ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಅಕ್ಷರ ಸಂತ ಹರೇಕಳ ಹಾಜಬ್ಬ

ಹಾಜಬ್ಬನವರ ಬದುಕು ಎಂದೂ ಸುಲಭವಾಗಿರಲಿಲ್ಲ. ಬಡತನದ ಬೇಗೆಯಲ್ಲಿ ಬೆಂದ ಅವರಿಗೆ ಅಕ್ಷರ ಕಲಿಯುವ ಅದೃಷ್ಟ ಸಿಗಲಿಲ್ಲ. ತಲೆ ಮೇಲೆ ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ದಿನವಿಡೀ ಮಂಗಳೂರಿನ ಬೀದಿಗಳಲ್ಲಿ ಸುತ್ತಿ, ಬರುವ ಕೆಲವೇ ರೂಪಾಯಿಗಳಲ್ಲಿ ಸಂಸಾರ ನಿಭಾಯಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಅವರ ಬದುಕನ್ನೇ ಬದಲಾಯಿಸುವ ಘಟನೆಯೊಂದು ನಡೆಯಿತು.

Roopa Gururaj Column: ಅಕ್ಷರ ಸಂತ ಹರೇಕಳ ಹಾಜಬ್ಬ

-

ಒಂದೊಳ್ಳೆ ಮಾತು

ಕೆಲವೊಮ್ಮೆ ಇತಿಹಾಸ ಸೃಷ್ಟಿಸುವುದು ದೊಡ್ಡ ದೊಡ್ಡ ಪದವಿ ಪಡೆದವರಲ್ಲ, ಬದಲಿಗೆ ಅಕ್ಷರ ಜ್ಞಾನವಿಲ್ಲದಿದ್ದರೂ ತರಗತಿಯ ಕೋಣೆಯೊಳಗೆ ಇಡೀ ಜಗತ್ತನ್ನೇ ಕಾಣಬಲ್ಲ ನಿಷ್ಕಲ್ಮಶ ಮನಸ್ಸು ಗಳು. ಇಂತಹ ಕೋಟಿಗೊಬ್ಬ ಪುಣ್ಯಪುರುಷನೇ ನಮ್ಮ ಹೆಮ್ಮೆಯ ‘ಅಕ್ಷರ ಸಂತ’ ಹರೇಕಳ ಹಾಜಬ್ಬ. ಮಂಗಳೂರಿನ ಹೊರವಲಯದ ಹರೇಕಳ ನ್ಯೂಪಡ್ಪು ಎಂಬ ಪುಟ್ಟ ಹಳ್ಳಿಯ ಈ ಸಾಮಾನ್ಯ ಕಿತ್ತಳೆ ಹಣ್ಣು ಮಾರುವ ವ್ಯಕ್ತಿ, ಇಂದು ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ಪುರಸ್ಕೃತರು.

ಹಾಜಬ್ಬನವರ ಬದುಕು ಎಂದೂ ಸುಲಭವಾಗಿರಲಿಲ್ಲ. ಬಡತನದ ಬೇಗೆಯಲ್ಲಿ ಬೆಂದ ಅವರಿಗೆ ಅಕ್ಷರ ಕಲಿಯುವ ಅದೃಷ್ಟ ಸಿಗಲಿಲ್ಲ. ತಲೆ ಮೇಲೆ ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ದಿನವಿಡೀ ಮಂಗಳೂರಿನ ಬೀದಿಗಳಲ್ಲಿ ಸುತ್ತಿ, ಬರುವ ಕೆಲವೇ ರೂಪಾಯಿಗಳಲ್ಲಿ ಸಂಸಾರ ನಿಭಾಯಿಸು ತ್ತಿದ್ದರು. ಹೀಗಿರುವಾಗ ಒಂದು ದಿನ ಅವರ ಬದುಕನ್ನೇ ಬದಲಾಯಿಸುವ ಘಟನೆಯೊಂದು ನಡೆಯಿತು.

ಇದನ್ನೂ ಓದಿ: Roopa Gururaj Column: ಕಾಶಿಯ ಅವಿಮುಕ್ತ ಕ್ಷೇತ್ರ ಮತ್ತು ಡುಂಢಿ ಗಣೇಶನ ರಹಸ್ಯ

ವಿದೇಶಿ ಪ್ರವಾಸಿಗರೊಬ್ಬರು ಹಾಜಬ್ಬನವರ ಬಳಿ ಬಂದು ಇಂಗ್ಲಿಷ್‌ನಲ್ಲಿ ಕಿತ್ತಳೆ ಹಣ್ಣಿನ ಬೆಲೆ ಎಷ್ಟು ಎಂದು ಕೇಳಿದರು. ಕನ್ನಡ ಮತ್ತು ತುಳು ಮಾತ್ರ ಗೊತ್ತಿದ್ದ ಹಾಜ ಬ್ಬನವರಿಗೆ ಆ ಇಂಗ್ಲಿಷ್ ಮಾತು ಗಳು ಅರ್ಥವಾಗಲಿಲ್ಲ. ಅವರು ಮೌನವಾಗಿ ನಿಂತುಬಿಟ್ಟರು. ತಾನು ಅಕ್ಷರಸ್ಥನಲ್ಲ ಎಂಬ ಕಾರಣಕ್ಕೆ ಎದುರಾದ ಆ ಅಸಹಾಯಕತೆ ಮತ್ತು ಅಪಮಾನ ಹಾಜಬ್ಬನವರ ಹೃದಯವನ್ನು ಚುಚ್ಚಿತು. ನನಗೆ ಅಕ್ಷರ ಕಲಿಯಲು ಆಗಲಿಲ್ಲ, ಆದರೆ ನನ್ನ ಹಳ್ಳಿಯ ಬಡ ಮಕ್ಕಳಿಗೆ ಈ ಪರಿಸ್ಥಿತಿ ಬರಬಾರದು. ನನ್ನಂತೆ ಯಾರೂ ಅಜ್ಞಾನದ ಕತ್ತಲಲ್ಲಿ ಉಳಿಯ ಬಾರದು. ಅಂದು ಅವರ ಮನಸ್ಸಿನಲ್ಲಿ ಮೂಡಿದ ಈ ನೋವಿನ ಆಲೋಚನೆಯೇ ಒಂದು ಮಹತ್ತರ ಕ್ರಾಂತಿಗೆ ನಾಂದಿ ಹಾಡಿತು.

ದಿನಕ್ಕೆ 100ರಿಂದ 150 ರೂಪಾಯಿ ದುಡಿಯುತ್ತಿದ್ದ ಒಬ್ಬ ಬಡ ವ್ಯಾಪಾರಿ ಶಾಲೆ ಕಟ್ಟುವ ಕನಸು ಕಾಣುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಹಾಜಬ್ಬನವರ ನಿಶ್ಚಯ ಅಚಲವಾಗಿತ್ತು. ಅವರು ತಮಗಾಗಿ ಏನನ್ನೂ ಉಳಿಸಿಕೊಳ್ಳಲಿಲ್ಲ. ತಾನು ತಿನ್ನುವ ಗಂಜಿಯಲ್ಲೂ ಕಡಿತ ಮಾಡಿ, ಕಿತ್ತಳೆ ಮಾರಿ ಬಂದ ಪ್ರತಿಯೊಂದು ಪೈಸೆ ಪೈಸೆಯನ್ನೂ ಶಾಲೆಯ ನಿಧಿಗೆಂದು ಎತ್ತಿಟ್ಟರು. ಅವರ ಕಠಿಣ ಪರಿಶ್ರಮ ಮತ್ತು ತ್ಯಾಗದ ಫಲವಾಗಿ 1999ರಲ್ಲಿ ಒಂದು ಸಣ್ಣ ಮಸೀದಿಯ ಆವರಣದಲ್ಲಿ ಕೆಲವೇ ಮಕ್ಕಳೊಂದಿಗೆ ಶಾಲೆ ಪ್ರಾರಂಭವಾಯಿತು.

ನಂತರ, ತಮ್ಮ ಸ್ವಂತ ಉಳಿತಾಯ ಮತ್ತು ದಾನಿಗಳ ನೆರವಿನ ಹಸ್ತದಿಂದ ಹಳ್ಳಿಯ ಜಾಗ ಖರೀದಿಸಿ, ತಾವೇ ಇಟ್ಟಿಗೆ ಹೊತ್ತು ಒಂದು ಪ್ರಾಥಮಿಕ ಶಾಲೆಯನ್ನು ಕಟ್ಟಿದರು. ಇಂದು ಅದೇ ಶಾಲೆಯಲ್ಲಿ ಸುಮಾರು 175ಕ್ಕೂ ಹೆಚ್ಚು ಬಡ ಮಕ್ಕಳು ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ.

ಹಾಜಬ್ಬನವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತ ಸರಕಾರ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿತು. 2021ರಲ್ಲಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಆ ಸಮಾರಂಭ ಇಡೀ ದೇಶದ ಕಣ್ಣು ತುಂಬಿ ಬರುವಂತೆ ಮಾಡಿತ್ತು. ಬಿಳಿ ಪಂಚೆ, ಬಿಳಿ ಶರ್ಟ್ ಧರಿಸಿ, ಬರಿಗಾಲಿನಲ್ಲಿ ನಡೆದು ಬಂದು ದೇಶದ ಪ್ರಥಮ ಪ್ರಜೆಯಿಂದ ಪ್ರಶಸ್ತಿ ಸ್ವೀಕರಿಸಿದ ಆ ದೃಶ್ಯ ಇಂದಿಗೂ ಕೋಟ್ಯಂತರ ಭಾರತೀಯರ ಮನಸಿನಲ್ಲಿ ಅಚ್ಚೊತ್ತಿದೆ. ಅದು ಕೇವಲ ಹಾಜಬ್ಬನವರಿಗಷ್ಟೇ ಅಲ್ಲ, ಮಾನವೀಯತೆ ಮತ್ತು ನಿಸ್ವಾರ್ಥ ಸೇವೆಗೆ ಸಂದ ಗೌರವ.

ಪದ್ಮಶ್ರೀ ಬಂದ ಮೇಲೂ ಹಾಜಬ್ಬನವರು ಅದೇ ಹಳೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಶಸ್ತಿ ಬಂದಾಗ ಅವರಿಗೆ ಸಿಕ್ಕ ಹಣವನ್ನೂ ಅವರು ಶಾಲೆಯ ಅಭಿವೃದ್ಧಿಗೇ ಮುಡಿಪಾಗಿಟ್ಟರು. ಈಗ ಅವರ ಮುಂ ದಿನ ಕನಸು ತಮ್ಮ ಹಳ್ಳಿಯ ಮಕ್ಕಳಿಗೆ ಒಂದು ಪದವಿ ಪೂರ್ವ (ಪಿಯು) ಕಾಲೇಜನ್ನು ನಿರ್ಮಿಸುವುದು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಕೋಟ್ಯಂತರ ರೂಪಾಯಿ ಹಣ ಬೇಕಾಗಿಲ್ಲ, ಬದಲಿಗೆ ಮಿಡಿಯುವ ಹೃದಯ ಮತ್ತು ಕಠಿಣ ಸಂಕಲ್ಪವಿದ್ದರೆ ಸಾಕು.

ವಿದ್ಯಾ ದಾನಕ್ಕಿಂತ ಮಿಗಿಲಾದ ದಾನ ಯಾವುದೂ ಇಲ್ಲ. ಸಾಧ್ಯವಾದರೆ ನಿಮ್ಮ ಕೈಲಾದಷ್ಟು ಒಂದಿಬ್ಬರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ. ಇದು ನಮ್ಮ ಮಕ್ಕಳು ಬಾಳಿ ಬದುಕುವ ಭವಿಷ್ಯದ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಮ್ಮ ಕೊಡುಗೆಯಾಗುತ್ತದೆ.