Prof R G Hegde Column: ಮೋದಿ ರೆಜೀಮ್ ಚೇಂಜ್ ಅಷ್ಟು ಸುಲಭವಲ್ಲ!
ನಾಯಕತ್ವ ಒಂದು ಸಂಕೀರ್ಣವಾದ ವಿಷಯ. ವೈಯಕ್ತಿಕ ಮತ್ತು ಸಾಮಾಜಿಕ ಮನಶ್ಶಾಸ್ತ್ರವನ್ನು ಅದು ಹಿನ್ನೆಲೆಯಲ್ಲಿ ಹೊಂದಿರುತ್ತದೆ. ನಾಯಕನ ಗುಣಗಳು, ಹಿಂಬಾಲಕರ ಗುಣಗಳು, ಸಾಮಾಜಿಕ ಸಂದರ್ಭ, ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆ, ಇಂತವೆಲ್ಲ ಒಂದು ರಸಾಯನದಲ್ಲಿ ಸೇರಿಕೊಂಡು ಪಾಕವಾದಾಗ ನಾಯಕತ್ವ ಹುಟ್ಟಿಕೊಳ್ಳುತ್ತದೆ.
-
ಜನನಾಯಕ
- ಪ್ರೊ.ಆರ್.ಜಿ ಹೆಗಡೆ
ಸರ್ಕಾರಗಳ ಮುಖ್ಯಸ್ಥರಾಗಿ ನರೇಂದ್ರ ಮೋದಿಯವರು ಇಪ್ಪತೈದು ವರ್ಷ ಪೂರೈಸಿ ಜನಪ್ರಿಯತೆ ಯಲ್ಲಿಯೇ ಮುಂದುವರೆಯುತ್ತಿರುವುದು ಚರಿತ್ರೆಯಲ್ಲಿ ಒಂದು ಅಗಾಧ ಸಂಗತಿ. ಸರ್ವಾಧಿಕಾರಿ ಸತ್ತೆಗಳಲ್ಲಿ ಕೂಡ ನಾಯಕರು ಕಾಲು ಶತಮಾನ ಇತ್ಯಾದಿ ಆಳಿದ್ದು ಕಡಿಮೆಯೇ. ಪ್ರಜಾಪ್ರಭುತ್ವ ಗಳಲ್ಲಿಯಂತೂ ಬಿಡಿ. ಜನಪ್ರಿಯತೆ ಚಂಚಲ. ಭಾರತದ ಪ್ರಜಾಪ್ರಭುತ್ವ ಇನ್ನೂ ಸಂಕೀರ್ಣ ವಾದುದು. ಇಲ್ಲಿ ಜನಪ್ರಿಯತೆ ಬಂಗಾರದ ಜಿಂಕೆಯ ಹಾಗೆ. ಕಾಣಿಸಿಕೊಳ್ಳುತ್ತದೆ. ಹಾಗೆ ಥಟ್ಟನೆ ಮಾಯವಾಗುತ್ತದೆ.
ಉದಾ- ಬಾಂಗ್ಲಾ ಯುದ್ಧದ ನಂತರ ದೇವಿ ದುರ್ಗಾಮಾತೆಯಾಗಿದ್ದ ಇಂದಿರಾ ಗಾಂಧಿ ಐದು ವರ್ಷಗಳಲ್ಲಿ ಅಧಿಕಾರ ಕಳೆದುಕೊಂಡರು. ಸ್ವತಃ ತಾವೇ ಚುನಾವಣೆ ಸೋತುಬಿಟ್ಟರು. ಬಿರುಗಾಳಿಯಾಗಿ ಬೀಸಿ ಸಂಸತ್ತಿನಲ್ಲಿ ನಾಲ್ಕುನೂರ ಹನ್ನೆರಡು ಸ್ಥಾನಗಳನ್ನು ಗಳಿಸಿದ್ದ ರಾಜೀವ್ ಗಾಂಧಿ ಕೇವಲ ನಾಲ್ಕು ವರ್ಷಗಳಲ್ಲಿ ಜನರ ದೃಷ್ಟಿಯಲ್ಲಿ ಕುಸಿದು ಹೋದರು. ವಾಜಪೇಯಿ, ಅಡ್ವಾಣಿ ಅಂತಹ ನಾಯಕರು ಚುನಾವಣೆಗಳಲ್ಲಿ ಸೋತಿದ್ದು ಇದೆ. ಇಂತಹ ‘ಜಂಗಮ’ದ ನಡುವೆ ಸ್ಥಾವರವಾಗಿ ನಿಂತವರು ಮೋದಿ. ಹಾಗಾಗಿ ಸಹಜವಾಗಿ ಮುಂದೆ ಬರುವ ಪ್ರಶ್ನೆ. ಇದೆಲ್ಲ ಮೋದಿ ಅವರಿಗೆ ಹೇಗೆ ಸಾಧ್ಯವಾಯಿತು? ಇಂತಹ ಅಸಾಧಾರಣ ಘಟನೆ ನಡೆಯುವುದಕ್ಕೆ ಕಾರಣಗಳಿವೆ.
ನಾಯಕತ್ವ ಒಂದು ಸಂಕೀರ್ಣವಾದ ವಿಷಯ. ವೈಯಕ್ತಿಕ ಮತ್ತು ಸಾಮಾಜಿಕ ಮನಶ್ಶಾಸ್ತ್ರವನ್ನು ಅದು ಹಿನ್ನೆಲೆಯಲ್ಲಿ ಹೊಂದಿರುತ್ತದೆ. ನಾಯಕನ ಗುಣಗಳು, ಹಿಂಬಾಲಕರ ಗುಣಗಳು, ಸಾಮಾಜಿಕ ಸಂದರ್ಭ, ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆ, ಇಂತವೆಲ್ಲ ಒಂದು ರಸಾಯನದಲ್ಲಿ ಸೇರಿಕೊಂಡು ಪಾಕವಾದಾಗ ನಾಯಕತ್ವ ಹುಟ್ಟಿಕೊಳ್ಳುತ್ತದೆ.
ಇದನ್ನೂ ಓದಿ: Prof R G Hegde Column: ಜೆನ್ ಝೀಯನ್ನು ಸಂಭಾಳಿಸುವುದು ಹೇಗೆ ?
ಮೋದಿಯವರ ವಿಷಯದಲ್ಲಿ ಈ ಮಾತು ನೂರಕ್ಕೆ ನೂರರಷ್ಟು ನಿಜ. ವೈಯಕ್ತಿಕ ಶಿಸ್ತು, ಸಾಮರ್ಥ್ಯ, ನೆನಪಿನ ಶಕ್ತಿ, ದೈಹಿಕ, ಮಾನಸಿಕ ಸಾಮರ್ಥ, ಶರೀರ ಭಾಷೆ, ಸಂವಹನ ಕೌಶಲ, ಆಡಳಿತ ಕೌಶಲ ಇವೆಲ್ಲವನ್ನೂ ಶ್ರೇಷ್ಠತೆಯಲ್ಲಿ ಹೊಂದಿದವರು ಮೋದಿ.
ಆದರೆ ಮೋದಿ ನಾಯಕತ್ವ ಎಂದರೆ ಇಷ್ಟೇ ಅಲ್ಲ. ಇದೆಲ್ಲವನ್ನು ಮೀರಿದ್ದು. ಮುಖ್ಯ ವಿಷಯ ವೆಂದರೆ ಮೋದಿ ಒಂದು ಯುಗದ ಪುರುಷ. ನಮ್ಮ ನೆಲದ ಕಂಪನಗಳಿಗೆ ಪ್ರತಿಕ್ರಿಯೆಯಾಗಿ ಎದ್ದು ಬಂದವರು. ಗಮನಿಸಿ. ಆರ್ಎಸ್ಎಸ್ ಪ್ರಚಾರಕರಾಗಿ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿದವರು ಮೋದಿ. ದೇಶದ ನರ ನಾಡಿಗಳ ಮಿಡಿತವನ್ನು ಬಲ್ಲವರು. ತಮ್ಮ ಹಲವು ವರ್ಷಗಳ ಜೀವನವನ್ನು ಹಿಮಾಲಯದಲ್ಲಿ ಕಳೆದವರು. ಅಂದರೆ ದೇಶಕ್ಕೆ ಚಿರಪರಿಚಿತವಾದ ವಿರಕ್ತ ಪರಂಪರೆಗೆ ಸೇರಿದವರು ಮೋದಿ.
ಗಾಂಧಿಯ ಹಾಗೆ. ಕುತೂಹಲದ ವಿಷಯವೆಂದರೆ ಗಾಂಧಿ ಮತ್ತು ಮೋದಿ ನಡುವೆ ಹಲವು ಸಾಮ್ಯತೆಗಳಿವೆ. (ಬಹಳ ವ್ಯತ್ಯಾಸಗಳೂ ಇವೆ. ಅದು ಇಲ್ಲಿ ಅಪ್ರಸ್ತುತ.) ಉದಾಹರಣೆಗೆ, ಅಧಿಕಾರ ರಾಜಕೀಯ ಇಬ್ಬರದೂ ಪ್ರಥಮ ಆದ್ಯತೆ ಅಲ್ಲ. ಸಾರ್ವಜನಿಕ ಸೇವೆಯೇ ಮಹತ್ವದ್ದು. ಧಾರ್ಮಿಕ ರಾಗಿ, ದೇಶಕ್ಕಾಗಿ ಬದುಕುವುದು ಮಹತ್ವದ್ದು.
ಹಾಗೆಯೇ ಧಾರ್ಮಿಕತೆಯ ಪರಿಕಲ್ಪನೆಗಳು ಬೇರೆಯಾದರೂ ಕೂಡ ಗಾಂಧಿಯ ಹಾಗೆ ಮೋದಿಯೂ ಒಂದು ರಾಜಕೀಯ ಸಂತ. ಬೇರೆ ರೀತಿಯ ಸಂತ ಅಷ್ಟೇ. ಆಳವಾದ ಧಾರ್ಮಿಕತೆ ಮೋದಿ ವ್ಯಕ್ತಿತ್ವದ ಭಾಗ. ಚುನಾವಣಾ ಪ್ರಚಾರದ ನಂತರ ಹರಿದ್ವಾರದ ಗುಹೆಯೊಂದರಲ್ಲಿ ತಪಸ್ಸು ಮಾಡುತ್ತ ಮೋದಿ ದಿನ ಕಳೆದರು.
ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಕಠಿಣವಾದ ವ್ರತಾಚರಣೆಯಲ್ಲಿ ತೊಡಗಿದ್ದರು. ಹಿಂದೂ ಧರ್ಮವನ್ನು ಬಿಟ್ಟು ಮೋದಿ ಅವರ ಅಸ್ತಿತ್ವವೇ ಇಲ್ಲ. ಅಷ್ಟರ ಮಟ್ಟಿಗೆ ಮೋದಿ ವ್ಯಕ್ತಿತ್ವ ಹಿಂದೂಮಯವಾದುದು. ವ್ಯಕ್ತಿತ್ವ ಮತ್ತು ರಾಜಕೀಯ ತತ್ವ ಇವೆರಡರ ನಡುವೆ ಮೋದಿಯವರಲ್ಲಿ ವ್ಯತ್ಯಾಸವೇ ಇಲ್ಲ. ಎರಡೂ ಬಿಡಿಸಲಾಗದಂತೆ ಕೂಡಿ ಬಿಟ್ಟಿವೆ.
ಗಾಂಧಿಯವರ ವ್ಯಕ್ತಿತ್ವದಲ್ಲಿ ಆದ ಹಾಗೆ. ಮೋದಿ ಆಗಾಗ ಹಣೆಗೆ ಲೇಪಿಸಿಕೊಳ್ಳುವ ಶ್ರೀಗಂಧ, ಧಾರ್ಮಿಕ ಪೋಷಾಕುಗಳು ಅವರ ಈ ವ್ಯಕ್ತಿತ್ವವನ್ನು ಬಾಹ್ಯಕ್ಕೂ ಕಮ್ಯೂನಿಕೇಟ್ ಮಾಡುತ್ತವೆ. ಅವು ಮೋದಿಯವರಿಗೆ ‘ರಾಜಋಷಿ’ಯ ಅಥವಾ ಚಕ್ರವರ್ತಿಯ ಇಮೇಜ್ ನೀಡಿವೆ.
ಇಂತಹ ಮೋದಿ ವ್ಯಕ್ತಿತ್ವ ಹಿಂದಿನ ಶತಮಾನದ ಎಂಬತ್ತರ ದಶಕದ ನಂತರ ಭಾರತದಲ್ಲಿ ಹುಟ್ಟಿಕೊಂಡ ‘ಹಿಂದೂ ಪುನರುತ್ಥಾನ’ದ ಚಳುವಳಿಗೆ (ರಾಮಮಂದಿರದ ಚಳುವಳಿ) ನೇರವಾಗಿ ಸ್ಪಂದಿಸಿಬಿಟ್ಟಿತು. (ನೆಹರೂ ಆರಂಭಿಸಿದ್ದ ಜಾತ್ಯತೀತತೆ ಕ್ರಮೇಣ ಮೈನಾರಿಟಿಗಳನ್ನು ಓಲೈಸುವ, ಖುಷಿಪಡಿಸುವ ರಾಜಕೀಯವಾಗಿ ಮಾರ್ಪಟ್ಟಿತು. ಶಾಬಾನೊ ಪ್ರಕರಣದಲ್ಲಿ ಇದು ಅತಿರೇಕಕ್ಕೆ ಹೋಯಿತು.
ರಾಮಮಂದಿರ ಚಳುವಳಿ ಮತ್ತು ಹಿಂದುತ್ವದ ರಾಜಕೀಯ ಹುಟ್ಟಿಕೊಂಡಿದ್ದು ನೆಹರೂವಿಯನ್ ಜಾತ್ಯತೀತತೆಗೆ ವಿರುದ್ಧವಾಗಿ.) ವ್ಯಕ್ತಿತ್ವ ಮತ್ತು ಚಳುವಳಿ ಗಂಗೆ ಯಮುನೆಯಂತೆ ಕೂಡಿ ಹರಿದು ಬಿಟ್ಟವು. ಗಾಂಧಿಯನ್ ಸ್ವಾತಂತ್ರ್ಯ ಚಳುವಳಿಯಲ್ಲಿ ಆದಂತೆ. ಹಿಂದೆ ಗಾಂಧಿ ತಟ್ಟಿದ ಹಾಗೆ ಮೋದಿ ಭಾರತದ ಹಿಂದೂ ಮನಸ್ಸನ್ನು ಮತ್ತೆ ತಟ್ಟಿದರು.
ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ವಾಜಪೇಯಿ, ಅಡ್ವಾಣಿ ಕಲ್ಪಿಸಿದ ಹಿಂದುತ್ವದ ತತ್ವವನ್ನು ಗುಜರಾತ್ನಲ್ಲಿ ಕ್ರಿಯೆಯಲ್ಲಿ ಅನುಷ್ಠಾನಗೊಳಿಸಿ ತೋರಿಸಿದವರು ಮೋದಿ.
ನಂತರ ಹಿಂದುತ್ವ ರಾಜಕೀಯದ ಅಜೆಂಡಾಗಳನ್ನು: ಆರ್ಟಿಕಲ್ 370 ತೆಗೆದುಹಾಕುವಿಕೆ, ಟ್ರಿಪಲ್ ತಲಾಕ್, ನಾಗರಿಕ ಹಕ್ಕು ಕಾಯ್ದೆ, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾನೂನು ಇವನ್ನು ಜಾರಿಗೆ ತಂದ ಮೋದಿ ನಿರಂತರವಾಗಿ ತಮ್ಮ ಹಿಂದುತ್ವ ವ್ಯಕ್ತಿತ್ವವನ್ನು ದೇಶದ ಮುಂದೆ ಇಡುತ್ತಲೇ ಬಂದಿದ್ದಾರೆ.
ಧರ್ಮ ನಮ್ಮ ದೇಶದಲ್ಲಿ ಜನರ ಜತೆ ಸುಲಭವಾಗಿ ಕಮ್ಯೂನಿಕೇಟ್ ಆಗುವ, ಜನರ ವಿಶ್ವಾಸ ತಂದಿಡುವ ಮಾರ್ಗ. ದೇಶದಲ್ಲಿ ಹಿಂದೂ ಪರಂಪರೆ ಪುನರುತ್ಥಾನಗೊಳ್ಳುತ್ತಲೇ ಇರುತ್ತದೆ. ಇದು ಹಲವು ಬಾರಿ ಸಂಭವಿಸಿದೆ. ಮುಸ್ಲಿಂ ಆಡಳಿತದ ನಂತರ ಭಾರತದ ಭಕ್ತಿ ಪರಂಪರೆ ವರ್ಧಮಾನಕ್ಕೆ ಬಂತು. ಬ್ರಿಟಿಷರ ಆಡಳಿತದ ಕೊನೆಯಲ್ಲಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಹಿಂದೂ ಪರಂಪರೆ ಜಾಗೃತಗೊಂಡಿತು. ಗಾಂಧಿ ಚಳುವಳಿಗೆ ಹಿಂದೂ ಬಣ್ಣವಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ.
ಜಾತ್ಯತೀತರಾಗಿದ್ದ ನೆಹರೂ ಯುಗದಲ್ಲಿ ಹಿನ್ನೆಲೆಗೆ ಹೋಗಿದ್ದ ಹಿಂದೂ ಪರಂಪರೆ ಮತ್ತೆ ರಾಮಮಂದಿರ ಚಳುವಳಿಯ ಮೂಲಕ ಜಾಗೃತಗೊಂಡಿತು. ಮೋದಿಯವರ ರಾಜಕೀಯಕ್ಕೆ ಜನಪ್ರಿಯತೆ ಮತ್ತು ಸ್ಥಿರತೆ ತಂದುಕೊಟ್ಟಿದ್ದು ಅದೇ ಹಿಂದೂ ಬಣ್ಣದ ರಾಜಕೀಯವೇ. ದೇಶದ ಹಿಂದೂ ಪ್ರಜ್ನೆ ಶಾಂತವಾಗಿರುತ್ತದೆ ನಿಜ. ಆದರೆ ಹಿಂದುತ್ವವಿಲ್ಲದೆ ದೇಶದಲ್ಲಿ ರಾಜಕೀಯದಲ್ಲಿ ನಿಲ್ಲಲಾಗುವುದಿಲ್ಲ.
ಕಳೆದ ಅರ್ಧ ಶತಮಾನ ದೇಶದ ಹಿಂದೂ ರಾಜಕೀಯದ ಸಮಯ. ಹಾಗಾಗಿಯೇ ಮೋದಿ ನಾಯಕತ್ವ ಉಳಿದು ಬೆಳೆದು ಬಂದಿದ್ದು. ಆ ಹಸಿವು ಇನ್ನೂ ದೇಶದಲ್ಲಿ ಉಳಿದಿದೆ. ಸಮಾನ ನಾಗರಿಕತೆ ದೇಶದಾದ್ಯಂತ ಜಾರಿಗೆ ಬಂದಿಲ್ಲ. ದೇಶದ ಒಳನುಗ್ಗಿರುವ ಬಾಂಗ್ಲಾದೇಶೀಯರ ಸಮಸ್ಯೆ ಪರಿಹಾರಗೊಂಡಿಲ್ಲ. ಹಿಂದೂ ಸಾಂಸ್ಕೃತಿಕ ಪುನರುತ್ಥಾನ ಇನ್ನೂ ಮುಕ್ತಾಯವಾದಂತಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸುವ ಕುರಿತಂತೆ ದೇಶ ನಂಬುಗೆ ಇಟ್ಟಿದ್ದು, ಇಡುವುದು ಮೋದಿಯವರಲ್ಲಿ ಮಾತ್ರ. ಹಿಂದುತ್ವಕ್ಕಾಗಿ ಹಸಿದಿದ್ದ ದೇಶಕ್ಕೆ ಬೇಕಾದದ್ದನ್ನು ರುಚಿಕಟ್ಟಾಗಿ ಬಡಿಸಿದವರು ಮೋದಿ. ಇಂತಹುದೊಂದು ಚಳುವಳಿಯ ನಾಯಕ ಮೋದಿ. ಹೀಗಾಗಿಯೇ ಮೋದಿ (ಗಾಂಧಿಯ ಹಾಗೆ) ಇಡೀ ದೇಶದ ಮೂಲೆ ಮನಸ್ಸನ್ನು ತಟ್ಟಿದ್ದು. ಮತ್ತು ಹೀಗಾಗಿಯೇ ವಿರೋಧಿಗಳು ಮೋದಿ ರಾಜಕೀಯವನ್ನು ಟೀಕಿಸುತ್ತ ಹೋದಂತೆ ಮೋದಿ ಗಟ್ಟಿಯಾಗುತ್ತ ಹೋಗುವುದು.
ಮೋದಿಯವರನ್ನು ಕಳೆದ ಇಪ್ಪತ್ತೈದು ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರನ್ನಾಗಿಸಿದ್ದು ಹಿಂದುತ್ವ ಚಳುವಳಿ. ಹಿಂದುತ್ವ ಚಳುವಳಿಗೆ ಕೊನೆಯ ಉಸಿರಿರುವವರೆಗೂ ಮೋದಿಯವರು /ಮೋದಿಯಂತವರು ದೇಶದ ಸರ್ಕಾರಗಳ ನಾಯಕರಾಗಿರುತ್ತಾರೆ. ಪ್ರಸ್ತುತರಾಗಿಯೇ ಇರುತ್ತಾರೆ.
ಮೋದಿ ಜನಪ್ರಿಯತೆಗೆ ಇನ್ನೂ ಒಂದು ಆಯಾಮವಿದೆ. ಅದೇನೆಂದರೆ ಒಂದು ಕಡೆಯಿಂದ ಮೋದಿ ರಾಜಕೀಯ ಹಿಂದೂ ರಾಜಕೀಯದ ಪುನರುತ್ಥಾನದ ಚಳುವಳಿಯಾಗಿದ್ದರೆ ಅದೇ ಸಮಯದಲ್ಲಿ ಅದು ಹಿಂದಿನ ಸತ್ತೆಯ ಅಂದರೆ ನೆಹರೂ ಮಾನಸಿಕತೆಯ, ಅಥವಾ ನೆಹರೂ ಯುಗದ ವಿರುದ್ಧದ ವಿಶಾಲ ಕ್ರಾಂತಿಯೂ ಹೌದು. ಮತ್ತೆ ಇಲ್ಲಿ ಕೆಲವು ಮಾತುಗಳನ್ನು ಹಿನ್ನೆಲೆಯಾಗಿ ಹೇಳಿಕೊಳ್ಳಬೇಕು. ನೆಹರು ಕೂಡ ಮೋದಿಯಂತೆಯೇ ಒಂದು ಯುಗದ ಪುರುಷ. ಹಿಂದಿನ ಶತಮಾನದ ಐವತ್ತರ ದಶಕದ ನಂತರ ಜಗತ್ತಿನಲ್ಲಿ ಜನಪ್ರಿಯವಾಗಿದ್ದ ಸಮಾಜವಾದ ಮತ್ತು ಭಾರತದಲ್ಲಿ ಗಾಂಧಿ ಯುಗದ ನಂತರ ಭಾರತಕ್ಕೆ ಬಂದ ‘ಜಾತ್ಯತೀತತೆ’ ಇವುಗಳ ಪ್ರವರ್ತಕರು ನೆಹರು.
ತೀವ್ರ ಬಡತನದಲ್ಲಿದ್ದ ಮತ್ತು ಪಶ್ಚಿಮವನ್ನು ತನ್ನ ರಾಜಕೀಯ ಸಾಮಾಜಿಕ ಅಭಿವೃದ್ಧಿಯ ಮಾದರಿಯನ್ನಾಗಿ ಆಗ ಆಯ್ದುಕೊಂಡಿದ್ದ ಭಾರತಕ್ಕೆ ನೆಹರು ದೇವರಂತೆ ಕಂಡಿದ್ದರು. ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಒಂದು ಕಾಲದಲ್ಲಿ ನೆಹರೂ ಅಗತ್ಯ ಇತ್ತು ಕೂಡ. ನೆಹರು ಯುಗದ ಎಲ್ಲವೂ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಒಂದು ಮಾತು ಹೇಳಿಕೊಳ್ಳಬೇಕು. ಏನೆಂದರೆ ಅಂತಹ ಹುಚ್ಚಿನಲ್ಲಿದ್ದ ನೆಹರೂಗೆ, ಅಂದಿನ ಹಲವು ಜಾಗತಿಕ ನಾಯಕರಿಗೆ ಆದ ಹಾಗೆ, ಸಮಾಜವಾದದ ಕಾಯಿಲೆಗಳು ಕಣ್ಣಿಗೆ ಬೀಳಲೇ ಇಲ್ಲ. ಇರುವ ತನಕ ಹೇಗೋ ಏನೋ ನೆಹರು ನಡೆಸಿಕೊಂಡು ಹೋದರು.
ಆದರೆ ನೆಹರು ನಂತರದ ವರ್ಷಗಳಲ್ಲಿ ಸಮಾಜವಾದದಿಂದಾಗಿ ದೇಶದ ಮೇಲೆ ಎರಡು ದುಷ್ಪರಿಣಾಮ ಗಳಾದವು. ಪಾಶ್ಚಾತ್ಯ ಸಮಾಜವಾದದ ಪರಿಣಾಮದಿಂದಾಗಿಯೇ ನಮ್ಮ ಜನ ಸಂಸ್ಕೃತಿಯ ಬೇರುಗಳನ್ನು ಕಳೆದುಕೊಂಡು ನಿಂತಿದ್ದು. ಮೌಲ್ಯಗಳ ವ್ಯವಸ್ಥೆಯನ್ನು ಕಳೆದುಕೊಂಡಿದ್ದು. ದೇಶದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ಹುಟ್ಟಿಕೊಂಡಿದ್ದು. ಇನ್ನೊಂದು ವಿಷಯ. ನೆಹರೂ ಮಾದರಿಯ ಸಮಾಜವಾದಿ ಆರ್ಥಿಕತೆ ದೇಶವನ್ನು ಆರ್ಥಿಕವಾಗಿ ದಿವಾಳಿಯ ಹಂತ ತಲುಪಿಸಿಬಿಟ್ಟಿತು.
ನೆಹರೂ ಮಾದರಿಯ ರಾಜಕೀಯಕ್ಕೆ ತಿರುವು ನೀಡಿ ದೇಶಕ್ಕೆ ಹೊಸ ಎರಡು ಅಜೆಂಡಾಗಳನ್ನು ಬಿತ್ತಿದವರು ದಾರ್ಶನಿಕ ಪ್ರಧಾನಿ ನರಸಿಂಹರಾವ್. ಮುಕ್ತ ಆರ್ಥಿಕತೆಯನ್ನು ತಂದಿತ್ತವರು ಅವರು. ಹಿಂದುತ್ವದ ರಾಜಕೀಯಕ್ಕೆ ದೊಡ್ಡ ವೇದಿಕೆ ದೊರೆತಿದ್ದು ಕೂಡ ನರಸಿಂಹರಾವ್ ಸಮಯ ದಲ್ಲಿಯೇ.
ಈ ಎರಡೂ ಮಹತ್ವದ ರಾಜಕೀಯ ಘಟನೆಗಳು ಮೋದಿಯವರನ್ನು ಮತ್ತು ಇಂದಿನ ಭಾರತವನ್ನು ಸೃಷ್ಟಿಸಿವೆ. ಎರಡೂ ಅಜೆಂಡಾಗಳನ್ನು ಗುಜರಾತಿನ ರಾಜಕೀಯ ಲ್ಯಾಬರೇಟರಿಯಲ್ಲಿ ಬೆಳೆಸಿದವರು ಮೋದಿ. ಮೋದಿ ರಾಷ್ಟ್ರೀಯ ಕಲ್ಪನೆಯಲ್ಲಿ ಹುಟ್ಟಿಕೊಂಡಿದ್ದು ಮುಕ್ತ ಆರ್ಥಿಕತೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ. ಮನಮೋಹನ್ ಸಿಂಗ್ ಕ್ರಮೇಣ ತಮ್ಮದೇ ನೀತಿಯಿಂದ ಹಿಂದೆ ಸರಿಯಲಾರಂಭಿಸಿದಂತೆ ಹೊಸ ಆರ್ಥಿಕತೆಯ ನಾಯಕರಾದವರು ಮೋದಿ. ಈ ನೀತಿ ದೇಶದ ಶ್ರೀಮಂತ, ಮಧ್ಯಮ ಮತ್ತು ಯುವಜನತೆಯ ಹೃದಯಕ್ಕೆ ತುಂಬ ಹತ್ತಿರ ವಾದುದು. ಮೋದಿ ಸುದೀರ್ಘ ಜನಪ್ರಿಯತೆಯ ಎರಡನೆಯ ಕಾರಣ ಹಿಂದುತ್ವ ರಾಜಕೀಯದ ಜತೆ ಈ ಆಯಾಮ ಅವರ ವ್ಯಕ್ತಿತ್ವದ ಭಾಗವಾಗಿರುವುದು.
ಮೂರನೆಯ ಕಾರಣವೂ ಮಹತ್ವವಾದುದು. ಅದೆಂದರೆ ಮೋದಿ ಬಲವಾದ ದೇಶದಲ್ಲಿ ‘ಆಕ್ರಮಣಕಾರಿ ರಾಜಕೀಯ’ದ ಪ್ರವರ್ತಕ. ಹಿಂದೆ ಯಾರೂ ಕೂಡ ದೇಶವನ್ನು ಈ ಹಾದಿಯಲ್ಲಿ ನಡೆಸಿದ್ದು ಇಲ್ಲ. ತಮ್ಮ ಆಡಳಿತ ಅವಧಿಯಲ್ಲಿ ಎರಡು ಬಾರಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಮೋದಿ ಮುಖ್ಯವಾಗಿ ಬಲವಾದ ದೇಶ ಹಾಗೂ ಸಮಾಜವೊಂದರ ರೂಪಕ. ಜನ ಮೋದಿಯನ್ನು ಮೆಚ್ಚುವುದು ಇದಕ್ಕೆ ಕೂಡ.
ಇವುಗಳ ಜತೆ ಇತರ ಹಲವು ಕಾರಣಗಳು ಕೂಡ ಇವೆ. ಮೋದಿಯವರ ಸಂಘಟನಾ ಶಕ್ತಿ, ಕಠಿಣ ಪರಿಶ್ರಮ ಮತ್ತು ರಾಜಕೀಯ ಚಾಣಕ್ಯತೆ ಅಸಾಧಾರಣ ಮಟ್ಟದವು. ಮೋದಿ ಅಮಿತ್ ಶಾ ನೇತೃತ್ವದ ಬಿಜೆಪಿಯ ಚುನಾವಣಾ ಎಂಜಿನ್ ಭಾರಿ ಶಕ್ತಿಯದು. ಅದರ ವಿರುದ್ಧ ಹೋರಾಡುವುದು ಸುಲಭದ ಮಾತಲ್ಲ. ಪಕ್ಷ ರಾಜಕೀಯ ನಿರ್ವಹಣೆಗೆ ಕಾರ್ಪೊರೇಟ್ ಶಿಸ್ತು, ತಂತ್ರಜ್ಞಾನ ತಂದವರು ಮೋದಿ. ಜನರನ್ನು, ಸಂದರ್ಭಗಳನ್ನು ಮ್ಯಾನೇಜ್ ಮಾಡುವ ಕಲೆಯಲ್ಲಿ ನಿಷ್ಣಾತರು. ಮತ್ತೆ ಅವರ ಬಿಗಿ ಆಡಳಿತದ ಕುರಿತು ಹೇಳಬೇಕೆಂದೇನೂ ಇಲ್ಲ. ಇಪ್ಪತ್ತೈದು ವರ್ಷಗಳ ಸುದೀರ್ಘ ಕಾಲ ಅವರ ಕುರಿತು ಭ್ರಷ್ಟಾಚಾರದ ಆರೋಪಗಳಿಲ್ಲ.
ಹಾಗಾದರೆ ಮೋದಿ ಎಷ್ಟು ವರ್ಷ ಮುಂದುವರಿಯಬಹುದು? ಮೋದಿ ಬಯಸಿದರೆ ಇನ್ನೂ ಒಂದು ಅವಧಿಗೆ ಅವರು ಮುಂದುವರಿದುಬಿಡಬಹುದು. ಈ ಮಾತು ಹೇಳುವ ಕಾರಣವೆಂದರೆ ಮೋದಿ ನಾಯಕತ್ವವನ್ನು ಸೃಷ್ಟಿಸಿದ ಶಕ್ತಿಗಳು ಇನ್ನೂ ಸಾಕಷ್ಟು ಬಲವಾಗಿಯೇ ಇವೆ. ಮೋದಿಯವರನ್ನು ಸೋಲಿಸುವುದು, ರೆಜೀಮ್ ಚೇಂಜ್ ಅಷ್ಟು ಸುಲಭವಲ್ಲ. ಈ ವಿಷಯ ಭಾರತದ ‘ಗೆಳೆಯ’ ಅಮೇರಿಕಕ್ಕೆ ಕೂಡ ಗೊತ್ತಿದೆ.