Cherkady Sachhidanand Shetty Column: ವಾರಸುದಾರರಿಲ್ಲದ ಹಣದ ನಿರ್ವಹಣೆ ಹೇಗೆ ಗೊತ್ತೇ ?
ನಾಮಿನೇಷನ್ ಮುಖೇನ ನಾಮಿನಿಯ ಹಕ್ಕು ಸಾಧಿತವಾಗುವುದು ಠೇವಣಿದಾರನ ಮರಣದ ನಂತರವೇ ಎಂಬುದು ಮತ್ತು ಅನ್ಯ ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ ಎಂಬುದೂ ಗ್ರಾಹಕರಿಗೆ ತಿಳಿದಿರು ವುದಿಲ್ಲ. ಹೀಗಾಗಿ, ಠೇವಣಿ ಮಾಡುವಾಗ ಬ್ಯಾಂಕಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಬಗ್ಗೆ ತಮ್ಮ ಗ್ರಾಹಕರಿಗೆ ವಿಷಯವನ್ನು ಮನದಟ್ಟು ಮಾಡಿಕೊಡುವುದೂ ಮುಖ್ಯ.
-
ದುಡ್ಡು-ಕಾಸು
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
2025ರ ಬ್ಯಾಂಕಿಂಗ್ ಕಾನೂನಿನ ತಿದ್ದುಪಡಿ ಅನ್ವಯ ನವೆಂಬರ್ ಒಂದರಿಂದ ಗರಿಷ್ಠ ನಾಲ್ಕು ಜನ ನಾಮಿನಿ ಮಾಡಲು ಅವಕಾಶವಿದೆ. ಸಾರ್ವಜನಿಕ, ಖಾಸಗಿ, ಸಹಕಾರಿ ಬ್ಯಾಂಕು ಗಳಲ್ಲಿನ ಗ್ರಾಹಕರಿಗೆ ಈ ನಾಮಿನಿ ನಿಯಮ ಅನ್ವಯವಾಗುತ್ತದೆ. ಮೊದಲು ಒಬ್ಬ ವ್ಯಕ್ತಿ ಯನ್ನು ನಾಮಿನೇಷನ್ ಮಾಡಬಹುದಿತ್ತು. ಈಗ ಒಬ್ಬರು, ಇಬ್ಬರು, ಮೂವರು ಅಥವಾ ನಾಲ್ಕು ಜನರನ್ನು ನಾಮಿನೇಷನ್ ಮಾಡಬಹುದು.
ನಾಮಿನೇಷನ್ ಮಹತ್ವದ ಬಗ್ಗೆ ಹೆಚ್ಚಿನ ಠೇವಣಿದಾರರಿಗೆ ಮಾಹಿತಿ ಇರುವುದಿಲ್ಲ. ನಾಮಿನಿಯ ಮಹತ್ವವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪದೇ ಪದೆ ಹೇಳುತ್ತಲೇ ಬಂದಿದೆ. ವಿಮೆ, ಬ್ಯಾಂಕ್ ಖಾತೆ, ಪಿಪಿಎಫ್ ಅಥವಾ ಇನ್ನಾವುದೇ ಹಣಕಾಸಿನ ವ್ಯವಹಾರವಾದರೂ ನಾಮಿನಿ ಮಾಡುವುದನ್ನು ಗ್ರಾಹಕರು ಮರೆಯಬಾರದು.
ನಾಮಿನೇಷನ್ ಮುಖೇನ ನಾಮಿನಿಯ ಹಕ್ಕು ಸಾಧಿತವಾಗುವುದು ಠೇವಣಿದಾರನ ಮರಣದ ನಂತರವೇ ಎಂಬುದು ಮತ್ತು ಅನ್ಯ ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ ಎಂಬುದೂ ಗ್ರಾಹಕರಿಗೆ ತಿಳಿದಿರುವುದಿಲ್ಲ. ಹೀಗಾಗಿ, ಠೇವಣಿ ಮಾಡುವಾಗ ಬ್ಯಾಂಕಿನ ಸಿಬ್ಬಂದಿ ಮತ್ತು ಅಧಿಕಾರಿ ಗಳು ಈ ಬಗ್ಗೆ ತಮ್ಮ ಗ್ರಾಹಕರಿಗೆ ವಿಷಯವನ್ನು ಮನದಟ್ಟು ಮಾಡಿಕೊಡುವುದೂ ಮುಖ್ಯ. ನಾಮಿನಿ ಇಲ್ಲದ ಕಾರಣ ಹಣಕಾಸು ಕಂಪನಿಗಳಲ್ಲಿ ಸಾವಿರಾರು ಕೋಟಿ ರುಪಾಯಿ ಯಷ್ಟು ಹಣವು ವಾರಸುದಾರರ ಸುಳಿವಿಲ್ಲದೆ ಕೊಳೆಯುತ್ತಿದೆ.
ಅಕಸ್ಮಾತ್, ಖಾತೆದಾರರು ಮರಣ ಹೊಂದಿದಲ್ಲಿ ಅವರ ಹಣವನ್ನು ಅಥವಾ ಲಾಕರ್‌ನ ವಸ್ತು ಗಳನ್ನು ಬ್ಯಾಂಕ್ ತನ್ನಷ್ಟಕ್ಕೆ ತಾನೇ ಇಟ್ಟುಕೊಳ್ಳುವಂತಿಲ್ಲ. ಅದನ್ನು ಖಾತೆದಾರರ ವಾರಸು ದಾರರಿಗೆ ತಲುಪಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತವೆ. ಮೊದಲು ವಾರಸುದಾರರೇ ಹಣ ಹಿಂಪಡೆಯುವ ಪ್ರಮೇಯವಿತ್ತು.
ಇದನ್ನೂ ಓದಿ: Cherkady Sachhidanand Shetty Column: ದೇಶದ ಆರ್ಥಿಕಾಭಿವೃದ್ದಿಯಲ್ಲಿ ಮೂಲಸೌಕರ್ಯ ಕ್ಷೇತ್ರದ ಪಾತ್ರ ಮಹತ್ವದ್ದು
ಈಗ ಹಾಗೇನಿಲ್ಲ. ತಮ್ಮ ಕಾಲಾನಂತರ ತಮ್ಮ ಹಣವು ಯಾರಿಗೆ ಸಿಗಬೇಕು ಎಂಬುದನ್ನು ಮತ್ತು ತಾವು ಯಾರಿಗೆ ಕೊಡಲು ಇಚ್ಛಿಸುತ್ತಾರೋ ಅವರ ಹೆಸರನ್ನು ಸ್ವಷ್ಟವಾಗಿ ನಮೂದಿಸಬೇಕು ಎಂಬುದನ್ನು ಬ್ಯಾಂಕಿನವರು, ಆ ಮಾಹಿತಿಯು ತಿಳಿಯದವರಿಗೆ ತಿಳಿಸಬೇಕು ಮತ್ತು ಬ್ಯಾಂಕಿನವರು ಅದನ್ನು ಮಾಡುತ್ತಿದ್ದಾರೆ ಕೂಡ.
ಇದುವೇ ನಾಮಿನೇಷನ್ ಪ್ರಕ್ರಿಯೆ. ತಮ್ಮ ಮರಣದ ನಂತರ ನಿರ್ದಿಷ್ಟವಾಗಿ ಇಂಥ ವ್ಯಕ್ತಿಗೆ ಖಾತೆಯ ಹಣ ಹಾಗೂ ಲಾಕರ್ ವಸ್ತುಗಳು ಸಂದಾಯವಾಗಬೇಕು ಎಂಬುದನ್ನು, ಖಾತೆದಾರರು ಖಾತೆ ಪ್ರಾರಂಭಿಸುವಾಗಲೇ ಬ್ಯಾಂಕಿನಲ್ಲಿ ಅಧಿಕೃತವಾಗಿ ತಿಳಿಸಿ ನೋಂದಾಯಿಸಬಹುದು. ಈ ವ್ಯವಸ್ಥೆಗೆ ನಾಮಿನೇಷನ್ ಅಥವಾ ನಾಮ ನಿರ್ದೇಶನ ಸೌಲಭ್ಯವೆಂದು ಕರೆಯಲಾಗುತ್ತದೆ.
ಖಾತೆದಾರರು ಸೂಚಿಸುವ ವ್ಯಕ್ತಿಯು ಸಂಬಂಧಿಯೇ ಆಗಬೇಕೆಂಬುದಿಲ್ಲ. ಅಲ್ಲದೆ ಖಾತೆದಾರರ ಜಾತಿ-ಜನಾಂಗದವರೇ ಆಗಿರಬೇಕು ಎಂಬ ಆವಶ್ಯಕತೆಯೂ ಇರುವುದಿಲ್ಲ. ನಾಮಿನಿಯು, ಖಾತೆ ದಾರರು ಇಚ್ಛಿಸಬಹುದಾದ ಯಾವುದಾದರೂ ವ್ಯಕ್ತಿಯಾಗಿರಬಹುದು. ಆತ ಖಾತೆದಾರರ ಮರಣದ ನಂತರ ಯಾವುದೇ ಕಾನೂನುಗಳ ತೊಡಕಿಲ್ಲದೆ ಸುಲಭವಾಗಿ ಹಣವನ್ನು ಪಡೆಯಬಹುದು.
ಅಲ್ಲದೆ, ಇಲ್ಲಿ ಯಾವುದೇ ಕಾರಣಕ್ಕಾಗಿ ವಾರಸುದಾರರು ಅಡ್ಡ ಬರುವಂತಿಲ್ಲ. ಅಂಥ ರಕ್ಷಣಾತ್ಮಕ ಕ್ರಮಗಳು ನಾಮಿನೇಷನ್ ಸೌಲಭ್ಯದಲ್ಲಿ ಅಡಗಿವೆ. ಮೊದಲು ಒಂದೇ ನಾಮಿನಿಗೆ ಅವಕಾಶವಿತ್ತು. ಈಗ ಅದನ್ನು ನಾಲ್ಕಕ್ಕೆ ವಿಸ್ತರಿಸಲಾಗಿದೆ. ಇದೀಗ 2025ರ ಬ್ಯಾಂಕಿಂಗ್ ಕಾನೂನಿನ ತಿದ್ದುಪಡಿ ಅನ್ವಯ ನವೆಂಬರ್ ಒಂದರಿಂದ ಗರಿಷ್ಠ ನಾಲ್ಕು ಜನ ನಾಮಿನಿ ಮಾಡಲು ಅವಕಾಶವಿದೆ.
ಸಾರ್ವಜನಿಕ, ಖಾಸಗಿ, ಸಹಕಾರಿ ಬ್ಯಾಂಕುಗಳಲ್ಲಿನ ಗ್ರಾಹಕರಿಗೆ ಈ ನಾಮಿನಿ ನಿಯಮ ಅನ್ವಯ ವಾಗುತ್ತದೆ. ಮೊದಲು ಒಬ್ಬ ವ್ಯಕ್ತಿಯನ್ನು ನಾಮಿನೇಷನ್ ಮಾಡಬಹುದಿತ್ತು. ಇದರಿಂದಾಗಿ, ಠೇವಣಿದಾರರ ಮರಣದ ಬಳಿಕ, ಠೇವಣಿದಾರರ ಜತೆಗೆ ನಾಮಿನಿಯೂ ಮರಣ ಹೊಂದಿದರೆ ಈ ಮೊತ್ತವನ್ನೋ ಅಥವಾ ಲಾಕರ್‌ನ ಅಮೂಲ್ಯ ವಸ್ತುವನ್ನೋ ಪಡೆದುಕೊಳ್ಳಲು ಬಹಳ ಕಷ್ಟ ಪಡಬೇಕಿತ್ತು.
ಈಗ ಒಬ್ಬರು, ಇಬ್ಬರು, ಮೂವರು ಅಥವಾ ನಾಲ್ಕು ಜನರನ್ನು ನಾಮಿನೇಷನ್ ಮಾಡಿ ಯಾರ‍್ಯಾರಿಗೆ ಶೇಕಡಾವಾರು ಎಷ್ಟೆಷ್ಟು ಪಾಲು ಎಂಬುದನ್ನು ನಮೂದಿಸಿದರೆ ಠೇವಣಿದಾರರ ಮರಣಾನಂತರ ಅದೇ ಅನುಪಾತದಲ್ಲಿ ಮೊತ್ತವು ಸಿಗುವುದು.
ಯಾವುದೇ ಬ್ಯಾಂಕ್ ಖಾತೆಗಳನ್ನು ಎರಡು ವರ್ಷದವರೆಗೆ ಬಳಸದೇ ಇದ್ದರೆ, ಬ್ಯಾಂಕ್‌ಗಳು ಅವನ್ನು ಚಲಾವಣೆಯಿಲ್ಲದ ‘ಡಾರ್ಮೆಂಟ್ ಖಾತೆ’ಯೆಂದು ಪರಿಗಣಿಸುತ್ತವೆ. ಅವುಗಳಲ್ಲಿ ಇರುವ ಠೇವಣಿ ಯನ್ನು ಹಿಂದಿರುಗಿಸುವ ಅಥವಾ ಖಾತೆಯನ್ನು ಮುಂದುವರಿಸುವ ಹೊಣೆಗಾರಿಕೆಯು ಬ್ಯಾಂಕ್ ಗಳದ್ದೇ ಆಗಿರುತ್ತದೆ.
ಖಾತೆಗಳನ್ನು ಮುಚ್ಚಲು ಮತ್ತು ಠೇವಣಿಯನ್ನು ವಾರಸುದಾರರಿಗೆ ವಾಪಸ್ ಮಾಡಲು ಬ್ಯಾಂಕ್ ಗಳು ನೆರವು ನೀಡಬೇಕು. ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಗಳಲ್ಲಿ ಎರಡು ವರ್ಷ ಯಾವುದೇ ವಹಿವಾಟು ನಡೆಯದೇ ಇದ್ದರೆ ಅಂಥ ಖಾತೆಗಳನ್ನು ಚಲಾವಣೆಯಿಲ್ಲದ ಅಥವಾ ಡಾರ್ಮೆಂಟ್ ಖಾತೆ ಎಂದು ಪರಿಗಣಿಸಲಾಗುತ್ತದೆ.
ಅದೇ ರೀತಿ ನಿಶ್ಚಿತ ಠೇವಣಿಗಳು ವಾಯಿದೆ ಮುಗಿದ ಎರಡು ವರ್ಷಗಳ ಬಳಿಕವೂ ಖಾತೆದಾರ ಆ ಹಣವನ್ನು ಹಿಂಪಡೆಯದಿದ್ದರೆ ಅದನ್ನೂ ‘ಚಲಾವಣೆ ಇಲ್ಲದ ಖಾತೆ’ ಎಂದು ವರ್ಗೀಕರಿಸ ಲಾಗುತ್ತದೆ. ಈ ಖಾತೆಗಳು ಮತ್ತೆ ೮ ವರ್ಷ ಸಕ್ರಿಯವಾಗಿ ಇರದಿದ್ದರೆ ಅಂಥ ಖಾತೆಗಳನ್ನು ವಾರಸು ದಾರರಿಲ್ಲದ ನಿಷ್ಕ್ರಿಯ ಖಾತೆಗಳು ಎಂದು ಪ್ರತ್ಯೇಕಿಸಿ ಅಲ್ಲಿರುವ ಮೊತ್ತವನ್ನು ಆರ್‌ಬಿಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಖಾತೆದಾರ ಸಾವನ್ನಪ್ಪಿ, ಆತನಿಗೆ ಸಂಬಂಧಿಸಿದ ಹಣಕಾಸಿನ ಹೂಡಿಕೆಗಳ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲದಿದ್ದಾಗ ನಾಮಿನಿಗಳನ್ನು ಸಂಪರ್ಕಿಸುವುದು ದೊಡ್ಡ ಸರ್ಕಸ್. ಬ್ಯಾಂಕಿನವರು ನೋಡುವಷ್ಟು ನೋಡಿ, ೧೦ ವರ್ಷಗಳ ನಂತರ ಆ ಮೊತ್ತವನ್ನು ‘ಡೆಫ್ ಖಾತೆ’ಗೆ ವರ್ಗಾಯಿಸುತ್ತಾರೆ. ಈ ನಿಧಿಯ ಜವಾಬ್ದಾರಿ ಆರ್‌ಬಿಐ ಹೆಗಲಿಗೆ ಬೀಳುತ್ತದೆ.
ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಖಾತೆದಾರರ ಅಥವಾ ಅವರ ಸಂಬಂಧಿಕರ ಹೆಸರು ಪತ್ತೆಯಾದರೆ ಕ್ಲೇಮ್ ಫಾರ್ಮ್ ಭರ್ತಿ ಮಾಡಿ ‘ಕೆವೈಸಿ’ ದಾಖಲೆ ಕೊಟ್ಟು ಠೇವಣಿದಾರರ ಮರಣ ಪ್ರಮಾಣಪತ್ರ ಸಲ್ಲಿಸಿದರೆ 15 ದಿನದಲ್ಲಿ ಕ್ಲೇಮ್ ಇತ್ಯರ್ಥವಾಗುತ್ತದೆ. ನಾಮಿನೇಷನ್ ಇದ್ದಲ್ಲಿ ಕ್ಲೇಮ್‌ಗಳನ್ನು ಚುಕ್ತಾಗೊಳಿಸಲು ಬ್ಯಾಂಕ್‌ಗಳಿಗೆ ಅತ್ಯಂತ ಸುಲಭ ಹಾಗೂ ತಾವು ಬಯಸಿದಂಥ ವ್ಯಕ್ತಿಗೆ ಸೇರು ವಂತಾಗಿ ತಮ್ಮ ಆಶಯವೂ ಈಡೇರಿದಂತಾಗಬಲ್ಲದು.
ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಮರೆತಿದ್ದರೆ, ಕುಟುಂಬದವರ ಬ್ಯಾಂಕ್ ಖಾತೆಗಳಿದ್ದು ಅದರಲ್ಲಿ ಹಣವೇನಾದರೂ ಇದ್ದರೆ ಅದನ್ನು ಪಡೆಯಲು ‘ನಿಮ್ಮ ಹಣ, ನಿಮ್ಮ ಅಧಿಕಾರ’ ಎಂಬ ಅಭಿಯಾನಕ್ಕೆ ಕೇಂದ್ರ ಹಣಕಾಸು ಸಚಿವೆ ಚಾಲನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಾರಸುದಾರರು ಯಾರು ಎಂದು ತಿಳಿಯದೆ ಬ್ಯಾಂಕ್ ಖಾತೆಗಳಲ್ಲಿ ಉಳಿದುಕೊಂಡಿರುವ ಹಣವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಈ ಅಭಿಯಾನದ ಉದ್ದೇಶ ಮತ್ತು ಇದಕ್ಕೆ ಆರ್‌ಬಿಐ ನಿಮ್ಮ ಸಹಾಯಕ್ಕೆ ಬರುತ್ತದೆ.
ನಿಷ್ಕ್ರಿಯ ಖಾತೆಗಳಲ್ಲಿರುವ ಹಣವನ್ನು ಅರ್ಹ ವಾರಸುದಾರರಿಗೆ ತಲುಪಿಸಲು ಆರ್‌ಬಿಐ 2023ರಲ್ಲಿ ‘ಉದ್ಗಮ್ ಪೋರ್ಟಲ್’ ಅನ್ನು ಆರಂಭಿಸಿತು. ಈ ಪೋರ್ಟಲ್‌ನಲ್ಲಿ, ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಉಳಿದುಕೊಂಡಿರುವ ಹಣದ ಮಾಹಿತಿಯನ್ನು ಪತ್ತೆ ಮಾಡಬಹುದು.
ಉದ್ಗಮ್ ಪೋರ್ಟಲ್ʼನಲ್ಲಿ ವಾರಸುದಾರರಿಲ್ಲದ ಠೇವಣಿಗಳನ್ನು ಪತ್ತೆ ಮಾಡಲು ಬ್ಯಾಂಕಿನ ಹೆಸರು ಮತ್ತು ಖಾತೆದಾರರ ವಿವರದ ಜತೆ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ಅಥವಾ ಖಾತೆದಾರರ ಜನ್ಮದಿನಾಂಕದ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ ಮತ್ತು ಸೂಕ್ತ ಬ್ಯಾಂಕಿಗೆ ಕ್ಲೇಮ್ ಅರ್ಜಿ ಸಲ್ಲಿಸಿ, ಕೆವೈಸಿ ದಾಖಲೆ, ಠೇವಣಿ ದಾರರ ಭಾವಚಿತ್ರ ಒದಗಿಸಿ, ನೀವು ಕಾನೂನುಬದ್ಧ ಅಧಿಕಾರ ಇರುವವರು ಎಂಬುದಕ್ಕೆ ಪುರಾವೆ ಒದಗಿಸಿದರೆ, ಬ್ಯಾಂಕ್ ಅದನ್ನು ಪರಿಶೀಲಿಸಿ ಹಣವನ್ನು ಬಿಡುಗಡೆ ಮಾಡುತ್ತದೆ.
ಹಿಂದೂ ಅವಿಭಕ್ತ ಕುಟುಂಬ ಪ್ರೊಪ್ರೈಟರ್‌ಶಿಪ್, ಪಾರ್ಟ್‌ನರ್‌ಶಿಪ್‌ಗಳಿಗೆಈ ಪೋರ್ಟಲ್‌ನ ‘ನಾನ್ ಇಂಡಿವಿಜುವಲ್ ಕೆಟಗರಿ’ಯನ್ನು ಆಯ್ಕೆ ಮಾಡಿದರಾಯಿತು. ಖಾತೆದಾರರು ಮೃತಪಟ್ಟಿದ್ದರೂ ಅವರ ಖಾತೆಯಲ್ಲಿನ ಠೇವಣಿಗೆ ನಾಮಿನೇಷನ್ ಇಲ್ಲದಿದ್ದಲ್ಲಿ ವಾರಸುದಾರರು ಅದನ್ನು ಪಡೆದು ಕೊಳ್ಳಬಹುದು.
ಖಾತೆದಾರರ ವಾರಸುದಾರರು ಇವರೇ ಎಂಬುದನ್ನು ದೃಢಪಡಿಸಿಕೊಳ್ಳುವ ಬ್ಯಾಂಕು, ಠೇವಣಿ ಮೊತ್ತವನ್ನು ವಾಪಸ್ ಮಾಡಲು ಕ್ರಮ ತೆಗೆದುಕೊಳ್ಳುತ್ತದೆ. ತಾವೇ ವಾರಾಸುದಾರರು ಎಂಬುದಕ್ಕೆ ಸೂಕ್ತ ದಾಖಲೆ ಮತ್ತು ಮಾಹಿತಿ ಪತ್ರಗಳನ್ನು ಬ್ಯಾಂಕಿಗೆ ನೀಡಿದರಾಯಿತು. ನಾಮಿನೇಷನ್ ಇದ್ದರೆ ಈ ಅಡಚಣೆಗಳಿರುವುದಿಲ್ಲ.
ಸಾರ್ವಜನಿಕ ಭವಿಷ್ಯನಿಧಿ ಖಾತೆ ತೆರೆಯುವಾಗಲೇ ನಾಮಿನೇಷನ್ ಕಡ್ಡಾಯ; ಆದರೆ ಬ್ಯಾಂಕ್ ಗಳಲ್ಲಿ ನಾಮನಿರ್ದೇಶನ ಕಡ್ಡಾಯವಲ್ಲದಿದ್ದರೂ ಮುಂದೆ ಠೇವಣಿದಾರರ ಮರಣದ ಬಳಿಕ ಕುಟುಂಬದ ಸದಸ್ಯರಿಗೆ ವರ್ಗಾವಣೆಯಾಗಲು ತೊಂದರೆಯಾಗುವ ಸಾಧ್ಯತೆಯಿರುವ ಕಾರಣ, ನಾಮನಿರ್ದೇಶನ ಅತ್ಯುತ್ತಮ ಕ್ರಮ. ಇದೀಗ ನಾಲ್ಕು ನಾಮನಿರ್ದೇಶನಕ್ಕೆ ಅವಕಾಶ ಕೊಟ್ಟಿರುವು ದರಿಂದ ವಾರಸುದಾರರಿಗೂ ಮತ್ತು ಬ್ಯಾಂಕಿಗೂ ಅನುಕೂಲವಾಗಲಿದೆ.
(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು)