ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Sadhanashree Column: ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ನಮ್ಮ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೂ ಅದರ ಎಲೆಗೂ ನೀಡಿರುವ ಮಹತ್ವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಭಾರತೀಯ ಹಬ್ಬಗಳನ್ನು ಗಮನಿಸಿದರೆ ಅವು ಕೇವಲ ಆಚರಣೆ ಗಳಲ್ಲ; ಅವು ನಮ್ಮ ಆರೋಗ್ಯಕರ ಜೀವನಶೈಲಿಗೆ ಮಾರ್ಗದರ್ಶಿಗಳೂ ಆಗಿವೆ. ಋತು ಬದಲಾವಣೆಯ ಸಂದರ್ಭಗಳಲ್ಲಿ ದೇಹದೊಳಗಿನ ದೋಷಗಳ ಸಮತೋಲನವನ್ನು ಕಾಪಾಡಿ ಕೊಳ್ಳಲು ಯಾವ ರೀತಿಯ ಆಹಾರ ಮತ್ತು ಆಚರಣೆಗಳನ್ನು ಪಾಲಿಸಬೇಕು ಎಂಬುದನ್ನು ಹಬ್ಬಗಳ ಮೂಲಕ ನಮ್ಮ ಪೂರ್ವಜರು ತಿಳಿಸಿ ಕೊಟ್ಟಿದ್ದಾರೆ.

ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಶತಾಯುರ್ವಜ್ರದೇಹಾಯ, ಸರ್ವಸಂಪತ್ತ್ಕರಾಯ ಚ | ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳಭಕ್ಷಣಂ’- ಈ ಶ್ಲೋಕವನ್ನು ಉಚ್ಚರಿಸುತ್ತಾ ನಾವೆಲ್ಲರೂ ಸಂತೋಷದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದೇವೆ. ಈ ಶ್ಲೋಕದ ಸಾರ ಹೀಗಿದೆ- ಬೇವಿನ ಎಲೆಗಳನ್ನು ಸೇವಿಸುವುದರಿಂದ ಮನುಷ್ಯನು ನೂರು ವರ್ಷಗಳ ಆಯಸ್ಸು, ವಜ್ರದಂತೆ ದೃಢವಾದ ದೇಹ, ಮತ್ತು ಸಂಪತ್ತು-ಸಮೃದ್ಧಿಗಳನ್ನು ಪಡೆಯುತ್ತಾನೆ.

ಜತೆಗೆ ಜೀವನದಲ್ಲಿ ಎದುರಾಗುವ ಅನೇಕ ಅರಿಷ್ಟಗಳು, ದುಃಖಗಳು ಮತ್ತು ದುರಿತಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ಶ್ಲೋಕವು ಕೇವಲ ಒಂದು ಧಾರ್ಮಿಕ ಆಚರಣೆಯ ಪ್ರತೀಕ ಮಾತ್ರವಲ್ಲ; ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಹೊಂದಿ ಕೊಂಡು ಬದುಕಿದ ಜೀವನ ಜ್ಞಾನವನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೂ ಅದರ ಎಲೆಗೂ ನೀಡಿರುವ ಮಹತ್ವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಭಾರತೀಯ ಹಬ್ಬಗಳನ್ನು ಗಮನಿಸಿದರೆ ಅವು ಕೇವಲ ಆಚರಣೆಗಳಲ್ಲ; ಅವು ನಮ್ಮ ಆರೋಗ್ಯಕರ ಜೀವನಶೈಲಿಗೆ ಮಾರ್ಗದರ್ಶಿಗಳೂ ಆಗಿವೆ. ಋತು ಬದಲಾವಣೆಯ ಸಂದರ್ಭಗಳಲ್ಲಿ ದೇಹದೊಳಗಿನ ದೋಷ ಗಳ ಸಮತೋಲನ ವನ್ನು ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಮತ್ತು ಆಚರಣೆಗಳನ್ನು ಪಾಲಿಸಬೇಕು ಎಂಬುದನ್ನು ಹಬ್ಬಗಳ ಮೂಲಕ ನಮ್ಮ ಪೂರ್ವಜರು ತಿಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Dr Sadhanashree Column: ಕಾಡುವ ಕುರುವಿಗೆ ಹೀಗೆ ಮಾಡು ಎನ್ನುತ್ತದೆ ಆಯುರ್ವೇದ

ಉದಾಹರಣೆಗೆ, ವಸಂತ ಋತುವಿನಲ್ಲಿ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಇದೇ ಸಮಯದಲ್ಲಿ ಬರುವ ಯುಗಾದಿ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ಸೇವಿಸುವ ಪದ್ಧತಿ ಇದೆ. ಬೇವು ಕಫ ಮತ್ತು ಪಿತ್ತವನ್ನು ಶಮನಗೊಳಿಸುವ ಗುಣ ಹೊಂದಿದ್ದು, ಋತುಬದಲಾವಣೆಗೆ ದೇಹವನ್ನು ಸಿದ್ಧಗೊಳಿಸಲು ಸಹಾಯಕವಾಗುತ್ತದೆ. ಈ ರೀತಿಯಾಗಿ ನೋಡಿದರೆ ನಮ್ಮ ಹಬ್ಬಗಳು ಕೇವಲ ಸಾಂಸ್ಕೃತಿಕ ಆಚರಣೆಗಳಲ್ಲ; ಅವು ಆರೋಗ್ಯವನ್ನು ಕಾಪಾಡುವ ಜೀವನ ವಿಧಾನವನ್ನು ಸುಂದರವಾಗಿ ನಮ್ಮ ದೈನಂದಿನ ಬದುಕಿನ ಭಾಗವಾಗಿಸಿಕೊಳ್ಳುವ ಪರಿ.

ಈ ಹಿನ್ನೆಲೆಯಲ್ಲಿಯೇ ಯುಗಾದಿಯಲ್ಲಿ ಪ್ರಾಮುಖ್ಯ ಪಡೆದಿರುವ ಬೇವು ಆಯುರ್ವೇದ ದಲ್ಲಿಯೂ ಒಂದು ಅಮೂಲ್ಯ ಔಷಧಿಯ ಸಸ್ಯವಾಗಿ ವಿಶೇಷ ಸ್ಥಾನ ಪಡೆದಿದೆ. ಭಾರತೀಯ ಮನೆಗಳ ಅಂಗಳದಲ್ಲಿ ಸಾಮಾನ್ಯವಾಗಿ ಕಾಣುವ ಒಂದು ಮರ ಎಂದರೆ ಬೇವು.

ಕನ್ನಡದಲ್ಲಿ ಬೇವು, ಸಂಸ್ಕೃತದಲ್ಲಿ ನಿಂಬ ಎಂದು ಕರೆಯಲಾಗುತ್ತದೆ. ಸಾವಿರಾರು ವರ್ಷ ಗಳಿಂದ ಭಾರತೀಯ ಜೀವನಶೈಲಿಯಲ್ಲಿ ಬೇವು ಆರೋಗ್ಯದ ರಕ್ಷಕನಾಗಿ ಸ್ಥಾನ ಪಡೆದಿದೆ. ಬೇವು ಮರದ ವಿಶೇಷತೆ ಎಂದರೆ ಇದರ ಎಲೆ, ಹೂವು, ತೊಗಟೆ, ಕಾಯಿ, ಬೀಜ- ಹೀಗೆ ಪ್ರತಿಯೊಂದು ಭಾಗವೂ ಔಷಧಿಯ ಗುಣಗಳನ್ನು ಹೊಂದಿದೆ.

ಹಳೆಯ ಕಾಲದಲ್ಲಿ ಮನೆಗಳ ಅಂಗಳದಲ್ಲಿ ಬೇವು ಮರವನ್ನು ನೆಡುವುದು ಒಂದು ಸಾಮಾನ್ಯ ಪದ್ಧತಿ ಆಗಿತ್ತು. ಅದರ ನೆರಳು, ಗಾಳಿ ಮತ್ತು ಔಷಧಿಯ ಗುಣಗಳು ಕುಟುಂಬದ ಆರೋಗ್ಯವನ್ನು ಕಾಪಾಡುತ್ತವೆ ಎಂಬ ನಂಬಿಕೆ ಇದ್ದಿತು. ಇಂದಿಗೂ ಬೇವಿನ ಎಲೆಗಳನ್ನು ಮನೆಗಳ ಬಾಗಿಲಲ್ಲಿ ಕಟ್ಟುವ ಪದ್ಧತಿ, ಅದರ ಶುದ್ಧೀಕರಣ ಗುಣಗಳ ಮೇಲೆ ಇರುವ ನಂಬಿಕೆಯನ್ನು ಸೂಚಿಸುತ್ತದೆ.

ಆಯುರ್ವೇದದ ದೃಷ್ಟಿಯಲ್ಲಿ ಬೇವು ದೇಹವನ್ನು ಶುದ್ಧಗೊಳಿಸುವುದು, ಚರ್ಮದ ಆರೋಗ್ಯವನ್ನು ಕಾಪಾಡುವುದು, ರಕ್ತವನ್ನು ಶೋಧಿಸುವುದು ಮತ್ತು ದೇಹದಲ್ಲಿನ ವಿಷಪಾಕವನ್ನು ನಿವಾರಿಸುವುದು ಎಂಬ ಅನೇಕ ಗುಣಗಳನ್ನು ಹೊಂದಿರುವ ಅಮೂಲ್ಯ ಔಷಧಿಯ ಮರವಾಗಿದೆ. ಆದ್ದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಬೇವನ್ನು ಕೇವಲ ಒಂದು ಮರವಾಗಷ್ಟೇ ಅಲ್ಲದೆ, ಆರೋಗ್ಯವನ್ನು ಕಾಪಾಡುವ ಪ್ರಕೃತಿಯ ವರವಾಗಿಯೂ ಪರಿಗಣಿಸಲಾಗಿದೆ.

Screenshot_3 ಒಕ

ಆಯುರ್ವೇದದಲ್ಲಿ ಬೇವಿನ ಔಷಧಿಯ ಗುಣಧರ್ಮಗಳು

ರಸ: ತಿಕ್ತ (ಕಹಿ), ಕಷಾಯ

ಗುಣ: ಲಘು (ಜೀಣಕ್ಕೆ ಹಗುರ), ರೂಕ್ಷ (ಒಣಗಿಸುವ ಸ್ವಭಾವ ಹೊಂದಿರುವಂಥದ್ದು)

ವೀರ್ಯ: ಶೀತ (ತಂಪು ಸ್ವಭಾವ)

ವಿಪಾಕ: ಕಟು (ಜೀರ್ಣದ ನಂತರ)

ದೋಷಕರ್ಮ: ಕಫ ಮತ್ತು ಪಿತ್ತ ದೋಷಗಳನ್ನು

ಶಮನಗೊಳಿಸುತ್ತದೆ.

ರೋಗಘ್ನಕರ್ಮ: ಆಯುರ್ವೇದದ ಪ್ರಕಾರ ಬೇವು ಈ ಔಷಧಿಯ ಕ್ರಿಯೆಗಳನ್ನು ಹೊಂದಿದೆ.

ಗ್ರಾಹಿ: ಅತಿಸಾರವನ್ನು ನಿಯಂತ್ರಿಸುವುದು.

ರೋಚನ: ರುಚಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಸುಧಾರಿಸುವುದು.

ಕೃಮಿಘ್ನ: ಕೀಟಾಣುಗಳು ಮತ್ತು ಹುಳುಗಳನ್ನು ನಾಶ ಮಾಡುವುದು.

ರಕ್ತಶೋಧಕ: ರಕ್ತವನ್ನು ಶುದ್ಧಗೊಳಿಸುವುದು.

ಜ್ವರಘ್ನ: ಜ್ವರವನ್ನು ಕಡಿಮೆ ಮಾಡುವುದು.

ದಾಹ ಪ್ರಶಮನ: ದೇಹದ ಉರಿ ಮತ್ತು ದಾಹವನ್ನು ಶಮನಗೊಳಿಸುವುದು.

ವ್ರಣಶೋಧನ: ಗಾಯಗಳನ್ನು ಶುದ್ಧಗೊಳಿಸಿ ಗುಣವಾಗಲು ಸಹಾಯ ಮಾಡುವುದು.

ಕಂಡುಘ್ನ: ಕೆರೆತವನ್ನು ಕಡಿಮೆ ಮಾಡುವುದು.

ವೇದನಾಸ್ಥಾಪನ: ನೋವನ್ನು ಕಡಿಮೆ ಮಾಡುವುದು.

ಚಕ್ಷುಷ್ಯ: ಕಣ್ಣುಗಳಿಗೆ ಹಿತಕರ.

ಕುಷ್ಠಘ್ನ: ಚರ್ಮರೋಗಗಳನ್ನು ಕಡಿಮೆ ಮಾಡುವ ಗುಣ.

ಪ್ರಮೇಹಘ್ನ: ಪ್ರಮೇಹ ಸಂಬಂಧಿತ ಸಮಸ್ಯೆಗಳಲ್ಲಿ ಉಪಯುಕ್ತ.

ಯಕೃತ್ ಉತ್ತೇಜಕ: ಯಕೃತ್ (liver) ಕ್ರಿಯೆಯನ್ನು ಉತ್ತೇಜಿಸುವುದು.

ಗರ್ಭಾಶಯ ಉತ್ತೇಜಕ: ಗರ್ಭಾಶಯದ ಕ್ರಿಯೆಯನ್ನು ಉತ್ತೇಜಿಸುವ ಗುಣ.

ಚಿಕಿತ್ಸೆಯಲ್ಲಿ ಬೇವು ಬಳಕೆ: ಆಯುರ್ವೇದದಲ್ಲಿ ಬೇವು ಮರದ ವಿವಿಧ ಭಾಗಗಳನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಕುಷ್ಠ (ಚರ್ಮ ರೋಗಗಳು): ಬೇವು ಮರದ ಪಂಚಾಂಗ (ಎಲೆ, ಹೂವು, ತೊಗಟೆ, ಕಾಯಿ, ಬೇರು)ಗಳಿಂದ ತಯಾರಿಸಿದ ಚೂರ್ಣ ಅಥವಾ ಕಷಾಯವನ್ನು ಸ್ನಾನಕ್ಕೆ ಮತ್ತು ಹೊರಗೆ ಲೇಪನಕ್ಕೆ ಬಳಸಲಾಗುತ್ತದೆ.

ದಾಹಜ್ವರ (ಉರಿ ಜತೆಯ ಜ್ವರ): ಬೇವು ಎಲೆಗಳನ್ನು ಜೇನುತುಪ್ಪದೊಂದಿಗೆ ಸೇವಿಸುವಂತೆ ಸೂಚಿಸಲಾಗಿದೆ. ಇದರಿಂದ ವಾಂತಿ ಉಂಟಾಗಿ ದಾಹ ಕಡಿಮೆಯಾಗುತ್ತದೆ.

ವಾತರಕ್ತ (ಗೌಟ್ ರೀತಿಯ ಸಂಧಿಯ ಸಮಸ್ಯೆ): ಬೇವು ಎಲೆ ಮತ್ತು ಪಟೋಲ ಎಲೆಗಳಿಂದ ತಯಾರಿಸಿದ ಕಷಾಯವನ್ನು ಜೇನುತುಪ್ಪದೊಂದಿಗೆ ನೀಡಲಾಗುತ್ತದೆ.

ವ್ರಣ (ಗಾಯಗಳು): ಬೇವಿನ ಎಲೆಯ ಲೇಪವು ಗಾಯಗಳಿಗೆ ಉಪಯುಕ್ತ.

ಶೋಫ ಮತ್ತು ಊರುಸ್ತಂಭ (ಊತ ಮತ್ತು ಸ್ನಾಯು ಕಟ್ಟು): ಬೇವು ಎಲೆಗಳಿಂದ ಮಾಡಿದ ಶಾಕ (ಫೋಮೆಂಟೇಶನ್) ನೀಡಲಾಗುತ್ತದೆ.

ಕಾಮಲಾ (ಜಾಂಡಿಸ್): ಬೇವು ಎಲೆಗಳ ಸ್ವರಸವನ್ನು ಜೇನುತುಪ್ಪದೊಂದಿಗೆ ನೀಡಲಾಗುತ್ತದೆ.

ಖಾಲಿತ್ಯ ಮತ್ತು ಪಾಲಿತ್ಯ (ಕೂದಲು ಉದುರುವುದು ಮತ್ತು ಬಿಳಿ ಕೂದಲು): ಬೇವು ಬೀಜದ ಎಣ್ಣೆಯಿಂದ ನಸ್ಯಕರ್ಮ ಮಾಡುವುದು ಉಪಯುಕ್ತ.

ಕೃಮಿ, ರಕ್ತಪಿತ್ತ, ವ್ರಣ, ಕಣ್ಣಿನ ನೋವು ಮತ್ತು ಅರ್ಶಸ್ (ಮೂಲವ್ಯಾಧಿ): ಬೇವು ಎಲೆ ಮತ್ತು ಬೇವು ಎಣ್ಣೆ ಉಪಯುಕ್ತವಾಗಿದೆ.

ಬೇವು ಎಣ್ಣೆ: ಕುಷ್ಠ, ಫಿರಂಗ ರೋಗ, ಶ್ಲೀಪದ (ಎಲೆಫ್ಯಾಂಟಿಯಾಸಿಸ್), ಗಂಡಮಾಲೆ, ಅಮವಾತ, ವಿಷಮ ಜ್ವರ ಇತ್ಯಾದಿ.

ಬೇವು ಹಣ್ಣು: ಹುಳುಗಳನ್ನು ನಿವಾರಿಸಲು ವಿರೇಚಕವಾಗಿ ಬಳಸಲಾಗುತ್ತದೆ.

ಬೇವು ಹೂ: ಜ್ವರ ಮತ್ತು ಜ್ವರದ ನಂತರ ಉಂಟಾಗುವ ಅಜೀರ್ಣ ಸ್ಥಿತಿಯಲ್ಲಿ ಉಪಯುಕ್ತ.

ಬೇವು ಎಲೆ ಸ್ವರಸ: ಕೆಲವು ಕಣ್ಣಿನ ರೋಗಗಳಲ್ಲಿ ಉಪಯೋಗಿಸಲಾಗುತ್ತದೆ.

ಯುಗಾದಿ ವಿಶೇಷ: ಬೇವು-ಬೆಲ್ಲ

ಯುಗಾದಿ ದಿನ ಬೇವು-ಬೆಲ್ಲ ಸೇವಿಸುವ ಪದ್ಧತಿ ಕೇವಲ ಒಂದು ಸಂಪ್ರದಾಯವಲ್ಲ; ಅದರ ಹಿಂದೆ ಆಳವಾದ ಆರೋಗ್ಯಪರವಾದ ಆಯುರ್ವೇದೀಯ ತತ್ವವೂ ಅಡಗಿದೆ. ವಸಂತ ಋತುವು ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುವ ಕಾಲ ಎಂದು ಆಯುರ್ವೇದ ಹೇಳು ತ್ತದೆ. ಚಳಿಗಾಲದ ಬಳಿಕ ದೇಹದಲ್ಲಿ ಸಂಗ್ರಹವಾಗಿರುವ ಕಫ ಈ ಸಮಯದಲ್ಲಿ ಕರಗಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ದೇಹವನ್ನು ಶುದ್ಧಗೊಳಿಸಿ ಜೀರ್ಣಕ್ರಿಯೆ ಯನ್ನು ಸಮತೋಲನಗೊಳಿಸಲು ಕೆಲವು ವಿಶಿಷ್ಟ ರುಚಿಗಳನ್ನು ಒಳಗೊಂಡ ಆಹಾರಗಳನ್ನು ಸೇವಿಸುವ ಪದ್ಧತಿಯನ್ನು ನಮ್ಮ ಪೂರ್ವಜರು ಹಬ್ಬಗಳ ಮೂಲಕ ರೂಪಿಸಿದ್ದಾರೆ.

ಯುಗಾದಿಯಂದು ಸೇವಿಸುವ ಈ ಮಿಶ್ರಣದಲ್ಲಿ ಸಾಮಾನ್ಯವಾಗಿ ಬೇವಿನ ಹೂವು ಮತ್ತು ಅತ್ಯಂತ ಮೃದುವಾದ ಬೇವಿನ ಚಿಗುರು ಎಲೆಗಳು, ಸ್ವಲ್ಪ ಬೆಲ್ಲ, ಸ್ವಲ್ಪ ತುಪ್ಪ ಮತ್ತು ಮಾವಿನ ತುರಿ ಸೇರಿಸಲಾಗುತ್ತದೆ. ಈ ಸಂಯೋಜನೆ ರುಚಿಗಳ ಸಮತೋಲನ ಮಾತ್ರವಲ್ಲದೆ ದೇಹದ ದೋಷಗಳನ್ನು ಸಮನ್ವಯಗೊಳಿಸುವ ಒಂದು ಸೂಕ್ತ ಆಯುರ್ವೇದೀಯ ಸಂಯೋಜನೆಯಾಗಿದೆ.

ಬೇವು ಸ್ವಭಾವತಃ ತಿಕ್ತ (ಕಹಿ) ರಸಯುಕ್ತ ಮತ್ತು ರೂಕ್ಷ ಗುಣ ಹೊಂದಿರುವುದು. ಇದು ಕಫ ಮತ್ತು ಪಿತ್ತವನ್ನು ಶಮನಗೊಳಿಸುವುದರಲ್ಲಿ ಬಹಳ ಉಪಯುಕ್ತವಾದರೂ, ಇದೊಂದನ್ನೇ ಅಥವಾ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ದೇಹದಲ್ಲಿ ವಾತವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಜತೆಗೆ ಅದರ ರೂಕ್ಷ ಗುಣದಿಂದ ಕೆಲವೊಮ್ಮೆ ಮಲಬದ್ಧತೆ ಉಂಟಾಗುವ ಸಾಧ್ಯತೆಯೂ ಇದೆ. ಅದಕ್ಕಾಗಿ ಈ ಮಿಶ್ರಣದಲ್ಲಿ ಬೆಲ್ಲವನ್ನು ಸೇರಿಸಲಾಗುತ್ತದೆ. ಬೆಲ್ಲವು ಸ್ವಭಾವತಃ ಸ್ವಲ್ಪ ಮೃದುವಾಗಿಸುವ ಮತ್ತು ಮಲವನ್ನು ಸುಗಮಗೊಳಿಸುವ ಗುಣ ಹೊಂದಿದ್ದು, ಬೇವಿನ ರೂಕ್ಷತೆಯನ್ನು ಸಮತೋಲನಗೊಳಿಸಲು ಸಹಾಯಕವಾಗುತ್ತದೆ.

ಅದೇ ರೀತಿ ತುಪ್ಪವು ದೇಹಕ್ಕೆ ಸೌಮ್ಯ ಸ್ನಿಗ್ಧತೆಯನ್ನು ನೀಡುತ್ತದೆ ಮತ್ತು ಬೇವಿನ ಒಣ ಗುಣವನ್ನು ಸಮೀಕರಿಸುತ್ತದೆ. ಇದರಲ್ಲಿ ಸೇರಿಸುವ ಮಾವಿನ ತುರಿ ವಸಂತ ಋತುವಿನ ವಿಶೇಷ ಫಲವಾಗಿದ್ದು, ರುಚಿಯನ್ನು ಹೆಚ್ಚಿಸುವುದರ ಜತೆಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

ಹೀಗಾಗಿ ಬೇವು, ಬೆಲ್ಲ, ತುಪ್ಪ ಮತ್ತು ಮಾವಿನ ಸಂಯೋಜನೆಯು ರುಚಿಗಳ ಸಮತೋಲನ ವನ್ನು ಮಾತ್ರವಲ್ಲ, ದೇಹದೊಳಗಿನ ದೋಷಗಳ ಸಮತೋಲನ ಕಾಪಾಡುವ ಒಂದು ಸುಂದರ ಆಯುರ್ವೇದೀಯ ಮಿಶ್ರಣವಾಗುತ್ತದೆ. ಈ ರೀತಿಯಾಗಿ ನೋಡಿದರೆ ಯುಗಾದಿ ದಿನ ಸೇವಿಸುವ ಈ ಸರಳ ಮಿಶ್ರಣವು ಕೇವಲ ಹಬ್ಬದ ಆಚರಣೆ ಮಾತ್ರವಲ್ಲ; ಅದು ಋತುಬದಲಾವಣೆಗೆ ದೇಹವನ್ನು ಸಿದ್ಧಗೊಳಿಸುವ ಒಂದು ಆರೋಗ್ಯಕರ ಜೀವನ ಪದ್ಧತಿಯ ಸೂಚಕವಾಗಿದೆ.

ನಮ್ಮ ಪೂರ್ವಜರು ಹಬ್ಬಗಳ ಮೂಲಕ ಜೀವನಶೈಲಿಯನ್ನೇ ಆರೋಗ್ಯಪರವಾಗಿಸುವ ಜ್ಞಾನವನ್ನು ನಮಗೆ ನೀಡಿದ್ದಾರೆ ಎಂಬುದಕ್ಕೆ ಇದು ಒಂದು ಸುಂದರ ಉದಾಹರಣೆ.

ಬೇವಿನ ತಯಾರಿಕೆಗಳು: ಬೇವಿನ ಹೂವಿನ ಚಟ್ನಿ: ವಸಂತ ಋತುವಿನಲ್ಲಿ ದೊರೆಯುವ ಬೇವಿನ ಹೂವು ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.

ಆಯುರ್ವೇದದ ಪ್ರಕಾರ ಇದು ಕಫ ಮತ್ತು ಪಿತ್ತವನ್ನು ಶಮನಗೊಳಿಸಿ ಜೀರ್ಣಕ್ರಿಯೆ ಯನ್ನು ಸುಧಾರಿಸಲು ಸಹಾಯಕ. ಬೇವಿನ ಹೂವಿನಿಂದ ತಯಾರಿಸುವ ಈ ಚಟ್ನಿ ರುಚಿಕರವಾಗಿಯೂ ಆರೋಗ್ಯಕರವಾಗಿಯೂ ಇದೆ.

ಬೇಕಾಗುವ ಪದಾರ್ಥಗಳು: ಕಾಲು ಕಪ್ ಬೇವಿನ ಹೂವು, ರುಚಿಗೆ ತಕ್ಕಷ್ಟು ಉಪ್ಪು, 6 ರಿಂದ 8 ಚಮಚ ತುಪ್ಪ, 2 ಕಪ್ ತೆಂಗಿನಕಾಯಿ ತುರಿ, 2-3 ಹುರಿದ ಒಣಮೆಣಸಿನಕಾಯಿ, 2 ಚಮಚ ಕಡಲೆಬೇಳೆ, 2 ಚಮಚ ಶೇಂಗಾ, ರುಚಿಗೆ ತಕ್ಕಷ್ಟು ಹುಣಸೆಹಣ್ಣು.

ಒಗ್ಗರಣೆಗೆ ಅಗತ್ಯವಿರುವಷ್ಟು ಸಾಸಿವೆ, ಸ್ವಲ್ಪ ಕರಿಬೇವು, 1-2 ಒಣಮೆಣಸಿನಕಾಯಿ, ಅಗತ್ಯವಿರುವಷ್ಟು ತುಪ್ಪ ಅಥವಾ ಕೊಬ್ಬರಿಯ ಎಣ್ಣೆ.

ಮಾಡುವ ವಿಧಾನ: ಬೇವಿನ ಹೂವನ್ನು ಚೆನ್ನಾಗಿ ತೊಳೆದು ಕಾದಿರುವ ನೀರಿಗೆ ಹಾಕಿ ಸುಮಾರು 10 ನಿಮಿಷ ಮುಚ್ಚಿಡಬೇಕು.

ನಂತರ ಆ ನೀರನ್ನು ಬಸಿದು ಬೇವಿನ ಹೂವನ್ನು ತುಪ್ಪ ಅಥವಾ ಕೊಬ್ಬರಿಯ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಲಘುವಾಗಿ ಬಾಡಿಸಬೇಕು.

ಮತ್ತೊಂದು ಬಾಣಲೆಯಲ್ಲಿ ಒಣಮೆಣಸಿನಕಾಯಿ, ಕಡಲೆಬೇಳೆ ಮತ್ತು ಶೇಂಗಾಗಳನ್ನು ಹುರಿದುಕೊಳ್ಳಬೇಕು.

ಈಗ ಮಿಕ್ಸಿಯಲ್ಲಿ ತೆಂಗಿನ ತುರಿ, ಹುರಿದ ಒಣಮೆಣಸಿನಕಾಯಿ, ಬಾಡಿಸಿದ ಬೇವಿನ ಹೂವು, ಕಡಲೆಬೇಳೆ, ಶೇಂಗಾ, ಹುಣಸೆಹಣ್ಣು ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ಸಾಸಿವೆ, ಕರಿಬೇವು ಮತ್ತು ಒಣಮೆಣಸಿನ ಕಾಯಿ ಹಾಕಿ ತುಪ್ಪ ಅಥವಾ ಕೊಬ್ಬರಿಯ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಈ ಚಟ್ನಿಗೆ ಸೇರಿಸಬೇಕು. ಈ ರೀತಿ ರುಚಿಯಾದ ಬೇವಿನ ಹೂವಿನ ಚಟ್ನಿಸವಿಯಲು ಸಿದ್ಧ. ಇದನ್ನು ದೋಸೆ, ಚಪಾತಿ, ರೊಟ್ಟಿ ಅಥವಾ ಬಿಸಿ ಅನ್ನದ ಜತೆ ಸೇವಿಸಬಹುದು.

ಆರೋಗ್ಯದ ಉಪಯೋಗಗಳು

- ಮಕ್ಕಳಲ್ಲಿ ಜಂತು ಹುಳಗಳ ನಿವಾರಣೆಗೆ ಸಹಾಯಕವಾಗುತ್ತದೆ.

- ಪಿತ್ತದ ಗಂಧೆಗಳು ಮತ್ತು ಪಿತ್ತದ ವಾಂತಿ ಕಡಿಮೆಯಾಗಲು ಸಹಾಯಕ.

- ಕಣ್ಣು ಊದುವುದು ಮತ್ತು ಕಣ್ಣು ಕೆಂಪಾಗುವುದು ಶಮನಗೊಳ್ಳುತ್ತದೆ.

- ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುತ್ತದೆ.

- ದೇಹದಲ್ಲಿನ ಕಫ ಮತ್ತು ಪಿತ್ತ ದೋಷಗಳನ್ನು ಶಮನಗೊಳಿಸುತ್ತದೆ.

- ರಕ್ತ ದೂಷಿತವಾದಾಗ ಬರುವ ಕೋರ, ಸರ್ಪಸುತ್ತು ಮುಂತಾದ ಸಮಸ್ಯೆಗಳಲ್ಲಿ ಸಹಾಯಕವಾಗುತ್ತದೆ.

ಬೇವು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

- ಅತಿಯಾದ ಪ್ರಮಾಣದಲ್ಲಿ ಸೇವಿಸಬಾರದು.

- ಬೇವು ಸ್ವಭಾವತಃ ತೀಕ್ಷ್ಣ ಮತ್ತು ರೂಕ್ಷ ಗುಣಗಳನ್ನು ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹದಲ್ಲಿ ವಾತದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಕೆಲವರಿಗೆ ಶುಷ್ಕತೆ, ದುರ್ಬಲತೆ ಅಥವಾ ಮಲಬದ್ಧತೆ ಉಂಟಾಗಬಹುದು.

- ಗರ್ಭಿಣಿಯರು ಜಾಗ್ರತೆ ವಹಿಸಬೇಕು. ಗರ್ಭಧಾರಣೆಯ ಸಮಯದಲ್ಲಿ ಬೇವಿನ ಸೇವನೆ ಮಾಡುವುದನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ. ವಿಶೇಷವಾಗಿ ವೈದ್ಯರ ಸಲಹೆಯಿಲ್ಲದೆ ಬೇವಿನ ಎಲೆ ಅಥವಾ ಅದರ ಔಷಧಿಯ ತಯಾರಿಕೆಗಳನ್ನು ಸೇವಿಸುವುದನ್ನು ತಪ್ಪಿಸುವುದು ಒಳಿತು.

- ದುರ್ಬಲ ದೇಹಸ್ಥಿತಿಯವರು ಎಚ್ಚರಿಕೆ ವಹಿಸಬೇಕು. ವಾತಪ್ರಕೃತಿ ಹೊಂದಿರುವವರು ಅಥವಾ ದೇಹದಲ್ಲಿ ಹೆಚ್ಚು ದುರ್ಬಲತೆ ಇರುವವರು ಬೇವನ್ನು ಹೆಚ್ಚಾಗಿ ಸೇವಿಸುವುದು ಸೂಕ್ತವಲ್ಲ.

ಇಂಥ ಸಂದರ್ಭಗಳಲ್ಲಿ ಇದನ್ನು ಸಮತೋಲನಕಾರಿ ಪದಾರ್ಥಗಳೊಂದಿಗೆ ಮಾತ್ರ ಬಳಸುವುದು ಒಳಿತು.

- ಮಕ್ಕಳಿಗೆ ಅತಿ ಪ್ರಮಾಣದಲ್ಲಿ ಕೊಡಬಾರದು.

ಮಕ್ಕಳ ದೇಹ ಇನ್ನೂ ಸೌಮ್ಯವಾಗಿರುವುದರಿಂದ ಬೇವಿನಂಥ ತೀಕ್ಷ್ಣ ಗುಣದ ಪದಾರ್ಥ ಗಳನ್ನು ಹೆಚ್ಚು ಪ್ರಮಾಣದಲ್ಲಿ ನೀಡುವುದು ಸರಿಯಲ್ಲ. ಅಗತ್ಯವಿದ್ದರೆ ಮಾತ್ರ, ಸೂಕ್ತ ಪ್ರಮಾಣದಲ್ಲಿ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಬಳಸಬೇಕು.

- ವೈದ್ಯರ ಸಲಹೆಯಿಲ್ಲದೆ ಪ್ರತಿದಿನ ಸೇವಿಸುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಅಥವಾ ಚರ್ಮದ ಸಮಸ್ಯೆಗಳು ಕಂಡುಬಂದಾಗ ಕೆಲವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಕಷಾಯ ಅಥವಾ ಒಣ ಬೇವಿನ ಎಲೆಗಳನ್ನು ಸೇವಿಸುವ ಪದ್ಧತಿ ಹೆಚ್ಚಾಗಿದೆ. ಆದರೆ ವೈದ್ಯರ ಮಾರ್ಗದರ್ಶನವಿಲ್ಲದೆ ಈ ರೀತಿಯಾಗಿ ಸೇವಿಸುವುದು ದೇಹಕ್ಕೆ ಹಾನಿಕಾರಕವಾಗಬಹುದು.

ಸರಿಯಾದ ರೀತಿಯಲ್ಲಿ ಬಳಸದೆ ಇದ್ದರೆ ಬೇವು ವಾತವನ್ನು ಹೆಚ್ಚಿಸಿ ದೇಹವನ್ನು ಅತಿಯಾಗಿ ಒಣಗಿಸುವ, ಸಂಧಿಗಳಲ್ಲಿನ ದ್ರವವನ್ನು ಕಡಿಮೆ ಮಾಡುವ, ಮಲಬದ್ಧತೆ ಉಂಟುಮಾಡುವ ಹಾಗೂ ದೇಹದ ಶಕ್ತಿಯನ್ನು ಕುಗ್ಗಿಸುವ ಪರಿಣಾಮಗಳನ್ನುಂಟು ಮಾಡಬಹುದು. ಆದ್ದರಿಂದ ಬೇವಿನ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ

- ನೀಮ್ ಎಕ್ಸ್‌ಟ್ರಾಕ್ಟ್ ಕ್ಯಾಪ್ಸುಲ್‌ಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ನೀಮ್ ಎಕ್ಸ್‌ಟ್ರಾಕ್ಟ್ ಕ್ಯಾಪ್ಸುಲ್‌ಗಳು ಅಥವಾ ಗಟ್ಟಿಯಾದ ಸಾಂದ್ರ ರೂಪಗಳು ಬಹಳ ಜನಪ್ರಿಯವಾಗಿವೆ. ಆದರೆ ಇಂಥ ಎಕ್ಸ್‌ಟ್ರಾಕ್ಟ್‌ಗಳು ಬಹಳ ತೀವ್ರವಾದ ಪರಿಣಾಮ ಹೊಂದಿದ್ದು, ಕೆಲವೊಮ್ಮೆ ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚು ಬಲವಾದ ಪರಿಣಾಮ ನೀಡಬಹುದು.

ಆಯುರ್ವೇದದ ದೃಷ್ಟಿಯಲ್ಲಿ ಸಾಮಾನ್ಯವಾಗಿ ಸಸ್ಯವನ್ನು ಸಂಪೂರ್ಣ ರೂಪದಲ್ಲಿ ಅಥವಾ ಸಮತೋಲನಗೊಳಿಸಿದ ಔಷಧಿಯ ಸಂಯೋಜನೆಗಳಲ್ಲಿ ಬಳಸುವುದು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಬೇವಿನ ಎಕ್ಸ್‌ಟ್ರಾಕ್ಟ್ ಕ್ಯಾಪ್ಸುಲ್‌ಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯಕ.

ಒಟ್ಟಾರೆ, ಯಾವುದೇ ಔಷಽಯಂತೆಯೇ ಬೇವನ್ನು ಕೂಡ ಸಮರ್ಪಕ ಪ್ರಮಾಣದಲ್ಲಿ, ಸೂಕ್ತ ಸಮಯದಲ್ಲಿ ಮತ್ತು ಸರಿಯಾದ ಸಂಯೋಜನೆಯಲ್ಲಿ ಬಳಸಿದಾಗ ಮಾತ್ರ ಉತ್ತಮ ಫಲಿತಾಂಶ ನೀಡುತ್ತದೆ. ಆಯುರ್ವೇದದ ತತ್ವದಂತೆ, ವ್ಯಕ್ತಿಯ ಪ್ರಕೃತಿ, ವಯಸ್ಸು ಮತ್ತು ದೇಹಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಬಳಸುವುದು ಅತ್ಯಂತ ಮುಖ್ಯ.