ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !

ಭಾರತೀಯ ಸಂವಿಧಾನದಲ್ಲಿ ‘ಚೆಕ್ ಆಂಡ್ ಬ್ಯಾಲೆ’ ಎಂಬ ವಿಧಾನವಿದ್ದು, ಇದು ಸಂವಿಧಾನದ ಯಾವುದೇ ಅಂಗವು ತನ್ನದೇ ಆದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ವ್ಯವಸ್ಥೆಯಾಗಿದೆ. ಪರಿಶೀಲನೆಗಳು ಮತ್ತು ಸಮತೋಲನಗಳು ಒಂದು ಅಂಗವು ತುಂಬಾ ಶಕ್ತಿಶಾಲಿಯಾಗದಂತೆ ನೋಡಿ ಕೊಳ್ಳುತ್ತದೆ. ನಮ್ಮ ಸಂವಿಧಾನ ನಿರ್ಮಾತೃಗಳು ಅತ್ಯಂತ ಸ್ಪಷ್ಟವಾಗಿ ಮೂರೂ ಅಂಗಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ನೀಡಿದ್ದಾರೆ.

ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !

ಗಂಟಾಘೋಷ

ಭಾರತದಲ್ಲಿ ಸುಪ್ರೀಂ ಕೋರ್ಟ್ ಬಗ್ಗೆ ಗೌರವ ಮತ್ತು ಘನತೆಯನ್ನು ಯಾವ ಮಟ್ಟದಲ್ಲಿ ಕಾಪಾಡಿ ಕೊಂಡು ಬರುತ್ತಿದ್ದೇವೆಂದರೆ, ಪ್ರಜಾಪ್ರಭುತ್ವದಲ್ಲಿ ಆಧುನಿಕ ಜಗತ್ತಿನ ಯಾವ ದೇಶದಲ್ಲೂ ಇಂಥಾ ದ್ದೊಂದು ಸಂಸ್ಥೆ ನಮಗೆ ಉದಾಹರಣೆಯಾಗಿಯೂ ಸಿಗಲಾರದು ಎಂದೆನಿಸುತ್ತದೆ. 2023ರಲ್ಲಿ ಜಾರ್ಖಂಡ್ ಹೈಕೋರ್ಟ್‌ನ ಹೊಸ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ರಾಷ್ಟ್ರಪತಿ ಗಳು ಮಾತನಾಡುತ್ತ, ಹಲವು ಸುಧಾರಣೆಗಳನ್ನು ತರುತ್ತಿರುವ ಮತ್ತು ಸ್ಥಳೀಯ ಭಾಷೆಗಳಲ್ಲಿ ತೀರ್ಪುಗಳು ಬರುತ್ತಿರುವುದರ ಬಗ್ಗೆ ನನಗೆ ಬಹಳ ಸಂತಸವಿದೆ. ಆದರೆ, ವಿಚಾರಣಾಧೀನ ಕೈದಿಗಳಾಗಿ, ಲಕ್ಷಾಂತರ ಜನ ಸಕಾಲದಲ್ಲಿ ನ್ಯಾಯ ನಿರೀಕ್ಷಣೆಯಲ್ಲಿದ್ದಾರೆ.

ಅವರಿಗೆ, ಅವರ ಕುಟುಂಬದವರಿಗೆ ನ್ಯಾಯಾಲಯದ ಮೇಲಿನ ನಂಬಿಕೆಯೇ ಹೊರಟುಹೋಗಿದೆ. ಎಷ್ಟೋ ನಿರಪರಾಧಿಗಳು ವಿನಾಕಾರಣ ಬಂಧನದಲ್ಲಿದ್ದು, ನ್ಯಾಯ ನಿರೀಕ್ಷೆಯಲ್ಲಿಯೇ ತೀರಿ ಹೋಗಿ ದ್ದಾರೆ. ಇದು ನನಗೆ ಹೆಚ್ಚು ನೋವು ಮಾಡಿದೆ. ಇದನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರೋ ಗೊತ್ತಿಲ್ಲ. ದೇಶದ ಬಡವರು, ನಿರಪರಾಧಿಗಳು ನ್ಯಾಯದಾನದಿಂದ ಮತ್ತು ಸಕಾಲದಲ್ಲಿ ನ್ಯಾಯ ಯುತ ತೀರ್ಪುಗಳಿಂದ ವಂಚಿತರಾಗಬಾರದೆಂಬ ಚಿಂತೆ ನನಗಿದೆ ಎಂದು ಅತ್ಯಂತ ಸೂಕ್ಷ್ಮವಾಗಿ, ಮುಖ್ಯ ನ್ಯಾಯಾಧೀಶರಿಗೆ ಸ್ವತಃ ಪ್ರಮಾಣವಚನ ಬೋಧಿಸುವ ರಾಷ್ಟ್ರಪತಿಯವರೇ ಅಳೆದು ತೂಗಿ ಮಾತನಾಡಿದ್ದರು.

ನ್ಯಾಯಾಲಯ, ನ್ಯಾಯಾಧೀಶರ ಬಗ್ಗೆ ಮಾತನಾಡಲೂ ಹೆದರುತ್ತಿರುವ ಸಂದರ್ಭದಲ್ಲಿ, ಬಿಜೆಪಿಯ ಸಂಸದ ನಿಶಿಕಾಂತ್ ದುಬೆ, 2025ರ ಏಪ್ರಿಲ್ 19ರಂದು, ಈ ದೇಶದಲ್ಲಿ ಕಾನೂನುಗಳನ್ನು ಸುಪ್ರೀಂ ಕೋರ್ಟ್ ಮಾಡುವುದೇ ಆದರೆ, ನಾವೆಲ್ಲ ಜನರಿಂದ ಚುನಾಯಿತರಾಗಿ ಬರುವುದಾದರೂ ಏಕೆ. ಕೂಡಲೇ ಸಂಸತ್ತನ್ನು, ವಿಧಾನಸೌಧಗಳನ್ನು ಮುಚ್ಚುವುದು ಒಳಿತು ಮತ್ತು ದೇಶದಲ್ಲಿ ಆಂತರಿಕ ಯುದ್ಧಗಳೇನಾದರೂ (Civil War) ನಡೆದಲ್ಲಿ ಅದಕ್ಕೆ ಸರ್ವೋಚ್ಚ ನ್ಯಾಯಾಲಯ ನೇರವಾಗಿ ಮತ್ತು ಮುಖ್ಯ ನ್ಯಾಯಾದೀಶ ಸಂಜೀವ್ ಖನ್ಹಾ ಕಾರಣರಾಗುತ್ತಾರೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Gururaj Gantihole Column: ರಾಷ್ಟ್ರೀಯ ಭದ್ರತೆಯೂ ರಾಜಕೀಯ ವಿಷಯವಾದಾಗ !

ವಕ್ಟ್ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಂ ಗುಂಪುಗಳು ದೇಶದ ವಿವಿದೆಡೆ ಕರೆ ಕೊಟ್ಟಿದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು ಪಶ್ಚಿಮ ಬಂಗಾಳದಲ್ಲಂತೂ ಹಾಡು ಹಗಲೇ, ಅಸಹಾಯಕ ಹಿಂದೂ ಕುಟುಂಬಗಳನ್ನು ಭೀಕರವಾಗಿ, ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇವತ್ತಿಗೂ ಬಂಗಾಳ ಹೊತ್ತಿ ಉರಿಯುತ್ತಿದೆ. ಇದರ ಪ್ರತಿಕ್ರಿಯೆಯಾಗಿ, ದುಬೆ ಮಾತಾಡಿದ್ದರು. ಇದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಮತ್ತು ಇಂಡಿ ಕೂಟಗಳು, ‘ಬಿಜೆಪಿ ಹಾಗೂ ಅದರ ಸಂಸದರು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅವಮಾನಿಸಿದ್ದಾರೆ, ನಾವು 40 ದಿನಗಳ ಕಾಲ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ, ನ್ಯಾಯಾಂಗ ನಿಂದನೆ ದಾಖಲಿಸುತ್ತೇವೆ’ ಎಂದೆಲ್ಲ ಮಾದ್ಯಮಗಳ ಮುಂದೆ ಆರ್ಭಟಿಸಿದರು ಕೂಡ.

ಭಾರತೀಯ ಸಂವಿಧಾನದಲ್ಲಿ ‘ಚೆಕ್ ಆಂಡ್ ಬ್ಯಾಲೆ’ ಎಂಬ ವಿಧಾನವಿದ್ದು, ಇದು ಸಂವಿಧಾನದ ಯಾವುದೇ ಅಂಗವು ತನ್ನದೇ ಆದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ವ್ಯವಸ್ಥೆ ಯಾಗಿದೆ. ಪರಿಶೀಲನೆಗಳು ಮತ್ತು ಸಮತೋಲನಗಳು ಒಂದು ಅಂಗವು ತುಂಬಾ ಶಕ್ತಿಶಾಲಿಯಾಗ ದಂತೆ ನೋಡಿಕೊಳ್ಳುತ್ತದೆ. ನಮ್ಮ ಸಂವಿಧಾನ ನಿರ್ಮಾತೃಗಳು ಅತ್ಯಂತ ಸ್ಪಷ್ಟವಾಗಿ ಮೂರೂ ಅಂಗಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ನೀಡಿದ್ದಾರೆ.

ಭಾರತದ ಸಂವಿಧಾನದಲ್ಲಿ ಸರ್ವೋಚ್ಚ ನ್ಯಾಯಾಲಯ ದೇಶದ ನ್ಯಾಯಾಂಗ ವ್ಯವಸ್ಥೆಯ ಶ್ರೇಷ್ಠ ಪೀಠವಾಗಿದೆ. ದೇಶ ಸ್ವತಂತ್ರಗೊಂಡ ಬಳಿಕ, ಸ್ವಂತ ನ್ಯಾಯಾಂಗ ವ್ಯವಸ್ಥೆ ಹೊಂದಲು, ಲಂಡನ್ ನಲ್ಲಿದ್ದ Privy Council ಬದಲಿಗೆ 1950, ಜನವರಿ 28ರಂದು ಭಾರತದಲ್ಲಿ ನ್ಯಾಯಪೀಠವನ್ನು ಸ್ಥಾಪಿಸಲಾಯಿತು.

ಇದಕ್ಕೆ 124 ರಿಂದ 147 ತನಕ ಸಂವಿಧಾನದ ವಿಧಿಗಳು ಮಾರ್ಗದರ್ಶಿಗಳಾಗಿವೆ. ಅದರಂತೆ, (ಅ) ಮೂಲ ನ್ಯಾಯಾಧಿಕಾರ (Original Jurisdiction)- ವಿಧಿ 131: ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಥವಾ ರಾಜ್ಯಗಳ ಪರಸ್ಪರ ವಿವಾದಗಳನ್ನು ನೇರವಾಗಿ ವಿಚಾರಣೆ ಮಾಡಲು ಹಕ್ಕು. (ಆ) ಮೇಲ್ಮನವಿ ನ್ಯಾಯಾಧಿಕಾರ( Appellate Jurisdiction )- ವಿಧಿಗಳು 132, 133, 134: ಹೈಕೋರ್ಟ್ಗ ಳಿಂದ ಬಂದ ಅಪೀಲ್‌ಗಳ ವಿಚಾರಣೆ. (ಸಿವಿಲ್, ಕ್ರಿಮಿನಲ್ ಮತ್ತು ಸಂವಿಧಾನ ಸಂಬಂಧಿತ ಪ್ರಕರಣಗಳು). (ಇ) ಐಚ್ಛಿಕ ಮನವಿ ಅಥವಾ ವಿಶೇಷ ಅನುವಾದ (Special Leave Petition&SLP )-ವಿಧಿ 136: ದೇಶದ ಯಾವುದೇ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಬಹುದು. (ಈ) ಸಂವಿಧಾನ ವ್ಯಾಖ್ಯಾನ (Interpretation of Constitution ): ಸಂವಿಧಾನದಲ್ಲಿ ಉಲ್ಲೇಖಿತ ಹಕ್ಕುಗಳುಮತ್ತು ನಿಯಮಗಳ ಅರ್ಥವನ್ನು ಕೊಡುವ ಕಾರ್ಯ.

(ಉ) ಲೋಕೋಪಯೋಗಿ ಅರ್ಜಿ ( Public Interest Litigation&PIL): ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲಿ ನ್ಯಾಯವನ್ನು ಒದಗಿಸಲು, ಸೇರಿದಂತೆ ಇದರ ಕಾರ್ಯ ಮತ್ತು ವ್ಯಾಪ್ತಿಯನ್ನು ಅತ್ಯಂತ ಸ್ಪಷ್ಟವಾಗಿ ನಮ್ಮ ಸಂವಿಧಾನದಲ್ಲಿ ತಿಳಿಸಲಾಗಿದೆ.

ಒಮ್ಮೊಮ್ಮೆ, ಅಪೆಕ್ಸ್ ಕೋರ್ಟ್ ನಡೆಗಳು ಕಾರ್ಯಾಂಗ ಮತ್ತು‌ ಶಾಸಕಾಂಗದ ಮೇಲೆ ಅತಿಕ್ರಮಣ, ಸೀಮಾ ಉಲ್ಲಂಘಿಸಿ ತೀರ್ಪು ಕೊಡುತ್ತಿದೆ ಎಂಬ ಅಪವಾದಗಳೂ ಕೇಳಿಬರುತ್ತವೆ. ಆದರೂ, ಇಲ್ಲಿಯ ವರೆಗೆ ನ್ಯಾಯಾಂಗವನ್ನು, ಅದರ ಕಾರ್ಯಶೈಲಿಯನ್ನು ಪ್ರಶ್ನೆ ಮಾಡದೆ ಅತ್ಯಂತ ಗೌರವದಿಂದ ಪಾಲಿಸಿಕೊಂಡು ಬರುತ್ತಿದ್ದೇವೆ. ನ್ಯಾಯಾಂಗವನ್ನು, ತೀರ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸುವ, ಕಟು ವಿಮರ್ಶೆ ಮಾಡುವ ಹಾಗಿಲ್ಲ. ಹಾಗೇನಾದರೂ ಮಾಡಿದ್ದೇ ಆದಲ್ಲಿ, ನ್ಯಾಯಾಂಗ ನಿಂದನೆ ವ್ಯಾಪ್ತಿಗೆ (Contempt of Court Act ) ಒಳಪಡುತ್ತಾರೆ.

ಇಷ್ಟಾಗಿಯೂ, ಸಂಸದ ದುಬೆ, ಅಷ್ಟೊಂದು ವ್ಯಗ್ರರಾಗಿ, ಸರ್ವೋಚ್ಚ ನ್ಯಾಯಾಧೀಶರನ್ನೇ ಗುರಿ ಯಾಗಿಸಿಕೊಂಡು ಮಾತನಾಡಿರುವುದು, ದೇಶದ ಮೂಲೆಮೂಲೆಯಲ್ಲೂ ಈ ಕುರಿತು ಬಿಸಿ ಚರ್ಚೆ ಏರುವಂತೆ ಮಾಡಿದೆ. ಇದರ ಮಧ್ಯೆ, ತಮಿಳುನಾಡು ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವಿನ ವಿವಾದವು ಸಂವಿಧಾನಿಕ ಗೊಂದಲ ಉಂಟುಮಾಡಿದೆ. ರಾಜ್ಯಪಾಲ ಎನ್.ರವಿ, ಹಲವು ಮಹತ್ವಪೂರ್ಣ ಬಿಲ್‌ಗಳಿಗೆ ಅನುಮೋದನೆ ನೀಡಲು ವಿಳಂಬ ಮಾಡಿದ್ದರಿಂದ ರಾಜ್ಯ ಸರಕಾರ ಸುಪ್ರೀಂ ಬಳಿ ಹೋಗಿತ್ತು.

ಬಿಲ್‌ಗಳಿಗೆ ಅನುಮೋದನೆ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯಪಾಲರಿಗೆ ಸೂಚಿಸಿದ್ದು, ರಾಜ್ಯಪಾಲರು ಬಿಲ್‌ಗಳನ್ನು ರಾಷ್ಟ್ರಪತಿಗೆ ಕಳುಹಿಸುವುದು ಸಂವಿ ಧಾನ ವಿರೋಧಿಯಾಗಿದ್ದು, ಅವರು ಬಿಲ್ ಗಳನ್ನು ತಕ್ಷಣ ಅನುಮೋದಿಸಬೇಕಾಗಿತ್ತು ಎಂದಿತಲ್ಲದೆ, ರಾಷ್ಟ್ರಪತಿಗಳಿಗೂ ಸಹ ನ್ಯಾಯಾಲಯ 90 ದಿನಗಳೊಳಗೆ ಮಸೂದೆಗಳಿಗೆ ಸಹಿ ಮಾಡಿ ಕಳುಹಿಸಿ ಕೊಡಬೇಕು ಎಂದು ಆಜ್ಞೆ ಹೊರಡಿಸಿದೆ ಕೂಡ!

ಇದಕ್ಕೆ ತುಪ್ಪ ಸುರಿದಂತೆ, ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸಲ್ಲಿಸಿದ ಅರ್ಜಿಯನ್ನು ತಕ್ಷಣವೇ ಕೈಗೆತ್ತಿಕೊಂಡ ನ್ಯಾಯಪೀಠ, ಉಮೀದ್(ವಕ್ಫ್ ಬಿಲ್) ಮಸೂದೆಯನ್ನು‌ ಬಹುತೇಕ ತಡೆಹಿಡಿದು, ಏಕಪಕ್ಷೀಯ ನಿರ್ಧಾರದಂತೆ ಇದು ಕಾಣಿಸುತ್ತಿದ್ದು, ಮೊಘಲರ ಕಾಲದಲ್ಲಿ ಅಥವಾ ನೂರಾರು ವರ್ಷಗಳ ಮಸೀದಿ, ಜಮೀನುಗಳ ದಾಖಲೆ ಕೇಳಿದರೆ ಎಲ್ಲಿಂದ ತರಬೇಕು ಅವರು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಮೇ 5ಕ್ಕೆ ವಿಚಾರಣೆಗೆ ಮುಂದೂಡಿದೆ.

ದೇಶದ ಸರ್ವೋಚ್ಚ ನ್ಯಾಯಾಲಯವು ತನ್ನ ವ್ಯಾಪ್ತಿಮೀರಿ ನಡೆದುಕೊಳ್ಳುತ್ತಿದ್ದು, ದೇಶದಲ್ಲಿ Anarchy (ಅರಾಜಕತೆ) ಸೃಷ್ಟಿಸಲು ಪಿತೂರಿ ನಡೆಸುತ್ತಿದೆ ಎಂದು ಬಹುಸ್ಥರದಲ್ಲಿ ವ್ಯಾಪಕ ಚರ್ಚೆ ಗಳನ್ನು ಹುಟ್ಟುಹಾಕಿತು. ಮೋದಿ ಸರಕಾರವು ಜಗದಂಬಿಕಾ ಪಾಲ್ ಅಧ್ಯಕ್ಷತೆಯಲ್ಲಿ 30 ಸಂಸದರ ಒಂದು ಜಂಟಿ ಸಂಸದರ ಸಮಿತಿ ೨೦೨೪ರ ವಕ್ಫ್ (ತಿದ್ದುಪಡಿ) ಬಿಲ್ ಕುರಿತು ಪರಿಶೀಲನೆ ನಡೆಸಲು ಆಗ 8, 2024ರಂದು ಸ್ಥಾಪಿಸಿತು.

ಜಂಟಿ ಸಂಸದೀಯ ಸಮಿತಿ 2024ರ ವಕ್ಫ್ (ತಿದ್ದುಪಡಿ) ಬಿಲ್ ಪರಿಶೀಲನೆಗಾಗಿ ಸಾರ್ವಜನಿಕರಿಂದ ಮಹತ್ವಪೂರ್ಣ ಪ್ರತಿಕ್ರಿಯೆಗಳನ್ನು ಪಡೆದಿದ್ದು, ದೇಶಾದ್ಯಾಂತ ಸುಮಾರು 84 ಲಕ್ಷ ಇಮೇಲ್ ಪ್ರತಿಕ್ರಿಯೆಗಳು ಬಂದಿವೆ. ಸುಮಾರು 70 ಬಾಕ್ಸ್ಗಳಷ್ಟು ಲಿಖಿತ ಪ್ರತಿಕ್ರಿಯೆಗಳು ಸಮಿತಿಗೆ ಸಲ್ಲಿಸ ಲ್ಪಟ್ಟಿವೆ. ಈ ಸಮಿತಿ 2025ರ ಬಜೆಟ್ ಅಧಿವೇಶನದ ಕೊನೆಯ ದಿನಾಂಕದವರೆಗೆ ತನ್ನ ವರದಿ ಯನ್ನು ಸಲ್ಲಿಸಲು ಸಮಯ ವಿಸ್ತರಣೆ ಪಡೆದಿತು.

ಅಂತೆಯೇ, ಸಮಿತಿಯ ವರದಿ ಫೆಬ್ರವರಿ 13, 2025ರಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಡಿಸಲಾಯಿತು. ದೇಶದಲ್ಲಿ ಅತಿ ಹೆಚ್ಚು ಪರಿಶೀಲಿಸಲ್ಪಟ್ಟ, ಜನರ ಅವಗಾಹನೆಗೆ ಇಡಲ್ಪಟ್ಟ, ಜನಭಾಗಿದಾರಿಯಾದಂತಹ ಮೊದಲ ಮಸೂದೆ ಇದಾಗಿದೆ ಎನ್ನಬಹುದು ಮತ್ತು ಅತ್ಯಂತ ವಿಸ್ತೃತವಾಗಿ ಚರ್ಚೆ ನಡೆದು, ಲೋಕಸಭೆಯಲ್ಲಿ ಮಸೂದೆಯ ಮೇಲೆ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆದ ಬಳಿಕ, ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳೊಂದಿಗೆ ಹಾಗೂ ರಾಜ್ಯಸಭೆಯಲ್ಲಿ ಮಸೂದೆಯ ಮೇಲೆ 17ಗಂಟೆ ಕಾಲ ದಾಖಲೆಯ ಚರ್ಚೆ ನಡೆಯಿತು.

ಈ ಅಧಿವೇಶನವು 1981 ರಲ್ಲಿ ರಾಜ್ಯಸಭೆಯಲ್ಲಿ ಅತಿ ಉದ್ದದ ಚರ್ಚೆಗಾಗಿ ಸ್ಥಾಪಿಸಲಾದ ಹಿಂದಿನ ದಾಖಲೆಯನ್ನೂ ಸಹ ಮೀರಿಸಿದೆ. ಹೀಗೆ, ಎರಡೂ ಸದನದಲ್ಲಿ ಮತಗಳೊಂದಿಗೆ ಮಸೂದೆ ಸ್ವೀಕೃತ ವಾಯಿತು. ಬಳಿಕ, ಘನವೆತ್ತ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಜಾರಿಯಾಗುವ ಮೊದಲೇ, ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ ತಕ್ಷಣ, ಕೂಡಲೇ ವಿಚಾರಣೆಗೆ ಕೈಗೆತ್ತಿ ಕೊಂಡಿದ್ದೇ ಬಹುತೇಕರ ಕಣ್ಣು ಕೆಂಪಗಾಗಿಸಿದೆ.

ಖ್ಯಾತ ವಕೀಲರಾದ ವಿಷ್ಣು ಶಂಕರ್ ಜೈನ್ ಎಂಬುವರಂತೂ, ನಾವು 2013ರಲ್ಲಿ ಮನಮೋಹನ ಸಿಂಗ್ ಸರಕಾರ, ಲಂಗುಲಗಾಮಿಲ್ಲದ ಅಪರಿಮಿತ ಶಕ್ತಿ ಕೊಟ್ಟು, ಯಾರ ಜಮೀನನ್ನು ಬೇಕಾದರೂ ವಕ್ಫ್ ಗೆ ಸೇರಿದ್ದು ಎನ್ನುವಂತಹ ಪೂರ್ಣ ಸ್ವತಂತ್ರ ನೀಡಿದ್ದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದಾಗ, ಆದ್ಯತೆ ಮೇರೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿ, ದಶಕ ಕಳೆದರೂ ಇವತ್ತಿಗೂ ಈ ಕೇಸ್ ಧೂಳು ಹಿಡಿದು ಕುಳಿತಿದೆ. ವಕ್ಫ್ ಕಾಂಗ್ರೆಸ್ ತಿದ್ದುಪಡಿ ಮಾಡಿದ್ದನ್ನು ತಲೆಯೆತ್ತಿ ನೋಡದ ನ್ಯಾಯಾಲಯ, ಮೋದಿ ಸರಕಾರ ಮಾಡಿದ ವಕ್ಫ್ ತಿದ್ದುಪಡಿ ಮಸೂದೆ, ಕಾನೂನು ಆಗಿ ಜಾರಿಗೆ ಬರುವ ಮೊದಲೇ ವಿಚಾರಣೆಗೆ ಕೈಗೆತ್ತಿಕೊಂಡಿದೆ ಎಂದು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದಾರೆ.

ಸಂಸದ ದುಬೆ, ನೀವು ನಿಮ್ಮ ಮುಖ ತೋರಿಸಿ, ನಾವು ನಿಮಗೆ ಹೊಂದುವ ಕಾನೂನು ತೋರಿಸು ತ್ತೇವೆ ಎಂಬಂತೆ ಘನ ನ್ಯಾಯಾಲಯ ನಡೆದುಕೊಳ್ಳುತ್ತಿದೆ. ಸಾವಿರಾರು ವರ್ಷಗಳ ಹಳೆಯಾದಾದ ನಮ್ಮ ಹಿಂದೂ ಧರ್ಮದ ಅಸ್ಮಿತೆಯನ್ನ ಪ್ರಶ್ನಿಸಿ, ಅದಕ್ಕೆ ಸಾಕ್ಷ್ಯ ಕೇಳಲಾಗುತ್ತಿದೆ. ಅನ್ಯಧರ್ಮ ದವರ ಕೇಸುಗಳ ವಿಚಾರ ಬಂದಾಗ, ಮೊಘಲರ ಕಾಲದ ಜಾಗ, ಮಸೀದಿಗಳಿಗೆ ಅವರು ಎಲ್ಲಿಂದ ದಾಖಲೆ ತರಬೇಕು ಎಂದು ಕೇಳುತ್ತ, ನ್ಯಾಯಲಯ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮಾದ್ಯಮಗಳಲ್ಲಿ ಪ್ರಶ್ನಿಸಿದ್ದಾರೆ.

ಇನ್ನು, ಘನವೆತ್ತ ಉಪರಾಷ್ಟ್ರಪತಿಗಳು ಮಾತ್ರ ಭಾರತದ ಇತಿಹಾಸದ ಮೊದಲು ಎಂಬಂತೆ ಸಾರ್ವಜನಿಕವಾಗಿ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. ಸಂಸತ್ತಿನ, ರಾಜ್ಯಪಾಲರ ಮತ್ತು ರಾಷ್ಟ್ರಪತಿಗಳ ಕರ್ತವ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಸಂವಿಧಾನದಲ್ಲಿ ಹೇಳಲಾಗಿದ್ದು, ಶಾಸನವು ಮಾಡಿದ ಕಾನೂನುಗಳನ್ನು ಜಾರಿಗೆ ತರುವಲ್ಲಿ ಕರ್ತವ್ಯನಿಷ್ಠೆ ತೋರ ಬೇಕಾದ ನ್ಯಾಯಾಂಗವು ತನ್ನ ಸೀಮಾರೇಖೆಯನ್ನು ಉಲ್ಲಂಘಿಸುತ್ತಿದೆ. ಅತ್ಯಂತ ಕಠಿಣ ಸಂದರ್ಭ ದಲ್ಲಿ ಬಳಸಬೇಕಾದ ಸಂವಿಧಾನ ನೀಡಿರುವ ಕಲಂ- 142 (Plenary power) ಅನ್ನು ಮನ ಬಂದಂತೆ Nuclear Missile ನಂತೆ ಬಳಸುತ್ತ, ವ್ಯಾಪ್ತಿ ಮೀರುವುದು ತರವಲ್ಲ. ರಾಷ್ಟ್ರಪತಿಗೇ ಆಜ್ಞೆ ಜಾರಿಗೊಳಿ ಸುವ ಯಾವೊಂದು ಅಧಿಕಾರವೂ ನ್ಯಾಯಾಂಗಕ್ಕೆ ಇಲ್ಲವೆಂದು ಗುಡುಗಿದ್ದಾರೆ.

ಶಾಸನ ಸಭೆಗೆ ಆಯ್ಕೆಯಾಗುವ ಎಲ್ಲ ಸದಸ್ಯರು ಸೇರಿದಂತೆ,ಎಲ್ಲ ನ್ಯಾಯಾದೀಶರು, ಹೈಕೋರ್ಟ್ - ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಹ, .ಭಾರತದ ಸಂವಿಧಾನಕ್ಕೆ ನಿಷ್ಠೆ ಮತ್ತು ಭಕ್ತಿಯನ್ನು ಹೊಂದುತ್ತೇನೆ., ಎಂಬಂರ್ಥದಲ್ಲಿದ್ದರೆ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಪ್ರಮಾಣ ವಚನದಲ್ಲಿ, ...ಭಾರತದ ಸಂವಿಧಾನವನ್ನು ರಕ್ಷಿಸಿ, ಕಾಪಾಡುತ್ತೇನೆ, ಅದರ ಪರವಾಗಿ ನಿಲ್ಲುತ್ತೇನೆ. ಎಂದಾಗಿರು ತ್ತದೆ. ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ನ್ಯಾಯಾಂಗವು ಆಜ್ಞೆ ಮಾಡಲು ಬರುವುದಿಲ್ಲ ಎಂದು ಸಹ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್ಕರ್ ಹೇಳಿದ್ದಾರೆ.

ಅಂದು ಇಂದಿರಾಗಾಂಧಿ ಸಹ ಸುಪ್ರೀಂ ಅನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಹಾಗೆಯೇ, ಅಟಾರ್ನಿಯಾಗಿದ್ದ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ನ್ಯಾಯಾಧೀಶರ, ನಿವೃತ್ತ ನ್ಯಾಯಾಧೀಶರ ನಡಾವಳಿಗಳ ಬಗ್ಗೆ ತುಸು ಖಾರವಾಗಿಯೇ ಮಾತನಾಡಿದ್ದರು. ನಮ್ಮ ಸಂವಿಧಾ ನವು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಕಾರ್ಯ, ಕರ್ತವ್ಯ ಮತ್ತು ವ್ಯಾಪ್ತಿಯನ್ನು ಅತ್ಯಂತ ಸ್ಪಷ್ಟವಾಗಿಯೇ ತಿಳಿಸಿಹೇಳಿದೆ. ಇಲ್ಲಿ, ಯಾರೂ ಯಾವುದನ್ನೂ ವಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಸಮತೋಲನ ಕಾಯ್ದುಕೊಂಡು ಹೋಗುವುದರಲ್ಲಿಯೇ ಪ್ರಜಾಪ್ರಭುತ್ವದ ಯಶಸ್ಸು ಅಡಗಿದೆ ಎಂಬುದನ್ನು ಮರೆಯಬಾರದು.

ಅಂತಿಮವಾಗಿ, ಜನರೇ ಪ್ರಭುಗಳು. ಜನತೆಯ ಆಯ್ಕೆಯ ಮೇರೆಗೆ ಚುನಾಯಿತರಾದ ಸದಸ್ಯರೆಲ್ಲ ಸೇರಿ ರಚಿಸಿದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು.