Roopa Gururaj Column: ನಂಬುವುದಾದರೆ ಸಂಪೂರ್ಣ ನಂಬು ಎನ್ನುವ ಶ್ರೀಕೃಷ್ಣ
ಬದುಕಿನುದ್ದಕ್ಕೂ ನ್ಯಾಯ, ಧರ್ಮ ಸಂಸ್ಥಾಪನೆಗಾಗಿ ಹೋರಾಡಿ, ತಂತ್ರ, ಕಪಟ ನೀತಿಯನ್ನೂ ತನ್ನದಾ ಗಿಸಿ ಜಗತ್ತು ಬಿಟ್ಟು ಹೋಗುವಾಗ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಏನನ್ನೂ ತನ್ನೊಡನೆ ಒಯ್ಯದ ಎಲ್ಲಾ ಐಹಿಕ, ಲೌಕಿಕ, ಲೋಕದೊಳಗಿದ್ದು, ಏನನ್ನೂ ಅಂಟಿಸಿಕೊಳ್ಳದೆ ಕೊನೆಯಲ್ಲಿ ತನ್ನ ಕುಲ, ವಂಶ ನಾಶ ಆಗುವುದನ್ನೂ ನೋಡಿ ಕೇವಲ ಬದುಕಿನ ಕರ್ತವ್ಯವನ್ನು ನಿಭಾಯಿಸುವ ಶ್ರೀಕೃಷ್ಣ.


ಒಂದೊಳ್ಳೆ ಮಾತು
rgururaj628@gmail.com
ಒಂದೆಡೆ ಶ್ರೀಕೃಷ್ಣ ಹೇಳುತ್ತಾನೆ ‘ನನ್ನನ್ನು ನಂಬುತ್ತೀಯಾ? ನಂಬುವುದಾದರೆ ಪೂರ್ತಿಯಾಗಿ ನಂಬು. ಅನುಮಾನವಿಲ್ಲದೆ, ಶುದ್ಧ ಮನಸ್ಸಿನಿಂದ ಮಗು ತಾಯಿಯನ್ನು ಅಪ್ಪುವ ಹಾಗೆ ನಂಬು. ಹಾಗಿದ್ದಲ್ಲಿ ಮಾತ್ರ ನಾನು ನಿನಗೆ ಸಿಗುತ್ತೇನೆ.’
ಶ್ರೀಕೃಷ್ಣ ಹುಟ್ಟುವ ಮೊದಲೇ ಆತನ ಸಾವು ಆತನಿಗಾಗಿ ಕಾಯುತ್ತಿತ್ತು, ಸೋದರ ಮಾವನ ರೂಪ ದಲ್ಲಿ. ಹೆತ್ತ ತಾಯಿಗೆ ಆತ ದಕ್ಕಲಿಲ್ಲ. ಸಲುಹಿದ ತಾಯಿಗೆ ಆತ ಸಿಗಲಿಲ್ಲ. ಪ್ರೀತಿಸಿದ ರಾಧೆಯ ಪ್ರೀತಿ ಪೂರ್ತಿ ಆಗಲಿಲ್ಲ. ಆತ ತನಗೆ ಸಿಕ್ಕಿದ ಅಂತ ಅಂದು ಕೊಂಡವರಿಗೆ ಸುಳ್ಳಾದ. ಒಟ್ಟಿನಲ್ಲಿ ಶ್ರೀಕೃಷ್ಣ ಒಂದು ಚೌಕಟ್ಟಿನಲ್ಲಿ ಸಿಗದ ವ್ಯಕ್ತಿತ್ವ ಆದರೂ ಪ್ರತಿಯೊಂದೂ ಸಂಬಂಧ ಬಾಂಧವ್ಯ ವನ್ನೂ ಸಮರ್ಥವಾಗಿ ನಿಭಾಯಿಸಿದ ಆದರ್ಶ ಶ್ರೀಕೃಷ್ಣ.
ಕೃಷ್ಣನ ಕಥೆ ಓದಿದ ಮೇಲೆ ನಮಗೆ ಅಲ್ಲಿ ಸಿಗುವುದೇನು? ಪ್ರೀತಿಸಿ ಮುದ್ದಿಸಬೇಕಾದ ಮಾವನಾದ ಕಂಸ ಪ್ರೀತಿ ನಮಗೂ ಸಿಗಬಹುದು. ತಾಯಿಯಂತೆ ಬಂದು ಮೊಲೆಯುಣಿಸುವ ಪೂತನಿಯೂ ನಮಗೆ ಸಿಗಬಹುದು. ಏನೂ ಬಯಸದ ಶುದ್ಧ ಹೃದಯದ ಪ್ರೀತಿ ಕೊಡುವ ರಾಧೆಯೂ ನಮಗೆ ಭೇಟಿಯಾಗಬಹುದು.
ಕೃಷ್ಣ ಸಾಹಸವಂತ, ಲೋಕವಿಖ್ಯಾತ ಎಂದು ಮದುವೆಯಾದ ರುಕ್ಮಿಣಿ. ಪ್ರೀತಿಸಿ ಹಠ ಮಾಡಿ ಮದುವೆಯಾದ ಸತ್ಯಭಾಮೆ. ಅಪ್ಪ, ಅಮ್ಮನಾದರೂ ಅನಿವಾರ್ಯವಾಗಿ ಪ್ರೀತಿ ಮಾಡಲಾಗದ ಜೊತೆಯಾಗಿ ಇರಲಾಗದ ಮುಗ್ಧ ದೇವಕಿ ವಸುದೇವರು. ಯಾರದ್ದೋ ಮಗುವನ್ನು ತನ್ನದೆಂದು ಮುದ್ದಿಸುವ ಯಶೋದೆ, ನಂದಗೋಪನಂಥವರೂ ನಮಗೆ ಸಿಗಬಹುದು.
ಇದನ್ನೂ ಓದಿ: Roopa Gururaj Column: ನಾವು ಮಾಡಿದ ತ್ಯಾಗ ಅಜ್ಞಾತವಾಗಿರಬೇಕು
ಪ್ರತಿಕ್ಷಣವೂ ಧ್ಯಾನಿಸುವ ಅರ್ಜುನ. ನೀನೇ ದೈವ ಎಂದು ನಂಬಿ ಪ್ರಾಣ ಕೊಡಲೂ ಸಿದ್ಧವಾಗಿರುವ ಕುಂತಿ ಮತ್ತು ಕುಂತಿ ಪುತ್ರರು ಮತ್ತು ಅವರ ಜವಾಬ್ದಾರಿಗಳು. ಸಖಿಯಂಥಹ ಸಹೋದರಿ ದ್ರೌಪದಿ. ಒಳಗೊಳಗೆ ದೈವವೆಂದು ಪ್ರಾರ್ಥಿಸುವ, ಎದುರಿಗೆ ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ, ದ್ರೋಣ, ಕೃಪಾಚಾರ್ಯ.
ಅತ್ತಿಗೆ, ತಾಯಿಯೆಂದು ತಿಳಿದರೂ ಮಾನಭಂಗಕ್ಕೆ ಎದುರಾಗುವ ದುರುಳ ಕೌರವರು. ‘ನಿನ್ನನ್ನು ನಂಬುವುದೇ ಇಲ್ಲ’ ಎಂದು ಧಿಕ್ಕರಿಸಿ, ಎದುರಿಸುವ ಧುರ್ಯೋಧನ ಶಕುನಿ, ದುಶ್ಯಾಸನ, ಶಿಶುಪಾಲ, ಜರಾಸಂಧ. ಮಗುವಿನಂಥಹ ಗೆಳೆಯ ಸುಧಾಮ. ದೈವವೆಂದು ಪ್ರಾರ್ಥಿಸುವ ವಿಧುರ. ಸ್ವಲ್ಪ ಖ್ಯಾತಿ ಸಿಕ್ಕಿದರೆ ಸಾಕು, ತಾವು ದೈವ ವಂಶದವರು ಎಂದು ಹಾರಾಡುವ ಯದು ವಂಶದವರು, ಕಷ್ಟದ ಮಹತ್ವ ತಿಳಿಯದ ಮಕ್ಕಳು.
ಬದುಕಿನುದ್ದಕ್ಕೂ ನ್ಯಾಯ, ಧರ್ಮ ಸಂಸ್ಥಾಪನೆಗಾಗಿ ಹೋರಾಡಿ, ತಂತ್ರ, ಕಪಟ ನೀತಿಯನ್ನೂ ತನ್ನದಾಗಿಸಿ ಜಗತ್ತು ಬಿಟ್ಟು ಹೋಗುವಾಗ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಏನನ್ನೂ ತನ್ನೊಡನೆ ಒಯ್ಯದ ಎಲ್ಲಾ ಐಹಿಕ, ಲೌಕಿಕ, ಲೋಕದೊಳಗಿದ್ದು, ಏನನ್ನೂ ಅಂಟಿಸಿಕೊಳ್ಳದೆ ಕೊನೆಯಲ್ಲಿ ತನ್ನ ಕುಲ, ವಂಶ ನಾಶ ಆಗುವುದನ್ನೂ ನೋಡಿ ಕೇವಲ ಬದುಕಿನ ಕರ್ತವ್ಯವನ್ನು ನಿಭಾಯಿಸುವ ಶ್ರೀಕೃಷ್ಣ.
ದುಷ್ಟರನ್ನು ನಿಗ್ರಹಿಸಲು ಧರ್ಮ ಸಂಸ್ಥಾಪನೆಗಾಗಿ ಕೃಷ್ಣನ ಬಾಳು, ದೇವರ ಅವತಾರವಷ್ಟೇ ಅಲ್ಲ ನಮ್ಮ ಪ್ರಸ್ತುತ ಬದುಕಿಗೂ ಉದಾಹರಣೆ ಮತ್ತು ಯಾವತ್ತಿಗೂ ನಮಗೆ ಆದರ್ಶ. ನಮಗೂ ಸಹ ದುರ್ಯೋಧನ, ದುಶ್ಯಾಸನ, ಶಕುನಿ, ಕರ್ಣರು ಎದುರಾಗಬಹುದು; ನಮಗೆ ಸಿಕ್ಕ ಪ್ರತಿಯೊಬ್ಬ ರೊಡನೆ ನಾವು ಹೇಗಿರಬೇಕು? ಹೇಗೆ ವ್ಯವಹರಿಸ ಬೇಕು? ಎನ್ನುವುದಕ್ಕೆ ಶ್ರೀಕೃಷ್ಣ ಅತ್ಯುತ್ತಮ ಉದಾಹರಣೆ.
ವೈರಿಯೊಡನೆ, ಸ್ನೇಹಿತರೊಡನೆ, ಸಹೋದರಿ ದ್ರೌಪದಿಯಂತವ ರೊಡನೆ, ಪ್ರೇಮಿ, ಮಡದಿ ಗೆಳೆಯ ರೊಡನೆ ಶ್ರೀಕೃಷ್ಣನ ನಡವಳಿಕೆಯೇ ಅನುಕರಣೀಯ. ಸಂಬಂಧ...ಬಾಂಧವ್ಯ... ಬದುಕಿನ ರಾಜಕೀಯಗಳನ್ನು ಹೇಗೆ ನಿಭಾಯಿಸ ಬೇಕು? ಎನ್ನುವುದಕ್ಕೆ ಶ್ರೀಕೃಷ್ಣ... ನಮಗೆ ಅತ್ಯುತ್ತಮ ಆದರ್ಶ....ಅಂದಿಗೂ... ಇಂದಿಗೂ... ಎಂದೆಂದಿಗೂ... ಆತ ಒಂದು ಚೌಕಟ್ಟಿನೊಳಗೆ ಎಂದೂ ಸಿಗುವುದೇ ಇಲ್ಲ.
ಶ್ರೀಕೃಷ್ಣ ಹೀಗೆ ಎಂದು ಯಾವತ್ತಿಗೂ ಹೇಳಲಾಗುವದಿಲ್ಲ. ನಮ್ಮ ಬುದ್ಧಿಮಟ್ಟ ಎಷ್ಟಿದೆಯೋ ಅಷ್ಟು ಮಾತ್ರ ಆತ ನಮಗೆ ದಕ್ಕುತ್ತಾನೆ. ಇಂತಹ ಭಗವಂತನ ಜೀವನ ಆದರ್ಶ ಬದುಕು ನಮಗೆ ನಿತ್ಯ ಪ್ರೇರಣೆ.
ಕೃಷ್ಣ ಒಂದೇ ಜಗದ್ಗುರುಂ.