Lokesh Kayarga Column: ಮೋದಿ ಮೇಲಿನ ದ್ವೇಷ ದೇಶಕ್ಕೆ ಆಪತ್ತು ತರದಿರಲಿ
ಪ್ರಜಾಪ್ರಭುತ್ವ ಎನ್ನುವುದು ಕೇವಲ ಅಧಿಕಾರ ಹಿಡಿಯುವ ಕ್ರೀಡೆಯಲ್ಲ. ಅದೊಂದು ಪವಿತ್ರ ವ್ಯವಸ್ಥೆ. ಸಂವಿಧಾನದತ್ತವಾದ ಚೌಕಟ್ಟು ಮತ್ತು ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ನೈತಿಕ ಜವಾಬ್ದಾರಿ. ದುರಂತವೆಂದರೆ, ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಶಕ್ತಿಗಳು ರಾಜಕೀಯ ದ್ವೇಷ, ವೈಯಕ್ತಿಕ ಅಸೂಯೆ ಮತ್ತು ಅಧಿಕಾರದ ದಾಹಕ್ಕಾಗಿ ದೇಶದ ಹಿತಾಸಕ್ತಿಯನ್ನೇ ಬಲಿಗೊಡಲು ಸಿದ್ಧವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ.
-
ಲೋಕಮತ
ನಮ್ಮ ದೇಶದ ರಕ್ಷಣೆಯ ವಿಚಾರ ಬಂದಾಗ ತಕ್ಷಣ ನೆನಪಾಗುವುದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರ ಹೆಸರು. ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆ ನಮಗಿಂತ ಹೆಚ್ಚಾಗಿ ನಮ್ಮ ವೈರಿ ರಾಷ್ಟ್ರಗಳಿಗೆ ಚೆನ್ನಾಗಿ ಗೊತ್ತು. ಈಗಾಗಲೇ 80ರ ಹರೆಯ ದಾಟಿರುವ ದೋವಲ್, ಇನ್ನೆರಡು ವರ್ಷ ಇದೇ ಹುದ್ದೆಯಲ್ಲಿ ಮುಂದುವರಿದರೆ ಬರೋಬ್ಬರೀ 60 ವರ್ಷ ಸರಕಾರಿ ಸೇವೆಯಲ್ಲಿಯೇ ಕಳೆದಂತಾಗುತ್ತದೆ. ಶಾಂತಿಕಾಲದಲ್ಲಿ ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಕೀರ್ತಿ ಚಕ್ರ’ ಪಡೆದ ಮೊಟ್ಟಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಗೆ ಇವರದ್ದು. ಇಂತಿಪ್ಪ ದೋವಲ್ ಅವರೂ ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಬೇಕಾಗಿ ಬಂದಿದೆ.
ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಅಜಿತ್ ದೋವಲ್ ಅವರ ಹೆಸರನ್ನು ಪದೇಪದೆ ಎಳೆದು ತರುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ‘ಛಾತ್ರೋನ್ ಕಿ ಗೂಂಜ್’ ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಅವರು, ‘ಅಜಿತ್ ದೋವಲ್ಜಿ ನಿಮ್ಮ ಫೋನಿನೊಳಗೆ ಕುಳಿತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು.
ಭಾರತೀಯರ ದೂರವಾಣಿಗಳು, ವಾಟ್ಸ್ ಆ್ಯಪ್, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳ ಮೇಲೆ ಅಜಿತ್ ದೋವಲ್ ನಿಯಂತ್ರಣ ಹೊಂದಿದ್ದಾರೆ. ಜನಸಾಮಾನ್ಯರ ಫೋನ್ಗಳನ್ನು ಟ್ಯಾಪ್ ಮಾಡಿ ಆ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗುತ್ತದೆ ಎನ್ನುವುದು ರಾಹುಲ್ ಗಾಂಧಿ ಅವರ ದೂರು.
ಇದನ್ನೂ ಓದಿ: Lokesh Kayarga Column: ಎಸ್ʼಐಆರ್ ತಿಕ್ಕಾಟದಲ್ಲಿ ನಾವು ಅನಾಥರು !
ಇದೀಗ ಎಸ್ಐಆರ್ ಅಕ್ರಮ ಆರೋಪವನ್ನಿಟ್ಟುಕೊಂಡು ದೆಹಲಿಯ ಬೀದಿಗಿಳಿದಿರುವ ರಾಹುಲ್, ಇಲ್ಲೂ ದೋವಲ್ ಜಪ ಮಾಡುತ್ತಿದ್ದಾರೆ. ಅವರ ಪ್ರಕಾರ, ಈ ದೇಶದ ಆಡಳಿತವನ್ನು ‘ಆರು ಜನರ ವ್ಯವಸ್ಥೆ ನಿಯಂತ್ರಿಸುತ್ತಿದೆ. ಉನ್ನತ ಮಟ್ಟದ ಆರು ಜನರ ಗುಂಪಿನಲ್ಲಿ ಅಜಿತ್ ದೋವಲ್ ಕೂಡ ಒಬ್ಬರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಈ ದೇಶದ ಎಲ್ಲ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ.
ದೇಶ ಪ್ರೇಮಿಯ ಮೇಲೆ ಕೆಂಗಣ್ಣು
ಎಸ್ಐಆರ್ ಇರಲಿ, ಇನ್ನೊಂದಿರಲಿ ಪ್ರಜಾಪ್ರಭುತ್ವದಲ್ಲಿ ಹೋರಾಟ, ಚಳವಳಿಗಳಿಗೆ ಅವಕಾಶವಿದೆ. ಆದರೆ ಯಾವುದೇ ಸಂದರ್ಭದಲ್ಲೂ ದೇಶದ ರಕ್ಷಣೆಯ ಹೊಣೆ ಹೊತ್ತ ಸೈನಿಕರನ್ನು, ಸೇನಾಪಡೆಗಳ ಮುಖ್ಯಸ್ಥರನ್ನು ವಿವಾದಕ್ಕೆ ಎಳೆದು ತಂದ ಉದಾಹರಣೆಗಳಿಲ್ಲ. ಪೊಲೀಸ್ ಅಧಿಕಾರಿಯಾದರೂ ದೋವಲ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದೇಶದ ರಕ್ಷಣೆಯ ಹೊಣೆಯನ್ನು ಹೆಗಲ ಮೇಲೆ ಇಟ್ಟು ನಡೆದವರು. ಹೆಜ್ಜೆ, ಹೆಜ್ಜೆಗೂ ಅಪಾಯವನ್ನು ಆಹ್ವಾನಿಸುತ್ತಲೇ ಶತ್ರು ದಮನ ಕಾರ್ಯ ದಲ್ಲಿ ನಿರತರಾಗಿದ್ದವರು. ದೇಶದ ‘ಸಂವಿಧಾನ’ದ ಪ್ರತಿಯನ್ನು ಸದಾ ಜೇಬಿನಲ್ಲಿಟ್ಟುಕೊಂಡು ನಡೆಯುವ ರಾಹುಲ್ ಗಾಂಧಿಗೆ ದೇಶದ ರಕ್ಷಣೆಯ ವಿಚಾರದಲ್ಲಿ ಅದು ಏನು ಹೇಳುತ್ತದೆ ಎಂದು ತಿಳಿದಿರಬೇಕಿತ್ತು. ದೋವಲ್ ಅವರ ಹಿನ್ನೆಲೆಯನ್ನು ತಿಳಿದಿದ್ದರೆ, ಕನಿಷ್ಠ ಪಕ್ಷ ಅವರಿಂದ ಪ್ರೇರಿತಗೊಂಡು ನಿರ್ಮಾಣವಾದ ‘ಧುರಂದರ್’ನಂತಹ ಸಿನಿಮಾ ನೋಡಿದ್ದರೆ ರಾಜಕೀಯಪ್ರೇರಿತ ಆರೋಪದಲ್ಲಿ ಅವರ ಹೆಸರನ್ನು ಎಳೆದು ತರುತ್ತಿರಲಿಲ್ಲ.
1968ರಲ್ಲಿ ಐಪಿಎಸ್ ಅಧಿಕಾರಿಯಾಗಿ ಕೇರಳ ಕೇಡರ್ಗೆ ಸೇರಿದ ದೋವಲ್, ಎಡರಂಗ, ಕಾಂಗ್ರೆಸ್, ನ್ಯಾಷನಲ್ ಫ್ರಂಟ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಸರಕಾರಗಳಲ್ಲೂ ಕರ್ತವ್ಯ ನಿರ್ವಹಿಸಿ ದವರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಸೇರಿದಂತೆ ಬರೋಬ್ಬರಿ ಒಂದು ಡಜನ್ ಪ್ರಧಾನಿಗಳನ್ನು ಹತ್ತಿರದಿಂದ ಕಂಡವರು.
ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತದ ಆಂತರಿಕ ಗುಪ್ತಚರ ಸಂಸ್ಥೆಯಾದ ಇಂಟೆಲಿಜೆನ್ಸ್ ಬ್ಯೂರೋ ಸೇರಿದಂತೆ ವಿವಿಧ ಪ್ರಮುಖ ಗುಪ್ತಚರ ವಿಭಾಗಗಳಲ್ಲಿ, ಪಾಕಿಸ್ತಾನದ ಭಾರತೀಯ ಹೈಕಮಿಷನ್ನಲ್ಲಿ , ದೇಶದ ರಕ್ಷಣಾ ಸೂಕ್ಷ್ಮ ಪ್ರದೇಶಗಳಲ್ಲಿ ರಹಸ್ಯ ಹಾಗೂ ಆಡಳಿತಾತ್ಮಕ ಕಾರ್ಯಾಚರಣೆಗಳ ಅಧಿಕಾರಿಯಾಗಿ ದೋವಲ್ ಕಾರ್ಯನಿರ್ವಹಿಸಿದವರು. ತಮ್ಮ ಅಜ್ಜಿ ಇಂದಿರಾ ಆಗಲಿ, ತಂದೆ ರಾಜೀವ್ ಅವರಾಗಲಿ ಸಂಶಯಿಸದ ದೋವಲ್ ಅವರ ನಿಷ್ಠೆಯನ್ನು ಈಗ ರಾಹುಲ್ ಪ್ರಶ್ನಿಸುತ್ತಿದ್ದಾರೆ.
ಡಾ.ಮನಮೋಹನ್ ಸಿಂಗ್ ಪ್ರಧಾನಿ ಮಂತ್ರಿಯಾಗಿದ್ದಾಗ ಜುಲೈ 2004ರಿಂದ ಜನವರಿ 2005ರವರೆಗೆ ದೋವಲ್ ಅವರು ದೇಶದ ಗುಪ್ತಚರ ಸಂಸ್ಥೆ ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕರಾಗಿ ಅಧಿಕಾರ ನಿರ್ವಹಿಸಿದ್ದರು. ಆಗ ತಾನೇ ಮೊದಲ ಬಾರಿ ಸಂಸತ್ತಿಗೆ ಪ್ರವೇಶಿಸಿದ್ದ ರಾಹುಲ್ ಗಾಂಧಿಗೆ ದೋವಲ್ ಅವರ ಜತೆ ಸಂವಹನ ನಡೆಸುವ ಅವಕಾಶ ಸಿಕ್ಕಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ದೇಶ ಎಂದರೆ ಏನು ? ದೇಶದ ರಕ್ಷಣೆ ವಿಚಾರ ಬಂದಾಗ ನಾವು ಹೇಗಿರಬೇಕು ಎಂದು ತಿಳಿದುಕೊಳ್ಳುವ ಅವಕಾಶ ಈಗಲೂ ಇದೆ.
ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೋವಲ್ ಅವರನ್ನು ದೇಶದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಿಸಿದರು. ಅಂದಿನಿಂದ ಇಂದಿನವರೆಗೆ ಸತತ ಮೂರು ಅವಧಿಗಳಿಗೆ ಅವರು ಈ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ದೇಶದ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ರಾಷ್ಟ್ರದ ಪಾಲಿಗೆ ಆಪತ್ಬಾಂಧವ
ರಾಹುಲ್ ಥರದ ವ್ಯಕ್ತಿತ್ವದವರು ಇದರಲ್ಲಿ ಏನು ವಿಶೇಷ ಎಂದು ಕೇಳಬಹುದು. ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟವಾಗಲಿ, ಆನ್ಲೈನ್ ಮೀಮ್ಸ್ಗಳ ಮೂಲಕ ಹುಟ್ಟಿಕೊಂಡ ಜಿರಳೆ ಪಾರ್ಟಿಯಾಗಲಿ ಇಂದು ದೆಹಲಿಯ ಬೀದಿಗಳಲ್ಲಿ ಧೈರ್ಯವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ ಎಂದರೆ ಅದರ ಕೀರ್ತಿ ದೋವಲ್ ಅವರಿಗೆ ಸಲ್ಲಬೇಕು. ಕೇವಲ ಒಂದೂವರೆ ದಶಕಗಳ ಮುಂಚೆ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದೀಪಾವಳಿಗೆ ಪಟಾಕಿ ಸಿಡಿಸಿದಂತೆ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ಎನ್ಐಎಯಂತಹ ಬಲಿಷ್ಠ ಪಡೆಯನ್ನು ಸ್ಥಾಪಿಸಿ ಉಗ್ರರ ಬೇರುಗಳನ್ನು ಪತ್ತೆ ಹಚ್ಚಿ ಅಲ್ಲಿಗೇ ಬೆಂಕಿ ಹಾಕುವ ಮೂಲಕ ಈ ದೇಶಕ್ಕೆ ಕವಿದಿದ್ದ ಆತಂಕವನ್ನು ದೂರ ಮಾಡಿದ ಹೆಗ್ಗಳಿಕೆ ದೋವಲ್ ಅವರಿಗೆ ಸಲ್ಲಬೇಕು.
ಇಂದು ದೇಶದ ಯಾವುದೇ ಮೂಲೆಯಿಂದ ಪಾಕಿಸ್ತಾನಕ್ಕೆ ಕರೆ ಹೋದರೆ ಸಾಕು, ಎನ್ಐಎ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಇದರಲ್ಲಿ ಇತರ ಅಧಿಕಾರಿಗಳ ಪಾತ್ರವಿಲ್ಲವೇ ಎಂದು ಕೇಳಬಹುದು. ಆದರೆ ಇವೆಲ್ಲವುಗಳ ಹಿಂದೆ ದೋವಲ್ ಅವರ ಅನುಭವಯುಕ್ತ ಮಾರ್ಗದರ್ಶನ, ಸಲಹೆ ಇದ್ದೇ ಇರುತ್ತಿತ್ತು. ಈ ದೃಷ್ಟಿಯಿಂದ ನೋಡಿದರೆ ಈ ದೇಶದ ಆಡಳಿತವನ್ನು ನಿಯಂತ್ರಿಸಿದ ಸತ್ಕೀರ್ತಿ ಅವರಿಗೆ ಸಲ್ಲಲೇಬೇಕು.
ರಾಹುಲ್ ಅವರು ಬೀದಿಯಲ್ಲಿ ನಿಂತು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಚುನಾವಣಾ ಆಯುಕ್ತ ಜ್ಞಾನೇಶ್ ಮೊದಲಾದವರನ್ನು ಅಸಭ್ಯ ಭಾಷೆಯಲ್ಲಿ ಹೀಗಳೆಯುತ್ತಿದ್ದಾರೆ. ಇದು ಇಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ. ದೆಹಲಿಯ ಪ್ರತಿಭಟನೆ ಕಂಡು ಭಾರತ ಅರಾಜಕ ಸ್ಥಿತಿಗೆ ಸಾಗುತ್ತಿದೆ ಎಂದು ದೇಶ ವಿದ್ರೋಹಿ ಶಕ್ತಿಗಳು ಸಂಭ್ರಮಿಸುತ್ತಿವೆ. ನಮ್ಮ, ನಮ್ಮೊಳಗೆ ಎಷ್ಟೇ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಹೊರಗಿನವರ ವಿಚಾರದಲ್ಲಿ ನಾವು ಯಾವತ್ತೂ ಒಗ್ಗಟ್ಟಾಗಿರಲೇಬೇಕು. ಇದು ಈ ದೇಶದ ಇತಿಹಾಸ ಸಾರಿ ಹೇಳಿದ ಪಾಠ. ಆದರೆ ರಾಹುಲ್, ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ ಸೇರಿದಂತೆ ಪ್ರತಿಭಟನಾಕಾರರ ಮಾತು, ನಡವಳಿಕೆ, ಆಂಗಿಕ ಭಾಷೆಗಳು ತಾವೇ ಹೊಸ ಚರಿತ್ರೆ ಬರೆಯುವವರು ಎಂಬ ಧಾಟಿಯಲ್ಲಿದೆ.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೇಲಿನ ರಾಜಕೀಯ ಸಿಟ್ಟು, ದ್ವೇಷ ಮತ್ತು ಅಸಹನೆಯು ಇಡೀ ರಾಷ್ಟ್ರವನ್ನು ಅರಾಜಕತೆಯತ್ತ ತಳ್ಳುವ ದುಸ್ಸಾಹಸಕ್ಕೆ ಮುನ್ನುಡಿ ಬರೆಯುತ್ತಿದೆಯೇ ಎಂಬ ಆತಂಕ ಪ್ರಜ್ಞಾವಂತ ಭಾರತೀಯರನ್ನು ಕಾಡುತ್ತಿದೆ. ರಾಹುಲ್ ಗಾಂಧಿ ಮತ್ತು ಅವರ ಅನುಯಾಯಿಗಳು ನಡೆಸುತ್ತಿರುವ ಹೋರಾಟಗಳು, ನೀಡುತ್ತಿರುವ ಹೇಳಿಕೆಗಳು ಮತ್ತು ಸೃಷ್ಟಿಸುತ್ತಿರುವ ವಾತಾವರಣವು ಕೇವಲ ಒಂದು ರಾಜಕೀಯ ಪಕ್ಷದ ವಿರೋಧವಾಗಿ ಉಳಿದಿಲ್ಲ. ಈ ಪ್ರತಿಭಟನೆ ಮೂಲಕ ದೇಶದ ಸಂಸತ್ತು, ನ್ಯಾಯಾಂಗ, ಚುನಾವನಾ ಆಯೋಗ ದಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನೇರ ದಾಳಿ ನಡೆಸಲಾಗುತ್ತಿದೆ. ವಿದೇಶಿ ಪತ್ರಿಕೆಗಳು, ಜಾಗತಿಕ ಮಾಧ್ಯಮಗಳು ಭಾರತದ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂಬ ಸುಳ್ಳು ಬಿಂಬವನ್ನು ಬಿತ್ತರಿಸಲು ಈ ಪ್ರತಿಭಟನೆಗಳನ್ನು ಅತ್ಯುತ್ಸಾಹದಿಂದ ಪ್ರಚಾರ ಮಾಡುತ್ತಿವೆ.
ಭಾರತದಲ್ಲಿ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂದು ರಾಹುಲ್ ಹೇಳುತ್ತಿದ್ದಾರೆ. ಎನ್ಡಿಎ ಸರಕಾರ ಇದುವರೆಗೂ ಇವಿಎಂಗಳನ್ನು ತಿರುಚುವ ಮೂಲಕ ಚುನಾವಣೆ ಅಕ್ರಮಗಳನ್ನು ನಡೆಸಿಯೇ ಅಧಿಕಾರಕ್ಕೆ ಬಂದಿದೆ ಎನ್ನುವುದು ಅವರ ವಾದ. ಈಗ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಹೇಳುವ ರಾಹುಲ್, ನಕಲಿ ಮತದಾರರನ್ನು ಪತ್ತೆ ಹಚ್ಚುವ ಬದಲಿ ಕ್ರಮ ಏನೆಂದು ಹೇಳುವುದಿಲ್ಲ.
ಇವಿಎಂ ಮೇಲೂ ಸಂಶಯ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಈ ದೇಶದಲ್ಲಿ ಇವಿಎಂ ಮೊದಲ ಬಾರಿಗೆ ಜಾರಿಗೆ ಬಂದಿತ್ತು ಎನ್ನುವುದನ್ನು ಅವರು ಮರೆಯುತ್ತಾರೆ. ಇವಿಎಂ ಬಂದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾದರು. ಸಿಂಗ್ ನಿರಂತರ ಎರಡು ಬಾರಿ ಪ್ರಧಾನಿಯಾದರೆ, ಮೋದಿ ಮೂರು ಬಾರಿ ಪ್ರಧಾನಿಯಾಗಿದ್ದಾರೆ. ಇದಿಷ್ಟೇ ವ್ಯತ್ಯಾಸ.
ಇವಿಎಂ ಜಾರಿಗೆ ಬಂದ ಬಳಿಕವೂ ಕೇರಳ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ತಮಿಳು ನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಬರುತ್ತಿವೆ. ಒಂದು ವೇಳೆ ಇವಿಎಂ ಮೂಲಕ ಫಲಿತಾಂಶವನ್ನು ತಿರುಚುವುದು ಸಾಧ್ಯವಿದ್ದರೆ, ಅತಿ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ತನ್ನ ಅವಧಿಯಲ್ಲೇ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಸಾಧ್ಯವಿತ್ತು.
ಚುನಾವಣಾ ಆಯುಕ್ತರ ವಿರುದ್ಧ ಪಕ್ಷಪಾತದ ಆರೋಪಗಳು ಬಂದಿರುವುದು ಕೂಡ ಹೊಸದೇನಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತದ್ದಾಗ ಬಿಜೆಪಿಯವರೂ ಸಿಇಸಿ ವಿರುದ್ಧ ಇದೇ ರೀತಿಯ ಆರೋಪ ಗಳನ್ನು ಹೊರಿಸಿದ್ದರು. ಚುನಾವಣಾ ಆಯೋಗದ ಪ್ರಕ್ರಿಯೆಗಳನ್ನು ಅಥವಾ ತೀರ್ಮಾನಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮುಂದೆ ಈಗಾಗಲೇ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇಂಡಿಯಾ ಒಕ್ಕೂಟವೂ ಈಗ ಕಾನೂನು ಹೋರಾಟಕ್ಕೆ ಮುಂದಾಗಿದೆ. ದೇಶದ ವರಿಷ್ಠ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ, ಅದನ್ನು ಕಾದು ನೋಡುವ ಸಂಯಮವನ್ನು ಪ್ರದರ್ಶಿಸಬೇಕಾದ ಜವಾಬ್ದಾರಿಯುತ ರಾಜಕೀಯ ನಾಯಕರು, ಬೀದಿಗಿಳಿದು ನ್ಯಾಯಾಲಯಗಳನ್ನೂ, ಸಾಂವಿಧಾನಿಕ ಸಂಸ್ಥೆಗಳನ್ನೂ ಹೀಗಳೆಯುತ್ತಿದ್ದಾರೆ.
ಅಮೆರಿಕವನ್ನೇ ನಡುಗಿಸುತ್ತಿರುವ ತಂತ್ರಜ್ಞಾನ ದೈತ್ಯ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಯೋಜನೆಗೆ ಅನುಮತಿ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರೂ ಹಿಂದೆ ಸಂಸತ್ತಿನಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಭಾರತದಲ್ಲಿ ತಮ್ಮ ಯೋಜನೆಗೆ ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ ಅಡ್ಡಿಯಾಗಿದ್ದಾರೆಂದು ದೂರಿದ ಎಲಾನ್ ಮಸ್ಕ್ಗೆ ರಾಹುಲ್ ಜತೆಯಾಗಿದ್ದಾರೆ. ಶತ್ರುವಿನ ಶತ್ರು, ಮಿತ್ರ ಎನ್ನುವುದು ನಿಜವಾದರೂ ದೇಶದ ಭದ್ರತಾ ಹಿತಾಸಕ್ತಿಗಳನ್ನು ಗಾಳಿಗೆ ತೂರಬಲ್ಲ ಜಾಗತಿಕ ದೈತ್ಯ ಸಂಸ್ಥೆಯೊಂದನ್ನು, ಹಿಂದೆ ಮುಂದೆ ನೋಡದೆ ಸ್ವಾಗತಿಸುವುದು ದೇಶ ದ್ರೋಹಕ್ಕೆ ಸಮನಾದ ಕೆಲಸ.
ರಾಹುಲ್ಗೆ ಇದೇನೂ ಹೊಸದಲ್ಲ. ವಿದೇಶಿ ನೆಲದಲ್ಲಿ ನಿಂತಾಗಲೂ ಅವರು ಮೋದಿಯನ್ನು ವಿರೋಧಿಸುವ ನೆಪದಲ್ಲಿ ಭಾರತದ ಬಗ್ಗೆ ಕಳವಳಕಾರಿ ಚಿತ್ರಣವನ್ನೇ ಹಂಚಿಕೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಪರಸ್ಪರರನ್ನು ಹೀಗಳೆಯುವುದು, ಅಧಿಕಾರಕ್ಕಾಗಿ ಹಣಾಹಣಿ ನಡೆಸುವುದು ಸಹಜ. ಆದರೆ ಇದಕ್ಕಾಗಿ ವಿದೇಶಿ ಶಕ್ತಿಗಳ ಜತೆ ಸ್ನೇಹ ಬೆಳೆಸುವುದು ಅಪಾಯಕಾರಿ ಬೆಳವಣಿಗೆ. ಭಾರತದಲ್ಲಿನ ಸದ್ಯದ ಬೆಳವಣಿಗೆ ಕಂಡು ಅಮೆರಿಕ ಸೇರಿದಂತೆ ಅನೇಕ ದೇಶಗಳು ಒಳಗಿಂದೊಳಗೇ ಖುಷಿಪಡಬಹುದು. ಪಾಕಿಸ್ತಾನ, ಬಾಂಗ್ಲಾದೇಶದ ನಾಯಕರು ಎಸ್ಐಆರ್ ವಿರುದ್ಧದ ಹೋರಾಟವನ್ನು ಶ್ಲಾಘಿಸಿದ್ದಾರೆ. ವಿದೇಶದಲ್ಲಿ ಹಾಯಾಗಿದ್ದವರೂ ಭಾರತಕ್ಕೆ ಬಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಪ್ರಜಾಪ್ರಭುತ್ವ ಎನ್ನುವುದು ಕೇವಲ ಅಧಿಕಾರ ಹಿಡಿಯುವ ಕ್ರೀಡೆಯಲ್ಲ. ಅದೊಂದು ಪವಿತ್ರ ವ್ಯವಸ್ಥೆ. ಸಂವಿಧಾನದತ್ತವಾದ ಚೌಕಟ್ಟು ಮತ್ತು ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ನೈತಿಕ ಜವಾಬ್ದಾರಿ. ದುರಂತವೆಂದರೆ, ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಶಕ್ತಿಗಳು ರಾಜಕೀಯ ದ್ವೇಷ, ವೈಯಕ್ತಿಕ ಅಸೂಯೆ ಮತ್ತು ಅಧಿಕಾರದ ದಾಹಕ್ಕಾಗಿ ದೇಶದ ಹಿತಾಸಕ್ತಿಯನ್ನೇ ಬಲಿಗೊಡಲು ಸಿದ್ಧವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ದೇಶ ಅರಾಜಕತೆಯತ್ತ ಸಾಗದಿರಲಿ ಎನ್ನುವುದು ದೇಶವಾಸಿಗಳ ಪ್ರಾರ್ಥನೆ.