Lokesh Kayarga Column: ಎಸ್ʼಐಆರ್ ತಿಕ್ಕಾಟದಲ್ಲಿ ನಾವು ಅನಾಥರು !
ಗಡಿ ದಾಟಿ ಬಂದು ಮತಪಟ್ಟಿಯೊಳಗೆ ಸೇರಿಕೊಂಡ ಅಕ್ರಮ ಮತದಾರರು ಹಾಗೂ ನಕಲಿ ಮತದಾರ ರನ್ನು ಪತ್ತೆ ಹಚ್ಚಿ, ವ್ಯವಸ್ಥೆ ಯನ್ನು ಶುದ್ಧೀಕರಿಸುವ ಕೆಲಸ ಆಗಲೇಬೇಕಾದ ಪ್ರಕ್ರಿಯೆ. ಆದರೆ, ಈ ಪ್ರಕ್ರಿಯೆಯು ಅನುಷ್ಠಾನ ಗೊಂಡ ರೀತಿ, ಅದರಿಂದ ಸೃಷ್ಟಿಯಾಗಿರುವ ರಾಜಕೀಯ ಕೋಲಾಹಲ ಮತ್ತು ಮುಖ್ಯವಾಗಿ ಜನಸಾ ಮಾನ್ಯರು ಅನುಭವಿಸುತ್ತಿರುವ ಯಾತನೆಯನ್ನು ಗಮನಿಸಿದರೆ, ಈ ಅಭಿಯಾನವು ವ್ಯವಸ್ಥೆಯ ಶುದ್ಧೀ ಕರಣಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದ ಅಣಕದಂತೆ ಭಾಸವಾಗುತ್ತಿದೆ.
-
ಲೋಕಮತ
ಭಾರತೀಯ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದರೆ ಚುನಾವಣೆ. ಈ ಹಬ್ಬದ ಯಶಸ್ಸು ನಿಂತಿರುವುದೇ ದೋಷರಹಿತ ಮತ್ತು ಪಾರದರ್ಶಕವಾದ ಮತದಾರರ ಪಟ್ಟಿಯ ಮೇಲೆ. ಸಂವಿ ಧಾನದ ಆಶಯದಂತೆ ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು, ಮೃತಪಟ್ಟವರ ಹೆಸರನ್ನು ತೆಗೆಯುವುದು, ಹೊಸಬರನ್ನು ಸೇರಿಸುವುದು, ನಕಲಿ ಅಥವಾ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದ ಹೆಸರು ಗಳನ್ನು ಅಳಿಸುವುದು ಚುನಾವಣಾ ಆಯೋಗದ ಪ್ರಮುಖ ಜವಾಬ್ದಾರಿ. ಇದೇ ಸದುದ್ದೇಶದಿಂದ ಆಯೋಗವು ರಾಷ್ಟ್ರವ್ಯಾಪಿ ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಅಭಿಯಾನವು ಈಗ ತನ್ನ ಅಂತಿಮ ಘಟ್ಟವನ್ನು ಪ್ರವೇಶಿಸಿದೆ.
ಗಡಿ ದಾಟಿ ಬಂದು ಮತಪಟ್ಟಿಯೊಳಗೆ ಸೇರಿಕೊಂಡ ಅಕ್ರಮ ಮತದಾರರು ಹಾಗೂ ನಕಲಿ ಮತದಾರರನ್ನು ಪತ್ತೆಹಚ್ಚಿ, ವ್ಯವಸ್ಥೆ ಯನ್ನು ಶುದ್ಧೀಕರಿಸುವ ಕೆಲಸ ಆಗಲೇಬೇಕಾದ ಪ್ರಕ್ರಿಯೆ. ಆದರೆ, ಈ ಪ್ರಕ್ರಿಯೆಯು ಅನುಷ್ಠಾನ ಗೊಂಡ ರೀತಿ, ಅದರಿಂದ ಸೃಷ್ಟಿಯಾಗಿರುವ ರಾಜಕೀಯ ಕೋಲಾಹಲ ಮತ್ತು ಮುಖ್ಯವಾಗಿ ಜನಸಾ ಮಾನ್ಯರು ಅನುಭವಿಸುತ್ತಿರುವ ಯಾತನೆಯನ್ನು ಗಮನಿಸಿದರೆ, ಈ ಅಭಿಯಾನವು ವ್ಯವಸ್ಥೆಯ ಶುದ್ಧೀ ಕರಣಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದ ಅಣಕದಂತೆ ಭಾಸವಾಗುತ್ತಿದೆ.
ಪಾರದರ್ಶಕತೆ ಕೊರತೆ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ, ಸರಿ ಸುಮಾರು ನೂರು ಕೋಟಿ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸಿ, ಹೊಸ ಪಟ್ಟಿ ತಯಾರಿಸಲು ಮುಂದಾ ಗುವ ಮುನ್ನ ಚುನಾವಣೆ ಆಯೋಗವು ವಿವಾದಕ್ಕೆ ಆಸ್ಪದವಿಲ್ಲದಂತೆ ಎಲ್ಲ ತಯಾರಿಗಳನ್ನು ನಡೆಸಬೇಕಿತ್ತು. ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೈಜ ಮತದಾರರನ್ನು ಮಾತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ವಿವರಿಸ ಬೇಕಿತ್ತು. ಇದಕ್ಕೆ ಅಗತ್ಯವಿರುವ ಮತ್ತು ಲಭ್ಯವಿರುವ ತಂತ್ರಜ್ಞಾನಗಳ ಬಗ್ಗೆ ತಜ್ಞರ ಜತೆ ಸಮಾಲೋಚಿಸಬೇಕಿತ್ತು.
ಇದನ್ನೂ ಓದಿ: Lokesh Kayarga Column: ಉಳ್ಳವರಿಗೆ ಮೇಲ್ ರಸ್ತೆ, ಇಲ್ಲದವರಿಗೆ ದುರವಸ್ಥೆ !
ಗ್ರಾಮೀಣ ಮಟ್ಟದ ಸಹಕಾರಿ ಸಂಘವೊಂದರ ಚುನಾವಣೆಯಾದರೂ ಮತದಾರರ ಪಟ್ಟಿ ಅಂತಿಮ ಗೊಳಿಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದೆ. ಆದರೆ ಇಂತಹ ಬೃಹತ್ತಾದ ಜವಾ ಬ್ದಾರಿಯನ್ನು ನಿರ್ವಹಿಸುವಾಗ ಆಯೋಗ ಪ್ರತಿ ಯೊಂದು ಘಟ್ಟದಲ್ಲೂ ಪಾರದರ್ಶಕತೆಯನ್ನು ಕಾಯ್ದು ಕೊಳ್ಳಬೇಕಿತ್ತು. ಆದರೆ ಈಗ ಕೇಳಿ ಬರುತ್ತಿರುವ ವರದಿಗಳ ಪ್ರಕಾರ ಸರಕಾರ ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಸಾಂವಿಧಾನಿಕ ಸಂಸ್ಥೆಯಲ್ಲಿಯೇ ಒಮ್ಮತ ಇರಲಿಲ್ಲ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇನ್ನಿಬ್ಬರು ಆಯುಕ್ತರ ನಡುವಿನ ಆಂತರಿಕ ಭಿನ್ನಮತದ ವರದಿಗಳು ಹೊರಬೀಳುತ್ತಿದ್ದಂತೆಯೇ, ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪ ಪಡೆದುಕೊಂಡಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಚುನಾವಣಾ ಆಯೋಗದ ಮೇಲೆ ಮುಗಿ ಬಿದ್ದಿವೆ. ಆಯೋಗವು ಸ್ವಾಯತ್ತೆ ಯನ್ನು ಕಳೆದು ಕೊಂಡಿದೆ. ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬುದು ಪ್ರತಿಪಕ್ಷಗಳ ಪ್ರಮುಖ ಆರೋಪವಾಗಿದೆ.
ಮತ್ತೊಂದೆಡೆ, ಆಡಳಿತಾರೂಢ ಎನ್‌ಡಿಎ ಮೈತ್ರಿ ಕೂಟವು ಆಯೋಗದ ಬೆಂಬಲಕ್ಕೆ ನಿಂತಿದ್ದು, ನಕಲಿ ಮತದಾರರ ಏರಿಕೆಯನ್ನು ತಡೆಯಲು ಎಸ್‌ಐಆರ್ ಪ್ರಕ್ರಿಯೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದೆ. ಈ ಪರ-ವಿರೋಧದ ತಿಕ್ಕಾಟದಲ್ಲಿ, ಚುನಾವಣಾ ಆಯೋಗದಂತಹ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯು ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಕಳವಳಕಾರಿ ಬೆಳವಣಿಗೆ.
ಪ್ರತಿಪಕ್ಷಗಳ ಅತಿರೇಕ: ಪ್ರಜಾಪ್ರಭುತ್ವದಲ್ಲಿ ಆಡಳಿತ ಯಂತ್ರದ ಅಥವಾ ಆಯೋಗದ ಲೋಪ ದೋಷಗಳನ್ನು ಎತ್ತಿ ಹಿಡಿಯುವುದು ವಿರೋಧ ಪಕ್ಷಗಳ ಕರ್ತವ್ಯ. ಆದರೆ, ಎಸ್‌ಐಆರ್ ಪ್ರಕ್ರಿಯೆಯ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಮಂಡಿಸುತ್ತಿರುವ ಬೇಡಿಕೆಗಳು ಅತಿರೇಕದಿಂದ ಕೂಡಿವೆ. ಪಕ್ಷದ ನಿರಂತರ ಸೋಲಿಗೆ ಚುನಾವಣೆ ಆಯೋಗವೇ ಕಾರಣ ಎಂಬ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಆರೋಪ ತೀರಾ ಬಾಲಿಶ ವಾದುದು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ವಿಧಾನಸಭೆಗೆ ಹೊಸದಾಗಿ ಮರುಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಜಂತರ್ ಮಂತರ್ ಚಳವಳಿ ಮೂಲಕ ಸದ್ದು ಮಾಡಿದ ಕಾಕ್ರೋಚ್ ಜನತಾ ಪಾರ್ಟಿ ( ಸಿಜೆಪಿ) ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸಿಇಸಿ ರಾಜೀನಾಮೆ ನೀಡದಿದ್ದರೆ ಮುಂಬರುವ ಎಲ್ಲ ಚುನಾವಣೆ ಯನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ. ಇನ್ನೊಬ್ಬ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಅವರನ್ನು ‘ಕೊಲ್ಲಲು’ ಅನುಮತಿ ಕೊಡಿ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಇಸಿ ಜ್ಞಾನೇಶ್ ಇಬ್ಬರೂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂಬ ಕಾರಣಕ್ಕಾಗಿ ಇಡೀ ಪ್ರಕ್ರಿಯೆಯನ್ನೇ ರದ್ದು ಗೊಳಿಸಿ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸಂವಿಧಾನ ಬದ್ಧವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲೇ ಬೇಕು. ನಕಲಿ ಮತದಾರರನ್ನು ಉಳಿಸಿಕೊಂಡು ಚುನಾವಣೆ ಎದುರಿಸು ವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ. ಹೀಗಿರುವಾಗ, ವಿರೋಧ ಪಕ್ಷಗಳು ಪ್ರಕ್ರಿಯೆಯನ್ನು ಸುಧಾರಿಸಲು, ಸರಳೀಕರಿ ಸಲು ರಚನಾತ್ಮಕ ಸಲಹೆಗಳನ್ನು ನೀಡುವ ಬದಲು, ಇಡೀ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ಪಟ್ಟು ಹಿಡಿಯುವುದು ಕೇವಲ ರಾಜಕೀಯ ಲಾಭದ ಲೆಕ್ಕಾಚಾರವೇ ಹೊರತು, ನೈಜ ಪ್ರಜಾಸತ್ತಾತ್ಮಕ ಕಾಳಜಿಯಲ್ಲ.
ಕಾರ್ಯತಂತ್ರದ ಕೊರತೆ : ಎಸ್‌ಐಆರ್‌ನಂತಹ ಸೂಕ್ಷ್ಮ ಹಾಗೂ ಬೃಹತ್ ಕಾರ್ಯಕ್ರಮವನ್ನು ಜಾರಿಗೊಳಿಸುವಾಗ ಆಯೋಗವು ಜನಸಾಮಾನ್ಯರಿಗೆ ಮುಕ್ತ, ಸ್ಪಷ್ಟ ಮತ್ತು ಪಾರದರ್ಶಕ ರೀತಿಯಲ್ಲಿ ಮಾಹಿತಿಯನ್ನು ಒದಗಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕಿತ್ತು. ಆದರೆ ಒಂದೊಂದು ರಾಜ್ಯಕ್ಕೆ ಒಂದೊಂದು ನೀತಿ ಯನ್ನು ಅನುಸರಿಸಿಕೊಂಡ ಬಂದ ಆಯೋಗದ ನಡೆಯಲ್ಲಿ ಹೆಜ್ಜೆ, ಹೆಜ್ಜೆಗೂ ಅಸ್ಪಷ್ಟತೆಯೇ ಎದ್ದು ಕಾಣುತ್ತಿದೆ. ಅನೇಕ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಈಗಾಗಲೇ ಕೊನೆಗೊಂಡಿದೆ. ಕರ್ನಾಟಕ ದಂತಹ ಹಲವು ರಾಜ್ಯಗಳಲ್ಲಿ ಅಂತಿಮ ಘಟ್ಟದಲ್ಲಿದೆ. ಆದರೆ ಆಯೋಗವು ಈಗಲೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡುತ್ತಲೇ ಇದೆ.
ನಕಲಿ ಮತದಾರರನ್ನು ತೆಗೆದುಹಾಕುವ ಉದ್ದೇಶ ಎಷ್ಟು ಮುಖ್ಯವೋ, ನೈಜ ಮತದಾರರನ್ನು ಉಳಿಸಿ ಕೊಳ್ಳುವುದು ಆಯೋಗದ ಪ್ರಾಥಮಿಕ ಜವಾಬ್ದಾರಿ. ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆನ್ನುವುದು ನಮ್ಮ ಕಾನೂನು ವ್ಯವಸ್ಥೆಯ ಪ್ರಾಥಮಿಕ ಪಾಠ. ಇದು ಆಯೋಗಕ್ಕೂ ಅನ್ವಯವಾಗಬೇಕು. ಆದರೆ ಆಯೋಗದ ಅರೆಬೆಂದ ಕಾರ್ಯತಂತ್ರಗಳಿಂದ ಇಡೀ ಎಸ್ ಐಆರ್ ಪ್ರಕ್ರಿಯೆಯೇ ಹಳ್ಳ ಹಿಡಿಯುವ ಸಾಧ್ಯತೆಗಳಿವೆ.
ಎಸ್‌ಐಆರ್ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನವೇ, ಮತದಾರರಿಗೆ ತಮ್ಮ ಹೆಸರು, ವಿಳಾಸ, ಮತ್ತು ಇತರ ವಿವರಗಳನ್ನು ನವೀಕರಿಸಿಕೊಳ್ಳಲು ಸಾಕಷ್ಟು ಸಮಯ ಮತ್ತು ಅವಕಾಶವನ್ನು ನೀಡಬೇಕಿತ್ತು. ಆಧಾರ್ ಕಾರ್ಡ್ ಹಾಗೂ ಚುನಾವಣಾ ಗುರುತಿನ ಚೀಟಿಗಳಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳು, ಅಕ್ಷರಗಳಲ್ಲಿನ ತಪ್ಪು-ಒಪ್ಪುಗಳನ್ನು ಸರಿಪಡಿಸಲು ಮೊದಲೇ ಅವಕಾಶ ನೀಡಿದ್ದರೆ ತಾಂತ್ರಿಕ ಕಾರಣಗಳಿಂದ ನೂರಾರು ಅರ್ಜಿಗಳು ತಿರಸ್ಕೃತಗೊಳ್ಳುವುದನ್ನು ತಪ್ಪಿಸಬಹುದಿತ್ತು.
ಉದ್ಯೋಗ ಬದಲಾವಣೆ, ವಾಸ್ತವ್ಯ ಬದಲಾವಣೆಯ ಕಾರಣದಿಂದ ವಿಳಾಸ ಬದಲಿಸಿದ ಅಸಂಖ್ಯಾತ ಜನರು ಇದೀಗ ತಪ್ಪು ವಿವರಗಳಿರುವ ಮತಚೀಟಿಯನ್ನೇ ಆಧಾರವಾಗಿಟ್ಟುಕೊಂಡು ಎಸ್‌ಐಆರ್ ಪ್ರಕ್ರಿಯೆ ಮುಗಿಸಿದ್ದಾರೆ. ಎನ್ಯುಮರೇಶನ್ ಹಂತದಲ್ಲಿಯೇ ಡಿಲೀಟ್ ಜತೆ ಎಡಿಟ್‌ಗೂ ಅವಕಾಶ ಕೊಟ್ಟಿದ್ದರೆ ಮತಪಟ್ಟಿಯ ಶುದ್ಧೀಕರಣಕ್ಕೆ ಹೆಚ್ಚು ಅರ್ಥವಿರುತ್ತಿತ್ತು.
ಮತದಾರರ ಗುರುತಿನ ಚೀಟಿಯನ್ನು ಮುದ್ರಿಸುವಾಗ ಅಧಿಕಾರಿಗಳು ಮಾಡಿದ ಕಾಗುಣಿತ ತಪ್ಪುಗಳು, ವಯಸ್ಸಿನ ವ್ಯತ್ಯಾಸ, ವಿಳಾಸದ ತಪ್ಪುಗಳಿಂದಾಗಿ ಆಯೋಗವು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರನ್ನು ಹುಡುಕುವುದೇ ಒಂದು ದೊಡ್ಡ ಸವಾಲಾಗಿತ್ತು.
ಗ್ರಾಮೀಣ ಪ್ರದೇಶದಲ್ಲಿ ಮತದಾರರ ಹುಡುಕಾಟ ಸುಲಭವಾದರೂ, ವಲಸಿಗರೇ ಹೆಚ್ಚಿನ ಸಂಖ್ಯೆ ಯಲ್ಲಿರುವ ಬೆಂಗಳೂರಿ ನಂತಹ ನಗರಗಳಲ್ಲಿ ಮತದಾರರನ್ನು ಗುರುತಿಸುವುದು ಸವಾಲಿನ ಕೆಲಸ. ನಿಯಮದ ಪ್ರಕಾರ ಬಿಎಲ್‌ಒಗಳು ಮನೆ ಬಾಗಿಲಿಗೆ ಹೋಗಿ ಎನ್ಯುಮರೇಶನ್ ಫಾರ್ಮ್ ನೀಡಬೇಕಿತ್ತು. ಆದರೆ ನಗರದ ಬಹುತೇಕ ಕಡೆ ಮತದಾರರೇ ತಮ್ಮ ಕೆಲಸ-ಕಾರ್ಯ ಬಿಟ್ಟು ಬಿಎಲ್ ಒಗಳನ್ನು ಹುಡುಕಿಕೊಂಡು ಹೋಗಿ ಫಾರ್ಮ್ ಪಡೆದಿದ್ದಾರೆ. ಅವರೇ ಖುದ್ದಾಗಿ ಫಾರ್ಮ್‌ಗಳನ್ನು ಹಿಂತಿರುಗಿಸಿದ್ದಾರೆ.
ಈ ನಿಟ್ಟಿನಲ್ಲಿ ಆಯೋಗದ ಆಪ್, ವೆಬ್‌ಸೈಟ್‌ಗಳು ನೆರವಾಗಿವೆ. ಆದರೆ ಇದನ್ನು ಬಳಕೆ ಮಾಡದ ವರ್ಗ ಮತಪಟ್ಟಿಯಿಂದಲೇ ಹೊರ ಹೋಗುವ ಸಾಧ್ಯತೆ ಇದೆ. 2002ರ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟು ಕೊಂಡು ಎಸ್‌ಐಆರ್ ಪ್ರಕ್ರಿಯೆಗೆ ಕೈ ಹಾಕಿದ ಆಯೋಗವು ಇದರ ಹಿಂದಿನ ತರ್ಕವೇನು ಎಂದು ಇದುವರೆಗೂ ತಿಳಿಸಿಲ್ಲ. ಇದೀಗ 2002ರ ಮತಪಟ್ಟಿಯಲ್ಲಿದ್ದವರ ಜತೆ ಮ್ಯಾಪಿಂಗ್ ಮಾಡಲು ಸಾಧ್ಯ ವಾಗದ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಇದರ ಬದಲು ಎನ್ಯುಮರೇಶನ್ -ರ್ಮ್ ತುಂಬುವ ಹಂತದಲ್ಲಿಯೇ 2002ರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ, ಅವರ ನೈಜತೆಯನ್ನು ಸಾಬೀತುಪಡಿಸಲು ಪರ್ಯಾಯ ಮಾರ್ಗಗಳನ್ನು ಸೂಚಿಸಬೇಕಿತ್ತು.
ಜನ್ಮ ದಿನಾಂಕ ದಾಖಲೆ, 10ನೇ ತರಗತಿ ಅಂಕಪಟ್ಟಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್ ಮುಂತಾದ ಯಾವುದಾದರೂ ಒಂದು ಅಥವಾ ಎರಡು ಅಧಿಕೃತ ದಾಖಲೆಗಳನ್ನು ಎನ್ಯುಮರೇಶನ್ ಫಾರ್ಮ್ ಜೊತೆ ಲಗತ್ತಿಸಲು ಅವಕಾಶ ನೀಡಿದ್ದರೆ ಕೋಟ್ಯಂತರ ಮಂದಿಗೆ ಈಗ ನೋಟಿಸ್ ನೀಡುವ ಪ್ರಮೇಯವೇ ಬರುತ್ತಿರಲಿಲ್ಲ.
ಕರ್ನಾಟಕದಂತಹ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ನೋಟಿಸ್ ಪಡೆದು, ಕಚೇರಿಗಳ ಮುಂದೆ ಬಿಸಿಲಿನಲ್ಲಿ ಕ್ಯೂ ನಿಲ್ಲುತ್ತಿದ್ದಾರೆ. ನೋಟಿಸ್‌ನಲ್ಲಿ ನಮೂದಿಸಿದ ದಿನಾಂಕದಂದು ಕಚೇರಿಗೆ ಹೋದರೆ, ಅಲ್ಲಿ ಬಿಎಲ್‌ಒ ಅಥವಾ ಎಇಆರ್‌ಒಗಳು ಇರುವುದಿಲ್ಲ. ತಂತ್ರಜ್ಞಾನ ಇಷ್ಟು ಮುಂದುವರಿದಿರುವ ಕಾಲದಲ್ಲಿ, ಆನ್‌ಲೈನ್ ಸಂದರ್ಶನ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಮ್ಯಾಪಿಂಗ್ ಬಳಸಿ ಅತ್ಯಂತ ಸುಲಭವಾಗಿ ಮಾಡ ಬಹುದಾದ ಕೆಲಸವನ್ನು ಆಯೋಗವು ಹಳೇ ಕಾಲದ ಕಡತಗಳ ಶೈಲಿಯಲ್ಲಿ ಮಾಡಿ ಜನರನ್ನು ಹೈರಾಣಾಗಿಸಿದೆ.
ಮ್ಯಾಪಿಂಗ್ ಗೊಂದಲದ ಕಾರಣ ನೋಟಿಸ್ ಪಡೆದವರಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸಂಖ್ಯೆ ದೊಡ್ಡದಿದೆ. ದಶಕಗಳ ಹಿಂದೆ ನಿಧನರಾದ ತಮ್ಮ ಹೆತ್ತವರ ದಾಖಲೆಗಳನ್ನು ಹುಡುಕಿ ಮ್ಯಾಪ್ ಮಾಡುವುದು ಈ ವಯಸ್ಸಿನಲ್ಲಿ ಅವರಿಗೆ ಹೇಗೆ ಸಾಧ್ಯ? ಪ್ರಾಯೋಗಿಕ ಜ್ಞಾನ ವಿಲ್ಲದ ಇಂತಹ ನಿಯಮಗಳೇ ಎಸ್‌ಐಆರ್ ಪ್ರಕ್ರಿಯೆಯನ್ನು ಜನರು ದ್ವೇಷಿಸುವಂತೆ ಮಾಡಿದೆ. ದಶಕಗಳಿಂದ ಮತದಾನ ಮಾಡುತ್ತಿರುವ ನಾಗರಿಕರಿಗೆ ಏಕಾಏಕಿ ನೋಟಿಸ್ ಬಂದಾಗ ಅವರಲ್ಲಿ ಉಂಟಾಗುವ ಆತಂಕವನ್ನು ಶಮನ ಮಾಡಲು ಆಯೋಗದ ಬಳಿ ಈಗಲೂ ಯಾವುದೇ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಇಲ್ಲ. ಈ ಪಾರದರ್ಶಕತೆಯ ಕೊರತೆಯೇ ಆಯೋಗದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ.
ರಾಜಕೀಯ ಪಕ್ಷಗಳ ನಿರಾಸಕ್ತಿ: ಎಸ್‌ಐಆರ್ ಪ್ರಕ್ರಿಯೆ ಯಲ್ಲಿ ಅತಿ ಹೆಚ್ಚು ನಿರಾಸೆ ಮೂಡಿಸಿರು ವುದು ರಾಜಕೀಯ ಪಕ್ಷಗಳ ನಡೆ. ಚುನಾವಣೆ ಘೋಷಣೆ ಯಾದಾಗ ಮನೆ ಮನೆಗೆ ಬಂದು ಅಕ್ಕರೆ ತೋರುವ ನಾಯಕರು, ಈ ಆಂದೋಲನದಲ್ಲೂ ಸಕ್ರಿಯವಾಗಿ ಭಾಗಿಯಾಗಬೇಕಿತ್ತು. ಪ್ರತಿ ರಾಜಕೀಯ ಪಕ್ಷವೂ ಬೂತ್ ಮಟ್ಟದಲ್ಲಿ ತಮ್ಮದೇ ಆದ ಏಜೆಂಟರನ್ನು ಹೊಂದಿರುತ್ತದೆ.
ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವಾಗ ಈ ಏಜೆಂಟರು ಬಿಎಲ್‌ಒಗಳ ಜೊತೆ ಸಮನ್ವಯ ಸಾಧಿಸಿ, ತಮ್ಮ ವ್ಯಾಪ್ತಿಯಲ್ಲಿರುವ ಅರ್ಹ ಮತದಾರರ ಹೆಸರು ಬಿಟ್ಟುಹೋಗದಂತೆ ನೋಡಿ ಕೊಳ್ಳುವುದು ಅವರ ಪ್ರಾಥಮಿಕ ಕರ್ತವ್ಯ. ಆದರೆ, ರಾಜಕೀಯ ನಾಯಕರು, ಕಾರ್ಯಕರ್ತರು ಜನಸಾಮಾನ್ಯರಿಗೆ ಎನ್ಯುಮರೇಶನ್ ಫಾರ್ಮ್ ತುಂಬಲು ಸಹಾಯ ಮಾಡಿದ ನಿದರ್ಶನಗಳು ವಿರಳ. ಪಕ್ಷದ ಕಚೇರಿಗಳಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸುವುದು, ಬೀದಿಗಿಳಿದು ಆಯೋಗದ ವಿರುದ್ಧ ಘೋಷಣೆ ಕೂಗುವುದು ರಾಜಕೀಯ ಮೈಲೇಜ್ ತಂದುಕೊಡಬಹುದೇ ವಿನಃ, ಕಚೇರಿಯ ಮುಂದೆ ಕ್ಯೂ ನಿಂತಿರುವ ಸಾಮಾನ್ಯ ಮತದಾರನ ಸಮಸ್ಯೆಯನ್ನು ಬಗೆಹರಿಸುವುದಿಲ್ಲ.
ತಮ್ಮ ನೈಜ ಮತ್ತು ನೈತಿಕ ಜವಾಬ್ದಾರಿಯನ್ನು ಮರೆತ ರಾಜಕೀಯ ಪಕ್ಷ ಗಳು, ಜನರ ಪರದಾಟ ವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಮತದಾರರ ಪಟ್ಟಿಯೆಂಬುದು ಕೇವಲ ಒಂದು ದಾಖಲೆಯಲ್ಲ. ಅದು ಪ್ರಜಾ ಪ್ರಭುತ್ವದಲ್ಲಿ ಪ್ರಜೆಯೊಬ್ಬನ ಅಸ್ತಿತ್ವದ ಸಂಕೇತ. ಎಸ್‌ಐಆರ್ ಅಭಿಯಾನವು ದೇಶದ ಭದ್ರತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ಅತ್ಯಗತ್ಯ ಎಂಬುದು ನಿರ್ವಿವಾದ. ಆದರೆ, ಶುದ್ಧೀಕರಣದ ನೆಪದಲ್ಲಿ ದಶಕಗಳಿಂದ ಮತ ಚಲಾಯಿಸುತ್ತಿರುವ ನೈಜ ಪ್ರಜೆಗಳನ್ನೇ ಸಂಕಷ್ಟಕ್ಕೆ ದೂಡುವುದು, ಅವರನ್ನು ಅನುಮಾನದಿಂದ ನೋಡುವುದು ಯಾವುದೇ ನಾಗರಿಕ ವ್ಯವಸ್ಥೆಗೆ ಶೋಭೆ ತರುವಂತಹುದಲ್ಲ.
ಆಯೋಗವು ತನ್ನ ನಿರ್ಣಯಗಳಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಪ್ರತಿಪಕ್ಷ ಗಳು ಅತಿರೇಕದ ಆರೋಪಗಳನ್ನು ಬದಿಗಿಟ್ಟು ರಚನಾ ತ್ಮಕ ಸಲಹೆಗಳನ್ನು ನೀಡಬೇಕು. ಹಾಗೆಯೇ ರಾಜಕೀಯ ಪಕ್ಷಗಳು ಕೇವಲ ಚುನಾವಣೆ ರಾಜಕಾರಣವನ್ನು ಮೀರಿದ ಜನಪರ ಜಾಗೃತಿಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೂಲ ಬೇರುಗಳು ಭದ್ರವಾಗಿರಲು ಸಾಧ್ಯ.