ಜನಸಂಖ್ಯಾ ದಿನದಂದು ಒಂದು ಪ್ರಮಾಣ
1987ರ ಜುಲೈ 11ರಂದು ವಿಶ್ವಸಂಸ್ಥೆಯ ಪ್ರಕಾರ ಜಗತ್ತಿನ ಜನಸಂಖ್ಯೆ 500 ಕೋಟಿ ಮುಟ್ಟಿತು. ಅದನ್ನು Five Billion Day ಎಂದು ಆಚರಿಸಲಾಯಿತು. ಜನಸಂಖ್ಯಾ ಸ್ಫೋಟದ ಗಂಭೀರತೆ ಜನರಿಗೆ ತಲುಪಿಸ ಬೇಕು ಎಂದು 1989ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಜುಲೈ 11ನ್ನು ‘ವಿಶ್ವ ಜನಸಂಖ್ಯಾ ದಿನ’ ಎಂದು ಘೋಷಿಸಿತು.
-
ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ
1987ರ ಜುಲೈ 11ರಂದು ವಿಶ್ವಸಂಸ್ಥೆಯ ಪ್ರಕಾರ ಜಗತ್ತಿನ ಜನಸಂಖ್ಯೆ 500 ಕೋಟಿ ಮುಟ್ಟಿತು. ಅದನ್ನು Five Billion Day ಎಂದು ಆಚರಿಸಲಾಯಿತು. ಜನಸಂಖ್ಯಾ ಸ್ಫೋಟದ ಗಂಭೀರತೆ ಜನರಿಗೆ ತಲುಪಿಸಬೇಕು ಎಂದು 1989ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಜುಲೈ 11ನ್ನು ‘ವಿಶ್ವ ಜನಸಂಖ್ಯಾ ದಿನ’ ಎಂದು ಘೋಷಿಸಿತು. ಇದರ ಉದ್ದೇಶ ಜನ ಜಾಸ್ತಿ ಆಗಿದ್ದಾರೆ ಎಂದು ಬೆಚ್ಚಿ ಬೀಳಿಸುವುದಲ್ಲ. ಕುಟುಂಬ ಯೋಜನೆ, ಲಿಂಗ ಸಮಾನತೆ, ಬಡತನ ನಿರ್ಮೂಲನೆ, ತಾಯಿ-ಮಗು ಆರೋಗ್ಯ, ಸಂತಾನೋತ್ಪತ್ತಿ ಹಕ್ಕು, ಸುಸ್ಥಿರ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವುದು. ವಿಶ್ವಸಂಸ್ಥೆ ಪ್ರತಿ ವರ್ಷ ಒಂದು ಥೀಮ್ ಕೊಡುತ್ತದೆ. 2026ರ ಥೀಮ್ ‘ಇಂದು ಮತ್ತು ನಾಳೆಗಾಗಿ ಯುವಜನರ ಆಶೆ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳುವಿಕೆ.’
8 ಬಿಲಿಯದ ಪಯಣ: ಜನಸಂಖ್ಯೆ ಬೆಳವಣಿಗೆ ನೋಡಿದರೆ ಮಾನವನ ಯಶಸ್ಸು ಮತ್ತು ಸವಾಲು ಎರಡೂ ಕಾಣುತ್ತೆ. 2023ರ ಏಪ್ರಿಲ್‌ನಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ನಂ.1 ಜನಸಂಖ್ಯಾ ದೇಶ ಆಯಿತು. ಬೆಳವಣಿಗೆ ವೇಗ ಕಡಿಮೆ ಆಗುತ್ತಿದೆ. 1960ರಲ್ಲಿ ವರ್ಷಕ್ಕೆ 2.3% ಬೆಳೆಯುತ್ತಿದ್ದ ಜನಸಂಖ್ಯೆ, ಇಂದು 0.9% ಮಾತ್ರ. 2058ಕ್ಕೆ 1000 ಕೋಟಿ ಮುಟ್ಟಿ, 2086ರಲ್ಲಿ 1040 ಕೋಟಿಯಲ್ಲಿ ಪೀಕ್ ಆಗಿ, ನಂತರ ಇಳಿಯುತ್ತದೆ ಎಂದು ಅಂದಾಜು.
ಇದನ್ನೂ ಓದಿ:Ageing Population: ವೃದ್ಧರ ಸಂಖ್ಯೆ ಹೆಚ್ಚಳವೇ ಭಾರತದ ದೊಡ್ಡ ಸಮಸ್ಯೆಯಾಗಲಿದೆ- ಮೋಹನದಾಸ್ ಪೈ ಎಚ್ಚರಿಕೆ
ಭಾರತದ ಒಟ್ಟು ಫಲವತ್ತತೆ ದರ 1951ರಲ್ಲಿ ಒಬ್ಬ ಹೆಣ್ಣಿಗೆ ಸರಾಸರಿ 5.9 ಮಕ್ಕಳು. 2021ಕ್ಕೆ 2.0ಕ್ಕೆ ಇಳಿದಿದೆ. ಕೇರಳ 1.8, ಕರ್ನಾಟಕ 1.7, ಬಿಹಾರ 3.0. ದಕ್ಷಿಣ ಭಾರತ ಈಗಾಗಲೇ ಜಪಾನ್ ಥರಾ ವಯಸ್ಸಾಗುತ್ತಿದೆ. ಉತ್ತರ ಭಾರತ ಇನ್ನೂ ಯುವ ಭಾರತ. ಭಾರತೀಯ ವರ್ಷಕ್ಕೆ 1500 ಲೀಟರ್ ನೀರು ಬಳಸುತ್ತಾನೆ. 145 ಕೋಟಿ ಜನ ಅಂದರೆ 2.17 ಲಕ್ಷ ಕೋಟಿ ಲೀಟರ್. ಆದರೆ ಸಿಗೋದು 1.9 ಲಕ್ಷ ಕೋಟಿ ಲೀಟರ್ ಮಾತ್ರ.
ಪ್ರತಿ ವರ್ಷ 1.2 ಕೋಟಿ ಯುವಕರು ಉದ್ಯೋಗ ಮಾರುಕಟ್ಟೆಗೆ ಬರ್ತಾರೆ. ಆದರೆ ಕೆಲಸ ಸೃಷ್ಟಿ ಆಗೋದು 50 ಲಕ್ಷ ಮಾತ್ರ. ಬೆಂಗಳೂರು 1980ರಲ್ಲಿ 29 ಲಕ್ಷ, ಇಂದು 1.4 ಕೋಟಿ. ಟ್ರಾಫಿಕ್, ಕಸ, ಮನೆ ಬಾಡಿಗೆ ಎಲ್ಲ ಡಬಲ. ಭಾರತ ವಿಶ್ವದ 3ನೇ ದೊಡ್ಡ ಕಾರ್ಬನ್ ಉತ್ಸರ್ಜಕ. 65% ಜನ 15-59ರ ವಯಸ್ಸಿನಲ್ಲಿದ್ದು ದುಡಿಯುವ ಪ್ರಾಯ. ಚೀನಾ, ಜಪಾನ್ ವಯಸ್ಸಾಗಿದೆ, ಭಾರತ ಯುವ. 2055 ರವರೆಗೆ ಹೀಗೆ. ವಿಶ್ವದ ಫ್ಯಾಕ್ಟರಿ ಚೀನಾ ಬಿಟ್ಟು ಕಂಪನಿಗಳು ಭಾರತಕ್ಕೆ ಬರ್ತಿವೆ. ಕಾರಣ ಅಗ್ಗದ, ನುರಿತ ಯುವ ಕಾರ್ಮಿಕ. ಗುಣಮಟ್ಟ ಮುಖ್ಯ, ಗುಂಪು ಅಲ್ಲ. ಜಪಾನ್ 12 ಕೋಟಿ ಜನರಿದ್ದರೂ ವಿಶ್ವದ 3ನೇ ಆರ್ಥಿಕತೆ. ನೈಜೀರಿಯಾ 22 ಕೋಟಿ ಜನರಿದ್ದರೂ ಬಡತನ. ಸಂಖ್ಯೆಗಿಂತ ಆರೋಗ್ಯ, ಶಿಕ್ಷಣ, ಕೌಶಲ್ಯ ಮುಖ್ಯ.
ಭಾರತದ ಸವಾಲುಗಳು: ಒಂದು, ಭಾರತದಲ್ಲಿ 1000 ಗಂಡು ಮಕ್ಕಳಿಗೆ 1020 ಹೆಣ್ಣು ಮಕ್ಕಳು. ಇದು ಒಳ್ಳೆಯ ಸುದ್ದಿ. ಆದರೆ ಹೆಣ್ಣು ಭ್ರೂಣ ಹತ್ಯೆ ಇನ್ನೂ ಇದೆ. ಎರಡು, 1 ಲಕ್ಷ ಹೆರಿಗೆಗೆ 97 ತಾಯಿಯರ ಸಾವು. ತಾಯಿ ಆರೋಗ್ಯ ಇಲ್ಲದಿದ್ದರೆ ಮಗು ಆರೋಗ್ಯ ಕಷ್ಟ. ಮೂರು, 15-19 ವಯಸ್ಸಿನ 6.8% ಹುಡುಗಿಯರು ಈಗಾಗಲೇ ತಾಯಿಯಂದಿರು. ಬಾಲ್ಯ ವಿವಾಹ ಕಾರಣ. ಶಿಕ್ಷಣ ಅತ್ಯಗತ್ಯ. ನಾಲ್ಕು- ಕೇರಳ, ತಮಿಳುನಾಡು, ಕರ್ನಾಟಕದಲ್ಲಿ 60+ ವಯಸ್ಸಿನವರು 15% ಆಗ್ತಿದ್ದಾರೆ.
ಪೆನ್ಷನ್, ಆರೋಗ್ಯ ವೆಚ್ಚ ಹೆಚ್ಚಾಗುತ್ತೆ. ಜಪಾನ್ ಥರಾ ವೃದ್ಧಾಶ್ರಮ ದೇಶ ಆಗೋ ಮೊದಲು ಎಚ್ಚರ ಬೇಕು. ಐದು- ನಗರ ಒತ್ತಡ. ಬಿಹಾರ, ಯುಪಿಯಿಂದ ಕೋಟಿ ಜನ ದೆಹಲಿ, ಮುಂಬೈ, ಬೆಂಗಳೂರಿಗೆ. ಸ್ಲಮ, ನೀರು, ಕಸ ಸಮಸ್ಯೆ. ಜನಸಂಖ್ಯಾ ದಿನ 3 ಪ್ರತಿಜ್ಞೆ ಮಾಡೋಣ: 1. ನನ್ನ ಕುಟುಂಬ ಚಿಕ್ಕದು, ನನ್ನ ಕನಸು ದೊಡ್ಡದು. 2. ಹೆಣ್ಣು ಮಗುವನ್ನು ಹೊರೆ ಅಲ್ಲ, ಹೆಮ್ಮೆ ಅಂದು ಕೊಳ್ಳುತ್ತೇನೆ. 3. ಭೂಮಿ ನನ್ನ ಆಸ್ತಿ ಅಲ್ಲ, ನನ್ನ ಮಕ್ಕಳಿಂದ ಎರವಲು ಪಡೆದಿದ್ದು- ಅದನ್ನು ಹಸಿರಾಗಿ ವಾಪಸ್ ಕೊಡುತ್ತೇನೆ.