Shishir Hegde Column: ಬಿಂಜ್ ಟ್ಯೂಬ್ ಡಿಸಾರ್ಡರ್: ಯೂಟ್ಯೂಬ್ ಎಂಬ ಸಸ್ತಾ ನಶೆ
ಇನ್ನೊಂದು ಓದುಗರ ವರ್ಗವಿದೆ. ಅವರಿಂದ ಇ-ಮೇಲ್ ಬಂದಿದೆ ಎಂದರೆ ನಾನು ಆ ವಾರದ ಲೇಖನದಲ್ಲಿ ಏನೋ ಒಂದು ‘ತಪ್ಪ’ನ್ನು ಮಾಡಿದ್ದೇನೆ ಎಂದೇ ಅರ್ಥ. ತಪ್ಪು ಮಾಡಿದಾಗ ಮಾತ್ರ ಇ-ಮೇಲ್ ಮಾಡುವವರು ಅವರು. ನನ್ನ ಮಟ್ಟಿಗೆ ಅವರ, ಅಂಥ ಪ್ರತಿಕ್ರಿಯೆ ಅತ್ಯಮೂಲ್ಯ. ಅದು ಅತ್ಯವಶ್ಯಕತೆ. ಕೆಲ ವರ್ಷದ ಹಿಂದೆ ‘ಜಪಾನ್ ಕರ್ನಾಟಕದ ದುಪ್ಪಟ್ಟು ದೊಡ್ಡದು’ ಎಂದು ಬರೆಯು ವಾಗ ವಾಕ್ಯ ತದ್ವಿರುದ್ಧವಾಗಿತ್ತು.


ಶಿಶಿರಕಾಲ
shishih@gmail.com
‘ಶಿಶಿರಕಾಲ’ ವಾರದ ಅಂಕಣ ಆರಂಭಿಸಿ ಆರನೇ ವರ್ಷ. ಪ್ರತಿ ವಾರ ಅಂಕಣ ಬರೆಯುವುದರ ಜತೆ ನನ್ನ ನೆಚ್ಚಿನ ಇನ್ನೊಂದು ಕೆಲಸವೆಂದರೆ, ಓದುಗರ ಇ-ಮೇಲ್ ಪ್ರತಿಕ್ರಿಯೆಗಳನ್ನು ಓದುವುದು, ಅದಕ್ಕೆ ಉತ್ತರಿಸುವುದು. ಸೋಷಿಯಲ್ ಮೀಡಿಯಾ ಕಮೆಂಟ್‌ಗಳಿಗಿಂತ ಇ-ಮೇಲ್ ಬಹಳ ವಿಭಿನ್ನ, ವಿಶೇಷ. ಇ-ಮೇಲ್ ಎಂದರೆ ನೇರ ನನ್ನೊಡನೆಯೇ ಆಡುವ ಮಾತು ಅದು.
ಪ್ರತಿಕ್ರಿಯೆಗಳ ‘ಶಹಭಾಷ್’, ಹೊಗಳಿಕೆ, ತೆಗಳಿಕೆ ಯಾವುದೂ ನನ್ನನ್ನು ಎಂದೂ ಉಬ್ಬಿಸಿಲ್ಲ, ಹಿಗ್ಗಿಸಿಲ್ಲ ಅಥವಾ ಕುಗ್ಗಿಸಿದ್ದಿಲ್ಲ. ಬದಲಿಗೆ ಓದುಗರ ಜತೆಗೊಂದು ಸುಂದರ ಸಂಬಂಧಕ್ಕೆ ಕಾರಣ ವಾಗಿದೆ. ‘ವಿಶ್ವವಾಣಿ’ಯ ವಿಶೇಷವೆಂದರೆ ಕರ್ನಾಟಕವಷ್ಟೇ ಅಲ್ಲ, ಹೊರನಾಡಿನ, ಹೊರ ನೂರೆಂಟು ದೇಶದಲ್ಲಿರುವ ಕನ್ನಡಿಗರು ಪತ್ರಿಕೆಯನ್ನು, ಅಂಕಣಗಳನ್ನು ಓದುತ್ತಾರೆ.
ಹಾಗಂತ ಓದಿದವರೆಲ್ಲ ಪ್ರತಿಕ್ರಿಯಿಸುವುದಿಲ್ಲ, ಪ್ರತಿಕ್ರಿಯಿಸಬೇಕೆಂದೇನೂ ಇಲ್ಲ. ಸುಮ್ಮನೆ ಓದಿ, ಪತ್ರಿಕೆ ಪಕ್ಕಕ್ಕಿಡುವಾಗ ‘ಇವತ್ತಿನ ಲೇಖನ ಚೆನ್ನಾಗಿದೆ’ ಎಂದರೆ ಬರಹಗಾರನಿಗೆ ಅದು ತಲುಪುತ್ತದೆ, ಅಷ್ಟೇ ಸಾಕಾಗುತ್ತದೆ. ಈಗ ಕೆಲವು ದಿನಗಳ ಹಿಂದೆ ಓದುಗರೊಬ್ಬರು “ನಾಲ್ಕು ವರ್ಷದಿಂದ ಅಂಕಣವನ್ನು ತಪ್ಪದೇ ಓದುತ್ತಿದ್ದೇನೆ, ಅದೆಷ್ಟೋ ಬಾರಿ ಇ-ಮೇಲ್ ಬರೆಯಬೇಕೆಂದಿದ್ದೆ, ಈಗ ಅದಕ್ಕೆ ಕಾಲ ಕೂಡಿ ಬಂದಿದೆ.." ಎಂದು ಬರೆದಿದ್ದರು.
ಇನ್ನೊಂದು ಓದುಗರ ವರ್ಗವಿದೆ. ಅವರಿಂದ ಇ-ಮೇಲ್ ಬಂದಿದೆ ಎಂದರೆ ನಾನು ಆ ವಾರದ ಲೇಖನದಲ್ಲಿ ಏನೋ ಒಂದು ‘ತಪ್ಪ’ನ್ನು ಮಾಡಿದ್ದೇನೆ ಎಂದೇ ಅರ್ಥ. ತಪ್ಪು ಮಾಡಿದಾಗ ಮಾತ್ರ ಇ-ಮೇಲ್ ಮಾಡುವವರು ಅವರು. ನನ್ನ ಮಟ್ಟಿಗೆ ಅವರ, ಅಂಥ ಪ್ರತಿಕ್ರಿಯೆ ಅತ್ಯಮೂಲ್ಯ. ಅದು ಅತ್ಯವಶ್ಯಕತೆ. ಕೆಲ ವರ್ಷದ ಹಿಂದೆ ‘ಜಪಾನ್ ಕರ್ನಾಟಕದ ದುಪ್ಪಟ್ಟು ದೊಡ್ಡದು’ ಎಂದು ಬರೆಯುವಾಗ ವಾಕ್ಯ ತದ್ವಿರುದ್ಧವಾಗಿತ್ತು.
ಇದನ್ನೂ ಓದಿ: Shishir Hegde Column: ಮರಗಳಿಗೇಕೆ ಹಾರ್ಟ್ ಅಟ್ಯಾಕ್ ಆಗುವುದಿಲ್ಲ ?
ಅದೊಂದು ’passing’ ವಾಕ್ಯವಾಗಿತ್ತು. ಆದರೆ ತಪ್ಪು ತಪ್ಪೇ. ಆ ದಿನ ಇಬ್ಬರು ಓದುಗರು ಇ-ಮೇಲ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು (ಝಾಡಿಸಿದ್ದರು- ಸರಿಯಾದ ಶಬ್ದ!). ಅದು ನನಗೆ ಎಂದೆಂದೂ ನೆನಪಿರುತ್ತದೆ ಮತ್ತು ಆ ರೀತಿ ಎರಡನ್ನೂ ಹೋಲಿಸಿ ವಿಷಯ ಬರೆಯುವ ಸಂದರ್ಭ ದಲ್ಲ ನೆನಪಾಗಿ ಎಚ್ಚರವಹಿಸುವಂತೆ ಮಾಡುತ್ತಿದೆ, ಇಂದಿಗೂ. ಇನ್ನೊಬ್ಬ ಓದುಗರಿದ್ದಾರೆ, ಅವರಿಂದ ಇ-ಮೇಲ್ ಬಂತೆಂದರೆ ಆ ದಿನ ನನ್ನ ಲೇಖನದಲ್ಲಿ ಇಂಗ್ಲಿಷ್ ಬಳಕೆ ಜಾಸ್ತಿಯಾಗಿದೆ, ಅಥವಾ ಕನ್ನಡ ಪರ್ಯಾಯ ಶಬ್ದ ಎಲ್ಲಾ ಒಂದು ಕಡೆ ಬಳಸಿಲ್ಲ ಎಂದೇ ಅರ್ಥ.
ಅವರು ಇ-ಮೇಲ್ ಮಾಡುವುದು ಆ ತಪ್ಪಿದ್ದಾಗ ಮಾತ್ರ. ತಪ್ಪು ಹೆಕ್ಕಿ ಹೇಳಲಿ, ಹೊಗಳಿ ಬೆನ್ನು ತಟ್ಟಲಿ- ಲೇಖನ ಓದಿ, ಸಮಯ ಕೊಟ್ಟು ಪ್ರತಿಕ್ರಿಯಿಸುವುದು ಸಣ್ಣ ವಿಷಯವಲ್ಲ. ಮದ್ದಳೆಗೆ ಸುತ್ತಿಗೆಯ ಪೆಟ್ಟು ಪೆಟ್ಟಲ್ಲ, ಶ್ರುತಿ ಸರಿಯಾಗಬೇಕೆಂದರೆ ಅದು ಆಗಾಗ ಬೀಳಬೇಕು. ಆದರೆ ಹಿಂದಿನ ವಾರ ಓದುಗರಾದ ಶ್ರೀಧರ್ ಅವರ ಪ್ರತಿಕ್ರಿಯೆ ಮಾತ್ರ ತೀರಾ ವಿಭಿನ್ನವಿತ್ತು. ಅದನ್ನು ಯಥಾವತ್ ನಿಮ್ಮ ಮುಂದಿಡುತ್ತಿದ್ದೇನೆ.
“ಶಿಶಿರ್ ನಮಸ್ತೆ, ಕಳೆದ ಎಂಟು ತಿಂಗಳಿಂದ ನಿಮ್ಮ ಒಂದೂ ಅಂಕಣವನ್ನು ಓದಿಲ್ಲ! ‘ವಿಶ್ವವಾಣಿ’ ಯನ್ನೇ ತೆರೆದಿಲ್ಲ. ಮೊಬೈಲ್‌ನಲ್ಲಿ ನೋಟಿಫಿಕೇಶನ್ ಬಂದರೂ, ಆಪ್ತ ಅಂಕಣಗಳನ್ನೇ ಓದಲಾರ ದಂತೆ ಯೂಟ್ಯೂಬ್ ನ ಆಕರ್ಷಣೆ. ಯೂಟ್ಯೂಬ್ ಇಡೀ ದಿನ ಆವರಿಸಿದೆ. ಯೂಟ್ಯೂಬ್ ನಲ್ಲಿ ಸಂದರ್ಶನಗಳು, ಹೊಸ ವಿಷಯಗಳು, ಬೇಸರವಾದರೆ ಅ ಶಾರ್ಟ್ಸ್ ನೋಡುತ್ತೇನೆ. ಅಲ್ಲಿ ಹೊಸ ಹೊಸ ಸರಣಿ ವಿಚಾರಗಳು ಬರುತ್ತಲೇ ಇವೆ.

ಮುಗಿಯುತ್ತಲೇ ಇಲ್ಲ. ಇವತ್ತಿನ ನಿಮ್ಮ ಅಂಕಣದ ನೋಟಿಫಿಕೇಶನ್ ಬಂದು, ಹೆಡ್‌ಲೈನ್ ಓದಿದೆ, ತಕ್ಷಣವೇ ನನ್ನ ಮುಖ ಕಿವುಚಿತು. ಏನೋ ಚಡಪಡಿಕೆ, ಒಂದು ರೀತಿ ಸಂಕಟ, ಅಪರಾಧಿ ಭಾವ, ಬೇಸರದ ಛಾಯೆ ನನ್ನ ಮೇಲೆ ಆವರಿಸಿತು. ಅಂಕಣಗಳನ್ನು ಓದದೆ ನಾನು ಕಳೆದು ಹೋಗಿದ್ದಾನೆ ಅನ್ನಿಸುತ್ತಿದೆ.
ಯೂಟ್ಯೂಬ್ ನನ್ನನ್ನು ಗಟ್ಟಿಯಾಗಿ ಆವರಿಸಿ ಪ್ರೀತಿಯ ಅಂಕಣಕಾರರಿಂದ ದೂರ ಮಾಡುತ್ತಿದೆ. ಯಾರಿಗೆ ಧಿಕ್ಕಾರ ಹೇಳೋದು ಗೊತ್ತಾಗುತ್ತಿಲ್ಲವಲ್ಲ ಸರ್". ಈ ಪತ್ರ ನನ್ನನ್ನು ಬಹುವಿಧದಲ್ಲಿ ಕಾಡಿತು. ಇದು ಶ್ರೀಧರ್ ಒಬ್ಬರದಷ್ಟೇ ಅನುಭವವಲ್ಲ. ಮಕ್ಕಳು ಇಡೀ ದಿನ ಮೊಬೈಲ್ ನೋಡು ತ್ತಾರೆ, ಹದಿಹರೆಯದವರು ಸೋಷಿಯಲ್ ಮೀಡಿಯಾದಲ್ಲಿಯೇ ಇರುತ್ತಾರೆ ಎಂದು ಹೇಳುತ್ತಲೇ ಇರುವಾಗ ವಯಸ್ಸಿನ ಮಿತಿಯಿಲ್ಲದಂತೆ ಆವರಿಸಿರುವುದು ಯೂಟ್ಯೂಬ್.
ನನಗಂತೂ ಯೂಟ್ಯೂಬ್‌ನ ಮೇಲೆ ಏನೆಂದರೆ ಏನೂ ತಕರಾರಿಲ್ಲ. ಯೂಟ್ಯೂಬ್ ಮನುಷ್ಯಕೃತ ವಂಡರ್‌ನಂದು. ಮನುಷ್ಯ ಜಗತ್ತಿನ ಅದ್ಭುತ ಅದು. ಅಲ್ಲಿ ಏನಿದೆ, ಏನಿಲ್ಲ? ಸುದ್ದಿ, ಹಾಸ್ಯ, ಕಥೆ, ಚಲನಚಿತ್ರಗಳು, ಡಾಕ್ಯುಮೆಂಟರಿ, ವಿಜ್ಞಾನ, ಧರ್ಮ, ಶಸ್ತ್ರ, ಇತಿಹಾಸದಿಂದ ಹಿಡಿದು “ಸ್ನೇಹಿತರೇ, ಮಂಗಳೂರು ಸ್ಟೈಲ್ ಬಂಗಡೆ ಮೀನಿನ ಸಾರು ಮಾಡುವುದು ಹೇಗೆ ಗೊತ್ತಾ?" ಎಂಬಲ್ಲಿಯವರೆಗೆ. ಈಗ ಸಮಸ್ತ ಮನುಕುಲದ ಜ್ಞಾನ ಇರುವುದು ಯಾವುದೇ ಲೈಬ್ರರಿಯಲ್ಲಿ ಅಥವಾ ಇನ್ನೆಲ್ಲೂ ಅಲ್ಲ.
ಎಲ್ಲವೂ ಇರುವುದು ಯೂಟ್ಯೂಬ್ ನಲ್ಲಿ. ಅಂತೆಯೇ ಪ್ರತಿ ದಿನದ ಬೆಳವಣಿಗೆಗಳೆಲ್ಲ ದಾಖಲಾಗು ತ್ತಿರುವುದು ಕೂಡ ಅದೇ ಯೂಟ್ಯೂಬ್‌ನಲ್ಲಿ. ದಿನಕ್ಕೆ ಸುಮಾರು ಏಳೂವರೆ ಲಕ್ಷ ಗಂಟೆಯಷ್ಟು ಪ್ರಮಾಣದ ವಿಡಿಯೋ ಯೂಟ್ಯೂಬ್‌ಗೆ ಅಪ್‌ಲೋಡ್ ಆಗುತ್ತದೆ. ಎಷ್ಟೆಂದರೆ ಒಂದು ದಿನ ಯೂಟ್ಯೂಬ್ ಸೇರುವ ಎಲ್ಲಾ ವಿಡಿಯೋವನ್ನು ಒಬ್ಬ ವ್ಯಕ್ತಿ ನೋಡಬೇಕೆಂದರೆ 30 ಸಾವಿರ ದಿನ ಬೇಕು!
ಮುಂದೊಂದು ದಿನ ಇತಿಹಾಸ ತಜ್ಞರು ಯಾವುದನ್ನೂ ಉತ್ಖನನ ಮಾಡಬೇಕೆಂದಿಲ್ಲ, ಯೂಟ್ಯೂ ಬ್ ಬಳಸುವ ಬುದ್ಧಿವಂತಿಕೆ ಇದ್ದರೆ ಸಾಕು. ಯೂಟ್ಯೂಬ್ ಅಥವಾ ಆ ರೀತಿಯ ಇಂಟರ್ ನೆಟ್ ವೇದಿಕೆಗಳು ಅಸಾಮಾನ್ಯ ಸಾಧನಗಳು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಅದರಿಂದ ಕಲಿಯ ಬಹುದು, ತಿಳಿಯಬಹುದು, ಅರಿವನ್ನು ಹೆಚ್ಚಿಸಿಕೊಳ್ಳಬಹುದು ಇತ್ಯಾದಿ.
ಪ್ರತಿಯೊಬ್ಬ ಮನುಷ್ಯನಿಗೂ ಜ್ಞಾನದೆಡೆಗೆ ಸಹಜ ಸೆಳೆತವಿರುತ್ತದೆ. ಆಸಕ್ತಿ ವಿಭಿನ್ನವಿರಬಹುದು. ಏನೋ ಒಂದು ಹೊಸತನ್ನು, ಅಚ್ಚರಿಯ ವಿಷಯವನ್ನು ತಿಳಿಯುವ ಆಕರ್ಷಣೆ ಮಾತ್ರ ಸಾಮಾನ್ಯ. ನಮಗೆ ನಗಲು ಹಾಸ್ಯ ಬೇಕು, ಕಂಪಿಸಲು ಶೋಕ ಬೇಕು, ಅರಿವಿಗೆ ಸುದ್ದಿ ಬೇಕು ಹೀಗೆ. ಜ್ಞಾನ ಮತ್ತು ರಂಜನೆ ಎಲ್ಲರ ಅವಶ್ಯಕತೆ. ಆದರೆ ನಾವು ನಮ್ಮ ದಿನದ ಎಷ್ಟು ಪಾಲು ಸಮಯವನ್ನು ನಮ್ಮ ಈ ಅವಶ್ಯಕತೆಗೋಸ್ಕರ ನೀಡುತ್ತಿದ್ದೇವೆ? ಅದು ಇಲ್ಲಿನ ಪ್ರಶ್ನೆ.
ನಮಗೆ ಅಷ್ಟೆ ತಿಳಿಯುವ, ಸ್ವರಂಜನೆಯ ಅವಶ್ಯಕತೆಯಿದೆಯೇ? ನಮ್ಮ ಪಕ್ಕದೂರಿನಲ್ಲಿ ಒಬ್ಬರಿದ್ದರು. ಅವರಿಗೆ ಯಕ್ಷಗಾನದ ಹುಚ್ಚು. ಹುಚ್ಚು ಎಂದರೆ ಅಷ್ಟಿಷ್ಟಲ್ಲ. ಯಕ್ಷಗಾನಕ್ಕೆ ಹೋಗುವುದು, ಅಲ್ಲಿ ಹುರಿದ ಶೇಂಗಾ ತಿನ್ನುತ್ತಾ ಯಕ್ಷಗಾನ ನೋಡುವುದು. ಕುಡಿತವಾಗಲಿ, ಇನ್ಯಾವುದೇ ದುಶ್ಚಟವಿರಲಿಲ್ಲ. ಇದೊಂದೇ ರಂಜನೆಯ ಹುಚ್ಚಿನಿಂದಾಗಿ ಮನೆ ಮಠ ಮಾರಿದ್ದ ರಿಂದ ಅವರ ಹೆಸರೇ ‘ಲುಕ್ಸಾನ್ ಭಾಗವತ’ ಎಂದಾಗಿ ಹೋಯ್ತು!
ನಮಗೆ ಎಷ್ಟು ಮನರಂಜನೆ ಬೇಕು? ಅದನ್ನು ನಿರ್ಧರಿಸುತ್ತಿರುವವರು ಯಾರು? ಅದು ನಮ್ಮದೇ ಕೈಯಲ್ಲಿದೆಯೋ ಅಥವಾ ಕೈಮೀರಿ ಹೋಗಿದೆಯೋ? ಅದು ಮೂಲ ಪ್ರಶ್ನೆ. ಯೂಟ್ಯೂಬ್ ಒಂದು ಚಟವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ? ಬಹಳ ಸರಳ.
ಈಗಾಗಲೇ ಬೇರಿನ್ನೊಂದು ಚಟವಿದೆ ಎಂದರೆ ಅದಕ್ಕೆ ಹೋಲಿಸಿಕೊಂಡರೆ ನೇರಾನೇರ ಹೋಲಿಕೆ ಕಾಣಿಸಿಬಿಡುತ್ತದೆ. ಇಲ್ಲದಿದ್ದರೆ ಈ ಪ್ರಶ್ನೆಗಳನ್ನು ಕೇಳಿಕೊಂಡರೂ ಆದೀತು. ನೀವು ಒಂದು ವಿಡಿಯೋ, ಒಂದು ವಿಷಯ ನೋಡಲು ಹೋಗಿ ಒಂದರ ಹಿಂದೆ ಇನ್ನೊಂದು ನೋಡುತ್ತಿದ್ದರೆ; ವೃತ್ತಿ, ಶಾಲೆ, ಮನೆಗೆಲಸ, ಮಾತುಕತೆಯ ಮಧ್ಯೆ ನೆನಪಾಗಿ ಯೂಟ್ಯೂಬ್ ತೆರೆಯುತ್ತಿದೆ ಎಂದರೆ, ಯೂಟ್ಯೂಬ್‌ನಲ್ಲಿ ಸಮಯ ಕಳೆದು ಹೊರಬರುವಾಗ ಮೂಡ್ ಸ್ವಿಂಗ್ (ಭಾವನೆಗಳ ಏರಿಳಿತ) ಆಗುತ್ತಿದೆ ಎಂದರೆ; ಬೇಸರ ಬಂದಾಗಲೆಲ್ಲ, ನಾಲ್ಕು ಜನರ ಮಧ್ಯೆ ಇರುವಾಗ ಕೂಡ ನಿಮ್ಮ ಮೊಬೈಲ್‌ನಲ್ಲಿ ಯೂಟ್ಯೂಬ್ ವಿನಾಕಾರಣ, ಸುಮ್ಮನೆ ಒಮ್ಮೆ ಓಪನ್ ಆಗುತ್ತಿದೆಯೆಂದರೆ; ಯೂಟ್ಯೂಬ್ ನೋಡುವುದು ಹೆಚ್ಚಾಗುತ್ತಿದೆ, ಅದೇ ಸಮಯದಲ್ಲಿ ನಿಮ್ಮಿಷ್ಟದ ಯಾವುದೋ ಒಂದರ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎಂದರೆ; ಅಯ್ಯೋ ಇವತ್ತು ಇಡೀ ದಿನ ಒಮ್ಮೆಯೂ ಯೂಟ್ಯೂಬ್ ತೆರೆದಿಲ್ಲ ಎಂದು ನೆನಪಾಗುತ್ತಿದೆಯೆಂದರೆ; ನೀವು ನಿನ್ನೆ ನೋಡಿದ, ಮೊನ್ನೆ ನೋಡಿದ ವಿಷಯ ಏನೆಂದು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ- ಇವೆಲ್ಲ ಯೂಟ್ಯೂಬ್ ಚಟದ ಗುಣಲಕ್ಷಣ.
ಯಾವುದು ಸಾಧನವೆಂದು ಬಳಸಲ್ಪಡಬೇಕೋ ಅದರ ಸಾಧನ ನೀವಾಗಿದ್ದೀರಿ ಎಂಬುದರ ಸಂಕೇತ. ಇದನ್ನು ಗುರುತಿಸುವುದೇ ಕಷ್ಟ. ಏಕೆಂದರೆ ಎಲ್ಲ ಚಟಗಳಂತೆ ಮನಸ್ಸು ಇದನ್ನು ಒಂದು ಅವಶ್ಯಕತೆ ಎಂದೇ ಬಿಂಬಿಸುತ್ತಿರುತ್ತದೆ. ಒಂದಿಷ್ಟು ರಿಲ್ಯಾಕ್ಸ್ ಆಗಲು, ಮೋಜಿಗೆ ಎಣ್ಣೆ, ಸಿಗರೇಟು ಇರಲಿ, ಪರವಾಗಿಲ್ಲ ಎಂದೆನಿಸುವಂತೆ. ಚಟ ಯಾವತ್ತೂ ಹಾಗೆಯೇ ಅಲ್ಲವೇ? ಅದೊಂದು ಹಂತದವರೆಗೆ, ಎಲ್ಲವೂ ನಮ್ಮದೇ ನಿಯಂತ್ರಣದಲ್ಲಿದೆ ಎಂದೇ ಅನಿಸುತ್ತಿರುತ್ತದೆ.
ಸೆಳೆತವೊಂದು ಚಟವಾದ ಮೇಲೂ ಈ ಅನಿಸಿಕೆ ಹಾಗೆಯೇ ಮುಂದುವರಿಯುತ್ತದೆ. ದಾಸ್ಯ ಕ್ಕೊಳಗಾದ ಮನಸ್ಸು ಕೂಡ ಚಟದ ಆಣತಿಯಂತೆ ವಿಚಾರಮಾಡಲು ಶುರುಮಾಡಿ ಬಿಡುತ್ತದೆ. ಇದು ಅವಶ್ಯಕತೆ, ಮನುಷ್ಯ ಎಂದ ಮೇಲೆ ಯಾವುದಾದರೊಂದು ಚಟವಿರಬೇಕು ಇತ್ಯಾದಿ ಸಮಜಾಯಿಷಿಯನ್ನು ನಮ್ಮದೇ ಮನಸ್ಸು ಕೊಡಲು ಶುರುಮಾಡುತ್ತದೆ.
ನಿತ್ಯ ಕುಡಿಯುವವನನ್ನು, ಸಿಗರೇಟ್ ಸೇದುವವನನ್ನು ಯಾವತ್ತೇ ಕೇಳಿ, “ನನಗೆ ಇದು ಚಟವಾಗಿಲ್ಲ, ಈ ಕ್ಷಣದಿಂದಲೇ ಇದೆಲ್ಲವನ್ನೂ ಬಿಟ್ಟು ಬಿಡಬ" ಎಂದೇ ಹೇಳುವುದು. ಯಾರೂ ತಾನು ಇಂಥದ್ದೊಂದರ ಸುಳಿಯಲ್ಲಿ ಸಿಲುಕಿದ್ದೇನೆ ಎನ್ನುವುದನ್ನು ಏಕಾಂತದಲ್ಲೂ ಒಪ್ಪುವುದಿಲ್ಲ, ಸಾವಿರಾರು ವರ್ಷಗಳ ಹಿಂದೆ ನಿರಂತರ ಜಾಗೃತಿ ಮನುಷ್ಯನ ಅವಶ್ಯಕತೆಯಾಗಿತ್ತು. ಬಾನಲ್ಲಿ ಧೂಮಕೇತು ಕಂಡಾಗ, ಪಕ್ಕದ ಕಾಡಿನ ತರಗೆಲೆ ಸರಿದಾಗ- ಎಲ್ಲ ಸಮಯದಲ್ಲಿ hypervigilance (ಅತಿಜಾಗೃತಿ) ಅವಶ್ಯಕತೆಯಾಗಿತ್ತು.
ಸಾವು ಬದುಕು ನಿರ್ಧಾರವಾಗಲು ಚಿಕ್ಕ ಅಜಾಗರೂಕತೆ ಸಾಕಿತ್ತು. ಈಗ ಆ ಅತಿಜಾಗೃತೆಯ ವ್ಯವಸ್ಥೆಯನ್ನು ಕೈಯಲ್ಲಿರುವ ಸ್ಕ್ರೀನ್ ಹೈಜಾಕ್ ಮಾಡಿದೆ. ನೀವು ಈಗೀಗ ಡೋಪಮೈನ್ ಬಗ್ಗೆ ಎಲ್ಲರೂ ಹೇಳುವುದನ್ನು ಕೇಳಿರಬಹುದು. ಈ ವಿಷವರ್ತುಲಕ್ಕೆ ‘ಡೋಪಮೈನ್’ ಕಾರಣ ಹೌದು. ಆದರೆ ಡೋಪಮೈನ್ ಬಗ್ಗೆ ಒಂದು ವಿಷಯ ಬಹಳ ಜನರಿಗೆ ತಿಳಿದಿಲ್ಲ.
ಅದೇನೆಂದರೆ ಡೋಪಮೈನ್ ಕೆಲಸ ಸಂತೋಷವನ್ನು ಕೊಡುವುದಲ್ಲ, ಬದಲಿಗೆ ಇನ್ನಷ್ಟು ನಿರೀಕ್ಷೆ ಯನ್ನು ಹುಟ್ಟಿಸುವುದು. ಆಕಳು ಹುಲ್ಲು ಮೇಯುವುದನ್ನು, ಮಂಗಗಳು ತೋಟಕ್ಕೆ ದಾಳಿ ಮಾಡುವುದರ ರೀತಿ ನಿಮಗೆ ತಿಳಿದಿರುತ್ತದೆ. ಆಕಳು ಒಂದೇ ಜಾಗದಲ್ಲಿ ಹುಲ್ಲನ್ನು ತಿನ್ನುತ್ತಿದ್ದರೆ ಮಣ್ಣು ಬಾಯಿಗೆ ಹತ್ತುತ್ತದೆ. ಅಂತೆಯೇ ಮಂಗಗಳು ಒಂದು ಮರದ ಹಣ್ಣು ತಿಂದಾಗುವ ಮೊದಲೇ ಇನ್ನೊಂದಕ್ಕೆ ಹಾರುತ್ತವೆ. ಪ್ರತಿಯೊಂದು ಪ್ರಾಣಿಯೂ ಈ ಗುಣವನ್ನು ಹೊಂದಿವೆ. ನಮ್ಮಲ್ಲಿಯೂ ಆ ಗುಣವಿದೆ, ಅದು ರೂಪಾಂತರಗೊಂಡು ನಮ್ಮ ಕೆಲವು ಅಭ್ಯಾಸ ಗಳಿಗೆ ಕಾರಣವಾಗಿದೆ. ಅದೇ ಗುಣ ಒಂದು ವಿಡಿಯೋದಿಂದ ಇನ್ನೊಂದಕ್ಕೆ ಸ್ವೈಪ್ ಮಾಡುವಾಗಲೂ ಸುಪ್ತವಾಗಿ ನಮ್ಮನ್ನು ನಿರ್ದೇಶಿಸುತ್ತದೆ.
ನಾನಿಲ್ಲಿ ಹೇಳುತ್ತಿರುವುದು ಯೂಟ್ಯೂಬ್ ಒಂದೇ ಅಲ್ಲ, ನಾವು ಸ್ಕ್ರೀನ್‌ನಲ್ಲಿ ವಿಡಿಯೋ ನೋಡುವ ಎಲ್ಲಾ ವೇದಿಕೆಗಳ ಬಗ್ಗೆ. ಯೂಟ್ಯೂಬ್ ಅಲ್ಗಾರಿಥಂ- ಯಾವ ವಿಡಿಯೋ ನಿಮಗೆ ತೆರೆದಾಕ್ಷಣ ಕಾಣಿಸಬೇಕು ಎನ್ನುವುದನ್ನು ಕೃತಕ ಬುದ್ಧಿಮತ್ತೆ ನಿರ್ಧರಿಸುತ್ತದೆ. ನಿಮ್ಮ ಇಷ್ಟ, ಬಳಕೆಗೆ ಅನುಗುಣ ವಾಗಿ. ಹಾಗಾಗಿಯೇ ಯೂಟ್ಯೂಬ್ ತೆರೆದಾಕ್ಷಣ ಪರದೆಯ ಮೇಲೆ ಕಾಣುವ ಪ್ರತಿ ಯೊಂದೂ ವಿಶೇಷ ಎಂದೆನಿಸುವುದು. ಕಂಡzಲ್ಲ ‘ಓಹ್ ಇದನ್ನು ನೋಡಬೇಕಿತ್ತಲ್ಲ’ ಎಂದೆನಿಸುವುದು, ಮಂಗ ಮರದಿಂದ ಮರಕ್ಕೆ ಹಾರಿದಂತೆ ಒಂದು ವಿಡಿಯೋದಿಂದ ಇನ್ನೊಂದಕ್ಕೆ ಹಾರುವುದು. ಈ ಚಟದ ಬಗ್ಗೆ ಇಷ್ಟು ವಿವರ ಸಾಕು. ಯಾವುದೇ ಇರಲಿ, ಇಂಥದ್ದೊಂದು ‘ಚಟವಾಗಿದೆಯೇ?’ ಎಂಬ ಪ್ರಶ್ನೆ ಮೂಡಿದೆ ಎಂದರೆ ಅನುಮಾನವೇ ಬೇಡ, ಅದು ಚಟವಾಗಿದೆ, ಅಥವಾ ಆ ದಾರಿಯಲ್ಲಿದೆ ಎಂದೇ ಅರ್ಥ.
ಪರಿಹಾರವೇನು? ಯೂಟ್ಯೂಬ್ ಅಪ್ಲಿಕೇಶನ್ ಮೊಬೈಲ್‌ನಲ್ಲಿ ಮೊದಲ ಸ್ಕ್ರೀನ್ ನಿಂದ ತೆಗೆಯ ಬಹುದು, ಅಥವಾ ಸಂಪೂರ್ಣ ಡಿಲೀಟ್ ಮಾಡಬಹದು ಇತ್ಯಾದಿ. ಆದರೆ ಹಾಗೆ ಪೂರ್ಣ ವಿಮುಖ ವಾದರೆ ಇಂಥದ್ದೊಂದು ಅಭೂತಪೂರ್ವ ಸಲಕರಣೆಯನ್ನು ಬಳಸದಂತಾಗುತ್ತದೆ. ಅದು ಇನ್ನೊಂದು ವಿಪರೀತ.
ಹಾಗಾದರೆ ಬೇರಿನ್ನೇನು ಪರಿಹಾರ? ನಿಮಗಿದೊಂದು ಸಮಸ್ಯೆ ಎಂದೆನಿಸಿದ್ದಲ್ಲಿ- ಪ್ರತಿ ಬಾರಿ ಯೂಟ್ಯೂಬ್ ತೆರೆದಾಗಲೂ ‘ಏಕೆ ತೆರೆದದ್ದು?’ ಎಂದು ಒಂದು ಕ್ಷಣ ನಿಮ್ಮನ್ನೇ ಕೇಳಿಕೊಳ್ಳಿ. ಬೇಸರ ಕಳೆಯಲು, ಸುದ್ದಿ ನೋಡಲು, ಏನೋ ಒಂದು ತಿಳಿಯಲು ಹೀಗೆ ಏನೋ ಒಂದು ಉದ್ದೇಶ ವಿರುತ್ತದೆ. ಯೂಟ್ಯೂಬ್ ನೋಡದಿದ್ದರೆ ಹೊರ ಜಗತ್ತಿನ ಸಂಬಂಧವೇ ತಪ್ಪಿ ಹೋಗುತ್ತದೆ ಎನ್ನುವ ಭಾವನೆಯೇ ಕ್ರಿಯೆಗೆ ಕಾರಣವಾಗಿದೆ ಎಂದರೆ ಅದು ಸಮಸ್ಯೆಯಾಗಿದೆ ಎಂದೇ ಅರ್ಥ.
ಯಾವ ಒಳಗಿನ ವಿಚಾರ, ಭಾವನೆ ನಮ್ಮಿಂದ ಯೂಟ್ಯೂಬ್ ತೆರೆಸುತ್ತದೆ ಇಂದು ಪ್ರತಿ ಬಾರಿ ಚಿಕ್ಕದಾಗಿ ಗುರುತಿಸುವುದು ಮೊದಲ ಹೆಜ್ಜೆ. ಎರಡನೆಯದು- ಪ್ರಜ್ಞೆ. ನಮ್ಮ ನಡೆ ಪ್ರಜ್ಞೆಪೂರ್ವಕ ವಾದದ್ದೋ ಅಥವಾ ಅಲ್ಲವೋ ಎಂದು ಗುರುತಿಸುವುದು. ಮೊಬೈಲ್ ಅನ್ ಲಾಕ್ ಮಾಡಿ, ಏನು ಮಾಡಲಿ ಎಂಬ ಪ್ರಶ್ನೆ ಎದುರಾದ ಆ ಕ್ಷಣಿಕ ಸಮಯದಲ್ಲಿ ನಾವೇನು ಮಾಡು ತ್ತಿದ್ದೇವೆ ಎಂಬ ಪ್ರಜ್ಞೆ.
ಅದೆಲ್ಲದಕ್ಕಿಂತ ಹೆಚ್ಚಾಗಿ ಈ ಚಟದಿಂದಾಗಿ ನಾವು ಏನೇನನ್ನು ತಪ್ಪಿಸಿಕೊಳ್ಳುತ್ತಿದ್ದೇವೆ ಎಂದು ಸಮಾಧಾನದಲ್ಲಿ ಕೇಳಿಕೊಳ್ಳುವುದು. ಕುಟುಂಬದವರ ಜತೆ ಮಾತನಾಡುವ, ಸಮಯ ಕಳೆಯು ವುವ, ಖುಷಿ ಕೊಡುವ ಓದು ಅಥವಾ ಸಂಗೀತಕ್ಕೆ ಒಡ್ಡಿಕೊಳ್ಳುವ ಬದಲಿಗೆ, ಕೂತಲ್ಲಿಂದ ಎದ್ದು ಏನೋ ಕೆಲಸ ಮಾಡುವುದಕ್ಕಿಂತ ಯೂಟ್ಯೂಬ್ ಹೆಚ್ಚು ಆಪ್ತವಾಗುತ್ತಿದೆ, ಪ್ರಾಶಸ್ತ್ಯ ಪಡೆಯುತ್ತಿದೆ ಎಂದರೆ ಯಾರ ಅಣತಿಯಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ.
ಒಂದನ್ನು ಪಡೆಯಬೇಕೆಂದರೆ ಇನ್ನೊಂದನ್ನು ಕಳೆಯಬೇಕು ಎನ್ನುವುದು ಪ್ರಕೃತಿ. ಪಡೆಯುತ್ತಿರು ವಾಗ ಕಳೆಯುತ್ತಿರುವುದರ ಪ್ರಜ್ಞೆ ಇರಬೇಕು. ಜ್ಞಾನ ಮತ್ತು ರಂಜನೆ ಎರಡೂ ಆಹಾರದಂತೆ, ಊಟ ಮಾಡುವವನಿಗೆ ನಮ್ಮ ಹೊಟ್ಟೆಯ ಗಾತ್ರ, ಪಚನ ಶಕ್ತಿ, ಯಾವ ಆಹಾರ ಒಗ್ಗುತ್ತದೆ, ಯಾವುದು ಅಲರ್ಜಿ, ಎಷ್ಟು ಬೇಕು, ಯಾವಾಗ ಬೇಕು ಇದೆಲ್ಲದರ ಪ್ರeಯಿಲ್ಲದಿದ್ದರೆ ಅಜೀರ್ಣ, ವ್ಯಾಧಿ.
ಇದೆಲ್ಲ ನಮಗೆ ಗೊತ್ತು, ಆದರೆ ನಿಯಂತ್ರಣ ಕಷ್ಟ, ಅಂದುಕೊಂಡಂತೆ ನಡೆಯಲು ಸಾಧ್ಯ ವಾಗುತ್ತಿಲ್ಲ ಎಂದೆನಿಸಿದರೆ ಅತ್ಯಂತ ಸುಲಭದ ಮಾರ್ಗವಿದೆ, ಪರಿಹಾರವಿದೆ. ಇದು ಯೂಟ್ಯೂಬ್‌ಗೆ ಅಥವಾ ಸೋಷಿಯಲ್ ಮೀಡಿಯಾ ಬಳಕೆಯ ಮಿತಿ ನಿಯಂತ್ರಣಕ್ಕೆ ಮಾತ್ರವಲ್ಲ. ನೀವು ಎಲ್ಲಿಯೇ ಇರಿ, ಅದು ದಿನದ ಯಾವ ಗಳಿಗೆಯೇ ಆಗಿರಲಿ, ನೀವು ಯಾವ ಹವ್ಯಾಸ, ಚಟ, ಕೆಲಸದಲ್ಲಿಯೇ ತೊಡಗಿಕೊಂಡಿರಲಿ, ಯಾರೊಂದಿಗೇ ಹರಟುತ್ತಿರಿ, ಏನೇ ಮಾಡುತ್ತಿರಿ. ಈ ಎರಡು ಪ್ರಶ್ನೆಯನ್ನು ಆಗಾಗ ಕೇಳಿಕೊಳ್ಳುತ್ತಿರಬೇಕು.
ಮೊದಲನೆಯದು- ‘ಈಗ ನಾನು ಏನು ಮಾಡುತ್ತಿದ್ದೇನೆ?’. ಈ ಪ್ರಶ್ನೆ ಕೇಳುತ್ತಿದ್ದಂತೆ ನಮ್ಮ ಮನಸ್ಸು ಭೂತ, ಭವಿಷ್ಯತ್ತಿನಿಂದ ವರ್ತಮಾನಕ್ಕೆ ತಕ್ಷಣ ಬಂದು ಮುಟ್ಟುತ್ತದೆ. ಆಗ ಕೇಳಬೇಕಾದ ಎರಡನೆಯ ಪ್ರಶ್ನೆ- ‘ನಾನು ಈಗ ಏನು ಮಾಡುತ್ತಿರಬೇಕಿತ್ತು?’. ಈ ಪ್ರಶ್ನೆಗೆ ಉತ್ತರ ‘ಏನು ಮಾಡುತ್ತಿದ್ದೇವೆಯೋ ಅದನ್ನೇ ಮಾಡಬೇಕಿತ್ತು’ ಎಂದಾದರೆ ಸರಿ. ಅದನ್ನೇ ಧಾರಾಳವಾಗಿ ಮುಂದುವರಿಸಬಹುದು. ಆ ಪ್ರಶ್ನೆಗೆ ‘ಬೇರಿನ್ನೇನೋ ಮಾಡಬೇಕಿತ್ತು’ ಎಂಬುದು ನಮ್ಮ ಉತ್ತರ ವಾದರೆ ಅದನ್ನು ತಕ್ಷಣ ನಿಲ್ಲಿಸಿ ‘ಏನು ಮಾಡಬೇಕಿತ್ತೋ ಅದನ್ನೇ ಮಾಡುವುದು’.
ಎರಡನೇ ಪ್ರಶ್ನೆ ಕೇಳಿಕೊಳ್ಳುವಾಗ ಒಂದು ಷರತ್ತಿದೆ. ಆಗ ನಮ್ಮೊಡನೆ ನಾವೇ ವಾದಕ್ಕಿಳಿಯು ವಂತಿಲ್ಲ, ನಮ್ಮ ಉತ್ತರವನ್ನು ಮರುಪ್ರಶ್ನಿಸುವಂತಿಲ್ಲ. ಇದನ್ನೇ ಮಾಡಬೇಕಿತ್ತೋ ಅಥವಾ ಬೇರಿನ್ನೇನನ್ನೋ? ಪ್ರಶ್ನೆ ಅಷ್ಟೆ. ‘ಹೌದು’ ಅಥವಾ ‘ಅಲ್ಲ’ ಎಂಬುದಷ್ಟೇ ಉತ್ತರ. ಹೌದಾದರೆ ಮುಂದುವರಿಸುವುದು, ಅಲ್ಲವಾದರೆ ನಿಲ್ಲಿಸಿ ಏನು ಮಾಡಬೇಕಿತ್ತೋ ಅದನ್ನು ಮಾಡುವುದು. ಅಷ್ಟಕ್ಕೂ ನಮಗೆ ಯಾವುದು ಅಮೂಲ್ಯ ಎಂದು ನಾವೇ ನಿರ್ಧರಿಸಬೇಕೆ ವಿನಾ ಇನ್ನೊಬ್ಬರಲ್ಲ, ಅಥವಾ ಕೃತಕ ಬುದ್ಧಿಮತ್ತೆಯಲ್ಲ. ಬದುಕು, ಸಮಯ ನಮ್ಮ ಹಿಡಿತದಲ್ಲಿದ್ದರೆ ಮಾತ್ರ ಖುಷಿಯ ಜತೆಗೆ ನೆಮ್ಮದಿ ಮತ್ತು ತೃಪ್ತಿಯ ಅನುಭವಾಗುವುದು. ಚಿಯರ್ಸ್...