Vinayaka M Bhat Column: ದಂಡಂ ದಶಗುಣಂ ಅಂದರೆ ದಂಡನೆಯ ದಶವಿಧವೇ ?
ನಮ್ಮ ಕಡೆಗೆ ಊಟ ಮಾಡಲು ಬಳಸುವುದನ್ನು ಬಟ್ಟಲೆಂತಲೂ, ನೀರು ಅಥವಾ ಉಳಿದ ದ್ರವ ಪದಾರ್ಥ ಗಳನ್ನು ಕುಡಿಯಲು ಬಳಸುವ ಪಾತ್ರೆಯನ್ನು ತಟ್ಟೆಯೆಂತಲೂ ಕರೆಯುತ್ತಾರೆ. ಅದೇ ಹಳೆಮೈಸೂರು ಭಾಗಕ್ಕೆ ಬಂದರೆ ಇದು ತಿರುಗಾಮುರುಗಾ ಆಗಿ ಬಿಡುತ್ತದೆ. ಊಟ ಮಾಡಲು ತಟ್ಟೆ, ಸಾರು ಕುಡಿಯಲು ಬಟ್ಟಲು ಎನ್ನುತ್ತಾರೆ. ಇರಲಿ, ಪ್ರಸ್ತುತ ‘ದಂಡಂ ದಶಗುಣಂ’ ಎನ್ನುವ ಮಾತನ್ನೇ ನೋಡುವುದಾದರೆ, ಈ ಪದಪುಂಜವನ್ನು ದಂಡನೆಯ/ ಶಿಕ್ಷೆಯ ಭಾವದಿಂದಲೇ ಅನಾದಿಯಿಂದ ಬಳಸಿಕೊಂಡು ಬರಲಾಗಿದೆ.
-
ವಿದ್ಯಮಾನ
‘ಎಮ್ಮೆ ಚರ್ಮದವರು, ಹಾಗಾಗಿ ಶಾರೀರಿಕವಾಗಿ ದಂಡನೆಯಾದಾಗಲೇ ಅಂಥವರಿಗೆ ಬುದ್ಧಿ ಬರುವುದು, ಇವ್ರಿಗೆ ಬರೀ ಬಾಯಿಮಾತಲ್ಲಿ ಹೇಳಿದರೆ ಅರ್ಥವಾಗದು’ ಎನ್ನುವುದನ್ನು ಹೇಳಲು ‘ದಂಡಂ ದಶಗುಣಂ’ ಎನ್ನುವ ಸಂಸ್ಕೃತ ಪದಪುಂಜವನ್ನು ಬಹುವಾಗಿ ಬಳಸುವುದು ನಮ್ಮಲ್ಲಿ ರೂಢಿಯಲ್ಲಿದೆ. ರಾಜಕಾರಣಿಗಳ ವಿಷಯದಲ್ಲಿ ಮಾತನಾಡುವಾಗ ಕನ್ನಡದ ಪ್ರಸಿದ್ಧ ಟಿವಿ ವಾರ್ತಾ ವಾಚಕರುಗಳೂ ಈ ಪದಪುಂಜವನ್ನೇ ಬಳಕೆ ಮಾಡುವುದನ್ನು ನೀವು ಗಮನಿಸಿರುತ್ತೀರಿ. ಅವರು ಗಳು ‘ದಂಡಂ ದಶಗುಣಂ ಭವೇತ್’ ಎಂದು ಚರಣವನ್ನೂ ಪೂರ್ಣ ಮಾಡುವುದಿಲ್ಲ.
ಹೀಗೆ ನಮ್ಮಲ್ಲಿ ಅನೇಕ ಕನ್ನಡ ಶಬ್ದಗಳನ್ನು ಅಥವಾ ಸಂಸ್ಕೃತ ವಾಕ್ಯಗಳನ್ನು ಮೂಲ ಅರ್ಥಕ್ಕಿಂತ ಭಿನ್ನವಾಗಿ ಬಳಸುತ್ತಾ ಬರಲಾಗಿರುವ ಉದಾಹರಣೆಗಳಿವೆ. ಪ್ರವೀಣ ಎನ್ನುವ ಪದವನ್ನು ಯಾವುದೇ ವಿಷಯದಲ್ಲಿ ಕುಶಲ, ಪರಿಣತ, ಕೋವಿದ ಅಥವಾ ನೈಪುಣ್ಯವುಳ್ಳ ವ್ಯಕ್ತಿ ಎನ್ನುವುದಕ್ಕೆ ಬಳಸುತ್ತೇವೆ. ಆದರೆ, ‘ಪ್ರಕಷ್ಠೇನ ವೀಣಾಂ ವದಯತೀತಿ ಪ್ರವೀಣಃ’ ಅಂದರೆ ಯಾರು ವೀಣಾವಾದನದಲ್ಲಿ ಕುಶಲನೋ ಅವನನ್ನು ಮಾತ್ರ ಪ್ರವೀಣ ಅಂತ ಕರೆಯಬೇಕು.
ನಮ್ಮ ಕಡೆಗೆ ಊಟ ಮಾಡಲು ಬಳಸುವುದನ್ನು ಬಟ್ಟಲೆಂತಲೂ, ನೀರು ಅಥವಾ ಉಳಿದ ದ್ರವ ಪದಾರ್ಥ ಗಳನ್ನು ಕುಡಿಯಲು ಬಳಸುವ ಪಾತ್ರೆಯನ್ನು ತಟ್ಟೆಯೆಂತಲೂ ಕರೆಯುತ್ತಾರೆ. ಅದೇ ಹಳೆಮೈಸೂರು ಭಾಗಕ್ಕೆ ಬಂದರೆ ಇದು ತಿರುಗಾಮುರುಗಾ ಆಗಿ ಬಿಡುತ್ತದೆ. ಊಟ ಮಾಡಲು ತಟ್ಟೆ, ಸಾರು ಕುಡಿಯಲು ಬಟ್ಟಲು ಎನ್ನುತ್ತಾರೆ. ಇರಲಿ, ಪ್ರಸ್ತುತ ‘ದಂಡಂ ದಶಗುಣಂ’ ಎನ್ನುವ ಮಾತನ್ನೇ ನೋಡುವುದಾದರೆ, ಈ ಪದಪುಂಜವನ್ನು ದಂಡನೆಯ/ ಶಿಕ್ಷೆಯ ಭಾವದಿಂದಲೇ ಅನಾದಿಯಿಂದ ಬಳಸಿಕೊಂಡು ಬರಲಾಗಿದೆ.
ಇದನ್ನೂ ಓದಿ: Vinayaka M Bhat Column: ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅಂದಾಂಗಾಯ್ತು
ಚಿಕ್ಕವರಿದ್ದಾಗಿನಿಂದ ಏನು ಕೇಳಿಕೊಂಡು ಬಂದಿದ್ದೇವೆಯೋ, ಅದನ್ನೇ ರೂಢಿಸಿಕೊಂಡು ಬಂದಿ ದ್ದೇವೆ. ಹಾಗಂದರೆ ಏನಿರಬಹುದು? ಹಾಗೆ ಏಕಿರಬಹುದು ಎನ್ನುವುದನ್ನು ಆಲೋಚನೆ ಯನ್ನೇ ಮಾಡಲಿಲ್ಲ ನಾವು ಅಥವಾ ತಿಳಿದವರನ್ನು ಕೇಳುವುದಕ್ಕೂ ಹೋಗಲಿಲ್ಲ. ಸಾರ್ವತ್ರಿಕವಾಗಿ ಬಳಕೆಯಲ್ಲಿರುವುದರಿಂದ ಹೇಗಿದ್ದರೂ ಎಲ್ಲರಿಗೂ ಅರ್ಥವಾಗುತ್ತೆ, ನಾವು ಹೇಳ ಹೊರಟಿರುವ ವಿಷಯ ‘ಕಮ್ಯುನಿಕೇಟ್’ ಆಗುತ್ತೆ ಮತ್ತೇನು ಎನ್ನುವ ಭಾವ ನಮ್ಮದು.
ಸಂಸ್ಕೃತ ಬಾರದವರೂ ಅಥವಾ ಸಂಸ್ಕೃತ ಬೇಡ ಎನ್ನುವವರೂ ಇಂಥಾ ಸಂಸ್ಕೃತದ ಅರ್ಧ ಮರ್ಧ ಮಾತನ್ನು, ಶ್ಲೋಕಾರ್ಧವನ್ನು ತಮಗರಿವಿಲ್ಲದಂತೆ ಆಗಾಗ ಬಳಸುವುದು ಇದೆ. ಮಾತಿನಲ್ಲಿ ಸಂಸ್ಕೃತ ಶಬ್ದ ಅಥವಾ ವಾಕ್ಯಗಳನ್ನು ಬಳಸಿದಾಗಲೇ ಮಾತಿನ ತೂಕ ಹೆಚ್ಚುವುದು ಎನ್ನುವ ಭಾವನೆಯೂ ಕೆಲವರಿಗಿದೆ ಬಿಡಿ. ಇದರಲ್ಲಿನ ದಂಡವನ್ನೂ ಶಿಕ್ಷೆಗೇ ಬಳಸುತ್ತಾರ ಅಂದರೆ, ‘ದಶಗುಣಂ ಭವೇತ್’ ಎನ್ನುವ ಶಬ್ದಕ್ಕೇನಾದರೂ ಅರ್ಥ ಬೇಕಲ್ಲ? ಅದೆಲ್ಲ ಗೊತ್ತಿಲ್ಲ, ಎಲ್ಲರೂ ಹೇಳುತ್ತಾರೆ, ನಾವೂ ಹೇಳುವುದು ಅಂತಾಗಿ ಬಿಟ್ಟಿದೆ.
ವಾಸ್ತವಿಕವಾಗಿ ದಂಡಂ ದಶಗುಣಂ ಭವೇತ್ ಎನ್ನುವುದು ಸಂಸ್ಕೃತ ಶ್ಲೋಕವೊಂದರ ಉತ್ತರಾ ರ್ಧದ ಒಂದು ಭಾಗ, ಇದು (ಬಡಿಗೆ/ ಕೋಲು) ದಂಡಕ್ಕಿರುವ ಹತ್ತು ಉಪಯೋಗಗಳನ್ನು ಹೇಳು ವುದೇ ವಿನಃ ಹತ್ತು ರೀತಿಯ ದಂಡನೆಯ ಬಗ್ಗೆ ಹೇಳುವುದಲ್ಲ. ದಂಡ ಎನ್ನುವ ಒಂದು ಸಾಮಾನ್ಯ ಶಬ್ದಕ್ಕೆ ಎಷ್ಟು ಅರ್ಥ ಕಲ್ಪಿಸಬಹುದು ನೋಡಿ, ಆಂಗ್ಲಭಾಷೆಯ Fine ಅಥವಾ ಜುಲ್ಮಾನೆ ಎಂದು ಅರ್ಥೈಸಬಹುದು, ದಂಡ ಕಟ್ಟುವುದು ತುಂಬುವುದು ಅಂತೆಲ್ಲ ಕನ್ನಡದಲ್ಲಿ ಹೇಳುತ್ತೇವಲ್ಲ. ದಂಡನೆ ಅಥವಾ ಶಿಕ್ಷೆ ಎನ್ನುವ ಅರ್ಥವಂತೂ ಇದ್ದೇ ಇದೆ.
ದಂಡ ನೀತಿ ಅಥವಾ ಭಾರತ ದಂಡ ಸಂಹಿತೆ ಅಂತೆಲ್ಲ ಇದೆಯಲ್ಲ. (ಪ್ರಾಯಶಃ ದಂಡದಿಂದ ಅಂದರೆ ಬಡಿಗೆ ಕೋಲುಗಳಿಂದ ಶಿಕ್ಷಿಸಬಹುದಾದ ಕಾರಣಕ್ಕೆ, ಶಿಕ್ಷೆಗೂ ದಂಡ ಅಥವಾ ದಂಡನೆ ಎನ್ನುವ ಅರ್ಥ ಬಂದಿರಲಿಕ್ಕೆ ಸಾಕು. ಬಡಿಯಲು ಬಳಸುವುದರಿಂದ ಅದು ಬಡಿಗೆ) ಇನ್ನು ಕನ್ನಡ ದಲ್ಲಿ ದಂಡ ಎನ್ನುವ ಶಬ್ದವನ್ನು ಏನಕ್ಕೂ ಪ್ರಯೋಜನಕ್ಕೆ ಬಾರದವರನ್ನು ಸೂಚಿಸಲೂ ಬಳಸುವುದಿದೆ.
‘ಅವನೇನೂ ಪ್ರಯೋಜನವಿಲ್ಲದವ, ಭೂಮಿಗೆ ಭಾರ ಕೂಳಿಗೆ ‘ದಂಡ’ ಎನ್ನುವ ಮಾತಿನಿಂದ ಜರಿಯುವ ರಿವಾಜಿದೆಯಲ್ಲವೇ? ದಂಡಪಿಂಡ ಅಂತಲೂ ಕರೆಯುವವರಿದ್ದಾರೆ. ಇನ್ನು, ದಂಡದ ಹಿಂದೆ ಅಕ್ಷರಗಳನ್ನು ಜೋಡಿಸಿರುವುದನ್ನು ನೋಡುವುದಾದರೆ, ರಾಜದಂಡ, ಯೋಗದಂಡ ಅಂತೇವೆ, ಕಬ್ಬಿಗೆ ಸಂಸ್ಕೃತದಲ್ಲಿ ಇಕ್ಷುದಂಡ ಅಂತ ಕರೆಯುತ್ತಾರೆ, ಶ್ರೀ ರಾಮನ ಬಿಲ್ಲಿಗೆ ಕೋದಂಡ ಅಂತ ಹೆಸರಿದೆ, ಭುಜಬಲರ ಪರಾಕ್ರಮ ವನ್ನು ಹೇಳಲು ದೋರ್ದಂಡ ಎನ್ನುವ ಪದದ ಬಳಕೆ ಯಿದೆ.
ಒಟ್ಟಿನಲ್ಲಿ ಈ ಎಲ್ಲ ಪದಗಳಲ್ಲಿ ದಂಡದ ಬಳಕೆಯಿದೆ. ಇವೆಲ್ಲ ಬಡಿಗೆಯನ್ನೇ ಸೂಚಿಸುತ್ತವೆ. ದಂಡವೆಂದರೆ ಉದ್ದನೆಯ ಕೋಲು ಬಡಿಗೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ದಂಡವತ್ ಪ್ರಣಾಮ ಮಾಡುವುದು ಅಂತಾರಲ್ಲ, ಅಂದರೆ ಒಂದು ಕೋಲು ನಿರ್ಜೀವವಾಗಿ ನೆಲದ ಮೇಲೆ ಬಿದ್ದುಕೊಂಡಿರುವಾಗ ಹೇಗೋ ಹಾಗೆ ಸಂಪೂರ್ಣ ಸಮರ್ಪಣಾ ಭಾವದಿಂದ ನಮಸ್ಕಾರ ಮಾಡುವುದು. ಉದ್ದಂಡ ಪ್ರಣಾಮ ಎನ್ನುವುದೂ ಇದೇ ರೀತಿಯ ಸಾಷ್ಟಾಂಗ ಪ್ರಣಾಮವನ್ನೇ ಸೂಚಿಸುತ್ತವೆ. ವೇದ ಶಿಕ್ಷಣದಲ್ಲಿ ದಂಡಕ್ರಮ ಪಾರಾಯಣ ಅಂತ ಇದೆಯಲ್ಲ (ವಿವರಣೆಗಾಗಿ ವಿಶ್ವವಾಣಿಯಲ್ಲಿ ಪ್ರಕಟವಾದ 7.12.2025ರ ಮಹೇಶ ರೇಖೆಯವರ ಕುರಿತ ನನ್ನ ಲೇಖನವನ್ನು ಗಮನಿಸಬಹುದು) ಅಲ್ಲೂ ದಂಡ ಎಂದರೆ ನೇರವಾದ ಕೋಲನ್ನೇ ಸೂಚಿಸುತ್ತದೆ.
ದಂಡ ಎನ್ನುವ ಶಬ್ದವನ್ನು ಸಂಸ್ಕೃತದಲ್ಲಿ ಶಿಕ್ಷೆಗೆ ಪರ್ಯಾಯವಾಗಿ ಬಳುಸುವುದು ಹೌದಾದರೂ ಮೂಲದಲ್ಲಿ ದಂಡವೆಂದರೆ ನೆಟ್ಟನೆಯ ಕೋಲು ಬಡಿಗೆ ಎನ್ನುವ ಅರ್ಥವೇ ಇದೆ. ಸಂಸ್ಕೃತದ ದಂಡದಲ್ಲಿ ಯಾವುದೇ ಗಂಡಾಂತರವಿಲ್ಲ, ತೊಂದರೆ ಇರುವುದು ಕನ್ನಡದ ದಂಡದಲ್ಲಿ! ವ್ಯಾಕರಣದ ಪ್ರಕಾರ ದಂಡ ಪದವು ‘ದಣ್ಡ್’ ಧಾತುವಿನಿಂದ ನಿಷ್ಪನ್ನವಾಗಿದ್ದು ಅಂತ ಹೇಳಲಾಗು ತ್ತದೆ.
‘ದಣ್ಡ್’ ಎಂದರೆ ಉಪತಾಪೇ ಅಥವಾ ದಂಡನೆ ಮಾಡು, ಶಿಕ್ಷಿಸುವುದು ಎಂದಾಗುತ್ತದೆ. ‘ದಣ್ಡ್’ ಧಾತು ವಿಗೆ ‘ಅಚ್’ ಪ್ರತ್ಯಯ ಸೇರಿದಾಗ ‘ದಂಡಃ’ ಎಂಬ ನಾಮಪದವಾಗುತ್ತದೆ ಎನ್ನುವುದು ಸಂಸ್ಕೃತ ವ್ಯಾಕರಣ ತಿಳಿದವರ ಅಭಿಪ್ರಾಯ. ಪ್ರಾಚೀನ ವ್ಯಾಕರಣ ಗ್ರಂಥವಾದ ನಿರುಕ್ತದಲ್ಲೂ ದಂಡ ಪದಕ್ಕೆ ‘ದಂಡನಾತ್ ದಂಡಃ’ ತಪ್ಪು ಮಾಡಿದವರನ್ನು ನಿಯಂತ್ರಿಸಲು, ತಿದ್ದಲು ಅಥವಾ ಶಿಕ್ಷಿಸಲು ಇದರ ಬಳಕೆಯಿರುವುದರಿಂದ ಇದಕ್ಕೆ ‘ದಂಡ’ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಅದಮ್ಯರನ್ನು ದಮನ ಮಾಡುವ ಸಾಧನವೇ ದಂಡ. ಕಾರ್ಯಸಿದ್ಧಿ ಗಾಗಿ ರಾಜ ಅನುಸರಿಸಬೇಕಾದ ನಾಲ್ಕು ಉಪಾಯಗಳಲ್ಲೂ ದಂಡ ಎನ್ನುವ ಕೊನೆಯ ಉಪಾಯ ವೊಂದಿದೆ, ಸಾಮ, ದಾನ, ಭೇದ ಮತ್ತು ದಂಡ ಇವುಗಳನ್ನು ಚತುರೋಪಾಯಗಳು ಎನ್ನುತ್ತಾರೆ. ಮಿಕ್ಕ ರಾಜರನ್ನು ತನ್ನ ಹಿತಾನುಸಾರ ಇಟ್ಟುಕೊಳ್ಳಲು ಭೂಪತಿಯಾದವ ಮೊದಲು ಸಾಮವನ್ನು ಮಾತ್ರ ಬಳಸಿ ನೋಡಬೇಕು. ಆಗದಿzಗ ದಾನವನ್ನು ಪ್ರಯೋಗಿಸಬೇಕು.
ಸಾಧುಗಳಿರಲಿ, ಅಸಾಧುಗಳಿರಲಿ, ಎಲ್ಲರೂ ದಾನಕ್ಕೆ ಒಲಿಯುವುದು ಸಹಜವೇ ಅಲ್ಲವೇ. ಸಾಮ, ದಾನಗಳೆರಡರಿಂದಲೂ ಸಾಧಿಸಲಾಗದಿದ್ದರೆ ಭೇದವನ್ನು ಪ್ರಯೋಗಿಸಬೇಕು. ಭೇದವೆಂದರೆ ಒಡಕನ್ನು ಉಂಟು ಮಾಡುವುದು, ಈ ಮೂರಕ್ಕೂ ಬಗ್ಗದ ವೈರಿಯನ್ನು ದಾರಿಗೆ ತರಲು ನಾಲ್ಕನೆಯ ದಾದ ದಂಡೋಪಾಯವೇ ಗತಿ. ದಂಡ ಎಂದರೆ ಇಲ್ಲಿ ದಂಡನೆ ಎಂದರ್ಥ.
ಸಿದ್ದಯ್ಯ ಪುರಾಣಿಕರ ‘ಅಜ್ಜನ ಕೋಲಿದು ನನ್ನಯ ಕುದುರೆ’ ಪದ್ಯವನ್ನು ‘ದಂಡಂ ದಶಗುಣಂ’ ಎನ್ನುವುದಕ್ಕೆ ಪೂರಕವಾಗಿ ಅಥವಾ ಹನ್ನೊಂದನೆಯ ಗುಣವಾಗಿ ನೋಡಬಹುದು. ಇದರಲ್ಲಿ ಪುರಾಣಿಕರು ದಂಡವನ್ನು ಕುದುರೆಯಾಗಿ ವರ್ಣಿಸಿದ್ದಾರೆ.
ದಂಡ ಎಂಬ ಪದಕ್ಕೆ ಹಲವು ಅರ್ಥಗಳಿವೆ, ಅಥವಾ ಅದರ ಪ್ರಯೋಗದ ಆಧಾರದಲ್ಲಿ ಅರ್ಥ ಭಿನ್ನವಾಗುತ್ತೆ ಎನ್ನುವುದನ್ನೆ ನೋಡಿದ ಹಾಗಾಯಿತು. ಆದರೆ ದಂಡಂ ದಶಗುಣಂ ಭವೇತ್ ಎಂದರೆ ಏನು ಎನ್ನುವ ಪ್ರಶ್ನೆ ಹಾಗೆಯೇ ಉಳಿಯಿತು. ಈ ಪದದ ಅರ್ಥ, ಹೊಡೆಯುವುದು ಹತ್ತು ಪಟ್ಟು ಪರಿಣಾಮಕಾರಿ ಅಥವಾ ಹತ್ತು ಪಟ್ಟು ಹೆಚ್ಚು ದಂಡಿಸಬೇಕು ಎಂತಲೋ ಅಥವಾ ಹತ್ತು ರೀತಿಯಿಂದ ದಂಡಿಸಬೇಕು ಎನ್ನುವುದು ಖಂಡಿತ ಅಲ್ಲ. ಮೂಲತಃ ದಂಡಂ ದಶಗುಣಂ ಭವೇತ್ ಎನ್ನುವುದು ಸಂಸ್ಕೃತ ಶ್ಲೋಕವೊಂದರ ಉತ್ತರಾರ್ಧದ ಕೊನೆಯ ಭಾಗ.
ದಂಡಂ ದಶಗುಣಂ ಭವೇತ್ ಎಂದರೆ ಕೋಲು, ಬಡಿಗೆ, ಬೆತ್ತ ಇವುಗಳು 10 ವಿಭಿನ್ನ ಗುಣಗಳನ್ನು ಹೊಂದಿದೆ ಅಥವಾ ಹತ್ತು ರೀತಿಯಿಂದ ಉಪಯೋಗಿಸಬಹುದು ಎನ್ನುವುದಾಗುತ್ತದೆ. ಶ್ಲೋಕದ ಮುಕ್ಕಾಲು ಭಾಗವನ್ನು ಮರೆತು ಕೊನೆಯ ಭಾಗವನ್ನು ಮಾತ್ರ ತಪ್ಪಾಗಿ ಅರ್ಥಮಾಡಲಾಗುತ್ತಿದೆ. ‘ವಿಶ್ವಾಮಿತ್ರೇಚ ವಾರ್ಧಕ್ಯೇ ರಾತ್ರೌ ಅಪ್ಸುಚ ಕರ್ದಮೇ, ಅಂಧೇ ಸರ್ಪೇಚ ಕ್ರೀಡೇಚ ದಂಡಂ ದಶಗುಣಂ ಭವೇತ್’ ಎನ್ನುವುದು ಆ ಶ್ಲೋಕದ ಪೂರ್ಣ ಪಾಠ.
ವಿಶ್ವಾಮಿತ್ರೇಚ ಎನ್ನುವುದನ್ನು ನೋಡಿ, ಋಷಿ ವಿಶ್ವಾಮಿತ್ರರಿಗೂ ಈ ಶ್ಲೋಕಕ್ಕೂ ಏನು ಸಂಬಂಧ ಏಂದು ಕೇಳಬೇಡಿ, ಇದರಲ್ಲಿರುವುದು ಬ್ರಹ್ಮರ್ಷಿ ವಿಶ್ವಾಮಿತ್ರರಲ್ಲ. ಈ ಶ್ಲೋಕಕ್ಕೆ ವಾಸ್ತವವಾಗಿ ಈ ವಿಶ್ವಾಮಿತ್ರ ಎನ್ನುವ ಪದವೇ ಪ್ರಮುಖವಾಗಿದೆ. ಅದನ್ನು ಅರ್ಥಮಾಡಿಕೊಳ್ಳದ ಹೊರತು ಶ್ಲೋಕದ ಸರಿಯಾದ ಅರ್ಥ ಸಿಗುವುದಿಲ್ಲ. ಇಲ್ಲಿ ವಿಶ್ವಾಮಿತ್ರ ಎನ್ನುವುದು, ವಿ, ಶ್ವ ಮತ್ತು ಅಮಿತ್ರಗಳ ಸಂಯೋಜನೆಯಾಗಿದೆ.
‘ವಿ’ ಎಂದರೆ ವಿಹಂಗ ಅಥವಾ ಪಕ್ಷಿ. ‘ಶ್ವಾ’ ಎಂದರೆ ಶ್ವಾನ ಅಥವಾ ನಾಯಿ ಹಾಗೂ ‘ಅಮಿತ್ರ’ ಎಂದರೆ ಸ್ನೇಹಿತ ಅಲ್ಲದವನು ಅಥವಾ ವೈರಿ. ದಂಡವನ್ನು ತೋಟಗದ್ದೆಗಳ ಬೆಳೆ ಹಾನಿ ಮಾಡುವ ಪಕ್ಷಿಯ ದಾಳಿಯನ್ನು ಹಿಮ್ಮೆಟ್ಟಿಸಲು, ನಾಯಿಗಳನ್ನು ಬೆದರಿಸುವುದು, ಶತ್ರುಗಳ ದಾಳಿಯ ವಿರುದ್ಧ ಆಯುಧವಾಗಿ ಬಳಸುವುದು, ವಾರ್ಧಕ್ಯ ಅಥವಾ ವೃದ್ಧಾಪ್ಯದಲ್ಲಿ ಆಧಾರವಾಗಿ ಬಳಸುವುದು, ರಾತ್ರಿಯ ಕತ್ತಲೆಯಲ್ಲಿ ನಡೆಯುವಾಗ ಹಾವು ಹರಣೆಗಳನ್ನು ಓಡಿಸಲು ಅನುಕೂಲಕರ ಆಯುಧ ವಾಗಿ ಬಳಸುವುದು. ಅಪ್ಸು ಅಂದರೆ ನೀರು. ನದಿ ಅಥವಾ ಹೊಳೆ ದಾಟುವಾಗ ಕೋಲನ್ನು ಪ್ರತಿ ಹೆಜ್ಜೆಯಲ್ಲೂ ನೀರಿನ ಆಳವನ್ನು ಕಂಡುಹಿಡಿಯುವ ಸಾಧನವಾಗಿ ಬಳಸವುದು, ಕರ್ದಮೆಯಲ್ಲಿ ಅಂದರೆ ಜೌಗು ಅಥವಾ ಹೂಳು ನೆಲದಲ್ಲಿ ನಡೆಯುವಾಗ. ಕಣ್ಣಿಲ್ಲದ ಕುರುಡರಿಗೆ ಬೆಂಬಲವಾಗಿ.
ಸರ್ಪ ಅಥವಾ ಹಾವುಗಳೊಂದಿಗೆ ವ್ಯವಹರಿಸುವಾಗ. ಕ್ರೀಡೆ ಮತ್ತು ಆಟಗಳಲ್ಲಿ (ಕೋಲುಗಳನ್ನು ಚಿನ್ನಿದಾಂಡು, ದಾಂಡಿಯಾ ಅನೇಕ ಆಟಗಳಲ್ಲಿ ಬಳಸಲಾಗುತ್ತದೆ. ಇವತ್ತಿಗೂ ಹಾಕಿ, ಕ್ರಿಕೆಟ, ಸ್ನೂಕರ್, ಗಾಲ) ಹೀಗೆ ಹತ್ತು ವಿಧದಿಂದ ದಂಡವನ್ನು ಬಳಸಬಹುದು ಎನ್ನವುದು ದಂಡಂ ದಶಗುಣಂ ಭವೇತ್ ಎನ್ನುವುದಕ್ಕೆ ಅರ್ಥವಾಗುತ್ತದೆ. ಸರಿಯಾದ ಅರ್ಥ ತಿಳಿದಾಗ ನಮ್ಮ ಕಲ್ಪನೆ ಎಷ್ಟು ಹಾಸ್ಯಾಸ್ಪದ ಅಂತ ಅನಿಸಿಬಿಡುತ್ತಲ್ಲವೆ!
ಯಾವುದೋ ಶ್ಲೋಕದ ಪೂರ್ವಾರ್ಧವನ್ನೋ ಅಥವಾ ಉತ್ತರಾರ್ಧವನ್ನು ಮಾತ್ರ ಬಳಸುವುದ ರಿಂದ ಆಗುವ ಅನಾಹುತಗಳಿವು. ಅವು ಸ್ವಾಭಾವಿಕವಾಗಿ ಪೂರ್ಣ ಅರ್ಥವನ್ನು ಸಂವಹನ ಮಾಡುವುದಿಲ್ಲ ಅಥವಾ ವಿರುದ್ಧಾರ್ಥವನ್ನೇ ಹೇಳಬಹುದಾದ ಸಂಭವನೀಯತೆಯೂ ಇದೆ. ಉದಾಹರಣೆಗೆ ‘ದೈವೀಬಲೇ ದುರ್ಬಲೇ’ ಎಂದು ಸುಮ್ಮನಾಗಿಬಿಟ್ಟರೆ, ಅಜ್ಞರು ಏನಂದುಕೊಳ್ಳಬೇಕು? ದೇವರ ಬಲ ಇರುವವರು ದುರ್ಬಲರು ಎಂತಲೋ ಅಥವಾ ರಾಕ್ಷಸೀ ಬಲದ ಮುಂದೆ ದೇವರ ಬಲವೇ ದುರ್ಬಲ ಎಂದಂತಾಗುತ್ತದೆ.
ಆದರೆ ಆ ಶ್ಲೋಕದ ಪೂರ್ಣಪಾಠವನ್ನು ನೋಡಿದಾಗ ಮಾತ್ರ ನಿಜವಾದ ಅರ್ಥ ನಮಗೆ ತಿಳಿದು ಬರುತ್ತದೆ. ಮೂಲ ಶ್ಲೋಕ ಇರುವುದು ಹೀಗೆ. ‘ಜಾತಃ ಬ್ರಹ್ಮಕುಲಾತ್ಮಜೋ ಧನಪತಿಃ ಯಃಕುಂಭಕರ್ಣಾಗ್ರಜಃ ಪುತ್ರಃಶಕ್ರಜಿತುಃ ಸ್ವಯಂದಶಶಿರೋ ಮಧ್ಯಂ ಸಮುದ್ರೇ ಗೃಹಂ ದೈತ್ಯಃಕಾಮಧರೋ ರಥಾಸ್ಯ ವಿಜಯೋ ಪೂರ್ಣಾಃಭುಜಾವಿಂಶತಿಃ ಸರ್ವಂ ನಿಷ್ಪಲಿತಂ ತದೇವ ವಿಧಿನಾ ದೈವೀಬಲೇ ದುರ್ಬಲೇ.’ ಅಂದರೆ, ಯಾರು ಶ್ರೇಷ್ಠವಾದ ಬ್ರಾಹ್ಮಣ ಕುಲದಲ್ಲಿ ಜನಿಸಿ, ಅತ್ಯಂತ ಶ್ರೀಮಂತನಾಗಿದ್ದು, ಕುಂಭಕರ್ಣನಂಥಾ ಶೂರನ ಅಣ್ಣನಾಗಿ, ಇಂದ್ರನನ್ನೇ ಗೆದ್ದಿದ್ದವ ನನ್ನು ಪುತ್ರನನ್ನಾಗಿ ಪಡೆದು, ಹತ್ತು ಶಿರವನ್ನು ಪಡೆದವನಾಗಿ, ಅಭೇದ್ಯವಾದ ಸಮುದ್ರದ ಮಧ್ಯದಲ್ಲಿ ಅರಮನೆಯುಳ್ಳವನಾಗಿ, ತನ್ನ ಅಗತ್ಯಕ್ಕೆ ತಕ್ಕುದಾದ ರೂಪವನ್ನು ಧರಿಸಬಹುದಾದ ಮಾಯಾವಿ ದೈತ್ಯನಾಗಿ, ‘ವಿಜಯ’ ಎನ್ನುವ ಹೆಸರಿನ ರಥವನ್ನು ಉಳ್ಳವನಾಗಿ ಮತ್ತು ಒಂದ ಎರಡ, ಇಪ್ಪತ್ತು ಪೂರ್ಣ ಭುಜವುಳ್ಳವನಾಗಿದ್ದರೂ, ದೈವ ಬಲ ವಿಹೀನನಾಗಿದ್ದರಿಂದ ಅಥವಾ ದುರ್ಬಲ ವಾಗಿರುವುದರಿಂದ ರಾಕ್ಷಸಾಧಿಪತಿ ರಾವಣನಿಗೆ ಮೇಲೆ ಹೇಳಿದ ಎಲ್ಲಾ ಸೌಭಾಗ್ಯಗಳೂ ನಿಷ್ಪಲಿತವಾ ಗುವಂತಾಯ್ತು ಎನ್ನುವುದು ಈ ಶ್ಲೋಕದ ತಾತ್ಪರ್ಯ.
ಇದೇ ಥರದ ದಾರಿತಪ್ಪಿಸಬಹುದಾದ ಇನ್ನೊಂದು ಶ್ಲೋಕವಿದೆ ‘ದೇವೋ ದುರ್ಬಲ ಘಾತುಕಃ’ ಅಂತ ಆ ಶ್ಲೋಕ ಮುಗಿಯುತ್ತೆ. ದೈವ ನಿಂದಕರು ಈ ಕೊನೆಯ ಭಾಗವನ್ನು ಮಾತ್ರ ಬಳಸಿ, ನೋಡ್ರೀ ನಿಮ್ಮ ದೇವರೂ ದುರ್ಬಲರನ್ನೇ ‘ಟಾರ್ಗೆಟ್’ ಮಾಡೋದು ಅಂತ ಶ್ಲೋಕವೇ ಇದೆ ಅಂತ ಹೇಳಬಹುದಾಗಿದೆ. ವಾಸ್ತವಿಕವಾಗಿ ‘ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲ ಘಾತಕಃ’.
ಬಲಶಾಲಿ ಪ್ರಾಣಿಗಳಾದ ಹುಲಿ, ಆನೆ, ಕುದುರೆಗಳ ಬದಲಿಗೆ ಕುರಿಮರಿಯನ್ನು ಬಲಿಪಡೆಯುವ ಮೂಲಕ ದೇವರೂ ದುರ್ಬಲರ ಮೇಲೆಯೇ ಪ್ರಹಾರ ಮಾಡುವವನಾಗಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ದೇವರ ಹೆಸರಿನಲ್ಲಿ ಜನರು ಹುಲಿ, ಆನೆ, ಕುದುರೆಗಳ ಬದಲಿಗೆ ಅಸಹಾಯಕ ಆಡಿನ ಮರಿಯನ್ನು ಬಲಿಕೊಡುತ್ತಾರೆ, ಲೋಕದಲ್ಲಿ ದುರ್ಬಲರ ಮೇಲೆಯೇ ದೌರ್ಜನ್ಯ ನಡೆಯುತ್ತದೆ ಎಂಬ ಕಟು ಸತ್ಯವನ್ನು ನಮಗೆ ಈ ನುಡಿ ವ್ಯಂಗ್ಯವಾಗಿ ತಿಳಿಸುತ್ತದೆ.
ವಾಸ್ತವವಾಗಿ ದೇವರು ಯಾವ ಪ್ರಾಣಿಯನ್ನೂ ಬಲಿಕೊಡಲು ಹೇಳಿಲ್ಲ ಬಿಡಿ. ಮನುಷ್ಯರು ತಮ್ಮ ಸ್ವಾರ್ಥಕ್ಕೆ ದೇವರ ಹೆಸರನ್ನು ಬಳಸಿಕೊಂಡು ಸತ್ಯವನ್ನೇ ಬಲಿಕೊಡುತ್ತಿzರೆ ಅಷ್ಟೇ. ಭಾಷೆ ಯಾವುದೇ ಇರಲಿ, ಪ್ರತಿ ಪದಕ್ಕೆ ಅದರದ್ದೇ ಆದ ಹಿನ್ನೆಲೆ ಇರುತ್ತೆ, ಆ ಪದ ಉತ್ಪನ್ನವಾಗಲು ಮೂಲ ಕಾರಣವೊಂದಿ ರುತ್ತೆ. ಅದನ್ನೆ ಪದದ ನಿಷ್ಪತ್ತಿ ಅಥವಾ ವ್ಯುತ್ಪತ್ತಿ ಅಂತ ಕರೆಯುತ್ತಾರೆ. ಹಾಗೆ ಪದಗಳು ನಿಷ್ಪತ್ತಿಯ ಆಧಾರದ ಬಳಕೆಯಾದಾಗ ಮಾತು, ಬರಹ ಸುಂದರವಾಗಿಯೂ, ಅರ್ಥವತ್ತಾ ಗಿಯೂ ತೋರುತ್ತದೆ. ಅಂತೆಯೇ, ಯಾವುದೇ ಶ್ಲೋಕವನ್ನು ಸಮಗ್ರವಾಗಿ ಪರಿಭಾವಿಸಿದಾಗ ಮಾತ್ರ ಉದ್ದೇಶಿತ ಅರ್ಥ ಮನದಟ್ಟಾಗುತ್ತದೆ.