ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ತಾರಕೇಶ್ವರಿ ಸಿನ್ಹಾ ನೆನಪು

ತಾರಕೇಶ್ವರಿ 1926ರ ಡಿಸೆಂಬರ್ 26ರಂದು ಬಿಹಾರದ ನಳಂದ ಜಿಲ್ಲೆಯ ಚಂಡಿ ಎಂಬಲ್ಲಿ ಭೂಮಾಲೀಕ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಡಾ.ಶಿವೇಶ್ವರ್ ಪ್ರಸಾದ್ ಸಿನ್ಹಾ ಶಿಕ್ಷಣ ಮತ್ತು ದೇಶಪ್ರೇಮದ ಮೌಲ್ಯಗಳನ್ನು ಮಗಳಿಗೆ ಬಾಲ್ಯದ ಧಾರೆ ಎರೆದರು. ಪಟ್ನಾದ ಪ್ರಸಿದ್ಧ ಮಗಧ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಅವರು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಕೆಲವೇ ಭಾರತೀಯ ಮಹಿಳೆಯರಲ್ಲಿ ಒಬ್ಬರಾಗಿದ್ದರು. ‌

Vishweshwar Bhat Column: ತಾರಕೇಶ್ವರಿ ಸಿನ್ಹಾ ನೆನಪು

-

ಸಂಪಾದಕೀಯ ಸದ್ಯಶೋಧನೆ

ತಾರಕೇಶ್ವರಿ ಸಿನ್ಹಾ ಸ್ವತಂತ್ರ ಭಾರತದ ಮುಂಚೂಣಿ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ತಮ್ಮ ಅದ್ಭುತ ವಾಕ್ಪಟುತ್ವ, ತೀಕ್ಷ್ಣ ರಾಜಕೀಯ ಪ್ರಜ್ಞೆ ಹಾಗೂ ಆಕರ್ಷಕ ವ್ಯಕ್ತಿತ್ವದಿಂದ ದೇಶದ ಗಮನ ಸೆಳೆದವರು. ಸ್ವಾತಂತ್ರ್ಯ ಚಳವಳಿಯ ಕಿಚ್ಚಿನಿಂದ ರೂಪುಗೊಂಡು ಸಂಸತ್ತಿನ ಪ್ರಭಾವಿ ನಾಯಕಿಯಾಗಿ ಬೆಳೆದ ಅವರ ಬದುಕು ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯ. ನೆಹರು ಯುಗದ ಸಂಸತ್ತಿನಲ್ಲಿ ತಮ್ಮ ಪ್ರಖರ ಭಾಷಣಗಳಿಂದ ವಿರೋಧಿಗಳನ್ನೂ ನಿರುತ್ತರರನ್ನಾಗಿಸುತ್ತಿದ್ದ ಅವರು, ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರು.

ತಾರಕೇಶ್ವರಿ 1926ರ ಡಿಸೆಂಬರ್ 26ರಂದು ಬಿಹಾರದ ನಳಂದ ಜಿಲ್ಲೆಯ ಚಂಡಿ ಎಂಬಲ್ಲಿ ಭೂಮಾಲೀಕ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಡಾ.ಶಿವೇಶ್ವರ್ ಪ್ರಸಾದ್ ಸಿನ್ಹಾ ಶಿಕ್ಷಣ ಮತ್ತು ದೇಶಪ್ರೇಮದ ಮೌಲ್ಯಗಳನ್ನು ಮಗಳಿಗೆ ಬಾಲ್ಯದ ಧಾರೆ ಎರೆದರು. ಪಟ್ನಾದ ಪ್ರಸಿದ್ಧ ಮಗಧ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಅವರು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಕೆಲವೇ ಭಾರತೀಯ ಮಹಿಳೆಯರಲ್ಲಿ ಒಬ್ಬರಾಗಿದ್ದರು. ‌

ಬಾಲ್ಯದಿಂದಲೇ ದೇಶಭಕ್ತಿಯ ಪ್ರಭಾವಕ್ಕೆ ಒಳಗಾಗಿದ್ದ ತಾರಕೇಶ್ವರಿ, 1942ರ ಗಾಂಧೀಜಿಯವರ ‘ಕ್ವಿಟ್ ಇಂಡಿಯಾ’ ಚಳವಳಿ ಮೂಲಕ ರಾಜಕೀಯ ಪ್ರವೇಶಿಸಿದರು. 16 ವರ್ಷದವರಿದ್ದಾಗ ಬಿಹಾರ ದಲ್ಲಿ ಸ್ವಾತಂತ್ರ್ಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಬ್ರಿಟಿಷ್ ಪೊಲೀಸರ ಲಾಠಿ ಪ್ರಹಾರ ಮತ್ತು ಅಡೆತಡೆಗಳನ್ನು ಲೆಕ್ಕಿಸದೆ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಇದನ್ನೂ ಓದಿ: Vishweshwar Bhat Column: ಜಪಾನಿಯರ ಪ್ರಾಮಾಣಿಕತೆ

ಸ್ವಾತಂತ್ರ್ಯ ನಂತರ, 1952ರಲ್ಲಿ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಪಾಟ್ನಾ ಪೂರ್ವ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅತ್ಯಂತ ಕಿರಿಯ ವಯಸ್ಸಿನ (26 ವರ್ಷ) ಸಂಸತ್ ಪ್ರವೇಶಿಸಿದರು. ಸಂಸತ್ತಿನಲ್ಲಿ ಅವರ ಪ್ರವೇಶವು ಹೊಸ ತಲೆಮಾರಿ ನ ಯುವ ಧ್ವನಿಯಾಗಿ ಹೊರಹೊಮ್ಮಿತು. ಅವರ ತೀಕ್ಷ್ಣ ಚರ್ಚಾ ಶೈಲಿ, ಆಳವಾದ ಆರ್ಥಿಕ ಜ್ಞಾನ ಮತ್ತು ನಿರರ್ಗಳ ಹಿಂದಿ-ಇಂಗ್ಲಿಷ್ ಭಾಷಣಗಳು ಪ್ರಧಾನಿ ನೆಹರು ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾದವು.

ತಾರಕೇಶ್ವರಿ ಪ್ರತಿಭೆ ಮತ್ತು ಆರ್ಥಿಕ ವಿಷಯಗಳ ಮೇಲಿನ ಹಿಡಿತವನ್ನು ಗುರುತಿಸಿದ ನೆಹರು, 1958ರಲ್ಲಿ ಅವರನ್ನು ಕೇಂದ್ರ ಹಣಕಾಸು ಉಪಮಂತ್ರಿಯಾಗಿ ನೇಮಿಸಿದರು. ಈ ಮೂಲಕ ಭಾರತದ ಮೊದಲ ಮಹಿಳಾ ಉಪ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದ ಕಾಲದಲ್ಲಿ, ದೇಶದ ಬಜೆಟ್ ಮಂಡನೆ, ಆರ್ಥಿಕ ನೀತಿಗಳ ಜಾರಿ ಹಾಗೂ ಸಾರ್ವಜನಿಕ ವೆಚ್ಚದ ಮೇಲ್ವಿಚಾರಣೆಯಲ್ಲಿ ತಾರಕೇಶ್ವರಿ ಮಹತ್ವದ ಕೊಡುಗೆ ನೀಡಿದರು. ಆಡಳಿತಾತ್ಮಕ ದಕ್ಷತೆ ಯೊಂದಿಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಸರು ವಾಸಿಯಾಗಿದ್ದರು.

ತಾರಕೇಶ್ವರಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದಾಗ ಅವರ ಯೌವನ, ಆಕರ್ಷಕ ವ್ಯಕ್ತಿತ್ವ ಮತ್ತು ಉಡುಗೆ-ತೊಡುಗೆಯ ಶೈಲಿ ಎಲ್ಲರ ಗಮನ ಸೆಳೆದಿತ್ತು. ಅಂದಿನ ಮಾಧ್ಯಮಗಳು ಅವರನ್ನು ಭಾರತೀಯ ರಾಜಕಾರಣದ ‘ಗ್ಲಾಮರ್ ಗರ್ಲ್’ ಎಂದೇ ಬಣ್ಣಿಸುತ್ತಿದ್ದವು.

ಪ್ರಧಾನಿ ಜವಾಹರಲಾಲ್ ನೆಹರೂ ಅವರು ಇವರ ಬುದ್ಧಿವಂತಿಕೆ ಹಾಗೂ ಹಿಂದಿ-ಇಂಗ್ಲಿಷ್ ಭಾಷಣ ಶೈಲಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಂಸತ್ತಿನಲ್ಲಿ ವಿರೋಧ ಪಕ್ಷದವರು ಗದ್ದಲ ಎಬ್ಬಿಸಿ ದಾಗಲೆ ನೆಹರೂ ಅವರು ಇವರನ್ನು ಎದ್ದು ನಿಂತು ಉತ್ತರಿಸಲು ಪ್ರೋತ್ಸಾಹಿಸುತ್ತಿದ್ದರು. ಆಡಳಿತದಲ್ಲಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಲಭಿಸಿತು.

ವಿಶ್ವಸಂಸ್ಥೆ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಭಾರತದ ನಿಯೋಗದ ಸದಸ್ಯರಾಗಿ ಭಾಗವಹಿಸಿ, ದೇಶದ ಆರ್ಥಿಕ ಹಾಗೂ ವಿದೇಶಾಂಗ ನಿಲುವುಗಳನ್ನು ಸಮರ್ಥವಾಗಿ ಮಂಡಿಸಿದರು. ಜಾಗತಿಕ ರಾಜಕೀಯ ವಲಯದಲ್ಲೂ ಅವರ ವಾಕ್ಚಾತುರ್ಯ ಹಾಗೂ ವ್ಯಕ್ತಿತ್ವ ಅಪಾರ ಗೌರವ ವನ್ನು ತಂದುಕೊಟ್ಟಿತು. ಅವರು ಬರೆದ ಲೇಖನಗಳು ಹಾಗೂ ಪ್ರಕಟಣೆಗಳು ಸಮಕಾಲೀನ ಆರ್ಥಿಕ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಿದ್ದವು.

1960ರ ದಶಕದ ಕೊನೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ 1969ರಲ್ಲಿ ಪಕ್ಷ ಇಬ್ಭಾಗವಾದಾಗ, ತಾರಕೇಶ್ವರಿ ಅವರು ಮೊರಾರ್ಜಿ, ಕೆ. ಕಾಮರಾಜ್ ಮತ್ತು ನಿಜಲಿಂಗಪ್ಪ ಅವರನ್ನೊಳಗೊಂಡ ಕಾಂಗ್ರೆಸ್ (ಒ) ಬಣವನ್ನು ಬೆಂಬಲಿಸಿದರು. ಇಂದಿರಾ ಗಾಂಧಿಯವರ ನೀತಿಗಳನ್ನು ಸಂಸತ್ತಿನಲ್ಲಿ ಬಹಿರಂಗವಾಗಿ ವಿರೋಧಿಸಿದ ಅವರು, ಆಡಳಿತ ಪಕ್ಷದ ವಿರುದ್ಧ ಬಲವಾದ ಪ್ರತಿಪಕ್ಷದ ಧ್ವನಿಯಾಗಿ ನಿಂತರು.