Hari Paraak Column: ಬಸವಣ್ಣ ʼಜಾತಿನ ಲೆಕ್ಕಕ್ಕೇ ಇಡಬೇಡಿʼ ಅಂದ್ರು, ಇವ್ರ್ ನೋಡಿದ್ರೆ ಜಾತಿ ಲೆಕ್ಕ ಹಾಕ್ತಾ ಇದ್ದಾರೆ
ಹಾಗೆಯೇ ಯಕ್ಷಗಾನದ ಗಂಧಗಾಳಿ ಇಲ್ಲದವರು ಈ ಸಿನಿಮಾ ವಿಮರ್ಶೆ ಮಾಡುವುದೂ ತರವಲ್ಲ. ಯಾಕಂದ್ರೆ ಆ ಬಗ್ಗೆ ಜ್ಞಾನವೇ ಇಲ್ಲದೆ ಈ ಕೆಟಗರಿಯ ಸಿನಿಮಾವನ್ನು ಅಳೆಯುವುದು ಸರಿಯಲ್ಲ. ಆದರೆ ಅದನ್ನೂ ಮೀರಿ ‘ಎಐ’ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಇದ್ದಾರೆ ಮತ್ತು ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕಾದರೂ ಎಲ್ಲ ಬಗೆಯ ಕನ್ನಡಿಗರು ಈ ಸಿನಿಮಾ ನೋಡಲು ಕಾರಣಗಳಂತೂ ಇವೆ


ತುಂಟರಗಾಳಿ
ಸಿನಿಗನ್ನಡ
ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರ ಈ ವಾರ ಬಿಡುಗಡೆ ಆಗಿದೆ. ಇದು ಯಕ್ಷಗಾನ ಪ್ರಧಾನ ಚಿತ್ರ. ಚಿತ್ರರಂಗದಲ್ಲಿ ಯಶಸ್ಸು ಗಳಿಸೋದು ಹೇಗೆ, ಜನರು ಕನ್ನಡ ಸಿನಿಮಾ ನೋಡ್ತಾ ಇಲ್ಲವಲ್ಲ, ಏನ್ ಮಾಡೋದು ಅನ್ನೋ ಯಕ್ಷ ಪ್ರಶ್ನೆಗಳು ಸಿನಿಮಾ ಮಂದಿಯನ್ನು ಕಾಡುವಾಗ ಯಕ್ಷಗಾನದ ಬಗ್ಗೆಯೇ ಸಿನಿಮಾ ಮಾಡಿದ್ದಾರೆ ರವಿ ಬಸ್ರೂರು.
ಅಂದಹಾಗೆ ಇದು ಎಲ್ಲರಿಗೂ ಅರ್ಥ ಮತ್ತು ಇಷ್ಟ ಆಗುವ ಸಿನಿಮಾ ಆಗಿರಲ್ಲ ಅನ್ನೋದು ಸತ್ಯ. ಯಾಕಂದ್ರೆ ಯಕ್ಷಗಾನ ಅನ್ನೋ ಕಲಾಪ್ರಕಾರ ಎಲ್ಲ ಭಾಗದ ಕನ್ನಡಿಗರಿಗೂ ಆಪ್ತವಾಗುವಂಥ ದ್ದಲ್ಲ. ಬಯಲುಸೀಮೆ ಜನಕ್ಕೆ ಇದೊಂದು ಬಯಲಾಟದ ಥರ ಕಾಣಿಸಿದರೆ ಕರಾವಳಿ ತೀರದ ಜನರಿಗೆ ಇದು ಅತಿ ಆಪ್ತ ಎನಿಸುವ ಪ್ರಕಾರ. ಹಾಗಾಗಿ ಯಕ್ಷಗಾನದ ಬಗ್ಗೆ ತಿಳಿದವರು ಮತ್ತು ಆಸಕ್ತಿ ಇರುವವರಿಗೆ ಈ ಸಿನಿಮಾ ಸೂಕ್ತ.
ಹಾಗೆಯೇ ಯಕ್ಷಗಾನದ ಗಂಧಗಾಳಿ ಇಲ್ಲದವರು ಈ ಸಿನಿಮಾ ವಿಮರ್ಶೆ ಮಾಡುವುದೂ ತರವಲ್ಲ. ಯಾಕಂದ್ರೆ ಆ ಬಗ್ಗೆ ಜ್ಞಾನವೇ ಇಲ್ಲದೆ ಈ ಕೆಟಗರಿಯ ಸಿನಿಮಾವನ್ನು ಅಳೆಯುವುದು ಸರಿಯಲ್ಲ. ಆದರೆ ಅದನ್ನೂ ಮೀರಿ ‘ಎಐ’ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಇದ್ದಾರೆ ಮತ್ತು ಶಿವರಾಜ್‌ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕಾದರೂ ಎಲ್ಲ ಬಗೆಯ ಕನ್ನಡಿಗರು ಈ ಸಿನಿಮಾ ನೋಡಲು ಕಾರಣಗಳಂತೂ ಇವೆ. ಹಾಗಾಗಿ ರವಿ ಬಸ್ರೂರು ಎಂಬ ಅಪ್ರತಿಮ ಕೆಲಸಗಾರ, ಕಷ್ಟಜೀವಿ ಮಾಡಿರುವ ಈ ಚಿತ್ರ ಯಶಸ್ವಿ ಆಗಬೇಕು. ಅದು ಆದರೆ ಈ ಚಿತ್ರ ಕನ್ನಡಿಗರ ಹೆಮ್ಮೆ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: Hari Paraak Column: ಬ್ರೆಡ್ ಅರ್ನ್ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?
ಲೂಸ್ ಟಾಕ್ -ಜ್ಯಾತಿಕ್ಯಾತ
ಏನ್ರೀ ನಿಮ್ ಮನೆಗೆ ಜಾತಿಗಣತಿ ಮಾಡೋರು ಬಂದಿದ್ರಾ?
-ನಮ್ಮನೆಗೆ ಯಾರೂ ಬಂದೂ ಇಲ್ಲ, ಬಂದ್ರೂ ನಾನ್ ನನ್ ಜಾತಿ ಹೇಳೋದೂ ಇಲ್ಲ.
ಏನ್ರೀ ಒಳ್ಳೆ ಗಡ್ಡಪ್ಪನ ಥರ ಮಾತಾಡ್ತಾ ಇದ್ದೀರ?
- ಹಲೋ, ನಾನೆಲ್ಲಿ ಮೋದಿಯವರ ಥರ ಮಾತಾಡಿದೆ?
ಹಲೋ ನಾನೇಳಿದ್ದು ‘ತಿಥಿ’ ಗಡ್ಡಪ್ಪನ ಥರ ಅಂತ. ಸರಿ, ಈ ಜಾತಿಗಣತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?
- ನೋಡಿ ಈ ಜಾತಿಗಳ ಬಗ್ಗೆ ಜಗಜ್ಜಾತಿ ಬಸವೇಶ್ವರರು ಏನ್ ಹೇಳಿದ್ರು ಅಂದ್ರೆ...
ರೀ, ಸ್ವಾಮಿ ಅದು ಜಗಜ್ಜಾತಿ ಅಲ್ಲ, ಜಗಜ್ಯೋತಿ ಬಸವೇಶ್ವರರು..
- ಹೋ, ಹಂಗಾ, ಸಾರಿ, ನಾನ್ ಏನ್ ಹೇಳೋಕೆ ಹೊರಟೆ ಅಂದ್ರೆ ಬಸವಣ್ಣ ‘ಜಾತಿನ ಲೆಕ್ಕಕ್ಕೇ ಇಡಬೇಡಿ’ ಅಂದ್ರು, ಇವ್ರ್ ನೋಡಿದ್ರೆ ಜಾತಿನೇ ಲೆಕ್ಕ ಹಾಕ್ತಾ ಇದ್ದಾರೆ. ಇದು ಸರಿ ಅಲ್ಲ.
ನೂರಕ್ಕೆ ಒಂದ್ ಮಾತ್ ಹೇಳಿದ್ರಿ ಬಿಡಿ. ಸಖತ್ ಬುದ್ಧಿವಂತರು ನೀವು
- ಬುದ್ಧಿ ಇಲ್ದೇ ಇರುತ್ತಾ? ನಾನ್ ಹುಟ್ಟಿರೋದು ಯಾವ ಜಾತೀಲಿ ಗೊತ್ತಾ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋದ್ರು. ಅಲ್ಲಿನ ಜಯಂಟ್ ವೀಲ್ ನೋಡಿ ಖೇಮುಗೆ ಅದರಲ್ಲಿ ಕೂರಬೇಕು ಅಂತ ಆಸೆಯಾಯ್ತು. ಹಾಗಂತ ಖೇಮುಶ್ರೀಗೆ ಹೇಳಿದ. ಅದಕ್ಕೆ ಖೇಮುಶ್ರೀ, ‘ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ 500 ರುಪಾಯಿ. 500 ರುಪಾಯಿ ಏನು ಸುಮ್ನೆ ಬರುತ್ತಾ?’ ಅಂದ್ಳು. ಖೇಮು ಸುಮ್ಮನಾದ. ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಖೇಮುಗೆ ಮತ್ತೆ ಜಯಂಟ್ ವೀಲ್‌ನಲ್ಲಿ ಕೂರೋ ಆಸೆಯಾಗಿ ಹೆಂಡತಿಗೆ ಹೇಳಿದ. ಖೇಮುಶ್ರೀಯಿಂದ ಅದೇ ಉತ್ತರ ಬಂತು- ‘500 ರುಪಾಯಿ ಏನು ಸುಮ್ನೆ ಬರುತ್ತಾ’ ಅಂತ. ಸರಿ ಹೀಗೇ ವರುಷಗಳು ಕಳೆದು ಖೇಮು ಮುದುಕ ಆದ. ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. ‘ನಂಗೆ ವಯಸ್ಸು 70 ಆಯ್ತು, ಈ ಸಲನಾದ್ರೂ ಅದರಲ್ಲಿ ಕೂತ್ಕೊತೀನಿ ಕಣೇ. ಇಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ’ ಅಂದ ಖೇಮು. ಅದಕ್ಕೆ ಖೇಮುಶ್ರೀ ಮತ್ತದೇ ಮಾತು ಹೇಳಿದ್ಳು- ‘500 ರುಪಾಯಿ ಏನು ಸುಮ್ನೆ ಬರುತ್ತಾ’. ಇದನ್ನ ಆ ಜಯಂಟ್ ವೀಲ್ ರೈಡರ್ ಕೇಳಿಸಿಕೊಂಡು, ‘ನೋಡಿ, ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವೀಲ್‌ನಲ್ಲಿ ಕರ್ಕೊಂಡ್ ಹೋಗ್ತೀನಿ. ಆದ್ರೆ, ಒಂದ್ ಕಂಡೀಷನ್.
ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮ್ಗೆ 500 ರುಪಾಯಿ ಫೈನ್ ಆಗುತ್ತೆ’ ಅಂತ ಖೇಮು ದಂಪತಿಗೆ ಹೇಳಿದ. ಸರಿ ಅಂತ ಇಬ್ಬರೂ ಒಪ್ಪಿ ಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್-ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ವೀಲನ್ನು ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, ‘ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್". ಅದಕ್ಕೆ ಹಿಂದೆ ಕೂತಿದ್ದ ಖೇಮು ಮೆಲ್ಲಗೆ ಹೇಳಿದ- ಹಂಗೇ ನಿಲ್ಲ ಸರ್, ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದು ಹೋದಳು. ಆದ್ರೂ ಸುಮ್ಮನೆ ಕೂತಿದ್ದೆ, ಯಾಕಂದ್ರೆ 500 ರುಪಾಯಿ ಏನು ಸುಮ್ನೆ ಬರುತ್ತಾ?".
ಲೈನ್ ಮ್ಯಾನ್
ಮಳೆಗಾಲದ ಎಫೆಕ್ಟ್ ಏನು?
- ತಮಿಳುನಾಡಿನವರು ನೀರು ಬಿಡಿ ಅಂತ ನಮ್ಮನ್ನ ಕೇಳಲ್ಲ.
-ಮರಗಳನ್ನು ಬೆಳೆಸೋ ಸಾಲು ಮರದ ತಿಮ್ಮಕ್ಕನನ್ನು ಜನ ಮರೆತೇ ಹೋಗ್ತಾರೆ.
- ಇನ್ಮೇಲೆ ‘ಎಸಿ’ ಅಂದ್ರೆ ಏರ್
ಕಂಡೀಷನರ್ ಅಲ್ಲ, ಬರೀ
ಅಸಿಸ್ಟೆಂಟ್ ಕಮಿಷನರ್.
- ಹುಡುಗಿಯರು ಮನೆಯಿಂದ ಹೊರಗೆ ಬರೋದು ಜಾಸ್ತಿ ಆಗುತ್ತೆ. ಸೋ, ಅವರನ್ನ ನೋಡುತ್ತಾ ರಸ್ತೆಯಲ್ಲಿ ಅಪಘಾತ ಮಾಡುವ ಹುಡುಗರ ಸಂಖ್ಯೆ ಜಾಸ್ತಿ ಆಗುತ್ತೆ.
-ತಪ್ಪು ಮಾಡಿದವರು ಮಾತ್ರ
ಬೆವರುವುದರಿಂದ,
ಪೊಲೀಸರಿಗೆ ಅಪರಾಽಗಳನ್ನು
ಕಂಡುಹಿಡಿಯೋದು ಸುಲಭ
ಆಗುತ್ತೆ.
ಟೆಸ್ಟ್ ನಲ್ಲಿ ಗೆಲ್ಲೋ ಅಥವಾ ಸೋಲೋ ಮ್ಯಾಚ್ ಡ್ರಾ ಆದ್ರೆ ಅದು
- ಡ್ರಾ-ಮ್ಯಾಟಿಕ್ ರಿಸಲ್ಟ್
ಸ್ಮಶಾನದಲ್ಲಿ ಆಡೋ ಆಟ
- ಲ‘ಗೋರಿ’
ತಮಿಳುನಾಡಿನಲ್ಲಿರುವ ಪರಿಸರ ಪ್ರೇಮಿ
-‘ಸಸಿ’ಕುಮಾರ
ಬೇಬಿ ಸಿಟ್ಟರ್‌ನ ಕನ್ನಡದಲ್ಲಿ ಏನಂತಾರೆ?
- ಶಿಶು-ಪಾಲ
ಕುಡಿದು ಚಿತ್ತಾಗಿರೋ ಸೆಕ್ಯುರಿಟಿ ಗಾರ್ಡ್
- ‘ಟೈಟ್’ ವಾಚ್‌ಮನ್
ರಾಜಕೀಯ ಸಮಾವೇಶಗಳಲ್ಲಿ ಜೈಕಾರ ಹಾಕೋಕೆ ಬರೋ ಜನಗಳಿಗೆ ಏನು ಕೊಡ್ತಾರೆ?
-‘ಜೈ’ವಿಕ ಆಹಾರ
ಸೋಮು: LPG ರೇಟ್ ಮತ್ತೆ ಜಾಸ್ತಿ ಆಗಿದೆಯಂತೆ.
ಖೇಮು: ಹೋಗ್ಲಿ, ಬಿಡೋ..
ಅದು ಹುಡುಗೀರ್
ಪ್ರಾಬ್ಲಮ್. ನಾವ್ಯಾಕ್ ತಲೆ ಕೆಡಿಸ್ಕೊಬೇಕು?
ಸೋಮು: ಲೋ, ಗ್ಯಾಸ್ ರೇಟ್ ಬರೀ ಹುಡುಗೀರ್ ಪ್ರಾಬ್ಲಮ್ ಹೆಂಗೋ ಆಗುತ್ತೆ?
ಖೇಮು: ಓಹ್, ಗ್ಯಾಸ್ ರೇಟಾ? ನಾನೆಲ್ಲೋ Ladies PG ಬಗ್ಗೆ ಹೇಳ್ತಿದೀಯಾ ಅಂದ್ಕೊಂಡೆ.
ಇಬ್ಬರು ಸಮಾನ ದುಃಖಿಗಳು ಅನುಭವಿಸೋ ನೋವು
- ‘ಜಾಯಿಂಟ್’ ಪೇನ್