ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಬೀಸೋ ದೊಣ್ಣೆಯಿಂದ ಪಾರಾಗಲು ಹೀಗೊಂದು ಅಸ್ತ್ರ !

ಯಾವುದೇ ವಿವಾದ ಸೃಷ್ಟಿಯಾಗಿ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ, ಆ ಕ್ಷಣದಿಂದ ತಪ್ಪಿಸಿಕೊಳ್ಳಬೇಕು ಎಂದು ಸರಕಾರ ತೀರ್ಮಾನಿಸಿದರೆ ರಚನೆಯಾಗುವುದೇ ವಿಶೇಷ ತನಿಖಾ ತಂಡವೆಂದರೆ ತಪ್ಪಾಗುವುದಿಲ್ಲ. ಈ ಎಸ್ಐಟಿಗೆ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಅವರಿಗೆ ಇಂತಿಷ್ಟು ಸಮಯದಲ್ಲಿಯೇ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿ, ಅದಕ್ಕಾಗಿ ಒಂದು ಅಧಿಕಾರಿಗಳ ತಂಡ, ಕಚೇರಿಯನ್ನು ಸೃಷ್ಟಿಸಿದರೆ ಅಲ್ಲಿಗೆ ಆ ವಿವಾದದ ಕಾವು ಆರಿದಂತೆ.

ಬೀಸೋ ದೊಣ್ಣೆಯಿಂದ ಪಾರಾಗಲು ಹೀಗೊಂದು ಅಸ್ತ್ರ !

ಅಶ್ವತ್ಥಕಟ್ಟೆ

ಎಸ್‌ಐಟಿಗಳ ರಚನೆ ಕೇವಲ ಯಾವುದೋ ಒಂದು ಸರಕಾರಕ್ಕೆ ಸೀಮಿತವಾಗಿಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆ ಸರಕಾರಕ್ಕೆ ಸುಲಭವಾಗಿ ಸಿಗುವ ಏಕಮಾತ್ರ ಅಸ್ತ್ರವೆಂದರೆ ಎಸ್‌ಐಟಿ ಎನ್ನುವುದಾಗಿದೆ. ಕೆಲಕಾಲದ ಬಳಿಕ ಈ ವಿಶೇಷ ತನಿಖಾ ತಂಡದ ತನಿಖಾ ಪ್ರಕ್ರಿಯೆ ಎಲ್ಲಿಯ ತನಕ ಬಂದಿದೆ? ಸರಕಾರ ಸಲ್ಲಿಸುವ ವರದಿಯಲ್ಲಿ ಏನೇನೇನಿದೆ? ಎನ್ನುವ ಬಗ್ಗೆ ಜನರೂ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ, ಸರಕಾರವೂ ಅದನ್ನು ಪರಿಶೀಲಿಸಲು ಹೋಗುವುದಿಲ್ಲ ‘ಬೀಸೋ ದೊಣ್ಣೆಯಿಂದ ಪಾರಾದರೆ ನೂರು ವರ್ಷ ಆಯಸ್ಸು’ ಎನ್ನುವ ಮಾತೊಂದಿದೆ.

ರಾಜನೀತಿಯಲ್ಲಿ ಈ ಮಾತಿಗೆ ಅದರದ್ದೇ ಆದ ತೂಕವಿದೆ. ಅದರಲ್ಲಿಯೂ ರಾಜಕಾರಣಿಗಳ ವಿರುದ್ಧ ಅಥವಾ ಸರಕಾರಕ್ಕೆ ಮುಜುಗರ ಉಂಟಾಗುವ ಯಾವುದಾದರೂ ಘಟನೆಗಳು ನಡೆದಾಗ, ಆ ಘಟನೆ ಜನಮಾನಸದಿಂದ ಮಾಸುವ ತನಕ ‘ಸ್ಟಾಪ್ ಗ್ಯಾಪ್’ ಹೊಂದಾಣಿಕೆಗೆ ಏನು ಬೇಕೋ ಅದನ್ನು ಮಾಡುವುದು ಮುಖ್ಯವಾಗಿರುತ್ತದೆ.

ಜನರ ಮನಸ್ಸಿನಿಂದ ಮರೆಯಾಗುವ ಆದರೆ ‘ಕ್ರಮ’ ಕೈಗೊಂಡಿದ್ದೇವೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸುವುದಕ್ಕೆ ಸರಕಾರಗಳ ಬಳಿ ಇರುವ ಏಕೈಕ ಮಾರ್ಗವೆಂದರೆ- ವಿಶೇಷ ತನಿಖಾ ತಂಡದ ರಚನೆ!

ಹೌದು, ಯಾವುದೇ ವಿವಾದ ಸೃಷ್ಟಿಯಾಗಿ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ, ಆ ಕ್ಷಣದಿಂದ ತಪ್ಪಿಸಿಕೊಳ್ಳಬೇಕು ಎಂದು ಸರಕಾರ ತೀರ್ಮಾನಿಸಿದರೆ ರಚನೆಯಾಗುವುದೇ ವಿಶೇಷ ತನಿಖಾ ತಂಡವೆಂದರೆ ತಪ್ಪಾಗುವುದಿಲ್ಲ. ಈ ಎಸ್ಐಟಿಗೆ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಅವರಿಗೆ ಇಂತಿಷ್ಟು ಸಮಯದಲ್ಲಿಯೇ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿ, ಅದಕ್ಕಾಗಿ ಒಂದು ಅಧಿಕಾರಿಗಳ ತಂಡ, ಕಚೇರಿಯನ್ನು ಸೃಷ್ಟಿಸಿದರೆ ಅಲ್ಲಿಗೆ ಆ ವಿವಾದದ ಕಾವು ಆರಿದಂತೆ.‌

ಇದನ್ನೂ ಓದಿ: Ranjith H Ashwath Column: ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ಈ ಎಸ್‌ಐಟಿಗಳ ರಚನೆ ಕೇವಲ ಯಾವುದೋ ಒಂದು ಸರಕಾರಕ್ಕೆ ಸೀಮಿತವಾಗಿಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆ ಸರಕಾರಕ್ಕೆ ಸುಲಭವಾಗಿ ಸಿಗುವ ಏಕಮಾತ್ರ ಅಸ್ತ್ರವೆಂದರೆ ಎಸ್‌ಐಟಿ ಎನ್ನುವುದಾಗಿದೆ. ಕೆಲಕಾಲದ ಬಳಿಕ ಈ ವಿಶೇಷ ತನಿಖಾ ತಂಡ ಏನು ಮಾಡುತ್ತಿದೆ? ತನಿಖಾ ಪ್ರಕ್ರಿಯೆ ಎಲ್ಲಿಯ ತನಕ ಬಂದಿದೆ? ಯಾರನ್ನೆಲ್ಲ ವಿಚಾರಣೆ ಮಾಡಲಾಗಿದೆ? ಸರಕಾರ ಸಲ್ಲಿಸುವ ವರದಿಯಲ್ಲಿ ಏನೇನೇನಿದೆ? ಎನ್ನುವ ಬಗ್ಗೆ ಜನರೂ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ, ರಚಿಸಿದ ಸರಕಾರವೂ ಆ ತಂಡ ಯಾವ ಆಯಾಮದಲ್ಲಿ ತನಿಖೆ ಮಾಡುತ್ತಿದೆ ಎನ್ನುವುದನ್ನು ಪರಿಶೀಲಿಸಲು ಹೋಗುವುದಿಲ್ಲ.

ಕರ್ನಾಟಕದ ಮಟ್ಟಿಗೆ ವಿಶೇಷ ತನಿಖಾ ತಂಡ ರಚಿಸುವ ಪದ್ಧತಿ ಇತ್ತೀಚೆಗೆ ಶುರುವಾಗಿರುವ ಸಂಸ್ಕೃತಿ ಏನಲ್ಲ. ರಾಜಕಾರಣಿಗಳ ವಿರುದ್ಧ ಕೇಳಿ ಬಂದ ನೂರಾರು ಆರೋಪಗಳ ‘ತನಿಖೆ’ಗೆ ಆಯಾ ಕಾಲದಲ್ಲಿ ಆಯಾ ಸರಕಾರಗಳು ವಿಶೇಷ ತನಿಖಾ ತಂಡ ರಚಿಸುವ ಮೂಲಕ ಪ್ರಕರಣದ ‘ಹೀಟ್’ ಕಡಿಮೆ ಮಾಡುವ ವ್ಯವಸ್ಥಿತ ಕಾರ್ಯಗಳನ್ನು ಮಾಡಿಕೊಂಡು ಬಂದಿವೆ. ಹಾಗೆ ನೋಡಿದರೆ, ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ, ಬಿಟ್ ಕಾಯಿನ್, ಪಿಎಸ್‌ಐ ನೇಮಕ ಹಗರಣ ಸೇರಿದಂತೆ ಹಲವು ಪ್ರಕರಣಗಳಿಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದ ಇತಿಹಾಸವಿದೆ.

ಆದರೆ ಸರಕಾರ ಬದಲಾದ ಬಳಿಕ ಆ ವರದಿಗಳು ಏನಾಗಿವೆ? ಎನ್ನುವುದು ಮಾತ್ರ ನಿಗೂಢ. ಇನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಪ್ರಜ್ವಲ್ ರೇವಣ್ಣ ಪ್ರಕರಣ, ಪಿಎಸ್‌ಐ ನೇಮಕ ಹಗರಣ, ವಾಲ್ಮೀಕಿ ನಿಗಮ ಮಂಡಳಿಯಲ್ಲಿನ ಹಣ ದುರ್ಬಳಕೆಯ ಆರೋಪ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆದರೆ ಈ ಎಲ್ಲ ಪ್ರಕರಣಗಳಿಗೆ ರಚನೆಯಾಗಿರುವ ವಿಶೇಷ ತನಿಖಾ ತಂಡ ಈವರೆಗೆ, ಪ್ರಕರಣಗಳಲ್ಲಿ ಸ್ಪಷ್ಟನೆ ಪಡೆಯುವುದಕ್ಕಿಂತ ಕೇವಲ ‘ವಿಚಾರಣೆ’ಗೆ ಸೀಮಿತಗೊಂಡಿದೆ ಎನ್ನುವುದು ವಾಸ್ತವ.

Police cap ok

ಇನ್ನು ಕಾಂಗ್ರೆಸ್ ಸರಕಾರ ಕರೋನಾ ಸಮಯದಲ್ಲಿನ ಹಗರಣ, ಆರ್‌ಸಿಬಿ ವಿಜಯೋತ್ಸವ ಸಮಯದಲ್ಲಿನ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಆಯೋಗವನ್ನು ರಚಿಸಿ, ಅದಕ್ಕೆ ನಿವೃತ್ತ ನ್ಯಾಯಧೀಶರನ್ನು ನೇಮಿಸಿದೆ. ಈ ಎರಡೂ ಪ್ರಕರಣದಲ್ಲಿ ಈಗಾಗಲೇ ಆಯೋಗ ವರದಿಯನ್ನು ಸಲ್ಲಿಸಿ, ಶಿಫಾರಸು ಮಾಡಿದೆಯೇ ಹೊರತು, ಅದರ ಮುಂದೇನು ಎನ್ನುವ ಸ್ಪಷ್ಟನೆ ಯಾರಿಗೂ ಇಲ್ಲವಾಗಿದೆ.

ಯಾವುದೇ ಸರಕಾರ ವಿಶೇಷ ತನಿಖಾ ತಂಡದ ಮೊರೆ ಹೋಗುವುದೇ ಎರಡು ಸಮಯದಲ್ಲಿ. ಒಂದು ಮುಜುಗರದಿಂದ ತಪ್ಪಿಸಿಕೊಳ್ಳಲು ಅಥವಾ ವಿರೋಧಿಗಳ ವಿರುದ್ಧ ‘ಬುಟ್ಟಿಯೊಳಗೆ ಹಾವೊಂದನ್ನು’ ಇಟ್ಟುಕೊಂಡಿರಬೇಕು ಎನ್ನುವ ಕಾರಣಕ್ಕೆ. ಹಲವು ಸಮಯದಲ್ಲಿ ಸರಕಾರಗಳು ರಚಿಸುವ ವಿಶೇಷ ತನಿಖಾ ತಂಡಗಳು ವರದಿಗಳನ್ನು ಸಲ್ಲಿಸಿ, ಅದರಲ್ಲಿ ಶಿಫಾರಸುಗಳನ್ನು ಸಲ್ಲಿಸಿದರೂ ಅದರ ಮುಂದೆ ಯಾವುದೇ ಕ್ರಮಗಳಾಗುವುದಿಲ್ಲ.

ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಈ ವರದಿಗಳನ್ನು ಹೆಚ್ಚೆಂದರೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಗಳನ್ನು ಮಾಡಿ ಕೈತೊಳೆದುಕೊಳ್ಳಲಾಗುತ್ತದೆ. ವಿಶೇಷ ತನಿಖಾ ತಂಡಗಳ ರಾಜಕೀಯ ಮೇಲಾಟಗಳು ಇಷ್ಟಾದರೆ, ಕಾನೂನಾತ್ಮಕವಾಗಿ ಈ ತಂಡಗಳಿಗೆ ಯಾವುದೇ ರೀತಿಯ ಹೆಚ್ಚುವರಿ ಅಧಿಕಾರವಿರುವುದಿಲ್ಲ ಎನ್ನುವದು ಅನೇಕರಿಗೆ ಗೊತ್ತಿರುವುದಿಲ್ಲ. ಈ ತಂಡಗಳು ತಿಂಗಳುಗಟ್ಟಲೆ ನಡೆಸುವ ವಿಚಾರಣೆ, ಸಾವಿರಾರು ಪುಟಗಳ ವರದಿ, ಹತ್ತಾರು ಶಿಫಾರಸುಗಳನ್ನು ಮಾಡಿ ಸರಕಾರಕ್ಕೆ ಸಲ್ಲಿಸಬಹುದೇ ಹೊರತು, ಆರೋಪ ಪಟ್ಟಿ ಸಲ್ಲಿಸುವ ಅಥವಾ ನ್ಯಾಯಾಲಯಕ್ಕೆ ಈ ವರದಿಗಳನ್ನು ಸಲ್ಲಿಸಿ ‘ಶಿಕ್ಷಿಸುವ’ ಯಾವುದೇ ಅವಕಾಶ ಕಾನೂನು ವ್ಯಾಪ್ತಿ ಯಲ್ಲಿಲ್ಲ (ನ್ಯಾಯಾಲಯಗಳೇ ರಚಿಸುವ ನ್ಯಾಯಾಂಗ ತನಿಖಾ ತಂಡಗಳನ್ನು ಹೊರತುಪಡಿಸಿ).

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಬಹುದೊಡ್ಡ ಸದ್ದು ಮಾಡಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತರ ತನಿಖೆಯಾಗಿ ವರದಿಯ ಸಲ್ಲಿಕೆಯಾಗಿತ್ತು. ಈ ವರದಿಯನ್ನು ನೋಡಲು ವಿಶೇಷ ತನಿಖಾ ತಂಡವೊಂದು ರಚನೆಯಾಗಿತ್ತು. ಆದರೆ ಈ ಎಲ್ಲ ಪ್ರಕ್ರಿಯೆ ಮುಗಿಯಲು ಒಂದೂವರೆ ದಶಕ ಬೇಕಾಯಿತು. ಈ ಅವಧಿಯಲ್ಲಿ ರೆಡ್ಡಿ ಜೈಲು ಪಾಲಾಗಿ, ವಾಪಸು ಬಂದು, ಪ್ರತ್ಯೇಕ ಪಕ್ಷ ಕಟ್ಟಿ, ಚುನಾವಣೆಯಲ್ಲಿ ನಿಂತು ಗೆದ್ದು, ವಾಪಸು ಬಿಜೆಪಿಗೆ ಸೇರಿದರೂ ಅಂತಿಮ ಆದೇಶ ಬಂದಿದ್ದು ಮೊನ್ನೆ ಮೊನ್ನೆ. ಶಿಕ್ಷೆ ಪ್ರಕಟವಾದ ಬಳಿಕವೂ, ಅದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮರು ವಿಚಾರಣೆಗೆ ಸೂಚನೆ ನೀಡಲಾಗಿದೆ.

ಈ ಮೂಲಕ ಮತ್ತೆ ಮುಂದಿನ 20 ವರ್ಷ ಪ್ರಕರಣ ನಡೆಯುವುದು ಖಚಿತ ಎನ್ನುವಂತಾಗಿದೆ. ಬಹುತೇಕ ಸಮಯದಲ್ಲಿ ವಿಶೇಷ ತನಿಖಾ ತಂಡಗಳು ನಡೆಸುವ ತನಿಖೆಯ ವರದಿ ಸಲ್ಲಿಸುವ ಮೊದಲೇ, ಅಧಿಕಾರಿಗಳು ನಿವೃತ್ತಿ ಹೊಂದುತ್ತಾರೆ ಅಥವಾ ತಂಡದಿಂದ ಹೊರಗುಳಿಯುವ ತೀರ್ಮಾನಕ್ಕೆ ಬರುತ್ತಾರೆ. ಈ ರೀತಿಯಾದರೆ ಹೊಸ ಅಧಿಕಾರಿಗಳ ನೇಮಕ, ತಂಡ ರಚನೆಯಿಂದ ಹಿಡಿದು ಎಲ್ಲ ಪ್ರಕ್ರಿಯೆಯೂ ಹೊಸದಾಗಿ ಆರಂಭವಾಗುತ್ತದೆ.

ಅಲ್ಲಿಗೆ, ಇಡೀ ಪ್ರಕರಣವನ್ನೇ ಜನರು ಮರೆತಿರುತ್ತಾರೆ. ಬಳಿಕ ಸರಕಾರಗಳು ಬದಲಾದಂತೆ ಪ್ರಕರಣಗಳ ತೀವ್ರತೆಯೂ ಕಡಿಮೆಯಾಗುತ್ತದೆ. ಈ ಮೂಲಕ ಒಂದು ಕಾಲದಲ್ಲಿ ಬಹುದೊಡ್ಡ ವಿವಾದವಾಗಿದ್ದ ಪ್ರಕರಣ ಯಾವುದೇ ತಾರ್ಕಿಕ ಅಂತ್ಯ ಕಾಣದೇ ಕೇವಲ ಸರಕಾರಿ ದಾಖಲೆಗೆ ಸೀಮಿತವಾಗಿರುತ್ತದೆ. ಕೇವಲ ವಿಶೇಷ ತನಿಖಾ ತಂಡವಲ್ಲ, ಲೋಕಾಯುಕ್ತ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಭ್ರಷ್ಟಾಚಾರ ನಿರ್ಮೂಲನೆಗೆಂದೇ ಇರುವ ಲೋಕಾಯುಕ್ತ ಸಂಸ್ಥೆ ಆಗಾಗ್ಗೆ ಅಲ್ಲಲ್ಲಿ ‘ಶಾಕ್’ಗಳನ್ನು ನೀಡುತ್ತಿರುತ್ತದೆ. ಭ್ರಷ್ಟ ಅಧಿಕಾರಿಗಳಿಗೆ ಈ ಶಾಕ್ ಆರಂಭದಲ್ಲಿ ತಾಗಿತ್ತಾದರೂ ಇತ್ತೀಚಿನ ದಿನದಲ್ಲಿ ಇದು ಕೇವಲ ಮಾಧ್ಯಮದಲ್ಲಿ ಒಂದು ದಿನದ ಸುದ್ದಿಗೆ ಸೀಮಿತವಾಗಿದೆ ಎನ್ನುವುದು ಸ್ಪಷ್ಟ. ಲೋಕಾಯುಕ್ತ ನಡೆಸಿರುವ ದಾಳಿಗಳಲ್ಲಿ ಸುಮಾರು 22,328 ವಿಚಾರಣೆಯ ಹಂತದಲ್ಲಿಯೇ ‘ನಲುಗಿ’ ಮೂಲೆ ಸೇರಿವೆ.

ಈ 22 ಸಾವಿರ ಚಿಲ್ಲರೆ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ಬಳಿ 6 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿಯಿವೆ. ಇನ್ನು ಉಪ ಲೋಕಾಯುಕ್ತ ನ್ಯಾ.ಕೆ.ಎನ್.-ಣೀಂದ್ರ ಬಳಿ 67,767 ಪ್ರಕರಣ ಹಾಗೂ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬಳಿ 8555 ಪ್ರಕರಣಗಳು ಬಾಕಿ ಉಳಿದಿವೆ ಎನ್ನುವುದು ಆರ್ ಟಿಐಯಿಂದ ಬಹಿರಂಗವಾಗಿದೆ. ಇನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಲ್ಲಿ ಕರ್ನಾಟಕ ಲೋಕಾಯುಕ್ತದಲ್ಲಿ 1228 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಈ ಎಲ್ಲವನ್ನೂ ಮೀರಿ ಒಂದು ವೇಳೆ ತಪ್ಪಿತಸ್ಥ ಎನ್ನುವುದು ಸಾಬೀತಾದರೂ ಅವರ ವಿರುದ್ಧ ಕ್ರಮವಹಿಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಯ ಬಳಿಯಿಲ್ಲ. ಬದಲಿಗೆ, ರಾಜ್ಯ ಸಚಿವ ಸಂಪುಟದ ಮುಂದೆ ಈ ಪ್ರಕರಣಗಳು ಬರಲಿದ್ದು, ಸಂಪುಟದಲ್ಲಿ ಬಹುತೇಕ ಶಿಫಾರಸುಗಳನ್ನು ಖುಲಾಸೆ ಮಾಡಲಾಗುತ್ತದೆ ಅಥವಾ ಇಲಾಖೆ ಮಟ್ಟದ ತನಿಖೆಗೆ ಶಿಫಾರಸು ಮಾಡಿ ಕೈತೊಳೆದು ಕೊಳ್ಳಲಾಗುತ್ತದೆ.

ಇನ್ನು ‘ಶಿಕ್ಷೆ’ಯನ್ನು ವಿಧಿಸುವುದೇ ಆದರೆ, ತಳಹಂತದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಆಗಿದೆಯೇ ಹೊರತು, ದೊಡ್ಡ ಕುಳಗಳ ವಿರುದ್ಧ ಆಗಿರುವ ಇತಿಹಾಸವಿಲ್ಲ. ಹಲವು ಸಮಯದಲ್ಲಿ ರಾಜಕೀಯ ಪ್ರಭಾವಿಗಳ ವಿರುದ್ಧ ಕೇಳಿ ಬರುವ ವಿವಾದಗಳಿಂದ ಆಗಬಹುದಾದ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಸರಕಾರಗಳು ಈ ವಿಶೇಷ ತನಿಖಾ ತಂಡ, ಏಕಸದಸ್ಯ ತನಿಖಾ ಆಯೋಗಗಳನ್ನು ಘೋಷಿಸುವ ಮೂಲಕ ಸಾರ್ವಜನಿಕರಿಗೆ ‘ಕಠಿಣ’ ಕ್ರಮದ ಭರವಸೆಯನ್ನು ನೀಡಬಹುದು.

ಆದರೆ ವಾಸ್ತವಿಕವಾಗಿ, ಈ ರಚನೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಯದೂಡಲು ಮಾಡುವ ‘ಸ್ಟಾಪ್ ಗ್ಯಾಪ್’ಗಳೆಂದರೆ ತಪ್ಪಾಗುವುದಿಲ್ಲ. ವಿಶೇಷ ತನಿಖಾ ತಂಡಗಳನ್ನು ‘ಪ್ರಬಲ ಅಸ್ತ್ರ’ ಮಾಡಿಕೊಳ್ಳಲೇಬೇಕು ಎನ್ನುವ ಇಚ್ಛೆ ಸರಕಾರಗಳಿಗೆ ಇದ್ದರೆ, ಅವುಗಳಿಗೆ ಮೊದಲು ಎಫ್ಐಆರ್ ಹಾಕುವ, ಚಾರ್ಜ್‌ಶೀಟ್ ಗಳನ್ನು ಸಲ್ಲಿಸುವ ಅಧಿಕಾರಿಗಳು ಸಿಗಬೇಕು. ಆಗ ಮಾತ್ರ ವಿಶೇಷ ತಂಡಗಳ ರಚನೆಗೆ ನಿಜವಾದ ಅರ್ಥ ಬರುತ್ತದೆ. ಇಲ್ಲವಾದರೆ, ಈ ತಂಡಗಳ ವಿರುದ್ಧ ಈಗಾಗಲೇ ಇರುವ ಅಸಡ್ಡೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.