ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಕ್ತಿಭಾವ ಇಲ್ಲದ ನಾಮಸ್ಮರಣೆ ಗಿಳಿಪಾಠದಂತೆ...

ಗುರುಗಳು ಹೀಗೆ ಪ್ರತಿದಿನ ಮಾತನಾಡುತ್ತಿದ್ದಂತೆ, ಒಂದು ಅದ್ಭುತ ಬದಲಾವಣೆ ಸಂಭವಿಸಿತು. ಗಿಳಿಯು ಯಾಂತ್ರಿಕವಾಗಿ ಕಿರುಚುವುದನ್ನು ನಿಲ್ಲಿಸಿತು. ಅದರ ಸ್ವರ ಮೃದುವಾಯಿತು. ಅದು ಕೇಳಲು ಆರಂಭಿಸಿತು. ಅದರ ಧ್ವನಿಯಲ್ಲಿ ಭಾವನೆಗಳು ಮೂಡಲಾರಂಭಿಸಿದವು. ಒಂದು ದಿನ ಗಿಳಿಯು ‘ಕೃಷ್ಣ’ ಎಂದು ಜಪಿಸಿದಾಗ ಅದರ ಧ್ವನಿ ಭಾವದಿಂದ ನಡುಗಿತು.

Roopa Gururaj Column: ಭಕ್ತಿಭಾವ ಇಲ್ಲದ ನಾಮಸ್ಮರಣೆ ಗಿಳಿಪಾಠದಂತೆ...

-

ಒಂದೊಳ್ಳೆ ಮಾತು

ಅನೇಕ ಜಾತಿಯ ಹೂವು-ಹಣ್ಣುಗಳಿಂದ ತುಂಬಿದ ಮರಗಳು, ಮಂತ್ರಗಳ ಉಚ್ಚಾರದಿಂದ ಜೀವಂತ ವಾಗಿದ್ದ ಒಂದು ದಟ್ಟ ಅರಣ್ಯದಲ್ಲಿ ಹಸಿರೆಲೆ ಬಣ್ಣದ, ಅಪರಿಮಿತ ಕಲಿಕಾಶಕ್ತಿಯ ಗಿಳಿಯೊಂದು ವಾಸಿಸುತ್ತಿತ್ತು. ಅದು ಸಾಮಾನ್ಯ ಗಿಳಿಯಲ್ಲ, ಸನ್ಯಾಸಿಗಳು ಜಪಿಸುವ ‘ರಾಮ ರಾಮ, ಕೃಷ್ಣ ಕೃಷ್ಣ’ ಎಂಬ ಮಂತ್ರಗಳನ್ನು ಕೇಳಿ ಬೆಳೆದಿತ್ತು. ಆ ಗಿಳಿ ಈ ಪವಿತ್ರ ನಾಮಗಳನ್ನು ಪುನರಾವರ್ತನೆ ಮಾಡುತ್ತಿದ್ದರೂ, ಅದರ ಜಪವು ಮಕ್ಕಳ ಬಾಯಿಪಾಠದಂತೆ ಭಾವವಿಲ್ಲದೆ ಕೇಳಿಸುತ್ತಿತ್ತು.

ಅದೇ ಅರಣ್ಯದ ಒಂದು ಸುಂದರ ಆಶ್ರಮದಲ್ಲಿ ದಯಾಳುವಾದ ಒಬ್ಬ ಗುರು ವಾಸಿಸುತ್ತಿದ್ದರು. ಆ ಆಶ್ರಮದಲ್ಲಿ ಒಂದು ತುಳಸೀ ಗಿಡ, ಜೀರ್ಣವಾದ ಜಪಮಾಲೆ ಮತ್ತು ಭಗವಂತನ ಮೇಲೆ ಅಪಾರ ಪ್ರೀತಿ ತುಂಬಿದ ಗುರುಗಳ ಹೃದಯ ಮಾತ್ರ ಇದ್ದದ್ದು.

ಒಂದು ದಿನ ಆ ಗಿಳಿ ‘ಕೃಷ್ಣ ಕೃಷ್ಣ’ ಎಂದು ಸುಂದರವಾಗಿ, ಆದರೆ ಯಾಂತ್ರಿಕವಾಗಿ ಜಪಿಸುವು ದನ್ನು ಆಶ್ರಮದಲ್ಲಿ ವಿರಮಿಸುತ್ತಿದ್ದ ಗುರುಗಳು ಗಮನಿಸಿ, ‘ಈ ಗಿಳಿಯು ಭಗವಂತನ ನಾಮ ಜಪಿಸುತ್ತಿದೆ, ಆದರೆ ಅದರ ಅರ್ಥವನ್ನು ಅರಿಯದೆ ಯಾಂತ್ರಿಕವಾಗಿ ಕಿರುಚುತ್ತಿದೆ.

ಇದನ್ನೂ ಓದಿ: Roopa Gururaj Column: ನಿಜವಾದ ಭಕ್ತಿ ಇರುವಲ್ಲಿದೆ ಭಗವಂತನ ಸಾನಿಧ್ಯ

ಅಕಸ್ಮಾತ್ ಈ ಗಿಣಿ ಈಗಲೇ ಸತ್ತರೂ, ಈ ಜಪದಿಂದ ಅದಕ್ಕಾಗುವ ಉಪಯೋಗವೇನು?’ ಎಂದು ಚಿಂತನೆ ನಡೆಸಿದರು. ಅವರು ಗಿಳಿಗೆ ಸಹಾಯ ಮಾಡಲು ತೀರ್ಮಾನಿಸಿದರು. ಗುರುಗಳು ಪ್ರತಿದಿನ ಗಿಳಿಯ ಬಳಿಗೆ ಹೋಗಿ ಮೃದುವಾಗಿ ಮಾತನಾಡಲು ಪ್ರಾರಂಭಿಸಿದರು- “ಸಖೇ, ‘ಕೃಷ್ಣ’ ಎಂದು ನೀನು ಹೇಳುವಾಗ, ಆ ಹೆಸರು ಯಾರದ್ದು ಎಂದು ತಿಳಿದಿದೆಯಾ? ಅವರು ವೃಂದಾವನದ ನೀಲವರ್ಣದ ಗೋಪಾಲರು, ರಾಧೆಯ ಪ್ರಿಯರು, ಸಕಲ ಜಗತ್ತಿನ ನಾಥರು. ನೀನು ಉಚ್ಚರಿಸುವ ನಾಮದ ಸ್ವರೂಪವೇ ಅವರು".

ಗುರುಗಳು ಹೀಗೆ ಪ್ರತಿದಿನ ಮಾತನಾಡುತ್ತಿದ್ದಂತೆ, ಒಂದು ಅದ್ಭುತ ಬದಲಾವಣೆ ಸಂಭವಿಸಿತು. ಗಿಳಿಯು ಯಾಂತ್ರಿಕವಾಗಿ ಕಿರುಚುವುದನ್ನು ನಿಲ್ಲಿಸಿತು. ಅದರ ಸ್ವರ ಮೃದುವಾಯಿತು. ಅದು ಕೇಳಲು ಆರಂಭಿಸಿತು. ಅದರ ಧ್ವನಿಯಲ್ಲಿ ಭಾವನೆಗಳು ಮೂಡಲಾರಂಭಿಸಿದವು. ಒಂದು ದಿನ ಗಿಳಿಯು ‘ಕೃಷ್ಣ’ ಎಂದು ಜಪಿಸಿದಾಗ ಅದರ ಧ್ವನಿ ಭಾವದಿಂದ ನಡುಗಿತು.

ಆಗ ಗುರುಗಳ ಮೊಗದಲ್ಲಿ ಮಂದಹಾಸ ಮೂಡಿ, “ಈಗ ನೀನು ಬಾಯಿಯಿಂದಲ್ಲ, ಹೃದಯದಿಂದ ಜಪಿಸುತ್ತಿರುವೆ" ಎಂದು ಪ್ರೀತಿಯಿಂದ ಗಿಳಿಗೆ ಹೇಳಿದರು. ದಿನಗಳು ಕಳೆದಂತೆ ಗಿಳಿಯು ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡತೊಡಗಿತು, ಅಷ್ಟರ ಮಟ್ಟಿಗೆ ಪ್ರೀತಿಯನ್ನು ಬೆಳೆಸಿ ಕೊಂಡಿತು. ಅದು ಕಣ್ಣು ಮುಚ್ಚಿ, ಕೃಷ್ಣನ ಸುಂದರ ನೀಲವರ್ಣದ ಸ್ವರೂಪವನ್ನು ನೆನೆಯುತ್ತಾ ಅವನ ನಾಮವನ್ನು ಜಪಿಸುತ್ತಿತ್ತು.

ಭಗವಂತನನ್ನು ಮನಸ್ಸಿನಲ್ಲಿ ನೆನೆಯುತ್ತಾ ಭಕ್ತಿಯಿಂದ ಒಂದೇ ಒಂದು ಶುದ್ಧ-ನಾಮ ಉಚ್ಚಾರಣೆ ಮಾಡಿದರೂ ಅದು ಜೀವಿಗೆ ಮೋಕ್ಷ ನೀಡುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ನಾವು ಉಚ್ಚರಿಸು ವುದು ಬರೀ ಶಬ್ದವಲ್ಲ, ಶಬ್ದದ ಹಿಂದೆ ಇರುವ ಭಾವ. ಆದ್ದರಿಂದಲೇ ನಾವು ದೇವರ ಮುಂದೆ ಮಂತ್ರ ಗಳನ್ನು ಪಠಿಸುವಾಗ, ಅಷ್ಟೋತ್ತರಗಳನ್ನು ಹೇಳಿಕೊಳ್ಳುವಾಗ ಕೇವಲ ಪುನರಾವರ್ತನೆ ಸಾಕಾಗುವು ದಿಲ್ಲ.

ಯಾಂತ್ರಿಕ ಜಪ ಆರಂಭವೇ ಆಗಬಹುದು, ಆದರೆ ಅದು ನಿಧಾನವಾಗಿ ನಾಮಸ್ಮರಣೆಗೆ ಭಾವ ಪೂರ್ಣ ಸೇವೆಯಾಗಿ ಅರ್ಪಣೆಯಾಗಬೇಕು. “ನಾಮ ಚಿಂತಾಮಣಿಃ ಕೃಷ್ಣಶ್ಬೈತನ್ಯರಸವಿಗ್ರಹಃ| ಪೂರ್ಣಃ ಶುದ್ಧೋ ನಿತ್ಯಮುಕ್ತೋ ನ ಭಿನ್ನತ್ವಾನ್ನನಾಮಮಿನೋಃ||" ಅಂದರೆ, ಕೃಷ್ಣನ ಪವಿತ್ರ ನಾಮವೆಂದರೆ ಚಿಂತಾಮಣಿಯಂತೆ, ಚೈತನ್ಯಮಯ, ರಸಸ್ವರೂಪಿ.

ಅದು ಪರಿಪೂರ್ಣ, ಶುದ್ಧ, ನಿತ್ಯಮುಕ್ತ ಮತ್ತು ಕೃಷ್ಣ ನಾಮ ಮತ್ತು ನಾಮಿ (ಪಠಿಸುವವನು) ಭಿನ್ನರಲ್ಲ ಎಂದರ್ಥ. ಪದ್ಮಪುರಾಣದಲ್ಲಿ ಇರುವ ಈ ಶ್ಲೋಕವು, ನಾವು ಭಗವಂತನ ನಾಮಸ್ಮರಣೆ ಯನ್ನು ಯಾವ ರೀತಿ ಮಾಡಬೇಕು ಎನ್ನುವ ಸೂಕ್ಷ್ಮವನ್ನು ಅರುಹುತ್ತದೆ.

ನಾಮವನ್ನು ಕೇವಲ ಜಪಿಸುವುದಲ್ಲ, ಅನುಭವಿಸಬೇಕು, ಆರಾಧಿಸಬೇಕು. ಆಗ ಆ ನಾಮವೇ ನಮ್ಮನ್ನು ಪರಂಧಾಮದ ಕಡೆ ಕರೆದೊಯ್ಯುತ್ತದೆ. ಇಂಥ ಸಾರ್ಥಕ ನಾಮಸ್ಮರಣೆ ನಮ್ಮದಾಗಲಿ...