M J Akbar Column: ಶಾಂತಿಯ ಗೊಡವೆ ಬಿಡಿ, ಸುಮ್ಮನೆ ಫುಟ್‌ಬಾಲ್ ಆಡಿ!
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಿಲ್ಲಿಸುವ ವಿಷಯದಲ್ಲಿ ನಡೆಯುತ್ತಿರುವ ಮಾತುಕತೆ ಯಲ್ಲಿ ಗೊಂದಲ ಉಂಟಾಗಿರುವುದಕ್ಕೆ ತಪ್ಪು ಕಲ್ಪನೆಯೇ ಕಾರಣ. ಏಕೆಂದರೆ ಈ ಮಾತುಕತೆಯ ಉದ್ದೇಶ ಶಾಂತಿ ಸ್ಥಾಪನೆ ಅಲ್ಲ. ಮಾತುಕತೆ ನಡೆಯುತ್ತಿರುವುದು ಯುದ್ಧದಿಂದ ಅಮೆರಿಕ ಹಿಂದೆ ಸರಿಯುವುದರ ಬಗ್ಗೆ. ಏಕೆಂದರೆ ಯುದ್ಧ ಶುರುವಾಗಿದ್ದೇ ವಾಷಿಂಗ್ಟನ್‌ನಲ್ಲಿ ತಪ್ಪು ತಿಳಿವಳಿಕೆ ಹುಟ್ಟಿಕೊಂಡ ಕಾರಣದಿಂದ.
-
ಅಕ್ಬರ್‌ನಾಮಾ
- ಎಂ.ಜೆ.ಅಕ್ಬರ್
2026ರ ಅರ್ಧ ಕಳೆದುಹೋಯಿತು. ಈ ಸಲ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ತನಗೇ ಕೊಡಬೇಕೆಂದು ವರಾತ ಹಚ್ಚುವುದಿಲ್ಲ ಎಂಬುದೂ ಖಾತ್ರಿಯಾಯಿತು. ಟ್ರಂಪ್‌ಗೆ 80 ವರ್ಷ ತುಂಬಿದಾಗ ಶ್ವೇತ ಭವನದಲ್ಲಿ ಸಂಭ್ರಮಾಚರಣೆ ಮಾಡುತ್ತಾರಲ್ಲವೇ, ಆಗ ಅಲ್ಲೊಂದು ನೊಬೆಲ್ ಶಾಂತಿಯ ಫಲಕ ಇದ್ದಿದ್ದರೆ ಎಷ್ಟು ಚೆನ್ನಾಗಿ ಕಾಣಿಸುತ್ತಿತ್ತು! ಅಥವಾ ಅಮೆರಿಕದ 250ನೇ ಸ್ವಾತಂತ್ರ್ಯೋತ್ಸ ವದ ಸಮಯದಲ್ಲಿ ಟ್ರಂಪ್ ಕುಳಿತುಕೊಳ್ಳುವ ಜಾಗದ ಹಿಂದೆ ನೊಬೆಲ್ ಫಲಕ ಕಾಣಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಹೃದಯಹೀನರು ಮಾತ್ರ ಇದನ್ನು ಅಲ್ಲಗಳೆಯಲು ಸಾಧ್ಯ.
ಈ ಜಟಿಲವಾದ ಸಮಸ್ಯೆ ಬಗೆಹರಿಸಲು ಒಂದು ದಾರಿಯಿದೆ. ನೊಬೆಲ್ ಶಾಂತಿ ಪ್ರಶಸ್ತಿಗೆ ನೊಬೆಲ್ ಸಂಧಾನ ಪ್ರಶಸ್ತಿ ಎಂದು ಮರುನಾಮಕರಣ ಮಾಡಬೇಕು. ಆಗ ಟ್ರಂಪ್ ಮತ್ತೆ ತನಗೆ ನೊಬೆಲ್ ಕೊಡಬೇಕು ಎಂದು ಪಟ್ಟುಹಿಡಿಯಲು ಅವಕಾಶ ಸಿಗುತ್ತದೆ. ಅಮೆರಿಕದ ಅಧ್ಯಕ್ಷರು ಸದ್ಯ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಬಗೆಹರಿಸಿ ಶಾಂತಿ ಸ್ಥಾಪನೆ ಮಾಡುವುದಕ್ಕಿಂತ ಸಂಧಾನ ಮಾಡುವಲ್ಲಿ ಸಫಲರಾಗುವ ಸಾಧ್ಯತೆಯೇ ಹೆಚ್ಚಿದೆ. ಎಲ್ಲಾ ಧರ್ಮದ ಎಲ್ಲಾ ದೇವರೂ ಶಾಂತಿಯೆಂಬುದು ಸ್ವರ್ಗದಲ್ಲಿ ಮಾತ್ರ ಸಿಗುವುದು ಎಂದೂ, ನೀವು ಅಲ್ಲಿಗೆ ಹೋದರಷ್ಟೇ ಶಾಂತಿಯನ್ನು ಹೊಂದಬಹುದು ಎಂದೂ ನಮಗೆ ಹೇಳಿವೆ. ಈ ಜಗತ್ತು ಸೃಷ್ಟಿಯಾಗಿರುವುದೇ ಪ್ರತಿ ತಲೆಮಾರಿನಲ್ಲೂ ಸಂಘರ್ಷವನ್ನು ನಡೆಸುವುದಕ್ಕಾಗಿ.
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಿಲ್ಲಿಸುವ ವಿಷಯದಲ್ಲಿ ನಡೆಯುತ್ತಿರುವ ಮಾತುಕತೆ ಯಲ್ಲಿ ಗೊಂದಲ ಉಂಟಾಗಿರುವುದಕ್ಕೆ ತಪ್ಪು ಕಲ್ಪನೆಯೇ ಕಾರಣ. ಏಕೆಂದರೆ ಈ ಮಾತುಕತೆಯ ಉದ್ದೇಶ ಶಾಂತಿ ಸ್ಥಾಪನೆ ಅಲ್ಲ. ಮಾತುಕತೆ ನಡೆಯುತ್ತಿರುವುದು ಯುದ್ಧದಿಂದ ಅಮೆರಿಕ ಹಿಂದೆ ಸರಿಯುವುದರ ಬಗ್ಗೆ. ಏಕೆಂದರೆ ಯುದ್ಧ ಶುರುವಾಗಿದ್ದೇ ವಾಷಿಂಗ್ಟನ್‌ನಲ್ಲಿ ತಪ್ಪು ತಿಳಿವಳಿಕೆ ಹುಟ್ಟಿಕೊಂಡ ಕಾರಣದಿಂದ. ಯುದ್ಧ ಮುಂದುವರೆದಿದ್ದು ಏಕೆಂದರೆ ಅಮೆರಿಕ ಮತ್ತು ಇರಾನ್ ಎರಡಕ್ಕೂ ಅದು ಪ್ರತಿಷ್ಠೆಯ ಪ್ರಶ್ನೆ ಯಾಗಿತ್ತು. ಎರಡೂ ದೇಶಗಳಿಗೆ ತಮ್ಮವರ ಮುಂದೆ ತಲೆತ ಗ್ಗಿಸಲು ಇಷ್ಟವಿಲ್ಲ. ನಾಯಕರಿಗೆ ಅಂತಾ ರಾಷ್ಟ್ರೀಯ ಚಿಂತೆಗಳಿಗಿಂತ ಹೆಚ್ಚಾಗಿ ತಮ್ಮ ದೇಶ ದೊಳಗಿನ ಪರಿಣಾಮಗಳೇ ಹೆಚ್ಚು ತಲೆನೋವು ತರಬಲ್ಲವು.
ಇದನ್ನೂ ಓದಿ: M J Akbar Column: ಪಾಕಿಸ್ತಾನವೆಂಬ ಇಸ್ಲಾಮಿಕ್ ದೇಶ ಮರಣ ಹೊಂದಿದ್ದು 1971ರಲ್ಲಿ !
ಶನಿವಾರ ಬೆಳಿಗ್ಗೆ ತಾನು ಶುರು ಮಾಡಿದ ಯುದ್ಧ ಸೋಮವಾರ ಸಂಜೆ ಇರಾನ್‌ನ ರಾಜಧಾನಿ ತೆಹರಾನ್ ನಗರವನ್ನು ವಶಪಡಿಸಿಕೊಳ್ಳುವುದರೊಂದಿಗೆ ಮುಗಿದೇ ಹೋಗುತ್ತದೆ ಎಂದು ಟ್ರಂಪ್ ಭಾವಿಸಿದ್ದರು. ಹಾಗೆ ನಂಬಿದ್ದಕ್ಕೆ ಬೆಲೆಯನ್ನೂ ತೆತ್ತರು. ಬಹುಶಃ ಅವರು ಚೀನಾದ ಪ್ರಸಿದ್ಧ ರಣತಂತ್ರಗಾರ ಸೂನ್ ತ್ಜು ಅವರ ಶಿಷ್ಯನಿರಬಹುದು. ‘ಆರ್ಟ್ ಆಫ್ ವಾರ್’ ಎಂಬ ಚೀನಾದ ಪುರಾತನ ಯುದ್ಧತಂತ್ರಗಳ ಬಗ್ಗೆ ಕೃತಿ ರಚಿಸಿದ ಸೂನ್ ತ್ಜು ಪ್ರಕಾರ ನೀವು ಯುದ್ಧವನ್ನು ಗೆದ್ದಾದ ಮೇಲೆಯೇ ಯುದ್ಧ ಆರಂಭಿಸಬೇಕು!
ಆದರೆ ಈ ಸಿದ್ಧಾಂತ ಟ್ರಂಪ್ ಅಂದುಕೊಂಡಷ್ಟು ಸರಳವಾದದ್ದಲ್ಲ. ಇರಾನ್‌ನ ಶಕ್ತಿಯೇನೆಂಬು ದನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಮಾತ್ರ ಅವರು ಸರಿಯಾದ ಹೆಜ್ಜೆ ಇರಿಸಲು ಸಾಧ್ಯ ವಾಗುತ್ತಿತ್ತು. ಟ್ರಂಪ್ ಮಾತುಕತೆ ನಡೆಸುತ್ತಿರುವ ರೀತಿಯಲ್ಲಿ ಈ ಹಿಂದೆ ಯಾರೂ ರಾಜತಾಂತ್ರಿಕ ಮಾತುಕತೆ ನಡೆಸಿದ ಉದಾಹರಣೆ ಇಲ್ಲ. ಆದರೆ, ಇರಾನ್‌ನ ರಾಜತಾಂತ್ರಿಕತೆಗೆ 1920ರ ದಶಕದಷ್ಟು ಹಿಂದೆಯೇ ಅಲ್ಲಿನ ರಾಜ ರೆಜಾ ಶಾ ಪಹ್ಲಾವಿ ಶ್ರೀಕಾರ ಹಾಕಿದ್ದ. ತೈಲೋತ್ಪಾದನೆ ಘಟಕಗಳನ್ನು ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಮಾತುಕತೆ ನಡೆಸಲು ರೆಜಾ ಶಾ ತನ್ನ ತೈಲ ಮಂತ್ರಿಗಳನ್ನು ಕಳುಹಿಸುತ್ತಿದ್ದ. ಆದರೆ, ಯಾವುದೇ ಕಾರಣಕ್ಕೂ ಒಪ್ಪಂದ ಮಾಡಿಕೊಂಡು ಬರಬೇಡಿ ಎಂಬ ಸೂಚನೆಯನ್ನು ನೀಡಿರುತ್ತಿದ್ದ. ಹಾಗೆಯೇ, ಯಾವುದೇ ಕಾರಣಕ್ಕೂ ಮುಂದಿನ ಸುತ್ತಿನ ಮಾತುಕತೆಯ ದಿನಾಂಕ ನಿಗದಿಪಡಿಸಿಕೊಳ್ಳದೆ ಬರಬೇಡಿ ಎಂದೂ ಹೇಳುತ್ತಿದ್ದ.
ಇರಾನ್ ಜೊತೆಗೆ ನಿಜವಾಗಿಯೂ ಸಂಧಾನ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಟ್ರಂಪ್‌ಗೆ ಜಗತ್ತಿನ ಮೊದಲ ‘ನೊಬೆಲ್ ಸಂಧಾನ ಪ್ರಶಸ್ತಿ ನೀಡಬೇಕು. ಆ ಪ್ರಶಸ್ತಿಯಲ್ಲಿ ಇರಾನಿಯನ್ನರು ಖಂಡಿತ ಪಾಲು ಕೇಳುವುದಿಲ್ಲ. ಏಕೆಂದರೆ ಅವರು ಪಾಶ್ಚಾತ್ಯ ದೇಶಗಳ ಆಭರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
**
ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ ಬ್ರಿಟನ್ನಿನ ರಾಜತಾಂತ್ರಿಕ ಅಧಿಕಾರಿಗಳಿಗಾಗಿ ನಿರ್ಮಿಸಿದ ನಗರ ನವದೆಹಲಿ. ನಂತರ ಭಾರತದ ಪ್ರಜಾಪ್ರಭುತ್ವವು ಅದನ್ನು ಜನನಿಬಿಡ ಮೆಟ್ರೋ ನಗರವಾಗಿ ಪರಿವರ್ತಿಸಿತು. ಈ ನಗರದ ಬಗ್ಗೆ ಇತ್ತೀಚೆಗೆ ಬ್ರಿಟಿಷ್ ನಿಯತಕಾಲಿಕೆ ‘ಸ್ಪೆಕ್ಟೇಟರ್’ನಲ್ಲಿ ಲೇಖನ ವೊಂದು ಪ್ರಕಟವಾಗಿದೆ. ಅದರಲ್ಲಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡಿದ್ದನ್ನು ಬ್ರಿಟಿಷರ ಅಚಾತುರ್ಯ ಎಂಬಂತೆ ಬರೆಯಲಾಗಿದೆ. ಅಂದರೆ, ಅಕಸ್ಮಾತ್ ಆಗಿ ಕೈಗೊಂಡ ತಪ್ಪು ನಿರ್ಧಾರ ದಿಂದ ಸ್ವಾತಂತ್ರ್ಯ ಕೊಟ್ಟುಹೋಯಿತು ಎಂಬಂತೆ ಹೇಳಲಾಗಿದೆ. ಭಾರತಕ್ಕೆ ಡೊಮಿನಿಯನ್ ಮಾನ್ಯತೆ ನೀಡಿ, ಚರ್ಚಿಲ್‌ರಂತಹವರು ವೈಸ್‌ರಾಯ್ ಅಥವಾ ಅಂತಹದ್ದೊಂದು ಹುದ್ದೆಯಲ್ಲಿ ಶಾಶ್ವತವಾಗಿ ಕುಳಿತು, ಭಾರತದ ಆರ್ಥಿಕತೆಯನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಂತಹ ಸಂಸ್ಥೆಯ ಕೈಗೆ ಕೊಟ್ಟಿದ್ದರೆ ಈ ದೇಶದ ಜನರು ಈಗಿರುವುದಕ್ಕಿಂತಲೂ ಚೆನ್ನಾಗಿ ಇರುತ್ತಿದ್ದರು ಎನ್ನುತ್ತದೆ.
1930ರ ದಶಕದಲ್ಲಿ ಬ್ರಿಟಿಷ್ ಸಾಹೇಬರು ಸ್ವಾತಂತ್ರ್ಯ ಹೋರಾಟದಲ್ಲಿ ‘ಕುತಂತ್ರಿ ಭಾರತೀಯರ’ ಕೈ ಮೇಲಾಗುತ್ತಿದೆ ಎಂದು ಚಿಂತಿಸಲು ಆರಂಭಿಸಿದ್ದು ಏಕೆ ಎಂಬುದನ್ನೂ ಲೇಖನದಲ್ಲಿ ವಿವರಿಸ ಲಾಗಿದೆ. ಭಾರತೀಯರಿಗೆ ಸಿಂಹದಂತಹ ಧೈರ್ಯ ಯಾವತ್ತೂ ಬರುವುದಿಲ್ಲ ಎಂದು ಬ್ರಿಟಿಷರು ಯೋಚಿಸಿದ್ದರಂತೆ. ಹೆಚ್ಚೆಂದರೆ, ನರಿಯ ಕಪಟತನವೇ ಭಾರತೀಯರ ರಹಸ್ಯ ಅಸ್ತ್ರವಾಗಬಹುದು ಎಂದುಕೊಂಡಿದ್ದರಂತೆ.
1920ರ ದಶಕದಲ್ಲಿ ನವದೆಹಲಿಯನ್ನು ನಿರ್ಮಿಸುವಾಗ ಬ್ರಿಟಿಷರಿಗೆ ವಿಚಿತ್ರ ಸಮಸ್ಯೆ ಎದುರಾಗಿತ್ತು. ಬ್ರಿಟಿಷ್ ದೊರೆಗಳಿಗಾಗಿ ನಿರ್ಮಿಸುವ ಸಾಮ್ರಾಜ್ಯದಲ್ಲಿ ದೊಡ್ಡ ಮಹಲುಗಳು ಇರಬೇಕಷ್ಟೆ. ಅವುಗಳನ್ನು ನಿರ್ಮಿಸಲು ಆರಂಭಿಸಿದಾಗ ರೈಸಿನಾ ಹಿಲ್ಸ್‌ನಿಂದ ಹರಿದು ಬರುವ ಅಸಂಖ್ಯ ಹಾವುಗಳು ಹಾಗೂ ಯಮುನೆಯ ದಡದಲ್ಲಿದ್ದ ಅಸಂಖ್ಯ ಸಮಾಧಿಗಳು ಅವರನ್ನು ಕಂಗೆಡಿಸಿದ್ದವು. ಭವ್ಯವಾದ ಮಂಚದ ಕೆಳಗೆ ಹಾವು ಅಡಗಿ ಕುಳಿತಿರುವಾಗ ಅದರ ಮೇಲೆ ವೈಸ್‌ರಾಯ್ ಮಲಗಿ ಕೊಂಡರೆ ಹೇಗಿರುತ್ತದೆ! ಅದಕ್ಕೆ ಏನಾದರೂ ಪರಿಹಾರ ಹುಡುಕಲೇಬೇಕಿತ್ತು.
ಕೊನೆಗೆ ಇಂಪೀರಿಯಲ್ ಸಿವಿಲ್ ಸರ್ವೀಸ್‌ನ ಅಧಿಕಾರಿಯೊಬ್ಬರಿಗೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಹಾವು ಹೊಡೆಯುವವರಿಗೆ ಭಕ್ಷೀಸು ನೀಡುವುದು! ಯಾರೇ ಹಾವು ಸಾಯಿಸಿ ತಂದುಕೊಟ್ಟರೂ ಅವರಿಗೆ ಹಣ ನೀಡುವುದಾಗಿ ಪ್ರಕಟಿಸಿದರು. ತಗೋ, ಭಾರತೀಯರು ಬಹಳ ಉತ್ಸಾಹದಿಂದ ಹಾವು ಹೊಡೆಯಲು ಶುರು ಮಾಡಿದರು. ಬ್ರಿಟಿಷರ ಮುಂದೆ ಸತ್ತ ಹಾವುಗಳು ರಾಶಿ ಬೀಳತೊಡಗಿದವು. ನಂತರ ಅವರಿಗೆ ಕೆಟ್ಟ ಸುದ್ದಿಯೊಂದು ಬಂತು. ಬಹುಶಃ ಬಾಣಸಿಗರು ತಮ್ಮ ಸಾಹೇಬರಿಗೆ ಇದನ್ನು ಹೇಳಿರಬಹುದು. ಭಾರತೀಯರು ಬ್ರಿಟಿಷರಿಗೆ ಚೆನ್ನಾಗಿ ಟೋಪಿ ಹಾಕಿದ್ದರು. ಅವರು ಸ್ವತಃ ಹಾವುಗಳನ್ನು ಸಾಕಿ ಬೆಳೆಸತೊಡಗಿದ್ದರು. ನಂತರ ಒಂದೊಂದನ್ನೇ ಸಾಯಿಸಿ ಬ್ರಿಟಿಷರಿಗೆ ಕೊಟ್ಟು ದುಡ್ಡು ಮಾಡುತ್ತಿದ್ದರು!
ಇದನ್ನು ಕೇಳಿ ಸಾಹೇಬರು ಕೂಡಲೇ ಹಾವು ಹೊಡೆಯುವ ಯೋಜನೆ ನಿಲ್ಲಿಸಲು ಆದೇಶ ನೀಡಿದರು. ಪರಿಣಾಮ ಇನ್ನೂ ಘೋರವಾಗಿತ್ತು. ಯೋಜನೆಯನ್ನು ಪ್ರಕಟಿಸಿದಾಗ ಇದ್ದುದಕ್ಕಿಂತ ಹೆಚ್ಚು ಹಾವುಗಳು ಆ ಯೋಜನೆ ಸ್ಥಗಿತಗೊಳಿಸಿದಾಗ ದೆಹಲಿಯಲ್ಲಿದ್ದವು.
ಕತೆಯ ಮೊದಲ ನೀತಿ: ಅಧಿಕಾರಿಗಳು ನೀಡುವ ಯಾವುದೇ ಪರಿಹಾರವು ಸಮಸ್ಯೆಯನ್ನು ಇನ್ನೂ ದೊಡ್ಡದು ಮಾಡಬಲ್ಲದು. ಕತೆಯ ಎರಡನೇ ನೀತಿ: ಅಧಿಕಾರದ ರಕ್ತಪ್ರವಾಹದಿಂದ ವಿಷ ತೆಗೆಯಲು ಸಾಧ್ಯವಿಲ್ಲ.
**
ಕ್ರೀಡಾಪ್ರೇಮಿಗಳಿಗೆ ಈ ವರ್ಷ ನಿಜಕ್ಕೂ ಹಬ್ಬ. ಎರಡು ಬಹುರಾಷ್ಟ್ರೀಯ ಕ್ರೀಡಾಕೂಟಗಳು ಜಗತ್ತಿನಲ್ಲಿ ನಡೆದಿವೆ ಅಥವಾ ನಡೆಯುತ್ತಿವೆ. ಮೊದಲನೆಯದು ಕ್ರಿಕೆಟ್, ಇನ್ನೊಂದು ಫುಟ್‌ಬಾಲ್. ಟಿ20 ಕ್ರಿಕೆಟ್ ವಿಶ್ವಕಪ್ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದಿದೆ. ಫುಟ್‌ಬಾಲ್ ವಿಶ್ವಕಪ್ ಜೂನ್-ಜುಲೈ ನಲ್ಲಿ ನಡೆಯುತ್ತಿದೆ. ಈ ಎರಡೂ ಕ್ರೀಡೆಗಳು ಹೇಗೆ ಹುಟ್ಟಿದವು ಎಂಬುದನ್ನು ಸಾಮಾಜಿಕ ಇತಿಹಾ ಸಜ್ಞರು ದಾಖಲಿಸಿದ್ದಾರೆ. ಜಗತ್ತಿನ ಯಾವುದೋ ಹಳ್ಳಿ ಮೂಲೆಯಲ್ಲಿ ಶತಮಾನಗಳ ಹಿಂದೆ ಹುಟ್ಟಿ, ನಿಧಾನವಾಗಿ ಪರ್ಯಾಯ ನಾಗರಿಕತೆಯೇ ಆಗಿ ಬೆಳೆದ ಕ್ರೀಡೆಗಳಿವು. ಇಂದು ಈ ಎರಡೂ ಕ್ರೀಡೆಗಳು ಅನೇಕ ದೇಶಗಳನ್ನು ಆಳುತ್ತಿವೆ. ಈ ಪೈಕಿ ಕ್ರಿಕೆಟ್‌ನ ಬೆಳವಣಿಗೆ ಹೆಚ್ಚು ಆಸಕ್ತಿಕರ. ಫುಟ್‌ಬಾಲ್ ಆಟ ತೊಂಭತ್ತು ನಿಮಿಷಗಳಲ್ಲಿ ಮುಗಿದುಹೋದರೆ, ಕ್ರಿಕೆಟ್ ನಮ್ಮನ್ನು ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಹಿಡಿದಿಟ್ಟುಕೊಂಡು, ಕಿಕ್ ಕೊಡುತ್ತದೆ.
ಫುಟ್‌ಬಾಲ್‌ನಲ್ಲಿ ಈಗ ಹಳೆಯ ಯುರೋಪಿಯನ್ ಸಾಮ್ರಾಜ್ಯಗಳು ಕುಸಿದುಬಿದ್ದಿವೆ. ಫುಟ್‌ಬಾಲ ನ್ನು ವಸಾಹತುಶಾಹಿಗಳ ಮುಷ್ಟಿಯಿಂದ ತಾತ್ವಿಕವಾಗಿ ಬಿಡುಗಡೆಗೊಳಿಸುವ ಕಾರ್ಯ ಶುರು ವಾಗಿದ್ದು ದಕ್ಷಿಣ ಅಮೆರಿಕಾದಲ್ಲಿ. ಯುರೋಪ್‌ನ ವಸಾಹತುಶಾಹಿಗಳನ್ನು ಮೊಟ್ಟಮೊದಲು ಸೋಲಿಸಿದವರು ಲ್ಯಾಟಿನ್ ಅಮೆರಿಕಾ ಖಂಡದವರು. ಫುಟ್‌ಬಾಲ್ ಜಗತ್ತಿನಲ್ಲಿ ಆಫ್ರಿಕಾ ಈಗ ಹೊಸ ನಕ್ಷತ್ರ ಪುಂಜವಾಗಿ ಹೊರಹೊಮ್ಮಿದೆ.
ಕ್ರಿಕೆಟ್‌ಗೆ ಬಂದರೆ, ಆ ಆಟ ಆರಂಭವಾಗಿದ್ದು ಬ್ರಿಟಿಷ್ ರಾಜಮನೆತನದವರ ಮೋಜಿಗಾಗಿ. ನಂತರ ಅದು ಬ್ರಿಟನ್ನಿನ ವಸಾಹತು ದೇಶಗಳ ರಾಷ್ಟ್ರೀಯ ಕ್ರೀಡೆಯಾಯಿತು. ಕ್ರಮೇಣ ಅಂತರ್-ಜನಾಂಗೀಯ ಸೌಹಾರ್ದದ ಕ್ರೀಡೆಯಾಗಿ ಬೆಳೆಯಿತು. ಈ ಪಯಣ ನಿಜಕ್ಕೂ ಅದ್ಭುತವಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಅಕೀಲ್ ಹೊಸೇನ್ ಮತ್ತು ಗುಡಾಕೇಶ್ ಮೋಟಿಯಂತಹ ತಾರೆಯರ ಕುಟುಂಬದವರು ಒಂದು ವಸಾಹತುವಿನಿಂದ ಇನ್ನೊಂದು ವಸಾಹತುವಿಗೆ ವಲಸೆ ಹೋದವರು.
1884 ಮತ್ತು 1915ರ ನಡುವೆ ನಮೀಬಿಯಾ ದೇಶ ಜರ್ಮನಿಯ ಅಡಾಲ್ ಲೂಡೆರಿಟ್ಸ್‌ನ ಖಾಸಗಿ ಆಸ್ತಿಯಾಗಿತ್ತು. 1915ರಲ್ಲಿ ಮೊದಲನೇ ವಿಶ್ವ ಮಹಾಯುದ್ಧದಲ್ಲಿ ದಕ್ಷಿಣ ಆಫ್ರಿಕಾದವರು ಆ ಜಾಗವನ್ನು ವಶಪಡಿಸಿಕೊಂಡು ಜರ್ಮನಿಯ ಗವರ್ನರ್ ಥಿಯೋಡೋರ್ ಸೀಟ್ಸ್‌ನನ್ನು ಒದ್ದೋಡಿ ಸಿದ್ದರು. ತನ್ಮೂಲಕ ಅದು ಬ್ರಿಟಿಷ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿತು. ದಕ್ಷಿಣ ಆಫ್ರಿಕಾದ ಬೋಯರ್‌ಗಳು ಮತ್ತು ಬಿಳಿಯರಿಬ್ಬರೂ ಸೇರಿ ನಮೀಬಿಯಾವನ್ನು ಆಳುತ್ತಿದ್ದರು. ಇಂದು ಆ ದೇಶ ಕ್ರಿಕೆಟ್ ಜಗತ್ತಿನ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮಿದೆ. 1990ರ ವರೆಗೂ ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ದೇಶ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಬಹಳ ದೊಡ್ಡದು.
ಕ್ರಿಕೆಟ್ ಜಗತ್ತಿನಲ್ಲಿ ರೋಚಕ ಏಳುಬೀಳು ಕಂಡ ದೇಶ ಇಟಲಿ. ಶ್ರೀಲಂಕಾ ಮೂಲದ ಆಟಗಾರ ನೊಬ್ಬ ಇಟಲಿಯ ರಾಷ್ಟ್ರೀಯ ಕ್ರಿಕೆಟ್ ಟೀಮ್‌ನಲ್ಲಿದ್ದಾನೆ. ಅವನು ಇಟಲಿಯಲ್ಲಿ ಪಿಜ್ಜಾ ತಯಾರಿ ಸುತ್ತಾ ಕ್ರಿಕೆಟ್ ಆಡುತ್ತಾನೆ. ಅವನ ಹೆಸರು ಕ್ರಿಶನ್ ಕಲುಗಮಗೆ. ನೇಪಾಳದ ವಿರುದ್ಧ ಆಡಿದ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದ್ದ. ಅದು ಇಡೀ ದೇಶದಲ್ಲಿ ಸಂಭ್ರಮಾ ಚರಣೆಗೆ ಕಾರಣವಾಗಿತ್ತು. ಇಟಲಿಯಲ್ಲಿ ಕ್ರಿಕೆಟ್ ಶುರುವಾಗಿದ್ದು 1793ರಲ್ಲಿ. ನೆಲ್ಸನ್‌ನ ನಾವಿಕರು ಆಗ ನೇಪಲ್ ಬಂದರಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ತೀರಾ ಇತ್ತೀಚೆಗೆ, 2024ರಲ್ಲಿ, ಇಟಲಿಯ ಒಬ್ಬ ಮೇಯರ್ ಈ ಕ್ರೀಡೆಯನ್ನೇ ನಿಷೇಧಿಸಬೇಕು ಎಂದು ಕೋರಿದ್ದ. ಏಕೆಂದರೆ ಅದನ್ನು ಹಾರ್ಡ್ ಬಾಲ್‌ನಲ್ಲಿ ಆಡುತ್ತಾರೆ ಎಂಬುದು ಅವನ ಆಕ್ಷೇಪವಾಗಿತ್ತು.
ಎರಡು ವರ್ಷದ ನಂತರ ರೋಮ್‌ನಿಂದ ಒಬ್ಬ ಇಂಗ್ಲಿಷ್ ಪತ್ರಕರ್ತ, ‘ಇಟಾಲಿಯನ್ನರು ಕೆಲವೊಮ್ಮೆ ಇದು ಪೋಲೋ ಆಟ ಎಂದುಕೊಂಡು ‘ಕುದುರೆಗಳು ಎಲ್ಲಿ ಹೋದವು’ ಎಂದು ಕೇಳುತ್ತಾರೆ!’ ಎಂದು ಬರೆದಿದ್ದ. ಈಗ ಅವರಿಗೆ ಕ್ರಿಕೆಟ್ ಬಗ್ಗೆ ತಿಳಿಯುತ್ತಿದೆ. ಪಾಕಿಸ್ತಾನಿ ಮೂಲದ ಇಟಲಿ ಕ್ರಿಕೆಟಿಗ ಜರ್ಯಾಬ್ ಅರ್ಷದ್ ಒಂದು ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ 2026ರ ಪಂದ್ಯದ ನಂತರ ಇಟಲಿಯಲ್ಲಿ ಕ್ರಿಕೆಟ್‌ನ ಹುಚ್ಚು ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ ಎಂದಿದ್ದಾನೆ. ಇಟಲಿಯ ಕ್ರಿಕೆಟ್ ತಂಡದಲ್ಲಿ ಜೈನ್ ಅಲಿ, ಅಲಿ ಹಸನ್, ಹ್ಯಾರಿ ಮತ್ತು ಬೆಂಜಮಿನ್ ಮನೆಂಟಿ, ಜಸ್‌ಪ್ರೀತ್ ಸಿಂಗ್, ಸೈಯದ್ ನಖ್ವಿ ಹಾಗೂ ಜೆಜೆ ಸ್ಮಟ್ಸ್ ಇದ್ದಾರೆ. ಜಸ್‌ಪ್ರೀತ್, ಅಲಿ ಹಸನ್ ಹಾಗೂ ಜೈನ್ ಅಲಿಯ ಜನ್ಮಸ್ಥಳ ಅವರ ಪಾಸ್‌ಪೋರ್ಟ್‌ಗಳಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಆ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ವಿದೇಶೀಯರಿಗೆ ಉದಾರವಾಗಿ ನಾಗರಿಕತ್ವ ನೀಡಿದ್ದರೆ ಹೀಗೆ ಗುರುತಿಸುವುದು ರೂಢಿ.
ಜಿಂಬಾಬ್ವೆ ತಂಡದ ಕ್ಯಾಪ್ಟನ್ ಸಿಕಂದರ್ ರೆಜಾ. ಆತ ಕೂಡ ಬಹುರಾಷ್ಟ್ರೀಯ ಹಿನ್ನೆಲೆಯವನು. ಅತಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಜಿಂಬಾಬ್ವೆ ಸೋಲಿಸಿದಾಗ ಸಿಕಂದರ್ ರೆಜಾ ಮೇಲೆ ಹೊಗಳಿಕೆಯ ಮಳೆಯೇ ಸುರಿದಿತ್ತು. ಅದನ್ನು ನೋಡಿ ಅವನು ಬಹಳ ಸಂತೋಷದಿಂದ ಜಿಂಬಾಬ್ವೆಯ ಸಂಸ್ಕೃತಿ ಹಾಗೂ ಒಗ್ಗಟ್ಟನ್ನು ಹೊಗಳಿ ಮಾತನಾಡಿದ್ದ. ಸಂಕಷ್ಟದಲ್ಲೇ ಬೆಂದ ದೇಶದಲ್ಲಿ ಕ್ರಿಕೆಟ್‌ನಿಂದ ಏಕತೆ ಮೂಡಿರುವುದು ಅವನ ಖುಷಿಗೆ ಇನ್ನೊಂದು ಕಾರಣ. ಅವನ ಬೆಸ್ಟ್ ಬ್ಯಾಟರ್ ಬ್ರಿಯಾನ್ ಬೆನೆಟ್ 69 ರನ್ ಗಳಿಸಿ ನಾಟೌಟ್ ಆಗಿದ್ದ. ಅವನ ಬೆಸ್ಟ್ ಬೌಲರ್‌ಗಳಾದ ಬ್ಲೆಸಿಂಗ್ ಮುಜರಬಾನಿ ಹಾಗೂ ಬ್ರಾಡ್ ಇವಾನ್ಸ್ 17 ರನ್‌ಗೆ ನಾಲ್ಕು ಹಾಗೂ 23 ರನ್‌ಗೆ ಮೂರು ವಿಕೆಟ್ ಕಿತ್ತಿದ್ದರು. ಜುಲೈ 23ರಂದು ಹರಾರೆಯ ಸುಂದರ ನಗರದಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಯಲಿದೆ. ಫಲಿತಾಂಶ ಊಹಿಸಲು ಸಾಧ್ಯವಿಲ್ಲ. ನಾನಿದನ್ನು ಬರೆಯುತ್ತಿರುವಾಗ ಐರ್ಲೆಂಡ್ ತಂಡ ಎರಡನೇ ಬಾರಿ ಭಾರತವನ್ನು ಸೋಲಿಸಿದ ಸುದ್ದಿ ಬರುತ್ತಿದೆ. ಕ್ರೀಡೆಯ ಮೂಲಭೂತ ತತ್ವವೆಂದರೆ ಅದರಲ್ಲಿ ಪ್ರಬಲರ ಆಡಂಬರವು ದುರ್ಬಲರ ಸಾಮರ್ಥ್ಯ ವನ್ನು ಹೆಚ್ಚಿಸುತ್ತದೆ.
**
ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಆಡುತ್ತಿರುವ 48 ತಂಡಗಳ ಪೈಕಿ ಪ್ರತಿಯೊಂದು ತಂಡದಲ್ಲೂ ಮಿನಿ ಜಗತ್ತೇ ಕಾಣಿಸುತ್ತಿದೆ. ನಾಲ್ಕನೇ ಒಂದರಷ್ಟು ಆಟಗಾರರು ಅವರು ಪ್ರತಿನಿಧಿಸುತ್ತಿರುವ ದೇಶದಲ್ಲಿ ಹುಟ್ಟಿದವರಲ್ಲ. ಜಗತ್ತಿನಲ್ಲಿ 30 ಕೋಟಿಗೂ ಹೆಚ್ಚು ಜನರು ಮೊದಲ ಅಥವಾ ಎರಡನೇ ತಲೆಮಾರಿನ ವಲಸಿಗರೇ ಆಗಿರುವು ದರಿಂದ ಫುಟ್‌ಬಾಲ್ ತಂಡದಲ್ಲಿ ವಲಸಿಗರು ಇರುವುದು ದೊಡ್ಡ ವಿಷಯವಲ್ಲ ಬಿಡಿ. ಅಭಾವದಂತೆಯೇ ಪ್ರತಿಭೆ ಕೂಡ ವಲಸೆಗೆ ಕಾರಣವಾಗುತ್ತದೆ.
ಮೊರಕ್ಕೋ ತಂಡದ ಆಟಗಾರರ ಪೈಕಿ ಒಬ್ಬನೇ ಒಬ್ಬನೂ ಮೊರಕ್ಕೋದಲ್ಲಿ ವಾಸಿಸುವುದಿಲ್ಲ. ಅವರೆಲ್ಲರೂ ಫುಟ್‌ಬಾಲ್ ಪಂದ್ಯವಿದ್ದಾಗ ತಮ್ಮ ಶ್ರೀಮಂತ ದೇಶದಿಂದ ಮೊರಕ್ಕೋಗೆ ಬರುತ್ತಾರೆ. ಅವರ ಮೂಲ ದೇಶದಲ್ಲಿ ಫುಟ್‌ಬಾಲ್ ಜನಪ್ರಿಯ ಕ್ರೀಡೆ. ಹೀಗಾಗಿ ಅವರು ಮೊರಕ್ಕೋದಲ್ಲಿ ಸುಲಭವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಾರೆ. ದೇಶಗಳು ಇಂದು ಕರಿಯ ಅಥವಾ ಬಿಳಿಯರಿಂದ ಗುರುತಿಸಿಕೊಳ್ಳುತ್ತಿಲ್ಲ. ಮೊರಕ್ಕೋ ತಂಡ 32ನೇ ಸುತ್ತಿನಲ್ಲಿ ಗೆದ್ದು ಬೀಗಿದಾಗ ನೆದರ್ ಲೆಂಡ್‌ನ ಜೆರ್ಸಿಯಲ್ಲಿ ಬಿಕ್ಕಿ ಬಿಕ್ಕಿ ಅಳುವ ಕರಿಯರು ಕಾಣಿಸುತ್ತಾರೆ. ಪನಾಮಾ ವಿರುದ್ಧ ಆಡಿದ ಇಂಗ್ಲೆಂಡ್ ತಂಡದಲ್ಲಿ 12 ಮಂದಿ ಮಿಶ್ರ-ಜನಾಂಗೀಯ ಅಥವಾ ಕಪ್ಪುವರ್ಣೀಯ ಆಟಗಾರ ರಿದ್ದರು.
2026ರ ವಿಶ್ವಕಪ್‌ನಲ್ಲಿ ಈಗಾಗಲೇ ಇಬ್ಬರು ವಿಜೇತರಾಗಿದ್ದಾರೆ. ಒಬ್ಬರು- ಬುಕಿಗಳು. ಬೆಟ್ಟಿಂಗ್‌ನಿಂದ 50 ಬಿಲಿಯ ಡಾಲರ್‌ಗೂ ಹೆಚ್ಚು ದುಡ್ಡು ಬಾಚುವ ನಿರೀಕ್ಷೆಯಲ್ಲಿದ್ದಾರೆ. ನೀವು ಓದಿದ್ದು ಸರಿಯಿದೆ; ಅದು 50 ಬಿಲಿಯನ್ ಡಾಲರ್! ರನ್ನರ್ ಅಪ್ ಪ್ರಶಸ್ತಿ ಗೆದ್ದವರು ಫಿಫಾ ಆಡಳಿತ ಮಂಡಳಿಯವರು. ಐಪಿಎಲ್ ಕ್ರಿಕೆಟ್‌ನ ಮಾರ್ಕೆಟಿಂಗ್ ತಂತ್ರವನ್ನೂ ಪ್ರಚಾರದಲ್ಲಿ ಮೀರಿಸಿದ ಖ್ಯಾತಿ ಅದರದು. ಮುಂದೊಂದು ದಿನ ಫಿಫಾ ಎಂಬುದು ಖಾಸಗಿ ಕಂಪನಿಯಾಗಿ ರೂಪಾಂತರಗೊಂಡು ಐಪಿಒ ಮೂಲಕ ಷೇರು ಬಿಡುಗಡೆ ಮಾಡುವ ಸಾಧ್ಯತೆಯಿದೆಯೇ? ಇದರ ಬಗ್ಗೆ ಬೆಟ್ ಕಟ್ಟಬಹುದು.
ಮುಗಿಸುವ ಮುನ್ನ ಮತ್ತೆ ಆರಂಭಿಕ ಪ್ರಶ್ನೆಗೆ ಬರೋಣ. ಫಿಫಾದವರು ಬಡಾಯಿ ಕೊಚ್ಚಿಕೊಳ್ಳುವು ದನ್ನು ಯಾವಾಗ ನಿಲ್ಲಿಸುತ್ತಾರೆ? ‘ಶಾಂತಿಗಾಗಿ ಒಂದಾಗೋಣ’ ಎಂಬುದು ಅದರ ಈ ಸಲದ ಸ್ಲೋಗನ್. ನನ್ನ ಪ್ರಕಾರ ಅತ್ಯಂತ ಮೂರ್ಖತನದ ಘೋಷಣೆಯಿದು. ಫುಟ್‌ಬಾಲ್‌ನಲ್ಲಿ ಸ್ಪರ್ಧೆಗಾಗಿ ಪರಸ್ಪರರ ವಿರುದ್ಧ ಆಡುತ್ತಿರುವ ಅಮೆರಿಕ ಮತ್ತು ಇರಾನ್ ದೇಶಗಳು ಅತ್ತ ಮಧ್ಯಪ್ರಾಚ್ಯದಲ್ಲಿ ಒಬ್ಬರ ಮೇಲೊಬ್ಬರು ಬಾಂಬ್ ಹಾಕಿಕೊಳ್ಳುತ್ತಿವೆ! ಸೌದಿ ಅರೇಬಿಯಾ, ಕತಾರ್, ಈಜಿಪ್ಟ್, ಇರಾಕ್ ಮತ್ತು ಜೋರ್ಡಾನ್ ದೇಶಗಳು ಒಂದೋ ಇಸ್ರೇಲ್ ವಿರುದ್ಧ, ಇಲ್ಲವೇ ಇರಾನ್ ವಿರುದ್ಧ ಯುದ್ಧ ನಡೆಸುತ್ತಿವೆ. ಟರ್ಕಿಯಂತೂ ಯುದ್ಧಕ್ಕೆ ಸನ್ನದ್ಧವಾಗಿ ಕುಳಿತಿದೆ. ದಕ್ಷಿಣ ಕೊರಿಯಾ ಸರಕಾರ ಉತ್ತರ ಕೊರಿಯಾ ವಿರುದ್ಧ 5 ಲಕ್ಷ ಡ್ರೋನ್ ವಾರಿಯರ್‌ಗಳನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದೆ. ಹೈಟಿ ಮತ್ತು ಈಕ್ವೆಡಾರ್‌ನ ಜನರು ಕ್ರಿಮಿನಲ್ ಗ್ಯಾಂಗ್‌ಗಳ ಸಂಘರ್ಷದಲ್ಲಿ ಸಿಲುಕಿಕೊಂಡು ಛಿದ್ರವಾ ಗುತ್ತಿದ್ದಾರೆ. ಶಾಂತಿಯ ಕತೆ ಬಿಡಿ, ಅದು ಎಲ್ಲಾದರೂ ಸಿಗುತ್ತದೆ. ಫುಟ್‌ಬಾಲ್‌ಗೆ ಅಂಟಿಕೊಳ್ಳಿ ಸಾಕು.