Vishweshwar Bhat Column: ಕೇರಳಕ್ಕೆ ಸಿಕ್ಕ ʼಅಕ್ಷರಪ್ರೇಮಿʼ ಸಿಎಂ
ರಾಜಕಾರಣಿಗಳು ಪುಸ್ತಕ ಓದುವುದು ಅಪರೂಪ. ಅವರಿಗೆ ಅದಕ್ಕೆಲ್ಲ ಸಮಯ ಸಿಗುವುದಿಲ್ಲ. ಆದರೆ ಸತೀಶನ್ ಹಾಗಲ್ಲ. ನಿತ್ಯವೂ ಪುಸ್ತಕ ಓದುತ್ತಾರೆ. ಯಾವ ಹೊಸ ಪುಸ್ತಕ ಬಿಡುಗಡೆಯಾದರೂ, ಅದು ಅವರ ಟೇಬಲ್ ಮೇಲೆ ಇರುತ್ತದೆ. ಸತೀಶನ್ ಅವರಿಗೆ ಪುಸ್ತಕಗಳೆಂದರೆ ಕೇವಲ ಹವ್ಯಾಸವಲ್ಲ, ಅದು ಅವರ ದೈನಂದಿನ ಜೀವನದ ಅವಿಭಾಜ್ಯ ಅಂಗ.
-
ಸಂಪಾದಕರ ಸದ್ಯಶೋಧನೆ
ಸಂಸದ ಶಶಿ ತರೂರ್ ಅವರು ಕೇರಳದ ನೂತನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ವಿ.ಡಿ.ಸತೀಶನ್ ಅವರ ಬಗ್ಗೆ ಮಾತನಾಡುತ್ತಾ ಒಂದು ಆಸಕ್ತಿದಾಯಕ ವಿಷಯ ಹಂಚಿಕೊಂಡಿ ದ್ದರು.
‘ನಾವಿಬ್ಬರೂ ಭೇಟಿಯಾದಾಗ ರಾಜಕೀಯದ ಚರ್ಚೆಗಿಂತ ಹೆಚ್ಚಾಗಿ, ನಾವು ಓದಿದ ಪುಸ್ತಕಗಳ ಬಗ್ಗೆ, ಇತ್ತೀಚೆಗೆ ಪ್ರಕಟವಾದ ಜಾಗತಿಕ ಮಟ್ಟದ ಪುಸ್ತಕಗಳು, ಸಂಶೋಧನಾ ಪ್ರಬಂಧಗಳು ಅಥವಾ ಹೊಸ ಸಾಹಿತ್ಯಿಕ ಕೃತಿಗಳ ಬಗ್ಗೆಯೇ ಹೆಚ್ಚು ಮಾತಾಡುತ್ತೇವೆ’ ಎಂದು ಹೇಳಿದ್ದರು. ಅಂದರೆ ಸತೀಶನ್ ಅವರು ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು, ಒಬ್ಬ ಪುಸ್ತಕಪ್ರೇಮಿಯ ಗೆಲುವು ಎಂಬ ರೀತಿಯಲ್ಲಿ ಸಂಭ್ರಮಿಸಲಾಗುತ್ತಿದೆ.
ರಾಜಕಾರಣಿಗಳು ಪುಸ್ತಕ ಓದುವುದು ಅಪರೂಪ. ಅವರಿಗೆ ಅದಕ್ಕೆಲ್ಲ ಸಮಯ ಸಿಗುವುದಿಲ್ಲ. ಆದರೆ ಸತೀಶನ್ ಹಾಗಲ್ಲ. ನಿತ್ಯವೂ ಪುಸ್ತಕ ಓದುತ್ತಾರೆ. ಯಾವ ಹೊಸ ಪುಸ್ತಕ ಬಿಡುಗಡೆಯಾದರೂ, ಅದು ಅವರ ಟೇಬಲ್ ಮೇಲೆ ಇರುತ್ತದೆ. ಸತೀಶನ್ ಅವರಿಗೆ ಪುಸ್ತಕಗಳೆಂದರೆ ಕೇವಲ ಹವ್ಯಾಸವಲ್ಲ, ಅದು ಅವರ ದೈನಂದಿನ ಜೀವನದ ಅವಿಭಾಜ್ಯ ಅಂಗ.
ಇದನ್ನೂ ಓದಿ: Vishweshwar Bhat: ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಸಂಸ್ಕೃತಿ, ಸಾಧನೆ ಜೋಡಿಸುವ ಸೇತುವೆ
ರಾಜಕಾರಣದ ಬಿಡುವಿಲ್ಲದ ಕೆಲಸ-ಕಾರ್ಯಗಳ ನಡುವೆಯೂ ಅವರು ಪ್ರತಿದಿನ ಓದಿಗಾಗಿ ಸಮಯ ಮೀಸಲಿಡುತ್ತಾರೆ. ಅವರ ಖಾಸಗಿ ಗ್ರಂಥಾಲಯದಲ್ಲಿ ಸಾವಿರಾರು ವೈವಿಧ್ಯಮಯ ಪುಸ್ತಕಗಳಿವೆ. ಸತೀಶನ್ ಅವರು ಕೇವಲ ರಾಜಕೀಯ ಪುಸ್ತಕಗಳಿಗೆ ಸೀಮಿತವಾಗದೇ, ಮಲಯಾಳಂ ಮತ್ತು ಇಂಗ್ಲಿಷ್ ಸಾಹಿತ್ಯ, ಜಾಗತಿಕ ಇತಿಹಾಸ, ಪರಿಸರ ವಿಜ್ಞಾನ ಮತ್ತು ಕಾನೂನು ಕುರಿತಾದ ಗಂಭೀರ ಕೃತಿಗಳನ್ನು ಅಧ್ಯಯನ ಮಾಡುತ್ತಾರೆ.
ಜಾಗತಿಕ ಮಟ್ಟದ ಲೇಖಕರಾಗಿರುವ ಶಶಿ ತರೂರ್ ಅವರೇ ಸತೀಶನ್ ಅವರ ಓದಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಸಾಮಾನ್ಯ ಸಂಗತಿಯಲ್ಲ. ಬೌದ್ಧಿಕವಾಗಿ ಸಮಾನ ಮನಸ್ಕರಾಗಿರುವ ಇವರಿಬ್ಬರ ಸ್ನೇಹವು ಪುಸ್ತಕಗಳ ಮೂಲಕವೇ ಗಟ್ಟಿಯಾಗಿದೆ.
ಸತೀಶನ್ ಅವರು ಕಳೆದ ಐದು ವರ್ಷಗಳ ಕಾಲ ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಗಿ ಕೆಲಸ ಮಾಡಿದ ರೀತಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ವಾದಗಳು ಕೇವಲ ರಾಜಕೀಯ ಟೀಕೆಗಳಾಗಿರದೇ, ಆಳವಾದ ಸಂಶೋಧನೆಯಿಂದ ಕೂಡಿರುತ್ತಿದ್ದವು.
ಯಾವುದೇ ವಿಷಯದ ಮೇಲೆ ಮಾತನಾಡುವಾಗ ಅವರು ಸಂಬಂಧಿತ ಪುಸ್ತಕಗಳು ಅಥವಾ ವರದಿ ಗಳನ್ನು ಉಲ್ಲೇಖಿಸುತ್ತಿದ್ದರು. ತಾವು ಓದಿದ ಪುಸ್ತಕಗಳನ್ನು ಅವರು ಉದ್ಧರಿಸುತ್ತಿದ್ದರು. ಇದು ಅವರ ವಿರೋಧಿಗಳಿಗೂ ಅಚ್ಚರಿ ಮೂಡಿಸುತ್ತಿತ್ತು. ಓದು ಅವರ ಭಾಷೆಯ ಮೇಲೆ ಹಿಡಿತ ನೀಡಿದೆ. ಅವರ ಮಾತುಗಳಲ್ಲಿ ಸ್ಪಷ್ಟತೆ ಇರುತ್ತದೆ ಮತ್ತು ಭಾವನಾತ್ಮಕ ವಿಷಯಗಳಿಗಿಂತ ತಾರ್ಕಿಕ ವಿಷಯಗಳಿಗೆ ಅವರು ಹೆಚ್ಚು ಒತ್ತು ನೀಡುತ್ತಾರೆ.
ಸತೀಶನ್ ಅವರಲ್ಲಿರುವ ಪರಿಸರ ಕಾಳಜಿಗೆ ಅವರ ಓದಿನ ಹಿನ್ನೆಲೆಯೇ ಕಾರಣ. ಗಾಡ್ಗಿಲ್ ವರದಿ ಮತ್ತು ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಅವರು ಸಾರ್ವಜನಿಕವಾಗಿ ಮತ್ತು ಸದನದಲ್ಲಿ ಮಂಡಿಸಿದ ವಿಚಾರಗಳು ಅವರ ಅಧ್ಯಯನಶೀಲತೆಗೆ ಸಾಕ್ಷಿ.
ಸಾಹಿತ್ಯ ಮತ್ತು ಕಲೆಯ ಮೇಲಿನ ಅವರ ಪ್ರೀತಿ ಕೇರಳದ ಸಾಂಸ್ಕೃತಿಕ ವಲಯದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ತಂದುಕೊಟ್ಟಿದೆ. ಕೇರಳವು ಸಾಕ್ಷರತೆಯಲ್ಲಿ ಮೊದಲಿದ್ದರೂ, ಒಬ್ಬ ಪ್ರಬುದ್ಧ ಓದುಗ ನಾಯಕನನ್ನು ಮುಖ್ಯಮಂತ್ರಿಯಾಗಿ ಪಡೆಯುತ್ತಿರುವುದು ಆ ರಾಜ್ಯದ ಸುದೈವ.
ಪುಸ್ತಕಗಳ ಮೂಲಕ ಜಗತ್ತನ್ನು ನೋಡುವ ಸತೀಶನ್ ಅವರು ಕೇರಳದ ಸಮಸ್ಯೆಗಳಿಗೆ ಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲಿ ಎಂಬುದು ಜನರ ಆಶಯ. ಸತೀಶನ್ ಅವರು ಇಂಗ್ಲಿಷ್ ಮತ್ತು ಮಲಯಾಳಂ ಎರಡೂ ಭಾಷೆಗಳ ಸಾಹಿತ್ಯದ ಮೇಲೆ ಸಮಾನ ಹಿಡಿತ ಹೊಂದಿzರೆ. ಸಂಕೀರ್ಣವಾದ ಮಸೂದೆಗಳಿರಲಿ ಅಥವಾ ಬಜೆಟ್ ಚರ್ಚೆಯಿರಲಿ, ಅವರು ಸದಾ ಹೋಂವರ್ಕ್ ಮಾಡಿಯೇ ಸಭೆಗೆ ಬರುತ್ತಾರೆ.
ಕೇರಳದ ಸಾಂಸ್ಕೃತಿಕ ಚರಿತ್ರೆ ಮತ್ತು ಸಾಮಾಜಿಕ ಸುಧಾರಣೆಯ ಚಳವಳಿಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. ಇದು ಅವರ ಆಡಳಿತದಲ್ಲಿ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿದೆ. ಒಬ್ಬ ಉತ್ತಮ ಓದುಗ ಕೇರಳದಂತಹ ಸಾಕ್ಷರ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವುದು, ಅಲ್ಲಿನ ಬೌದ್ಧಿಕ ಲೋಕಕ್ಕೆ ಹೊಸ ಆಶಾದಾಯಕ ಮುನ್ನುಡಿಯಾಗಿದೆ.