ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ: ಆಯುರ್ವೇದದ ಸಮಗ್ರ ಪರಿಹಾರಗಳು

ಆಯುರ್ವೇದದಲ್ಲಿ ಋತುಚರ್ಯೆ ಎಂದರೆ ಋತುಗಳಿಗೆ ಅನುಗುಣವಾಗಿ ಜೀವನಶೈಲಿಯನ್ನು ರೂಪಿಸಿ ಕೊಳ್ಳುವುದು. ಪ್ರತಿಯೊಂದು ಋತುವೂ ತನ್ನದೇ ಆದ ಗುಣಗಳನ್ನು ಹೊಂದಿದೆ ಮತ್ತು ಅವು ದೇಹದ ದೋಷಗಳ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳಿಗೆ ಅನುಗುಣವಾಗಿ ಆಹಾರ, ನಿದ್ರೆ ಮತ್ತು ಆಚರಣೆಗಳನ್ನು ಹೊಂದಿಸಿಕೊಳ್ಳುವುದು ಆರೋಗ್ಯದ ಮೂಲ.

ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ: ಆಯುರ್ವೇದದ ಸಮಗ್ರ ಪರಿಹಾರಗಳು

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಶಿವಪ್ಪ ಎಂಬ ಒಬ್ಬ ಪರಿಶ್ರಮಿ ಕೃಷಿಕನಿದ್ದನು. ಗ್ರೀಷ್ಮ ಋತುವಿನ ಕಿಡಿಕಾರುವ ಬಿಸಿಲಿನಲ್ಲಿ ಬೆಳಗ್ಗೆ ಯಿಂದ ಸಂಜೆವರೆಗೆ ದುಡಿದ ಬಳಿಕ ಅವನಲ್ಲಿ ತೀವ್ರ ದಾಹ, ದಣಿವು, ತಲೆನೋವು ಮತ್ತು ಅಸಹನೆ ಕಾಣಿಸಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಅವನ ದೇಹ ದುರ್ಬಲವಾಗುತ್ತಿತ್ತು. ‘ಇದು ಬೇಸಗೆಯ ಸಹಜ ಪರಿಣಾಮವೇ ಇರಬಹುದು’ ಎಂದು ಅವನು ಭಾವಿಸಿದ್ದ.

ಒಂದು ದಿನ ಅವನು ಆಯುರ್ವೇದ ವೈದ್ಯರನ್ನು ಭೇಟಿಯಾದಾಗ ಅವರು, “ಬಿಸಿಲು ಸಮಸ್ಯೆಯಲ್ಲ; ಪ್ರಕೃತಿಗೆ ವಿರುದ್ಧವಾಗಿ ಬದುಕುವುದೇ ಸಮಸ್ಯೆ" ಎಂದು ಹೇಳಿ ಗ್ರೀಷ್ಮದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು. ಕೆಲವೇ ದಿನಗಳಲ್ಲಿ ಅವನ ದೇಹದಲ್ಲಿ ತಂಪು, ಮನಸ್ಸಿನಲ್ಲಿ ಶಾಂತಿ ಮತ್ತು ಶಕ್ತಿ ಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂತು.

ಋತುಚರ್ಯೆ: ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನ

ಆಯುರ್ವೇದದಲ್ಲಿ ಋತುಚರ್ಯೆ ಎಂದರೆ ಋತುಗಳಿಗೆ ಅನುಗುಣವಾಗಿ ಜೀವನಶೈಲಿಯನ್ನು ರೂಪಿಸಿಕೊಳ್ಳುವುದು. ಪ್ರತಿಯೊಂದು ಋತುವೂ ತನ್ನದೇ ಆದ ಗುಣಗಳನ್ನು ಹೊಂದಿದೆ ಮತ್ತು ಅವು ದೇಹದ ದೋಷಗಳ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳಿಗೆ ಅನುಗುಣವಾಗಿ ಆಹಾರ, ನಿದ್ರೆ ಮತ್ತು ಆಚರಣೆಗಳನ್ನು ಹೊಂದಿಸಿಕೊಳ್ಳುವುದು ಆರೋಗ್ಯದ ಮೂಲ.

ಗ್ರೀಷ್ಮ ಋತು: ಉಷ್ಣತೆ ಮತ್ತು ರೂಕ್ಷತೆಯ ಕಾಲ

ಗ್ರೀಷ್ಮದಲ್ಲಿ ಸೂರ್ಯನ ತಾಪ ಅತ್ಕಧಿಕವಾಗಿದ್ದು, ಗಾಳಿ ಒಣಗುತ್ತದೆ. ದೇಹದ ಜಲಾಂಶ ಕಡಿಮೆ ಯಾಗುತ್ತದೆ. ಇದರ ಪರಿಣಾಮವಾಗಿ ದಾಹ, ದಣಿವು, ಉಷ್ಣತೆ ಹೆಚ್ಚಾಗುತ್ತದೆ. ವಾತ ಸಂಚಯ, ಪಿತ್ತ ಚಯ ಮತ್ತು ಕಫ ಕ್ಷಯವಾಗಿ ದೇಹಬಲವು ಹೀನವಾಗುತ್ತದೆ. ಗ್ರೀಷ್ಮದಲ್ಲಿ ದೇಹವನ್ನು ತಂಪಾಗಿ ಡುವ ಸಮಗ್ರ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ:

1. ಶೀತಲ ಸ್ವಭಾವದ ಆಹಾರ ಸೇವನೆ

ಗ್ರೀಷ್ಮ ಋತುವಿನಲ್ಲಿ ಆಹಾರವು ಹಗುರ, ಶೀತಲ ಮತ್ತು ಜೀರ್ಣಸೌಕರ್ಯಯುಕ್ತವಾಗಿರಬೇಕು. ಅಕ್ಕಿ, ಗೋಧಿ, ಹಾಲು, ತುಪ್ಪ, ದ್ರಾಕ್ಷಿ, ಕಲ್ಲಂಗಡಿ, ಸೌತೆಕಾಯಿ, ತೆಂಗಿನಕಾಯಿ ಮುಂತಾದವು ದೇಹಕ್ಕೆ ಶೀತಲತೆಯನ್ನು ನೀಡುತ್ತವೆ. ಇವುಗಳಲ್ಲಿ ಮಧುರ ರಸ ಹೆಚ್ಚಾಗಿದ್ದು ಪಿತ್ತ ಶಮನಕ್ಕೆ ಸಹಕಾರಿ. ಇದಕ್ಕೆ ವಿರುದ್ಧವಾಗಿ ಅತಿಯಾಗಿ ಖಾರ, ಉಪ್ಪು, ಹುಳಿ ಮತ್ತು ಕರಿದ ಆಹಾರಗಳು ದೇಹದ ಒಳಗಿನ ಉಷ್ಣತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಇವುಗಳನ್ನು ಕಡಿಮೆ ಮಾಡುವುದು ಅತ್ಯಂತ ಅಗತ್ಯ. ಗ್ರೀಷ್ಮದಲ್ಲಿ ಹೆಚ್ಚು ತಿನ್ನುವುದಕ್ಕಿಂತ, ಅಲ್ಪ ಪ್ರಮಾಣದಲ್ಲಿ, ಸರಿ ಯಾದ ಸಮಯದಲ್ಲಿ, ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಮುಖ್ಯ.

ಇದನ್ನೂ ಓದಿ: Dr Sadhanashree Column: ಆಮದಿಂದಲೇ ಅಲ್ಲವೇ ಆಮಯ ?

2. ಸಮರ್ಪಕ ದ್ರವಪಾನ: ದೇಹದ ಜೀವಾಳ

ಗ್ರೀಷ್ಮದಲ್ಲಿ ದೇಹದಿಂದ ಬೆವರಿನ ಮುಖಾಂತರ ಜಲಾಂಶ ಹೊರಹೋಗುತ್ತದೆ. ಇದರಿಂದ ದೇಹ ದಲ್ಲಿ ಶೋಷಣೆ ಉಂಟಾಗುತ್ತದೆ. ಆದ್ದರಿಂದ ದ್ರವಪಾನ ವನ್ನು ಹೆಚ್ಚಿಸಬೇಕು. ಆದರೆ ಬಾಯಾರಿಕೆಗೆ ತಕ್ಕಂತೆ! ಅತಿಯಾಗಿ ತಣ್ಣಗಿರುವ ಫ್ರಿಜ್ ನೀರನ್ನು ಸೇವಿಸು ವುದರಿಂದ ಅಗ್ನಿ ದುರ್ಬಲವಾಗುತ್ತದೆ. ಆದ್ದರಿಂದ ಸಹಜ ತಂಪಿನಲ್ಲಿರುವ ಪಾನೀಯಗಳನ್ನು ಸೇವಿಸುವುದು ಉತ್ತಮ. ಈ ಕಾಲದಲ್ಲಿ ಎಳನೀರಿನ ಸೇವನೆ ಅತ್ಯಂತ ಹಿತ !

ಆಯುರ್ವೇದದ ‘ಪಂಚಸಾರ’ ಪಾನಕ

ಬೆಲ್ಲ ಕರಗಿಸಿದ ನೀರಿಗೆ, ನಿಂಬೆಹಣ್ಣಿನ/ದ್ರಾಕ್ಷಿಯ ರಸ, ಚಿಟಿಕೆ ಶುಂಠಿಪುಡಿ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ತಯಾರಿಸುವ ಈ ಪಾನೀಯವನ್ನು ಸ್ವಲ್ಪ ಸಮಯ ಮಡಕೆಯಲ್ಲಿ ಇಟ್ಟು ತಂಪಾಗಿಸಿ ಸೇವಿಸುವುದರಿಂದ ದೇಹಕ್ಕೆ ಶಕ್ತಿ, ಶೀತಲತೆ ಸಿಗುತ್ತದೆ. ಇದು ದಾಹ ತಣಿಸಿ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.

3. ಮಧುರ, ತಿಕ್ತ, ಕಷಾಯ ರಸಗಳ ಸೇವನೆ

ಆಯುರ್ವೇದದ ಪ್ರಕಾರ ರಸ ದೇಹದ ದೋಷಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರೀಷ್ಮದಲ್ಲಿ ಮಧುರ, ತಿಕ್ತ, ಕಷಾಯ ರಸ ಗಳನ್ನು ಸೇವಿಸಬೇಕು. ಮಧುರ ರಸ ದೇಹವನ್ನು ಪೋಷಿಸುತ್ತದೆ, ತಿಕ್ತ ರಸ ದೇಹವನ್ನು ಶೋಧಿಸುತ್ತದೆ, ಕಷಾಯ ರಸ ಶೀತಲತೆ ನೀಡುತ್ತದೆ.

4. ಮಧ್ಯಾಹ್ನದ ಬಿಸಿಲಿನಿಂದ ದೂರವಿರಿ

ಗ್ರೀಷ್ಮದಲ್ಲಿ ಮಧ್ಯಾಹ್ನದ ಸೂರ್ಯನ ಕಿರಣಗಳು ಅತ್ಯಂತ ತೀಕ್ಷ್ಣವಾಗಿರುತ್ತವೆ. ಈ ಸಮಯದಲ್ಲಿ ಹೊರಗೆ ಹೋಗುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ದಣಿವು, ತಲೆನೋವು ಮತ್ತು ಹೀಟ್ ಸ್ಟ್ರೋಕ್ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಹೋಗಬೇಕಾದರೆ ತಲೆಯ ಭಾಗವನ್ನು ರಕ್ಷಿಸಿ ಕೊಳ್ಳುವುದು ಅಗತ್ಯ.

heavy heat

5. ಹತ್ತಿಯ ಹಗುರ ಉಡುಪು

ಹತ್ತಿ ಬಟ್ಟೆಗಳು ಬೆವರನ್ನು ಹೀರಿಕೊಳ್ಳುತ್ತವೆ ಮತ್ತು ದೇಹವನ್ನು ತಂಪಾಗಿಡುತ್ತವೆ. ಗ್ರೀಷ್ಮದಲ್ಲಿ ಗಾಢ ಬಣ್ಣದ ಬಟ್ಟೆಗಳು ತಾಪವನ್ನು ಹೆಚ್ಚು ಆಕರ್ಷಿಸುತ್ತವೆ. ಆದ್ದರಿಂದ ಲಘು ಬಣ್ಣದ, ಹಗುರ ಬಟ್ಟೆಗಳನ್ನು ಧರಿಸುವುದು ಉತ್ತಮ. ಸಿಂಥೆಟಿಕ್ ಬಟ್ಟೆಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿ ಸುತ್ತವೆ, ಆದ್ದರಿಂದ ಅವನ್ನು ತಪ್ಪಿಸುವುದು ಸೂಕ್ತ.

6. ಗುಲಾಬಿ ಚಂದನಾದಿ ಲೇಪನ

ಚಂದನದ ಲೇಪ, ಗುಲಾಬಿ ನೀರು ಮುಂತಾದವುಗಳು ದೇಹಕ್ಕೆ ತಕ್ಷಣ ಶೀತಲತೆ ನೀಡುತ್ತವೆ. ಚಂದನವು ಪಿತ್ತ ಶಮನದಲ್ಲಿ ಅತ್ಯಂತ ಪ್ರಸಿದ್ಧ. ತಲೆಗೆ, ಎದೆಗೆ ಅಥವಾ ಮುಖಕ್ಕೆ ಚಂದನ ಲೇಪನ ಹಚ್ಚುವುದರಿಂದ ಉಷ್ಣತೆ ಕಡಿಮೆಯಾಗುತ್ತದೆ. ಇವು ಮನಸ್ಸಿಗೂ ಶಾಂತಿಯನ್ನು ನೀಡುತ್ತವೆ.

7. ಹಗಲುನಿದ್ರೆ: ಗ್ರೀಷ್ಮದ ವಿಶೇಷ ಅನುಮತಿ

ಸಾಮಾನ್ಯವಾಗಿ ಹಗಲುನಿದ್ರೆ ಆಯುರ್ವೇದದಲ್ಲಿ ನಿಷೇಧಿತ. ಆದರೆ ಗ್ರೀಷ್ಮದಲ್ಲಿ ದೇಹಬಲ ಕಡಿಮೆ ಯಾಗಿರುವುದರಿಂದ ಸ್ವಲ್ಪ ಸಮಯ ಊಟಕ್ಕೆ ಮುನ್ನ ಖಾಲಿ ಹೊಟ್ಟೆಯಲ್ಲಿ ದಿನನಿದ್ರೆಗೆ ಅನು ಮತಿಸಲಾಗಿದೆ. ಇದು ದೇಹಕ್ಕೆ ವಿಶ್ರಾಂತಿ ನೀಡಿ ಶಕ್ತಿಯನ್ನು ಮರುಸ್ಥಾಪಿಸುತ್ತದೆ. ಆದರೆ ಅತಿಯಾಗಿ, ಊಟದ ನಂತರ ನಿದ್ರೆ ಮಾಡುವುದು ತಪ್ಪು.

8. ಸೌಮ್ಯ ವ್ಯಾಯಾಮ ಮತ್ತು ಯೋಗಾಭ್ಯಾಸ

ಗ್ರೀಷ್ಮದಲ್ಲಿ ಹೆಚ್ಚು ವ್ಯಾಯಾಮ ಮಾಡಿದರೆ ದೇಹದ ಶಕ್ತಿ ಕುಗ್ಗುತ್ತದೆ. ಆದ್ದರಿಂದ ಸೌಮ್ಯ ಯೋಗ, ಧ್ಯಾನ, ಪ್ರಾಣಾ ಯಾಮಗಳನ್ನು ಅಭ್ಯಾಸ ಮಾಡಬೇಕು. ವಿಶೇಷವಾಗಿ ಶೀತಲಿ, ಶೀತಕಾರಿ ಪ್ರಾಣಾ ಯಾಮಗಳು ದೇಹದ ಒಳಗಿನ ಉಷ್ಣತೆ ಯನ್ನು ಕಡಿಮೆ ಮಾಡುತ್ತವೆ.

9. ಶೀತಲ ಸ್ನಾನ ಮತ್ತು ಪರಿಸರ

ತಂಪಾದ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ದಿನಕ್ಕೆ ಕನಿಷ್ಠ 2 ಬಾರಿ ಸ್ನಾನ ಮಾಡುವುದು ಉಪಯುಕ್ತ. ಮನೆಯಲ್ಲಿ ಗಾಳಿಯ ಹರಿವು, ಹಸಿರು ಸಸ್ಯಗಳು, ನೀರಿನ ಸಾನ್ನಿಧ್ಯ ಇತ್ಯಾದಿಗಳು ವಾತಾವರಣವನ್ನು ತಂಪಾಗಿಡುತ್ತವೆ.

10. ಮನಃಶಾಂತಿ: ಆಂತರಿಕ ಶೀತಲತೆ

ಗ್ರೀಷ್ಮದಲ್ಲಿ ದೇಹದ ಜತೆಗೆ ಮನಸ್ಸೂ ಉಷ್ಣವಾಗುತ್ತದೆ. ಇದರಿಂದ ಕೋಪ, ಅಸಹನೆ ಹೆಚ್ಚಾಗ ಬಹುದು. ಧ್ಯಾನ, ಭಜನೆ, ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಶಾಂತಿ ಸಿಗುತ್ತದೆ. ಮನಸ್ಸು ಶಾಂತವಾಗಿದ್ದರೆ ದೇಹವೂ ಶೀತಲವಾಗಿರುತ್ತದೆ.

11. ರಾತ್ರಿ ಭೋಜನ

ಗ್ರೀಷ್ಮ ಋತುವಿನಲ್ಲಿ ದೇಹದ ಜೀರ್ಣಶಕ್ತಿ (ಅಗ್ನಿ) ಸ್ವಾಭಾವಿಕವಾಗಿ ಕಡಿಮೆಯಾಗಿರುತ್ತದೆ. ದಿನವಿಡೀ ಬಿಸಿಲಿನ ಪರಿಣಾಮದಿಂದ ದೇಹ ದಣಿದಿರುವುದ ರಿಂದ, ರಾತ್ರಿ ಸಮಯದಲ್ಲಿ ಜೀರ್ಣಕ್ಕೆ ಜಡವಾದ ಊಟವನ್ನು ಸೇವಿಸುವುದು ಜೀರ್ಣಕ್ರಿಯೆಗೆ ಒತ್ತಡ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಅಜೀರ್ಣ, ಉರಿಯೂತ, ಹೊಟ್ಟೆ ಉಬ್ಬರ ಮತ್ತು ನಿದ್ರೆಯ ಅಶಾಂತಿ ಕಾಣಿಸಿಕೊಳ್ಳ ಬಹುದು. ಆದ್ದರಿಂದ ಈ ಋತುವಿನಲ್ಲಿ ರಾತ್ರಿ ಭೋಜನವನ್ನು ತಗ್ಗಿಸುವುದು ಅಥವಾ ಸಂಪೂರ್ಣ ವಾಗಿ ಬಿಡುವುದು (ಅಪರೂಪವಾಗಿ, ದೇಹಕ್ಕೆ ಅನುಗುಣವಾಗಿ)

ಒಂದು ಉತ್ತಮ ಆಯ್ಕೆ ಎಂದು ಆಯುರ್ವೇದ ಸೂಚಿಸುತ್ತದೆ. ಇದಕ್ಕೆ ಬದಲು, ರಾತ್ರಿ ಸಮಯದಲ್ಲಿ ಒಂದು ಲೋಟ ಹಾಲಿಗೆ ಸ್ವಲ್ಪ ಕಲ್ಲು ಸಕ್ಕರೆ ಮತ್ತು ಸ್ವಲ್ಪ ಬೆಣ್ಣೆ ಸೇರಿಸಿ ಸೇವಿಸುವುದು ಅತ್ಯಂತ ಹಿತಕರ.

ಹಾಲು ಮಧುರ ರಸದೊಂದಿಗೆ ಶೀತಲ ಗುಣವನ್ನು ಹೊಂದಿದ್ದು, ದೇಹಕ್ಕೆ ಪೋಷಕತ್ವ ನೀಡುತ್ತದೆ. ಕಲ್ಲು ಸಕ್ಕರೆ ದೇಹವನ್ನು ತಂಪಾಗಿಸಿ ದಾಹವನ್ನು ಕಡಿಮೆ ಮಾಡುತ್ತದೆ. ಬೆಣ್ಣೆ ದೇಹದ ಒಣತನ ವನ್ನು ಕಡಿಮೆ ಮಾಡಿ, ವಾತ-ಪಿತ್ತವನ್ನು ಶಮನಗೊಳಿಸುತ್ತದೆ. ಈ ಸಂಯೋಜನೆ ದೇಹವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಕರಿರುತ್ತದೆ.

12. ಸಾತ್ವಿಕ ಜೀವನಶೈಲಿ ಅನುಸರಣೆ

ಗ್ರೀಷ್ಮ ಋತುವಿನಲ್ಲಿ ಸಂಜೆ ಸಮಯವನ್ನು ಶಾಂತ, ಶೀತಲ ಮತ್ತು ಸಾತ್ವಿಕವಾಗಿ ಕಳೆಯುವುದು ಅತ್ಯಂತ ಮುಖ್ಯ. ದಿನವಿಡೀ ಬಿಸಿಲಿನ ಪರಿಣಾಮದಿಂದ ದೇಹ ಮತ್ತು ಮನಸ್ಸು ಎರಡೂ ಒತ್ತಡ ದಲ್ಲಿರುತ್ತವೆ. ಆದ್ದರಿಂದ ಸಂಜೆ ವೇಳೆಯಲ್ಲಿ ತೀವ್ರ ಶಾರೀರಿಕ ಅಥವಾ ಮಾನಸಿಕ ಚಟುವಟಿಕೆ ಗಳನ್ನು ತಪ್ಪಿಸಿ, ಶಾಂತ ವಾತಾವರಣವನ್ನು ಆರಿಸಿಕೊಳ್ಳಬೇಕು. ಸಂಜೆಯಲ್ಲಿ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು, ಹಸಿರು ಪರಿಸರದಲ್ಲಿ ನಡೆಯುವುದು, ಮಧುರವಾದ ಸಂಗೀತ ಕೇಳು ವುದು, ಧ್ಯಾನ ಅಥವಾ ಭಜನೆ ಮಾಡು ವುದು ಮನಸ್ಸಿನ ಉಷ್ಣತೆಯನ್ನು ಕಡಿಮೆ ಮಾಡಿ, ದೇಹ-ಮನಸ್ಸಿಗೆ ಸಮತೋಲನವನ್ನು ನೀಡುತ್ತವೆ.

13. ಸಂಸ್ಕರಿತ ಜಲ ಸೇವನೆ

ಗ್ರೀಷ್ಮ ಋತುವಿನಲ್ಲಿ ದೇಹದ ಜಲಾಂಶವು ನಿರಂತರವಾಗಿ ಕಡಿಮೆಯಾಗುತ್ತಿರುತ್ತದೆ. ಸಾಮಾನ್ಯ ನೀರನ್ನು ಮಾತ್ರ ಸೇವಿಸುವುದರಿಂದ ದಾಹ ತಣಿಯಬಹುದು, ಆದರೆ ದೇಹಕ್ಕೆ ಅಗತ್ಯವಾದ ಶೀತಲ ಗುಣ ಮತ್ತು ಔಷಧಿಯ ಪೋಷಕತೆ ಸಿಗು ವುದಿಲ್ಲ. ಆದ್ದರಿಂದ ಆಯುರ್ವೇದವು ‘ಸಂಸ್ಕರಿತ ಜಲ’ ಎಂಬ ವಿಶಿಷ್ಟ ವಿಧಾನವನ್ನು ಸೂಚಿಸುತ್ತದೆ- ಇದು ಔಷಧಿಯ ದ್ರವ್ಯಗಳನ್ನು ನೀರಿನಲ್ಲಿ ಸಂಸ್ಕರಿಸಿ ತಯಾರಿಸುವ ನೀರು. ಇದು ದಾಹವನ್ನು ತಣಿಸು ವುದರ ಜತೆಗೆ ದೇಹದ ಉಷ್ಣತೆಯನ್ನು ಸಮ ತೋಲನಗೊಳಿಸಿ ದೋಷಗಳನ್ನು ಶಮನಗೊಳಿಸುತ್ತದೆ.

ಕೆಲವು ಔಷಧಿಯ ಜಲಗಳು:

೧. ಏಲಾ ಜಲ: ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುದಿಸಿ ತಂಪಾಗಿಸಿದ ಜಲ. ಇದು ದೇಹಕ್ಕೆ ಸುಗಂಧ ಯುಕ್ತ ಶೀತಲತೆ ನೀಡುತ್ತದೆ, ದಾಹವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹಗುರ ವಾಗಿಡುತ್ತದೆ.

೨. ಉಶೀರ ಜಲ: ಉಶೀರ (ವೇಟಿವರ್) ಬೇರುಗಳನ್ನು ನೀರಲ್ಲಿ ನೆನೆಸಿಟ್ಟು ಅಥವಾ ಕುದಿಸಿ ತಯಾರಿಸುವ ಜಲ. ಇದು ಅತ್ಯಂತ ಶೀತಲ ಗುಣವನ್ನು ಹೊಂದಿದ್ದು, ಪಿತ್ತ ಶಮನದಲ್ಲಿ ವಿಶೇಷ ವಾಗಿ ಪರಿಣಾಮಕಾರಿ. ದೇಹದ ಉಷ್ಣತೆಯನ್ನು ತಕ್ಷಣ ಕಡಿಮೆ ಮಾಡುತ್ತದೆ.

೩. ಸಾರಿವಾ ಪಾನಕ/ದ್ರಾಕ್ಷಿ ಪಾನಕ: ಸಾರಿವಾ (ಅನಂತಮೂಲ) ಬಳಸಿ ತಯಾರಿಸುವ ಪಾನಕ. ಇದು ರಕ್ತವನ್ನು ಶುದ್ಧೀಕರಿಸಿ, ದಾಹ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ. ಗ್ರೀಷ್ಮದಲ್ಲಿ ಪಿತ್ತದ ಹೆಚ್ಚಳವನ್ನು ತಡೆಯಲು ಅತ್ಯುತ್ತಮ.

14. ಉತ್ತಮ ನಿದ್ರೆಗೆ ಪದಾಭ್ಯಂಗ

ಗ್ರೀಷ್ಮ ಋತುವಿನಲ್ಲಿ ದೇಹದ ಉಷ್ಣತೆ ಹೆಚ್ಚಿರುವುದರಿಂದ ರಾತ್ರಿ ಸಮಯದಲ್ಲಿ ನಿದ್ರೆ ಅಶಾಂತ ವಾಗುವುದು ಸಾಮಾನ್ಯ. ದೇಹದ ಒಳಗಿನ ತಾಪಮಾನ ಹೆಚ್ಚಿರುವುದರಿಂದ ಮನಸ್ಸು ಸಹ ಚಂಚಲ ವಾಗಿದ್ದು, ಗಾಢನಿದ್ರೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ನಿದ್ರೆಗೆ ಮುನ್ನ ದೇಹವನ್ನು ಶೀತಲ ಗೊಳಿಸುವ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಈ ಸಂದರ್ಭದಲ್ಲಿ ಆಯುರ್ವೇದವು ಸೂಚಿಸುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವೇ ಪದಾಭ್ಯಂಗ (ಪಾದಗಳಿಗೆ ಮೃದು ವಾಗಿ ಮಸಾಜ್ ಮಾಡುವುದು).

ಕ್ರಮ: ಮೊದಲು ಕಾಲುಗಳನ್ನು ತಂಪಾದ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕಣ್ಣುಗಳನ್ನು ಸಹ ತಂಪಾದ ನೀರಿನಿಂದ ತೊಳೆಯುವುದು. ನಂತರ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಪಾದ ಗಳಿಗೆ 3-4 ನಿಮಿಷ ಮೃದುವಾಗಿ ಮಸಾಜ್ ಮಾಡಬೇಕು. ಇದರ ಜತೆಗೆ ತಲೆಯ ಮೇಲಿನ ಭಾಗವಾದ ಬ್ರಹ್ಮರಂಧ್ರ ಪ್ರದೇಶಕ್ಕೆ ಸ್ವಲ್ಪ ಶೀತಲ ತುಪ್ಪವನ್ನು ಹಚ್ಚಬಹುದು.

ಪ್ರಯೋಜನಗಳು: ದೇಹದ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತದೆ. ವಾತ ದೋಷ ಶಮನಗೊಂಡು ದೇಹದಲ್ಲಿ ಶಾಂತಸ್ಥಿತಿ ಉಂಟಾಗುತ್ತದೆ. ನರಮಂಡಲಕ್ಕೆ ವಿಶ್ರಾಂತಿ ಸಿಗುತ್ತದೆ. ಮನಸ್ಸು ಸ್ಥಿರವಾಗಿ, ಗಾಢನಿದ್ರೆ ಬರಲು ಸಹಾಯಕವಾಗುತ್ತದೆ. ದಿನವಿಡಿಯ ದಣಿವು ನಿವಾರಣೆಯಾಗುತ್ತದೆ

15. ಶಿರೋಶೀತಲತೆಗೆ ಲೇಪ ಮತ್ತು ಘೃತೋಪಚಾರ

ಗ್ರೀಷ್ಮ ಋತುವಿನಲ್ಲಿ ದೇಹದ ಉಷ್ಣತೆಯೊಂದಿಗೆ ತಲೆಯ ಭಾಗದಲ್ಲಿ ತಾಪಮಾನ ಹೆಚ್ಚಾಗುವುದು ಸಾಮಾನ್ಯ. ಇದರಿಂದ ತಲೆಬಿಸಿ, ಕಣ್ಣಿನ ಉರಿ, ಕೂದಲಿನ ಒಣತನ, ಅಸಹನೆ ಮತ್ತು ನಿದ್ರೆಯ ಅಶಾಂತಿ ಕಾಣಿಸಿ ಕೊಳ್ಳಬಹುದು. ಆದ್ದರಿಂದ ಶಿರಸ್ಸನ್ನು ಶೀತಲವಾಗಿಡುವುದು ಅಗತ್ಯ. ಆಯು ರ್ವೇದದಲ್ಲಿ ಇದಕ್ಕಾಗಿ ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಸೂಚಿಸಲಾಗಿದೆ.

ಅವೆಂದರೆ:

೧. ಆಮಲಕೀ ಲೇಪ: ನೆಲ್ಲಿಕಾಯಿ/ಆಮಲಕೀ ಪುಡಿಯನ್ನು ಮೊಸರಿನೊಂದಿಗೆ ಕಲಸಿ ಲೇಪ ತಯಾರಿಸಿ ತಲೆಗೆ ಹಚ್ಚಬೇಕು. ಆಮಲಕೀ ಪಿತ್ತ ಶಮನದಲ್ಲಿ ಪ್ರಸಿದ್ಧವಾಗಿದ್ದು, ತಲೆಗೆ ಶೀತಲತೆ ನೀಡುತ್ತದೆ ಮತ್ತು ಕೂದಲಿಗೂ ಪೋಷಕವಾಗಿದೆ.

೨. ಮೆಂತ್ಯ ಲೇಪ: ಮೆಂತ್ಯ ಕಾಳುಗಳನ್ನು ರಾತ್ರಿ ನೀರಲ್ಲಿ ನೆನೆಸಿಟ್ಟು, ಬೆಳಗ್ಗೆ ಅದನ್ನು ಮೊಸರಿ ನೊಂದಿಗೆ ರುಬ್ಬಿ ಲೇಪ ತಯಾರಿಸಬಹುದು. ಇದು ತಲೆಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ತಲೆಚರ್ಮವನ್ನು ಮೃದುವಾಗಿಸುತ್ತದೆ. ಮೇಲಿನ ಲೇಪಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿ ತಲೆಗೆ ಹಚ್ಚಬೇಕು. ಸುಮಾರು 30-45 ನಿಮಿಷಗಳವರೆಗೆ ಇರಿಸಬೇಕು. ನಂತರ ತಂಪಾದ ನೀರಿನಿಂದ ತಲೆ ತೊಳೆಯಬೇಕು. ನೆಗಡಿ, ತಲೆಭಾರ ಇದ್ದಾಗ ಬೇಡ. ಈ ಕ್ರಮವನ್ನು ಒಂದು ದಿನ ಬಿಟ್ಟು ಒಂದು ದಿನ ಅನುಸರಿಸುವುದು ಉತ್ತಮ.

೩. ಘೃತೋಪಚಾರ: ತುಪ್ಪದಲ್ಲಿ ಅದ್ದಿದ ಹತ್ತಿಯನ್ನು ತಲೆಯ ಮೇಲೆ, ವಿಶೇಷವಾಗಿ ಮಧ್ಯಭಾಗ ದಲ್ಲಿ (ಬ್ರಹ್ಮರಂಧ್ರ ಪ್ರದೇಶದಲ್ಲಿ) ಇಟ್ಟು, ಸುಮಾರು 45 ನಿಮಿಷಗಳವರೆಗೆ ಇರಿಸಬಹುದು. ಇದು ಆಳವಾದ ಶೀತಲತೆ ನೀಡುವ ವಿಧಾನವಾಗಿದೆ. ನಂತರ ತಣ್ಣೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದು ತಲೆಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಪಿತ್ತ ದೋಷವನ್ನು ಶಮನಗೊಳಿಸುತ್ತದೆ. ಕಣ್ಣುಗಳ ಉರಿ ಮತ್ತು ತಲೆಬಿಸಿ ಕಡಿಮೆಯಾಗುತ್ತದೆ. ಕೂದಲು ಮತ್ತು ತಲೆಚರ್ಮಕ್ಕೆ ಪೋಷಣೆ ನೀಡುತ್ತದೆ. ಮನಸ್ಸಿಗೆ ಶಾಂತಿ ನೀಡಿ ಉತ್ತಮ ನಿದ್ರೆಗೆ ಸಹಕಾರಿ.

ಗ್ರೀಷ್ಮ ಋತು ಸವಾಲಿನ ಕಾಲವಾದರೂ, ಆಯುರ್ವೇದದ ಋತು ಚರ್ಯೆಯನ್ನು ಅನುಸರಿಸಿದರೆ ಅದನ್ನು ಸುಲಭವಾಗಿ ಸಮತೋಲನಗೊಳಿಸಬಹುದು. ಪ್ರಕೃತಿಯ ಗುಣಧರ್ಮಗಳನ್ನು ಅರಿತು ಅದಕ್ಕೆ ಹೊಂದಿಕೊಂಡ ಜೀವನಶೈಲಿಯನ್ನು ಅಳವಡಿಸಿಕೊಂಡರೆ ದೇಹದಲ್ಲಿ ಶೀತಲತೆ, ಮನಸ್ಸಿ ನಲ್ಲಿ ಶಾಂತಿ, ಜೀವನದಲ್ಲಿ ಸಮ ತೋಲನ ಸಾಧಿಸಬಹುದು.

ಪ್ರಕೃತಿಗೆ ಹೊಂದಿಕೊಂಡ ಜೀವನವೇ ನಿಜವಾದ ಆರೋಗ್ಯದ ಮಂತ್ರ. ಈ ಗ್ರೀಷ್ಮದಲ್ಲಿ ಆಯುರ್ವೇ ದದ ಈ 15 ಮಾರ್ಗಗಳನ್ನು ಅನುಸರಿಸಿ- ದೇಹ ತಂಪಾಗಲಿ, ಮನಸ್ಸು ಹಗುರವಾಗಲಿ, ಜೀವನ ಆರೋಗ್ಯಕರವಾಗಲಿ.