ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prof R G Hegde Column: ಸಾವಿನ ನಂತರದ ಪಯಣದ ಸುತ್ತಮುತ್ತ ಒಂದು ಕಿರುನೋಟ

ಒಂದೆಡೆ ಸ್ಥಿರವಾಗಿ ನಿಂತು ಬಿಡಲು ಆತ್ಮಕ್ಕೆ ಮನಸ್ಸಿಲ್ಲ. ಅದು ಆತನಿಗೂ (ಸಾವಿಗೂ) ಗೊತ್ತು. ಹಾಗಾಗಿ ಅವಳ ಆತ್ಮದ ಜತೆ ಪಲ್ಲಕ್ಕಿಯಲ್ಲಿ ಪಯಣಿಸುತ್ತಾನೆ. ಆ ಪಲ್ಲಕ್ಕಿಯಲ್ಲಿ ಇರುವವರು ಅವಳು, ಆತ (ಸಾವು) ಮತ್ತು ಅಮರತ್ವ. ಅವರು ಸಾವಕಾಶವಾಗಿ ಪ್ರಯಾಣ ಬೆಳೆಸುತ್ತಾರೆ. ನಿಧಾನ ಪ್ರವೃತ್ತಿಯ, ಅಪಾರ ಸಹನೆಯ ಅವನಿಗೆ ವೇಗವೆಂದರೇನು ಎನ್ನುವುದು ತಿಳಿದೇ ಇಲ್ಲ.

ಸಾವಿನ ನಂತರದ ಪಯಣದ ಸುತ್ತಮುತ್ತ ಒಂದು ಕಿರುನೋಟ

-

Ashok Nayak
Ashok Nayak Dec 21, 2025 8:55 AM

ಅನುಭೂತಿ

ಪ್ರೊ.ಆರ್.ಜಿ.ಹೆಗಡೆ

ಎಮಿಲಿ ಡಿಕಿನ್ಸನ್ ಎಂಬ ಅಮೆರಿಕನ್ ಕವಯಿತ್ರಿ ’'Because I could not stop for death ’ ಎಂಬ ಪ್ರಸಿದ್ಧ ಕವಿತೆಯಲ್ಲಿ, ಸಾವಿನ ನಂತರದ ತನ್ನ ಆತ್ಮದ ಪಯಣದ ಕುರಿತು ಮಾತನಾಡುತ್ತಾಳೆ...

ಒಂದೆಡೆ ಸ್ಥಿರವಾಗಿ ನಿಂತು ಬಿಡಲು ಆತ್ಮಕ್ಕೆ ಮನಸ್ಸಿಲ್ಲ. ಅದು ಆತನಿಗೂ (ಸಾವಿಗೂ) ಗೊತ್ತು. ಹಾಗಾಗಿ ಅವಳ ಆತ್ಮದ ಜತೆ ಪಲ್ಲಕ್ಕಿಯಲ್ಲಿ ಪಯಣಿಸುತ್ತಾನೆ. ಆ ಪಲ್ಲಕ್ಕಿಯಲ್ಲಿ ಇರುವವರು ಅವಳು, ಆತ (ಸಾವು) ಮತ್ತು ಅಮರತ್ವ. ಅವರು ಸಾವಕಾಶವಾಗಿ ಪ್ರಯಾಣ ಬೆಳೆಸುತ್ತಾರೆ. ನಿಧಾನ ಪ್ರವೃತ್ತಿಯ, ಅಪಾರ ಸಹನೆಯ ಅವನಿಗೆ ವೇಗವೆಂದರೇನು ಎನ್ನುವುದು ತಿಳಿದೇ ಇಲ್ಲ.

ಆಕೆಯ ಆತ್ಮವು ಸಂತೋಷ ಮತ್ತು ದುಃಖಗಳೆರಡನ್ನೂ ಅಂತಿಮವಾಗಿ ಆತನಿಗಾಗಿ (ಸಾವಿಗಾಗಿ) ತ್ಯಜಿಸಿಬಿಟ್ಟಿದೆ. ಪಯಣ ಆರಂಭವಾಗುತ್ತದೆ. ನಿಧಾನವಾಗಿ ಸಾಗುತ್ತ ಅವರು, ಚಿಕ್ಕ ಮಕ್ಕಳ ಕಲರವ ದಿಂದ ತುಂಬಿದ ಶಾಲೆಯನ್ನು ದಾಟುತ್ತಾರೆ. ದನಕರುಗಳು ಮೇಯುತ್ತಿರುವ ವಿಶಾಲ ಹಸಿರು ಬಯಲುಗಳನ್ನು ದಾಟುತ್ತಾರೆ.

ಚಳಿಗಾಲದ ಮಂಜಿನ ಹನಿಗಳಿಂದ ತುಂಬಿಕೊಂಡ ಜೇಡರ ಬಲೆಗಳನ್ನು ನೋಡುತ್ತ ಮುನ್ನಡೆ ಯುತ್ತಾರೆ. ಹಾರಿಕೊಳ್ಳುತ್ತ, ಹಾರಿಕೊಳ್ಳುತ್ತ ಅವರು ಒಂದು ಮನೆಯ ಮುಂದೆ ಕ್ಷಣಕಾಲ ನಿಲ್ಲು ತ್ತಾರೆ. ನಂತರ ಸೂರ್ಯ ಇಳಿಯುವಲ್ಲಿಗೆ ನಿಧಾನವಾಗಿ ಬಂದು ತಲುಪುತ್ತಾರೆ. ಆಮೇಲೆ ಯುಗಗಳೇ ಕಳೆದು ಹೋಗಿವೆ. ಆದರೆ ಆ ಯುಗಗಳೆಲ್ಲವೂ ಕೇವಲ ಒಂದು ದಿನದ ಹಾಗೆ. ಹೀಗೆ ಸಾವಿನ ನಂತರದ ಆತ್ಮದ ಪಯಣವನ್ನು ಆಕೆ ತನ್ನ ಕವಿತೆಯಲ್ಲಿ ಬಣ್ಣಿಸುತ್ತಾಳೆ.

ಇದನ್ನೂ ಓದಿ: Prof R G Hegde Column: ವಾಲ್ಮೀಕಿ ರಾಮಾಯಣ ನಿಜಕ್ಕೂ ಹೇಳುವುದು ಏನನ್ನು...?

ನಾನು ಇಲ್ಲಿ ಹೇಳುತ್ತಿರುವುದು ಈ ರೀತಿಯ ಆತ್ಮದ ಪಯಣದ ಹಿಂದಿನ, ಸಾವಿನ ನಂತರದ ಶರೀರ ದ ಪಯಣದ ಕುರಿತು. 97 ವರ್ಷ ಬದುಕಿದ್ದ ಆತ ಅಕಸ್ಮಾತ್ ನಿದ್ದೆ ಬಂದ ಹಾಗೆ ಮಲಗಿದ್ದ. ‘ಸತ್ತು ಹೋಗಿ’ಬಿಟ್ಟಿದ್ದ. ಹೋಗಿದ್ದು ಏನು ಎನ್ನುವುದರ ಅಂತುಪಾರು ಕೂಡ ತಿಳಿಯದಂತೆ ಹೋಗಿ ಬಿಟ್ಟಿದ್ದ. ಏಕೆಂದರೆ ಆತ ಉಳಿದಂತೆ ಎಲ್ಲವೂ ಹಾಗೆಯೇ ಇದ್ದ. ಕಣ್ಣುಗಳು ಬದುಕಿದ್ದಾಗ ಇದ್ದ ರೀತಿಯಲ್ಲಿಯೇ ಶಾಂತವಾಗಿದ್ದವು. ವಿಷಾದ, ದುಃಖ, ಸಿಟ್ಟು, ಸೆಡವು, ಸಂತೋಷ ಯಾವುದೂ ಕಣ್ಣುಗಳಲ್ಲಿ, ಮುಖಚರ್ಯೆಯಲ್ಲಿ ಇರಲಿಲ್ಲ. ಹೋಗಿ ಬರುತ್ತೇನೆ ಎಂಬ ಸನ್ನೆಯೂ ಇರಲಿಲ್ಲ.

ಬೆಳಗ್ಗೆ ಎಂದಿನಂತೆ ಎದ್ದು, ದಾಡಿ ಮಾಡಿಕೊಂಡು ಸ್ನಾನ ಮುಗಿಸಿ ಬಂದು ಕುಳಿತಿದ್ದ. ಚಹಾ ಕುಡಿದ. ಬಾಯಿಗೆ ಗುಳಿಗೆ ಹಾಕಿಕೊಂಡ. ನುಂಗಲಾಗಲಿಲ್ಲ. ನೀರು ಕುಡಿದ. ಹಾಗೆಯೇ ಅರೆಕ್ಷಣ ಬಾಯಿ ತೆರೆದವನು ಹೋಗಿ ಬಿಟ್ಟಿದ್ದ. ಇಷ್ಟು ದೀರ್ಘಕಾಲ ಬದುಕಿದ ಸುಸ್ತು ಮುಖದ ಮೇಲೆ ಇರಲಿಲ್ಲ.

ಇನ್ನೂ ನೂರಾರು ವರ್ಷ ತಣ್ಣಗೆ ಬದುಕಬಹುದಿತ್ತು ಎನ್ನುವಂತಿದ್ದ. ದಿನಾಲು ಊಟ ಮಾಡಿ ಮತ್ತೆ ಕೆಲಸಕ್ಕೆ ಹೋಗುವ ಮೊದಲು 15 ನಿಮಿಷ ಆತ ಮಲಗುತ್ತಿದ್ದ. ಹಾಗೆಯೇ ಈಗ ಕೂಡ ಮಲಗಿದ್ದ. ಬಹುಶಃ ಇನ್ನು ಕೆಲವೇ ಕ್ಷಣದಲ್ಲಿ ಎದ್ದು ಎಂದಿನಂತೆ ಸಪ್ಪೆ ಚಹಾ ಕುಡಿದು ತೋಟಕ್ಕೆ ನೀರು ಬಿಡಲು ಅಥವಾ ಹುಲ್ಲು, ಕರಡ ಕೊಯ್ಯಲು ಹೋಗುವವನಂತೆ ಇದ್ದ.

Screenshot_12 R

ಆದರೆ ಆತ ನಿಜಕ್ಕೂ ಸತ್ತು ಹೋಗಿದ್ದ. ‘ಸತ್ತುಹೋದ’ ಎಂದು ಡಾಕ್ಟರ್ ಹೇಳಿದ್ದು ನಿಜವೇ ಇತ್ತು. ಕಣ್ಣಿಗೆ ಬೀಳದ ಜೀವ ಇಷ್ಷು ವರ್ಷ ತಾನು ಉಳಿದುಕೊಂಡಿದ್ದ ಶರೀರವನ್ನು ನಿರ್ದಾಕ್ಷಿಣ್ಯವಾಗಿ ಹಿಂದೆ ಬಿಟ್ಟು ಹಾರಿಹೋಗಿತ್ತು. ಬದುಕು ಮತ್ತು ಸಾವಿನ ನಡುವಿನ ಗೆರೆ ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ವಾಗಿರುತ್ತದೆ ಎಂದು ತಿಳಿದಿದ್ದು ಈಗಲೇ.

ಸಾವನ್ನು ನಾನು ಇಷ್ಟು ಹತ್ತಿರದಿಂದ ನೋಡಿಯೇ ಇರಲಿಲ್ಲ (ತಂದೆ-ತಾಯಿ ಇದ್ದವರು ಬೇರೆಯ ವರ ಸಾವಿನ ಸಂದರ್ಭದಲ್ಲಿ ಹೋಗಬಾರದು ಎಂಬ ಶಾಸ್ತ್ರವಿದೆ. ಹಾಗಾಗಿ ಹೋಗಿರಲಿಲ್ಲ). ಒಂದು ಕ್ಷಣ ಅನಿಸಿದ್ದೆಂದರೆ ಸಾವು ಇಷ್ಟೊಂದು ಸುಲಭವಾಗಿದ್ದರೆ ನಾವೂ ಹೀಗೆಯೇ ಹೋಗಿ ಬಿಡಬಹುದು.

ಹೀಗೆಯೇ, ಕಣ್ಣ ರೆಪ್ಪೆ ಮುಚ್ಚಿ ತೆರೆಯುವುದರ ಒಳಗೆ. ಈಗ ಸುರಿಯುತ್ತಿರುವ ಕಣ್ಣಂಚಿನ ನೀರು ಉಪ್ಪಿನಂತಾಗಿ ಒಣಗುವ ಮೊದಲೇ- ಹೋಗಿಬಿಡಬಹುದು. ಅಥವಾ ಬಹುಶಃ ಆತನನ್ನು ಪೂರ್ತಿ ಯಾಗಿ ನೋಡಿ ಮುಗಿಸುವ ಮೊದಲು. ಡಾಕ್ಟರ್ ಡೆತ್ ನೋಟ್ ಕೊಡುವ ಮೊದಲು. ನಾವು ಮನುಷ್ಯರು ನಿಜಕ್ಕೂ ಎಂಥ ಸುಳ್ಳುಗಳನ್ನು ನಂಬಿ ಬದುಕಿದ್ದೇವೆ.

ಶರೀರದ ಅಂತಿಮ ಕ್ರಿಯೆಯ ಪಯಣ ನೋವಿನದು. ಆತನ ದೇಹವನ್ನು ಈಗ ಇಲ್ಲವಾಗಿಸಬೇಕು. ಹಾಗೆ ಮಾಡದಿದ್ದರೆ ಅದು ಕೊಳೆತು ಹೋಗುತ್ತದೆ, ನಾರುತ್ತದೆ. ಅದಕ್ಕೆ ಮೊದಲು ಬಂಧು-ಬಳಗ ಎಲ್ಲರಿಗೂ ಸುದ್ದಿ ತಿಳಿಸಬೇಕು. ತುಂಬ ಖಾಸಗಿಯಾದ ಆತನ ಸಾವು ಈಗ ಸಾರ್ವಜನಿಕ ವಸ್ತು. ಜನ ಸೇರುತ್ತಾರೆ. ಅವರೆಲ್ಲ ಬರುವುದಕ್ಕೆ ಕಾಯಬೇಕು. ಜನ ಅಳುವುದನ್ನು ನೋಡಬೇಕು. ಕೆಲವರು ತುಸುವೇ ಅತ್ತು ಕಣ್ಣೊರೆಸಿಕೊಳ್ಳುತ್ತಾರೆ.

ಕೆಲವರು ಆಷಾಢ ಮಾಸದಲ್ಲಿ ಮಳೆ ಬಂದಂತೆ ಭೋರೆಂದು ಅಳುತ್ತಾರೆ. ಕೆಲವರು ಅಳುವುದು ಕೃತಕವೆನಿಸುತ್ತದೆ. ತೀವ್ರ ಹಿಂಸೆಯ ಕ್ಷಣಗಳು ಅವು. ಸುತ್ತಮುತ್ತ ಯಾರೂ ಬೇಡವಾಗಿತ್ತು, ಒಬ್ಬನೇ ಇರಬೇಕಿತ್ತು ಅನಿಸುವ ಆ ಕ್ಷಣದಲ್ಲಿ ನೂರಾರು ಜನ -ನಿನಲ್ಲಿ ಮಾತನಾಡುತ್ತಾರೆ. ಕೇಳಿದ ಅವವೇ ಮಾತುಗಳು: ಧೈರ್ಯ ತಂದುಕೊಳ್ಳಿ, ಇತ್ಯಾದಿ. ಮೆಸೇಜುಗಳು ನಿರಂತರ ಕಿಣಿಕಿಣಿಗುಡುತ್ತವೆ.

ಬದುಕಿನ ನಶ್ವರತೆಯನ್ನು, ಸಾವಿನ ದಿವ್ಯತೆಯನ್ನು ಅನುಭವಿಸಲು ಜನ ಬಿಡುವುದೇ ಇಲ್ಲ. ಯಾವುದೂ ನಮ್ಮ ಕೈಯಲ್ಲಿ ಇಲ್ಲ, ಎಲ್ಲವೂ ಒಂದು ಮುಷ್ಟಿ ಬೂದಿಯಲ್ಲಿ ಅಂತ್ಯವಾಗುತ್ತದೆ. ಅದು ಮಾತ್ರ ಅಂತಿಮ ಸತ್ಯ ಎಂದು ಹೊಳೆಯುವ ಈ ಕ್ಷಣದಲ್ಲಿ ಕೂಡ ಜೀವನವು ರೈಲಿನ ಹಾಗೆ ಧಡಧಡಿಸುತ್ತ, ವೇಗವಾಗಿ ಮುಂದೆ ಧಾವಿಸುತ್ತದೆ.

ನೂರೆಂಟು ಕೆಲಸಗಳು ಒಮ್ಮೆಲೇ ಮುಂದೆ ಬಂದು ನಿಲ್ಲತ್ತವೆ- ಪುರೋಹಿತರು ಯಾರು? ಅಂತಿಮ ವಿಧಿ ಎಲ್ಲಿ? ಎನ್ನುವುದನ್ನು ತೀರ್ಮಾನಿಸಬೇಕು. ತುಳಸಿಮಾಲೆ, ಗಂಧ, ಚಂದನದ ಚಕ್ಕೆ ತರಬೇಕು. ಮಾರುಕಟ್ಟೆಗೆ ಹೋಗಿ ಉಳಿದ ಸಾಮಾನುಗಳನ್ನು, ಧೋತಿಯನ್ನು ತರಬೇಕು. ಅದರ ಗಂಟು ಸರಿಯಾಗಿ ಹಾಕಿಕೊಳ್ಳಬೇಕು. ಇಲ್ಲವಾದರೆ ಅದು ಬಿಚ್ಚಿ ಬಿದ್ದುಬಿಡುತ್ತದೆ.

ಸಾಂತ್ವನ ಹೇಳಲು ಬಂದವರನ್ನು ಮಾತನಾಡಿಸಬೇಕು. ಕೆಲವರು ‘ಅವನ ಮುಖವನ್ನು ನಾನು ಕೊನೆಯ ಬಾರಿ ನೋಡಲೇಬೇಕು. ಹಾಗಾಗಿ ಮಾರ್ಚರಿಯಲ್ಲಿ ಇಡಿ’ ಎಂದು ವಿನಂತಿಸುತ್ತಾರೆ. ಮಾರ್ಚರಿ ಹುಡುಕಬೇಕು, ಅಲೆಯಬೇಕು. ನೂರಾರು ಫೋನ್‌ಕಾಲ್ ಮಾಡಬೇಕು. ಆತ ಸತ್ತಿದ್ದು ಹೌದು ಎಂದು ಧೃಡಪಡಿಸುವ ಕಾಗದಪತ್ರವನ್ನು ಮಾರ್ಚರಿಯವರಿಗೆ ಕೊಡಬೇಕು.

ಆತನಿಗೆ ಚಳಿ ತಡೆಯಲಾಗುತ್ತಿರಲಿಲ್ಲ, ಕಂಬಳಿ ಹೊದ್ದೇ ಮಲಗುತ್ತಿದ್ದುದು- ಬೇಸಗೆಯಲ್ಲಿ ಕೂಡ. ಆದರೆ ಈ ಮಾರ್ಚರಿಯಲ್ಲಿ ಅವನಿಗೆ ಕಂಬಳಿಯೇ ಇಲ್ಲ. ಆತ ಈಗ ಇಲ್ಲ ಎನ್ನುವುದು ಮನಸ್ಸಿ ನೊಳಗೆ ಇನ್ನೂ ನಿಂತೇ ಇಲ್ಲ. ಹಾಗಾಗಿ ಮಾರ್ಚರಿಯೊಳಗಿನ ಚಳಿಗೆ ಆತನಿಗೆ ನಿದ್ದೆಯೇ ಬರದಿದ್ದರೆ ... ಎನ್ನುವ ವಿಚಾರ ಅರೆಕ್ಷಣ ಮನಸ್ಸನ್ನು ತಟ್ಟಿ ಹೋಗುತ್ತದೆ.

ಮಾರ್ಚರಿಯ ಸ್ಟೀಲ್ ಕಪಾಟಿನೊಳಗೆ ಆತನಿಗೆ ಉಸಿರಾಡಿಸಲು ಸಾಧ್ಯವಾಗದೆ ಆತ ತೀರಿಕೊಂಡರೆ ಏನು ಮಾಡುವುದು ಎನ್ನುವ ವಿಚಾರವೂ ಮನಸ್ಸನ್ನು ತಟ್ಟಿಹೋಗುತ್ತದೆ. ಮಾರನೆಯ ದಿನ ಬೆಳಗ್ಗೆ ಜನವೋ ಜನ. ಇವತ್ತು ಆತನ ಶರೀರವನ್ನು ಬೆಂಕಿಗೆ ನೀಡಬೇಕು. ಮಾರ್ಚರಿಯಿಂದ ‘ಶವ’ವನ್ನು ಬಿಡಿಸಿಕೊಂಡು ಬರುವುದೂ ದೊಡ್ಡ ಕೆಲಸ. ಎಲ್ಲಾ ದಾಖಲೆಗಳನ್ನು ಮತ್ತೆ ಕೊಡಬೇಕು.

ನಾವು ಯಾರು ಎನ್ನುವುದನ್ನು ಸಾಬೀತುಪಡಿಸಬೇಕು. ಆತ ಮಾರ್ಚರಿಯಲ್ಲಿ ಸುಖವಾಗಿ ಮಲಗಿ ದಂತಿದ್ದ. ಕಣ್ಣುಗಳು, ಮುಖ ಫ್ರಿಜ್‌ನಲ್ಲಿ ಇಟ್ಟ ತರಕಾರಿಯ ಹಾಗೆ ಹೊಳೆಯುತ್ತಿದ್ದವು. ದೇವರೇ! ಆದರೂ ಆತ ಸತ್ತಿರುವುದು ನಿಜ. ಆತನ ಶರೀರವನ್ನು ಸುಡಲೇಬೇಕು... ಈಗ ಗದ್ದಲವೋ ಗದ್ದಲ. ಜೀನ್ಸ್‌ಧಾರಿಗಳಾಗಿ ಬಂದವರೂ ‘ಗೋವಿಂದಾ, ಗೋವಿಂದಾ’ ಎಂದು ಕೂಗುವುದು ವಿಚಿತ್ರ ವೆನಿಸುತ್ತದೆ. ‘ನಾಟಕ’ ಅನಿಸಿಹೋಗುತ್ತದೆ. ಶವದ ಸ್ನಾನ ಮಾಡಿಸಬೇಕು. ನಿಜವಾಗಿಯೂ ಆತನನ್ನು ಪೂರ್ತಿ ಯಾಗಿ ಲಕ್ಷ್ಯ ಕೊಟ್ಟು ನೋಡಿದ್ದು ಈಗಲೇ!

ಪ್ರಾಯದಲ್ಲಿ ಗಟ್ಟಿ ಮುಟ್ಟಾಗಿದ್ದವ ಅವ. ಕಾಯಿಮರ ಹತ್ತುತ್ತಿದ್ದ. ದಿನಕ್ಕೆ 20 ಕಿ.ಮೀ. ಸೈಕಲ್ ಹೊಡೆಯುತ್ತಿದ್ದ. ಆದರೆ ಈಗ ಈತನ ಶರೀರ ಬಡವಾಗಿ ಹೋಗಿತ್ತು. ಅಷ್ಟು ವಯಸ್ಸಾದವರ ಶರೀರ ಹೀಗೆ ಆಗಿಹೋಗುತ್ತದೆ ಎಂದು ತಿಳಿದಿದ್ದು ಈಗಲೇ. ಹಾಗೆ ಇದ್ದ ಶರೀರ ಈಗ ಹೀಗೆ ಆಗಿಹೋಗಿದೆ.

ಅಂದರೆ ಬಹುಶಃ ಒಂದು ಹಂತಕ್ಕೆ ಬೆಳೆದ ನಂತರ ಸಾವು ಅರಂಭವಾಗಿಯೇಬಿಡುತ್ತದೆ. ಸಾವು ಒಂದು ದಿನದ ಘಟನೆಯಲ್ಲ. ಒಂದು ಹಂತದ ನಂತರ ನಾವು ಸಾಯುತ್ತಲೇ ಹೋಗುತ್ತೇವೆ. ಈಗ ಎಲ್ಲರೂ ‘ಶವ’ದ ಮೇಲೆ ತಣ್ಣೀರು ಸುರಿಯುವುದು. ನೂರಾರು ಬಕೆಟ್‌ಗಳಷ್ಟು ನೀರು ಕೋಡಿಯಾಗಿ ಹರಿಯುತ್ತದೆ.

ಆತ ಬದುಕಿದ್ದರೆ ಬೈಯುತ್ತಿದ್ದ. ಇಷ್ಟೊಂದು ನೀರು ಹಾಳು ಮಾಡಲು ಬಿಡುತ್ತಿರಲಿಲ್ಲ. ‘ನೀರನ್ನು ವ್ಯರ್ಥ ಮಾಡಬೇಡಿ, ತೆಂಗಿನ ಮರದ ಬುಡಕ್ಕಾದರೂ ಹಾಕಿ’ ಎನ್ನುತ್ತಿದ್ದ. ಮತ್ತೆ, ‘ಇಷ್ಟೊಂದು ಜನ ನಿಮ್ಮ ಕೆಲಸ ಬಿಟ್ಟು ಇಲ್ಲಿ ಯಾಕೆ ಬಂದಿದ್ದು? ನಿಮಗೆಲ್ಲ ಕೆಲಸ ಇಲ’ ಎಂದು ಬೈಯುತ್ತಿದ್ದ. ‘ನಿಮಗೆ ದುಡ್ಡು ಹೆಚ್ಚಾದರೆ ನನಗೆ ಕೊಡಿ, ತೋಟಕ್ಕೆ ಗೊಬ್ಬರ ಹಾಕಿಸುತ್ತೇನೆ’ ಎಂದು ಹೇಳುತ್ತಿದ್ದ.

ಶವ ಸುಡುವ ಕೆಲಸದವರಿಗೆ ಪುರುಸೊತ್ತು ಇರುವುದಿಲ್ಲ. ನೂರಾರು ಹೆಣಗಳು ಕ್ಯೂನಲ್ಲಿ ಕಾದು ನಿಂತಿರುತ್ತವೆ. ಅದಕ್ಕೆಂದೇ, ‘ನಿಮ್ಮ ಕೆಲಸ ಬೇಗ ಬೇಗ ಮುಗಿಸಿ’ ಎಂದು ಗಡಿಬಿಡಿ ಮಾಡುತ್ತಾರೆ. ಈಗ ತರಾತುರಿಯಲ್ಲಿ ಆತನಿಗೆ ತುಳಸಿಮಾಲೆ ಹಾಕುವುದು. ಬಾಯಿ ಒಳಗೆ ಮಣ್ಣಿನ ಕಣದಂತ ಬಂಗಾರ ಇಡುವುದು. ಆತನ ಎದೆಯ ಮೇಲೆ ಊದಿನ ಕಡ್ಡಿ ಹಚ್ಚಿ ಗಂಧದ ಚಕ್ಕೆ ಚೂರು ಬಿಟ್ಟು ಕರ್ಪೂರ ಇಟ್ಟು ಬೆಂಕಿ ಹೊತ್ತಿಸಬೇಕು. ಸುಡುವ ಯಂತ್ರಕ್ಕೆ ಕಾಯುವ ಪ್ರಜ್ಞೆ ಇರುವುದೇ ಇಲ್ಲ.

ಶರೀರವನ್ನು ಇಟ್ಟ ಕೂಡಲೇ ‘ಸರ್ರ್’ಎಂದು ಒಳಗೆಳೆದುಕೊಳ್ಳುತ್ತದೆ. ಇಲೆಕ್ಟ್ರಿಕ್ ಕ್ರಿಮೆಟೋರಿ ಯಮ್ ಅದು. ಒಂದು ಕ್ಷಣ, ಕೇವಲ ಒಂದೇ ಕ್ಷಣದಲ್ಲಿ ಶರೀರವನ್ನೆಲ್ಲ ಬೆಂಕಿ ಆವರಿಸಿ ಬಿಡುತ್ತದೆ.... ಎಮಿಲಿ ಡಿಕಿನ್ಸನ್ ಹೇಳುವ ರೀತಿಯ ಸಾವಿನ ನಂತರದಪಯಣ ಈಗ ಆರಂಭವಾಗುತ್ತದೆ....

(ಲೇಖಕರು ಸಂವಹನಾ ಸಮಾಲೋಚಕರು)