Rangaswamy Mookanahalli Column: ಕನ್ನಡ ಉಳಿಸುವುದು, ಬೆಳೆಸುವುದು ನಮ್ಮ ಕೈಯಲ್ಲಿದೆ !
ಎಲ್ಲರೂ ನಮ್ಮವರೇ , ಆದರೆ ವಲಸಿಗರು ಸ್ಥಳೀಯ ಭಾಷೆ ಮತ್ತು ಅಲ್ಲಿನ ರೀತಿ ರಿವಾಜು ಗಳನ್ನು ಬೇಗ ತಮ್ಮದಾಗಿಸಿಕೊಳ್ಳುವುದರಿಂದ ಸಹಬಾಳ್ವೆ ಸುಲಭವಾಗುತ್ತದೆ. ಎಲ್ಲರಿಗೂ ಅವರವರ ಮಾತೃ ಭಾಷೆ ಶ್ರೇಷ್ಠ. ಭಾಷೆಯ ಬಗೆಗಿನ ಅಭಿಮಾನ ಇನ್ನೊಂದು ಭಾಷೆಯನ್ನು ಅವಮಾನಿಸುವುದರ ಮೂಲಕ ಹೆಚ್ಚಿಸಿ ಕೊಳ್ಳುವ ಅವಶ್ಯಕತೆ ಇಲ್ಲ.


ವಿಶ್ವರಂಗ
ಸೋನು ನಿಗಮ್ ಕನ್ನಡವನ್ನು ಮತ್ತು ಕನ್ನಡಿಗರನ್ನು ಹೀಯಾಳಿಸಿ ಮಾತನಾಡಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡಿತು. ನಾವೆಲ್ಲರೂ ನಮ್ಮ ನಮ್ಮ ಅಭಿಪ್ರಾಯ ಮಂಡಿಸಲು ಶುರು ಮಾಡಿದೆವು. ಅದು ಸಹಜ. ಆದರೆ ಹೀಗೇಕೆ ಆಗುತ್ತದೆ ಎನ್ನುವುದನ್ನು ನಾವು ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಇನ್ನೊಂದು ಬಾರಿ ಈ ರೀತಿಯ ಘಟನೆ ನಡೆಯುವವರೆಗೆ ಕನ್ನಡ , ಕನ್ನಡ ಅಸ್ಮಿತೆ ಎಲ್ಲವೂ ನನೆಗುದಿಗೆ ಬೀಳುತ್ತದೆ. ನಾವು ಬದಲಾಗದೆ ವಲಸಿಗರನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದು ನಾನು ಕಂಡುಕೊಂಡ ಅಂಶ. ಬೆಂಗಳೂರಿಗೆ ಬಂದ ನಂತರ ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದಕ್ಕೆ ಆರು ತಿಂಗಳ ಮೇಲೆ ತೆಗೆದುಕೊಂಡಿತು.
ಮಧ್ಯಾಹ್ನದ ಊಟಕ್ಕೆ ಮನೆಗೆ ಹೋಗುವುದನ್ನು ಈ ದೊಡ್ಡ ನಗರದಲ್ಲಿ ಯೋಚಿಸಲು ಕೂಡ ಆಗದ ವಿಷಯ ಎನ್ನು ಜ್ಞಾನೋದಯ ಬೇಗ ಆಯ್ತು. ಮಧ್ಯಾಹ್ನಕ್ಕೆ ಡಬ್ಬಿಗೆ ಸೇಬು ಒಂದಷ್ಟು ಬಾದಾಮಿಯನ್ನ ಅಮ್ಮ ನಿತ್ಯ ಹಾಕಿ ಕೊಡುತ್ತಿದ್ದಳು. ನಿತ್ಯವೂ ಮಧ್ಯಾಹ್ನಕ್ಕೆ ಹೀಗೆ ಹಣ್ಣು ಒಂದಷ್ಟು ನಟ್ಸ್. !
ನನಗಷ್ಟು ಸಾಕಾಗುತ್ತಿತ್ತು. ಮಧ್ಯಾಹ್ನದ ಊಟ ಆದಷ್ಟೂ ಕಡಿಮೆ ತಿನ್ನುವುದು ಅಭ್ಯಾಸ. ಆದರೆ ಅದೇನೋ ಕಾಣೆ ಅವತ್ತು ಹೊಟ್ಟೆ ಭಯಂಕರ ಹಸಿಯಲು ಶುರುವಾಯ್ತು. ಪಕ್ಕದಲ್ಲಿದ್ದ ಎಸ್‌ಎಲ್‌ವಿ ರಾಗಿಗುಡ್ಡಕ್ಕೆ ಹೋಗಿದ್ದೆ. ಅಲ್ಲಿ ಒಂದು ಸೇಠು ಪರಿವಾರ ಠಿಕಾಣಿ ಹೂಡಿದ್ದರು. ಅವರ ಮಧ್ಯೆ ಹಿಂದಿ ಅಥವಾ ಮಾರ್ವಾಡಿ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು.
ಇದನ್ನೂ ಓದಿ: Rangaswamy Mookanahalli Column: ಬಯಸದೇ ಬಂದುಬಿಡುವುದಿಲ್ಲ ಭಾಗ್ಯ !
ನನಗೇನೂ ಅವರ ಮಾತು ಕೇಳುವ ವಿಶೇಷ ಆಸಕ್ತಿ ಇರಲಿಲ್ಲ, ಆದರೂ ಮಾತುಗಳು ಕಿವಿಗೆ ಬೀಳು ತ್ತಿದ್ದವು. ಅವರ ನಡುವೆ ಇದ್ದ ಒಂದು ಹೆಣ್ಣು ಮಗು ‘ಮುಜೆ ಔರ್ ತೋಡಾ’ ಗಟ್ಟಿ ಚಟ್ನಿಚಾ ಯಿಯೇ’ ಎಂದಿತು. ಮಗುವಿನ ಬಾಯಿಂದ ಬಂದ ಗಟ್ಟಿ ಚಟ್ನಿ ಎನ್ನುವ ಪದ ನನ್ನಲ್ಲಿ ಇನ್ನಿಲ್ಲದ ಆನಂದ ತಂದಿತು. ಇದಕ್ಕೆ ಕಾರಣ ಬಹಳ ಸರಳ. ಯಾವುದೇ ಭಾಷೆ ವಲಸಿಗರು ಕಲಿಯುವಂತಾ ಗಲು ಮೊದಲು ಸ್ಥಳೀಯರು ಅದನ್ನ ತೀವ್ರವಾಗಿ ಬಳಸಬೇಕು, ಪ್ರೀತಿಸಬೇಕು,ಆಗ ಮಾತ್ರ ಆ ಭಾಷೆ ಅನ್ಯಭಾಷಿಕರೂ ಬೇಗ ಕಲಿಯುವಂತಾಗುತ್ತದೆ.
ಈಗ ವಿಷಯಕ್ಕೆ ಬರೋಣ. ಗಟ್ಟಿ ಚಟ್ನಿಗೆ ಪರ್ಯಾಯವಾಗಿ ನಾವು ಕನ್ನಡಿಗರು ಅವರಿಗೆ ಹಿಂದಿ ಯಲ್ಲಿ ಅಥವಾ ಮಾರ್ವಾಡಿಯಲ್ಲಿ ಹೇಳಿದ್ದರೆ ಅವರು ಖಂಡಿತ ಗಟ್ಟಿ ಚಟ್ನಿ ಪದವನ್ನು ಬಳಸುತ್ತಿರ ಲಿಲ್ಲ. ಅಂದರೆ ಗಮನಿಸಿ ನೋಡಿ ನಾವು ಕೂಡ ಆ ಪದವನ್ನ ಬಳಸುವುದರಿಂದ ಅವರು ಕೂಡ ಬಳಸುತ್ತಿದ್ದಾರೆ.
ನಾವು ‘ದೋಸಾ , ವಡಾ’ ಎನ್ನುವುದನ್ನು ಬಿಟ್ಟು ದೋಸೆ, ವಡೆ ಎನ್ನುವುದನ್ನ ಮಾಡಿದ್ದರೆ ಅವರು ಕೂಡ ಅದನ್ನೇ ಹೇಳುತ್ತಿದ್ದರು. ಇದನ್ನು ಇನ್ನಷ್ಟು ಸರಳವಾಗಿ ಹೀಗೆ ಸಮೀಕರಿಸಬಹುದು. ಯಾವುದೇ ಪದಗಳು ಅಥವಾ ಭಾಷೆ ಜನರ ಮನದಲ್ಲಿ ನೆಲೆಯೂರುವ ಮುಂಚೆ ನಾವು ಅದಕ್ಕೆ ಪರ್ಯಾಯ ಸ್ಥಳೀಯ ಪದಗಳನ್ನ ನೀಡಿದರೆ ಆಗ ಸ್ಥಳೀಯ ಭಾಷೆ ಉಳಿದುಕೊಳ್ಳುತ್ತದೆ. ಇಲ್ಲದಿ ದ್ದರೆ ಅದು ಕಲಬೆರೆಕೆಯಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಮತ್ತು ಸ್ಥಳೀ ಯರು ಯಾವಾಗ ತಮ್ಮ ಭಾಷೆಯನ್ನ ಬಿಟ್ಟು ಇತರ ಭಾಷೆಗಳಲ್ಲಿ ಸಂವಹನ ಮಾಡಲು ಶುರು ಮಾಡುತ್ತಾರೋ, ಆಗ ಭಾಷೆ ನಿಧಾನವಾಗಿ ಅಳಿವಿನ ಅಂಚಿಗೆ ಸರಿಯುತ್ತಾ ಹೋಗುತ್ತದೆ.
ಸ್ಪೇನ್ ನಲ್ಲಿ ತಮ್ಮ ಭಾಷೆ ಕಾಪಾಡಿಕೊಳ್ಳಲು ಒಂದು ಸಮಿತಿ ರಚಿಸಿದ್ದಾರೆ. ಮಾರುಕಟ್ಟೆಗೆ ಯಾವುದೇ ವಸ್ತು ಬರಲಿ ಅದಕ್ಕೆ ಒಂದು ಸ್ಪ್ಯಾನಿಷ್ ಹೆಸರಿಟ್ಟು ಮಾರುಕಟ್ಟೆಗೆ ಬಿಡುತ್ತಾರೆ. ಹೀಗಾಗಿ ಸ್ಪೇನ್ ನಲ್ಲಿ ನೀವು ಕಂಪ್ಯೂಟರ್ ಎಂದರೆ ಏನು ಎನ್ನುತ್ತಾರೆ . ಲ್ಯಾಪ್ ಟಾಪ್ ಎಂದರೆ ಏನದು? ಎನ್ನುತ್ತಾರೆ.
ಎಲ್ಲಕ್ಕೂ ಸ್ಪ್ಯಾನಿಷ್ ಪದಗಳಿವೆ. ಇಲ್ಲಿ ಯಾರಾದರೂ ಕಂಪ್ಯೂಟರ್ ಎಂದರೆ ನಿಮ್ಮನ್ನು ವಿಚಿತ್ರ ವಾಗಿ ನೋಡುತ್ತಾರೆ , ಇಲ್ಲಿ ಅದಕ್ಕೆ ದಕ್ಕಿರುವ ಹೆಸರು ಅರ್ದಿನದೂರ್. ಹೀಗೆ ಲ್ಯಾಪ್‌ಟಾಪ್ ಇಲ್ಲಿ ಪೊರ್ತಾತಿಲ್ ಆಗಿದೆ. ಇದು ಕೇವಲ ಉದಾಹರಣೆಯಷ್ಟೇ. ಹೀಗೆ ಇಂಗ್ಲಿಷ್ ಪದಗಳಿಗೆ ಪರ್ಯಾಯ ವಾಗಿ ಸ್ಪ್ಯಾನಿಷ್ ಪದಗಳನ್ನ ಸೃಷ್ಟಿಸಿ, ಪದಾರ್ಥ ಮಾರುಕಟ್ಟೆಯಲ್ಲಿ ಜನಪ್ರಿಯವಾಗುವುದಕ್ಕೆ ಮುಂಚೆ ಬಿಡುತ್ತಾರೆ.
ಅಂದರೆ ಅವರು ಕಂಪ್ಯೂಟರ್ ಎನ್ನುವ ಪದಕ್ಕೆ ಪರ್ಯಾಯ ಸ್ಪ್ಯಾನಿಷ್ ಪದವನ್ನ ಸೃಷ್ಟಿಸಿ ಬಿಡದಿದ್ದರೆ ಅದು ಜನ ಮಾನಸದಲ್ಲಿ ಕಂಪ್ಯೂಟರ್ ಎಂದು ಉಳಿದುಕೊಂಡು ಬಿಡುತ್ತಿತು !! ಆ ನಂತರ ನೀವು ಯಾವುದೇ ಪದವನ್ನ ಕೊಟ್ಟರೂ ಕೂಡ ಅದನ್ನು ಜನತೆ ಒಪ್ಪಿಕೊಳ್ಳುವುದಿಲ್ಲ. ಉದಾಹರಣೆಗೆ ನಮ್ಮಲ್ಲಿ ನೋಡಿ ಎಲ್ಲರ ಮನಸ್ಸಿನಲ್ಲಿ ಕಂಪ್ಯೂಟರ್ ಸ್ಥಾನ ಪಡೆದ ಮೇಲೆ ನಾವು ‘ಗಣಕಯಂತ್ರ’ ಎನ್ನುವುದನ್ನ ಜನರಿಗೆ ನೀಡಲು ಹೊರಟೆವು. ಅದರಿಂದ ಏನಾಗಿದೆ? ನಮ್ಮ ಭಾಷೆ ನಮಗೆ ಅನ್ಯಗ್ರಹ ಜೀವಿಯ ಭಾಷೆಯಂತೆ ಅನಿಸತೊಡಗಿದೆ. ಹೀಗೆ ಸಾಕಷ್ಟು ಉದಾಹರಣೆಯನ್ನು ನೀಡಬಹುದು. ನಮ್ಮ ಭಾಷೆ ಉಳಿವಿಗೆ, ಬೆಳವಣಿಗೆಗೆ ನಾವೇನು ಮಾಡಬೇಕು ಎನ್ನುವುದು ಬುದ್ದಿ ವಂತ ಓದುಗರಿಗೆ ಈ ವೇಳೆಗೆ ತಿಳಿದಿರುತ್ತದೆ.
ಕನ್ನಡ ಉಳಿಯಬೇಕು ಎಂದರೆ ಇಂಗ್ಲಿಷ್‌ಗೆ ಪರ್ಯಾಯ ಪದಗಳು ಇಂಗ್ಲಿಷ್ ಪದ ಜನರ ಮನದಲ್ಲಿ ಬೇರೂರುವುದಕ್ಕೆ ಮುಂಚೆ ಸಿದ್ಧವಿರಬೇಕು. ಎಲ್ಲಕ್ಕೂ ಪರ್ಯಾಯ ಬೇಕು ಅನ್ನುವ ಹಠವೂ ಇಲ್ಲ. ಸಾಧ್ಯವಾದಷ್ಟು ಇದ್ದರೆ ಒಳ್ಳೆಯದು. ಕೇವಲ ಕನ್ನಡ ಫಲಕ ಇಲ್ಲದಿದ್ದರೆ ಜುಲ್ಮಾನೆ ಹಾಕಿದರೆ ಸಾಲದು. ವ್ಯಾಪಾರಸ್ಥನಿಗೆ ಒಂದು ಅಥವಾ ಎರಡು ವರ್ಷ ಸಮಯಾವಕಾಶ ನೀಡಿ ಕನ್ನಡ ಬರದಿದ್ದರೆ ಪರವಾನಿಗೆ ರದ್ದುಪಡಿಸುತ್ತೇವೆ ಎನ್ನಬೇಕು. ನಾವು ಹೋಗುವ ಅಂಗಡಿಯಲ್ಲಿ ಕನ್ನಡ ವ್ಯವಹರಿಸಬೇಕು. ಆಗ ಕನ್ನಡವೇಕೆ ಎಡೆ ಕೇಳಿಸದು ?
ವಲಸಿಗರು ಎಲ್ಲಿಂದಲೇ ಬರಲಿ ಅವರು ಕೂಡ ನಮ್ಮವರೇ. ಆದರೆ ನಮ್ಮ ನೆಲದಲ್ಲಿ ನಮ್ಮತನ ವನ್ನು ಬಿಟ್ಟು ಬದುಕುವುದು ಮಾತ್ರ ಅಕ್ಷಮ್ಯ ಅಪರಾಧ. ಸ್ಥಳೀಯರು ಹೇಗೆ ಅಧಿಕಾರಯುತ ಸ್ಥಾನ ದಲ್ಲಿರಬೇಕು ಮತ್ತು ವಲಸಿಗ ಬೇಕಾಬಿಟ್ಟಿ ನಡೆದುಕೊಳ್ಳುವ ಮುನ್ನ ಒಂದಷ್ಟು ಭಯ ಆತನಲ್ಲಿರ ಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಕಾರ , ರೀತಿ ರಿವಾಜುಗಳು ಕಳೆದು ಹೋಗುತ್ತವೆ.
ಸ್ಥಳೀಯರ ತಾಕತ್ತು ತೋರಿಸುವ ಒಂದು ಘಟನೆಯನ್ನು ಹಂಚಿಕೊಂಡು ಇಂದಿನ ಬರಹಕ್ಕೆ ವಿರಾಮ ಹಾಡುವೆ. ಇಸವಿ ಎರಡು ಸಾವಿರದ ಮೇ ತಿಂಗಳಲ್ಲಿ ಬಾರ್ಸಿಲೋನಾದ ‘ಎಲ್ ಪ್ರಾತ್’ ನಲ್ಲಿ ಇಳಿದಾಗ ಆ ನೆಲ ನನ್ನ ಬದುಕನ್ನು ಬದಲಾಯಿಸುತ್ತದೆ ಎನ್ನುವ ಕಿಂಚಿತ್ತೂ ಅರಿವಿರಲಿಲ್ಲ. ಅಲ್ಲಿಗೆ ಕೆಲಸದ ವೀಸಾ ಪಡೆದು ಪ್ರವೇಶ ಪಡೆದಿz. ಹೀಗೆ ಅಲ್ಲಿಗೆ ವೀಸಾ ಪಡೆಯುಲು ಹೊರಟ ದಿನದ ಕಥೆ ಕೂಡ ಮರೆಯುವಂತಿಲ್ಲ !. ಬೆಂಗಳೂರಿನಿಂದ ದುಬೈಗೆ ಕೂಡ ಎಲ್ಲವನ್ನೂ ನನ್ನ ಅಂದಿನ ಸಂಸ್ಥೆ ತಯಾರು ಮಾಡಿ ನೀಡಿತ್ತು.
ದುಬೈನಲ್ಲಿ ಒಂದೈದಾರು ತಿಂಗಳ ನಂತರ ನನಗೆ ಬಾರ್ಸಿಲೋನಾಗೆ ವರ್ಗಾವಣೆ ಆಯ್ತು. ದುಬೈನ ಬರ್ ದುಬೈ ಎನ್ನುವ ಬಡಾವಣೆಯಲ್ಲಿ ನನ್ನ ವಾಸ. ಆದರೆ ವೀಸಾ ಬೇಕೆಂದರೆ ಅಬುಧಾಬಿಗೆ ಹೋಗಬೇಕಿತ್ತು. ಜೀವನದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಫಾರಂ ಕೂಡ ನಾನು ಭರ್ತಿ ಮಾಡಿಲ್ಲ.
ಎಲ್ಲವನ್ನೂ ಮಾಡಿ ಹೆಚ್ ಆರ್ ನವರು ಹೇಳಿದ ಕಡೆ ಸಹಿ ಹಾಕುವುದಷ್ಟೇ ಕೆಲಸ. ವೀಸಾ ಇಂಟರ್ ವ್ಯೂಗೆ ಅಬುಧಾಬಿ ಎಂಬೆಸಿಯಲ್ಲಿ ವೇಳೆಯನ್ನು ನಿಗದಿ ಮಾಡಿದ್ದರು. ಬೆಳಿಗ್ಗೆ 11 ರ ಸಮಯ ಎಂದು ನೆನಪು. ಬೆಳಿಗ್ಗೆ ಆಲಿ ಎನ್ನುವ ಡ್ರೈವರ್ ಮನೆಯ ಮುಂದೆ ಬಂದು ಕರೆ ಮಾಡಿದ. ಅವನೊಂದಿಗೆ ಅಬುಧಾಬಿಗೆ ಪ್ರಯಾಣ. ಅಲಿ ತಮಿಳು ಭಾಷಿಕ. ಅವನಿಗೆ ಕನ್ನಡ ಬರುತ್ತಿರಲಿಲ್ಲ.
ಹೀಗಾಗಿ ನಮ್ಮ ನಡುವಿನ ಭಾಷೆ ಹಿಂದಿ. ಆಲಿ ಕಾರನ್ನು ಸಾಕಷ್ಟು ವೇಗವಾಗಿ ಚಲಾಯಿಸುತ್ತಿದ್ದ. ಆತ ದುಬೈನಲ್ಲಿ ಆಗಲೇ ಐದಾರು ವರ್ಷ ಕಳೆದಿದ್ದ. ಅವನಿಗೆ ರೂಲ್ಸ್ ಗೊತ್ತಿರುತ್ತದೆ ಎಂದು ನಾನು ಯಾವ ಮಾತನ್ನು ಆಡದೆ ಸುಮ್ಮನಿದ್ದೆ. ಅದೇನಾಯ್ತು ಗೊತ್ತಿಲ್ಲ. ಆಲಿ ಕಾರನ್ನು ಸ್ಲೋ ಮಾಡಿ ರಸ್ತೆಯ ಬದಿಗೆ ಹಾಕಿ ಕಾರಿನಿಂದ ಇಳಿದು ಎರಡೂ ಕೈಯನ್ನ ಮಡಿಸಿ ದೇಹವನ್ನ ಕುಗ್ಗಿಸಿ ನಿಂತ.
ಮುಂದಿನಿಂದ ಒಂದು ಐಷಾರಾಮಿ ಕಾರಿನಿಂದ ಒಬ್ಬ ಅರಬ ಇಳಿದು ಬಂದು ಆಲಿಯನ್ನು ಬಯ್ಯ ತೊಡಗಿದ. ಆಲಿ ಪೂರ್ಣ ಶರಣಾಗತಿ ತೋರುವ ಭಂಗಿಯಲ್ಲಿ ನಿಂತು ಬೇಡಿಕೊಳ್ಳುತ್ತಿದ್ದ. ನನಗೆ ದುಬೈ ಹೊಸದು. ಅಲ್ಲದೆ ಹಿಂದಿನ ರಾತ್ರಿ ಬದಲಾವಣೆಗೆ ಎಂದು ತೆಗೆದುಕೊಂಡಿದ್ದ ಹತ್ತು ಮಿಲಿಯನ್ ಪೆಸೆಟಾ ಬ್ಯಾಗಿನಲ್ಲಿ ಇತ್ತು. ಅದನ್ನು ಜೊತೆಯಲ್ಲಿ ತಂದಿz. ಆಫೀಸ್ ಶುರುವಾಗುತ್ತಿ ದ್ದದ್ದು ಬೆಳಗ್ಗಿನ ಹತ್ತಕ್ಕೆ ! ಹೀಗಾಗಿ ಆ ಹಣವನ್ನ ಆಫೀಸ್ ನಲ್ಲಿ ಡೆಪಾಸಿಟ್ ಮಾಡಲು ವೇಳೆ ಸಿಕ್ಕಿರಲಿಲ್ಲ.
ಈಗ ನೋಡಿದರೆ ಇದ್ಯಾವುದೋ ಹೊಸ ತೊಂದರೆ ಎದುರಾಗಿತ್ತು. ಏನಾದರಾಗಲಿ ಎಂದು ಕಾರಿ ನಿಂದ ಇಳಿಯದೆ ಅ ಕುಳಿತಿದ್ದೆ. ಒಂದೈದು ನಿಮಿಷದಲ್ಲಿ ಆಲಿ ಬಂದವನು ಮತ್ತೆ ನಿಧಾನವಾಗಿ ಕಾರು ಚಲಾಯಿಸಲು ಶುರು ಮಾಡಿದ. ಆಲಿ ಅಲ್ಲಿನ ಉನ್ನತ ಸರಕಾರಿ ಹುದ್ದೆಯಲ್ಲಿದ್ದ ಅಧಿಕಾರಿಯ ಕಾರನ್ನು ಓವರ್ ಟೇಕ್ ಮಾಡಿದ್ದ. ಅಲ್ಲದೆ ಸ್ಪೀಡ್ ಲಿಮಿಟ್ ಕ್ರಾಸ್ ಮಾಡಿದ್ದ.
ಕ್ಷಣಾರ್ಧದಲ್ಲಿ ಬಂದ ಪೊಲೀಸರು ಅವನಿಗೆ ಜುಲ್ಮಾನೆ ಹಾಕಿದ್ದರು, ಮರು ಮಾತನಾಡದೆ ಕೊಟ್ಟು ಬಂದಿದ್ದ. ಅವನ ಪ್ರಕಾರ ಜುಲ್ಮಾನೆ ಹಾಕಿ ಬಿಟ್ಟದ್ದು ಅವನ ಪುಣ್ಯವಂತೆ! ಕಾರಿನಲ್ಲಿ ಕುಳಿತಿದ್ದ ಅಧಿಕಾರಿ ಮನಸ್ಸು ಮಾಡಿದ್ದರೆ ನನ್ನ ವೀಸಾ ಹೋಗುತ್ತಿತ್ತು ಎಂದ. ಅದೆಷ್ಟು ನಿಜವೋ ತಿಳಿಯದು. ನಂತರ ಆಲಿ ಇಲ್ಲಿ ಆದ ಘಟನೆಯನ್ನು ಆಫೀಸ್ ನಲ್ಲಿ ಹೇಳಬೇಡಿ ಎಂದು ಅಂಗಲಾಚಿ ಬೇಡಿ ಕೊಂಡ.
ಅಂದಿನ ದಿನಗಳಲ್ಲಿ ಇಂತಹ ವೃತ್ತಿಗೆ ಬರುವ ಜನರ ಪಾಸ್ ಪೋರ್ಟ್ ಅನ್ನು ಅವರು ಕೆಲಸ ಮಾಡುವ ಸಂಸ್ಥೆ ಒತ್ತೆ ಇಟ್ಟು ಕೊಳ್ಳುತ್ತಿತ್ತು. ಸಂಸ್ಥೆ ಇಂತಹವರ ವಿರುದ್ಧ ಒಂದು ಕೇಸ್ ದರ್ಜು ಮಾಡಿದರೆ ನಂತರ ಆರು ತಿಂಗಳ ಕಾಲ ಅವರು ದುಬೈ ಗೆ ಬರದಂತೆ ನಿರ್ಬಂಧನೆ ಏರಲಾಗುತ್ತಿತ್ತು. ಆಲಿಯ ಬಗ್ಗೆ ನಾನು ಯಾವುದೇ ದೂರು ನೀಡಲಿಲ್ಲ. ಈ ಘಟನೆಯ ನಂತರ ಆಲಿ ಕಡಿಮೆ ಯೆಂದರೂ ಒಂದಿಪ್ಪತ್ತೈದು ಬಾರಿ ನನ್ನ ಏರ್‌ಪೋರ್ಟ್‌ನಿಂದ ಪಿಕ್ ಮಾಡಿದ್ದಾನೆ.
ಪ್ರತಿ ಬಾರಿ ಥ್ಯಾಂಕ್ಸ್ ಹೇಳುವುದನ್ನು ಮರೆತಿಲ್ಲ. ಎಲ್ಲರೂ ನಮ್ಮವರೇ, ಆದರೆ ವಲಸಿಗರು ಸ್ಥಳೀಯ ಭಾಷೆ ಮತ್ತು ಅಲ್ಲಿನ ರೀತಿ ರಿವಾಜುಗಳನ್ನು ಬೇಗ ತಮ್ಮದಾಗಿಸಿಕೊಳ್ಳುವುದರಿಂದ ಸಹಬಾಳ್ವೆ ಸುಲಭವಾಗುತ್ತದೆ. ಎಲ್ಲರಿಗೂ ಅವರವರ ಮಾತೃ ಭಾಷೆ ಶ್ರೇಷ್ಠ. ನನ್ನ ಭಾಷೆಯ ಬಗೆಗಿನ ಅಭಿಮಾನ ಇನ್ನೊಂದು ಭಾಷೆಯನ್ನು ಅವಮಾನಿಸುವುದರ ಮೂಲಕ ಹೆಚ್ಚಿಸಿ ಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ.
ಇದನ್ನು ನಾವು ಮತ್ತು ಹಿಂದಿ ಮತ್ತಿತರ ಭಾಷಿಕರು ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬ ವಲಸಿಗನಿಗೂ ಕಡ್ಡಾಯ ಮಾಡ ಬೇಕು. ಅವರೇನೂ ಭಾಷಾ ತಜ್ಞರಾಗಬೇಕಿಲ್ಲ. ಸಂವಹನಕ್ಕೆ ಬೇಕಾಗುವಷ್ಟು ಕಲಿಯುವುದು ಮಾತ್ರ ಕಡ್ಡಾಯವಾಗಬೇಕು.