ನಿರ್ಮಲಾನಂದ ಶ್ರೀ: ತಂತ್ರಜ್ಞಾನ, ದಿವ್ಯಜ್ಞಾನದ ಸಂಗಮ
ದಕ್ಷಿಣೆಯ ವಿಧಗಳು ಮತ್ತು ಅರ್ಪಿಸುವ ಕ್ರಮಗಳು ಭಿನ್ನ ಅಷ್ಟೇ. ವಿದ್ಯಾದಕ್ಷಿಣೆ, ಸಾತ್ವಿಕ ದಕ್ಷಿಣೆ, ಸೇವೆಯ ದಕ್ಷಿಣೆಯ ಮುಖೇನ ಗುರುವಿನ ಆಶ್ರಮದಲ್ಲಿ ಅವರ ಸೇವೆ ಮಾಡುವುದು ಮತ್ತು ಗುರುವಿನ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಸನಾತನ ಧರ್ಮದ ರೂಢಿ. ಹಾಗಾಗಿ ಭಾರತೀಯ ಸಂಸ್ಕೃತಿ ಯಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ.
-
ವರ್ಧಂತ್ಯುತ್ಸವ
ಡಾ.ದೊರೇಶ್ ಬಿಳಿಕೆರೆ
ಭಾರತೀಯ ನೆಲ, ಸಮಾಜದ ಒಳಿತಿಗಾಗಿ ತಲೆಮಾರಿನಿಂದ ತಲೆಮಾರಿಗೆ ಜ್ಞಾನವನ್ನು ವರ್ಗಾಯಿ ಸಿದ ಗುರುಗಳ ಸರಣಿಯ ಗುರು ಪರಂಪರೆಯ ಬೀಡು. ಗುರುವಿಗೆ ಶಿಷ್ಯನು ತನ್ನ ಸರ್ವಸ್ವವನ್ನೂ ಅರ್ಪಿಸಿದ ಉದಾಹರಣೆಗಳು ಅಸಂಖ್ಯಾತ. ಪುರಾಣ ಕಾಲದಲ್ಲಿ, ಏಕಲವ್ಯನು ತನ್ನ ಗುರು ದ್ರೋಣಾ ಚಾರ್ಯರಿಗೆ ಹೆಬ್ಬೆರಳನ್ನು, ಮಹಾಕವಿ ಕುವೆಂಪು ತಮ್ಮ ಮಹಾಗ್ರಂಥವನ್ನು ಗುರು ವೆಂಕಣ್ಣಯ್ಯ ನವರಿಗೆ ಅರ್ಪಿಸಿರುವ ಹಾಗೂ ಗಾಲವನು ಗುರು ಆeಯಂತೆ ದಕ್ಷಿಣೆ ನೀಡಿದ ಐತಿಹಾಸಿಕ ಉದಾಹರಣೆಗಳಿವೆ.
ದಕ್ಷಿಣೆಯ ವಿಧಗಳು ಮತ್ತು ಅರ್ಪಿಸುವ ಕ್ರಮಗಳು ಭಿನ್ನ ಅಷ್ಟೇ. ವಿದ್ಯಾದಕ್ಷಿಣೆ, ಸಾತ್ವಿಕ ದಕ್ಷಿಣೆ, ಸೇವೆಯ ದಕ್ಷಿಣೆಯ ಮುಖೇನ ಗುರುವಿನ ಆಶ್ರಮದಲ್ಲಿ ಅವರ ಸೇವೆ ಮಾಡುವುದು ಮತ್ತು ಗುರುವಿನ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಸನಾತನ ಧರ್ಮದ ರೂಢಿ. ಹಾಗಾಗಿ ಭಾರತೀಯ ಸಂಸ್ಕೃತಿ ಯಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ. ಸಮಸ್ತ ಜೀವರಾಶಿ ಗಳನ್ನು ನಿಯಂತ್ರಿಸುವ ದೇವಾನುದೇವತೆಗಳಿಗೂ ಸಹ ಗುರುವಿನ ಅಗತ್ಯವಿದೆ. ಈ ಕಾರಣದಿಂದಲೇ ಗುರುವಿಗೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನ. ನಾಥ ಸಂಪ್ರದಾಯದ ಅತ್ಯಂತ ಪ್ರಸಿದ್ಧ ಶ್ರದ್ಧಾಕೇಂದ್ರವಾಗಿರುವ ಆದಿಚುಂಚನಗಿರಿ ಮಠದ ಉರಿ ಗದ್ದುಗೆಯು ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಬೆಳಕು ನೀಡುತ್ತದೆ.
ಶ್ರೀಮಠದ ಪೀಠಾಧ್ಯಕ್ಷರಾಗಿರುವ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಕ್ತಿಕೇಂದ್ರವಾಗಿ ರೂಪಿಸಿದ್ದಾರೆ. ಮಾತ್ರವಲ್ಲ ಶ್ರೀಮಠದ 71ನೇ ಪೀಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥರ ದಿವ್ಯಚೇತನಕ್ಕೊಂದು ಭವ್ಯ ವಾದ ಭೈರವೈಕ್ಯ ಮಂದಿರ ನಿರ್ಮಾಣ ಮಾಡಿ, ಸಮಸ್ತ ಭಕ್ತರ ಎದೆಯಲ್ಲಿ ದೈವೀ ನೆಲೆ ಪ್ರತಿಷ್ಠಾಪಿಸಿ ರುವ ನಿರ್ಮಲಾನಂದಶ್ರೀ ಗುರುವನ್ನು ಇನ್ನು ಎತ್ತರಕ್ಕೇರಿಸಿದ್ದಾರೆ.
ಇದನ್ನೂ ಓದಿ: Hari Paraak Column: ʼನೀಟ್ʼ ದಿಸ್ ಪಾಯಿಂಟ್ ಯುವರ್ ಆನರ್
ದೇಶದ ಪ್ರತಿಷ್ಠಿತ ಧಾರ್ಮಿಕ ಕೇಂದ್ರ ಮತ್ತು ನಾಥ ಸಂಪ್ರದಾಯದ ಪ್ರಸಿದ್ಧ ಶ್ರದ್ಧಾಕೇಂದ್ರ ಎಂಬ ಖ್ಯಾತಿ ಪಡೆದಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಕಳೆದ ಐವತ್ತು ವರ್ಷಗಳಲ್ಲಿ ಬೆಳೆದ ರೀತಿ ಆಸ್ತಿಕರಿಗೆ, ಶ್ರೀಮಠದ ಭಕ್ತರಿಗೆ ಪವಾಡಸದೃಶವಾಗಿ ಕಂಡಿದೆ. ಜನರ ನಂಬಿಕೆಯ ಸಾಧಾರಣ ಶ್ರದ್ಧಾಪೀಠವಾಗಿದ್ದ ಕಾಲಭೈರವನ ಈ ತಪೋಭೂಮಿ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿಶ್ವದಾ ದ್ಯಂತ ಚಿರಪರಿಚಿತವಾಗಿ ಮಹಾಸಂಸ್ಥಾನ ಮಠವಾಗಿ ವಿಸ್ತರಿಸಿದ ಪರಿಯೇ ವಿಸ್ಮಯಕಾರಿ. ಮೂಲತಃ ಗುರುಪರಂಪರೆಯ ಹಾದಿ ಯಲ್ಲಿ ನಡೆದು ಬಂದ ಈ ಮಠದ ಪೀಠಾಧ್ಯಕ್ಷರು ಕಟ್ಟುವ ಕಾರ್ಯ ಅಮೋಘವಾದದು.
ಮಠವೊಂದನ್ನು ಧಾರ್ಮಿಕ, ಸಾಮಾಜಿಕ, ಬೌದ್ಧಿಕ ಹಾಗೂ ಸಾಂಸ್ಕೃತಿಕವಾಗಿ ರೂಪಿಸಲು, ರೂಪಿಸಿ ದ್ದನ್ನು ಮುನ್ನೆಡಸುವ ಕರ್ತೃತ್ವ ಶಕ್ತಿ ಇಲ್ಲಿನ ಗುರುಪರಂಪರೆಯದ್ದು. ಧರ್ಮಭೂಮಿ, ಪುಣ್ಯ ಭೂಮಿ, ಕರ್ಮಭೂಮಿಗಳೆಂದು ಖ್ಯಾತಿ ಹೊಂದಿದ ಭಾರತದ ಪುಣ್ಯನೆಲಗಳಲ್ಲಿ ಬಹುಪ್ರಾಚೀನ ಪುರಾಣ ಇತಿಹಾಸ ಹೊಂದಿರುವ ಆದಿಚುಂಚನಗಿರಿಯ ಶ್ರೀಕ್ಷೇತ್ರಕ್ಕೆ ಒಕ್ಕಲಿಗರ ದೈವರೂಪವಾಗಿದ್ದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ನಂತರ ಯಾರು? ಎಂಬ ಪ್ರಶ್ನೆ ಲಕ್ಷಾಂತರ ಭಕ್ತರ ಹೃದಯವನ್ನು ಕಾಡಿದ್ದಂತೂ ಸುಳ್ಳಲ್ಲ.
ಪೂಜ್ಯರ ಭೈರವೈಕ್ಯದ ನಂತರ ಶ್ರೀಮಠದ 72ನೇ ಪೀಠಾಧ್ಯಕ್ಷರಾಗಿರುವ ಶ್ರೀಶ್ರೀಶ್ರೀ ಡಾ.ನಿರ್ಮಲಾ ನಂದ ನಾಥ ಪೂಜ್ಯ ಮಹಾಸ್ವಾಮೀಜಿಯವರ ವರ್ಧಂತಿ ಜು.20ರಂದು. ಶ್ರೀ ಶ್ರೀಶ್ರೀಡಾ.ನಿರ್ಮಲಾ ನಂದನಾಥರು ತಮ್ಮ ಇಡೀ ಬದುಕನ್ನು ಅದರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಸಂತವಿಜ್ಞಾನಿ ಅಥವಾ ವಿಜ್ಞಾನಿ ಸಂತ. ಅಹರ್ನಿಶಿ ಧರ್ಮದ ಏಳ್ಗೆಗೆ ಶ್ರಮಿಸುತ್ತಾ, ಈ ನಾಡಿನ ಎಲ್ಲಾ ಸಮುದಾಯದ, ಬಡವರ ಮತ್ತು ಅಸಹಾಯಕರ ಬದುಕಿಗೆ ಆಶಾಕಿರಣವಾಗಿ ತಮ್ಮಬಾಳನ್ನು ಚಂದನದಂತೆ ತೇಯುತ್ತಿರುವ ಮಹಾಮಹಿಮರು. ಗುಬ್ಬಿ ತಾಲ್ಲೂಕಿನ ಚೀರನಹಳ್ಳಿ ಎಂಬ ಕುಗ್ರಾಮವೊಂದರ ಬಡರೈತ ಕುಟುಂಬದಲ್ಲಿ ಜನಿಸಿದ ಕಾರಣಿಕ ಶಿಶು ಈ ನಾಡಿನ ಅಧ್ಯಾತ್ಮಿಕ ಪರಂಪರೆಯ ಮೇರು ಮಠದ ಪೀಠಾಧಿಪತಿಯಾಗಿದ್ದಾರೆ.
ಇಡೀ ದೇಶ ಮಾತ್ರವಲ್ಲದೆ ಪ್ರಪಂಚದ ಅನೇಕ ರಾಷ್ಟ್ರಗಳ ಬೌದ್ಧಿಕ ವಲಯದ ಚಿಂತಕರು ಗೌರವಿ ಸುವ ವ್ಯಕ್ತಿತ್ವ ಚುಂಚಶ್ರೀಯವರದ್ದು. ವೇದ, ಆಗಮ, ಸಾಹಿತ್ಯ, ವಿಜ್ಞಾನ, ಸಾಮಾಜಿಕ ದೀಪ್ತತೆಯ ಅಪರೂಪದ ಜ್ಞಾನ ಹೊಂದಿರುವ ಪೂಜ್ಯರದ್ದು ಬಹುಮುಖಿ ವ್ಯಕ್ತಿತ್ವ. ಎಂಐಟಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ವಿಜ್ಞಾನಿಯಾಗಿ ವೃತ್ತಿ ಮಾಡಬಹು ದಾಗಿದ್ದ ವ್ಯಕ್ತಿತ್ವವೊಂದು ಶ್ರೀಮಠದ ಗುರುಪರಂಪರೆಯಲ್ಲಿ ನೆಲೆನಿಂತಿತು.
ಶ್ರೀಶ್ರೀಶ್ರೀಗಳ ಪೂರ್ವಾಶ್ರಮದ ಹೆಸರು ನಾಗರಾಜು. ಇವರು ನರಸಪ್ಪ ಮತ್ತು ನಂಜಮ್ಮನವರ ಪುಣ್ಯಗರ್ಭದಲ್ಲಿ 1969 ಜುಲೈ 20ರಂದು ಜನಿಸಿದರು. ಇವರ ಜನ್ಮಸ್ಥಳ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಚೀರನಹಳ್ಳಿ ಗ್ರಾಮ. ಚಿಕ್ಕ ವಯಸ್ಸಿನಲ್ಲಿ ಎಲ್ಲಾ ಮಕ್ಕಳಂತೆಯೇ ಆಡಿ, ನಲಿದು, ಕುಣಿದು, ಓದುತ್ತಾ ಬಂದವರು.
ಚೀರನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದರು. ನೆಟ್ಟೇಕೆರೆಯ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ಮಾಧ್ಯಮಿಕ ವ್ಯಾಸಂಗ ಮುಗಿಸಿ, ಮಾವಿನಹಳ್ಳಿಯ ಪ್ರಗತಿಪರಗಣಪತಿ ಪ್ರೌಢಶಾಲೆ ಯಲ್ಲಿ ಪ್ರೌಢಶಿಕ್ಷಣ ಪಡೆದು, ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೋ ಶಿಕ್ಷಣ ಪಡೆದರು. ನಂತರ ಮೈಸೂರಿನ ಎನ್‌ಐಇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿ, ಅನಂತರ ಚೆನ್ನೈನ ಎನ್‌ಐಟಿಯಲ್ಲಿ ಚಿನ್ನದ ಪದಕ ಪಡೆಯುವುದರೊಂದಿಗೆ ಎಂಟೆಕ್ ಪದವಿ ಪಡೆದರು. ಇವರು ಸೃಜನಶೀಲ ವ್ಯಕ್ತಿತ್ವದವರು. ಸೌಮ್ಯ ಸ್ವಭಾವದ ಸಾತ್ವಿಕ ಚಿಂತಕರು.
ಜ್ಞಾನ, ವಿಜ್ಞಾನ ತಂತ್ರಜ್ಞಾನದಲ್ಲಿ ಅಪಾರಜ್ಞಾನವನ್ನು ಹೊಂದಿರುವ ಗುರೂಜಿಯವರಿಗೆ ಅನೇಕ ಉದ್ಯೋಗಾವಕಾಶಗಳು ಅರಸಿ ಬಂದಿದ್ದವು. ಆದರೆ ಇವರ ಜ್ಞಾನ ಅಧ್ಯಾತ್ಮಮಾರ್ಗವಾಗಿ ಬೆಳೆದಿದ್ದ ಕಾರಣ ಅವುಗಳನ್ನು ನಿರಾಕರಿಸಿದರು. ಶ್ರೀಆದಿಚುಂಚನಗಿರಿ ಮಠದ ಸಂಪರ್ಕ ಹಾಗೂ ಮಹಾಗುರು ಬಾಲಗಂಗಾಧರನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಜ್ಞಾನಿಯಾಗಿ ಬೆಳೆದರು. ಅನಂತರದ ದಿನ ಗಳಲ್ಲಿ ಅವರ ಶ್ರದ್ಧೆ, ಭಕ್ತಿ ಮತ್ತು ಆಸಕ್ತಿಯನ್ನು ನೋಡಿ ಅವರಿಗೆ ಮೊದಲು ಬ್ರಹ್ಮಚಾರಿ ದೀಕ್ಷೆ ಯನ್ನು ನೀಡಿ ನಿರ್ಮಲಾನಂದನಾಥ ಎಂದು ನಾಮಕರಣ ಮಾಡಿದರು. ಮುಂದೆ ರಾಮನಗರದ ಅರ್ಚಕರಹಳ್ಳಿಯಲ್ಲಿ ರುವ ಅಂಧರ ಶಾಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಲಭಿಸಿತು.
ಹಲವು ವರ್ಷ ಕಳೆದ ನಂತರ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಶಾಖಾಮಠವನ್ನು ನೋಡಿಕೊಳ್ಳಲು ಕಾರ್ಯದರ್ಶಿಗಳಾಗಿ ನೇಮಿಸಿದರು. ಅಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ, ಸಾಮಾಜಿಕ ಸಂಘಟನೆಯಲ್ಲಿನ ಅವರ ಕರ್ತೃತ್ವ ಶಕ್ತಿ ಪ್ರಕಟವಾಯಿತು. ಶ್ರೀಶ್ರೀಶ್ರೀ ಬಾಲಗಂಗಾಧರನಾಥರು ದೂರದೃಷ್ಟಿಯಿಂದ ಈ ಮೊದಲೇ ನಿರ್ಧರಿಸಿದಂತೆ ಆದಿಚುಂಚನಗಿರಿ ಶ್ರದ್ಧಾಪೀಠದ ಉತ್ತರಾಧಿಕಾರಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೆಸರನ್ನು ನಮೂದಿಸಿ ಉಯಿಲು ಬರೆದಿಟ್ಟಿದ್ದರು. ಅದರಂತೆ 2013 ಜನವರಿ 14ರಂದು ಶ್ರೀಗಳು ಆದಿಚುಂಚನಗಿರಿಯ ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾಗಿ ಸಿದ್ಧ ಸಿಂಹಾಸನಾರೂಢರಾದರು. ಇವರ ಮಾರ್ಗದರ್ಶನದಲ್ಲಿ ಇಂದು ಆದಿಚುಂಚನಗಿರಿ ಪ್ರಜ್ವಲವಾಗಿ ಬೆಳಗುತ್ತಿದೆ.
ಇವರು ಸಾಂಪ್ರದಾಯಿಕ ಚಿಂತನೆಗಳು, ಧರ್ಮ, ಸಾಹಿತ್ಯ ಹಾಗೂ ವೈಜ್ಞಾನಿಕ ಚಿಂತನೆಯನ್ನು ಮಿಳಿತ ಮಾಡಿ ಚಿಂತಿಸುವ ಕ್ರಮವೇ ಚೇತೋಹಾರಿಯಾದುದು. ಜಗತ್ತಿನ ಎಲ್ಲಾ ಭಾಷೆಯ ಪ್ರಮುಖ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಪೂಜ್ಯರು, ಕನ್ನಡ ಸಾಹಿತ್ಯ ಅಧ್ಯಯನ ಮತ್ತು ಸಂಸ್ಕೃತಿ ರೂಪಗಳನ್ನು ಆಧುನಿಕ ನೆಲೆಯಲ್ಲಿ ವಿಸ್ತರಿಸುವ ಸೊಗಸಾದ, ವೈಚಾರಿಕವಾದ ಯೋಚನೆ ಹೊಂದಿದ್ದಾರೆ.
ಶ್ರೀಮಠದ ವತಿಯಿಂದ ಪ್ರತಿ ವರ್ಷವೂ ವಿಚಾರ ಸಂಕಿರಣಗಳು, ಸಂಸ್ಕೃತಿ ಕಾರ್ಯಾಗಾರಗಳು, ಸಮ್ಮೇಳನಗಳನ್ನು ಆಯೋಜಿಸಿ ನಾಡಿನ ಚಿಂತಕರನೇಕರ ಜೊತೆ ಚರ್ಚಿಸಿದ ಗರಿಮೆ ಶ್ರೀಯವರದ್ದು. ಮನಸ್ಸಿನೊಳಗಿನ ಅವಿವೇಕಗಳನ್ನು ಕಳೆದು ಬದುಕಿನ ಹೊಸದಾರಿಗಳ ಬಗೆಗೆ ಮೆರುಗು ನೀಡುವಲ್ಲಿ ಜಗದ್ಗುರುಗಳಿಗೂ ಮಾದರಿಯಾಗಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು.
ಪೀಠಾಧ್ಯಕ್ಷರಾದ ಅನಂತರದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿ ನಾಥ ಪರಂಪರೆ: ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಮೇಲೆ ಅಧ್ಯಯನ ಕೈಗೊಂಡು ಪ್ರೊ.ಪಿ.ಬಿ.ಶಾಂತಪ್ಪನವರ ಮಾರ್ಗದರ್ಶದಲ್ಲಿ ಪಿಎಚ್‌ಡಿ ಪದವಿ ಯನ್ನು ಪಡೆದ ಪೂಜ್ಯಶ್ರೀಯವರ ಓದಿನ ಹರವು ಬಹುಮುಖಿಯಾದುದು.
ನಿರಂತರ ಅಧ್ಯಯನಶೀಲರಾದ ನಿರ್ಮಲಾನಂದನಾಥರ ಯೋಚನೆಗಳು ಈ ಹೊತ್ತಿನ ಸಮಾಜಕ್ಕೆ ಚಿಕಿತ್ಸಕ ನೋಟವನ್ನು ಒದಗಿಸುತ್ತವೆ. ಅತ್ಯಂತ ಸರಳವಾಗಿ ಪಕ್ಕದ ಮನೆಯವರೆಂಬ ಭಾವ ಬರುವಂತೆ ಪ್ರೀತಿಯಿಂದ ನಿಷ್ಕಲ್ಮಶವಾಗಿ ಚರ್ಚಿಸುವ ಇವರ ಓದಿನ ವಿಷಯಗಳ ಪರಿಯೇ ಆಕರ್ಷಕ. ಚಿಂತನಾ ಸಭೆ, ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಆಸಕ್ತ ವಿದ್ಯಾರ್ಥಿಯಂತೆ ಕೈಯಲ್ಲಿ ನೋಟ್‌ಪ್ಯಾಡ್ ಮತ್ತು ಪೆನ್ನು ಹಿಡಿದು ತಲ್ಲೀನನಾಗಿ ಸಂಪರ್ಕಕ್ಕೆ ಬಂದ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ಕೇಳುತ್ತಾ ಟಿಪ್ಪಣಿ ಮಾಡಿಕೊಳ್ಳುವ ಪೂಜ್ಯರ ಕಲಿಕಾ ಸೌಜನ್ಯಕ್ಕಿಂತ ದೊಡ್ಡ ಮಾದರಿ ಬೇಕಾಗಿಲ್ಲ.
ಸಾವಿರಾರು ವಿದ್ಯಾರ್ಥಿಗಳ ಜೊತೆಜೊತೆಯಲ್ಲಿಯೇ ಪ್ರಾರ್ಥನೆಗಳನ್ನು ಮುಗಿಸಿ ಮಕ್ಕಳಿಗೆ ಊಟ ಬಡಿಸಿ, ಅವರ ಜೊತೆಯಲ್ಲೇ ಸರಳವಾಗಿ ನಗುನಗುತ್ತಾ ಉಪಾಹಾರ ಸೇವಿಸುವ ನಡೆ ನಮ್ಮೊಳಗಿನ ಅಹಂಕಾರ ವನ್ನು ಅಳಿಸಿಹಾಕುತ್ತದೆ. ಸಂಪರ್ಕಕ್ಕೆ ಬಂದ ನಂತರ ಆಗಾಗ್ಗೆ ದರ್ಶನ ಪಡೆದು ಚರ್ಚಿಸಬೇಕೆಂಬ ಭಾವ ಬರುವಷ್ಟು ಓದುಗಳಿದ್ದರೂ ಎಲ್ಲಿಯೂ ಎಲ್ಲೆ ಮೀರಿ ಚರ್ಚಿಸದ ಇವರ ನಿರ್ಮಲ ಜ್ಞಾನ ಇವತ್ತಿನ ಅನೇಕರಿಗೆ ಅಗತ್ಯವಿದೆ.
ಆದಿಚುಂಚನಗಿರಿ ಬೆಟ್ಟದ ಮೇಲ್ಭಾಗದಲ್ಲಿ ಕ್ಷೇತ್ರಾಽದೇವತೆ ಶ್ರೀಗಂಗಾಧರೇಶ್ವರ, ಶ್ರೀಗವಿಸಿದ್ಧೇಶ್ವರ, ಶ್ರೀಚಂದ್ರಮೌಳೇಶ್ವರ, ಶ್ರೀಮಲ್ಲೇಶ್ವರ, ಶ್ರೀಸೋಮೇಶ್ವರಸ್ವಾಮಿಯ ಸಾನ್ನಿಧ್ಯವಿದೆ. ಬಂಡೆ ಹೆಬ್ಬಂಡೆ ಗಳಿಂದ ವರ್ತುಲಾಕಾರವಾಗಿ, ಛಾವಣಿರೂಪದಲ್ಲಿ ಚಾಚಿಕೊಂಡು ಒಪ್ಪಾರಿನ ತುದಿಗಳಂತೆ ಬೆಟ್ಟ ಕಂಡು ಬರುತ್ತದೆ.
105 ಅಡಿ ಎತ್ತರ ಇರುವ ಗಳಿಗಲ್ಲು ಪಕ್ಷಿಯ ಕೊಕ್ಕಿನಾಕಾರದಲ್ಲಿ ಇದೆ. ಆದ್ದರಿಂದ ಚುಂಚ ಶಬ್ದಾರ್ಥಕ್ಕೆ ಅನುಗುಣವಾಗಿ ಚುಂಚನಗಿರಿ ಎಂದು ಪ್ರಖ್ಯಾತಿ ಹೊಂದಿದೆ. ಆದಿಚುಂಚನಗಿರಿಯಲ್ಲಿ ಸಿದ್ಧಯೋಗಿಗಳ ತಪಃಶಕ್ತಿ, ಆದಿರುದ್ರ ತಪಸ್ಸನ್ನಾಚರಿಸಿದ ಜ್ವಾಲಪೀಠ, ಪಂಚಲಿಂಗಗಳ ಸಾನ್ನಿಧ್ಯ, ಕಾಲಭೈರವ, ಅಷ್ಟಭೈರವ, ಅಷ್ಟಾಷ್ಟಭೈರವ, ಮಾಳಮ್ಮದೇವಿ, ಆದಿಶಕ್ತಿ ಸ್ತಂಭಾಂಬಿಕೆ, ಬಿಂದು ಸರೋವರ, ತಾವರೆಕೊಳ ಮುಂತಾದವನ್ನು ಕಾಣಬಹುದಾಗಿದೆ.
ಮಾತ್ರವಲ್ಲ ಅನೇಕ ವನಸ್ಪತಿ ಗಿಡಗಳು, ನಾಥಯತಿಗಳು ತಪಸ್ಸಾಚರಿಸಿದ್ದ ಗುಹೆಗಳು, ನಾಗರಕಲ್ಲು, ಕೂಗುಬಂಡೆ, ಗಳಿಗಲ್ಲು, ಮಧ್ಯಸ್ತಂಭ, ಚೋಳೂರು ಕಂಬ ಮುಂತಾದ ಪ್ರಸಿದ್ಧ ಶಕ್ತಿ ತಾಣಗಳಿಂದ ಆದಿಚುಂಚನಗಿರಿಕ್ಷೇತ್ರ ಗುರುತಿಸಲ್ಪಟ್ಟಿದೆ. ಪ್ರಾಚೀನ ಪರಂಪರೆಯುಳ್ಳ ಈ ಕ್ಷೇತ್ರಕ್ಕೆ ಎರಡು ಸಾವಿರ ವರ್ಷದ ಇತಿಹಾಸ ಇದೆ. ಇಂತಹ ಸ್ಥಳದಲ್ಲಿ ನೆಲೆನಿಂತು ಜಗತ್ತಿನಾದ್ಯಂತ ಪೀಠದ ಹಿರಿಮೆಯನ್ನು ವಿಸ್ತಾರವಾಗುವಂತೆ ಮಾಡುತ್ತಾ ಪೂಜ್ಯಶ್ರೀ ಶ್ರೀಶ್ರೀ ಡಾ.ನಿರ್ಮಲಾನಂದರು ಸನ್ಯಾಸಲೋಕವನ್ನು ಬೆಳಗುತ್ತಿದ್ದಾರೆ. ಈ ಆಧ್ಯಾತ್ಮಿಕ ಗಂಗೆ ಎಲ್ಲೆಡೆ ಹರಿಯಲಿ ಎನ್ನುವದು ಎಂಬುದು ಈ ಲೇಖನದ ಆಶಯ.