ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Devi Maheshwar Hampinaidu Column: ಸಿಂಗೀತಂ ಕನ್ನಡ ಚಿತ್ರರಂಗದ ಮಧುರ ಸಂಗೀತಂ

ಹಾಲುಜೇನು, ಚಲಿಸುವ ಮೋಡಗಳು ಚಿತ್ರವನ್ನು ನಿರ್ಮಿಸಿದ ಪಾರ್ವತಮ್ಮನವರ ವಿಶ್ವಾಸದಂತೆ ಅದರಲ್ಲೂ ಚಲಿಸುವ ಮೋಡಗಳು ಚಿತ್ರದಲ್ಲಿ ಮೊದಲಿಗೆ ಪ್ರೀತಿ, ಭಗ್ನಪ್ರೇಮ, ನ್ಯಾಯಾಲಯದ ಕುತೂಹಲಕಾರಿ ವಾದಪ್ರತಿವಾದಗಳ ಸನ್ನಿವೇಶಗಳು, ಪುಟ್ಟ ಬಾಲಕ ಪುನೀತ್ ರಾಜಕುಮಾರ್ ಅವರನ್ನು ಬಳಸಿಕೊಂಡ ರೀತಿ, ರಾಜ-ಸರಿತ ನಡುವಿನ ದಾಂಪತ್ಯದ ಮುನಿಸು ಕೊನೆಗೆ ದುರಂತ ನಾಯಕಿಯಾಗಿ ಅಂಬಿಕಾ ಅಭಿನಯ ಹೀಗೆ ಸಿಂಗೀತಂ ಅವರು ಈ ಚಿತ್ರದ ಮೂಲಕ ‘ಜೇನಿನ ಹೊಳೆ’ ಯನ್ನೇ ಹರಿಸಿದ್ದರು.

ಸಿಂಗೀತಂ ಕನ್ನಡ ಚಿತ್ರರಂಗದ ಮಧುರ ಸಂಗೀತಂ

-

Profile
Ashok Nayak Oct 6, 2026 9:00 AM

ಸ್ಮರಣೆ

ದೇವಿ ಮಹೇಶ್ವರ ಹಂಪಿನಾಯ್ಡು

ಕನ್ನಡ ಚಿತ್ರರಂಗದ ಹೆಡ್ ಆಫೀಸ್, ದೊಡ್ಮನೆ ಎಂದು ಕರೆಸಿಕೊಂಡಿದ್ದ ವರನಟ ಡಾ.ರಾಜಣ್ಣ ಅವರ ಮನೆತನದಲ್ಲಿ ಒಂದು ಶಕ್ತಿಯಾಗಿ ರೂಪಗೊಂಡಿದ್ದವರು ಪಾರ್ವತಮ್ಮ ರಾಜಕುಮಾರ್. ಅಷ್ಟೇನು ಓದಿಕೊಂಡಿರದಿದ್ದರೂ ಕನ್ನಡ ಜನತೆಗೆ ಎಂಥ ಚಿತ್ರಗಳನ್ನು ಕೊಡಬೇಕು ಎಂತಹ ನಿರ್ದೇಶಕರನ್ನು ಆರಿಸಬೇಕು ಎಂಬ ಸಿನಿಮಾ ಜ್ಞಾನ ಯಾವುದೇ ಸಿನಿಮಾ ಪಂಡಿತರಿಗಿಂತಲೂ ಹೆಚ್ಚು ತಿಳಿದುಕೊಂಡಿದ್ದರು.

ಹೀಗಾಗಿ ತಮ್ಮ ಮೊದಲ ಪುತ್ರ ಶಿವ ರಾಜ್‌ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸ ಬೇಕೆಂಬ ಗುರಿಯೊಂದಿಗೆ ಅವರ ಪ್ರಥಮ ಚಿತ್ರದ ನಿರ್ದೇಶನಕ್ಕೆ ನಿಶ್ಚಯಿಸಿದ ನಿರ್ದೇಶಕರೆಂದರೆ ಅಪ್ರತಿಮ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಅವರನ್ನು. ಅದಾಗಲೇ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಕಥೆ ಬರೆದು ನಿರ್ದೇಶವನ್ನು ಮಾಡಿ ಬಹಳಷ್ಟು ಖ್ಯಾತಿ ಗಳಿಸಿದ್ದ ಸಿಂಗೀತಂ ಅವರನ್ನು 1982ರಲ್ಲಿ ಕನ್ನಡ ಚಿತ್ರರಂಗಕ್ಕೆ ಕರೆತಂದ ಕೀರ್ತಿ ಪಾರ್ವತಮ್ಮನವರಿಗೆ ಸಲ್ಲುತ್ತದೆ.

ಹಾಲುಜೇನು, ಚಲಿಸುವ ಮೋಡಗಳು ಚಿತ್ರವನ್ನು ನಿರ್ಮಿಸಿದ ಪಾರ್ವತಮ್ಮನವರ ವಿಶ್ವಾಸದಂತೆ ಅದರಲ್ಲೂ ಚಲಿಸುವ ಮೋಡಗಳು ಚಿತ್ರದಲ್ಲಿ ಮೊದಲಿಗೆ ಪ್ರೀತಿ, ಭಗ್ನಪ್ರೇಮ, ನ್ಯಾಯಾಲಯದ ಕುತೂಹಲಕಾರಿ ವಾದಪ್ರತಿವಾದಗಳ ಸನ್ನಿವೇಶಗಳು, ಪುಟ್ಟ ಬಾಲಕ ಪುನೀತ್ ರಾಜಕುಮಾರ್ ಅವರನ್ನು ಬಳಸಿಕೊಂಡ ರೀತಿ, ರಾಜ-ಸರಿತ ನಡುವಿನ ದಾಂಪತ್ಯದ ಮುನಿಸು ಕೊನೆಗೆ ದುರಂತ ನಾಯಕಿಯಾಗಿ ಅಂಬಿಕಾ ಅಭಿನಯ ಹೀಗೆ ಸಿಂಗೀತಂ ಅವರು ಈ ಚಿತ್ರದ ಮೂಲಕ ‘ಜೇನಿನ ಹೊಳೆ’ಯನ್ನೇ ಹರಿಸಿದ್ದರು.

ಇದನ್ನೂ ಓದಿ: Devi Maheshwara Hampinaidu Column: ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

ತಮ್ಮ ಹಿರಿಯ ಪುತ್ರ ಶಿವ ರಾಜ್‌ಕುಮಾರ್‌ರನ್ನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ ಆನಂದ್ ಚಿತ್ರದಲ್ಲಿ (ಮುಂದೆ ಪುನೀತ್ ಅವರನ್ನು ಅಪ್ಪು ಚಿತ್ರದ ಮೂಲಕ ಯಶಸ್ವಿ ತೆಲುಗಿನ ನಿರ್ದೇಶಕ ಪುರಿ ಜಗನ್ನಾಥ್ ಅವರಿಂದ ನಾಯಕನಾಗಿಸಿ ಗೆದ್ದರು) ಅಂದು ಶಿವಣ್ಣನವರ ಯಂಗ್ ಆಂಡ್ ಎನರ್ಜಿಯನ್ನು ಸರಿಯಾಗಿ ಬಳಸಿಕೊಂಡ ಸಿಂಗೀತಂ ಅವರು ಶಿವ ರಾಜ್‌ಕುಮಾರ್ ಅವರಿಗೆ ಒಂದೊಳ್ಳೆಯ ಮ್ಯಾನರಿಸಂ ನೀಡಿದರು.

ಚಿತ್ರದ ಕ್ಲೈ ಮ್ಯಾಕ್ಸ್‌ʼನಲ್ಲಿ ಶಿವಣ್ಣ ಮನೆಗಳ ಮೇಲೆ ಜಿಗಿಯುತ್ತಾ ಓಡುತ್ತಾ ಸಾಗುವ ಚೇಸಿಂಗ್ ದೃಶ್ಯಗಳು ಅಂದು ವೀಕ್ಷಕರನ್ನು ರೋಮಾಂಚನಗೊಳಿಸಿತ್ತಲ್ಲದೇ ಅನೇಕ ನಟರು ಅವರ ಸಾಹಸ ವನ್ನು ಶ್ಲಾಘಿಸಿದ್ದರು. ಅಲ್ಲಿಗೆ ಶಿವಣ್ಣರನ್ನು ಕನ್ನಡ ಚಲನಚಿತ್ರಕ್ಕೆ ಲಾಂಚ್ ಮಾಡಿದ ಸಿಂಗೀತಂ ಅವರ ಕೈಗುಣ ಫಲಿಸಿ ಶಿವಣ್ಣ ಇಂದಿಗೂ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿಯ ನಟ ಎನಿಸಿಕೊಂಡಿ ದ್ದಾರೆ.

ಸಿಂಗೀತಂ ಅವರು ನಿರ್ದೇಶಿಸಿದ ಶ್ರಾವಣ ಬಂತು ಚಿತ್ರದಲ್ಲಿ ರಾಜ್ ಅವರ ಪುನರ್ಜನ್ಮ, ಶ್ರೀನಾಥ್ ಅತೃಪ್ತ ಆತ್ಮ ಒಳಗೊಂಡ ಕಥೆ ಚಿತ್ರಕಥೆ ಕನ್ನಡದಲ್ಲಿ ಹೊಸತನವನ್ನು ತಂದಿತ್ತು. ಮುಂದೆ ಭಾಗ್ಯದ ಲಕ್ಷ್ಮೀ ಬಾರಮ್ಮ, ಡಾ.ರಾಜ್ ಅವರ 200ನೇ ಚಿತ್ರ ದೇವತಾ ಮನುಷ್ಯ, ಟುವ್ವಿ ಟುವ್ವಿ ಟುವ್ವಿ, ನವರಸ ನಾಯಕ ಜಗ್ಗೇಶ್ ಅವರಲ್ಲಿದ್ದ ಅಭಿನಯವನ್ನು ಹೊರತೆಗೆದ ಮೇಕಪ್ ಅಂತ ಅನೇಕ ಪ್ರಯೋಗಾತ್ಮಕ ಚಿತ್ರಗಳಿಂದ ಸಿಂಗೀತಂ ಮಿರುಗಿದರು. ಆದರೆ ಈ ಮಧ್ಯದಲ್ಲಿ ನಟ ಶೃಂಗಾರ್ ನಾಗರಾಜ್ ನಿರ್ಮಿಸಿದ ‘ಪುಷ್ಪಕ ವಿಮಾನ’ ಚಿತ್ರದ ಮೂಲಕ ಬರಿಯ ಕರ್ನಾಟಕ, ಭಾರತೀಯ ಚಿತ್ರರಂಗವಲ್ಲದೇ ಅಂತಾರಾಷ್ಟ್ರೀಯ ಸಿನಿಮಾ ರಂಗವೇ ಕನ್ನಡದತ್ತ ನೋಡುವಂತೆ ಮಾಡಿದರು.

72

ಮೂಕಿ ಚಿತ್ರಗಳ ಕಾಲ ಗತವೈಭವ ಸೇರಿಕೊಂಡಿದ್ದ ಕಾಲದಲ್ಲಿ ಮೂಕಿ ಚಿತ್ರ ನಿರ್ದೇಶಿಸಿದ ಸಿಂಗೀತಂ ಅವರು ಆ ಚಿತ್ರದ ಮೂಲಕ ಅತ್ಯುತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದರು. ಆ ಚಿತ್ರಕ್ಕೆ ಪ್ರಶಸ್ತಿ ಗಳ ಸರಮಾಲೆಯೇ ಲಭಿಸಿದ್ದು ಇತಿಹಾಸ. ಹಾಲುಜೇನು, ಎರಡು ನಕ್ಷತ್ರಗಳು, ಕ್ಷೀರಸಾಗರ ಚಿತ್ರ ವನ್ನು ನಿರ್ದೇಶಿಸಿದ್ದಲ್ಲದೇ ಶೃತಿ ಸೇರಿದಾಗ, ಸಂಯುಕ್ತ, ಬೆಳ್ಳಿಯಪ್ಪ ಬಂಗಾರಪ್ಪ ಚಿತ್ರಗಳಿಗೆ ಚಿತ್ರಕಥೆಯನ್ನೂ ಬರೆದಿದ್ದರು.

ಶಿವ ರಾಜಕುಮಾರ್ ಅವರನ್ನು ಯಶಸ್ವಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಂತರ ರಾಘವೇಂದ್ರ ರಾಜಕುಮಾರ್ ಅವರನ್ನೂ ಸಿಂಗೀತಂ ಮಡಿಲಿಗೆ ಹಾಕಿದ ಪಾರ್ವತಮ್ಮನವರು ಚಿರಂಜೀವಿ ಸುಧಾಕರ್ ಚಿತ್ರವನ್ನು ನಿರ್ಮಿಸಿದರು. ಆದರೆ ಆ ಚಿತ್ರ ರಾಘಣ್ಣನಿಗೆ ಅಷ್ಟೇನು ಉತ್ತಮ ಆರಂಭ ಒದಗಿಸಲಿಲ್ಲ. ಬಹುಶಃ ಈ ಚಿತ್ರವೊಂದೇ ಸಿಂಗೀತಂ ಅವರ ನಿರ್ದೇಶನಲ್ಲಿ ವಿಫಲವಾದ ಚಿತ್ರವೆನ್ನಬಹುದು.

ಸಂಗೀತಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಸಿಂಗೀತಂ ಅವರು ಕನ್ನಡದಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ, ಸಂಯುಕ್ತ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿ ಯಶಸ್ಸು ಗಳಿಸಿದ್ದರು. ಒಟ್ಟಿನಲ್ಲಿ ಸಿಂಗೀತಂ ಶ್ರೀನಿವಾಸ್ ಅವರು ಕನ್ನಡದಲ್ಲಿ ಈ ಮಟ್ಟದ ಯಶಸ್ಸು ಸಾಽಸುವುದರ ಹಿಂದಿನ ಮತ್ತೊಂದು ಶಕ್ತಿಯೇ ಚಿ.ಉದಯಶಂಕರ್ ಎಂಬ ಸಾಟಿಯಿಲ್ಲದ ಕಥೆ ಚಿತ್ರಕಥೆ ಸಂಭಾಷಣೆಕಾರ ಎಂದರೆ ಅದು ಪರಮ ಸತ್ಯ.

ಪುಷ್ಪಕ ವಿಮಾನದಲ್ಲಿ ಚಿತ್ರದಲ್ಲಿ ಸಿಂಗೀತಂ ಅವರ ಕಥೆ ಚಿತ್ರಕಥೆಯಲ್ಲಿನ ವಿಭಿನ್ನತೆಯ ಹಿಡಿತ ವನ್ನು ಮನಗಂಡ ಕಮಲಹಾಸನ್ 1989ರಲ್ಲಿ ತಮ್ಮದೇ ರಾಜ್‌ಕಮಲ್ ಬ್ಯಾನರ್ ಅಡಿಯಲ್ಲಿ ಅಪೂರ್ವ ಸಹೋದರ್‌ಗಳ್ ತಮಿಳು ಚಿತ್ರವನ್ನು ನಿರ್ಮಿಸುತ್ತಾರೆ. ಅದರ ಕಥೆ ಚಿತ್ರಕಥೆ ಹೇಗಿತ್ತೆಂದರೆ ಬಹುಶಃ ಅಂಥ ಮತ್ತೊಂದು ಚಿತ್ರ ಭಾರತೀಯ ಚಿತ್ರರಂಗದ ಇದುವರೆಗೂ ನಿರ್ಮಾಣಗೊಂಡಿಲ್ಲವೆನ್ನಬಹುದು.

ಅಪ್ಪ, ಮಗ, ಮತ್ತೊಬ್ಬ ಕುಬ್ಜ ಮಗನಾಗಿ ತ್ರಿಪಾತ್ರದಲ್ಲಿ ಕಮಲಹಾಸನ್ ಅವರ ಅಭಿನಯವನ್ನ ಯಥೇಚ್ಛವಾಗಿ ಬಳಸಿಕೊಂಡ ಸಿಂಗೀತಂ ಅಭೂತಪೂರ್ವ ಯಶಸ್ಸು ಕಂಡರು. ಅದೇ ಗುಂಗಿನ ನಾಲ್ಕು ವಿಭಿನ್ನ ಪಾತ್ರಗಳನ್ನೊಳಗೊಂಡ ‘ಮೈಕಲ್ ಮದನ್ ಕಾಮರಾಜನ್’ ತಮಿಳು ಚಿತ್ರವನ್ನು ನಿರ್ದೇಶಿಸಿ ನಾಲ್ಕೂ ಪಾತ್ರಗಳು ಏಕಕಾಲಕ್ಕೆ ಸೇರುವಂಥ ಅತ್ಯದ್ಭುತ ಚಿತ್ರಕಥೆಯನ್ನು ಮಾಡಿ ತೋರಿಸಿದ್ದರು.

ಇಲ್ಲಿ ಸಿಂಗೀತಂ ಅವರ ಯಶಸ್ಸಿನಲ್ಲಿ ಸದಾ ಅವರೊಂದಿಗೆ ಹೆಗಲು ನೀಡಿದ್ದ ಹೆಮ್ಮೆಯ ಕನ್ನಡಿಗನ ಕುರಿತು ಹೇಳಲೇ ಬೇಕು. ಅದು ಕ್ಲಾಸಿಕ್ ಆಂಡ್ ಕ್ಲಾಸ್ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್. ಬಹುತೇಕ ಸಿಂಗೀತಂ ನಿರ್ದೇಶನದ ಚಿತ್ರಗಳಿಗೆ ಕಾಯಂ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಬಿ.ಸಿ.ಗೌರಿಶಂಕರ್ ಅವರು ಕಂಪ್ಯೂಟರ್ ಗ್ರಾಫಿಕ್ಸ್ ಇಲ್ಲದ ಕಾಲದಲ್ಲಿ ಮೈಕಲ್ ಮದನ್ ಕಾಮರಾಜನ್ ಚಿತ್ರದಲ್ಲಿ ನಾಲ್ಕೂ ಪಾತ್ರಗಳನ್ನು ಒಂದೇ ಫ್ರೇಂನಲ್ಲಿ ತೋರಿಸಿದ್ದು ಇಂದಿಗೂ ಒಂದು ಅದ್ಭುತ ತಂತ್ರಗಾರಿಕೆ.

ಸಿಂಗೀತಂ ಅವರ ಆಲೋಚನೆ, ಕ್ರಿಯಾಶೀಲತೆ ಎಷ್ಟು ವಿಶಿಷ್ಟವಾಗಿತ್ತೆಂದರೆ 1991ರ ಟೈಂ ಟ್ರಾವೆಲ್ ಚಿತ್ರವನ್ನು ಕಥೆ ಚಿತ್ರಕಥೆ ನಿರ್ದೇಶನ ಮಾಡಿ ತೋರಿಸಿದ್ದರು. ಅದು ತೆಲುಗಿನ ಬಾಲಕೃಷ್ಣ ಅಭಿನಯದ ಆದಿತ್ಯ 369 ಎಂಬ ಚಿತ್ರ. ಆ ಚಿತ್ರದಲ್ಲಿ ನಾಯಕ (ಬಾಲಕೃಷ್ಣ) ದಾರಿತಪ್ಪಿ ಒಂದು ಕಾಡಿನೊಳಗೆ ಬಂದು ಅಲ್ಲಿರುವ ಒಂದು ಆದಿತ್ಯ 369 ಎಂಬ ಮಿಷಿನ್ ಒಳಗೆ ಹೋಗಿ ಯಾವುದೋ ಬಟನ್ ಒತ್ತಿದ ಕೂಡಲೇ ಆತ 1520ರ ಶ್ರೀಕೃಷ್ಣದೇವರಾಯನ ಕಾಲಕ್ಕೆ ಹೋಗಿಬಿಡುವ ಅಪರೂಪದ ಕಲ್ಪನೆಯನ್ನು ಚಿತ್ರದಲ್ಲಿ ತೋರಿಸಿ ನೋಡುಗರಿಗೆ ರಸದೌತಣವನ್ನು ನೀಡಿದ್ದರು.

ಬಹುಶಃ ಇದು ಭಾರತೀಯ ಚಿತ್ರರಂಗದಲ್ಲಿ ಟೈಂ ಟ್ರಾವಲ್ ಕುರಿತ ಪ್ರಪ್ರಥಮ ಚಿತ್ರವಾಗಿರಲೂ ಬಹುದು. ಸಿಂಗೀತಂ ಅವರ ಚಿತ್ರಗಳಲ್ಲಿರುವ ಒಂದು ವಿಶಿಷ್ಟತೆಯೆಂದರೆ ಚೇಸಿಂಗ್. ಅವರ ಬಹುತೇಕ ಚಿತ್ರಗಳಲ್ಲಿ ಹತ್ತು ಹದಿನೈದು ನಿಮಿಷದ ಚೇಸಿಂಗ್ ದೃಶ್ಯಗಳು ಆಕರ್ಷಕವಾಗಿರುತ್ತದೆ. ಅದು ಆನಂದ್, ಭಾಗ್ಯದ ಲಕ್ಷ್ಮೀ ಬಾರಮ್ಮ, ಕ್ಷೀರಸಾಗರ ಚಿತ್ರಗಳಲ್ಲದೇ ಅವರ ನಿರ್ದೇಶನದ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ಗಮನಿಸಬಹುದು.

ಸಿಂಗೀತಂ ಅವರ ವಿಶೇಷತೆಯೆಂದರೆ ಅವರು ಎಂದಿಗೂ ಸಾಮಾನ್ಯ ಕಥೆ ಚಿತ್ರಕಥೆಯನ್ನು ಮಾಡುತ್ತಿರ ಲಿಲ್ಲ. ಸನ್ನಿವೇಶಗಳು ಸಾಕಷ್ಟು ಇರುತ್ತಿದ್ದವು. ಗೊಂದಲ, ಕುತೂಹಲ, ಹಾಸ್ಯವನ್ನು ಬೆರೆಸಿ ಸಂಪೂರ್ಣ ಮನರಂಜನೆ ಸೃಷ್ಟಿಸುತ್ತಿದ್ದರು. ಚಿತ್ರ ನೋಡಿ ಹೊರಬಂದರೆ ಪ್ರೇಕ್ಷಕರಿಗೆ ನಾಲ್ಕೈದು ಗಂಟೆಗಳ ಚಿತ್ರ ನೋಡಿ ಬಂದಂಥ ಅನುಭವ ನೀಡುತ್ತಿದ್ದರು. ಹೀಗೆ ಕನ್ನಡಿಗರಿಗೆ ಮಹಾಮನರಂಜನೆ ನೀಡಿದ ಸಿಂಗೀತಂ ಅವರಿಂದ ಆಗದೇ ಹೋದ ಒಂದು ದೊಡ್ಡ ಕೆಲಸ ಎಂದರೆ ರಾಜಣ್ಣನವರ ಬಹುನಿರೀಕ್ಷಿತ ಐತಿಹಾಸಿಕ ಕಥೆಯ ‘ಅಮೋಘ ವರ್ಷ ನೃಪತುಂಗ’ ಸಿಂಗೀತಂ ಅವರ ನಿರ್ದೇಶನದಲ್ಲಿ ಘೋಷಿಸಿ ಅದು ಕೈಗೂಡದೇ ಹೋದದ್ದು.

1930ರಲ್ಲಿ ನೆಲ್ಲೂರು ಜಿಯಲ್ಲಿ ತೆಲುಗು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಿಂಗೀತಂ ಅವರು ತಮ್ಮ 95ರ ಇಳಿ ವಯಸ್ಸಿನಲ್ಲೂ ನಿರ್ದೇಶಕನ ಕ್ಯಾಪ್ ಧರಿಸಿ ನಿರ್ದೇಶನವನ್ನು ಮಾಡಿದ ‘ಸಿಂಗ್ ಗೀತಂ’ ಚಿತ್ರ ಕಳೆದ ಜೂನ್ 12ರಲ್ಲಿ ತೆರೆಕಂಡಿತ್ತು. ಯಾವುದೋ ಶಾಪದಿಂದ ಇಡೀ ಊರಿನ ಜನ ತಮ್ಮ ಮಾತುಗಳನ್ನು ಗಾಯನದ ಮೂಲಕವೇ ಹಾಡುವ ವಿಭಿನ್ನ ಕಥೆ ಚಿತ್ರಕಥೆಯನ್ನು ತಮ್ಮ ಕೊನೆಯ ಚಿತ್ರದಲ್ಲೂ ಬರೆದು ನಿರ್ದೇಶಿಸಿದ್ದರು.

ಯಾವುದೋ ಒಂದೆರಡು ಹಿಟ್ ಚಿತ್ರವನ್ನು ನೀಡಿ ದೊಡ್ಡ ನಿರ್ದೇಶಕ ಎಂದು ತಲೆ ನಿಲ್ಲದವನಾಗಿ ಕಂಟೆಂಟ್ ಕಳೆದುಕೊಂಡು ಚಿತ್ರರಂಗದಿಂದ ಕಳೆದು ಹೋದ ಅನೇಕ ನಿರ್ದೇಶಕರಂತಲ್ಲ ಸಿಂಗೀತಂ. ಅವರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳೂ ಹಿಟ್ ಆಗುವಂತೆ ನಿರ್ದೇಶನ ಕಾಯಕ ಮಾಡಿದ ಕ್ರಿಯಾಶೀಲ ಸೃಜನಶೀಲ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್. ಕೇವಲ ಗ್ರಾಫಿಕ್ಸ್, ಸೆಕ್ಸ್, ಅಬ್ಬರ, ಚೀರಾಟ, ಹಿಂಸೆ, ತಲೆಬುಡವಿಲ್ಲದ ಚಿತ್ರಕಥೆ, ಅದಕ್ಕಾಗಿ ನೂರಾರು ಕೋಟಿಗಳ ಬಂಡವಾಳ, ತಮ್ಮ ಚಿತ್ರವನ್ನು ಪ್ರೇಕ್ಷಕರು ನೋಡಿದದಿದ್ದರೂ ಪ್ರೇಕ್ಷಕರು ಕಾಯು ತ್ತಿದ್ದಾರೆ ಎಂಬಂತೆ ಟೀಸರ್ ಟ್ರೈಲರ್, ಬಿಡುಗಡೆಯ ದಿನಾಂಕದ ಪೋಸ್ಟರ್‌ಗಳನ್ನು ಅಂಟಿಸುವ ಎಳಸು, ಉನ್ಮಾದಿತ ಸಿನಿ ವಿಕೃತಿಗಳು ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಿಂಗೀತಂ ಶ್ರೀನಿವಾಸ್ ಅವರಂಥ ನಿರ್ದೇಶಕರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ.