Roopa Gururaj Column: ತೊಗಲುಗೊಂಬೆಯಾಟಕ್ಕೆ ಜೀವ ತುಂಬಿದ ತಾಯಿ ಭೀಮವ್ವಗೆ ಪ್ರಶಸ್ತಿ
ಬೆಳಕಿನ ಪರದೆಯ ಹಿಂದೆ ಚರ್ಮದ ಗೊಂಬೆಗಳನ್ನು ಆಡಿಸುತ್ತಾ, ರಾಮಾಯಣ, ಮಹಾಭಾರತಗಳ ಮಹಾಕಾವ್ಯಗಳನ್ನು ಹಳ್ಳಿ-ಹಳ್ಳಿಗಳಲ್ಲಿ ಪ್ರದರ್ಶಿಸುತ್ತಾ, ಸಂಸ್ಕೃತಿಯ ದೀವಟಿಗೆಯನ್ನು ತಲೆಮಾರುಗಳಿಂದ ದಾಟಿಸುತ್ತಾ ಬಂದ ತಾಯಿ ಇವರು. ಇವರ ಈ ನಿಸ್ವಾರ್ಥ ಕಲಾ ಸೇವೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದಾಗ, ಇಡೀ ಜನಪದ ಲೋಕವೇ ಸಂಭ್ರಮಿಸಿತು.
-
ಒಂದೊಳ್ಳೆ ಮಾತು
ರಾಷ್ಟ್ರಪತಿ ಭವನದ ಭವ್ಯವಾದ ದರ್ಬಾರ್ ಹಾಲ್ ಎಷ್ಟೋ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ, ಇತ್ತೀಚೆಗೆ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಾವರಣ ಗೊಂಡ ಆ ದೃಶ್ಯ ಇಡೀ ದೇಶದ ಕಣ್ಣಾಲಿಗಳನ್ನು ತೇವಗೊಳಿಸಿತು; ಭಾರತೀಯ ಸಂಸ್ಕೃತಿಯ ಮತ್ತು ಮಾನವೀಯ ಮೌಲ್ಯಗಳ ಪರಮೋಚ್ಚ ಶಿಖರವನ್ನು ಜಗತ್ತಿಗೆ ಸಾರಿತು.
ಅದು ಕೇವಲ ಅಧಿಕೃತ ಪ್ರಶಸ್ತಿ ವಿತರಣೆಯಾಗಿರಲಿಲ್ಲ, ಬದಲಿಗೆ ಅಪ್ಪಟ ಗ್ರಾಮೀಣ ಭಾರತದ ಜನಪದ ಶಕ್ತಿಗೆ ದೆಹಲಿಯ ರಾಜದಂಡವೇ ತಲೆಬಾಗಿ ನಮಸ್ಕರಿಸಿದ ಪರಮ ಪವಿತ್ರ ಕ್ಷಣವಾಗಿತ್ತು. ಆ ಅಪೂರ್ವ ಗೌರವಕ್ಕೆ ಪಾತ್ರರಾದವರು ನಮ್ಮ ಹೆಮ್ಮೆಯ ಕರ್ನಾಟಕದ ಕೊಪ್ಪಳ ಜಿಲ್ಲೆಯ ಮೊರನಾಳ ಗ್ರಾಮದ 96 ವರ್ಷದ ಹಣ್ಣುಜೀವ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ.
ಅಕ್ಷರ ಜ್ಞಾನವಿಲ್ಲದ, ಬಡತನದ ಬೇಗೆಯಲ್ಲಿ ಬೆಂದ, ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಭೀಮವ್ವನವರ ಸಾಧನೆ ಸಾಮಾನ್ಯವಾದುದಲ್ಲ. ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ತೊಗಲು ಗೊಂಬೆಯಾಟವನ್ನು ತಮ್ಮ ಉಸಿರಾಗಿಸಿಕೊಂಡು, ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲ ಅವರು ಈ ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಜೀವಂತ ವಾಗಿಟ್ಟಿದ್ದಾರೆ.
ಬೆಳಕಿನ ಪರದೆಯ ಹಿಂದೆ ಚರ್ಮದ ಗೊಂಬೆಗಳನ್ನು ಆಡಿಸುತ್ತಾ, ರಾಮಾಯಣ, ಮಹಾಭಾರತಗಳ ಮಹಾಕಾವ್ಯಗಳನ್ನು ಹಳ್ಳಿ-ಹಳ್ಳಿಗಳಲ್ಲಿ ಪ್ರದರ್ಶಿಸುತ್ತಾ, ಸಂಸ್ಕೃತಿಯ ದೀವಟಿಗೆಯನ್ನು ತಲೆಮಾರುಗಳಿಂದ ದಾಟಿಸುತ್ತಾ ಬಂದ ತಾಯಿ ಇವರು. ಇವರ ಈ ನಿಸ್ವಾರ್ಥ ಕಲಾ ಸೇವೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದಾಗ, ಇಡೀ ಜನಪದ ಲೋಕವೇ ಸಂಭ್ರಮಿಸಿತು.
ಇದನ್ನೂ ಓದಿ:Roopa Gururaj Column: ನಮ್ಮನ್ನು ಸೋಲಿಸುವ ಅಸ್ತ್ರ, ನಮ್ಮದೇ ಅಹಂಕಾರ !
ದರ್ಬಾರ್ ಹಾಲ್'ನಲ್ಲಿ ಪ್ರಶಸ್ತಿ ಪ್ರದಾನದ ಕಟ್ಟುನಿಟ್ಟಿನ ನಿಯಮಗಳಿರುತ್ತವೆ. ಪ್ರಶಸ್ತಿ ಪುರಸ್ಕೃತರು ವೇದಿಕೆಯ ಮೆಟ್ಟಿಲುಗಳನ್ನು ಹತ್ತಿ ನಡೆದು ಬಂದು, ಗೌರವಾನ್ವಿತ ರಾಷ್ಟ್ರಪತಿಗಳು ನಿಂತಿರುವ ಜಾಗದಲ್ಲಿ ಪ್ರಶಸ್ತಿ ಸ್ವೀಕರಿಸಬೇಕು. ಆದರೆ, 96 ವರ್ಷದ ಭೀಮವ್ವನವರು ತಮ್ಮ ಜಾಗದಿಂದ ಎದ್ದು ನಿಂತು ಮೆಟ್ಟಿಲುಗಳತ್ತ ಹೆಜ್ಜೆ ಇಡಲು ಶ್ರಮಪಡುತ್ತಿದ್ದ ಆ ಕ್ಷಣ ಇಡೀ ಸಭಾಂಗಣದ ಉಸಿರು ಬಿಗಿ ಹಿಡಿಯುವಂತೆ ಮಾಡಿತು.
ಆಗ ಅಲ್ಲಿ ನಡೆದದ್ದು ಇತಿಹಾಸ! ಭೀಮವ್ವನವರ ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ತಕ್ಷಣವೇ ಗ್ರಹಿಸಿದ ಭಾರತದ ಪ್ರಥಮ ಪ್ರಜೆ, ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವುದೇ ಶಿಷ್ಟಾಚಾರದ ಹಂಗಿಗೆ ಬೀಳಲಿಲ್ಲ. ಅವರು ತಾವೇ ಸ್ವತಃ ವೇದಿಕೆಯ ಮೆಟ್ಟಿಲು ಗಳನ್ನು ಇಳಿದು ಕೆಳಗೆ ಬಂದರು.
ನಡೆದಾಡುವ ಜೀವಂತ ಇತಿಹಾಸದಂತಿದ್ದ ಆ ಅಜ್ಜಿಯ ಬಳಿಗೇ ಬಂದು, ಅತ್ಯಂತ ಮಮತೆ ಮತ್ತು ಗೌರವದಿಂದ ಪದ್ಮಶ್ರೀ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಅವರ ಕೈಗಿಟ್ಟರು. ಅಧಿಕಾರದ ಪರಮೋಚ್ಚ ಪೀಠದಲ್ಲಿದ್ದ ಮಹಿಳೆಯೊಬ್ಬರು, ಹಳ್ಳಿಯ ಕಲಾಮಾತೆಯ ಪಾದದ ಬಳಿ ಬಂದು ನಿಂತ ಆ ದೃಶ್ಯ ಕೇವಲ ಭಾವುಕತೆಯಲ್ಲ, ಅದು ಅಧಿಕಾರವು ಸಂಸ್ಕೃತಿಗೆ ತೋರಿದ ಗೌರವವಾಗಿತ್ತು.
ಗೌರವದ ಈ ಮಹಾಪೂರ ಅಷ್ಟಕ್ಕೇ ನಿಲ್ಲಲಿಲ್ಲ. ಪ್ರಶಸ್ತಿ ಸ್ವೀಕರಿಸಿ ಭೀಮವ್ವನವರು ಮುನ್ನಡೆಯುತ್ತಿ ದ್ದಾಗ, ಮುಂಚೂಣಿಯಲ್ಲಿದ್ದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಆಸನ ದಿಂದ ಎದ್ದು ಬಂದು, ಆ ಹಣ್ಣು ಜೀವದ ಮುಂದೆ ತಲೆ ಬಾಗಿ, ಅವರ ಪಾದಗಳನ್ನು ಮುಟ್ಟಿ ಸಾಷ್ಟಾಂಗ ನಮಸ್ಕಾರ ಮಾಡಿದರು.
ಕರ್ನಾಟಕದ ‘ಗೊಂಬೆಯಾಟದ ಅಜ್ಜಿ’ ಪ್ರೀತಿಯಿಂದ ಪ್ರಧಾನಿಯವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ದೆಹಲಿಯ ದೊರೆಗಳೆಲ್ಲರೂ ಹಳ್ಳಿಯ ಅವಿದ್ಯಾವಂತ, ಆದರೆ ಕಲಾ ಶ್ರೇಷ್ಠತೆಯ ಶರಧಿಯಾಗಿದ್ದ ತಾಯಿಯ ಮುಂದೆ ಮಣಿದ ಆ ಕ್ಷಣ, ಭಾರತೀಯ ಸಂಸ್ಕಾರ ಎಂದರೆ ಏನು ಎಂಬು ದನ್ನು ಜಗತ್ತಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟಿತು.
ತೊಗಲು ಗೊಂಬೆಯಾಟವು ಕೇವಲ ಚರ್ಮದ ಗೊಂಬೆಗಳ ಪ್ರದರ್ಶನವಲ್ಲ; ಅದು ಕರಕುಶಲತೆ, ಸಂಗೀತ, ಸಾಹಿತ್ಯ ಮತ್ತು ಮೌಲ್ಯಗಳ ಸಮ್ಮಿಲನ. ಅದನ್ನು ತಮ್ಮ ಗ್ರಾಮವಾದ ಮೊರನಾಳದಲ್ಲಿ ಇಂದಿಗೂ ಯುವ ಪೀಳಿಗೆಗೆ ಧಾರೆ ಎರೆಯುತ್ತಿರುವ ಭೀಮವ್ವನವರ ಶ್ರಮಕ್ಕೆ ಈ ಪ್ರಶಸ್ತಿ ಮತ್ತು ಸಿಕ್ಕ ಗೌರವ ಅತ್ಯಂತ ಸೂಕ್ತವಾದುದು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ನೆಚ್ಚಿನ ಕಲೆಗೆ ಜೀವ ತುಂಬುತ್ತಾ ಅದನ್ನು ಮುಂದಿನ ಪೀಳಿಗೆಗೂ ದಾಟಿಸುತ್ತಿರುವ ಸಾವಿರಾರು ಇಂತಹ ಕಲಾಯೋಗಿಗಳು ಭಾರತದುದ್ದಕ್ಕೂ ಸಿಗುತ್ತಾರೆ. ಇಂತಹ ಅಪರೂಪದ ಎಲೆಮರೆಕಾಯಿಗಳನ್ನ ಹುಡುಕಿ ಅವರಿಗೆ ಗೌರವ ಸಲ್ಲಿಸುತ್ತಿರುವ ಭಾರತ ಸರಕಾರಕ್ಕೊಂದು ದೊಡ್ಡ ನಮಸ್ಕಾರ.