Keshava Prasad B Column: ಕರೆನ್ಸಿ ನೋಟುಗಳಿಗಿಂತ ಬಂಗಾರ-ಬೆಳ್ಳಿಗೇ ಈಗ ಮೌಲ್ಯ !
ನೋಟುಗಳನ್ನು ಮುದ್ರಿಸಿ ಹಂಚಿದರೆ ಬಡವರನ್ನೂ ಶ್ರೀಮಂತರನ್ನಾಗಿಸಬಹುದಲ್ಲವೇ? ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುವುದಿಲ್ಲವೇ? ವಾಸ್ತವವಾಗಿ ನೋಟುಗಳನ್ನು ಮಿತಿ ಮೀರಿ ಮುದ್ರಿಸಿ ದರೆ, ವ್ಯವಸ್ಥೆಯಲ್ಲಿ ನೋಟುಗಳು ಹೆಚ್ಚುತ್ತವೆ. ಆದರೆ ಅದರ ಬೆಲೆ ಕುಸಿಯುತ್ತದೆ. ವಸ್ತುಗಳು ಮತ್ತು ಸೇವೆಗಳ ಬೆಲೆ ಗಗನಕ್ಕೇರುತ್ತವೆ.
-
ಮನಿ ಮೈಂಡೆಡ್
ಜಗತ್ತಿನಾದ್ಯಂತ ಕರೆನ್ಸಿ ನೋಟುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಅವುಗಳ ಖರೀದಿ ಸಾಮರ್ಥ್ಯವೂ ಗಣನೀಯವಾಗಿ ಕುಸಿಯುತ್ತಿವೆ. ಅಮೆರಿಕದ ಡಾಲರ್ ಜಾಗತಿಕ ಕರೆನ್ಸಿ ಎಂಬ ಹೆಗ್ಗಳಿಕೆ ಗಳಿಸಿದ್ದರೂ, ಅದರ ಮೌಲ್ಯವೂ ಕ್ರಮೇಣ ಇಳಿಯುತ್ತಿರುವುದನ್ನು ಗಮನಿಸಬಹುದು.
ಮತ್ತೊಂದು ಕಡೆ ಬಂಗಾರ ಮತ್ತು ಬೆಳ್ಳಿಯ ದರ ಅನೂಹ್ಯವಾಗಿ ಏರುತ್ತಿದೆ. ಈ ಅಮೂಲ್ಯ ಲೋಹ ಗಳ ದರ ಇಳಿಕೆಯಾಗುವ ನಿರೀಕ್ಷೆ ಹೊತ್ತವರಿಗೆ ನಿರಾಸೆಯಾಗಿದೆ. ಕೇವಲ ವಾರದ ಹಿಂದೆ ಇದ್ದ ದರ ಈಗಿಲ್ಲ. ಏಕೆ ಹೀಗೆ ಎಂದು ಜನ ಕೇಳುತ್ತಿದ್ದಾರೆ!
ಭಾರತದಲ್ಲಿ 2023ರ ಜನವರಿಯಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ 52000 ರುಪಾಯಿ ಆಸುಪಾಸಿನಲ್ಲಿತ್ತು. ಈಗ ಅದೇ ಚಿನ್ನದ ದರ 1 ಲಕ್ಷದ 40 ಸಾವಿರ ರುಪಾಯಿಗೆ ಜಿಗಿದಿದೆ. ಮೂರೇ ವರ್ಷದಲ್ಲಿ ಇಮ್ಮಡಿಗಿಂತಲೂ ಜಾಸ್ತಿಯಾಗಿದೆ. ದರ ಯಾವಾಗ ಇಳಿಯಲಿದೆ ಎಂದರೆ ಉತ್ತರ ಸಿಗು ತ್ತಿಲ್ಲ. ಆದರೆ ಇನ್ನು ಬಂಗಾರದ ದರ ಇಳಿದರೂ, ಚೂರುಪಾರು ಇಳಿಯಬಹುದಷ್ಟೇ ಎಂಬ ಭವಿಷ್ಯ ವನ್ನಂತೂ ಜನಸಾಮಾನ್ಯರೂ ಹೇಳುತ್ತಾರೆ. ಈ ಭಾರಿ ಪಲ್ಲಟದ ಹಿಂದಿರುವ ಜಾಗತಿಕ ವಿದ್ಯಮಾನ ಗಳನ್ನು, ಕರೆನ್ಸಿ ನೋಟುಗಳು ಕಿಮ್ಮತ್ತು ಕಳೆದುಕೊಳ್ಳುತ್ತಿರುವ ಟ್ರೆಂಡ್ ಅನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ.
ಮುಖ್ಯವಾಗಿ ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ, ಹೆಚ್ಚುತ್ತಿರುವ ಹಣದುಬ್ಬರ, ಜಿಯೊಪಾಲಿಟಿಕಲ್ ಅಸ್ಥಿರತೆಗಳು ಕರೆನ್ಸಿಗಳ ಮೌಲ್ಯ ನಷ್ಟಕ್ಕೆ ಕಾರಣವಾಗಿವೆ. ಇಂಥ ಸನ್ನಿವೇಶದಲ್ಲಿ ಚಿನ್ನ ಆಪದ್ಧನ ವಾಗಿ, ಹೂಡಿಕೆಯ ಸುರಕ್ಷಿತ ತಾಣವಾಗಿ ಹೊರಹೊಮ್ಮಿದೆ. ಮತ್ತೊಂದು ಕಡೆ ಬೆಳ್ಳಿಯು ಉದ್ದಿಮೆ ಗಳಲ್ಲೂ ವ್ಯಾಪಕ ಬೇಡಿಕೆ ಪಡೆಯುತ್ತಿದೆ, ಹೀಗಾಗಿ ದರವನ್ನು ಏರಿಸಿಕೊಂಡಿದೆ.
ಇದನ್ನೂ ಓದಿ: Keshava Prasad B Column: ಟ್ರಂಪ್ ಸುಂಕಾಸ್ತ್ರಕ್ಕೆ ಭಾರತ ಈಗಲೂ ಡೋಂಟ್ ಕೇರ್ !
ನೋಟುಗಳನ್ನು ಮುದ್ರಿಸಿ ಹಂಚಿದರೆ ಬಡವರನ್ನೂ ಶ್ರೀಮಂತರನ್ನಾಗಿಸಬಹುದಲ್ಲವೇ? ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುವುದಿಲ್ಲವೇ? ವಾಸ್ತವವಾಗಿ ನೋಟುಗಳನ್ನು ಮಿತಿ ಮೀರಿ ಮುದ್ರಿಸಿ ದರೆ, ವ್ಯವಸ್ಥೆಯಲ್ಲಿ ನೋಟುಗಳು ಹೆಚ್ಚುತ್ತವೆ. ಆದರೆ ಅದರ ಬೆಲೆ ಕುಸಿಯುತ್ತದೆ. ವಸ್ತುಗಳು ಮತ್ತು ಸೇವೆಗಳ ಬೆಲೆ ಗಗನಕ್ಕೇರುತ್ತವೆ.
ಆದ್ದರಿಂದ ಉತ್ಪಾದನೆ ಇಲ್ಲದೆ ಕೇವಲ ನೋಟುಗಳನ್ನು ಮುದ್ರಿಸಿ ಹಂಚಿದರೆ ಉಪಯೋಗವಿಲ್ಲ. ಆಗ ಕರೆನ್ಸಿಯ ಖರೀದಿ ಸಾಮರ್ಥ್ಯ ಕುಸಿಯುತ್ತದೆ. ಅದನ್ನು ‘ಪರ್ಚೇಸಿಂಗ್ ಪವರ್ ಆಫ್ ಮನಿ’ ಎನ್ನುತ್ತಾರೆ. ಹೀಗಾಗಿ ಹಣದುಬ್ಬರ ಜಾಸ್ತಿಯಾಗಿ ಪರದಾಡುವಂತಾಗುತ್ತದೆ. ಇಂಥ ಸಂದರ್ಭದಲ್ಲಿ ಹೂಡಿಕೆದಾರರು, ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಸಂಪತ್ತಿನ ಮೌಲ್ಯವನ್ನು ರಕ್ಷಿಸಲು ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತವೆ.
ಏಕೆಂದರೆ ಅವರೆಡನ್ನೂ ನೋಟುಗಳಂತೆ ಬೇಕಾದಷ್ಟು ಮುದ್ರಿಸಲಾಗುವುದಿಲ್ಲ ಮತ್ತು ಅವುಗಳಿಗೆ ಮಿತಿ ಇದೆ. ಅಭಾವ ಇರುವುದರಿಂದಲೇ ಬಂಗಾರಕ್ಕೆ ಬೇಡಿಕೆ ಹೆಚ್ಚು.ಹಂಗರಿಯಲ್ಲಿ 1946ರಲ್ಲಿ ನೋಟುಗಳನ್ನು ಅತಿಯಾಗಿ ಮುದ್ರಿಸಿ ಹಂಚಿದ ಪರಿಣಾಮ ಪ್ರತಿ 15 ಗಂಟೆಗಳಿಗೊಮ್ಮೆ ದರ ಇಮ್ಮಡಿಯಾಗಿತ್ತು.
ಜಿಂಬಾಬ್ವೆಯಲ್ಲಿ 2000ನೇ ವರ್ಷದ ಅಂತ್ಯದ ವೇಳೆಗೆ ನೋಟುಗಳು ಬೆಲೆ ಕಳೆದುಕೊಂಡು, ಜನರು ವಿದೇಶಿ ಡಾಲರ್ ಅನ್ನು ವ್ಯವಹಾರಗಳಲ್ಲಿ ಬಳಸಿದ್ದರು. 1920ರಲ್ಲಿ ಜರ್ಮನಿಯಲ್ಲೂ ಹೆಚ್ಚು ನೋಟುಗಳನ್ನು ಮುದ್ರಿಸಿದ ಪರಿಣಾಮ ಕೆಲವೇ ದಿನಗಳಲ್ಲಿ ದರಗಳು ಡಬಲ್ ಆಗುತ್ತಿತ್ತು. ಯುಗೊಸ್ಲಾವಿಯಾ, ವೆನಿಜುವೆಲಾ, ಗ್ರೀಸ್, ಇರಾನ್‌ನಲ್ಲಿ ಇದೇ ಕಾರಣಕ್ಕಾಗಿ ನಾಗರಿಕರು ತಿರುಗಿ ಬಿದ್ದಿದ್ದರು. ವೆನಿಜುವೆಲಾದಲ್ಲಿ ಅಧ್ಯಕ್ಷರನ್ನೇ ಅಪಹರಿಸಿದರೂ ಜನ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ.
ಇರಾನ್‌ನಲ್ಲಿ ಹಿಂಸಾಚಾರ ತಾಂಡವವಾಡುತ್ತಿದ್ದು ಖಮೇನಿಯ ಸರ್ವಾಧಿಕಾರ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿದೆ. ಚೀನಾದಲ್ಲಿ 1940ರಲ್ಲಿ ಯುದ್ಧದ ಖರ್ಚುಗಳನ್ನು ಭರಿಸಲು ನ್ಯಾಷನಲಿಸ್ಟ್ ಸರಕಾರ ನೋಟುಗಳನ್ನು ಅತಿಯಾಗಿ ಮುದ್ರಿಸಿತ್ತು. ಇದರಿಂದ ಬೆರಳೆಣಿಕೆಯ ದಿನಗಳಲ್ಲಿ ವಸ್ತು ಗಳು, ಸೇವೆಗಳ ದರಗಳು ಇಮ್ಮಡಿಯಾಗುತ್ತಿತ್ತು. ನಾಗರಿಕ ದಂಗೆ ತೀವ್ರವಾಗಿ ಸರಕಾರ ಪತನವಾ ಯಿತು.
ಇರಾನ್‌ನ ದುರಂತವನ್ನೇ ನೋಡಿ, ಪ್ರಾಚೀನ ಪರ್ಷಿಯನ್ ಸಾಮ್ರಾಜ್ಯವೇ ಈಗಿನ ಇರಾನ್. ಎಪ್ಪತ್ತರ ದಶಕದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ದಂಗೆ ಸಂಭವಿಸುವ ಮೊದಲು ಷಾ ದೊರೆಗಳು ಚೆನ್ನಾಗಿ ಆಳ್ವಿಕೆ ನಡೆಸುತ್ತಿದ್ದರು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇರಾನಿನ ರಿಯಾಲ್ ಕರೆನ್ಸಿಯು ಭಾರತದ ರುಪಾಯಿಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿತ್ತು.
ಇರಾನನ್ನು ಆಳಿದ್ದ ಕೊನೆಯ ಪರ್ಷಿಯನ್ ದೊರೆ (ಷಾ) ಮಹಮ್ಮದ್ ರೇಜಾ ಪಹ್ಲವಿ ಅವರು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಈಗಲೂ ಎಪ್ಪತ್ತರ ದಶಕದ ಸಮೃದ್ಧ ಮತ್ತು ಆಧುನಿಕ ಇರಾನ್‌ನ ಜನಜೀವನವನ್ನು ಬಿಂಬಿಸುವ ವಿಡಿಯೊ ಗಳನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಬಹುದು.
ನೋಡಿದರೆ ಆಶ್ಚರ್ಯವಾಗುವಷ್ಟು, ಇರಾನ್ ಜನರು ಸಕಲ ಸ್ವಾತಂತ್ರ್ಯಗಳೊಂದಿಗೆ, ಪಾಶ್ಚಿಮಾತ್ಯ ರಂತೆ ಜೀವಿಸುತ್ತಿದ್ದರು. ಹೆಣ್ಣು ಮಕ್ಕಳು ಆಧುನಿಕ ಉಡುಗೆ ತೊಡುಗೆಗಳನ್ನು ಧರಿಸುತ್ತಿದ್ದರು. ಗಣನೀಯ ಆರ್ಥಿಕಾಭಿವೃದ್ಧಿ, ಸಾಮಾಜಿಕ ಸುಧಾರಣೆ, ಮಹಿಳಾ ಸಬಲೀಕರಣ ನಡೆದಿತ್ತು. ಆದರೆ ಇಸ್ಲಾಮಿಕ್ ಕ್ರಾಂತಿಯ ಬಳಿಕ ಇರಾನ್ ಪತನ ಶುರುವಾಯಿತು.
ಬಂಡವಾಳದ ಹೊರ ಹರಿವು, ರಾಜಕೀಯ ಅನಿಶ್ಚಿತತೆ, ಮಹಿಳೆಯರ ಹಕ್ಕುಗಳ ನಿರಾಕರಣೆ, ನಾನಾ ನಿರ್ಬಂಧಗಳಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿತು. 1979ರ ನವೆಂಬರ್‌ನಲ್ಲಿ ಅಮೆರಿಕವು ಮೊದಲ ಬಾರಿಗೆ ಇರಾನ್ ವಿರುದ್ಧ ನಿರ್ಬಂಧ ವಿಧಿಸಿತು. ಬಳಿಕ ಡಜನ್‌ಗಟ್ಟಲೆ ನಿರ್ಬಂಧಗಳನ್ನು ಇರಾನ್ ವಿರುದ್ಧ ಜಾರಿಗೊಳಿಸಲಾಗಿದೆ.
ಇರಾನ್‌ನಲ್ಲಿ ತೈಲ ಸಂಪನ್ಮೂಲ ಇದ್ದರೂ, ಮಾರಾಟಕ್ಕೆ ಅಡಚಣೆಯಾಯಿತು. ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಕಡಿತವಾಯಿತು. ಇರಾನ್‌ನ ಪರಮಾಣು ಕಾರ್ಯಕ್ರಮ ಗಳನ್ನು ಅಮೆರಿಕ ಹತ್ತಿಕ್ಕಿದೆ. ಮತ್ತೊಂದು ಕಡೆ ಚಟುವಟಿಕೆಗಳು ಮುಂದುವರಿದಿವೆ ಎಂದೂ ಇರಾನ್ ಹೇಳಿಕೊಂಡಿದೆ. ಈ ರೀತಿಯಲ್ಲಿ ವಿವಾದಗಳಿಂದ ಸೊರಗಿರುವ ಇರಾನ್‌ನಲ್ಲಿ ಈಗ ಜನರೇ ದಂಗೆ ಎದ್ದು ಮತ್ತೆ ಷಾ ದೊರೆಗಳ ಆಳ್ವಿಕೆ ಬೇಕೆಂದು ಬೀದಿಗಿಳಿದಿದ್ದಾರೆ.
ಇದಕ್ಕೆ ಅಮೆರಿಕದ ಬೆಂಬಲವೂ ಇದೆ. ಆರ್ಥಿಕ-ರಾಜಕೀಯ-ಸಾಮಾಜಿಕ ಸಂಘರ್ಷಗಳು, ಅಂತಾ ರಾಷ್ಟ್ರೀಯ ನಿರ್ಬಂಧಗಳು ಹೇಗೆ ಒಂದು ದೇಶದ ಕರೆನ್ಸಿಯನ್ನು ನೆಲಕಚ್ಚಿಸುತ್ತದೆ ಎಂಬುದಕ್ಕೆ ಇರಾನ್, ವೆನಿಜುವೆಲಾ ಇತ್ತೀಚಿನ ಸಾಕ್ಷಿಗಳಾಗಿವೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಅಮೆರಿಕ ಕೂಡ ಸರಕಾರಿ ಬಾಂಡ್‌ಗಳನ್ನು ಖರೀದಿಸಲು ‘ಕ್ವಾಂಟಿ ಟೇಟಿವ್ ಈಸಿಂಗ್’ ಪದ್ಧತಿಯನ್ನು ಅನುಸರಿಸಿತ್ತು. ಇದರ ಅಡಿಯಲ್ಲಿ ಬಾಂಡ್ʼಗಳನ್ನು ಕೊಳ್ಳಲು ನೋಟುಗಳನ್ನು ಮುದ್ರಿಸಿತ್ತು. ಹಣದ ಚಲಾವಣೆಯನ್ನು ಹೆಚ್ಚಿಸಲು, ಆರ್ಥಿಕ ಚಟುವಟಿಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು.
ಅಮೆರಿಕದ ಡಾಲರ್ ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿರಬಹುದು. ಆದರೆ ಆ ದೇಶ ಈಗ 38 ಲಕ್ಷ ಕೋಟಿ ಡಾಲರ್ ಸಾಲವನ್ನು ಹೊಂದಿದೆ. ಇದು ಅಮೆರಿಕದ ಜಿಡಿಪಿಗಿಂತಲೂ ಅಧಿಕ. ಇದಕ್ಕೆ ಕಾರಣ ಹಲವಾರು ಬಾರಿ ಕ್ವಾಂಟಿಟೇಟಿವ್ ಈಸಿಂಗ್ ಉಪಕ್ರಮವನ್ನು ನಡೆಸಿರುವುದು. ಇದರ ಪರಿಣಾಮ ಅಮೆರಿಕದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದೆ. ಬಡ್ಡಿ ದರ ಪಾವತಿಯ ಹೊರೆ ಹೆಚ್ಚುತ್ತಿದೆ.
ಪ್ರತಿ ವರ್ಷ 1 ಲಕ್ಷ ಕೋಟಿ ಡಾಲರ್ ಬಡ್ಡಿಯನ್ನು ಕೊಡಬೇಕಾಗುತ್ತದೆ. ರಕ್ಷಣಾ ಬಜೆಟ್‌ಗಿಂತಲೂ ಹೆಚ್ಚು ಮೊತ್ತವನ್ನು ಸಾಲದ ಬಡ್ಡಿ ಪಾವತಿಗೆ ಅಮೆರಿಕ ಸರಕಾರ ಇಡಬೇಕಾಗಿ ಬಂದಿದೆ. ಹಳೆಯ ಸಾಲದ ಬಡ್ಡಿ ಕಟ್ಟುವುದರ ಬದಲಿಗೆ ಹೊಸ ಸಾಲ ಮಾಡಲಾಗುತ್ತಿದೆ. ಅಲ್ಲಿನ ಪ್ರತಿ ಪ್ರಜೆಯ ಮೇಲೆ 114,000 ಡಾಲರ್ ಸಾಲ ಇದೆ (1.02 ಕೋಟಿ ರುಪಾಯಿ). ಮತ್ತೊಂದು ಕಡೆ ಅಮೆರಿಕದ ಬಾಂಡ್ ಗಳನ್ನು ಚೀನಾ ಮತ್ತು ಜಪಾನ್ ಮಾರಲು ಆರಂಭಿಸಿವೆ. ಇದು ಡಾಲರ್ ಮತ್ತಷ್ಟು ದುರ್ಬಲ ವಾಗಲು ಕಾರಣವಾದೀತು.
ಕರೆನ್ಸಿ ದರಗಳಲ್ಲಿ ಕುಸಿತ ತೀವ್ರವಾದಾಗ ಬಂಗಾರ-ಬೆಳ್ಳಿಯ ದರ ಏರಿಕೆಯಾಗುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಡಾಲರ್ ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಡಾಲರ್ ಎದುರು ಸ್ಥಳೀಯ ಕರೆನ್ಸಿ ದುರ್ಬಲವಾದಾಗ ಚಿನ್ನ ಮತ್ತು ಬೆಳ್ಳಿಯ ಆಮದು ಕೂಡ ದುಬಾರಿಯಾಗುತ್ತದೆ. ಬಡ್ಡಿ ದರಗಳು ಕಡಿತವಾದಾಗ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಬಂಗಾರದಲ್ಲಿ ಹೂಡಿಕೆ ಲಾಭದಾಯಕವಾಗುತ್ತದೆ.
ಬೆಳ್ಳಿಯನ್ನು ಸೌರಫಲಕ, ಇಲೆಕ್ಟ್ರಿಕ್ ವಾಹನಗಳು, ಇಲೆಕ್ಟ್ರಾನಿಕ್ಸ್‌ನಲ್ಲಿ ಬಳಸುತ್ತಾರೆ. ಉದ್ಯಮ ವಲಯದ ಅಗತ್ಯಗಳಿಗೆ ಬಳಸುವುದರಿಂದ ರಜತ ಲೋಹದ ದರ ಹೆಚ್ಚಳವಾಗುತ್ತಿದೆ. ಹಾಗಾದರೆ ಚಿನ್ನದ ದರದಲ್ಲಿ ಭಾರಿ ಇಳಿಕೆ ನಿರೀಕ್ಷಿಸಬಹುದೇ? ಮಾರುಕಟ್ಟೆ ತಜ್ಞರ ಪ್ರಕಾರ ಸಾಧ್ಯವಿಲ್ಲ.
ಏಕೆಂದರೆ ಬಂಗಾರದ ದರ ಇಳಿಯಬೇಕಿದ್ದರೆ ಮುಖ್ಯವಾಗಿ ಮೂರು ಬೆಳವಣಿಗೆಗಳು ಏಕಕಾಲಕ್ಕೆ ಸಂಭವಿಸಬೇಕಾಗಿದೆ. ಮೊದಲನೆಯದಾಗಿ ಹಣದುಬ್ಬರ ಭಾರಿ ಇಳಿಕೆಯಾಗಬೇಕು. ಎರಡನೆಯ ದಾಗಿ, ಸೆಂಟ್ರಲ್ ಬ್ಯಾಂಕ್‌ಗಳು ನಿರೀಕ್ಷೆ ಮೀರಿ ಬಡ್ಡಿ ದರವನ್ನು ತಗ್ಗಿಸಬೇಕು.
ಮೂರನೆಯದಾಗಿ, ಡಾಲರ್ ತನ್ನ ಬಲ ವೃದ್ಧಿಸಬೇಕು. ಈ ಮೂರೂ ಬೆಳವಣಿಗೆಗಳು ಒಟ್ಟಾಗಿ ಸಂಭವಿಸಿದರೆ ಹೂಡಿಕೆದಾರರು ಬಾಂಡ್‌ಗಳಲ್ಲಿ ಹೂಡಿಕೆಗೆ ಮರಳಬಹುದು. ಆಗ ಚಿನ್ನದ ದರ ಗಣನೀಯ ಇಳಿಯಬಹುದು. ಚಿನ್ನದ ದರ ಈಗಾಗಲೇ ಸಾರ್ವಕಾಲಿಕ ಉನ್ನತ ಮಟ್ಟದಲ್ಲಿ ಇರುವುದರಿಂದ ದಿಢೀರ್ ಏರಿಕೆಯ ಟ್ರೆಂಡ್ ಮುಂದುವರಿಯುವ ಸಾಧ್ಯತೆ ಇಲ್ಲ, ಅದೇ ರೀತಿ ದಿಢೀರ್ ಕುಸಿಯುವ ಸಾಧ್ಯತೆಯೂ ಇಲ್ಲ.
ಆದ್ದರಿಂದ ರಿಟೇಲ್ ಖರೀದಿದಾರರು ಹಂತಗಳಲ್ಲಿ ಕೊಳ್ಳುವುದು ಉತ್ತಮ ಆಯ್ಕೆಯಾದೀತು. ಬೆಳ್ಳಿಯ ಕಥೆ ಹಾಗಲ್ಲ, ದೀರ್ಘಕಾಲೀನ ದೃಷ್ಟಿಯಿಂದ ಬೇಡಿಕೆ ಇರಬಹುದು, ಆದರೆ ತಾತ್ಕಾಲಿಕ ವಾಗಿ ತಕ್ಷಣದ ಲಾಭ ಗಳಿಕೆಯ ದೃಷ್ಟಿಯಿಂದ ಹೂಡಿಕೆದಾರರು ಮಾರಾಟ ಮಾಡಬಹುದು. ಈ ಪ್ರಾಫಿಟ್ ಬುಕಿಂಗ್ ಪರಿಣಾಮ ದರ ಇಳಿಯಬಹುದು. ಆದ್ದರಿಂದ ಅಲ್ಪಾವಧಿಗೆ ಏರಿಳಿತದ ಅಪಾಯ ಇದ್ದೇ ಇದೆ, ಆದರೆ ದೀರ್ಘಾವಧಿಯ ಹೂಡಿಕೆಗೆ ಚಿಂತೆ ಇಲ್ಲ ಎನ್ನುತ್ತಾರೆ ತಜ್ಞರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟುಗಳನ್ನು ಮುದ್ರಿಸುವಾಗ ಅಷ್ಟೇ ಮೌಲ್ಯದ ಬಂಗಾರ ವನ್ನು ಪ್ರತ್ಯೇಕವಾಗಿ ಇಡಬೇಕಾಗುತ್ತದೆಯೇ? ಎಂಬ ಪ್ರಶ್ನೆ ಇರಬಹುದು. ಆದರೆ ಅಂಥ ನಿಯಮ ವಿಲ್ಲ. ಆದರೆ ಅನಿಯಂತ್ರಿತವಾಗಿ ನೋಟುಗಳ ಮುದ್ರಣವೂ ಸಾಧ್ಯವಿಲ್ಲ. ಹಣದುಬ್ಬರ, ಜಿಡಿಪಿಯ ಸ್ಥಿತಿಗತಿ, ಆರ್‌ಬಿಐ-ಕೇಂದ್ರ ಸರಕಾರದ ಸಮಾಲೋಚನೆಯ ಬಳಿಕ ಎಷ್ಟು ನೋಟು ಗಳನ್ನು ಮುದ್ರಿಸಬೇಕು ಎಂಬುದು ನಿರ್ಧಾರವಾಗುತ್ತದೆ.
ಆರ್ಬಿಐನಲ್ಲಿ ಮಿನಿಮಮ್ ರಿಸರ್ವ್ ಸಿಸ್ಟಮ್ ಎಂಬ ವ್ಯವಸ್ಥೆ ಇದೆ. ಈ ಚೌಕಟ್ಟಿನಡಿಯಲ್ಲಿ ಆರ್‌ಬಿಐ ಎಲ್ಲ ಸಂದರ್ಭದಲ್ಲೂ 200 ಕೋಟಿ ರುಪಾಯಿ ಮೌಲ್ಯದ ಸಂಪನ್ಮೂಲವನ್ನು ಇಡ ಬೇಕಾಗುತ್ತದೆ. ಇದರಲ್ಲಿ 115 ಕೋಟಿ ರುಪಾಯಿ ಮೌಲ್ಯದ ಚಿನ್ನ ಇರಬೇಕು. ಉಳಿದ 85 ಕೋಟಿ ರುಪಾಯಿ ಹಣಕಾಸು ರೂಪದಲ್ಲಿ ಇರುತ್ತದೆ. ಆದರೆ ಪ್ರತಿ ಬಾರಿಯೂ ಎಷ್ಟು ಮೊತ್ತದ ಕರೆನ್ಸಿ ನೋಟು ಮುದ್ರಣವಾಗಲಿದೆಯೋ, ಅಷ್ಟೇ ಮೌಲ್ಯದ ಚಿನ್ನ ಇಡಬೇಕು ಎಂಬ ನಿಯಮ ಇಲ್ಲ.
ಒಟ್ಟಿನಲ್ಲಿ ಕರೆನ್ಸಿಯ ಮೇಲೆ ಜನರ ವಿಶ್ವಾಸ ಹೆಚ್ಚಬೇಕಿದ್ದರೆ, ಸರಕಾರಗಳು ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಹಣದುಬ್ಬರವನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬೇಕು. ಜನ ಬೆಂಬಲವಿರುವ ಪ್ರಬಲ ಸರಕಾರ ಕೂಡ ಅಷ್ಟೇ ನಿರ್ಣಾಯಕ.