Raghava Sharma Nidle Column: ರಾಹುಲ್ ಆಪ್ತನ ಸೋಲು ಕಾಂಗ್ರೆಸ್ʼನ ಗೆಲುವು !
ಹಾಗೆ ನೋಡಿದರೆ ರಾಹುಲ್ ಗಾಂಧಿ ಕೂಡ ಕೆ.ಸಿ.ವೇಣುಗೋಪಾಲ್‌ರನ್ನು ಕೇರಳಕ್ಕೆ ಮುಖ್ಯಮಂತ್ರಿ ಯನ್ನಾಗಿ ಕಳುಹಿಸಿ ಕೊಡುವ ಲೆಕ್ಕಾಚಾರದಲ್ಲಿದ್ದರು. ಆದರೆ, ಐಯುಎಂಎಲ್ ಮಾತ್ರ ಸತೀಶನ್ ಬಿಟ್ಟು ಬೇರೆ ಯಾವ ಹೆಸರನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ವೇಣುಗೋಪಾಲ್ ನಿಮ್ಮ ಆಯ್ಕೆಯಾದರೆ ನಾವು ಸರಕಾರಕ್ಕೆ ಬಾಹ್ಯ ಬೆಂಬಲವನ್ನಷ್ಟೇ ನೀಡುತ್ತೇವೆ ಎಂಬ ಸಂದೇಶ ರವಾನಿಸಿದ್ದರಿಂದ ಹೈಕಮಾಂಡ್ ಒತ್ತಡಕ್ಕೆ ಸಿಲುಕಿತು ಮತ್ತು ಸತೀಶನ್‌ರನ್ನು ಆಯ್ಕೆ ಮಾಡುವುದು ಅನಿವಾರ್ಯವಾಯ್ತು.
-
ಜನಪಥ
ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೆರಳಾಗಿರುವ ಕೇರಳ ಸಂಸದ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈಗ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ತಾವಿರಬೇಕಿದ್ದ ಮುಖ್ಯಮಂತ್ರಿ ಸ್ಥಾನದಲ್ಲಿ ಕೇರಳದ ಮತ್ತೋರ್ವ ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್ ವಿರಾಜಮಾನರಾಗಿರುವುದು ಸಹಜವಾಗಿಯೇ ವೇಣುಗೋಪಾಲ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಬಹುಶಃ ವೇಣುಗೋಪಾಲ್ ನೋವು ಏನು ಎನ್ನುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಷ್ಟೇ ಚೆನ್ನಾಗಿ ಬಲ್ಲರು. ಏಕೆಂದರೆ ಕರ್ನಾಟಕದಲ್ಲಿ ಸಿಎಂ ಸ್ಥಾನಕ್ಕೆ ಹಲವು ಬಾರಿ ಹತ್ತಿರ ಬಂದು ಅನಿವಾರ್ಯವಾಗಿ ತ್ಯಾಗ ಮಾಡಬೇಕಾಗಿ ಬಂದ ಖರ್ಗೆಯವರದ್ದು ವೇಣು ಗೋಪಾಲ್‌ರನ್ನೂ ಮೀರಿದ ಸುದೀರ್ಘ ನೋವು. ಬಹುಶಃ ಆ ದುಃಖವನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೂ ಅಳಿಸಲು ಸಾಧ್ಯವಾಗಿಲ್ಲ.
ಹೀಗಾಗಿ, ವೇಣುಗೋಪಾಲ್‌ಗೆ ಸಮಾಧಾನ ಮಾಡಲು ಖರ್ಗೆಯೇ ಸೂಕ್ತ ವ್ಯಕ್ತಿ. ಅದಿರಲಿ, ಕೇರಳದಲ್ಲಿ ಸಿಎಂ ಕುರ್ಚಿ ರೇಸ್‌ನಲ್ಲಿ ವೇಣುಗೋಪಾಲ್‌ರನ್ನು ಸೋಲಿಸಿ ಮೇ 18ರಂದು ಕೇರಳ ಸಿಎಂ ಆಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದರೆ ಅದಕ್ಕೆ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ (ಐಯುಎಂಎಲ್) ಪಟ್ಟು ಹಿಡಿದದ್ದು ಕೂಡ ಮುಖ್ಯ ಕಾರಣ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಸೇರಿದಂತೆ 63 ಕಾಂಗ್ರೆಸ್ ಶಾಸಕರಲ್ಲಿ 43 ಮಂದಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಎಐಸಿಸಿ ವೀಕ್ಷಕರಿಗೆ ಅಭಿಪ್ರಾಯ ನೀಡಿದ್ದರ ಹೊರತಾಗಿಯೂ ಕಾಂಗ್ರೆಸ್ ಹೈಕಮಾಂಡ್ ಮಿತ್ರಪಕ್ಷಗಳ ಒತ್ತಡ ಹಾಗೂ ಜನಪ್ರಿಯತೆಗೆ ಮಣೆ ಹಾಕಿ, ವಿ.ಡಿ.ಸೀಶನ್‌ರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಾಮಾನ್ಯ ಬೆಳವಣಿಗೆಯೇನಲ್ಲ.
ಇದನ್ನೂ ಓದಿ: Raghava Sharma Nidle Column: ಬಿಜೆಪಿ ಗೆಲುವು ಕಾಂಗ್ರೆಸ್ʼಗೆ ಪಾಠವಾಗುವುದೇ ?
ಹಾಗೆ ನೋಡಿದರೆ ರಾಹುಲ್ ಗಾಂಧಿ ಕೂಡ ಕೆ.ಸಿ. ವೇಣುಗೋಪಾಲ್‌ರನ್ನು ಕೇರಳಕ್ಕೆ ಮುಖ್ಯಮಂತ್ರಿ ಯನ್ನಾಗಿ ಕಳುಹಿಸಿ ಕೊಡುವ ಲೆಕ್ಕಾಚಾರದಲ್ಲಿದ್ದರು. ಆದರೆ, ಐಯುಎಂಎಲ್ ಮಾತ್ರ ಸತೀಶನ್ ಬಿಟ್ಟು ಬೇರೆ ಯಾವ ಹೆಸರನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ವೇಣುಗೋಪಾಲ್ ನಿಮ್ಮ ಆಯ್ಕೆ ಯಾದರೆ ನಾವು ಸರಕಾರಕ್ಕೆ ಬಾಹ್ಯ ಬೆಂಬಲವನ್ನಷ್ಟೇ ನೀಡುತ್ತೇವೆ ಎಂಬ ಸಂದೇಶ ರವಾನಿಸಿದ್ದ ರಿಂದ ಹೈಕಮಾಂಡ್ ಒತ್ತಡಕ್ಕೆ ಸಿಲುಕಿತು ಮತ್ತು ಸತೀಶನ್‌ರನ್ನು ಆಯ್ಕೆ ಮಾಡುವುದು ಅನಿವಾರ್ಯವಾಯ್ತು.
ಈ ಹಿಂದೆ ರಮೇಶ್ ಚೆನ್ನಿತ್ತಾಲಾ ಅವರಿಗೆ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನ ಸಿಗಬಾರದು ಎಂದು ವಿ.ಡಿ. ಸತೀಶನ್ ನಾಯಕತ್ವಕ್ಕೆ ಬೆಂಬಲ ನೀಡಿದ್ದ ಕೆ.ಸಿ.ವೇಣುಗೋಪಾಲ್, ಈಗ ಅದೇ ಸತೀಶನ್ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂತಿರುವುದನ್ನು ಕಂಡು ಒಳಗೊಳಗೇ ಅಳುವ ಸ್ಥಿತಿ ನಿರ್ಮಾಣವಾಗಿದೆ. ಪರಮಾಪ್ತ ವೇಣುಗೋಪಾಲ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಲಿಲ್ಲ ಎಂಬ ಕೊರಗು ರಾಹುಲ್ ಗಾಂಧಿ ಮನದೊಳಗೂ ಇರದಿರದು.
ಕೇರಳದಲ್ಲಿ ಕಾಂಗ್ರೆಸ್ ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣೆ ಪೂರ್ವದಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ, ಮೇ 4ರಂದು ಫಲಿತಾಂಶ ಹೊರಬಿದ್ದ ಕೂಡಲೇ ಸಿಎಂ ಹುದ್ದೆಯ ರೇಸ್‌ಗಿಳಿದಿದ್ದ ವೇಣುಗೋಪಾಲ್‌ಗೆ, ರಾಹುಲ್ ಪರೋಕ್ಷ ಬೆಂಬಲವಿತ್ತು. ಬಿಜೆಪಿ ಹೈಕಮಾಂಡ್ ಆಗಲೀ, ಕಾಂಗ್ರೆಸ್ ಹೈಕಮಾಂಡೇ ಆಗಲೀ, ಸಿಎಂ ಸ್ಥಾನದಲ್ಲಿ ತಮ್ಮ ವಿಧೇಯ ವ್ಯಕ್ತಿಗಳೇ ಇರಬೇಕು ಎಂಬುದನ್ನೇ ಬಯಸುತ್ತದೆ.
ರಾಹುಲ್ ಗಾಂಧಿ ಆಶಯವೂ ಅದೇ ಆಗಿತ್ತು. ಆದರೆ, ತಮಿಳುನಾಡಿನಲ್ಲಿ ವಿಪರೀತ ರಾಜಕೀಯ ಬೆಳವಣಿಗೆಗಳಾಗಿ, ಟಿವಿಕೆಗೆ ಬೆಂಬಲ ನೀಡುವ ಬಗೆಗಿನ ಮಾತುಕತೆಗಳಲ್ಲಿ ಹೈಕಮಾಂಡ್ ತೊಡಗಿದ್ದರಿಂದ ಕೇರಳದತ್ತ ಪೂರ್ತಿ ಗಮನ ನೀಡಲು ದಿಲ್ಲಿ ನಾಯಕರಿಗೆ ಸಾಧ್ಯವಾಗಿರಲಿಲ್ಲ. ಈ ನಡುವೆ, ಶಾಸಕರ ಬೆಂಬಲವಿರುವುದರಿಂದ ತಾನು ಸಿಎಂ ಆಗುತ್ತೇನೆ ಎಂದು ವೇಣುಗೋಪಾಲ್ ನಂಬಿದ್ದರು.
ಆದರೆ, ಸಿಎಂ ಆಯ್ಕೆಯಲ್ಲಿನ ವಿಳಂಬ ವೇಣುಗೋಪಾಲ್ ಲೆಕ್ಕಾಚಾರ ತಲೆಕೆಳಗು ಮಾಡಿತು. ಮೇ 4ರ ನಂತರ 2-3 ದಿನಗಳಲ್ಲಿ ಅವರೇ ಸಿಎಂ ಎಂಬ ಘೋಷಣೆಯಾಗುತ್ತಿದ್ದರೆ ಬಹುಶಃ ವಿ.ಡಿ. ಸತೀಶನ್‌ರನ್ನು ಬೆಂಬಲಿಸಿ ಪ್ರತಿಭಟನೆ, ಪೋಸ್ಟರ್ ವಾರ್ ನಡೆಸಲು ಮತ್ತು ದಿಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಐಯುಎಂಎಲ್‌ಗೂ ಕಾಲವಕಾಶ ಕಡಿಮೆ ಇರುತ್ತಿತ್ತು. ಆದರೆ, ವಿಳಂಬ ದಿಂದಾಗಿ ಸತೀಶನ್ ಬಲ ಹೆಚ್ಚಿಸಿಕೊಂಡು, ಮಿತ್ರಪಕ್ಷ ಐಯುಎಂಎಲ್ ಮೂಲಕ ಹೈಕಮಾಂಡ್ ಅನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದರು.
ತನಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟರೆ ನನಗೆ ಬೇರೇನೂ ಬೇಡ. ವೇಣುಗೋಪಾಲ್ ನಾಯಕತ್ವದ ಮಂತ್ರಿ ಮಂಡಲಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಸತೀಶನ್ ಸ್ಪಷ್ಟಪಡಿಸಿದ್ದರು. ಕೇರಳದಲ್ಲಿ ಸತೀಶನ್ ಇಲ್ಲದ ಕಾಂಗ್ರೆಸ್ ಸರಕಾರದ ಮಂತ್ರಿ ಮಂಡಳ ಕಲ್ಪಿಸಲೂ ಸಾಧ್ಯವಿಲ್ಲ. ಹಾಗಾಗಿ ಹೈಕಮಾಂಡ್ ಮತ್ತಷ್ಟು ಒತ್ತಡದಲ್ಲಿ ಸಿಲುಕಿತು.
ಕೇರಳದಲ್ಲಿ ಅಧ್ಯಯನಶೀಲ ಜನಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದ ಸತೀಶನ್, ಹೊರಗೆ ಮೃದು ಭಾಷಿಯಂತೆ ಕಂಡರೂ, ವಿಧಾನಸಭೆಯಲ್ಲಿ ಎಡ ಸರಕಾರದ ವಿರುದ್ಧ ಹುಲಿಯಂತೆ ಘರ್ಜಿಸಿ ದವರು. ರಾಜ್ಯ ಸರಕಾರದ ವೈಫಲ್ಯದ ದಾಖಲೆಗಳನ್ನು ಅಂಕಿ-ಅಂಶ ಸಮೇತ, ಸಮರ್ಥವಾಗಿ ಮಂಡಿಸುತ್ತಾ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಹಿಗ್ಗಿಸುವಲ್ಲಿ ಸತೀಶನ್ ನಿರ್ಣಾಯಕ ಪಾತ್ರ ವಹಿಸಿದ್ದರು.
ಮಾಜಿ ಸಿಎಂ ಪಿಣರಾಯಿ ವಿಜಯನ್ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದ್ದ ಚಾಕಚಕ್ಯತೆ ಯಿಂದಾಗಿ ಅವರ ರಾಜಕೀಯ ವರ್ಚಸ್ಸು ವೃದ್ಧಿಯಾಗುತ್ತಲೇ ಬಂತು. ಐಯುಎಂಎಲ್ ಜತೆಗೂ ನಿಕಟ ಸಂಬಂಧ ಹೊಂದಿರುವ ಸತೀಶನ್, ನಿರ್ದಿಷ್ಟ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆ ವಿಷಯದಲ್ಲೂ ಐಯುಎಂಎಲ್ ವಿಚಾರಧಾರೆಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.
ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್) ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನ (ಎಸ್‌ಎನ್‌ಡಿಪಿ) ಯೋಗಮ್ ನಂತಹ ಸಮುದಾಯ ಸಂಘಟನೆಗಳು ರಾಜಕೀಯ ಪಕ್ಷಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎನ್ನುವುದು ಸತೀಶನ್ ದೃಢ ನಿಲುವು.
ಹೀಗಾಗಿ, ದಿಲ್ಲಿಯಲ್ಲಿ ರಾಹುಲ್ ಜತೆಗಿರುವ ವ್ಯಕ್ತಿಗಿಂತ ಸ್ಥಳೀಯವಾಗಿ ನಮ್ಮೊಂದಿಗಿದ್ದ ವ್ಯಕ್ತಿಯೇ ಸೂಕ್ತ ಎಂದು ಭಾವಿಸಿದ ಐಯುಎಂಎಲ, ಸತೀಶನ್ ಹೆಸರನ್ನೇ ಅಂತಿಮಗೊಳಿಸಬೇಕು ಎಂದು ಪಟ್ಟುಹಿಡಿಯಿತು. ಇದು ಸತೀಶನ್ ಅವರ ಒತ್ತಡ ಕಾರ್ಯತಂತ್ರದ ಭಾಗವೂ ಆಗಿತ್ತು ಕೂಡ.
ಅದಲ್ಲದೆ, ಸಂಸದರ ವಿಧಾನಸಭೆ ಪ್ರವೇಶ ಬೇಡ ಎಂಬ ನಿರ್ಣಯದ ಹೊರತಾಗಿ ಹೈಕಮಾಂಡ್ ವೇಣುಗೋಪಾಲ್ ಬಗ್ಗೆ ಮೌನ ತಾಳಿದ್ದರಿಂದ, ಹೈಕಮಾಂಡ್ ವೇಣುಗೋಪಾಲ್ ಪರ ನಿಲುವು ಹೊಂದಿದೆ ಎಂಬ ಸಾರ್ವಜನಿಕ ಆಕ್ರೋಶ ಹೆಚ್ಚಾಗಿ, ಸತೀಶನ್ ಪರ ಜನಾಭಿಪ್ರಾಯ ರೂಪುಗೊಂಡವು.
ಹೈಕಮಾಂಡ್ ವಿರುದ್ಧ ಪ್ರತಿಭಟನೆಗಳು ನಡೆದವು. ಜಿಲ್ಲಾ ಘಟಕಗಳಲ್ಲೂ ಸತೀಶನ್ ಪರ ಧ್ವನಿ ಕೇಳಿಬಂತು. ವಯನಾಡ್‌ನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಪೋಸ್ಟರ್ʼಗಳು ಕಾಣಿಸಿಕೊಂಡದ್ದೂ ಹೈಕಮಾಂಡ್ ಅನ್ನು ಆತಂಕದಲ್ಲಿ ಸಿಲುಕಿಸಿತು.
ಕೇರಳದಲ್ಲಿ ಸ್ಪರ್ಧಿಸಿದ್ದ 27 ಸೀಟುಗಳಲ್ಲಿ 22ನ್ನು ಗೆದ್ದುಕೊಂಡ ಐಯುಎಂಎಲ್, ಇದೀಗ 5 ಪ್ರಭಾವಿ ಮಂತ್ರಿ ಸ್ಥಾನಗಳನ್ನೂ ತನ್ನದಾಗಿಸಿಕೊಂಡಿದೆ. ಮಲಬಾರ್, ವಯನಾಡ್ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಐಯುಎಂಎಲ್, 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದ್ದು ಉಲ್ಲೇಖಾರ್ಹ.
2024ರಲ್ಲಿ ರಾಹುಲ್ ಗಾಂಧಿ ರಾಯ್‌ಬರೇಲಿ ಕ್ಷೇತ್ರದಲ್ಲೂ ಗೆಲವು ಸಾಧಿಸಿ, ಅದನ್ನು ಸಂಸತ್ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡದ್ದರಿಂದ ವಯನಾಡ್ ಲೋಕಸಭೆ ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಅಭ್ಯರ್ಥಿಯಾಗಿ ಬಂದರು. ಆಗಲೂ ಪ್ರಿಯಾಂಕಾ ಗೆಲವಿಗೆ ಐಯುಎಂಎಲ್ ಕೊಡುಗೆ ನೀಡಿತ್ತು.
ವಿ.ಡಿ.ಸತೀಶನ್‌ರನ್ನೇ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿ ಎಂದು ಹೈಕಮಾಂಡ್‌ಗೆ ತಿಳಿಸಿದ್ದ ಐಯುಎಂಎಲ್ ನಾಯಕರು, ಲೋಕಸಭೆ ಚುನಾವಣೆಯ ಈ ಮೂರೂ ಸಂದರ್ಭಗಳನ್ನು ಗಾಂಧಿ ಕುಟುಂಬಕ್ಕೆ ಸೂಚ್ಯವಾಗಿ ನೆನಪಿಸಿದ್ದರು. 2019ರಲ್ಲಿ ಅಮೇಥಿಯಲ್ಲಿ ಸೋತರೂ, ವಯನಾಡ್‌ನಲ್ಲಿ ಗೆದ್ದ ಪರಿಣಾಮ ರಾಹುಲ್ ಗಾಂಧಿ ಸಂಸತ್ ಪ್ರವೇಶ ಸಾಧ್ಯವಾಗಿತ್ತು.
ಅಮೇಥಿ ಸೋಲಿನ ಸಾಧ್ಯತೆಯ ಕಾರಣದಿಂದಲೇ ರಾಹುಲ್ ವಯನಾಡ್‌ಗೆ ಹೋಗಿದ್ದರು ಮತ್ತು ವಯನಾಡ್ ಮತದಾರರು ರಾಹುಲ್ ಕೈ ಬಿಡಲಿಲ್ಲ. ಹೀಗಿರುವಾಗ, ಪರಮಾಪ್ತ ಎಂಬ ಕಾರಣಕ್ಕೆ ವೇಣುಗೋಪಾಲ್‌ರನ್ನು ಸಿಎಂ ಮಾಡಿದರು ಎಂಬ ಜನಾಕ್ರೋಶಕ್ಕೆ ಗುರಿಯಾಗುವ ಬದಲು ಮತದಾರರ ಸದಭಿಪ್ರಾಯ ಉಳಿಸಿಕೊಳ್ಳೋಣ ಎಂಬುದಾಗಿ ರಾಹುಲ್-ಪ್ರಿಯಾಂಕಾ ಅಂತಿಮ ತೀರ್ಮಾನ ಮಾಡಿದರು.
2019ರಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಗೆದ್ದ ನಂತರ ಮುಖ್ಯಮಂತ್ರಿ ನೇಮಕದ ಪ್ರಶ್ನೆ ಕಾಂಗ್ರೆಸ್ ಹೈಕಮಾಂಡ್‌ಅನ್ನು ವಿಪರೀತವಾಗಿ ಕಾಡಿತ್ತು. ಸಿಎಂ ಸೀಟಿನ ಮೇಲೆ ಕಣ್ಣಿಟ್ಟಿದ್ದ ಜ್ಯೋತಿರಾದಿತ್ಯ ಸಿಂಧಿಯಾಗೆ ಉನ್ನತ ಹುದ್ದೆ ನೀಡಬೇಕೆಂಬ ಆಶಯ ಹೈಕಮಾಂಡ್‌ನಲ್ಲೂ ಇತ್ತು. ಆದರೆ, ಹಿರಿಯ ನಾಯಕರಾದ ಕಮಲ್‌ನಾಥ್ ಮತ್ತು ದಿಗ್ವಿಜಯ ಸಿಂಗ್ ಇಬ್ಬರೂ ಒಟ್ಟಾಗಿ ಜ್ಯೋತಿರಾದಿತ್ಯ ಸಿಂಧಿಯಾ ಹಾದಿ ದುರ್ಗಮಗೊಳಿಸಿದ್ದರು.
ಬಹುಪಾಲು ಶಾಸಕರು ಕಮಲ್ʼನಾಥ್‌ಗೆ ಬೆಂಬಲ ಸೂಚಿಸಿದ್ದರಿಂದ ಅವರನ್ನು ಆಯ್ಕೆ ಮಾಡು ವುದು ಹೈಕಮಾಂಡ್‌ಗೆ ಅನಿವಾರ್ಯವಾಗಿತ್ತು. 2023ರಲ್ಲಿ ಕರ್ನಾಟಕದಲ್ಲೂ ಸಿಎಂ ಸ್ಥಾನದ ವಿಚಾರ ಬಂದಾಗ ಸಿದ್ದರಾಮಯ್ಯ ಪರ ಶಾಸಕರ ಬೆಂಬಲವಿದ್ದರೂ, ಡಿ.ಕೆ.ಶಿವಕುಮಾರ್ ಪ್ರಬಲ ಲಾಬಿ ಮಾಡಿದ್ದರು. ದಿಲ್ಲಿಯಲ್ಲಿ 1 ವಾರ ನಡೆದ ಕುರ್ಚಿ ಸರ್ಕಸ್ ಖರ್ಗೆಯವರಿಗೂ ಭಾರೀ ತಲೆನೋವು ತಂದಿತ್ತು.
ಅಂತಿಮವಾಗಿ, ಶಾಸಕರು ಯಾರೊಂದಿಗಿದ್ದಾರೋ ಅವರನ್ನೇ ಆಯ್ಕೆ ಮಾಡಲಾಯಿತು. ಮಧ್ಯ ಪ್ರದೇಶದಲ್ಲಿ ಮಾಡಿದಂತೆ ಕೇರಳದಲ್ಲೂ ಶಾಸಕರ ಅಭಿಪ್ರಾಯ ಪ್ರಕಾರ ತಮ್ಮನ್ನು ಸಿಎಂ ಮಾಡ ಬೇಕು ಎಂದು ಕೆ.ಸಿ.ವೇಣುಗೋಪಾಲ್ ಪ್ರತಿಪಾದಿಸಿದ್ದರು. ಆದರೆ, ಉತ್ತರದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿರುವ ನಾಯಕತ್ವದ ಬಿಕ್ಕಟ್ಟುಗಳಿಂದ ಪಾಠ ಕಲಿತಂತಿರುವ ಕಾಂಗ್ರೆಸ್ ಈ ಬಾರಿ, ಜನಾಭಿಪ್ರಾಯಕ್ಕೆ ಮಾನ್ಯತೆ ನೀಡಿ, ಮಿತ್ರಪಕ್ಷಗಳ ವಿಶ್ವಾಸ ಉಳಿಸಿಕೊಳ್ಳುವ ಜಾಣ ನಡೆಯನ್ನು ಅನುಸರಿಸಿದೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಢ, ಪಂಜಾಬ್ ಅಧ್ವಾನಗಳ ಪುನಾವರ್ತನೆಯಾದರೆ ಪಕ್ಷಕ್ಕೆ ಭವಿಷ್ಯವಿಲ್ಲ ಮತ್ತು ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಪಕ್ಷಕ್ಕೆ, ಮುಖ್ಯವಾಗಿ ದಿಲ್ಲಿಯವರಿಗೆ ಮನವರಿಕೆಯಾದಂತಿದೆ. ಎರಡೂವರೆ ವರ್ಷದ ನಂತರ ಅಧಿಕಾರ ಹಂಚಿಕೆ ಎಂಬ ಪೊಳ್ಳು ಭರವಸೆಯನ್ನೂ ಕೇರಳದಲ್ಲಿ ನೀಡಲಾಗಿಲ್ಲ.
ಹೀಗಾಗಿ, ಸತೀಶನ್ ಸುಸೂತ್ರವಾಗಿ ಅಧಿಕಾರ ನಡೆಸಬಹುದಾಗಿದೆ. ವೇಣುಗೋಪಾಲ್ ಆಯ್ಕೆ ಯಾಗಿದ್ದರೆ ಖಂಡಿತವಾಗಿಯೂ ಕರ್ನಾಟಕದಂತಹ ಅನಿಶ್ಚಿತ ರಾಜಕೀಯ ವಾತಾವರಣವಾಗುವ ಅಪಾಯವಿತ್ತು. ಹೀಗಾಗಿ, ಕಾಂಗ್ರೆಸ್‌ನ ದಿಲ್ಲಿ ದೊರೆಗಳು ಈ ಬಾರಿ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎನ್ನಲಡ್ಡಿಯಿಲ್ಲ.
ಡಿಕೆಶಿ ಬಳಗದಲ್ಲಿ ಖುಷಿ?!:
ಕರ್ನಾಟಕದಲ್ಲಿ ಸಿಎಂ ಬದಲಾವಣೆಯಾಗಬೇಕು ಎಂದು ಕೂಗೆದ್ದು ಹಲವು ತಿಂಗಳಾಗಿದ್ದರೂ, ಸಿದ್ದರಾಮಯ್ಯ ಪರ ಕೆ.ಸಿ.ವೇಣುಗೋಪಾಲ್ ದಿಲ್ಲಿಯಲ್ಲಿ ಪ್ರಬಲ ಲಾಬಿ ಮಾಡಿ, ಅವರ ಸ್ಥಾನವನ್ನು ಸುರಕ್ಷಿತವಾಗಿರಿಸಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದೊಳಗಿನ ಚರ್ಚೆಗಳೇನೂ ಈಗ ಗುಟ್ಟಾಗಿ ಉಳಿದಿಲ್ಲ. ಅವರ ಈ ನಡೆ ಬಗ್ಗೆ ಅಸಮಾಧಾನ ಹೊಂದಿರುವ ಡಿಸಿಎಂ ಡಿಕೆಶಿ ಬೆಂಬಲಿಗರಿಗೆ, ಕೇರಳದಲ್ಲಿ ವೇಣುಗೋಪಾಲ್‌ಗೆ ಸಿಎಂ ಕುರ್ಚಿ ತಪ್ಪಿರುವುದು ಭಾರೀ ಖುಷಿ ಕೊಟ್ಟಿದೆಯಂತೆ. ನಮ್ಮ ನಾಯಕ ನಿಗೆ ಸಿಎಂ ಕುರ್ಚಿ ತಪ್ಪಿಸುತ್ತಿರುವ ವ್ಯಕ್ತಿಗೇ ಸಿಎಂ ಕುರ್ಚಿ ಇಲ್ಲದಾಗಿದೆ. ಕುರ್ಚಿ ಸಿಗದ ನೋವು ಏನೆಂಬುದು ಈಗಲಾದರೂ ಅವರಿಗೆ ಅರ್ಥವಾಗಿರಬಹುದು ಎನ್ನುತ್ತಿದ್ದಾರೆ ಡಿಕೆಶಿ ಬೆಂಬಲಿಗರು.