್ಮ ಸಮಾಜಮುಖಿ ಕೆಲಸಗಳಿಗೆ ಸಂಪನ್ಮೂಲವನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುತ್ತಿತ್ತು.
ಇದನ್ನೂ ಓದಿ: Dr D C Nanjunda Column: 2050ರಲ್ಲಿ 1 ಕೋಟಿ ರೂಪಾಯಿ ಹಣ 21 ಲಕ್ಷಕ್ಕೆ ಸಮವೇ ?!
ಶಾಲೆಗಳು, ಆಸ್ಪತ್ರೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ವಿಪತ್ತು ಪರಿಹಾರ ಮತ್ತು ಬಡ ಕುಟುಂಬಗಳ ಜೀವನೋಪಾಯದಂಥ ಹಲವು ಕ್ಷೇತ್ರಗಳಲ್ಲಿ 80-ಜಿ ಪ್ರಮುಖ ಪ್ರೇರಣೆ ಆಗಿತ್ತು. ಇದರಿಂದ ಎನ್‌ಜಿಒಗಳಿಗೆ ಸಾಮಾಜಿಕ ಸೇವೆಗಳನ್ನು ಮುಂದುವರಿಸಲು ಸಹಾಯವಾಗುತ್ತಿತ್ತು.
ಭಾರತದಲ್ಲಿ ಎನ್‌ಜಿಒಗಳ ಮೂಲಕ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದರು. 80-ಜಿ ರಿಯಾಯತಿಯು, ದಾನಿಗಳಿಗೆ ಪ್ರೇರಣೆ ನೀಡುವ ಮೂಲಕ ಸಮಾಜದಲ್ಲಿ ದಾನ ಸಂಸ್ಕೃತಿಯನ್ನು ಬೆಳೆಸಲು ಮಹತ್ವಪೂರ್ಣ ಸಾಧನವಾಗಿತ್ತು. ಆದರೆ 2026ರ ಏಪ್ರಿಲ್ ನಂತರ ಹೊಸ ತೆರಿಗೆ ನಿಯಮದಲ್ಲಿ ಇದು ರದ್ದಾಗಿರುವುದು ಎನ್‌ಜಿಒಗಳಿಗೆ ಸವಾಲಾಗು ತ್ತಿದೆ.
ಎನ್‌ಜಿಒಗಳು ನಿಧಾನವಾಗಿ ಕಣ್ಣು ಮುಚ್ಚುವಂಥ ಪರಿಸ್ಥಿತಿ ಎದುರಾಗಿದೆ. ಹೊಸ ತೆರಿಗೆ ನಿಯಮವು ವ್ಯಕ್ತಿಗತವಾಗಿ ಕಡಿಮೆ ಶ್ರೇಣಿಯ ತೆರಿಗೆ ದರಗಳನ್ನು ನೀಡುತ್ತಿದ್ದು, ಬಹು ಮಟ್ಟದ ರಿಯಾಯಿತಿಗಳು ಮತ್ತು 80-ಜಿ ಸೆಕ್ಷನ್ ಅಡಿಯಲ್ಲಿ ಲಭ್ಯವಿರುವ ದಾನಕ್ಕೆ ಸಂಬಂಧಿಸಿದ ಎಲ್ಲಾ ವಿಶೇಷ ಕೊಡುಗೆಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ದಾನ ಮಾಡುವ ಪ್ರೇರಣೆ ಕಡಿಮೆಯಾಗಿದ್ದು, ಮಧ್ಯಮ ಮತ್ತು ಉನ್ನತ ಆದಾಯದ ವರ್ಗದ ದಾನಿಗಳು ತಮ್ಮ ದಾನವನ್ನು ಕಡಿಮೆ ಮಾಡಬಹುದು ಎನ್ನುವ ಚರ್ಚೆ ನಡೆಯುತ್ತಿದೆ.
ಇದರಿಂದಾಗಿ ಎನ್ʼಜಿಒಗಳಿಗೆ ದಾನ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗುತ್ತದೆ. ಹೊಸ ತೆರಿಗೆ ನಿಯಮವು ಸರಳೀಕರಣಕ್ಕಾಗಿ ತಕ್ಕದ್ದಾದರೂ, ದಾನ ಸಂಸ್ಕೃತಿಯ ಮೇಲೆ ಅದು ದೀರ್ಘಾವಧಿಯ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಭಾರತದಲ್ಲಿ ಎನ್‌ಜಿಒಗಳು ತಮ್ಮ ಕಾರ್ಯತತ್ಪರತೆಗೆ ಬಹುತೇಕವಾಗಿ ವ್ಯಕ್ತಿಳಿಂದ ಮತ್ತು ಕಂಪನಿ/ಸಂಸ್ಥೆಗಳಿಂದ ಬರುವ ದಾನದ ಮೇಲೆ ಅವಲಂಬಿತವಾಗಿವೆ. 80-ಜಿ ರಿಯಾಯಿತಿ ಯ ಕಡಿತವು ಸಣ್ಣ ಎನ್‌ಜಿಒಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಲು ಕಾರಣ ವಾಗುತ್ತಿದೆ. ಇದರಿಂದ ಹಲವಾರು ಪ್ರಾಜೆಕ್ಟ್‌ಗಳು, ಸೇವಾ ಕಾರ್ಯಕ್ರಮಗಳು ಮತ್ತು ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ದಾನವು ಕಡಿಮೆಯಾಗುವುದರಿಂದ ಸಾಮಾಜಿಕ ಸೇವೆಗಳ ಪ್ರಮಾಣ ಕುಸಿಯುತ್ತದೆ. ತೆರಿಗೆ ರಿಯಾಯಿತಿ ಇಲ್ಲದ ಕಾರಣ, ದಾನಿಗಳು ತಮ್ಮ ಆದಾಯವನ್ನು ವೈಯಕ್ತಿಕ ಖರ್ಚಿಗೆ ಬಳಸಬಹುದು ಅಥವಾ ಬೇರೇನಾದರೂ ಹೂಡಿಕೆ ಮಾಡಲು ಆಯ್ಕೆ ಮಾಡಬಹುದು. ಕಂಪನಿಗಳು ತಮ್ಮ ಸಿಎಸ್‌ಆರ್ ನಿಯಮದಡಿ ಎನ್‌ಜಿಒಗಳಿಗೆ ದಾನ ನೀಡಬಹುದು. ಆದರೆ ವೈಯಕ್ತಿಕ ದಾನ ಕಡಿಮೆಯಾಗುವ ಸಾಧ್ಯತೆ ಇದೆ.
ಭಾರತದಲ್ಲಿ ವಿದೇಶಿ ಎನ್‌ಜಿಒಗಳು ಸಹ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪರಿಸರ ಸಂಬಂಧಿತ ಕಾರ್ಯಕ್ರಮಗಳಿಗೆ ಹಣಕಾಸು ಸಂಗ್ರಹಿ ಸಲು ವಿಶೇಷ ಫಂಡ್ ರೈಸಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತವೆ. ಈ ಮೂಲಕ ಅವಕ್ಕೆ ತಮ್ಮ ಯೋಜನೆಗಳ ಕಾರ್ಯಾಚರಣೆಗೆ ಅಗತ್ಯವಿರುವ ಸಂಪನ್ಮೂಲ ದೊರಕುತ್ತದೆ.
ವಿದೇಶಿ ದಾನಿಗಳನ್ನು ಆಕರ್ಷಿಸಲು ಈ ಕಾರ್ಯಕ್ರಮಗಳು ಡಿಜಿಟಲ್ ತಂತ್ರಜ್ಞಾನ, ಕ್ರೌಡ್ ಫಂಡಿಂಗ್, ವೆಬ್‌ಸೈಟ್ ಅಭಿಯಾನಗಳು, ಸಾಮಾಜಿಕ ಮಾಧ್ಯಮ ಬಳಕೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಣ ಸಂಗ್ರಹಿಸುವ ವಿಧಾನಗಳನ್ನು ಅನುಸರಿಸು ತ್ತವೆ. ಭಾರತದಲ್ಲಿ ವಿದೇಶಿ ದಾನ ಪಡೆದುಕೊಳ್ಳಲು ಎಲ್ಲಾ ಎನ್‌ಜಿಒಗಳು ಎಫ್ಸಿಆರ್‌ಎ ರಿಜಿಸ್ಟ್ರೇಷನ್ ಹೊಂದಿರಬೇಕು.
ಇದರಿಂದ ಚಟುವಟಿಕೆಗಳು ಕಾನೂನುಬದ್ಧವಾ ಗಿರುತ್ತವೆ. ಈ ಹಣ ಸಂಗ್ರಹಣೆ ಕಾರ್ಯ ಕ್ರಮಗಳು, ವಿದೇಶಿ ದಾನಿಗಳಿಗೆ ನೇರವಾಗಿ ಸಮಾಜದ ಅಭಿವೃದ್ಧಿಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡುತ್ತವೆ ಮತ್ತು ಎನ್‌ಜಿಒಗಳಿಗೆ ಸ್ಥಿರ ಹಣಕಾಸಿನ ಮೂಲವನ್ನು ಒದಗಿ ಸುವ ಮೂಲಕ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪರಿಸರ ಸಂರಕ್ಷಣೆ ಮತ್ತು ವಿಪತ್ತು ಪರಿಹಾರದಂಥ ಸೇವೆಗಳನ್ನು ಸುಗಮವಾಗಿ ಮುಂದುವರಿಸಲು ಸಹಾಯ ಮಾಡುತ್ತವೆ.
ಇತ್ತೀಚಿನ ವರ್ಷಗಳಲ್ಲಿ, ವಿದೇಶಿ ಫಂಡ್ ರೈಸಿಂಗ್ ಚಟುವಟಿಕೆಗಳು ಡಿಜಿಟಲ್ ಪ್ಲಾಟ್ ಫಾರ್ಮ್‌ಗಳು ಮತ್ತು ಆನ್‌ಲೈನ್ ದಾನ ಅಭಿಯಾನಗಳ ಮೂಲಕ ಹೆಚ್ಚಾಗಿ ಜನಪ್ರಿಯ ವಾಗಿವೆ. ಇದರಿಂದ ಎನ್‌ಜಿಒಗಳು ಬೇರೆ ದೇಶಗಳಿಂದ ದಾನ ಪಡೆಯುತ್ತಿವೆ ಮತ್ತು ಸಾಮಾಜಿಕ ಸೇವೆಗಳಲ್ಲಿ ನೇರ ಪ್ರಭಾವ ಬೀರುತ್ತಿವೆ.
ವಿದೇಶಿ ಎನ್‌ಜಿಒಗಳು ಹಣ ಸಂಗ್ರಹಿಸುವ ಕಾರ್ಯಕ್ರಮಗಳು ಸಾಮಾಜಿಕ ಜಾಗೃತಿ, ಸಂವೇದನೆ ಮತ್ತು ಮಾನವೀಯತೆ ಬೆಳೆಸುವಲ್ಲಿ ಸಹ ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಹಾಗೂ ದಾನಿಗಳು ತಮ್ಮ ಕೊಡುಗೆಗಳ ಮೂಲಕ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಯನ್ನು ಪೂರೈಸಲು ಪ್ರೇರಣೆಯಾಗುತ್ತಿವೆ.
ಆದರೆ ಹೊಸ ತೆರಿಗೆ ನಿಯಮ ಇವೆಲ್ಲದಕ್ಕೂ ಅಡ್ಡಿಯಾಗುತ್ತದೆ. ಕ್ರಮೇಣ ಇವುಗಳು ಕೂಡ ಮುಚ್ಚಿದರೂ ಆಶ್ಚರ್ಯವಿಲ್ಲ. ಅಮೆರಿಕ ಮತ್ತು ಯುರೋಪಿನ ಎನ್‌ಜಿಒಗಳು ತಮ್ಮ ದೇಶಗಳಲ್ಲಿ ಹಣಕಾಸು ಸಂಗ್ರಹಿಸಲು ಅತ್ಯಂತ ಆಧುನಿಕ ಮತ್ತು ನವೀನ ತಂತ್ರಗಳನ್ನು ಬಳಸುತ್ತವೆ. ಅವುಗಳಲ್ಲಿ ಪ್ರಮುಖ ವಿಧಾನಗಳು ಡಿಜಿಟಲ್ ಫಂಡ್ ರೈಸಿಂಗ್, ಕ್ರೌಡ್ ಫಂಡಿಂಗ್, ಇಮೇಲ್ ಅಭಿಯಾನಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು, ವಾರ್ಷಿಕ ದಾನಿಗಳು ಮತ್ತು ಸದಸ್ಯತ್ವ ಯೋಜನೆಗಳು ಇತ್ಯಾದಿ. ಕೆಲವು ದೊಡ್ಡ ಎನ್‌ಜಿಒಗಳು ಇವೆಂಟ್‌ಗಳು, ಚಾರಿಟಿ ವಾಕ್, ಸಾಂಸ್ಕೃತಿಕ ಉತ್ಸವಗಳು ಮತ್ತು ಲೈವ್ ಶೋಗಳನ್ನು ಹಮ್ಮಿಕೊಂಡು ದಾನಿಗಳನ್ನು ಆಕರ್ಷಿಸುತ್ತವೆ.
ಯುರೋಪ್‌ನಲ್ಲಿ, ಕೆಲವು ಎನ್‌ಜಿಒಗಳು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿ ಕೊಂಡು ದಾನವನ್ನು ಸಂಗ್ರಹಿಸುತ್ತವೆ. ಅಮೆರಿಕದಲ್ಲಿ, ದಾನಿಗಳಿಗೆ ಟ್ಯಾಕ್ಸ್ ಕ್ರೆಡಿಟ್ ಅಥವಾ ತೆರಿಗೆ ರಿಯಾಯಿತಿ ದೊರೆಯುವ ಅನುಮತಿ ನೀಡುವ ಮೂಲಕ ದಾನ ಪ್ರೇರಣೆ ಯನ್ನು ಹೆಚ್ಚಿಸಲಾಗುತ್ತದೆ.
ಹೆಚ್ಚಿನ ಸಂಸ್ಥೆಗಳು ತಮ್ಮ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದಾನಿಗಳ ಮನವೊಲಿಸುತ್ತವೆ. ಅದಲ್ಲದೆ ವಾಹನಗಳ ದಾನ, ಕ್ರಿಪ್ಟೋ ದಾನ, ಚಂದಾ ಆಧಾರಿತ ಮಾದರಿಗಳು ಕೂಡ ಇದರಲ್ಲಿ ಸೇರಿವೆ. ಈ ವಿಧಾನಗಳು ದಾನಿಗಳಿಗೆ ಸುಲಭ, ಸುರಕ್ಷಿತ ಮತ್ತು ತ್ವರಿತ ದಾನ ಮಾಡಲು ಅವಕಾಶ ನೀಡುತ್ತವೆ.
80-ಜಿ ರದ್ದಾದರೂ ಎನ್‌ಜಿಒಗಳಿಗೆ ಕೆಲವು ಪರಿಹಾರ ಮಾರ್ಗಗಳೂ ಇವೆ. ದಾನಿಗಳ ಮನವೊಲಿಸುವುದು ಮತ್ತು ಅವರ ದಾನದಿಂದ ಸಮಾಜಕ್ಕೆ ಉಂಟಾಗುವ ಉತ್ತಮ ಪರಿಣಾಮವನ್ನು ತಿಳಿಸುವುದು ಇಂಥದೊಂದು ಮಾರ್ಗ. ಹಳೆಯ ತೆರಿಗೆ ನಿಯಮದ ಅನುಸಾರ ಕೆಲವು ವರ್ಷ ಎನ್‌ಜಿಒಗಳಿಗೆ ದಾನ ನೀಡುವುದು ಇನ್ನೊಂದು ಉಪಾಯ.
ನಂತರ ಹೊಸ ಹೊಸ ತೆರಿಗೆ ನಿಯಮಕ್ಕೆ ಬದಲಾಗುವುದು. ಆದರೆ ಇದು ಅಷ್ಟೇನೂ ಪರಿಣಾಮಕಾರಿಯಲ್ಲ. ಡಿಜಿಟಲ್ ತಂತ್ರದ ಮೂಲಕ ಸಣ್ಣ ದಾನಿಗಳನ್ನು ಆಕರ್ಷಿಸಲು ಕ್ರೌಡ್-ಂಡಿಂಗ್ ಮತ್ತು ಆನ್‌ಲೈನ್ ಅಭಿಯಾನಗಳನ್ನು ಹಮ್ಮಿಕೊಳ್ಳುವುದು, ಸಾಮಾಜಿಕ ಹೊಣೆಗಾರಿಕೆ ಮತ್ತು ಮಾನವೀಯತೆಯ ಮಹತ್ವವನ್ನು ದಾನಿಗಳಿಗೆ ಮನವರಿಕೆ ಮಾಡು ವುದು ಇತ್ಯಾದಿ ಮಾರ್ಗವನ್ನು ಅನುಸರಿಸಬೇಕು.
ಎನ್‌ಜಿಒಗಳು ತಮ್ಮ ಕಾರ್ಯಕ್ಷೇತ್ರವನ್ನು ಉಳಿಸಲು ಹೊಸ ತಂತ್ರಗಳು ಮತ್ತು ಪ್ರಾಯೋ ಗಿಕ ಮಾರ್ಗಗಳನ್ನು ಅಳವಡಿಸಬೇಕು, 80-ಜಿ ರಿಯಾಯತಿ ಕೇವಲ ಹಣಕಾಸಿನ ಲಾಭಕ್ಕಾಗಿ ಯೇ ಅಲ್ಲ, ಇದು ಸಮಾಜದ ಮಾನವೀಯತೆಯ, ಸಹಾನುಭೂತಿಯ ಮತ್ತು ಜವಾಬ್ದಾರಿ ಯ ಪ್ರತೀಕವಾಗಿದೆ ಎಂದು ಅರಿಯಬೇಕು.
ತೆರಿಗೆ ರಿಯಾಯಿತಿ ಇಲ್ಲದ ಸಂದರ್ಭದಲ್ಲೂ, ಪ್ರತಿಯೊಬ್ಬ ನಾಗರಿಕರೂ ಸಮಾಜದ ಒಳಿತಿಗಾಗಿ ದಾನವನ್ನು ನೀಡಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಆಧುನಿಕತೆಯೊಂದಿಗೆ ಮಾನವೀಯತೆಗೆ ಸಹ ಮಂಕು ಕವಿಯಬಹುದು.
ದಾನ ಸಂಸ್ಕೃತಿಯನ್ನು ಹೊಸ ರೂಪದಲ್ಲಿ ಮುಂದುವರಿಸಲು ಸಹಜ ಮಾರ್ಗಗಳನ್ನು ಅನ್ವೇಷಿಸಬೇಕು ಮತ್ತು ಹೊಸ ತಂತ್ರಗಳನ್ನು ಹಮ್ಮಿಕೊಂಡು ಎನ್‌ಜಿಒಗಳ ಕಾರ್ಯ ವನ್ನು ಬೆಂಬಲಿಸಬೇಕು. ಅಲ್ಲದೆ, ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಮತ್ತು ಸಮಾಜ ಸಹಯೋಗಕ್ಕೆ ಮುಂದಾಗಿ, ದಾನ ಪ್ರೋತ್ಸಾಹ ಮತ್ತು ಸಾಮಾಜಿಕ ಅಭಿವೃದ್ಧಿ ಉದ್ದೇಶಗಳನ್ನು ಮರುಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು.
ತನ್ಮೂಲಕ ದಾನ ಸಂಸ್ಕೃತಿಯು ಕೇವಲ ಹಣಕಾಸಿನ ಲಾಭಕ್ಕಾಗಿಯೇ ಅಲ್ಲದೆ, ಒಂದು ನೈತಿಕ, ಮಾನವೀಯ ಮತ್ತು ಸಾಮಾಜಿಕ ಕರ್ತವ್ಯವಾಗಿ ಪರಿಣಮಿಸುತ್ತದೆ ಮತ್ತು ಜನರಿಗೆ ಸಹಾಯಮಾಡುವ ಮಹತ್ವಪೂರ್ಣ ಸಾಧನವಾಗುತ್ತದೆ.
ಹೊಸ ತೆರಿಗೆ ನಿಯಮದೊಂದಿಗೆ 80-ಜಿ ರಿಯಾಯಿತಿ ಕಡಿತವಾಗಿದೆ ನಿಜ. ಆದರೆ ತೆರಿಗೆ ರಿಯಾಯಿತಿ ಇಲ್ಲದಿದ್ದರೂ ದಾನ ಮಾಡುವ ಪ್ರೇರಣೆಯನ್ನು ಮೂಡಿಸುವುದು ಇಂದು ಅಗತ್ಯವಾಗಿದೆ. ಇದು ಭಾರತದ ದಾನ ಸಂಸ್ಕೃತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸರಕಾರವು ಸರಳೀಕರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡರೂ, ಎನ್‌ಜಿಒ ಗಳ ಮೂಲವನ್ನು ಹಾಳು ಮಾಡದಂತೆ ದಾನ ಸಂಸ್ಕೃತಿಯನ್ನು ಕಾಯ್ದುಕೊಳ್ಳುವುದು ಅಗತ್ಯ.
80-ಜಿ ರಿಯಾಯಿತಿಯು ಯಾವುದೇ ದೇಶದಲ್ಲಿ ದಾನ ಸಂಸ್ಕೃತಿಯನ್ನು ಬೆಂಬಲಿಸುವ ಪ್ರಮುಖ ಸೂತ್ರವಾಗಿದ್ದು, ಭಾರತದ ಎನ್‌ಜಿಒಗಳು ತಮ್ಮ ಸಾಮಾಜಿಕ ಸೇವೆ ಮುಂದು ವರಿಯುವಂತೆ, ದಾನಿಗಳ ಪ್ರೇರಣೆ, ಸರಕಾರದ ನೀತಿಗಳು ಮತ್ತು ಸಾರ್ವಜನಿಕ ಜಾಗೃತಿ ಇಂದು ತೀರಾ ಅಗತ್ಯವಾಗಿವೆ. ಮುಖ್ಯವಾಗಿ ಕೇಂದ್ರ ಸರಕಾರವು ಈ ಬಗ್ಗೆ ಆಲೋಚಿಸ ಬೇಕು. ಇದರಿಂದ ದಾನ ಸಂಸ್ಕೃತಿಯು ಶಾಶ್ವತವಾಗುತ್ತದೆ ಮತ್ತು ಅವಶ್ಯಕತೆ ಇರುವ ಸಮಾಜಕ್ಕೆ ಅದರಿಂದ ಪರಿಣಾಮಕಾರಿಯಾಗಿ ಸಹಾಯವಾಗುತ್ತದೆ.
(ಲೇಖಕರು ಸಹ-ಪ್ರಾಧ್ಯಾಪಕರು)