Roopa Gururaj Column: ಏಕ ಶ್ಲೋಕಿ ಮಜ್ಜಿಗೆ ರಾಮಾಯಣದ ಸಾರ
ಒಮ್ಮೆ ಪಂಡಿತನೊಬ್ಬ ಮತ್ತೊಂದು ಹಳ್ಳಿಗೆ ನಡೆದುಹೋಗುತ್ತಾ ಇರುತ್ತಾನೆ. ದಾರಿಯಲ್ಲಿ ವಿಪರೀತ ಬಾಯಾರಿಕೆಯಾಗುತ್ತದೆ. ಮೊದಲು ಸಿಕ್ಕ ಮನೆಯ ಕದ ಬಡಿಯುತ್ತಾನೆ. ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆಗೆಯುತ್ತಾಳೆ. ‘ಆಸರೆಗೆ ಏನಾದರೂ ಕೊಡು’ ಅನ್ನುತ್ತಾನೆ ಪಂಡಿತ. ಹುಡುಗಿ ಅಡುಗೆಮನೆ ತಡಕಾಡಿ, ಒಂದು ಲೋಟ ಮಜ್ಜಿಗೆ ಹಿಡಿದು ಬರುತ್ತಾಳೆ ‘ಮಜ್ಜಿಗೆ ಹೊರತಾಗಿ ನಿಮಗೆ ಕೊಡಲು ಬೇರೇನೂ ಇಲ್ಲ


ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ಪಂಡಿತನೊಬ್ಬ ಮತ್ತೊಂದು ಹಳ್ಳಿಗೆ ನಡೆದು ಹೋಗುತ್ತಾ ಇರುತ್ತಾನೆ. ದಾರಿಯಲ್ಲಿ ವಿಪರೀತ ಬಾಯಾರಿಕೆಯಾಗುತ್ತದೆ. ಮೊದಲು ಸಿಕ್ಕ ಮನೆಯ ಕದ ಬಡಿಯುತ್ತಾನೆ. ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆಗೆಯುತ್ತಾಳೆ. ‘ಆಸರೆಗೆ ಏನಾದರೂ ಕೊಡು’ ಅನ್ನುತ್ತಾನೆ ಪಂಡಿತ. ಹುಡುಗಿ ಅಡುಗೆಮನೆ ತಡಕಾಡಿ, ಒಂದು ಲೋಟ ಮಜ್ಜಿಗೆ ಹಿಡಿದು ಬರುತ್ತಾಳೆ ‘ಮಜ್ಜಿಗೆ ಹೊರತಾಗಿ ನಿಮಗೆ ಕೊಡಲು ಬೇರೇನೂ ಇಲ್ಲ. ಇದನ್ನು ಕುಡಿದು ನೀವು ನನಗೆ ರಾಮಾಯಣ ಅಥವಾ ಮಹಾಭಾರತದ ಕಥೆ ಹೇಳಬೇಕು’ ಅನ್ನುತ್ತಾಳೆ. ಪಂಡಿತ ಆಗಲೆನ್ನುತ್ತಾನೆ. ಮಜ್ಜಿಗೆ ಕುಡಿದು ಈ ಕೆಳಗಿನ ಶ್ಲೋಕ ಹೇಳುತ್ತಾನೆ :
ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ
ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ
ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ
ರಾಮಾಯಣಂ||
ಕನ್ನಡದಲ್ಲಿ: ಕಾಡಿಗೆ ಹೋದ ರಾಮ, ಚಿನ್ನದ ಜಿಂಕೆಯನ್ನು ಕೊಂದ. ವೈದೇಹಿಯ ಅಪಹರಣ ವಾಯಿತು, ತಡೆಯಲು ಹೋದ ಜಟಾಯುವಿನ ಮರಣವಾಯಿತು. ರಾಮನಿಗೆ ಸುಗ್ರೀವ ಸಿಕ್ಕು ಮಾತುಕತೆ ನಡೆಸಲಾಯಿತು. ವಾಲಿಯ ವಧೆಯಾಯಿತು. ಸಮುದ್ರವನ್ನು ಜಿಗಿದು, ಲಂಕೆಯನ್ನು ಸುಡಲಾಯಿತು. ಆಮೇಲೆ ರಾವಣ ಕುಂಭಕರ್ಣರ ಸಂಹಾರ ನಡೆಯಿತು.
ಇದನ್ನೂ ಓದಿ: Roopa Gururaj Column: ಶ್ರೀಕೃಷ್ಣ ಕೆಳಗಿಳಿದ ಕೂಡಲೇ ಹೊತ್ತಿ ಉರಿದ ಅರ್ಜುನನ ರಥ
ಇದು ರಾಮಾಯಣದ ಕಥೆ. ಒಂದು ಲೋಟ ಮಜ್ಜಿಗೆಯ ಮೌಲ್ಯಕ್ಕೆ ಸರಿದೂಗುವಂತೆ ಇಡಿಯ ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ಹೇಳುತ್ತಾನೆ ಪಂಡಿತ. ಈ ಕಥನವನ್ನು ಆಧರಿಸಿ ಏಕಶ್ಲೋಕಿ ರಾಮಾಯಣವನ್ನು ಮಜ್ಜಿಗೆ ರಾಮಾಯಣವೆಂದು ಕರೆಯುವ ರೂಢಿ ಮೊದಲಾಯಿತು!
ಮೂಲ ರಾಮಾಯಣದ ಅನಂತರ ನೂರಾರು ರಾಮಾಯಣಗಳು ಬರೆಯಲ್ಪಟ್ಟಿದ್ದು, ಭಾರತ ಮಾತ್ರವಲ್ಲ, ದಕ್ಷಿಣ ಪೂರ್ವ ಏಷ್ಯಾದ ಹಲವು ದೇಶಗಳು ತಮ್ಮದೇ ಆದ ರಾಮಾಯಣ ಕಥನ ವನ್ನು ಹೇಳುತ್ತವೆ. ಆದಿಕವಿ ಎಂಬ ಖ್ಯಾತಿ ಪಡೆದ ವಾಲ್ಮೀಕಿಯು ರಚಿಸಿದ ಮೂಲ ರಾಮಾಯಣವು 24000 ಶ್ಲೋಕಗಳಿಂದ ಕೂಡಿದ್ದು, 7 ಕಾಂಡಗಳಲ್ಲಿ ನಿರೂಪಿಸಲ್ಪಟ್ಟಿದೆ.
ರಾಮಾಯಣದ ಕಥೆ ವಾಲ್ಮೀಕಿಯು ಕಾವ್ಯ ರೂಪದಲ್ಲಿ ರಚಿಸುವ ಮೊದಲೇ ಜನಜನಿತವಾಗಿತ್ತೆಂದು ತೋರುತ್ತದೆ. ಇದು ಕೇವಲ ಕಲ್ಪಿತ ಕಾವ್ಯವಾಗಿರದೆ, ಐತಿಹಾಸಿಕ ಸತ್ಯ ಎಂದೂ ಹೇಳಲಾಗುತ್ತದೆ. ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ಗೋಮತಿ, ತಮಸಾ ನದಿ, ದಂಡ ಕಾರಣ್ಯ, ಕಿಷ್ಕಿಂಧೆ ಮುಂತಾದ ಸ್ಥಳಗಳು, ಕಾಡು ಕಣಿವೆ ಮತ್ತು ನದಿಗಳು ಇಂದಿಗೂ ಪ್ರಸಿದ್ಧ ಯಾತ್ರಾಸ್ಥಳಗಳು.
ರಾಮಾಯಣವನ್ನು 7 ಭಾಗಗಳಾಗಿ ವಿಂಗಡಿಸಿ ಕಾಂಡಗಳಾಗಿ ಮಾಡಿದ್ದಾರೆ. ಬಾಲ ಕಾಂಡದಲ್ಲಿ ರಾಮನ ಬಾಲ್ಯ, ಸೀತಾ ಸ್ವಯಂವರ ಮುಂತಾದ ವಿವರಗಳಿವೆ. ಅಯೋಧ್ಯಾ ಕಾಂಡದಲ್ಲಿ ಕೈಕೆಯಿ ಕೇಳುವ 3 ವರಗಳು ಮತ್ತು ಪುತ್ರಯೋಗ ತಾಳಲಾರದೆ ದಶರಥನ ಸಾವು. ಅರಣ್ಯ ಕಾಂಡದಲ್ಲಿ ಕಾಡಿನಲ್ಲಿ ರಾಮ ಸೀತೆಯರ ದಿನಗಳು ಮತ್ತು ಸೀತಾಪಹರಣ.
ಕಿಷ್ಕಿಂಧಾ ಕಾಂಡದಲ್ಲಿ ಸೀತೆಯನ್ನರಸುತ್ತಾ ರಾಮ ಕಿಷ್ಕಿಂದೆಗೆ ಬಂದು ಸುಗ್ರೀವ ಹನುಮಂತ ಮುಂತಾದ ವಾನರರ ಸ್ನೇಹ ಮಾಡಿ ಸೀತಾನ್ವೇಷಣೆಗೆ ಹೊರಡುವುದು. ಸುಂದರ ಕಾಂಡದಲ್ಲಿ ಹನುಮಂತನ ಬಗೆಗಿನ ವಿವರಗಳು. ಅವನ ಸಾಗರೋಲ್ಲಂಘನ. ಯುದ್ಧ ಕಾಂಡದಲ್ಲಿ ರಾಮ ರಾವಣರ ಯುದ್ಧ. ರಾವಣನ ಸಂಹಾರ ಮತ್ತು ಅಯೋಧ್ಯೆಗೆ ಮರಳಿದ ರಾಮನ ಪಟ್ಟಾಭಿಷೇಕ.
ಉತ್ತರ ಕಾಂಡದಲ್ಲಿ , ಅಗಸನ ಮಾತು ಕೇಳಿ ರಾಮ ಸೀತೆಯ ವಿಯೋಗ. ಹೀಗೆ ರಾಮಾಯಣವು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಒಂದು ಅವಿಭಾಜ್ಯ ಅಂಗವೇ ಆಗಿದೆ. ಇದನ್ನು ಓದಿ ಅರ್ಥೈಸುವುದರಿಂದ ನಮ್ಮ ಸಾಂಸ್ಕೃತಿಕ ಹಿನ್ನೆಲೆ, ಮೌಲ್ಯಗಳ ಪರಿಚಯ ಎಳೆಯ ವಯಸ್ಸಿನಿಂದ ನಮಗೆ ಆಗುತ್ತಾ ಹೋಗುತ್ತದೆ.
ಕಷ್ಟಕರ ಸಂದರ್ಭಗಳಲ್ಲಿ ಹೇಗೆ ಧೈರ್ಯದಿಂದ ವರ್ತಿಸಬೇಕು. ಉತ್ತಮ ನಡವಳಿಕೆಯ ಆದರ್ಶ ವ್ಯಕ್ತಿತ್ವದ ಮಹತ್ವ. ಬದುಕಿನ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಎಲ್ಲವನ್ನೂ ವಿವಿಧ ಪಾತ್ರಗಳ ಮೂಲಕ ನಮ್ಮ ಧರ್ಮ ಗ್ರಂಥವಾದ ರಾಮಾಯಣ ಹಂತ ಹಂತವಾಗಿ ಅನೇಕ ಸಂದರ್ಭಗಳ ಮೂಲಕ ರಾಮನ ಜೀವನಗಾಥೆಯ ಮೂಲಕ ನಮಗೆ ತಿಳಿಸುತ್ತಾ ಹೋಗುತ್ತದೆ.
ನಮ್ಮ ಹಿರಿಯರು ನಮ್ಮ ಸಂಸ್ಕೃತಿ ಜೀವನ ಮೌಲ್ಯಗಳನ್ನೆಲ್ಲ ಈ ಧರ್ಮ ಗ್ರಂಥಗಳ ಮೂಲಕ ನಮಗೆ ಧಾರೆ ಎರೆದು ಹೋಗಿದ್ದಾರೆ. ಇದನ್ನು ಸರಿಯಾಗಿ ಬಳಸಿಕೊಳ್ಳುವ ಕಲೆ ನಮಗೆ ತಿಳಿದಿರ ಬೇಕಷ್ಟೆ.