ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

ಧರ್ಮಸ್ಥಳದ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ಸಲ್ಲಿಸಿ, ಈಗ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿರುವ (ಮುಸುಕುಧಾರಿ) ಸಿ.ಎನ್. ಚಿನ್ನಯ್ಯ ಹಾಗೂ ಆತನ ಸಹಚರರು ಯೂಟ್ಯೂಬ್ ಚಾನೆಲ್‌ ಗಳನ್ನು ಬಳಸಿಕೊಂಡು ಧರ್ಮಸ್ಥಳದ ಬಗ್ಗೆ ಎಂತೆಂಥಾ ಕಥೆಗಳನ್ನು ಹೆಣೆದರು ಎಂಬುದನ್ನು ಇಡೀ ದೇಶವೇ ನೋಡಿದೆ.

ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

-

Ashok Nayak Ashok Nayak Sep 13, 2025 5:43 AM

ಚರ್ಚಾ ವೇದಿಕೆ

ರಾಘವ ಶರ್ಮ ನಿಡ್ಲೆ

ನಮ್ಮ ದೇಶದಲ್ಲಿ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ಬಂದ್ ಮಾಡುವ ಕಠಿಣ ಕಾನೂನು ಎಷ್ಟರ ಮಟ್ಟಿಗೆ ಅಗತ್ಯ ಇದೆ ಎನ್ನುವುದಕ್ಕೆ ಬುರುಡೆ ಮತ್ತು ಸುಜಾತ ಭಟ್ ಕೇಸ್ ತಾಜಾ ಉದಾಹರಣೆ. ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆ ಸಮೇತ ಸತ್ಯ ಹೇಳುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ದುರುದ್ದೇಶದಿಂದ ವ್ಯೂಸ್, ಲೈಕ್‌ ಗಳನ್ನು ಹೆಚ್ಚಿಸಿಕೊಳ್ಳಲು, ಆ ಮೂಲಕ ದುಡ್ಡು ಮಾಡಲು, ಕಾಲ್ಪನಿಕ ಕಂಟೆಂಟ್ ಸೃಷ್ಟಿಸು ವವರ ಹೆಡೆಮುರಿ ಕಟ್ಟುವ ಕಾನೂನು ಸಾಮಾಜಿಕ ಆರೋಗ್ಯ ಕಾಪಾಡಲು ಅತ್ಯವಶ್ಯಕ.

ಕೆಲ ದಿನಗಳ ಹಿಂದೆ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯ ಮೂರ್ತಿ ಎಂ.ಐ.ಅರುಣ್ ಅವರು, “ಇಂದಿನ ಡಿಜಿಟಲ್ ಯುಗದಲ್ಲಿ ಮಾನಹಾನಿ ಮಾಡುವಂಥ ಕಂಟೆಂಟ್ ಗಳು ಯೂಟ್ಯೂಬನಂಥ ಡಿಜಿಟಲ್ ಮೀಡಿಯಾ ವೇದಿಕೆಗಳಲ್ಲಿ ಅನಿಯಂತ್ರಿತವಾಗಿ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ವಿದ್ಯಮಾನ" ಎಂಬ ಆತಂಕವನ್ನು ಹೊರಹಾಕಿದ್ದರು.

ಯಾವುದೇ ಹೊಣೆಗಾರಿಕೆಯಿಲ್ಲದೆ, ಮಾನಹಾನಿ ಮಾಡುವ ವಿಷಯಗಳು ಬಿರುಗಾಳಿಯ ವೇಗದಲ್ಲಿ ಯೂಟ್ಯೂಬ್‌ಗಳ ಮೂಲಕ ಹರಿದಾಡುತ್ತಿವೆ. ದುರಂತ ಎಂದರೆ ಇಂಥವುಗಳನ್ನು ತಡೆಹಿಡಿಯಲು ಅಸ್ತಿತ್ವದಲ್ಲಿರುವ ಮಾನನಷ್ಟ ಕಾನೂನು ಕೂಡ ಅಸಮರ್ಪಕವಾಗಿದೆ ಎಂದವರು ತಿಳಿಸಿದ್ದರು.

ಇತರರನ್ನು ವಿನಾಕಾರಣ ದೂಷಿಸಿ, ನಂತರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗು ತ್ತಿರುವುದಕ್ಕೆ ಸಮಗ್ರ, ಸ್ಪಷ್ಟ ಕಾನೂನಿನ ಕೊರತೆ ಕಾರಣ ಎನ್ನುವುದು ಅವರ ಅನಿಸಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿ ನ್ಯಾ.ಅರುಣ್ ಅವರು ಯಾವುದೇ ತೀರ್ಪನ್ನು ನೀಡದಿದ್ದರೂ, ಡಿಜಿಟಲ್ ಕಂಟೆಂಟ್‌ಗಳು ಸೃಷ್ಟಿಸುತ್ತಿರುವ ಅವಾಂತರ/ಅನಾಹುತಗಳನ್ನು ತಡೆಯಲು ಕಠಿಣ ಕಾನೂನಿನ ಅಗತ್ಯವಿದೆ ಎಂಬ ಅಭಿಪ್ರಾಯಗಳು ನ್ಯಾಯಾಂಗದ ಕಡೆಯಿಂದ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.

ಇದನ್ನೂ ಓದಿ: Raghava Sharma Nidle Column: ಚರ್ಚೆ ಹುಟ್ಟು ಹಾಕಿದ ಕೊಲಿಜಿಯಂ ತೀರ್ಮಾನ

ಧರ್ಮಸ್ಥಳದ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ಸಲ್ಲಿಸಿ, ಈಗ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿರುವ (ಮುಸುಕುಧಾರಿ) ಸಿ.ಎನ್.ಚಿನ್ನಯ್ಯ ಹಾಗೂ ಆತನ ಸಹಚರರು ಯೂಟ್ಯೂಬ್ ಚಾನೆಲ್‌ ಗಳನ್ನು ಬಳಸಿಕೊಂಡು ಧರ್ಮಸ್ಥಳದ ಬಗ್ಗೆ ಎಂತೆಂಥಾ ಕಥೆಗಳನ್ನು ಹೆಣೆದರು ಎಂಬುದನ್ನು ಇಡೀ ದೇಶವೇ ನೋಡಿದೆ.

ಧರ್ಮಸ್ಥಳ ಪ್ರಕರಣ ತೆಗೆದುಕೊಂಡಿರುವ ವಿವಿಧ ತಿರುವುಗಳನ್ನು ಕಂಡಾಗ ನ್ಯಾ. ಅರುಣ್ ಅವರ ಅಭಿಪ್ರಾಯ ಇಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯ ಆರಂಭಕ್ಕೆ ಮುನ್ನ ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಲ್ಲಿ ಸ್ಪರ್ಧೆಗೆ ಬಿದ್ದವರಂತೆ ಕಥಾನಕ ಗಳನ್ನು ಸೃಷ್ಟಿಸಿದ್ದ ಯೂಟ್ಯೂಬ್ ಚಾನೆಲ್‌ಗಳ ‘ಸ್ವತಂತ್ರ ಪತ್ರಕರ್ತ’ರು, ನೇತ್ರಾವತಿ ನದಿ ಆಸು ಪಾಸು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಂದು ಅವರ ಶವಗಳನ್ನು ಹೂತುಹಾಕ ಲಾಗಿದೆ ಎಂದು ಅಕ್ಷರಶಃ ನಂಬುವಂತೆ ವಿವರಣೆ ನೀಡುತ್ತಿದ್ದರು.

ಭಾರಿ ಕುತೂಹಲ ಕೆರಳಿಸುವಂಥ ವಾಯ್ಸ್ ಓವರ್ ಹಾಗೂ ಮ್ಯೂಸಿಕ್‌ಗಳನ್ನು ಬಳಸಿ ಕಥೆಗೆ ರೋಚಕತೆ ನೀಡುತ್ತಾ, ದೂರದ ಊರಿನ ಕುಳಿತ ನೈಜ ಭಕ್ತರೂ ಅನುಮಾನದಿಂದ ನೋಡುವಂತೆ ಮಾಡಿದ್ದರು. ನಂತರದಲ್ಲಿ ಎಸ್‌ಐಟಿ ರಚನೆಯಾಗಿ, ಧರ್ಮಸ್ಥಳ ಗ್ರಾಮದ ಸುತ್ತಮುತ್ತ 17 ಕಡೆ ಭೂಮಿ ಅಗೆದು, ಇತಿಹಾಸದ ಮೊದಲು ಎಂಬಂತೆ ಭಾರಿ ದೊಡ್ಡ ಪ್ರಹಸನವೊಂದಕ್ಕೆ ಸ್ಥಳೀಯರು ಸಾಕ್ಷಿಯಾಗುವಂತೆ ಮಾಡಲಾಯಿತು.

Raghava Sharma Nidle 1309

ದೂರದ ಊರು, ಜಿಲ್ಲೆ, ರಾಜ್ಯಗಳಲ್ಲೂ ‘ಧರ್ಮಸ್ಥಳದಲ್ಲಿ ಏನಾಗುತ್ತಿದೆ?’ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆದವು. ಆರಂಭದಲ್ಲಿ ಮುಸುಕುಧಾರಿ ಹೇಳಿದಂತೆ ಭೂಮಿ ಅಗೆಯುತ್ತಿದ್ದ ಎಸ್‌ಐಟಿ ತನಿಖಾಧಿಕಾರಿಗಳು, ಈಗ ಮುಸುಕುಧಾರಿಯ ಮುಖವಾಡ ಕಳಚುವ ಕೆಲಸದಲ್ಲಿದ್ದಾರೆ.

ಇಡೀ ಪ್ರಹಸನವು ನೈಜ ಪಾತ್ರಧಾರಿಗಳನ್ನು ತನಿಖೆಗೊಳಪಡಿಸಿ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಒಳಸಂಚು ರೂಪಿಸಿದ ಜಾಲಗಳನ್ನು ಬಗೆಯುತ್ತಿದೆ. ಧರ್ಮಸ್ಥಳ ಕೇಸಿಗೆ ಕೇರಳ-ದೆಹಲಿಯ ನಂಟು ಹೇಗಿತ್ತು ಎಂಬುದೂ ಒಂದೊಂದಾಗಿಯೇ ಈಗ ಹೊರ ಬರುತ್ತಿದೆ. ಕೇರಳದ ಯೂಟ್ಯೂಬರ್ ಮತ್ತು ಲಾರಿ ಮಾಲೀಕ ಮನಾಫ್‌ ಎಂಬಾತ ಈ ಪ್ರಕರಣದಲ್ಲಿ ಏನೇ ಕಿತಾಪತಿ ಗಳನ್ನು ಮಾಡಿದ್ದಾನೆ ಎನ್ನುವುದೂ ಬೆಳಕಿಗೆ ಬರುತ್ತಿದೆ.

ಈತ ಕೇರಳದ ಮುಖ್ಯವಾಹಿನಿ ಮಾಧ್ಯಮದಲ್ಲೂ ಬಂದು ಸಂದರ್ಶನದ ಮೇಲೆ ಸಂದರ್ಶನ ನೀಡಿ, ‘ಧರ್ಮಸ್ಥಳವು ನೂರಾರು ಕೊಲೆಗಳ ತಾಣ’ ಎಂಬ ಯೋಜಿತ ನಿರೂಪಣೆಯನ್ನು (ನರೇಟಿವ್) ಬಹಳ ವ್ಯವಸ್ಥಿತವಾಗಿ ಹರಿ ಬಿಟ್ಟಿದ್ದ. ಕೆಲ ದಿನಗಳ ಹಿಂದೆ ಧರ್ಮಸ್ಥಳದ ಅರಣ್ಯ ಪ್ರದೇಶದಿಂದ ತಲೆಬುರುಡೆ ಹೊರತರುವ ವಿಡಿಯೋ ಹೊರಬಂದಿದ್ದು, ಪ್ರಕರಣಕ್ಕೆ ನಾಟಕೀಯ ತಿರುವು ಸಿಕ್ಕಿದೆ.

ಜುಲೈ 11ರಂದು ಯೂಟ್ಯೂಬರ್ ಮನಾಫ್‌ ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋದಲ್ಲಿ, ಜಯಂತ್ ತಂಗಚ್ಚನ್ ಎಂಬ ವ್ಯಕ್ತಿ (ಈಗ ಎಸ್‌ಐಟಿ ತನಿಖೆಗೊಳಪಟ್ಟಿದ್ದಾನೆ) ಧರ್ಮಸ್ಥಳದ ಬಂಗ್ಲೆಗುಡ್ಡೆಯ ಮೇಲ್ಭಾಗದಿಂದ ಚಾಕುವಿನ ಸಹಾಯದಿಂದ ತಲೆಬುರುಡೆ ಎತ್ತುತ್ತಿರುವ ದೃಶ್ಯವಿದೆ.

ಸೀರೆಯನ್ನು ಕಟ್ಟಲಾಗಿದ್ದ ಮರದ ಬಳಿ ತಲೆಬುರುಡೆ ಪತ್ತೆಯಾಗಿದ್ದು, ಇದು ತನಿಖೆಯ ಮೇಲೆ ಹೊಸ ಬೆಳಕು ಚೆಲ್ಲಿದೆ. ಹಾಗಿದ್ದರೆ, ಈ ಬುರುಡೆ ಯಾರದ್ದು? ಬುರುಡೆಯೊಂದನ್ನು ಎತ್ತಿ ತರುವ ಅಧಿಕಾರವನ್ನು ಅವರಿಗೆ ನೀಡಿದ್ದು ಯಾರು? ಅದನ್ನು ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವುದರ ಹಿಂದಿನ ಉದ್ದೇಶ ಏನು? ಮನಾಫ್‌-ಸಿ. ಎನ್. ಚಿನ್ನಯ್ಯ-ಜಯಂತ್ ತಂಗಚ್ಚನ್-ಮಹೇಶ್ ಶೆಟ್ಟಿ ತಿಮರೋಡಿ-ಗಿರೀಶ್ ಮಟ್ಟಣ್ಣನವರ್-ವಿಠಲ ಗೌಡರಿಗೂ (ಅತ್ಯಾ ಚಾರ-ಹತ್ಯೆಗೊಳಗಾಗಿದ್ದ ಸೌಜನ್ಯಳ ಮಾವ) ಇರುವ ನಂಟೇನು? ಇವರೆಲ್ಲರಿಗೂ ಬುರುಡೆ ವೃತ್ತಾಂತವನ್ನು ಯೂಟ್ಯೂಬ್ ಗಳಲ್ಲಿ ಸೃಷ್ಟಿಸಬೇಕು ಎಂದು ಹೇಳಿದ ತಲೆ ಯಾವುದು ಎಂಬುದೆ ಎಸ್‌ಐಟಿ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ‌

ನೂರಾರು ಕೊಲೆಗಳು ನಡೆದಿವೆ ಎಂಬ ವಾದವನ್ನು ಪುಷ್ಟೀಕರಿಸಲು ಉತ್ಖನನ ಮಾಡಿದ್ದ ಸ್ಥಳ ಗಳಲ್ಲಿ ಕನಿಷ್ಠ 10 ಬುರುಡೆಯೂ ಸಿಗದಿರುವುದು ದೂರುದಾರರ ದುರುದ್ದೇಶಗಳನ್ನು ಬೆತ್ತಲು ಮಾಡಿದೆ. ಈ ನಡುವೆ, 2 ಸ್ಥಳಗಳಿಗೆ ಸೌಜನ್ಯ ತಾಯಿ ಕುಸುಮಾವತಿ ಸೋದರ ವಿಠಲ ಗೌಡರನ್ನು ಕರೆದೊಯ್ದ ಎಸ್‌ಐಟಿ, ಸ್ಥಳ ಮಹಜರು ಮಾಡಿದೆ. ಅಲ್ಲಿ ಹಲವಾರು ಬುರುಡೆ, ಕಳೇಬರ ಪತ್ತೆ ಯಾಗಿವೆ ಎಂದು ವಿಠಲರು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದು, ಕೇಸಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಇರಲಿ, ಇಲ್ಲಿ ಕೇರಳದ ಮನಾಫ್‌ ಬಗ್ಗೆಯೂ ಹೇಳಬೇಕು. ಕರ್ನಾಟಕದ ಶಿರೂರು ಭೂ ಕುಸಿತ ಪ್ರಕರಣದಲ್ಲೂ ಆತ ಭಾರಿ ಸದ್ದು ಮಾಡಿದ್ದ. ಆತ ತನ್ನ ಲಾರಿಯು ಮಣ್ಣಿನ ಅಡಿಯಲ್ಲಿ ಹೂತು‌ ಹೋಗಿದೆ ಎಂದೆ ಕಥೆ ಕಟ್ಟಿ, ಆ ಮೂಲಕ ಪೊಲೀಸರ ಮೇಲೆ ಒತ್ತಡ ಹೇರಿ, ಜಿಲ್ಲಾಡಳಿತವನ್ನೂ ದಾರಿ ತಪ್ಪಿಸಿದ್ದ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲೂ ‘ನನ್ನ ಲಾರಿ ಹೂತುಹೋಗಿದೆ, ಮಣ್ಣನ್ನು ಇವರು ಅಗೆಯುತ್ತಿಲ್ಲ’ ಎಂದೆ ಹೇಳಿದ್ದ.

ಇದು ಜಿಡಳಿತವನ್ನು ವಿಪರೀತ ಒತ್ತಡಕ್ಕೆ ಸಿಲುಕಿಸಿತ್ತು. ಆತನ ಲಾರಿ ಚಾಲಕ ಅರ್ಜುನ್ ಘಟನೆ ಯಲ್ಲಿ ಮೃತಪಟ್ಟಿದ್ದ ಮತ್ತು ಕೊನೆಯಲ್ಲಿ ಲಾರಿಯು ಪಕ್ಕದ ಹೊಳೆಯಲ್ಲಿ ಪತ್ತೆಯಾಗಿತ್ತು. ಅಲ್ಲಿಗೆ ಲಾರಿ ಬಗ್ಗೆ ಆತ ಹೇಳಿದ್ದೇ ಸುಳ್ಳು ಎನ್ನುವುದು ಬಯಲಾಗಿತ್ತು.

ಮೃತ ಲಾರಿ ಚಾಲಕ ಅರ್ಜುನ್ ಹೆಸರಲ್ಲಿ ಹಣ ಸಂಗ್ರಹ ಮಾಡಿ, ನಂತರ ಅದನ್ನು ಕುಟುಂಬ ದವರಿಗೆ ನೀಡಿಲ್ಲ ಎಂಬ ಆಪಾದನೆಯೂ ಅವನ ಮೇಲಿದೆ. ಅರ್ಜುನ್ ಕುಟುಂಬದವರು ಮನಾಫ್‌ ಖಾತೆಗೆ ದುಡ್ಡು ಹಾಕಬೇಡಿ ಎಂದೂ ಕೇಳಿಕೊಂಡಿದ್ದರು. ಇದರಿಂದ ಸಿಟ್ಟಾಗಿದ್ದ ಮನಾಫ್‌, ‘ಅರ್ಜುನ್ ಮನೆಯವರು ಸಂಘ ಪರಿವಾರದ ಪ್ರಭಾವದಲ್ಲಿದ್ದಾರೆ. ನಾನು ಮುಸ್ಲಿಂ ಎಂಬ ಕಾರಣಕ್ಕೆ ದೂರ ಮಾಡಿದ್ದಾರೆ’ ಎಂದು ಆರೋಪ ಮಾಡಿದ್ದ.

ಧರ್ಮಸ್ಥಳ ಕೇಸಿಗೆ ಸಂಬಂಧಿಸಿ ಜಯಂತ್ ತಂಗಚ್ಚನ್ ಅನ್ನು ಭೇಟಿ ಮಾಡಿದ್ದ ಮನಾಫ್‌, ಸುಜಾತ ಭಟ್ ಪುತ್ರಿ ಅನನ್ಯಾ ಭಟ್ ಹತ್ಯೆಗೆ ನ್ಯಾಯ ಸಿಗಬೇಕು ಎಂಬ ಅಭಿಯಾನ ಶುರು ಮಾಡಿದ್ದ. ‘ಧರ್ಮ ಸ್ಥಳ ಆಕ್ಷನ್ ಕಮಿಟಿ’ ಎಂಬ ಸಮಿತಿ ರಚನೆ ಮಾಡಿ, ಆ ಮೂಲಕ ಕೇರಳದಲ್ಲಿ ಕಥಾನಕಗಳನ್ನು ಸೃಷ್ಟಿಸಿದ್ದ. ಒಟ್ಟಿನಲ್ಲಿ, ತಾನೊಬ್ಬ ಸಾಮಾಜಿಕ ಹೋರಾಟಗಾರ, ಹೀರೋ ಎಂದು ಬಿಂಬಿಸಿ ಕೊಳ್ಳುವುದು ಆತನ ಉದ್ದೇಶ ಎನ್ನುವುದು ಸ್ಪಷ್ಟ.

ಅದನ್ನು ಈಡೇರಿಸಿಕೊಳ್ಳಲು ಯೂಟ್ಯೂಬ್ ಎಂಬ ಬ್ರಹ್ಮಾಸವೂ ಆತನ ಕೈಯಲ್ಲಿತ್ತು. ಧರ್ಮಸ್ಥಳ ಪ್ರಕರಣದಲ್ಲಿ ಮನಾಫ್‌ ಪಾತ್ರವನ್ನು ಪರಿಶೀಲಿಸುತ್ತಿರುವ ಎಸ್‌ಐಟಿ, ಆತನನ್ನು ಬೆಳ್ತಂಗಡಿಗೆ ಕರೆಸಿಕೊಂಡು ಹಲವು ಸುತ್ತಿನ ವಿಚಾರಣೆ ನಡೆಸಿದೆ. ಯೂಟ್ಯೂಬ್ ವಿಡಿಯೋಗಳನ್ನೂ ಅವಲೋ ಕಿಸುತ್ತಿದೆ. ಧರ್ಮಸ್ಥಳದಲ್ಲಿ ಅಸಹಜ ಸಾವುಗಳಾಗಿವೆ ಎಂಬ ವಿಷಯದಲ್ಲಿ ಧರ್ಮಸ್ಥಳದ ವಿರುದ್ಧ ಕಂಟೆಂಟ್ ರಚಿಸಲು ಆನ್‌ಲೈನ್ ಕಂಟೆಂಟ್‌ವೀರರಿಗೆ ಹಣ ನೀಡಲಾಗಿದೆ ಎಂದು ‘ಗೋಲ್ಡನ್ ಕನ್ನಡಿಗ’ ಎಂಬ ಯೂಟ್ಯೂಬ್ ಚಾನೆಲ್‌ನ ಸುಮಂತ್ ಗೌಡ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ. ಈ ಪ್ರಚಾರ ಅಭಿಯಾನಕ್ಕೆ ಕಂಟೆಂಟ್ ಮಾಡಲು ನನಗೂ ಹಣದ ಆಫರ್ ನೀಡಲಾಗಿತ್ತು ಎಂಬುದಾಗಿ ಆತ ಹೇಳಿದ್ದಾನೆ.

ನಮ್ಮ ದೇಶದಲ್ಲಿ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ಬಂದ್ ಮಾಡುವ ಕಠಿಣ ಕಾನೂನು ಎಷ್ಟರ ಮಟ್ಟಿಗೆ ಅಗತ್ಯ ಇದೆ ಎನ್ನುವುದಕ್ಕೆ ಬುರುಡೆ ಮತ್ತು ಸುಜಾತ ಭಟ್ ಕೇಸ್ ತಾಜಾ ಉದಾಹರಣೆ. ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆ ಸಮೇತ ಸತ್ಯ ಹೇಳುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ದುರುದ್ದೇಶದಿಂದ ವ್ಯೂಸ್, ಲೈಕ್‌ಗಳನ್ನು ಹೆಚ್ಚಿಸಿಕೊಳ್ಳಲು, ಆ ಮೂಲಕ ದುಡ್ಡು ಮಾಡಲು, ಕಾಲ್ಪನಿಕ ಕಂಟೆಂಟ್ ಸೃಷ್ಟಿಸುವವರ ಹೆಡೆಮುರಿ ಕಟ್ಟುವ ಕಾನೂನು ಸಾಮಾಜಿಕ ಆರೋಗ್ಯ ಕಾಪಾಡಲು ಅತ್ಯವಶ್ಯಕ.

ಈಚಿನ ವರ್ಷಗಳಲ್ಲಿ ನಕಲಿ ಸುದ್ದಿಗಳ ಹಾವಳಿ ಹೆಚ್ಚುತ್ತಿದ್ದುದರಿಂದಲೇ ಕೇಂದ್ರ ಸರಕಾರವು, ಮಾಹಿತಿ ತಂತ್ರಜ್ಞಾನ (Intermediary Guidelines and Digital Media Ethics Code) ನಿಯಮಗಳು, 2021 (ಐಟಿ ನಿಯಮಗಳು) ತಿದ್ದುಪಡಿ ಕಾನೂನನ್ನು 2023ರಲ್ಲಿ ಪರಿಚಯಿಸಿತ್ತು. ಈ ಮೂಲಕ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಗುರುತಿಸಲು ಕೇಂದ್ರ ಸರಕಾರ ನೇಮಿಸಿದ ಫ್ಯಾಕ್ಸ್‌ ಚೆಕಿಂಗ್ ಯೂನಿಟ್‌ಗಳಿಗೆ ಅಧಿಕಾರ ನೀಡಲಾಗಿತ್ತು.

ಆದರೆ ಈ ತಿದ್ದುಪಡಿ ಕಾನೂನನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಅರ್ಜಿದಾರರ ಪರ ತೀರ್ಪು ನೀಡಿದ್ದ ಹೈಕೋರ್ಟ್, “ಈ ಕಾನೂನು ಸಂವಿಧಾನದ 14 ಮತ್ತು 19ನೇ ವಿಧಿಗಳ ಅಡಿ ಯಲ್ಲಿ ಸಮಾನತೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕು ಗಳನ್ನು ಉಲ್ಲಂಘಿಸುತ್ತದೆ.

ಹಾಗಾಗಿ ಕಾನೂನು ಅಸಾಂವಿಧಾನಿಕ" ಎಂದು ತೀರ್ಪು ನೀಡಿತು. ಹೀಗಾಗಿ, ಇದಕ್ಕೀಗ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಿಂದಲೇ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಡುವೆ, ಕರ್ನಾಟಕ ಸರಕಾರ ಕೂಡ ಸುಳ್ಳು ಸುದ್ದಿ ತಡೆ ವಿಧೇಯಕ ಮಂಡಿಸಲು ತಯಾರಿ ನಡೆಸಿದೆ. ಯೂಟ್ಯೂಬ್, ಫೇಸ್‌ಬುಕ್‌ಗಳಲ್ಲಿ ವಿಡಿಯೋ ಹಂಚಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವ ಸುಳ್ಳು ಗಳನ್ನು ಇದು ಎಷ್ಟರಮಟ್ಟಿಗೆ ನಿಯಂತ್ರಿಸಲಿದೆ ಮತ್ತು ಸುಳ್ಳು ಸುದ್ದಿಯನ್ನು ಗುರುತಿಸುವ ಇದರ ಮಾನದಂಡ ಯಾವುದು ಎನ್ನುವುದನ್ನೆ ಕಾದುನೋಡಬೇಕಿದೆ.

(ಲೇಖಕರು ಹಿರಿಯ ಪತ್ರಕರ್ತರು)