Vishweswhar Bhat Column: ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !
ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ರಕ್ಷಣಾ ಬಜೆಟ್ ಅನ್ನು ಅಧಿಕೃತವಾಗಿ ಘೋಷಿಸುತ್ತವೆ. ಆದರೆ ಇಸ್ರೇಲ್ ತನ್ನ ರಕ್ಷಣಾ ವೆಚ್ಚದ ನಿಖರ ಅಂಕಿ-ಅಂಶಗಳನ್ನು ಎಂದಿಗೂ ಸಂಪೂರ್ಣವಾಗಿ ಬಹಿರಂಗ ಪಡಿಸುವುದಿಲ್ಲ. ಜಗತ್ತಿನ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಇಸ್ರೇಲ್ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಅತಿ ದೊಡ್ಡ ಪಾಲನ್ನು ರಕ್ಷಣೆಗಾಗಿ ಮೀಸಲಿಡುತ್ತದೆ.
-
ಇದೇ ಅಂತರಂಗ ಸುದ್ದಿ
ಇಸ್ರೇಲ್ನ ಭದ್ರತೆಗೆ ಅಮೆರಿಕವು ಪ್ರತಿ ವರ್ಷ ಸುಮಾರು 3.8 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುತ್ತದೆ. ಇದು ಇಸ್ರೇಲ್ ತನ್ನ ಮಿಲಿಟರಿ ತಂತ್ರಜ್ಞಾನವನ್ನು ಜಗತ್ತಿನ ಅತ್ಯುನ್ನತ ಮಟ್ಟದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇಸ್ರೇಲ್ನ ವಾಯುಸೇನೆ ಗಾತ್ರದಲ್ಲಿ ಚಿಕ್ಕದಾಗಿರಬಹುದು, ಆದರೆ ಅದರ ತಾಂತ್ರಿಕ ಸಾಮರ್ಥ್ಯ ಮತ್ತು ಹೊಡೆಯುವ ಶಕ್ತಿ ಅಮೆರಿಕ, ರಷ್ಯಾ ಮತ್ತು ಚೀನಾ ದಂಥ ಮಹಾಶಕ್ತಿಗಳಿಗೆ ಸಮನಾಗಿದೆ.
ಇಸ್ರೇಲ್ ಒಂದು ಸಣ್ಣ ದೇಶವಾದರೂ, ಅದರ ಸೇನಾ ಸಾಮರ್ಥ್ಯ ಮತ್ತು ರಕ್ಷಣಾ ವ್ಯೂಹ ಇಡೀ ಜಗತ್ತನ್ನೇ ಬೆರಗುಗೊಳಿಸುವಂಥದ್ದು. ಭೌಗೋಳಿಕವಾಗಿ ಶತ್ರುರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟಿ ರುವ ಕಾರಣ, ಇಸ್ರೇಲ್ಗೆ ‘ಭದ್ರತೆ’ ಎಂಬುದು ಕೇವಲ ಆದ್ಯತೆಯಲ್ಲ, ಅದು ಅಸ್ತಿತ್ವದ ಪ್ರಶ್ನೆ.
ಇಸ್ರೇಲ್ಗೆ ‘ಸೋಲುವ’ ಆಯ್ಕೆಯಿಲ್ಲ. ಒಂದು ಸಣ್ಣ ತಪ್ಪು ಸಂಭವಿಸಿದರೂ ದೇಶದ ಅಸ್ತಿತ್ವಕ್ಕೇ ಧಕ್ಕೆಯಾಗಬಹುದು. ಇದೇ ಕಾರಣಕ್ಕೆ ಇಸ್ರೇಲ್ ತನ್ನ ಜಿಡಿಪಿಯ ಅತಿ ದೊಡ್ಡ ಪಾಲನ್ನು (ಸರಿ ಸುಮಾರು ಶೇ.5ಕ್ಕೂ ಹೆಚ್ಚು) ರಕ್ಷಣೆಗಾಗಿ ಮೀಸಲಿಡುತ್ತದೆ.
ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ರಕ್ಷಣಾ ಬಜೆಟ್ ಅನ್ನು ಅಧಿಕೃತವಾಗಿ ಘೋಷಿಸುತ್ತವೆ. ಆದರೆ ಇಸ್ರೇಲ್ ತನ್ನ ರಕ್ಷಣಾ ವೆಚ್ಚದ ನಿಖರ ಅಂಕಿ-ಅಂಶಗಳನ್ನು ಎಂದಿಗೂ ಸಂಪೂರ್ಣವಾಗಿ ಬಹಿರಂಗ ಪಡಿಸುವುದಿಲ್ಲ. ಜಗತ್ತಿನ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಇಸ್ರೇಲ್ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಅತಿ ದೊಡ್ಡ ಪಾಲನ್ನು ರಕ್ಷಣೆಗಾಗಿ ಮೀಸಲಿಡುತ್ತದೆ.
ಅಂದಾಜಿನ ಪ್ರಕಾರ, ಇದು ಪ್ರತಿ ವರ್ಷ ದೇಶದ ಜಿಡಿಪಿಯ ಶೇ.4.5ರಿಂದ 5ಕ್ಕಿಂತ ಹೆಚ್ಚು ಇರುತ್ತದೆ. ಹೋಲಿಕೆಯಲ್ಲಿ ನೋಡುವುದಾದರೆ, ಅಮೆರಿಕವು ಸುಮಾರು ಶೇ.3.4ರಷ್ಟು ಖರ್ಚು ಮಾಡಿದರೆ, ಯುರೋಪಿನ ರಾಷ್ಟ್ರಗಳು ಶೇ.2ಕ್ಕಿಂತ ಕಡಿಮೆ ಖರ್ಚು ಮಾಡುತ್ತವೆ. ಇಸ್ರೇಲ್ನ ರಕ್ಷಣಾ ಬಜೆಟ್ ನಲ್ಲಿ ‘ಕಪ್ಪು ಬಜೆಟ್’ ಎಂದು ಕರೆಯಲಾಗುವ ಒಂದು ಭಾಗವಿದೆ. ಇದು ಗುಪ್ತಚರ ಸಂಸ್ಥೆಗಳಾದ ಮೊಸಾದ್ ಮತ್ತು ಶಿನ್ ಬೆಟ್ಗಳ ಕಾರ್ಯಾಚರಣೆ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಂಶೋಧನೆಗೆ ಬಳಕೆಯಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಮರುಭೂಮಿಯಲ್ಲೂ ಮೀನುಗಾರಿಕೆ: ಇದು ಇಸ್ರೇಲ್ ಮಾದರಿ
ಇಸ್ರೇಲ್ನ ಭದ್ರತೆಗೆ ಅಮೆರಿಕವು ಪ್ರತಿ ವರ್ಷ ಸುಮಾರು 3.8 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುತ್ತದೆ. ಇದು ಇಸ್ರೇಲ್ ತನ್ನ ಮಿಲಿಟರಿ ತಂತ್ರಜ್ಞಾನವನ್ನು ಜಗತ್ತಿನ ಅತ್ಯುನ್ನತ ಮಟ್ಟದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇಸ್ರೇಲ್ʼನ ವಾಯುಸೇನೆ ಗಾತ್ರದಲ್ಲಿ ಚಿಕ್ಕದಾಗಿರಬಹುದು, ಆದರೆ ಅದರ ತಾಂತ್ರಿಕ ಸಾಮರ್ಥ್ಯ ಮತ್ತು ಹೊಡೆಯುವ ಶಕ್ತಿ ಅಮೆರಿಕ, ರಷ್ಯಾ ಮತ್ತು ಚೀನಾ ದಂಥ ಮಹಾಶಕ್ತಿಗಳಿಗೆ ಸಮನಾಗಿದೆ.
ಇಸ್ರೇಲ್ ಬಳಿ ಇರುವ ಯುದ್ಧ ವಿಮಾನಗಳು ಕೇವಲ ಯಂತ್ರಗಳಲ್ಲ, ಅವು ಅತ್ಯಾಧುನಿಕ ಕಂಪ್ಯೂ ಟರ್ಗಳು. ಅಮೆರಿಕದ ಹೊರತಾಗಿ ಎಫ್ -35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಯುದ್ಧದಲ್ಲಿ ಬಳಸಿದ ಮೊದಲ ದೇಶ ಇಸ್ರೇಲ್. ಇವು ಶತ್ರುಗಳ ರಾಡಾರ್ಗೆ ಸಿಗದೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ. ಅಮೆರಿಕದಿಂದ ವಿಮಾನಗಳನ್ನು ಖರೀದಿಸಿದರೂ, ಇಸ್ರೇಲ್ ಅವುಗಳಿಗೆ ತನ್ನದೇ ಆದ ಇಲೆಕ್ಟ್ರಾನಿಕ್ ವಾರ್ ಫೇರ್ ಸಿಸ್ಟಮ್ಗಳು ಮತ್ತು ಕ್ಷಿಪಣಿಗಳನ್ನು ಅಳವಡಿಸುತ್ತದೆ. ಇದರಿಂದಾಗಿ ಇಸ್ರೇಲಿ ವಿಮಾನಗಳು ಜಗತ್ತಿನ ಬೇರೆಲ್ಲ ವಿಮಾನಗಳಿಗಿಂತ ಭಿನ್ನ ಮತ್ತು ಶಕ್ತಿಯುತ ವಾಗಿರುತ್ತವೆ.
ಇಸ್ರೇಲ್ ತನ್ನ ವಾಯುಸೇನೆಗೆ ಅತ್ಯುತ್ತಮ ಪೈಲಟ್ಗಳನ್ನು ಮಾತ್ರ ಆಯ್ಕೆ ಮಾಡುತ್ತದೆ. ಇವರ ತರಬೇತಿಯ ಮಟ್ಟ ಎಷ್ಟು ಕಠಿಣವೆಂದರೆ, ‘ಒಬ್ಬ ಇಸ್ರೇಲಿ ಪೈಲಟ್ 10 ಶತ್ರು ಪೈಲಟ್ಗಳಿಗೆ ಸಮಾನ’ ಎಂಬ ಮಾತಿದೆ. 1967ರ 6 ದಿನಗಳ ಯುದ್ಧದಲ್ಲಿ ಇಸ್ರೇಲಿ ವಾಯುಸೇನೆ ಕೇವಲ 3 ಗಂಟೆ ಗಳಲ್ಲಿ ಇಡೀ ಈಜಿಪ್ಟ್ ವಾಯುಸೇನೆಯನ್ನು ನೆಲಸಮ ಮಾಡಿ ಜಗತ್ತನ್ನೇ ಚಕಿತಗೊಳಿಸಿತ್ತು.
ಇಸ್ರೇಲ್ ಕೇವಲ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ, ಅದು ಜಗತ್ತಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತದೆ. ಶತ್ರುಗಳು ಉಡಾಯಿಸುವ ರಾಕೆಟ್ಗಳನ್ನು ಗಾಳಿಯ ಹೊಡೆದುರುಳಿಸುವ ಐರನ್ ಡೋಮ್ ತಂತ್ರಜ್ಞಾನ ಇಸ್ರೇಲ್ನ ಸುರಕ್ಷಾ ಕವಚ. ಇದು ಇಸ್ರೇಲ್ನ ರಕ್ಷಣಾ ವ್ಯವಸ್ಥೆಯ ಅತಿ ದೊಡ್ಡ ಹೆಮ್ಮೆ. ಇದು ಶೇ.90ಕ್ಕಿಂತ ಹೆಚ್ಚು ಯಶಸ್ಸಿನ ಪ್ರಮಾಣ ಹೊಂದಿದೆ.
ಆರೋ ಮತ್ತು ಡೇವಿಡ್ಸ್ ಸ್ಲಿಂಗ್ ದೂರದ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ಬಳಸುವ ವ್ಯವಸ್ಥೆಗಳು. ಇಸ್ರೇಲ್ ಸೈಬರ್ ಯುದ್ಧತಂತ್ರದಲ್ಲಿ ವಿಶ್ವದ ಅಗ್ರಗಣ್ಯ ದೇಶ. ಶತ್ರುಗಳ ಕಂಪ್ಯೂಟರ್ ವ್ಯವಸ್ಥೆಯನ್ನು ಹ್ಯಾಕ್ ಮಾಡುವ ಮೂಲಕ ಯುದ್ಧವನ್ನು ಪ್ರಾರಂಭವಾಗುವ ಮೊದಲೇ ಮುಗಿಸುವ ಸಾಮರ್ಥ್ಯ ಇಸ್ರೇಲ್ಗಿದೆ.
ಇಸ್ರೇಲ್ನ ವಿಸ್ತೀರ್ಣ ಸುಮಾರು 22000 ಚದರ ಕಿಲೋ ಮೀಟರ್ ಮಾತ್ರ. ಅಂದರೆ ನಮ್ಮ ಬೆಳಗಾವಿ ಜಿಗಿಂತ ಸ್ವಲ್ಪ ದೊಡ್ಡದು. ಆದರೆ ಇದರ ಸುತ್ತಲೂ ಇರುವ ಶತ್ರುಗಳು ಇಸ್ರೇಲ್ʼನ ಅಸ್ತಿತ್ವವನ್ನೇ ಅಳಿಸಲು ಬಯಸುತ್ತಾರೆ. ಇಸ್ರೇಲ್ಗೆ ಯುದ್ಧದಲ್ಲಿ ಸೋಲುವ ಆಯ್ಕೆಯಿಲ್ಲ. ಒಂದು ಬಾರಿ ಸೋತರೆ ಆ ದೇಶವೇ ಇರುವುದಿಲ್ಲ. ಹಾಗಾಗಿಯೇ ಅದು ತನ್ನ ಸೇನೆಯ ಮೇಲೆ ಅತಿಯಾದ ಹೂಡಿಕೆ ಮಾಡು ತ್ತದೆ.
ಇಸ್ರೇಲ್ನಲ್ಲಿ ಪ್ರತಿಯೊಬ್ಬ ನಾಗರಿಕನೂ (ಕೆಲವು ವಿನಾಯಿತಿ ಹೊರತುಪಡಿಸಿ) ಮಿಲಿಟರಿ ಸೇವೆ ಸಲ್ಲಿಸುವುದು ಕಡ್ಡಾಯ. ಪುರುಷರು 3 ವರ್ಷ ಮತ್ತು ಮಹಿಳೆಯರು 2 ವರ್ಷ ಸೇನೆಯಲ್ಲಿ ಇರಲೇ ಬೇಕು. ಇದರಿಂದಾಗಿ ಯುದ್ಧದ ಸಮಯದಲ್ಲಿ ಇಡೀ ದೇಶವೇ ಸೈನಿಕರ ಪಡೆಯಾಗಿ ಬದಲಾಗುತ್ತದೆ.
ಇಸ್ರೇಲ್ ತನ್ನ ರಕ್ಷಣಾ ವೆಚ್ಚವನ್ನು ರಹಸ್ಯವಾಗಿರಿಸಿದರೂ, ಅದರ ಪ್ರಭಾವ ಜಗತ್ತಿಗೆ ಸ್ಪಷ್ಟವಾಗಿ ಕಾಣುತ್ತದೆ. ಅಮೆರಿಕ ಅಥವಾ ರಷ್ಯಾದಂಥ ದೊಡ್ಡ ಭೂಪ್ರದೇಶವಿಲ್ಲದಿದ್ದರೂ, ತಂತ್ರಜ್ಞಾನ, ಬುದ್ಧಿವಂತಿಕೆ ಮತ್ತು ದೇಶಪ್ರೇಮದ ಬಲದಿಂದ ಇಸ್ರೇಲ್ ಇಂದು ಜಗತ್ತಿನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿದೆ.
ಇಸ್ರೇಲ್ನ ರಕ್ಷಣಾ ನೀತಿಯು ಕೇವಲ ಸಿದ್ಧಾಂತವಲ್ಲ, ಅದು ಆ ದೇಶದ ಉಳಿವಿನ ಮಂತ್ರ. ‘ನಾವು ಬದುಕಬೇಕಾದರೆ ಶತ್ರುವಿಗಿಂತ ಹತ್ತು ಪಟ್ಟು ಹೆಚ್ಚು ಬಲಶಾಲಿಯಾಗಿರಬೇಕು’ ಎಂಬ ತತ್ವವು ಇಸ್ರೇಲ್ನ ಪ್ರತಿಯೊಂದು ಸೇನಾ ಚಟುವಟಿಕೆ ಮತ್ತು ಅಗಾಧ ರಕ್ಷಣಾ ವೆಚ್ಚದ ಹಿಂದಿರುವ ಮೂಲ ಪ್ರೇರಣೆಯಾಗಿದೆ. ಇಸ್ರೇಲ್ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ, ಸಂಖ್ಯಾಬಲದಲ್ಲಿ ಶತ್ರುಗಳಿಗಿಂತ ಮುಂದಿರಲು ಸಾಧ್ಯವಿಲ್ಲ.
ಆದ್ದರಿಂದ, ಅದು ‘ಗುಣಮಟ್ಟ’ಕ್ಕೆ ಆದ್ಯತೆ ನೀಡುತ್ತದೆ. ಶತ್ರುವಿನ ಬಳಿ ಹತ್ತು ವಿಮಾನಗಳಿದ್ದರೆ, ಇಸ್ರೇಲ್ ತನ್ನಲ್ಲಿರುವ ಒಂದು ವಿಮಾನವು ಆ ಹತ್ತು ವಿಮಾನಗಳನ್ನು ಏಕಕಾಲದಲ್ಲಿ ಎದುರಿಸು ವಷ್ಟು ತಾಂತ್ರಿಕವಾಗಿ ಪ್ರಬಲವಾಗಿರುವಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಅದು ಪ್ರತಿವರ್ಷ ಬಿಲಿಯನ್ಗಟ್ಟಲೆ ಡಾಲರ್ ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ (ಈ) ಸುರಿಯುತ್ತದೆ.
ಇಸ್ರೇಲ್ ತನ್ನ ರಕ್ಷಣಾ ವೆಚ್ಚವನ್ನು ಎರಡು ರೀತಿಯಲ್ಲಿ ಹಂಚಿಕೆ ಮಾಡುತ್ತದೆ. ಒಂದು ‘ರಕ್ಷಣೆ’ (ಉದಾಹರಣೆಗೆ: ಐರನ್ ಡೋಮ್), ಮತ್ತೊಂದು ‘ಪ್ರತಿರೋಧ’ ಅಥವಾ ದಾಳಿ. ಶತ್ರುಗಳು ದಾಳಿ ಮಾಡಲು ಯೋಚಿಸುವ ಮೊದಲೇ ಅವರಲ್ಲಿ ಭಯ ಹುಟ್ಟಿಸುವಂಥ ಮಾರಕ ಆಯುಧಗಳನ್ನು ಇಸ್ರೇಲ್ ಹೊಂದಿರುತ್ತದೆ. ಬೇರೆ ದೇಶಗಳ ಮೇಲೆ ಅವಲಂಬಿತವಾಗುವುದು ಅಪಾಯಕಾರಿ ಎಂದು ನಂಬುವ ಇಸ್ರೇಲ್, ತಾನೇ ಸ್ವತಃ ಅತ್ಯಾಧುನಿಕ ಯುದ್ಧ ಟ್ಯಾಂಕ್ಗಳು, ಕ್ಷಿಪಣಿಗಳು ಮತ್ತು ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ಸ್ವದೇಶಿ ತಂತ್ರಜ್ಞಾನದ ಅಭಿವೃದ್ಧಿಯು ಅತ್ಯಂತ ದುಬಾರಿಯಾಗಿದ್ದರೂ, ಯುದ್ಧದ ಸಮಯದಲ್ಲಿ ಸ್ವಾಯತ್ತತೆಯನ್ನು ನೀಡುತ್ತದೆ.
ಆಧುನಿಕ ಯುದ್ಧರಂಗವು ಕೇವಲ ಭೂಮಿ, ನೀರು ಅಥವಾ ಆಕಾಶಕ್ಕೆ ಸೀಮಿತವಾಗಿಲ್ಲ; ಅದು ಈಗ ಕಂಪ್ಯೂಟರ್ ಪರದೆಗಳು ಮತ್ತು ಅಗೋಚರ ರಹಸ್ಯ ಕಾರ್ಯಾಚರಣೆಗಳಿಗೂ ವ್ಯಾಪಿಸಿದೆ. ಇದನ್ನು ಜಗತ್ತಿಗಿಂತ ಮೊದಲೇ ಅರಿತ ಇಸ್ರೇಲ್, ತನ್ನ ಭದ್ರತೆಯ ಬಹುದೊಡ್ಡ ಪಾಲನ್ನು ಸೈಬರ್ ಯುದ್ಧ ತಂತ್ರ ಮತ್ತು ಗುಪ್ತಚರ ಇಲಾಖೆಯ ಮೇಲೆ ಹೂಡಿಕೆ ಮಾಡುತ್ತದೆ.
ಇಸ್ರೇಲ್ನ ‘ಯೂನಿಟ್ 8200’ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈಬರ್ ಸೇನೆಗಳಲ್ಲಿ ಒಂದು. ಈ ಘಟಕ ವು ಶತ್ರುರಾಷ್ಟ್ರಗಳ ವಿದ್ಯುತ್ ಸ್ಥಾವರಗಳು, ಪರಮಾಣು ಕೇಂದ್ರಗಳು ಮತ್ತು ಸಂವಹನ ವ್ಯವಸ್ಥೆ ಗಳನ್ನು ಡಿಜಿಟಲ್ ರೂಪದ ಹೈಜಾಕ್ ಮಾಡುವ ಅಥವಾ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
ಉದಾಹರಣೆಗೆ, ಇರಾನ್ನ ಪರಮಾಣು ಸ್ಥಾವರದ ಮೇಲೆ ನಡೆದ ಸೈಬರ್ ದಾಳಿಯು ಯಾವುದೇ ಬಾಂಬ್ ಇಲ್ಲದೆಯೇ ಅವರ ವ್ಯವಸ್ಥೆಯನ್ನು ಹಾನಿಗೊಳಿಸಿತ್ತು. ಇದು ಶತ್ರುವಿನ ಮೂಲ ಸೌಕರ್ಯ ವನ್ನು ಕುಳಿತ ನಿಷ್ಕ್ರಿಯಗೊಳಿಸುವ ತಂತ್ರ. ಇಸ್ರೇಲ್ನ ಬಾಹ್ಯ ಗುಪ್ತಚರ ಸಂಸ್ಥೆಯಾದ ಮೊಸಾದ್, ಶತ್ರುಗಳ ರಹಸ್ಯಗಳನ್ನು ಮೊದಲೇ ತಿಳಿಯುವಲ್ಲಿ ಅಪ್ರತಿಮವಾದುದು.
ಶತ್ರು ದೇಶದೊಳಗೆ ನುಗ್ಗಿ ಅವರ ಯೋಜನೆಗಳನ್ನು ವಿಫಲಗೊಳಿಸುವುದು, ರಹಸ್ಯ ನಕ್ಷೆಗಳನ್ನು ಕಳವು ಮಾಡುವುದು ಅಥವಾ ಪ್ರಮುಖ ಶತ್ರು ವ್ಯಕ್ತಿಗಳನ್ನು ತಟಸ್ಥಗೊಳಿಸುವುದು ಮೊಸಾದ್ನ ಕಾರ್ಯಿಧಾನ. ‘ಶತ್ರುವು ದಾಳಿಯ ಯೋಜನೆ ರೂಪಿಸುವ ಮೊದಲೇ ಅವರ ಗುರಿ ಇಸ್ರೇಲ್ ಆಗಿರು ತ್ತದೆ’ ಎಂಬಂತೆ ಇವರು ಕೆಲಸ ಮಾಡುತ್ತಾರೆ. ಈ ಅಗೋಚರ ಯುದ್ಧವು ನೇರ ಯುದ್ಧಕ್ಕಿಂತ ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ಜೀವಹಾನಿಕಾರಕ.
ಸಾಂಪ್ರದಾಯಿಕ ಯುದ್ಧದಲ್ಲಿ ಹತ್ತಿರ ಬಂದಾಗ ಮಾತ್ರ ಶತ್ರುವನ್ನು ಹೊಡೆಯಬಹುದು. ಆದರೆ ಇಸ್ರೇಲ್ನ ಈ ತಂತ್ರಜ್ಞಾನವು ಸಾವಿರಾರು ಕಿ.ಮೀ. ದೂರದ ಶತ್ರುವಿನ ಆರ್ಥಿಕತೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಕುಸಿದು ಬೀಳುವಂತೆ ಮಾಡುತ್ತದೆ. ಮಾಹಿತಿಯೇ ಶಕ್ತಿಯಾಗಿರುವ ಈ ಕಾಲದಲ್ಲಿ, ಇಸ್ರೇಲ್ ತನ್ನ ಶತ್ರುಗಳ ಬಗ್ಗೆ ಹೊಂದಿರುವ ನಿಖರವಾದ ಮಾಹಿತಿ ಮತ್ತು ಅವರ ಡಿಜಿಟಲ್ ಜಾಲದ ಮೇಲಿನ ಹಿಡಿತವು ಅವರನ್ನು ಹತ್ತು ಪಟ್ಟು ಹೆಚ್ಚು ಪ್ರಬಲವಾಗಿಸುತ್ತದೆ.
ಇಸ್ರೇಲ್ ರಕ್ಷಣೆಗಾಗಿ ಮಾಡುವ ಹೂಡಿಕೆಯು ವ್ಯರ್ಥವಾಗುವುದಿಲ್ಲ. ಅಲ್ಲಿನ ಸೇನೆಯಲ್ಲಿ ಸೈಬರ್ ತರಬೇತಿ ಪಡೆದ ಯುವಕರು ಮುಂದೆ ಜಗತ್ತಿನ ದೊಡ್ಡ ದೊಡ್ಡ ಸೈಬರ್ ಭದ್ರತಾ ಕಂಪನಿಗಳನ್ನು ಸ್ಥಾಪಿಸುತ್ತಾರೆ. ಇದು ದೇಶದ ಭದ್ರತೆಯ ಜತೆಗೆ ಆರ್ಥಿಕತೆಯನ್ನೂ ಬಲಪಡಿಸುತ್ತದೆ.
ಇಸ್ರೇಲ್ ಇಂದಿನ ಯುದ್ಧವನ್ನು, ರಕ್ತ ಚೆಲ್ಲುವ ಮೊದಲೇ ‘ಮಾಹಿತಿ’ ಮತ್ತು ‘ತಂತ್ರಜ್ಞಾನ’ದ ಮೂಲಕ ಗೆಲ್ಲಲು ಬಯಸುತ್ತದೆ. ಡಿಫೆನ್ಸ್ ಲಾಬಿಗೆ ಮಣಿದು, ಇಸ್ರೇಲ್ ತನ್ನ ಆದಾಯದ ದೊಡ್ಡ ಪಾಲನ್ನು ರಕ್ಷಣೆಗೆ ಖರ್ಚು ಮಾಡುವುದಿಲ್ಲ. ಬದಲಾಗಿ ‘ಮತ್ತೊಮ್ಮೆ ಇತಿಹಾಸ ಮರುಕಳಿಸಬಾರದು’ ಮತ್ತು ತನ್ನ ಅಸ್ತಿತ್ವವನ್ನು ಯಾರೂ ಅಳಿಸಲು ಸಾಧ್ಯವಾಗಬಾರದು ಎಂಬ ದೃಢ ಸಂಕಲ್ಪಕ್ಕಾಗಿ ಹಾಗೆ ಮಾಡುತ್ತದೆ.
ಆಧುನಿಕ ಸೈಬರ್ ಭದ್ರತೆ
ಇಸ್ರೇಲ್ ದೇಶವು ಜಾಗತಿಕ ಸೈಬರ್ ಭದ್ರತಾ ಭೂಪಟದಲ್ಲಿ ಅಧಿಪತಿಯಾಗಿ ಹೊರ ಹೊಮ್ಮಿರು ವುದು ಕೇವಲ ಆಕಸ್ಮಿಕವಲ್ಲ. ಅರಬ್ ರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಸಣ್ಣ ದೇಶಕ್ಕೆ ತಂತ್ರಜ್ಞಾನವೇ ಮೊದಲ ಮತ್ತು ಕೊನೆಯ ರಕ್ಷಣಾ ಕವಚ. ಇಸ್ರೇಲ್ನ ಸೈಬರ್ ಭದ್ರತಾ ತಂತ್ರ ಜ್ಞಾನವು ಇಂದು ವಿಶ್ವದ ಅತ್ಯಾಧುನಿಕ ರಾಷ್ಟ್ರಗಳಿಗೂ ಮಾದರಿಯಾಗಿದೆ. ಸಾಂಪ್ರದಾಯಿಕ ವಾಗಿ ಭೂಮಿ, ನೀರು ಮತ್ತು ಆಕಾಶವನ್ನು ಯುದ್ಧರಂಗ ಎಂದು ಕರೆಯಲಾಗುತ್ತಿತ್ತು. ಆದರೆ ಇಸ್ರೇಲ್ ‘ಸೈಬರ್’ ಅನ್ನು ನಾಲ್ಕನೇ ಯುದ್ಧರಂಗ ಎಂದು ಘೋಷಿಸಿದ ಮೊದಲ ದೇಶಗಳಲ್ಲಿ ಒಂದು.
ಇಸ್ರೇಲ್ನ ಪ್ರಕಾರ, ಒಂದು ದೇಶದ ಬ್ಯಾಂಕಿಂಗ್ ವ್ಯವಸ್ಥೆ, ವಿದ್ಯುತ್ ಜಾಲ ಅಥವಾ ಸಂವಹನ ವ್ಯವಸ್ಥೆಯನ್ನು ಹ್ಯಾಕ್ ಮಾಡುವುದು, ಆ ದೇಶದ ಮೇಲೆ ಬಾಂಬ್ ಎಸೆಯುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ಯುದ್ಧರಂಗ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಗಡಿಯಲ್ಲಿ ನಿಂತ ಸೈನಿಕರು, ಸಮುದ್ರದಲ್ಲಿನ ಯುದ್ಧ ನೌಕೆಗಳು ಅಥವಾ ಆಕಾಶದಲ್ಲಿ ಹಾರುವ ಯುದ್ಧ ವಿಮಾನಗಳು. ಆದರೆ ಇಸ್ರೇಲ್ ಈ ಸಾಂಪ್ರದಾಯಿಕ ಕಲ್ಪನೆಯನ್ನು ಮೀರಿ ಬೆಳೆದಿದೆ.
ಇಸ್ರೇಲ್ ಪಾಲಿಗೆ ಭೂಮಿ, ನೀರು ಮತ್ತು ಆಕಾಶದಷ್ಟೇ ಪ್ರಮುಖವಾದ ನಾಲ್ಕನೇ ಯುದ್ಧರಂಗವೇ ‘ಸೈಬರ್ ಕ್ಷೇತ್ರ’. ಸಾಂಪ್ರದಾಯಿಕ ಯುದ್ಧದಲ್ಲಿ ಶತ್ರು ಯಾರು ಮತ್ತು ಎಲ್ಲಿಂದ ಬರುತ್ತಾರೆ ಎಂಬು ದು ತಿಳಿದಿರುತ್ತದೆ. ಆದರೆ ಸೈಬರ್ ಯುದ್ಧದಲ್ಲಿ ಶತ್ರು ಸಾವಿರಾರು ಮೈಲಿ ದೂರದ ಯಾವುದೋ ಒಂದು ಕತ್ತಲೆ ಕೋಣೆಯಲ್ಲಿ ಕುಳಿತು ದೇಶದ ಮೇಲೆ ದಾಳಿ ಮಾಡಬಹುದು.
ಇಸ್ರೇಲ್ ಸಣ್ಣ ದೇಶವಾದ್ದರಿಂದ, ಅದರ ಭೌತಿಕ ಗಡಿಗಳನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಅದರ ಡಿಜಿಟಲ್ ಗಡಿಗಳನ್ನು ರಕ್ಷಿಸುವುದು ಅಷ್ಟೇ ಅನಿವಾರ್ಯವಾಗಿದೆ. ಒಂದು ದೇಶವನ್ನು ಸೋಲಿಸಲು ಈಗ ಬಾಂಬ್ ಹಾಕಬೇಕಿಲ್ಲ; ಆ ದೇಶದ ಬ್ಯಾಂಕಿಂಗ್ ವ್ಯವಸ್ಥೆ, ವಿದ್ಯುತ್ ಸರಬರಾಜು (ಪವರ್ ಗ್ರಿಡ್) ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಹ್ಯಾಕ್ ಮಾಡಿದರೆ ಸಾಕು, ಇಡೀ ದೇಶ ಸ್ತಬ್ಧವಾಗುತ್ತದೆ.
ಇಸ್ರೇಲ್ ತನ್ನ ರಾಷ್ಟ್ರೀಯ ಭದ್ರತೆಯಲ್ಲಿ ಸೈಬರ್ ಅನ್ನು ಸೇರಿಸಿಕೊಂಡಿರುವುದು ಇಂಥ ಅಪಾಯ ಗಳನ್ನು ತಡೆಯಲು. ಇಸ್ರೇಲ್ನ ‘ಸೈಬರ್ ಡೋಮ’ ವ್ಯವಸ್ಥೆಯು ಕ್ಷಿಪಣಿಗಳನ್ನು ತಡೆಯುವ ಐರನ್ ಡೋಮ್ನಷ್ಟೇ ಶಕ್ತಿಯುತವಾಗಿ ಡಿಜಿಟಲ್ ದಾಳಿಗಳನ್ನು ತಡೆಯುತ್ತದೆ.
ಸೈಬರ್ ಅನ್ನು ನಾಲ್ಕನೇ ಯುದ್ಧರಂಗ ಎಂದು ಪರಿಗಣಿಸಿದ್ದರಿಂದ ಇಸ್ರೇಲ್ ಜಗತ್ತಿನ ಸೈಬರ್ ಭದ್ರತಾ ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ ಇಸ್ರೇಲಿ ಸಾಫ್ಟ್ʼವೇರ್ಗಳನ್ನು ಅವಲಂಬಿಸಿವೆ.
ಇದರಿಂದಾಗಿ ಇಸ್ರೇಲ್ ಕೇವಲ ರಕ್ಷಣಾತ್ಮಕವಾಗಿ ಬಲಗೊಳ್ಳುವುದಲ್ಲದೆ, ಆರ್ಥಿಕವಾಗಿಯೂ ಬಲಿಷ್ಠವಾಗಿದೆ. ಇಸ್ರೇಲ್ನ ಈ ದೂರದೃಷ್ಟಿಯು ‘ಮಾಹಿತಿಯೇ ಆಯುಧ’ ಎಂಬ ತತ್ವದ ಮೇಲೆನಿಂತಿದೆ. ಭೂಮಿ, ನೀರು ಮತ್ತು ಆಕಾಶದಲ್ಲಿ ಎಷ್ಟು ಸಿದ್ಧತೆ ಇದೆಯೋ, ಅಷ್ಟೇ ಸಿದ್ಧತೆ ಸೈಬರ್ ಲೋಕದಲ್ಲೂ ಇರಬೇಕು ಎಂಬುದು ಇಸ್ರೇಲ್ನ ಅಚಲ ನಂಬಿಕೆ. ಇದೇ ಕಾರಣಕ್ಕೆ ಇಸ್ರೇಲ್ ಇಂದು ಸೈಬರ್ ಯುದ್ಧತಂತ್ರದಲ್ಲಿ ಜಗತ್ತಿನ ಅಜೇಯ ಶಕ್ತಿಯಾಗಿದೆ.
ಇಸ್ರೇಲ್ ತನ್ನನ್ನು ತಾನು ಡಿಜಿಟಲ್ ದಾಳಿಗಳಿಂದ ರಕ್ಷಿಸಿಕೊಳ್ಳಲು ಬಹುಸ್ತರದ ಭದ್ರತೆಯನ್ನು ಹೊಂದಿದೆ. ರಾಷ್ಟ್ರೀಯ ಸೈಬರ್ ನಿರ್ದೇಶನಾಲಯ ದೇಶದ ಎಲ್ಲ ನಾಗರಿಕ ಸೈಬರ್ ವ್ಯವಸ್ಥೆ ಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಬ್ಯಾಂಕ್ಗಳು ಅಥವಾ ಆಸ್ಪತ್ರೆಗಳ ಮೇಲೆ ದಾಳಿಯ ಮುನ್ಸೂಚನೆ ಸಿಕ್ಕ ಕೂಡಲೇ ಇದು ಇಡೀ ದೇಶಕ್ಕೆ ಎಚ್ಚರಿಕೆ ನೀಡುತ್ತದೆ.
ಇಸ್ರೇಲ್ನ ನೀರು ಸರಬರಾಜು ಮತ್ತು ವಿದ್ಯುತ್ ವ್ಯವಸ್ಥೆಗಳು ಇಂಟರ್ನೆಟ್ನಿಂದ ಪ್ರತ್ಯೇಕಿಸಲ್ಪಟ್ಟ ‘ಏರ್-ಗ್ಯಾಪ್’ ತಂತ್ರಜ್ಞಾನದ ಮೂಲಕ (ಏರ್ -ಗ್ಯಾಪ್ ಅಂದ್ರೆ ಒಂದು ಕಂಪ್ಯೂಟರ್ ಅಥವಾ ನೆಟ್ವರ್ಕ್ ಅನ್ನು ಇಂಟರ್ನೆಟ್ ಮತ್ತು ಇತರ ಯಾವುದೇ ಅಸುರಕ್ಷಿತ ಸಂಪರ್ಕಗಳಿಂದ ಸಂಪೂರ್ಣವಾಗಿ ಬೇರ್ಪಡಿಸುವ ಭದ್ರತಾ ವಿಧಾನ.
ಹ್ಯಾಕಿಂಗ್ ತಡೆಯಲು ಸೂಕ್ಷ್ಮ ಸೌಲಭ್ಯಗಳಲ್ಲಿ (ಪರಮಾಣು ಕೇಂದ್ರಗಳಂಥ) ಇದನ್ನು ಬಳಸಲಾಗು ತ್ತದೆ. ಇದರಿಂದ ಹ್ಯಾಕರ್ಗಳು ಸುಲಭವಾಗಿ ಒಳನುಗ್ಗಲು ಸಾಧ್ಯವಿಲ್ಲ. ಇಸ್ರೇಲ್ ಕೇವಲ ರಕ್ಷಣೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ಶತ್ರುಗಳು ದಾಳಿ ಮಾಡುವ ಮೊದಲೇ ಅವರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಜಗತ್ತಿನ ಒಟ್ಟು ಸೈಬರ್ ಭದ್ರತಾ ಹೂಡಿಕೆಯಲ್ಲಿ ಇಸ್ರೇಲ್ ಸುಮಾರು ಶೇ.20ರಿಂದ 30ರಷ್ಟು ಪಾಲನ್ನು ಹೊಂದಿದೆ.
ಇಸ್ರೇಲ್ ತಯಾರಿಸಿದ ಭದ್ರತಾ ಸಾಫ್ಟ್ ವೇರ್ಗಳನ್ನು ಜಗತ್ತಿನ ಬಹುತೇಕ ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸರಕಾರಗಳು ಬಳಸುತ್ತವೆ. ಭಾರತವೂ ತನ್ನ ಗಡಿ ಭದ್ರತೆ ಮತ್ತು ಸೈಬರ್ ಸುರಕ್ಷತೆಗಾಗಿ ಇಸ್ರೇಲ್ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ತಂತ್ರಜ್ಞಾನ ಬೆಳೆದಂತೆ ಶತ್ರು ಗಳೂ ಬಲಶಾಲಿಯಾಗುತ್ತಿದ್ದಾರೆ.
ಇರಾನ್ ಮತ್ತು ಹಮಾಸ್ನಂಥ ಸಂಘಟನೆಗಳು ಕೂಡ ಈಗ ಸೈಬರ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿವೆ. ಇದನ್ನು ಎದುರಿಸಲು ಇಸ್ರೇಲ್ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಡೀಪ್ ಲರ್ನಿಂಗ್ ಕಡೆಗೆ ಗಮನ ಹರಿಸುತ್ತಿದೆ. ಇಸ್ರೇಲ್ನ ಸೈಬರ್ ಭದ್ರತಾ ತಂತ್ರಜ್ಞಾನವು ಕೇವಲ ಸಾಫ್ಟ್ʼವೇರ್ ಮತ್ತು ಹಾರ್ಡ್ವೇರ್ಗಳ ಸಂಗ್ರಹವಲ್ಲ.
ಅದು ತನ್ನ ಅಸ್ತಿತ್ವಕ್ಕೆ ಅಡಿಪಾಯ ಎಂಬುದನ್ನು ಅರಿತಿರುವ ಇಸ್ರೇಲ್, ಡಿಜಿಟಲ್ ಜಗತ್ತಿನಲ್ಲಿ ತನ್ನ ಶಕ್ತಿಯನ್ನು ವಿಸ್ತರಿಸುವ ಮೂಲಕ ಭೌತಿಕ ಗಡಿಗಳನ್ನು ಮೀರಿ ತನ್ನ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳುತ್ತಿದೆ. ಈ ಹೂಡಿಕೆಯೇ ಇಸ್ರೇಲ್ ಅನ್ನು ತನ್ನ ಶತ್ರುಗಳಿಗಿಂತ ಹತ್ತು ಪಟ್ಟು ಹೆಚ್ಚು ಪ್ರಬಲ ವನ್ನಾಗಿ ಮಾಡಿದೆ.
ಸ್ಟಕ್ಸ್ ನೆಟ್ ಎಂಬ ಡಿಜಿಟಲ್ ಆಯುಧ
ಸ್ಟಕ್ಸ್ ನೆಟ್ ಎಂಬುದು ಕೇವಲ ಒಂದು ಕಂಪ್ಯೂಟರ್ ವೈರಸ್ ಅಲ್ಲ, ಅದು ಇಸ್ರೇಲ್ ಅಭಿವೃದ್ಧಿ ಪಡಿಸಿದ ಜಗತ್ತಿನ ಮೊಟ್ಟ ಮೊದಲ ‘ಡಿಜಿಟಲ್ ಆಯುಧ’. ಭೌತಿಕವಾಗಿ ಯಾವುದೇ ಬಾಂಬ್ ಅಥವಾ ಸೈನಿಕರನ್ನು ಬಳಸದೇ, ಕೇವಲ ಸಾಫ್ಟ್ʼವೇರ್ ಕೋಡ್ ಮೂಲಕ ಒಂದು ದೇಶದ ಪರಮಾಣು ಯೋಜನೆಯನ್ನು ಹೇಗೆ ಹಳಿ ತಪ್ಪಿಸಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.
2010ರ ಸುಮಾರಿಗೆ ಇರಾನ್ ತನ್ನ ‘ನಟಾಂಜ್’ ಪರಮಾಣು ಸ್ಥಾವರದಲ್ಲಿ ಯುರೇನಿಯಂ ಪುಷ್ಟೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಿತ್ತು. ಇದನ್ನು ತಡೆಯಲು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಈ ಸಂಕೀರ್ಣವಾದ ‘ವರ್ಮ್’ ಅನ್ನು ರೂಪಿಸಿದವು. ಇದರ ಮುಖ್ಯ ಗುರಿ ಇರಾನ್ನ ಪರಮಾಣು ಸ್ಥಾವರಗಳಲ್ಲಿದ್ದ ಸೆಂಟ್ರಿ ಫ್ಯೂಜ್ಗಳನ್ನು ನಾಶಪಡಿಸುವುದಾಗಿತ್ತು (ಸೆಂಟ್ರಿಫ್ಯೂಜ್ ಎನ್ನುವುದು ಒಂದು ವಸ್ತುವನ್ನು ಅದರ ಕೇಂದ್ರಬಿಂದುವಿನ ಸುತ್ತ ಅತಿ ವೇಗವಾಗಿ ತಿರುಗಿಸುವ ಮೂಲಕ, ಅದರಲ್ಲಿರುವ ವಿವಿಧ ಸಾಂದ್ರತೆಯ ಘಟಕಗಳನ್ನು ಬೇರ್ಪಡಿಸುವ ಒಂದು ಯಂತ್ರ).
ನಟಾಂಜ್ ಸ್ಥಾವರವು ಇಂಟರ್ನೆಟ್ನಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದರೂ (ಅಜ್ಟಿಜZmmಛಿb), ಸ್ಟಕ್ಸ್ ನೆಟ್ ಅಲ್ಲಿಗೆ ತಲುಪಿದ್ದು ಒಂದು ಸಣ್ಣ ಯುಎಸ್ಬಿ ಡ್ರೈವ್ ಮೂಲಕ. ಯಾರೋ ಒಬ್ಬ ವ್ಯಕ್ತಿ ಆ ಡ್ರೈವ್ ಅನ್ನು ಸ್ಥಾವರದ ಕಂಪ್ಯೂಟರ್ಗೆ ಜೋಡಿಸಿದಾಗ, ವೈರಸ್ ಇಡೀ ವ್ಯವಸ್ಥೆಯೊಳಗೆ ಹರಡಿತು.
ಇದು ಸಾಫ್ಟ್ʼವೇರ್ನಲ್ಲಿರುವ ‘ಜೀರೋ-ಡೇ’ ಎಂಬ ಅಪರೂಪದ ದೋಷಗಳನ್ನು ಬಳಸಿಕೊಂಡು ಒಳನುಗ್ಗಿತ್ತು. ಸ್ಟಕ್ಸ್ ನೆಟ್ನ ವೈಶಿಷ್ಟ್ಯ ಅಂದ್ರೆ ಅದು ಸದ್ದಿಲ್ಲದೇ ಕೆಲಸ ಮಾಡುವುದು. ಇದು ಅಲ್ಲಿನ ಸೀಮೆ ಕಂಪನಿಯ ಸಿಸ್ಟಮ್ ಗಳನ್ನು ಹ್ಯಾಕ್ ಮಾಡಿ, ಸೆಂಟ್ರಿಫ್ಯೂಜ್ಗಳ ವೇಗವನ್ನು ಅಸಹಜವಾಗಿ ಹೆಚ್ಚಿಸಿತು ಮತ್ತು ತಗ್ಗಿಸಿತು. ಇದರಿಂದಾಗಿ ಯಂತ್ರಗಳು ಅತಿಯಾದ ಒತ್ತಡದಿಂದಾಗಿ ಭೌತಿಕವಾಗಿ ಒಡೆದು ಹೋದವು. ಆಶ್ಚರ್ಯಕರ ವಿಷಯವೆಂದರೆ, ನಿಯಂತ್ರಣ ಕೊಠಡಿಯಲ್ಲಿದ್ದ ಎಂಜಿನಿಯರ್ ಗಳ ಕಂಪ್ಯೂಟರ್ ಪರದೆಯ ಮೇಲೆ ‘ಎಲ್ಲವೂ ಸರಿಯಾಗಿದೆ’ ಎಂಬ ತಪ್ಪು ಮಾಹಿತಿ ತೋರಿಸುತ್ತಿತ್ತು!
ಸ್ಟಕ್ಸ್ ನೆಟ್ನಿಂದಾಗಿ ಇರಾನ್ನ ಸಾವಿರಕ್ಕೂ ಹೆಚ್ಚು ಸೆಂಟ್ರಿ ಫ್ಯೂಜ್ ಗಳು ನಾಶವಾದವು ಮತ್ತು ಅವರ ಪರಮಾಣು ಯೋಜನೆ ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಇದು ಸೈಬರ್ ಯುದ್ಧತಂತ್ರದ ಇತಿಹಾಸದ ಅತ್ಯಂತ ಸಂಕೀರ್ಣವಾದ ದಾಳಿಯಾಗಿ ದಾಖಲಾಗಿದೆ. ಸೈಬರ್ ದಾಳಿಯ ಮೂಲಕ ಭೌತಿಕ ವಸ್ತುವನ್ನು ನಾಶಪಡಿಸಬಹುದು ಎಂದು ಇದು ಇಡೀ ಜಗತ್ತಿಗೆ ತೋರಿಸಿಕೊಟ್ಟಿತು. ಸ್ಟಕ್ಸ್ ನೆಟ್ ಇಸ್ರೇಲ್ನ ಸೈಬರ್ ಬಲದ ಸಂಕೇತ. ಯಾವುದೇ ಯುದ್ಧ ಘೋಷಣೆಯಿಲ್ಲದೇ ಶತ್ರುವನ್ನು ದುರ್ಬಲಗೊಳಿಸುವ ಇಂಥ ತಂತ್ರಗಳು ಇಂದಿನ ಆಧುನಿಕ ಯುದ್ಧದ ಹೊಸ ಮುಖಗಳಾಗಿವೆ.