ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Surendra Pai Column: ಐಸಿಯುನಲ್ಲಿ ಸಿಬಿಎಸ್‌ಇ ಆಡಳಿತ ವ್ಯವಸ್ಥೆ !

4 ಲಕ್ಷ ವಿದ್ಯಾರ್ಥಿಗಳು 12 ಲಕ್ಷಕ್ಕೂ ಮಿಕ್ಕ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ದರು. ಸಮಸ್ಯೆಯ ಗಂಭೀರತೆ ಅರಿತು ಕೂಡಲೇ ಶಿಕ್ಷಣ ಸಚಿವ ಪ್ರಧಾನ್ ಒಎಸ್‌ಎಂ ಕೈ ಬಿಟ್ಟು ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೊದಲಿನ ಹಾಗೇ ಮ್ಯಾನುಯಲ್ ರೀತಿಯಲ್ಲಿ ಮೌಲ್ಯ ಮಾಪನ ಮಾಡು ತ್ತೇವೆ. ಒಎಸ್‌ಎಂ ಲೋಪದ ಕಾರಣ ಪ್ರಸ್ತುತ ಫಲಿತಾಂಶ ರದ್ದು ಮಾಡುತ್ತೇವೆ.

ಐಸಿಯುನಲ್ಲಿ ಸಿಬಿಎಸ್‌ಇ ಆಡಳಿತ ವ್ಯವಸ್ಥೆ !

-

Profile
Ashok Nayak Jul 8, 2026 6:00 AM

ಶಿಕ್ಷಣ ಪಥ

ಸುರೇಂದ್ರ ಪೈ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಯಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಯಾವ ಶಿಕ್ಷಣ ಪ್ರಾಧಿಕಾರ ದೇಶದ ನಂಬರ್ 1 ಎಂಬ ಹೆಗ್ಗಳಿಕೆಯನ್ನು ಹೊಂದಿತ್ತೋ ಅದೇ ಶಿಕ್ಷಣ ಇಲಾಖೆ ಇದೀಗ ಮಕ್ಕಳ ಭವಿಷ್ಯಕ್ಕೆ ಮುಳುವಾಗುತ್ತಿದೆ. ಸಾಲು ಸಾಲು ವಿವಾದಗಳು, ನಿರ್ಲಕ್ಷ ಧೋರಣೆಗಳು, ಹೊಸ ಯೋಜನೆಗಳ ತರಾತುರಿಯ ಅಸಮರ್ಪಕ ಅನುಷ್ಠಾನ, ಶೂನ್ಯ ಪೂರ್ವತಯಾರಿಯ ಕಾರಣದಿಂದಾಗಿ ಪ್ರಸುತ್ತ ಸಿಬಿಎಸ್‌ಇ ಆಡಳಿತಾತ್ಮಕ ವ್ಯವಸ್ಥೆಯ ಬೆನ್ನುಹುರಿ ಸಂಪೂರ್ಣವಾಗಿ ಮುರಿದು ಮೆದುಳಿನೊಂದಿಗೆ ಸಂಪರ್ಕ ಮುರಿದುಕೊಂಡು ಮೆದುಳು ಕೆಲಸ ಮಾಡದೇ ವ್ಯವಸ್ಥೆ ಕೋಮಾಗೆ ಜಾರಿ ಎರಡು ತಿಂಗಳಾಗಿದೆ. ಇದರ ಪರಿಣಾಮ ದೇಹದ ಇತರ ಭಾಗಗಳ ನಡುವೆ ಸಂವಹನ ವ್ಯವಸ್ಥೆಯು ಸಾಧ್ಯವಾಗದೇ ಸಿಬಿಎಸ್‌ಇ, ಐಸಿಯುನ ಕೋಣೆಯೊಳಗೆ ಪ್ರಜ್ಞೆ ತಪ್ಪಿ ಹಾಯಾಗಿ ನಿದ್ರಿಸುತ್ತಿದೆ. ಆದರೆ ಈ ವ್ಯವಸ್ಥೆ ಯ ಭಾಗವಾಗಿರುವ ಶಿಕ್ಷಣ ಸಂಸ್ಥೆಗಳು, ಪಾಲಕರು, ವಿದ್ಯಾರ್ಥಿಗಳು ದಿಕ್ಕು ಕಾಣದೇ ಕಂಗಾಲಾಗಿ ದ್ದಾರೆ.

ಸಿಬಿಎಸ್‌ಇ ಆಡಳಿತ ವ್ಯವಸ್ಥೆ ಬೆನ್ನುಹುರಿ ಮುರಿದು ಮೆದುಳಿನೊಂದಿಗೆ ಸಂಪರ್ಕ ಕಳೆದುಕೊಳ್ಳಲು ಪ್ರಮುಖ ಕಾರಣ ಈ ಬಾರಿ 12ನೇ ತರಗತಿಯ ಮಕ್ಕಳ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಒಎಸ್‌ಎಂ ಆನ್‌ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ್ ಮೂಲಕ ಮೌಲ್ಯಮಾಪನ ಮಾಡಲು ಮುಂದಾ ಗಿದ್ದು. ಡಿಜಿಟಲ್ ಇಡಿಯಾ ಪ್ರಮೋಷನ್ ಹಾಗೂ ಎನ್‌ಇಪಿ 2020 ಯಶಸ್ವಿ ಅನುಷ್ಠಾನದ ಹೆಗ್ಗಳಿಕೆ ಪಡೆಯಲು ಆತುರ ಪಟ್ಟು, ಪೂರ್ವತಯಾರಿಯಾಗಲಿ, ಮುಂದಾಲೋಚನೆಯಾಗಲಿ, ಪ್ಲಾನ್ ಬಿ ಯಾಗಲಿ ಇರದ ಕಾರಣ ಬರೋಬ್ಬರಿ 16 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಇಂದಿಗೂ ಡೋಲಾಯ ಮಾನ ಸ್ಥಿತಿಯಲ್ಲಿದೆ.

4 ಲಕ್ಷ ವಿದ್ಯಾರ್ಥಿಗಳು 12 ಲಕ್ಷಕ್ಕೂ ಮಿಕ್ಕ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರು. ಸಮಸ್ಯೆಯ ಗಂಭೀರತೆ ಅರಿತು ಕೂಡಲೇ ಶಿಕ್ಷಣ ಸಚಿವ ಪ್ರಧಾನ್ ಒಎಸ್‌ಎಂ ಕೈ ಬಿಟ್ಟು ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೊದಲಿನ ಹಾಗೇ ಮ್ಯಾನುಯಲ್ ರೀತಿಯಲ್ಲಿ ಮೌಲ್ಯ ಮಾಪನ ಮಾಡುತ್ತೇವೆ. ಒಎಸ್‌ಎಂ ಲೋಪದ ಕಾರಣ ಪ್ರಸ್ತುತ ಫಲಿತಾಂಶ ರದ್ದು ಮಾಡುತ್ತೇವೆ. ಇದರ ವೈಯಕ್ತಿಕ ಹೊಣೆ ಹೊತ್ತು ಸಮಸ್ಯೆ ಬಗೆಹರಿಸಿದ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದಿದ್ದರೆ ಇಷ್ಟೊತ್ತಿಗೆ ಮರು ಫಲಿತಾಂಶ, ಮರು ಮೌಲ್ಯಮಾಪನ ಹಾಗೂ ಕಂಪಾರ್ಟ್ಮೆಂಟ್ ಅಥವಾ ಪೂರಕ ಪರೀಕ್ಷೆ ಮುಗಿದಿರುತ್ತಿತ್ತು.

ಇದನ್ನೂ ಓದಿ: Surendra Pai Column: ಬಣಗಳ ಸಂಘರ್ಷ: ಬಣಗೆಟ್ಟ ಜನಸಾಮಾನ್ಯರ ಬದುಕು !

ಆದರೆ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹದಿನೈದು ದಿನ ವ್ಯವಸ್ಥೆ ಲೋಪ ಹುಡುಕುವುದು, ಆರೋಪ, ಪ್ರತ್ಯಾರೋಪ ಮಾಡುವುದರ ಕಾಲ ಕಳೆದರು. ಕೊನೆಗೆ 17 ವರ್ಷದ ಜೇನ್ ಜೀಗಳು ಎಲ್ಲಿ ತಪ್ಪಾಗಿದೆ ಎಂದು ತೋರಿಸಿಕೊಟ್ಟರು. ಆಗಲೂ ಗಂಭೀರತೆ ಅರಿವಾಗದೇ ವ್ಯರ್ಥ ಪ್ರಲಾಪ ಮುಂದುವರೆಸಿದರು. ಮರು ಮೌಲ್ಯಮಾಪನಕ್ಕೆ ಅರ್ಜಿ ಕರೆದರೂ ಮತ್ತೆ ತಾಂತ್ರಿಕ ಲೋಪ. ಕೊನೆಗೂ ಜೂನ್ 21ರಂದು ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.87 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. ಇನ್ನುಳಿದ ಶೇ.13 ವಿದ್ಯಾರ್ಥಿಗಳ ಫಲಿತಾಂಶ ಪ್ರಕ್ರಿಯೆ ನಡೆಯುತ್ತಿದೆ.

ಇದರ ನಡುವೆ ಜುಲೈ 28ರಂದು ಮರುಪರೀಕ್ಷೆ ನಡೆಯಲಿದೆ. ಅದರ ಫಲಿತಾಂಶ ಬರಬೇಕು. ಜೊತೆಗೆ ಈಗಾಗಲೇ ಹತ್ತನೇ ತರಗತಿಯ ಮಕ್ಕಳ ಮರು ಪರೀಕ್ಷೆ ನಡೆದು ಒಂದೂವರೆ ತಿಂಗಳಾದರೂ ಅದರ ಸುದ್ದಿ ಇಲ್ಲ. ಅಂದಾಜಿನ ಪ್ರಕಾರ ಆಗ 15ರ ಸ್ವಾತಂತ್ರ್ಯ ದಿನದ ಬಳಿಕ ಮಕ್ಕಳಿಗೂ ಈ ಪರೀಕ್ಷಾ ಚಕ್ರವ್ಯೂಹದಿಂದ ಸ್ವಾತಂತ್ರ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ. ಇದು ಶಿಕ್ಷಣ ವ್ಯವಸ್ಥೆಯ ವೈಫಲ್ಯ ವೇ ಹೊರತು ವ್ಯಂಗ್ಯವಲ್ಲ. ಇನ್ನೂ ಮರು ಪರೀಕ್ಷೆಯ ಫಲಿತಾಂಶ ಬರುವಾಗ ಬಹುಶಃ ಸೆಪ್ಟೆಂಬರ್‌ ನ ಗಣೇಶ ಚತುರ್ಥಿ ಆಗಬಹುದು. ಈ ಎ ಪ್ರಕ್ರಿಯೆ ಮುಗಿಯದೇ ದ್ವಿತೀಯ ಪಿಯುಸಿ ಮಕ್ಕಳು ತಮ್ಮ ಶೈಕ್ಷಣಿಕ ಹಂತದ ಮುಂದಿನ ಹೆಜ್ಜೆಯಿಡಲು ಸಾಧ್ಯವಿಲ್ಲ.

ದೇಶದ ಬಹುತೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು (ಉದಾಹರಣೆಗೆ: ದೆಹಲಿ ವಿಶ್ವವಿದ್ಯಾಲಯ, ಕ್ರೈ, ಜೈನ್ ಮತ್ತು ಪ್ರಮುಖ ಸರಕಾರಿ ಪದವಿ ಕಾಲೇಜುಗಳು) ಜೂನ್ ಅಂತ್ಯ ಅಥವಾ ಜುಲೈ ಮಧ್ಯ ಭಾಗದ ವೇಳೆಗೆ ತಮ್ಮ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿರುತ್ತವೆ. ಆಗಸ್ಟ್‌ನಲ್ಲಿ ಫಲಿತಾಂಶ ಬರುವಷ್ಟರಲ್ಲಿ ಸೀಟುಗಳು ಭರ್ತಿಯಾಗಿ, ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ಕೋರ್ಸ್ ಅಥವಾ ಕಾಲೇಜು ಸಿಗುವುದು ಅಸಾಧ್ಯವಾಗುತ್ತದೆ.

72

ಕೆಸಿಇಟಿ, ಕಾಮೆಡ್‌ಕೆ ಅಥವಾ JoSAA (IIT/ NIT) ನಂತಹ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕೌನ್ಸಿಲಿಂಗ್ ಪ್ರಕ್ರಿಯೆಗಳು ಜುಲೈ ತಿಂಗಳಿನಲ್ಲಿಯೇ ಬಿರುಸಿನಿಂದ ನಡೆಯುತ್ತವೆ. ಮರು ಪರೀಕ್ಷೆಯ ಫಲಿತಾಂಶ ಬರುವ ಮುನ್ನವೇ ಕೌನ್ಸಿಲಿಂಗ್ ಹಂತಗಳು ಮುಗಿದು ಹೋದರೆ, ಉತ್ತಮ ಶ್ರೇಯಾಂಕ ಇದ್ದರೂ ಕೇವಲ 12ನೇ ತರಗತಿಯ ಅಧಿಕೃತ ಅಂಕಪಟ್ಟಿ ಇಲ್ಲದ ಕಾರಣ ಸೀಟು ನಿರಾಕರಿಸ ಲ್ಪಡುವ ಸಾಧ್ಯತೆ ಇರುತ್ತದೆ. ಅಲ್ಲಿಗೆ ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳ ಒಂದು ಅಮೂಲ್ಯ ವರ್ಷ ವ್ಯರ್ಥ.

ಈಗಾಗಲೇ ತೀವ್ರ ಮಾನಸಿಕ ಒತ್ತಡ ಮತ್ತು ನಿರಾಶೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಸರಕಾರಿ ಅಥವಾ ಮೆರಿಟ್ ಸೀಟುಗಳ ಪ್ರವೇಶಾತಿ ಮುಗಿದ ನಂತರ, ಒಂದು ವರ್ಷ ವ್ಯರ್ಥವಾಗುವುದನ್ನು ತಪ್ಪಿಸಲು ಉಳಿದಿರುವ ಖಾಸಗಿ ಕಾಲೇಜುಗಳ ಮ್ಯಾನೇಜ್ಮೆಂಟ್ ಕೋಟಾ ಸೀಟುಗಳಿಗಾಗಿ ಅಲೆಯ ಬೇಕಾಗುತ್ತದೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ಕಾಲೇಜುಗಳು ದುಬಾರಿ ಶುಲ್ಕ ಅಥವಾ ಡೊನೇಷನ್ ಬೇಡಿಕೆಯಿಡುವುದರಿಂದ ಪೋಷಕರಿಗೆ ಆರ್ಥಿಕ ಹೊರೆಯಾಗುತ್ತದೆ.

ಇವುಗಳ ನಡುವೆ ಇರುವ ಒಂದೇ ಆಶಾಕಿರಣ ಯುಜಿಸಿ ನಿರ್ಣಯ. ಸಾಮಾನ್ಯವಾಗಿ ಯುಜಿಸಿ ಇಂತಹ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೂರಕ ಪರೀಕ್ಷೆಯ ಫಲಿತಾಂಶ ಬರುವವರೆಗೆ ಪ್ರವೇಶಾ ತಿ ದಿನಾಂಕವನ್ನು ವಿಸ್ತರಿಸುವಂತೆ ಅಥವಾ ಕೆಲವು ಸೀಟುಗಳನ್ನು ಕಾಯ್ದಿರಿಸುವಂತೆ ವಿವಿಗಳಿಗೆ ಮಾರ್ಗಸೂಚಿ ನೀಡುತ್ತದೆ. ಆದರೆ, ಪ್ರಾಯೋಗಿಕವಾಗಿ ಎಲ್ಲಾ ಕಾಲೇಜುಗಳಲ್ಲೂ ಇದು ಜಾರಿಗೆ ಬರುವುದು ಕಷ್ಟಸಾಧ್ಯ.

ಇಷ್ಟೆ ಸಮಸ್ಯೆಗೆ ಕಾರಣ ಆನ್-ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ. ಕೇಂದ್ರ ಸರಕಾರದ ಡಿಜಿಟಲೀಕರಣದ ಹುಚ್ಚು. ಅದರ ಅತಿಯಾದ ಅವಲಂಬನೆ, ಸ್ವಾರ್ಥ ಸಾಧನೆ. ಇಷ್ಟೆ ಆದರೂ ಶಿಕ್ಷಣ ಸಚಿವರು ಎಸಿ ರೂಮ್‌ನಲ್ಲಿ ಹಾಯಾಗಿ ಕುಳಿತಿದ್ದರೆ, ತಪ್ಪಿಲ್ಲದ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆಯಾಗಿದೆ.

ಆನ್-ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ್ ಸಿಬಿಎಸ್‌ಇ ಬೆನ್ನುಹುರಿ ಮುರಿದಿರುವ ಪರಿಣಾಮ ಸಿಬಿಎಸ್‌ಇ ವೆಬ್‌ಸೈಟ್ ಎಂಬ ಆಡಳಿತಾತ್ಮಕ ಮೆದುಳು ಕಳೆದೆರಡು ತಿಂಗಳಿಂದ ಸಂಪೂರ್ಣವಾಗಿ ಸ್ಥಗಿತ ಗೊಂಡಿದೆ. ಇದರಿಂದ ಸಿಬಿಎಸ್‌ಇ ಟ್ರೈನಿಂಗ್ ಪೋರ್ಟಲ್, ಒಎಸ್‌ಇಎಂಎಸ್ ಪೋರ್ಟಲ್, ಸ್ಪೋರ್ಟ್ಸ್ ಪೋರ್ಟಲ್ ಸೇರಿದಂತೆ ಇಡೀ ನರಮಂಡಲವೇ ನಿಷ್ಕ್ರಿಯವಾಗಿದೆ. ಇದರ ಪರಿಣಾಮ ಜೂನ್‌ನಲ್ಲಿ ನಡೆಯಬೇಕಿದ್ದ ರಾಜ್ಯ, ಅಂತಾರಾಜ್ಯ, ರಾಷ್ಟ್ರೀಯ ಸಿಬಿಎಸ್‌ಇ ಸ್ಪೋಟ್ಸ್ ತಾತ್ಕಾಲಿಕ ವಾಗಿ ಸ್ಥಗಿತಗೊಂಡಿದೆ. ‌

ರೀಜನಲ್ ಆಫೀಸ್‌ನಲ್ಲಿ ಉದ್ಯೋಗಿಗಳು ಕೆಲಸವಿಲ್ಲದೆ ಕಾಲ ಕಳೆಯುತ್ತಿzರೆ. ಇತ್ತ ಲಕ್ಷಾಂತರ ಸಿಬಿಎಸ್‌ಇ ಶಾಲೆಗಳು ಎರಡು ತಿಂಗಳ ಎಲ್ಲಾ ಶೈಕ್ಷಣಿಕ ಚಟುವಟಿಕೆಯನ್ನು ಪೋರ್ಟಲ್‌‌ʼನಲ್ಲಿ ಅಪ್‌ಡೇಟ್ ಮಾಡಲು ಆಗದೇ ಅಯ್ಯೋ ದೇವರೇ ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ವನ್ನು ಹೇಗೆ ನಿಭಾಯಿಸುವುದು ಎಂದು ಚಿಂತೆಯಿಂದ ಶಾಲೆ ನಡೆಸುತ್ತಿದ್ದಾರೆ. ಇಷ್ಟೆ ಆದರೂ ಸಿಬಿಎಸ್‌ಇ ಯಿಂದಾಗಲಿ, ಶಿಕ್ಷಣ ಸಚಿವರಿಂದಾಗಲಿ ಯಾವುದೇ ಧೈರ್ಯ ತುಂಬುವ ಅಧಿಕೃತ ಆದೇಶವಿಲ್ಲ. ಇದು ಕೇಂದ್ರ ಶಿಕ್ಷಣ ಇಲಾಖೆಯ ಬಹು ದೊಡ್ಡ ವೈಫಲ್ಯ.

ಸಮಸ್ಯೆ ಇಲ್ಲಿಗೆ ಮುಗಿಯಲಿಲ್ಲ. ಈ ಬಾರಿ ಸಿಬಿಎಸ್‌ಇ ಏಪ್ರಿಲ್ ಮೊದಲ ವಾರ ಎಂದಿನಂತೆ ಶೈಕ್ಷಣಿಕ ಕಾರ್ಯನಿಯೋಜನೆಯ ವೇಳಾಪಟ್ಟಿ ಹೊರಡಿಸಿತ್ತು. ವಿಶೇಷವಾಗಿ ಮುಂದಿನ ಐದು ವರ್ಷಗಳ ಸ್ಪಷ್ಟವಾದ ಚಿತ್ರಣ ನೀಡಲಾಗಿತ್ತು. ಈ ನಡುವೆ ಏಪ್ರಿಲ್ 1 ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದು ತಿಂಗಳ ಬಳಿಕ ಒಂಬತ್ತನೆಯ ತರಗತಿಗೆ ತೃತೀಯ ಭಾಷೆ ಕಲಿಕೆ ಕಡ್ಡಾಯ ಮಾಡಬೇಕೆಂಬ ಮಧ್ಯಂತರ ಆದೇಶ ಹೊರಡಿಸಿ ಮತ್ತೆ ಶಾಲೆಗಳ ದಿಕ್ಕು ತಪ್ಪಿಸಿತು. ಅಲ್ಲೂ ಸಹ ಅಸ್ಪಷ್ಟ ನೀತಿಯ ಹೇರಿಕೆ ನಡೆಯಿತು.

ಇದರೊಂದಿಗೆ ಕಳೆದ ಮೂರು ವರ್ಷದಿಂದ ಎನ್‌ಸಿಇಆರ್‌ಟಿ 6ನೇ ತರಗತಿಯಿಂದ ಪಠ್ಯಪುಸ್ತಕ ಹಂತ ಹಂತವಾಗಿ ತರಗತಿವಾರು ಬದಲಾವಣೆ ಮಾಡುತ್ತಲೇ ಬಂದಿದೆ. ಆದರೆ ಕಳೆದ ಬಾರಿ ಬದಲಾವಣೆಯಾದ 8ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರ ಪುಸ್ತಕದಲ್ಲಿ ನ್ಯಾಯಾಂಗ ನಿಂದನೆ ಪಠ್ಯಕ್ರಮ ಸೇರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದ್ದರಿಂದ 2.50 ಲಕ್ಷ ಪ್ರಿಂಟೆಡ್ ಪುಸ್ತಕ ವಾಪಸ್ಸಾಯಿತು.

ಒಂದೂವರೆ ವರ್ಷವಾದರೂ ಭಾಗ-2 ಪುಸ್ತಕದ ಸುಳಿವಿಲ್ಲ. ಸಿಬಿಎಸ್‌ಇ ಶಾಲೆಯ ಪ್ರಸ್ತುತ ಶೈಕ್ಷಣಿಕ ವರ್ಷದ ಮೊದಲರ್ಧ ಬಹುತೇಕ ಮುಗಿಯುವ ಹಂತ ದಲ್ಲಿದೆ. ಅಕ್ಟೋಬರ್‌ನಿಂದ ಎರಡನೇ ಅವಽ ಪ್ರಾರಂಭ. ಆದರೂ ಎನ್‌ಸಿಇಆರ್‌ಟಿ ಕಡೆಯಿಂದಾ ಗಲಿ, ಸಿಬಿಎಸ್‌ಇಯಿಂದಾಗಲಿ ಶಾಲೆಗಳಿಗೆ ಮುಂದೇನು ಮಾಡಬೇಕು ಎಂಬ ನಿರ್ದೇಶನವಿಲ್ಲ.

ಕೊನೆಯದಾಗಿ ಈ ವರ್ಷ ಸಿಬಿಎಸ್‌ಇ ಏಕಾಏಕಿಯಾಗಿ ಶೈಕ್ಷಣಿಕ ವರ್ಷ ಪ್ರಾರಂಭವಾದ ಬಳಿಕ ಏಪ್ರಿಲ್ ಎರಡನೇ ವಾರದಲ್ಲಿ ಒಂಬತ್ತನೆಯ ತರಗತಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಬದಲಾವಣೆ ಮಾಡಿರುವ ಆದೇಶ ಹೊರಡಿಸಿತು. ಆದರೆ ಮೇ ಕೊನೆಯ ವಾರ ಒಂದೊಂದಾಗಿ ಹೊಸ ಪುಸ್ತಕ ಆನ್‌ಲೈನ್‌ನಲ್ಲಿ ಬಿಡಲಾಯಿತು. ಜುಲೈ ಬಂದರೂ ಸಹ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕ ಬಿಡುಗಡೆಯಾಗಿಲ್ಲ.

ಶಾಲೆ ಪ್ರಾರಂಭವಾಗಿ ನಾಲ್ಕು ತಿಂಗಳಾದರೂ ಸಮಾಜ ವಿಜ್ಞಾನ ತರಗತಿ ನಡೆಯುತ್ತಿಲ್ಲ. ಕೆಲವು ಶಾಲೆಗಳು ಹಳೆಯ ಪುಸ್ತಕ ಪಾಠ ಮಾಡುತ್ತಿದ್ದರೆ, ಕೆಲವು ಶಾಲೆಗಳು ಹೊಸ ಪಠ್ಯಕ್ರಮಕ್ಕೆ ತಕ್ಕಂತೆ ಗೂಗಲ್‌ನಿಂದ ಮಾಹಿತಿ ಪಡೆದು ಪಾಠ ಮಾಡುತ್ತಿವೆ. ಮುಂದಿನ ಬಾರಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗೆ ತಯಾರಿ ಮಾಡಬೇಕಾದವರಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಒದಗಿಸಲು ವೈಫಲ್ಯವಾಗಿದೆ. ಇದೆ ಗೊತ್ತಿದ್ದರೂ ಸಿಬಿಎಸ್‌ಇ ಗಪ್‌ಚುಪ್.

ಸ್ವಾರಸ್ಯಕರ ಸಂಗತಿಯೆಂದರೆ ಮುಂದಿನ ಶೈಕ್ಷಣಿಕ ವರ್ಷಕ್ಕೂ ಸಿಬಿಎಸ್‌ಇ ಹತ್ತನೇ ತರಗತಿಯ ಪಠ್ಯ ಪುಸ್ತಕ ಬದಲಾವಣೆ ಆಗಲಿದೆ ಎಂದು ಆದೇಶ ಹೊರಡಿಸಲಾಗಿದೆ. ಒಂಬತ್ತನೆಯ ತರಗತಿಗೆ ನಿಗದಿತ ಸಮಯದಲ್ಲಿ ಪಠ್ಯಪುಸ್ತಕ ಒದಗಿಸಲಾಗದ ಎನ್‌ಸಿಇಆರ್‌ಟಿ ಹತ್ತನೇ ತರಗತಿ ಪ್ರಾರಂಭ ವಾಗಲು 9 ತಿಂಗಳಷ್ಟೇ ಬಾಕಿ ಇರುವಾಗ ಪಠ್ಯಪುಸ್ತಕ ನಿಗದಿತ ಸಮಯಕ್ಕೂ ಮೊದಲೇ ಮಾರುಕಟ್ಟೆ ಯಲ್ಲಿ ಒದಗಿಸಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಎನ್‌ಇಪಿ 2020ರ ಭಾಗವಾಗಿ ಸಂಪೂರ್ಣ ಶಾಲಾ ಶಿಕ್ಷಣದ ಪಠ್ಯಕ್ರಮವನ್ನು ನವೀಕರಿಸಲಾಗುತ್ತಿದೆ.

ಹೊಸ ಚೌಕಟ್ಟಿಗೆ ಅನುಗುಣವಾಗಿ 1 ರಿಂದ 12ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಹೊಸದಾಗಿ ಸಿದ್ಧಪಡಿಸಬೇಕಾಗಿರುವುದು ವಿಳಂಬಕ್ಕೆ ಮುಖ್ಯ ಕಾರಣ. ಇನ್ನು ಪಠ್ಯಪುಸ್ತಕಗಳಲ್ಲಿನ ವಿಷಯಗಳ ಆಯ್ಕೆ, ತಪ್ಪುಗಳ ತಿದ್ದುಪಡಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅಳವಡಿಸಲು ತಜ್ಞರ ಸಮಿತಿಗಳು ತೆಗೆದುಕೊಳ್ಳುತ್ತಿರುವ ಪರಿಷ್ಕರಣೆಯ ದೀರ್ಘಾವಧಿ ಸಮಯ ಹಾಗೂ ಗುಣ ಮಟ್ಟದ ತಪಾಸಣೆಯ ಸವಾಲು.

ಇದರ ನಂತರ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ತಲುಪಿಸಲು ಅಗತ್ಯ ವಿರುವ ಮುದ್ರಣ ಸಾಮರ್ಥ್ಯ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯ ದೋಷಗಳು. ಕೇವಲ ಮುದ್ರಿತ ಪುಸ್ತಕಗಳಲ್ಲದೆ, ಇ-ಪುಸ್ತಕಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳಲ್ಲಿ ಏಕಕಾಲದಲ್ಲಿ ವಿಷಯ ಅಪ್ಡೇಟ್ ಮಾಡುವ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಅಡೆತಡೆಗಳು. ಹೀಗೆ ಅನೇಕ ಸವಾಲುಗಳಿವೆ.

ಪ್ರಸ್ತುತ ಕೋಮಾಗೆ ಜಾರಿರುವ ಸಿಬಿಎಸ್‌ಇ ವ್ಯವಸ್ಥೆ ಮೊದಲಿನ ವೇಗ ಪಡೆಯಬೇಕಾದರೆ ಹಿಂದಿನ ಸಾಲು ಸಾಲು ವೈಫಲ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಈಗಾಗಲೇ ದೇಶದ ಭದ್ರ ಬುನಾದಿ‌ ಯಾಗಬೇಕಿದ್ದ ಶಿಕ್ಷಣ ವ್ಯವಸ್ಥೆ ಯಾವುದೇ ಪರಕೀಯರ ದಾಳಿಗಳಿಲ್ಲದೆ ನೆಲ ಕಚ್ಚುವುದನ್ನು ಕಾಣು ತ್ತಿದ್ದೇವೆ. ಇದಕ್ಕೆ ನೀಟ್ ಅಕ್ರಮದಿಂದ ಪ್ರಾಥಮಿಕ ಶಿಕ್ಷಣದ ತನಕ ವ್ಯವಸ್ಥೆಯ ವೈಫಲ್ಯವೇ ಸಾಕ್ಷಿ. ಇವುಗಳ ನಡುವೆ ಆಡಳಿತ ವ್ಯವಸ್ಥೆ ಹಾಗೂ ನಾಗರಿಕರು ಕಲಿಯಬೇಕಾದ ಪಾಠ ಸಾಕಷ್ಟಿದೆ. ಅತಿಯಾದ ತಂತ್ರಜ್ಞಾನದ ಅವಲಂಬನೆ, ಬಹು ಬೇಗನೇ ವಿಶ್ವಗುರು ಆಗಬೇಕೆಂಬ ಹಪಾಹಪಿ, ಪೂರ್ವ ತಯಾರಿಯ ನಿರ್ಲಕ್ಷ್ಯ, ಶಿಕ್ಷಣದ ನಿಜವಾದ ಉದ್ದೇಶ ಅರಿಯುವಲ್ಲಿನ ಸೋಲು, ರಾಜಕೀಯ ಪಕ್ಷಗಳ ಸ್ವಾರ್ಥ, ಅಸಮರ್ಥ ನಾಯಕತ್ವ, ಪೋಷಕರ ಸಹಭಾಗಿತ್ವ, ಭ್ರಷ್ಟಾಚಾರ ಹೀಗೆ ಎಲ್ಲ ವನ್ನೂ ಈ ಸಮಯದಲ್ಲಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಹಾಗಂತ ನಮ್ಮ ರಾಜ್ಯ ಶಿಕ್ಷಣ ಇಲಾಖೆಯತ್ತ ಮುಖ ಮಾಡೋಣವೆಂದರೆ ಅಲ್ಲೂ ಸಾಲು ಸಾಲು ನಿರಾಸೆಗಳು. ಶಾಲೆ ಪ್ರಾರಂಭವಾಗಿ ಒಂದು ತಿಂಗಳಾದರೂ ಇನ್ನೂ ಶಿಕ್ಷಣ ಇಲಾಖೆಗೆ ಸಚಿವರೇ ಇಲ್ಲ. ಮಳೆಗೆ ಶಾಲೆ ಸೋರುತ್ತಿದೆ. ಪಠ್ಯಪುಸ್ತಕ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಮೊಟ್ಟೆ ಬಟ್ಟೆ ಉಚಿತ ವಾಗಿ ಕೊಟ್ಟರೆ ಮಕ್ಕಳ ಹೊಟ್ಟೆ ತುಂಬುತ್ತದೆ. ಆದರೆ ಶಿಕ್ಷಣದ ಪಾಡೇನು? ಸರಕಾರಿ ಶಾಲೆ ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತಲೂ ತರಕಾರಿ ತರುವುದು, ಲೆಕ್ಕ ಬರೆಯುವುದು, ದಿನಪೂರ್ತಿ ಬಿಇಓ ಕಚೇರಿ ಸಭೆ ಇತ್ಯಾದಿಗಳಲ್ಲೇ ಜೀವ ಹೋಗುತ್ತದೆ. ಅಲ್ಲಿಗೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಐಸಿಯುನ ಪ್ರಾಣ ಬಿಟ್ಟಂತೆ!